ಕನ್ನಡದ ವಿವೇಕ: ಸೂಫಿ, ತತ್ವ-ಪದಕಾರರು
ಕವಿ, ಹೋರಾಟಗಾರ, ಉಪನ್ಯಾಸಕರಾದ ಹುಲಿಕುಂಟೆ ಮೂರ್ತಿಯವರು ಪರಂಜ್ಯೋತಿ, ನೀಲಿಗ್ಯಾನ ಕವಿತೆ ಸಂಕಲನಗಳ ಮೂಲಕ ನಾಡಿಗೆ ಚಿರಪರಿಚಿತರು. ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯಲ್ಲಿ. ವಿದ್ಯಾರ್ಥಿ ದೆಸೆಯಿಂದಲೂ ಚಳವಳಿಗಳಲ್ಲಿ ಭಾಗಿಯಾಗಿ ಹೋರಾಟದ ಹಾಡುಗಳನ್ನು ಕಟ್ಟಿ, ಹಾಡುತ್ತಾ ಬೆಳೆದವರು. ತಮ್ಮ ಪರಿಸರವನ್ನು ಬೆಳೆಸುತ್ತಾ ಬಂದವರು. ‘ಹೂಬಿಟ್ಟ ಕಣ್ಣು’ ಇವರ
ಲೇಖನಗಳ ಸಂಗ್ರಹ.
ಅವರ ‘ನೀಲಿಗ್ಯಾನ’ ಸಂಕಲನಕ್ಕೆ 2013ರ ರಾಜ್ಯ ಸರಕಾರದ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 2018ರಲ್ಲಿ ಬೆಂಗಳೂರಿನ ಪ್ರೇರಣ ಸಂಸ್ಥೆ ಮಹಾತ್ಮ ಜ್ಯೋತಿ ಭಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಬಯಲು ಬಳಗ ಹಾಗೂ ನಾಡಿನ ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡಿರುವ ಇವರು, ಕಳೆದ ಇಪ್ಪತ್ತು ವರ್ಷಗಳಿಂದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಲೇಖನ, ಕತೆ, ಕವಿತೆ, ಅಂಕಣಗಳನ್ನು ಬರೆದಿದ್ದಾರೆ. ಇವರ ‘ಅನ್ನ’ ಕತೆಯನ್ನು ಕುವೆಂಪು ವಿಶ್ವ ವಿದ್ಯಾನಿಲಯ ಪದವಿ ತರಗತಿಯೊಂದಕ್ಕೆ ಪಠ್ಯವನ್ನಾಗಿಸಿದೆ. ಅಂಬೇಡ್ಕರ್ ಚಿಂತನೆಗಳನ್ನು ನಾಡಿನುದ್ದಗಲಕ್ಕೂ ತಲುಪಿಸುವಲ್ಲಿ ಇವರ ಕೊಡುಗೆ ದೊಡ್ಡದು.
ಕನ್ನಡದ ವಿವೇಕ ಪ್ರಜ್ಞೆಯೊಳಗೆ ಇಡೀ ಜಗತ್ತಿಗೇ ಆಗಿ ಮಿಗುವಷ್ಟು ಕಾರುಣ್ಯವಿದೆ; ಸಮತೆ ಸೊಡರಿನ ಬೆಳಕಿದೆ. ಆ ಬೆಳಕಿನಲ್ಲಿ ಭೇದವಿರದ ಬದುಕಿನ ಮಾದರಿಯನ್ನು ನಾವು ನಮ್ಮ ಮೈ ಮನಸ್ಸು ಗಳಿಗೆ ಬಸಿದುಕೊಳ್ಳುವ ಆ ಮೂಲಕ ಸಮಬಾಳಿನ ಸಮಸಮಾಜವನ್ನು ಕಟ್ಟಿಕೊಳ್ಳುವ ಕಸುವು ಪಡೆಯಬೇಕಿದೆ. ಈ ಬಾಬತ್ತಿನಲ್ಲಿ ಶರಣ ಚಳವಳಿ ಹೇಗೋ ಹಾಗೇ ಆನಂತರದ ಕಾಲಮಾನದಲ್ಲಿ ಸೃಷ್ಟಿಯಾದ ತತ್ವಪದಗಳು ಮತ್ತು ಸೂಫಿ ಪದಗಳು ದೊಡ್ಡ ಕೊಡುಗೆ ನೀಡಿವೆ.
ಮುದ್ರಣ ಕಾರ್ಯ ಪ್ರಾರಂಭವಾಗಿ ನಡೆಯುತ್ತಿದ್ದ ಕಾಲದಲ್ಲೇ ಮೌಖಿಕ ಪರಂಪರೆಯಲ್ಲಿ ಮುಖ್ಯವಾದ ತತ್ವಪದಗಳು ಹುಟ್ಟಿದವು. ಕನ್ನಡ ನೆಲದಲ್ಲಿ ಮೌಲ್ಯಗಳನ್ನು ಬಿತ್ತಿ ಬೆಳೆದ ಶಿಶುನಾಳ ಷರೀಫ ಮತ್ತು ಕಡಕೋಳ ಮಡಿವಾಳಪ್ಪನವರು ಕನ್ನಡ ಸಾಹಿತ್ಯದ ಮಟ್ಟಿಗೆ ಬರಡುಕಾಲ ಎಂದು ಕರೆಯುವ ಹತ್ತೊಂಬತ್ತನೇ ಶತಮಾನದಲ್ಲಿ ಬಾಳಿ ಬದುಕಿದವರು. ಕೈವಾರ ತಾತಯ್ಯನವರು ಹದಿನೆಂಟನೇ ಶತಮಾನದಲ್ಲಿ ಬದುಕಿ ಕಾಲಜ್ಞಾನವನ್ನು ನುಡಿದರೆ, ಇಬರಿಬ್ಬರೂ ಮಹನೀಯರು ಅವರ ಮಾರ್ಗವನ್ನು ಮುಂದುವರಿಸಿದರು. ಅಂದರೆ, ತತ್ವಪದಗಳ ದಾರಿಯಲ್ಲಿ ಸುದೀರ್ಘ ನಡೆದರು.
ಶರೀಫಜ್ಜರ ಹುಟ್ಟಿಗೆ ಮೊದಲೇ ಮಡಿವಾಳಪ್ಪನವರು ಬಾಳಿ ಬದುಕಿದರು ಅಲ್ಲದೆ, ಹತ್ತಾರು ಶಿಷ್ಯಂದಿರನ್ನು ಹೊಂದಿದ್ದರು. ತೆಲಗಬಾಳ ರೇವಪ್ಪ, ಕಡ್ಲೇವಾಡ ಸಿದ್ಧಪ್ಪ, ಖೈನೂರು ಕೃಷ್ಣಪ್ಪ, ಚೆನ್ನೂರು ಜಲಾಲಸಾಹೇಬ, ಅರಳುಗುಂಡಿಗೆ ಭಾಗಮ್ಮ ಮೊದಲಾದ ತತ್ವಪದಕಾರರು ಮಡಿವಾಳಪ್ಪನವರ ಶಿಷ್ಯಂದಿರಾಗಿದ್ದರು. ಮಡಿವಾಳಪ್ಪ ಅವರಂತಹ ಕಾಲಜ್ಞಾನಿಗಳತತ್ವ ಪದಗಳನ್ನು ಕನ್ನಡ ಸಾಹಿತ್ಯ ಸಂಸ್ಕೃತಿ ಅಧ್ಯಯನ ನಡೆಸಿದರೂ ಸಾಹಿತ್ಯ ಚರಿತ್ರೆಯಲ್ಲಿ ಕೊಡಬೇಕಾದ ಸ್ಥಾನ ಕೊಡದಿರುವುದು ಬೇಸರದ ಸಂಗತಿ.
‘ಏನೇನು ಹಗರಣ ಮಾಡುವರೀ ಜನರು ಇದಕಾರಂಜುವರು’, ‘ದಾವುದೋ ಕುಲದಾವುದೋ ಕುಲದ ವಿವರವ ತಿಳಿದು ಹೇಳಲೋ ಮೂಢ’ ಎಂಬ ಸಾಲುಗಳು ಸಮಕಾಲೀನ ಅಸಮಾನತೆಯ ವಿಡಂಬನೆಯನ್ನು ಸೂಚಿಸುತ್ತವೆ. ಮಡಿವಾಳಪ್ಪನವರು ಬದುಕಿದ್ದ ಕಾಲದಲ್ಲಿ ಬ್ರಿಟಿಷರನ್ನೇ ಪಳಗಿಸಿದ್ದ ಮೇಲ್ವರ್ಗದ ಜನರು ಜಾತಿ ಅಸಮಾನತೆಯನ್ನು ಧಾರ್ಮಿಕ ಚಹರೆಯಂತೆಯೂ, ಇಂಥದ್ದರ ವಿರುದ್ಧ ಕಾನೂನುಗಳನ್ನು ಮಾಡಿದರೆ ಭಾರತದ ಆಡಳಿತ ಸಮಸ್ಯೆಯಾವುದೆಂತಲೂ ನಂಬಿಸಿದ್ದರು. ಇಂಥಾ ಕಾಲದಲ್ಲಿ ಭಕ್ತಿಯ ಬಟ್ಟೆಯಲ್ಲಿ ಸಮಾನತೆಯ ದೊಂದಿಯನ್ನು ಹಚ್ಚಬೇಕಿತ್ತು. ಅದಕ್ಕಾಗಿ ತಮ್ಮದೇ ದಾರಿ ಹಿಡಿದ ತತ್ವ ಪದಕಾರರು ಮೌಲ್ಯಸೃಷ್ಟಿಯ ಗದ್ದುಗೆಯಲ್ಲಿ ಕೂತು ಸಾಮಾನ್ಯ ಜನರ ಕಣ್ಣು ತೆರೆಸಲು ಪ್ರಯತ್ನಿಸಿದರು. ಈ ಸಮಾನತೆಯ ಆಶಯದ ಸಾಹಿತ್ಯವನ್ನು ಮೌಖಿಕವಾಗಿ ಹಾಡುತ್ತಾ ಸಮಾಜದ ಅನಕ್ಷರಸ್ಥ ಸಮಾಜಕ್ಕೂ ತಲುಪಬಹುದಾದ ತಾತ್ವಿಕತೆಯ ಮಾದರಿಯೊಂದನ್ನು ಕಂಡುಕೊಂಡಿದ್ದರು. ಈ ಪದಗಳು ಏಕಕಾಲಕ್ಕೆ ಶಿವನ ಪಾರಮ್ಯವನ್ನೂ ಅಂದರೆ, ಭಕ್ತಿಯ ಉತ್ಕಟತೆಯಲ್ಲಿ ಮೇಲು ಕೀಳುಗಳಾಚೆಗಿನ ಮನುಷ್ಯ ಸಂಬಂಧವನ್ನೂ, ರೂಪಕಾತ್ಮಕ ಸಾಹಿತ್ಯ ನಿರ್ಮಿತಿಯನ್ನೂ ಆಗು ಮಾಡುತ್ತಿದ್ದರು. ಈ ದಾರಿ ಶೈವ-ವೈಷ್ಣವ ಜಗಳದ ಭರಾಟೆಯಲ್ಲಿ ಮಸುಕಾದರೂ ಕಾಲಾಂತರದಲ್ಲಿ ನಿಚ್ಚಳವಾಗಿ ನಿಂತುಬಿಟ್ಟಿದ್ದು ಅದರ ಶಕ್ತಿಯನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸುವ ಕಣ್ಣುಗಳಿಗೆ ಈ ತತ್ವಪದ ಸಾಹಿತ್ಯ ಕಾಣದಿದ್ದರೆ ಅದು ಕುರುಡೇ ಸರಿ. ಇಂಥ ತತ್ವಪದ ಸಾಹಿತ್ಯ ಕರ್ನಾಟಕದ ಉತ್ತರ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದ್ದರೂ ಇಡೀ ನಾಡಿನಾದ್ಯಂತ ಅನುರಣಿಸುತ್ತಿದ್ದುದು ಸೋಜಿಗದ ಸಂಗತಿ. ತೆಲಿಗಿನ ವೇಮನ, ವೀರಬ್ರಹ್ಮಯ್ಯ ಮತ್ತು ಕೈವಾರ ತಾತಯ್ಯನವರ ಕಾಲಜ್ಞಾನದ ವಚನಗಳೂ ಈ ಸಾಹಿತ್ಯದ ಭಾಗವೇ ಎಂಬುದನ್ನು ನಾವು ಮನಗಾಣಬೇಕು. ಕೈವಾರ ತಾತಯ್ಯನವರು ಹದಿನೆಂಟನೆ ಶತಮಾನಕ್ಕೆ ಸೇರಿದವರಾಗಿದ್ದರು ಮತ್ತು ಆ ಕಾಲದ ತಾತ್ವಿಕ ಪರಂಪರೆಯನ್ನು ಮುನ್ನಡೆಸುತ್ತಿದ್ದರು. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿಯೂ ಈ ರೀತಿಯ ಮೌಲಿಕ ಸಾಹಿತ್ಯವನ್ನು ರಚಿಸಿದ್ದಾರೆ..
ಇದೇ ಕಾಲಘಟ್ಟದಲ್ಲಿ ಕನ್ನಡದಲ್ಲಿ ಸೂಫಿ ಸಾಹಿತ್ಯವೂ ಗರಿಗಟ್ಟಿತ್ತು. ಕನ್ನಡದ ಮೊದಲ ಸೂಫೀ ಕವಿ ಖಾದರಪೀರಾ ರಾಯಚೂರು ಜಿಲ್ಲೆಯವರು. ಇವರು ಜೇವರ್ಗಿಯ ಚನ್ನೂರು ಜಲಾಲ ಸಾಹೇಬರು ಮತ್ತು ಸಂತ ಶಿಶುನಾಳ ಷರೀಫರ ಸಮಕಾಲೀನರಾಗಿದ್ದರು. ಸೂಫೀ ಸಂತ ಖಾದರಪೀರಾ ಅವರು ದೈನಂದಿನ ಮನುಷ್ಯರ ಕಷ್ಟಗಳನ್ನು ಹಾಡುವ ಜತೆಗೆ ಬದುಕಿನ ದಾರಿಯನ್ನೂ ನಿಚ್ಚಳವಾಗಿ ಕಾಣಿಸಿದ್ದಾರೆ. ಅವರು ಕನ್ನಡ, ಹಿಂದಿ ಮತ್ತು ಉರ್ದು ಮೂರೂ ಭಾಷೆಗಳಲ್ಲಿಯೂ ತಮ್ಮ ತತ್ವಪದಗಳನ್ನು ಹಾಡಿದ್ದಾರೆ. ಅವರಿಗೆ ಸಂಸ್ಕೃತ, ಪಾರಸಿ ಮತ್ತು ಅರೇಬಿಕ್ ಭಾಷೆಗಳೂ ಗೊತ್ತಿದ್ದವು ಎನ್ನುತ್ತಾರೆ ಸಂಶೋಧಕರು. ಇಸ್ಲಾಮ್ ಧರ್ಮ ಸಂಸ್ಥಾಪಕರಾದ ಮುಹಮ್ಮದ್ ಪೈಗಂಬರರ ಅಳಿಯನಾದ ಹಝರತ್ ಅಲಿ ವಂಶಸ್ಥರು ಎಂದೇ ಗುರುತಿಸಲ್ಪಡುವ ಖಾದರಪೀರಾ ಅವರು ‘‘ಇಸ್ಲಾಂ ಎಂದರೆ ಶಾಂತಿಯೊ ಜಾಣ, ತಿಳಿದು ನುಡಿಯುವುದೇ ಸುಜ್ಞಾನ, ಹುರುಫೇ ಮುಖತ್ತಿಯಾತ (29 ಸಂಕೇತ ಅಕ್ಷರಗಳು)ತಿಳಿಯದೆ ಹೆಂಗ ತಿಳಿಯತೈತೋ ಖುರಾನ’’ ಎಂಬಂತಹ ಧಾರ್ಮಿಕ ಮೂಲಭೂತವಾದವನ್ನು ವಿಡಂಬಿಸುವ ಪದಗಳನ್ನು ರಚಿಸಿದ್ದಾರೆ.
‘‘ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ್ರ ಮಾಡ್ಯಾರಲ್ಲಾ, ಬಂಗಾರ ಬ್ಯಾರೆ ವಸ್ತ್ರ ಬ್ಯಾರೆ ಎಂದು ಹೇಳತಾರ ಜನರೆಲ್ಲ, ಬಂಗಾರವೇ ವಸ್ತ್ರ, ವಸ್ತ್ರವೇ ಬಂಗಾರ ಮೂಲ ತಿಳಿಯಲಿಲ್ಲ..’’ ಈ ರೀತಿಯ ತತ್ವ ಪದಗಳನ್ನು ಖಾದರ ಪೀರಾ ಮತ್ತವರ ಸಂಗಡಿಗರು ಅದಾಗಲೇ ರಚಿಸಿ ಕನ್ನಡ ಭಾಷಾ ಜಗತ್ತಿನೊಳಗೆ ಒಂದು ಭಿನ್ನ ತಾತ್ವಿಕ ಹಾದಿಯನ್ನು ತೋರಿಸಿದ್ದಾರೆ. ‘‘ಹೇ ತೊಗಲಿನ ಕಾಯ ಭೇದವೇಕೋ ಮಹಾರಾಯ; ಮೈಯೆಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ’’ ಈ ರೀತಿಯ ಅಧ್ಯಾತ್ಮದ ವಿಶಿಷ್ಟ ತತ್ವವನ್ನು ಅವರು ಪ್ರತಿಪಾದಿಸಿದ್ದಾರೆ. ಅದೇ ಕಾಲಘಟ್ಟದಲ್ಲಿ ಸೂಫಿ ಕವಿ ಗೋನಾರೆ ಬಡೇಸಾಬ ರಚಿಸಿದ ತತ್ವಪದ ಎಲ್ಲ ಧರ್ಮಗಳ ಮೂಲವನ್ನೂ, ಅದನ್ನು ಪಾಲಿಸುವ ಮೂಲಭೂತವಾದಿಗಳನ್ನೂ ಕಟಕಟೆಯಲ್ಲಿ ನಿಲ್ಲಿಸುತ್ತದೆ.:
‘‘ಅಲ್ಲ ಅಲ್ಲ ಎಂಬ ಖುಲ್ಲ ಜನರ ಬಳಿಯಲ್ಲಿ
ನಿಲ್ಲದಂಥ ಬಲ್ಲೀದ ಕುಲನಂದು
ತಾಮಸವನು ತ್ಯಜಿಸಿ ದಾಸರ ಪ್ರೇಮವನ್ನು ಬಯಸಿ
ಭೂಮಿಯೊಳು ಶ್ರೀರಾಮ ರಹೀಮನೆಂದು
ನೇಮಿಸಿಕೊಂಡ ನಿಸ್ಸೀಮ ಕುಲನಂದು’’(ಡಾ.ರಹಮತ್ ತರೀಕೆರೆ, ಕರ್ನಾಟಕದ ಸೂಫಿಗಳು, ಪುಟ- 215)
ಇವರು ಬದುಕಿದ್ದ ಸಂದರ್ಭದಲ್ಲಿ ಕನ್ನಡವು ಹೊಸತಿನ ಹುಟ್ಟಿನ ಸಂಕಟವನ್ನು ಅನುಭವಿಸುತ್ತಿತ್ತು. ಕುಲ- ಮತಗಳ ಒಗ್ಗೂಡುವಿಕೆಗೆ ಮತ್ತು ಆ ಮೂಲಕ ದೈವತ್ವದ ಸಾಕ್ಷಾತ್ಕಾರಕ್ಕೆ ಮನುಷ್ಯ ಪ್ರೇಮ ಮಾತ್ರ ಮದ್ದು ಎಂದು ತಿಳಿದಿದ್ದ ಈ ತತ್ವಪದಕಾರರು ಕನ್ನಡದ ಮೂಲಕ ಭಾರತದ ಒಡಲ ಸಂಕಟವನ್ನು ಅರ್ಥ ಮಾಡಿಕೊಂಡರು.ರಹಮತ್ ತರೀಕೆರೆಯವರು ಹೇಳುವಂತೆ ‘‘19ನೇ ಶತಮಾನದಲ್ಲಿ ಬಹಳಷ್ಟು ತತ್ವಪದಕಾರರು ಕನ್ನಡದಲ್ಲಿ ರಚನೆ ಮಾಡಿದರು. ಸೈಯದ್ ಶಾ ಅಮೀರುಲ್ ಹುಸೈನಿ (1850), ಇವನ ಮಗ ಶಾ ಮಶಕ್ ಹುಸೈನಿ (ಖಾಕಿಪೀರ್) ಕನ್ನಡ ತತ್ವಪದಕಾರರೆಂದು ತಿಳಿದುಬರುತ್ತದೆ. ಜಲಾಲಸಾಬನ ಸಮಕಾಲೀನರು ಇವರು. ಆದರೆ, ಇವರ ರಚನೆಗಳು ಸಿಗುವುದಿಲ್ಲ. ಒಂದು ಊಹೆಯಂತೆ ಮುಸಲ್ಮಾನ ಎಂಬ ಕಾರಣಕ್ಕೆ ‘ಹಿಂದೂ’ಗಳೂ, ಕನ್ನಡದಲ್ಲಿದ್ದವೆಂಬ ಕಾರಣಕ್ಕೆ ಮುಸ್ಲಿಮರೂ ಈ ರಚನೆಗಳನ್ನು ಉಳಿಸಿಕೊಳ್ಳಲು ಆಸಕ್ತಿ ತೋರಲಿಲ್ಲ. ಈ ಊಹೆ ನಿಜವಾದರೆ ಶರೀಫನೇ ಭಾಗ್ಯಶಾಲಿ.’’ ಈ ಸಂದರ್ಭದಲ್ಲಿ ಕನ್ನಡ ಸಾಂಸ್ಕೃತಿಕ ವಲಯ ಇನ್ನಷ್ಟು ಗಟ್ಟಿಯಾಯಿತು ಎನ್ನಬಹುದು. ತತ್ವಪದಕಾರರು ನೂತನ ಮಾದರಿಯ ಪದ್ಯ ಜಗತ್ತನ್ನು ಕಟ್ಟಿದರು ಎಂದು ನಮಗನ್ನಿಸಿದರೂ, ಕನ್ನಡದ ಮನಸ್ಸುಗಳ ಸಾಮರಸ್ಯದ ಕಥನಗಳಿಗೆ ದನಿಯಾದರು ಎನ್ನಬಹುದು.
ಕನ್ನಡದ ಜನಪದದೊಂದಿಗೆ ಬೆರೆತುಹೋಗಿರುವ ಈ ತತ್ವಪದಕಾರರು ತ್ರಿಪದಿಗಳೊಳಗೆ ಮಹಿಳಾ ಸಮಾನತೆಯ ಧಾರೆಯನ್ನು ಮುಂದುವರಿಸಿದರು. ಶಾಹಿರರು ಎಂದು ಕರೆಸಿಕೊಳ್ಳುವ ತತ್ವಪದಕಾರರ ಜೊತೆಗೆ ರಚನಾಕಾರರ ಗುರುತಿಲ್ಲದೆ ಸೃಷ್ಟಿಸಿದ ಸಾವಿರಾರು ಪದಗಳು ಕನ್ನಡದ ಹೆಣ್ಣು ಕುಲದೊಳಗೆ ಮಿಳಿತಗೊಂಡಿದೆ. ದರ್ಗಾಗೆ ನಡೆದುಕೊಳ್ಳುವ ತಳ ಕುಲಗಳ ಮಹಿಳೆಯರ ಎದೆಯೊಳಗೆ ಸೇರಿಹೋಗಿ ಜನಪದವೇ ಆಗಿರುವ ತತ್ವಪದಗಳು ಕನ್ನಡದ ವಿವೇಕವನ್ನು ಹೆಚ್ಚಿಸಿವೆ.
‘‘ಸಾಹೀಬ ನಿನ ಕುದುರಿ ಸಕ್ಕರಿ ಮೆಯ್ದಾವ
ಸ್ಯಾಬಾದಿ ಸೆಡಕ ಇಳದಾವ | ಕಲಬುರ್ಗಿ
ಕಾರಂಜಿ ನೀರ ಮುಗಿದಾವ.’’
ಈ ರೀತಿಯ ಸಾವಿರಾರು ತ್ರಿಪದಿಗಳು ಸೂಫೀ ಕವಿಗಳ ಕಾಣ್ಕೆಯಲ್ಲೇ ಹುಟ್ಟು ಪಡೆದು ಹರಿದವುಗಳಾಗಿವೆ.
ಇಂಥಾ ಸಾಮರಸ್ಯದ ಮೇಳೈಸುವಿಕೆಯು ಕನ್ನಡ ನಾಡಿನ ಉದ್ದಗಲಕ್ಕೂ ಕಾಣುತ್ತದೆ. ಇದು ಇಂಗ್ಲಿಷರ ಆಗಮನದ ನಂತರ ನಮ್ಮಲ್ಲಿ ಆದ ಬದಲಾವಣೆ ಎಂದು ಮೇಲ್ನೋಟಕ್ಕೆ ಕಾಣುತ್ತದೆಯಾದರೂ, ಶರಣ ಚಳವಳಿಯ ಕಾಲಘಟ್ಟದಿಂದ ಸಮುದಾಯಗಳೊಳಗೆ ಅಂತಸ್ತವಾಗಿದ್ದ ಆಶಯ ಎಂಬುದನ್ನೂ ಮರೆಯಬಾರದು. ಈ ತತ್ವಪದಗಳೊಡನೆ ದರ್ಗಾ ಕೇಂದ್ರಿತ ಹಿಂದೂ- ಮುಸ್ಲಿಮ್ ಭಾವೈಕ್ಯ ಲೋಕವೊಂದು ತೆರೆದುಕೊಳ್ಳುತ್ತದೆ. ಈ ಭಾವೈಕ್ಯ ಲೋಕದಲ್ಲಿ ಮೇಲು- ಕೀಳಿನ ಕಿಲುಬು ಇರುವುದಿಲ್ಲ. ಬದಲಾಗಿ ಕಾಲಕಾಲಕ್ಕೆ ಕೂಡಿಬಾಳುವ ಆಲೋಚನೆ ಯಾಕೆ ಬಲಗೊಳ್ಳಬೇಕು ಎಂಬ ಕಾರಣವು ಹಿರಿದಾಗುತ್ತಿರುತ್ತದೆ.
ರಹಮತ್ ತರೀಕೆರೆಯವರ ಮಾತಿನಂತೆ ಆಧುನಿಕ ಕನ್ನಡ ಸಾಹಿತ್ಯ ಬ್ರಿಟಿಷ್ ಆಳ್ವಿಕೆಯಿಂದ ಲಾಭವನ್ನೇ ಪಡೆದಿದೆ. ‘‘ಬ್ರಿಟೀಷ್ ಶಿಕ್ಷಣದ ಫಲವಾಗಿ ಹುಟ್ಟಿದ ‘ಆಧುನಿಕ’ ಸಂವೇದನೆಗಳು ಕನ್ನಡದಲ್ಲಿ ಹಲವು ರೂಪಧಾರಣೆ ಮಾಡಿದವು. ಸಂಶೋಧನೆ, ಸಾಂಸ್ಕೃತಿಕ ಚಿಂತನೆ, ಸೃಜನಶೀಲ ಸಾಹಿತ್ಯ, ಅನುವಾದ ಇವೇ ಆ ರೂಪಗಳು. ಈ ರೂಪಗಳನ್ನು ಆಧುನಿಕ ಕನ್ನಡ ಸಾಹಿತ್ಯ ತನ್ನ ಪರಂಪರೆಗೆ ಪ್ರತಿಕ್ರಿಯಿಸುತ್ತಾ ತೋರಿಸಿದ ಕ್ರಿಯಾಶೀಲ ಮಾದರಿಗಳೆಂದು ಕರೆಯಬಹುದು.’’ಈ ಮಾದರಿಗಳು ನಮಗೆ ಸಿಕ್ಕಲು ಸಹಾಯ ಮಾಡಿದ್ದು ಬ್ರಿಟಿಷರ ಸಂಶೋಧನಾ ಗುಣ. ಅವರಿಂದ ಮೊದಲಾದ ಸಂಸ್ಕೃತಿಯ ಉತ್ಖನನ ಕಾರ್ಯವು ನಮ್ಮಲ್ಲಿದ್ದ ಹಲವು ವಿದ್ವಾಂಸರ ಕಣ್ಣ ದಾರಿಯಾಯಿತು. ಶಂಬಾ ಜೋಶಿ, ಕಪಟರಾಳ ಕೃಷ್ಣರಾಯ, ಆರ್.ಡಿ.ರಾನಡೆ, ಸೇತು ಮಾಧವರಾವ್ ರಂಥವರು ತಮ್ಮ ಸಾಂಸ್ಕೃತಿಕ ಸಂವೇದನೆಯಿಂದ ಸೂಫಿ ಕಾವ್ಯ ಪರಂಪರೆಯಂತಹ ಸಾಗರದ ಮುತ್ತುಗಳನ್ನು ಶೋಧಿಸಿದರು.
ಈ ಶೋಧನೆಯ ಬೆಳಕಿನಲ್ಲಿ ಮಹಿಪತಿರಾಯ, ಶಿಶುನಾಳ ಷರೀಫ, ಕೊಡೇಕಲ್ ಬಸವಣ್ಣ, ತಿಂತಿಣಿ ಮೋನಪ್ಪ, ಕೂಡಲೂರು ಬಸವಲಿಂಗ, ಬಂದೇನವಾಝ್, ಮೋಟ್ನಳ್ಳಿ ಹಸನಸಾಬ, ಬಾಬಾ ಬುಡಾನ್, ಮೊದಲಾದ ಸೂಫಿ ಸಂತರು ಕನ್ನಡಕ್ಕೆ ದಕ್ಕಿದರು.
ಈ ಸಮತೆಯ ಮೈತ್ರಿಯನ್ನು ಅಕ್ಷರಗಳ ಪಂಜರದಿಂದ ಬಿಡಿಸಿ ಎದೆಗಿಳಿಸಿಕೊಂಡು ಸಾಗಿದರೆ ಆಧುನಿಕ ಪೋಷಾಕಿನಲ್ಲೂ ಮನುಷ್ಯರನ್ನು ಕೊಲ್ಲುತ್ತಿರುವ ಕೋಮುವಾದ, ಜಾತಿವಾದಗಳಿಂದ ಬಿಡಿಸಿಕೊಳ್ಳಬಹುದು.