ಎಲ್ಲರ ಶಕ್ತಿ ಒಗ್ಗೂಡಲಿ ಪ್ರಜಾಪ್ರಭುತ್ವದ ಉಳಿವಿಗಾಗಿ

ಹಿರಿಯ ಲೇಖಕ, ಚಿಂತಕ ಮಂಗ್ಳೂರ ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಾಗಾರ, ಶಿಬಿರ, ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರಪ್ರದೇಶ ಮೂಲದ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು ‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ.

Update: 2024-01-06 04:45 GMT

ರಾಜಕೀಯವಾಗಿ ತೀವ್ರ ಅಪಾಯದಲ್ಲಿರುವ ಭಾರತದ ಪ್ರಾಣ ಉಳಿಯಬೇಕಾದರೆ, ಈಗ ಅತ್ಯಗತ್ಯವಾಗಿ ಬೇಕಿರುವುದು ಪ್ರಜಾಪ್ರಭುತ್ವ ಎಂಬ ಆಕ್ಸಿಜನ್. ಅದನ್ನು ಒದಗಿ

ಸಲು ಈಗ ನಾವೆಲ್ಲರೂ ನಮ್ಮ ಶಕ್ತಿಯನ್ನು ಒಗ್ಗೂಡಿಸಿಕೊಂಡು, ಮುಂದಡಿ ಇಡಬೇಕಿದೆ.

ಸ್ವಾತಂತ್ರ್ಯ ದೊರಕುವ ಹೊತ್ತಿನಲ್ಲಿ ನಮ್ಮೆದುರು ಇದ್ದ ಮಾದರಿಗಳಲ್ಲಿ ಅತ್ಯಂತ ಉತ್ತಮವಾದುದು ಎಂದು ನಾವು ಆಯ್ಕೆ ಮಾಡಿಕೊಂಡಿದ್ದು ಪ್ರಜಾಪ್ರಭುತ್ವವನ್ನು. ಇದನ್ನು ಆಗು ಮಾಡಲು ದೇಶಕ್ಕೊಂದು ಉದಾತ್ತವಾದ ಗುರಿಯನ್ನು ಮುಂದಿಡುವ ಸಂವಿಧಾನದ ಅವಶ್ಯಕತೆಯನ್ನು ಮನಗಂಡೆವು. ಸಂವಿಧಾನ ರಚನಾ ಸಮಿತಿ ಒಂದು ಪ್ರಬುದ್ಧರನ್ನು ಒಳಗೊಂಡಿದ್ದ ಸಮಿತಿ ಆಗಿತ್ತು. ಪ್ರತಿಯೊಬ್ಬ ಸದಸ್ಯರೂ ತಮ್ಮ ಪೂರ್ಣ ಧ್ಯಾನ, ಗಮನ, ಕಾಳಜಿಯನ್ನು ತೊಡಗಿಸಿ, ಉತ್ತಮ ಸಂವಿಧಾನವು ರೂಪುಗೊಳ್ಳಲು ಕಾರಣಕರ್ತರಾದರು. ಅದು ಎಲ್ಲರ ಬುದ್ಧಿ ಮತ್ತು ಹೃದಯವನ್ನು ಒಳಗೊಂಡು ರಚನೆಯಾದ ಅಮೋಘ ಸಂವಿಧಾನ. ವಿನೂತನ, ವಿವಾದಾತ್ಮಕ ಮತ್ತು ಪೂರ್ವಾಗ್ರಹಕ್ಕೆ ಸವಾಲೆಸೆಯುವಂಥ ಅಂಶಗಳನ್ನು ಮಾರ್ಮಿಕ ಹೃದಯವಂತಿಕೆಯಿಂದ ಅದು ರೂಪುಗೊಂಡಿತು.

ಆದರೆ, ಇಂಥ ಸಂವಿಧಾನವು ಕೆಲವರಿಗೆ ಕಣ್ಣ ಕಲ್ಲಾಯಿತು. ಅನೂಚಾನವಾಗಿ ನಡೆದು

ಕೊಂಡು ಬಂದ ಸಂಪ್ರದಾಯಗಳನ್ನು ವಿಮರ್ಶೆಗೆ ಒಡ್ಡದೆ, ಕಣ್ಣು-ಕಿವಿ-ಬಾಯಿ ಮುಚ್ಚಿಕೊಂಡು ಮುಂದುವರಿಸಿಕೊಂಡು ಹೋಗಬೇಕೆಂಬ ಅವಿವೇಕಿ ಚಿಂತನೆಯವರಿಗೆ ಸಂವಿಧಾನವು ಮಗ್ಗಲ ಮುಳ್ಳಾಯಿತು. ಪರಿಣಾಮ? ಸಂವಿಧಾನದ ಆಶಯಕ್ಕೆ ಮಸಿ ಬಳಿಯುವ ಪ್ರಯತ್ನಗಳು ನಿರಂತರವಾಗಿ ನಡೆದುಕೊಂಡು ಬಂದವು.

1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನದಿಂದ ವಿಕೃತ ರೂಪ ತಾಳುತ್ತಾ ಬಂದ ಸಂವಿಧಾನ ವಿರೋಧಿ ಮನಸ್ಥಿತಿಯು ನಂತರದ ವರ್ಷಗಳಲ್ಲಿ ಇನ್ನಷ್ಟು ದೇಶದಲ್ಲಿ ದ್ವೇಷದ ದಾವಾನಲವನ್ನು ಹಬ್ಬಿಸುವ ವಿವೇಚನಾರಹಿತ ಪ್ರಯತ್ನ ಗಳನ್ನು ನಡೆಸಿತು. ಹಿಂದುತ್ವವಾದಿಗಳು ಸನಾತನ ಧರ್ಮದ ರಕ್ಷಣೆಯ ಹೆಸರಿನಲ್ಲಿ ಪ್ರಗತಿ, ವೈಜ್ಞಾನಿಕತೆ, ಹೃದಯವೈಶಾಲ್ಯ ಎಲ್ಲವನ್ನೂ ಗಾಳಿಗೆ ತೂರುವ ಪ್ರಹಸನ ನಡೆಸುತ್ತಾ ಬಂದರು.

ಧರ್ಮವನ್ನು ರಾಜಕಾರಣದಲ್ಲಿ ಬೆರೆಸಿ ಪಾಕ ಹದಗೊಳಿಸಿದರೆ, ಮುಗ್ಧ ಭಾರತೀಯರ ಕಣ್ಣಿಗೆ ಮಂಕುಬೂದಿ ಎರಚುವುದು ಸುಲಭ ಎಂಬುದನ್ನು ಮನಗಂಡ ಹಿಂದುತ್ವವಾದಿ ಶಕ್ತಿಗಳು, ತಮ್ಮ ಆತ್ಮಘಾತುಕ ದಾರಿಯಲ್ಲಿ ದಾಪುಗಾಲು ಹಾಕುತ್ತಾ ನಡೆದವು.

ಈ ಪ್ರಯತ್ನವು ಇಡೀ ದೇಶಕ್ಕೆ ಅಪಾಯದ ಕರೆಗಂಟೆಯಾಗಿ ಕಂಡಿದ್ದು 2014ರ ನಂತರದ ದಿನಗಳಲ್ಲಿ. ಆ ದಿನದಿಂದ ಈ ದಿನದವರೆಗೆ ಪ್ರತಿನಿತ್ಯ ಒಂದಿಲ್ಲೊಂದು ವಲಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ಮಾತುಗಳು, ಕೃತ್ಯಗಳು ಎಡೆಬಿಡದೆ ನಡೆದುಕೊಂಡು ಬಂದಿವೆ.

ಈಗ, ನಾವು ಎಲ್ಲರೂ ‘ಎದುರಾಗಿರುವ ಸವಾಲುಗಳನ್ನು ಎದುರಿಸಿ, ಯಶಸ್ಸು ಕಾಣುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದರೆ, ಯಾವ ದಾರಿಗಳನ್ನು ನಾವು ಹಿಡಿಯುವುದು ಸಮುಚಿತ? ಎಂಬ ಪ್ರಶ್ನೆಯ ಸುತ್ತಲೂ ಆಲೋಚಿಸಬೇಕಿದೆ. ಈ ನಿಟ್ಟಿನಲ್ಲಿ ಎದುರಾಗುವ ಕೆಲವೊಂದು ಪ್ರಧಾನ ಸವಾಲುಗಳನ್ನು ಹೀಗೆ ಗುರುತಿಸಬಹುದು.

ಜನರ ಒಳಗೊಳ್ಳುವಿಕೆ: ಜನರು ಸಾಮಾಜಿಕ, ಆರ್ಥಿಕ, ರಾಜಕೀಯ ಆಗು-ಹೋಗುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಹೋದರೆ, ಪ್ರಜಾಪ್ರಭುತ್ವವು ಅರ್ಥವನ್ನು ಪಡೆದುಕೊಳ್ಳುವುದಿಲ್ಲ ಮತ್ತು ಅದು ಉಳಿಯುವುದಿಲ್ಲ. ಆದ್ದರಿಂದ, ಜನರು ತಮ್ಮ ವೈಯಕ್ತಿಕ ಬದುಕಿನ ಆಚೆಗೆ ಬಂದು ಸಮಾಜದಲ್ಲಿ ಸಂಭವಿಸುವ ಏರು-ಪೇರುಗಳ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಅವರನ್ನು ಕರೆತರುವ ಕಾರ್ಯ ಪ್ರಜಾಪ್ರಭುತ್ವವಾದಿಗಳ ಆದ್ಯ ಕರ್ತವ್ಯಗಳಲ್ಲಿ ಒಂದು. ಇದನ್ನು ಹಂತ-ಹಂತವಾಗಿ, ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಮಾಡುವುದು ಮುಖ್ಯ. ಇದಕ್ಕಾಗಿ ಹಳೆಯ ಮಾದರಿಗಳನ್ನು ಅನುಸರಿಸುವ ಜೊತೆಗೆ ನವೀನ ಮಾದರಿಗಳನ್ನು ಸೃಷ್ಟಿಸಿದರೆ, ಆ ಮೂಲಕವೂ ಸಮಾಜದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಸಾಧ್ಯ ಮಾಡುವ ಪ್ರಯತ್ನಗಳು ಹೆಚ್ಚಿನ ಸಾಫಲ್ಯವನ್ನು ತೋರುವುದು ಖಚಿತ.

ತಂತ್ರಜ್ಞಾನದ ಸಮರ್ಪಕ ಬಳಕೆ: ತಂತ್ರಜ್ಞಾನ ಎಂಬುದನ್ನು ಈ ಕಾಲದಲ್ಲಿ ಕಿಂಚಿತ್ತೂ ನಿರ್ಲಕ್ಷಿಸತಕ್ಕದ್ದಲ್ಲ. ಅದು ಬಳಸುವವರ ಅಪೇಕ್ಷೆಯಂತೆ ಫಲ ನೀಡುವ ಶಕ್ತಿಯನ್ನು ಹೊಂದಿದೆ. ಎ.ಐ. ಬಳಸಿ, ಸಮಾಜದಲ್ಲಿ ಅಲ್ಲೋಲ ಕಲ್ಲೋಲವನ್ನೂ ಉಂಟು ಮಾಡಬಹುದು; ಹಾಗೆಯೆ, ಯುವಜನರನ್ನು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಲೂಬಹುದು.

ಆದ್ದರಿಂದ ತಂತ್ರಜ್ಞಾನವನ್ನು ಬಳಸುವವರಿಗೆ ವಿವೇಚನೆಯ ಮಹತ್ವವನ್ನು ಮನಗಾಣಿಸಿ ಕೊಡುವುದೂ ಮುಖ್ಯ.

ಅಂಚಿಗೆ ದೂಡಲ್ಪಟ್ಟವರಿಗೆ ಆದ್ಯತೆ: ಭಾರತವು ಶತಮಾನಗಳಿಂದಲೂ ಮನುಸ್ಮತಿಯ ಹಿಡಿತಕ್ಕೆ ಒಳಪಟ್ಟೇ, ಮುಂದಡಿ ಇಡುತ್ತಾ ಬಂದಿದೆ. ಗೋಚರ ಮತ್ತು ಅಗೋಚರವಾಗಿ ಇಲ್ಲಿ ಪ್ರತಿಯೊಬ್ಬರ ಮೇಲೆ, ಪ್ರತಿಯೊಂದು ಕ್ಷೇತ್ರದಲ್ಲಿ ಪೂರ್ವಾಗ್ರಹಗಳು ತಮ್ಮದೇ ಪ್ರಭಾವವನ್ನು

ಬೀರುತ್ತ ಬಂದಿವೆ. ಬಡವರ ಸ್ಥಿತಿ ಒಂದೆಡೆ ಕಂಡು ಬಂದರೆ, ಈ ಬಡವರೂ ಜಾತಿ ಮತ್ತು ಧರ್ಮದ

ಆಧಾರದಲ್ಲಿ ತಮ್ಮದೇ ದೇಶದ ನಾಗರಿಕರನ್ನು ಅವಮಾನಕರವಾಗಿ, ಸಂಶಯಾಸ್ಪದವಾಗಿ ಕಾಣುತ್ತಿರುವ ದುರಂತವೂ ಸಂಭವಿಸುತ್ತಾ ಬಂದಿದೆ. ಇನ್ನು, ಲಿಂಗದ ಆಧಾರದಲ್ಲಂತೂ ಪ್ರತಿಯೊಂದು ಜಾತಿಯಲ್ಲಿ, ಧರ್ಮದಲ್ಲಿ, ವರ್ಗದಲ್ಲಿ ತಾರತಮ್ಯ ನಡೆದಿದೆ.

ಈ ಜಾತಿ-ವರ್ಗ-ಲಿಂಗ-ಧರ್ಮ ಪ್ರತ್ಯೇಕತೆಯನ್ನು ಪರಿಣಾಮಕಾರಿಯಾಗಿ ಒಂದು ಕಾಲಮಿತಿಯಲ್ಲಿ ಕೊನೆಗೊಳಿಸಬೇಕಿದೆ. ಇಲ್ಲದಿದ್ದರೆ, ಈ ನೆಲದಲ್ಲಿ ಪ್ರಜಾಪ್ರಭುತ್ವವು ಅರಳುವುದು ದುಃಸಾಧ್ಯವಾಗುವುದು ಖಚಿತ.

ರಾಜಕಾರಣದ ಯುವಜನತೆಯ ಪ್ರವೇಶ: ಸಂವಿಧಾನ ಜಾರಿಗೆ ಬಂದ ಈ ಏಳು ದಶಕಗಳಲ್ಲಿ ರಾಜಕೀಯವು ನಿವೃತ್ತಿ ವಯಸ್ಸು ದಾಟಿದವರ ಕೈಯಲ್ಲೇ ಇರುವುದೊಂದು ವಿಪರ್ಯಾಸ. ಯುವಜನರು ಸಾರ್ವಜನಿಕ ಆಡಳಿತದ ಚುಕ್ಕಾಣಿಯನ್ನು ಹಿಡಿಯದೇ ಹೋದರೆ ಪ್ರಜಾಪ್ರಭುತ್ವಕ್ಕೊಂದು ನವೀನ ಅರ್ಥವನ್ನು ವಿವರಿಸುವುದು ಕನಸಾಗೇ ಉಳಿದೀತು. ಹಾಗಾಗಿ, ತುರ್ತು ಕ್ರಮಗಳನ್ನು ಅನುಸರಿಸಿ ರಾಜಕಾರಣದಲ್ಲಿ ಯುವಜನರು ಸೇರ್ಪಡೆ ಆಗುವುದಕ್ಕೆ ಒತ್ತಾಸೆ ದೊರಕುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು.

ಪರಿಸರ, ಪ್ರಕೃತಿ, ತಾಪಮಾನ ರಕ್ಷಣೆ: ಮನುಷ್ಯ ಕುಲದ ದುರಾಸೆಯು ಪ್ರಪಂಚದಲ್ಲಿನ ಎಲ್ಲರಿಗೆ ಭಸ್ಮಾಸುರನ ಗತಿಯನ್ನು ತರುವುದು ನಿಶ್ಚಿತ. ಎಲ್ಲರ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ನಮ್ಮ ಪ್ರಕೃತಿಗೆ ಇದೆ. ಇದು ನಿರ್ವಿವಾದ. ಆದರೆ, ಕೆಲವು ಜನರ ದುರಾಸೆಗಾಗಿ ಇಡೀ ಪ್ರಕೃತಿಯ ನಾಶ ಆಗುವುದನ್ನು ಸಹಿಸಿಕೊಂಡಿರಲು ಸಾಧ್ಯ ಇಲ್ಲ ಎಂದು ಪ್ರಜ್ಞಾವಂತ ಧ್ವನಿಗಳು ಗಟ್ಟಿಯಾಗಿ ಹೇಳುವ ಅವಶ್ಯಕತೆ ಇದೆ.

ವಿಚ್ಛಿದ್ರಕಾರಿ ಶಕ್ತಿಗಳ ಹವಣಿಕೆ: ಧರ್ಮ, ಜಾತಿ, ಪ್ರದೇಶ, ಭಾಷೆ ಆಧಾರ ನೀಡಿ, ದೇಶದಲ್ಲಿ ಅನೈಕ್ಯವನ್ನು ಉಂಟು ಮಾಡುವ ಶಕ್ತಿಗಳಲ್ಲಿ ವಿವೇಕ ಮೂಡಿಸಲು ಒಂದೆಡೆ, ಆ ಶಕ್ತಿಗಳು ನಡೆಸುವ ಹಿಂಸಾತ್ಮಕ, ದೇಶಹಿತ ಘಾತುಕ ಕೃತ್ಯಗಳನ್ನು ವಿಫಲಗೊಳಿಸಲು ಇನ್ನೊಂದೆಡೆ ನಿರಂತರ ಪ್ರಯತ್ನಗಳು ನಡೆಯಬೇಕಿದೆ. ಇದು ಸರಕಾರದ ಜವಾಬ್ದಾರಿ ಆಗಿರುವ ಹಾಗೆ ಎಲ್ಲಾ ನಾಗರಿಕರ ಕರ್ತವ್ಯವೂ ಆಗಿದೆ.

ಇವೇ ಮುಂತಾದ ಕ್ರಮಗಳನ್ನು ನಿಷ್ಠಾಪೂರ್ವಕವಾಗಿ ಕೈಗೊಳ್ಳುವ ಮೂಲಕ ಸರಕಾರ ಮತ್ತು ಜನರು ಸೇರಿ ಪ್ರಜಾಪ್ರಭುತ್ವವನ್ನು ಉಳಿಸಲು ಮುಂದಾಗದೇ ಹೋದರೆ, ಅನಾಹುತ ಖಂಡಿತ ಕಾದಿದೆ ಎಂಬುದು ನಮ್ಮ ಅರಿವಿಗೆ ಬರಬೇಕು.

Writer - ವಾರ್ತಾಭಾರತಿ

contributor

Editor - Ismail

contributor

Byline - ಮಂಗ್ಳೂರ ವಿಜಯ

contributor

Similar News

ಭಾವ - ವಿಕಲ್ಪ
ಕಥೆಗಾರ