ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ
ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಲೇಖಕ, ಸಂಶೋಧಕರಾಗಿ ಗುರುತಿಸಲ್ಪಟ್ಟವರು. ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ಶಿಕ್ಷಣ ಪಡೆದು ಸುಳ್ಯ, ಮಂಗಳೂರು, ಹಂಪಿ, ದಿಲ್ಲಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ದಲಿತ ಜಗತ್ತು, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಬಹುರೂಪ ಇವರ ಕೆಲವು ಮುಖ್ಯ ಕೃತಿಗಳು. ಕರ್ನಾಟಕ ಜಾನಪದ ಅಕಾಡಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈಚಿಗೆ ಪ್ರಾದೇಶಿಕತೆಯನ್ನು ನಾಶ ಮಾಡಬೇಕೆಂದು ಕರೆ ನೀಡಿದ್ದಾರೆ. ಬಿಜೆಪಿಯು ಬಹುಮಟ್ಟಿಗೆ ಅದನ್ನು ಜಾರಿ ಮಾಡಲು ಹೊರಟಿದೆ. ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅದಕ್ಕೆ ಸ್ಥಳೀಯ ನಾಯಕರೇ ಇರಲಿಲ್ಲ. ಅದು ನೆಚ್ಚಿಕೊಂಡದ್ದು ರಾಷ್ಟ್ರ ನಾಯಕರನ್ನು. ಪ್ರಾದೇಶಿಕತೆಯನ್ನು ರಾಷ್ಟ್ರೀಯತೆ ನುಂಗಿ ಹಾಕಿದಾಗ ಸುಲಭವಾಗಿ ಸಂಭವಿಸುವ ಘಟನೆಗಳು. ಹಾಗೆ ನೋಡಿದರೆ, ಪ್ರಾದೇಶಿಕತೆಯನ್ನು ನಿರಾಕರಿಸಿ ಕಟ್ಟುವ ರಾಷ್ಟ್ರೀಯತೆಯು ಬಹಳ ದುರ್ಬಲವಾಗಿರುತ್ತದೆ ಮತ್ತು ಹುಸಿಯಾಗಿರುತ್ತದೆ.
ಹುಸಿ ರಾಷ್ಟ್ರೀಯತೆಯು ಪ್ರಾದೇಶಿಕ ಇತಿಹಾಸವನ್ನು ಮರೆಸುತ್ತದೆ. ಅದರ ಬಲೆಗೆ ಬಿದ್ದ ರಾಜ್ಯಗಳು ತಮ್ಮದೇ ಆದ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ತಿಳಿವಳಿಕೆಯೇ ಇಲ್ಲದಂತೆ ವರ್ತಿಸಲು ಆರಂಭಿಸುತ್ತವೆ. ಕರ್ನಾಟಕದಲ್ಲಿ ಕನ್ನಡವೇ ಪತನಮುಖಿಯಾಗಿರುವ ಹೊತ್ತಲ್ಲಿ ಬಿಜೆಪಿ ಸರಕಾರವು ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ನೀಡಿದ ಉದಾರ ಕಾಣಿಕೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಆಧುನಿಕ ಕರ್ನಾಟಕಕ್ಕೆ ಮುನ್ನುಡಿ ಬರೆದ ಟಿಪ್ಪೂ ಸುಲ್ತಾನನ ಜಾಗದಲ್ಲಿ ಶಿವಾಜಿಯನ್ನೋ ಉರಿಗೌಡ-ನಂಜೇಗೌಡರನ್ನೋ ಸ್ಥಾಪಿಸುವ ಹವಣಿಕೆ ಇನ್ನೊಂದು ಉದಾಹರಣೆ. ಇಂಥ ಘಟನೆಗಳು ಕರ್ನಾಟಕವನ್ನು ನಗೆಪಾಟಲಿಗೆ ಗುರಿಯಾಗಿಸಿದೆ. ಇದರ ಜೊತೆಗೆ ಬಂಡವಾಳಶಾಹಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಸರಕಾರಗಳು ಪ್ರಾದೇಶಿಕ ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಘೋಷಿಸಿ ಅವರ ಉತ್ಪಾದನೆಗಳನ್ನು ಜಾಗತಿಕ ಮಾರುಕಟ್ಟೆಗೆ ವಿಸ್ತರಿಸಲು ಬೇಕಾದ ಜಾಗತಿಕ ಭಾಷೆಗೆ ಒತ್ತುಕೊಡುತ್ತವೆ. ಜನರೂ ಅದನ್ನು ನಂಬಿ ಪ್ರಾದೇಶಿಕತೆಯಿಂದ ಸಿಡಿದು ನಿಂತು ನೆಲೆ ಕಳೆದುಕೊಳ್ಳುತ್ತಾರೆ. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಮಧ್ಯಮವರ್ಗದ ಜನರು ನಂಬುತ್ತಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಬೇಡವಾಗುತ್ತದೆ. ಹೀಗಿರುವಾಗ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಭಾಷೆ ಮತ್ತು ಸಾಹಿತ್ಯದ ಮಹತ್ವ ಕಡಿಮೆಯಾಗುತ್ತದೆ. ಈ ನಡುವೆ, ಭಾಷೆಗಳ ಕುರಿತು ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಸರಕಾರವೇ ಮರೆತುಬಿಡುತ್ತದೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ಅಂಥ ಕೆಲಸಗಳನ್ನು ಯಾವ ಸರಕಾರವೂ ಮಾಡುವುದಿಲ್ಲ. ಸರಕಾರದ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ವಿದ್ವಾಂಸರು ಮಾತಾಡುತ್ತಿರುವ ರೀತಿಯನ್ನು ನೋಡಿದರೆ ಅವರಿಗೆ ರಾಜಕೀಯವೇ ಅಂತಿಮ ಎಂಬುದು ಸ್ಪಷ್ಟವಾಗುತ್ತದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಕೂಡಾ ಪ್ರಾದೇಶಿಕತೆಯ ಪತನಮುಖೀ ಚಲನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರ ಒಟ್ಟು ಪರಿಣಾಮವೋ ಎಂಬಂತೆ ಪ್ರಾದೇಶಿಕತೆಯ ಸೊಗಸು ವೇಗವಾಗಿ ಕುಸಿಯುತ್ತಿದೆ. ಅದನ್ನು ಎತ್ತಿ ಹಿಡಿಯುವವರ ಸಂಖ್ಯೆ ಈಗ ಇಲ್ಲ ಅಥವಾ ಬಹಳ ಕಡಿಮೆಯಾಗಿದೆ. ಕನ್ನಡದ ಜನಪ್ರತಿನಿಧಿಗಳೇ ಹಿಂದಿ ಮತ್ತು ಸಂಸ್ಕೃತದ ಪರವಾಗಿ ನಿಲ್ಲುತ್ತಿರುವುದನ್ನು ಕಂಡಾಗ ರಾಜಕೀಯವು ಕನ್ನಡದಂಥ ಪ್ರಾದೇಶಿಕ ಸಂಸ್ಕೃತಿಯನ್ನು ಹಿಂದಿಕ್ಕಿದ ದಯನೀಯ ಚಿತ್ರ ಕಣ್ಣ ಮುಂದೆ ನಿಲ್ಲುತ್ತದೆ.
ತನ್ನ ರಾಷ್ಟ್ರೀಯತೆಯ ಪರಿಕಲ್ಪನೆಗೆ ಅನುಗುಣವಾಗಿ ಕೇಂದ್ರ ಸರಕಾರವು ಇದೀಗ ಹಿಂದಿಯನ್ನು ಎಲ್ಲರೂ ಓದುವಂತೆ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡುವುದು ಅದರ ಅಂತಿಮ ಗುರಿ. ಆದರೆ ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ 2014ರಲ್ಲಿಯೇ ಸುಪ್ರೀಂ ಕೋರ್ಟ್ ಅದನ್ನು ತಿರಸ್ಕರಿಸಿತು. ಈ ಕುರಿತು ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ತರುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಇಂಗ್ಲಿಷ್, ಹಿಂದಿಗಳನ್ನು ಅನ್ನದ ಭಾಷೆಯೆಂದು ಹೇಳುವವರು ಭಾವದ ಭಾಷೆಯಾದ ಕನ್ನಡವನ್ನು ಮರೆತು ಭಾವರಹಿತ ಯಂತ್ರಗಳಾಗುತ್ತಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಧ್ಯಮ ವರ್ಗದ ಕನ್ನಡಿಗರು ಕನ್ನಡ ಭಾಷೆಯ ಕುರಿತು ತೋರುತ್ತಿರುವ ನಿರ್ಲಕ್ಷ್ಯವು ಕನ್ನಡವನ್ನು ಇವತ್ತು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ. ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ರಾಜಕೀಯ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೆ, ಹಿನ್ನಡೆ ಅನುಭವಿಸುತ್ತಿರುವ ಕನ್ನಡದಂಥ ಭಾಷೆಯ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ. ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರಕಾರ ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಸುಮಾರು 72 ಭಾಷೆಗಳಿರುವ ಕರ್ನಾಟಕಕ್ಕೆ ತನ್ನದೇ ಆದ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ.
ಭಾಷಾವಾರು ಪ್ರಾಂತಗಳ ರಚನೆಯಾದಾಗ ಕನ್ನಡಕ್ಕೆ ಒಂದಷ್ಟು ಮಹತ್ವ ಬಂದು ಅದು ರಾಜ್ಯಭಾಷೆಯಾದರೂ ಆಯಿತು. ಆದರೆ ಈ ಹಂತದಲ್ಲಿ ಕನ್ನಡದ ಆಶ್ರಯದಲ್ಲಿರುವ, ಆದರೆ ರಾಜ್ಯದ ಅಧಿಕೃತ ಭಾಷೆಗಳಲ್ಲದ ಉರ್ದು, ಕೊಡವ, ಬ್ಯಾರಿ, ತುಳು, ಬಡಗ, ಮೊದಲಾದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದವು. ಈ ಸಣ್ಣ ಭಾಷೆಗಳನ್ನು ಕರ್ನಾಟಕ ಸರಕಾರವು ರಾಜ್ಯದ ಅಧಿಕೃತ ಭಾಷೆಗಳೆಂದು ಯಾಕೆ ಘೋಷಿಸುತ್ತಿಲ್ಲ? ಆಂಧ್ರ ಪ್ರದೇಶವು ತೆಲುಗಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದಿಲ್ಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕನಿಷ್ಠ ಕೊಡವ ಮತ್ತು ತುಳು ಭಾಷೆಗಳನ್ನಾದರೂ ತನ್ನ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು?
ನಮ್ಮ ದೇಶವು ಇವತ್ತು ಆಲೋಚನೆಗೆ ಅವಕಾಶವೇ ಇಲ್ಲದ ರೀತಿಯಲ್ಲಿ ಮುನ್ನಡೆ ಯುತ್ತಿದೆ. ನಮ್ಮ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಲ್ಲಿ ಭಾಷೆ ಮತ್ತು ಚಿಂತನೆಗೆ ಅವಕಾಶವೇ ಇಲ್ಲ. ಕೇಂದ್ರ ಸರಕಾರದ ನೇಮಕಾತಿಗಳಲ್ಲಿ ಕನ್ನಡ ಇಲ್ಲದೆ, ಕೇವಲ ಹಿಂದಿ, ಇಂಗ್ಲಿಷ್ಗಳು ಇದ್ದಾಗ್ಯೂ ನಾವು ಕನ್ನಡದ ಪರವಾಗಿ ಧ್ವನಿ ಎತ್ತುವುದಿಲ್ಲ.
ಕನ್ನಡದ ಅಸ್ಮಿತೆಯ ಗುರುತುಗಳು:
ಕರ್ನಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತದೆ. ಕವಿರಾಜಮಾರ್ಗ ಮತ್ತು ಕಬ್ಬಿಗರ ಕಾವದಲ್ಲಿ ಕನ್ನಡವು ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿದೆ. ಚಾರಿತ್ರಿಕ ಕಾರಣಗಳಿಂದಾಗಿ ಕರ್ನಾಟಕವು ಸೌಹಾರ್ದ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಅದನ್ನು ಗಮನಿಸಿಯೇ ಕುವೆಂಪು ಅವರು ಕರ್ನಾಟಕವನ್ನು ‘ಸರ್ವಜನಾಂಗದ ಶಾಂತಿಯ ತೋಟವೆಂದು’ ಕರೆದರು.
ಕರ್ನಾಟಕವು ಆರಂಭಿಕ ಕಾಲದಿಂದಲೂ ಎಲ್ಲರನ್ನೂ ಒಳಗೊಂಡೇ ಬೆಳೆದಿದೆ. ಕ್ರಿ.ಶ. 840ರಲ್ಲಿ ರಚಿತವಾದ ‘ವಡ್ಡಾರಾಧನೆ’ ಎಂಬ ಗದ್ಯ ಕೃತಿಯಲ್ಲಿನ ಭದ್ರಬಾಹು ಭಟಾರರ ಕತೆಯ ಪ್ರಕಾರ ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವ್ರತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣ ಎಂದು ಹೇಳುವ ಭದ್ರಬಾಹು ಭಟಾರರು ಮುಂದೆ ಸಂಪ್ರತಿ ಚಂದ್ರಗುಪ್ತರ ಜೊತೆ ದಕ್ಷಿಣಾ ಪಥಕ್ಕೆ ತೆರಳುತ್ತಾರೆ. ದಕ್ಷಿಣಾ ಪಥದಲ್ಲಿ ಅತ್ಯಂತ ಪ್ರಶಸ್ತವಾದ ‘ಕಳ್ಬಪ್ಪು ನಾಡು’ (ಈಗಿನ ಶ್ರವಣಬೆಳಗೊಳ) ವಿಗೆ ಬಂದು ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಈ ಘಟನೆ ನಡೆದಿರಬಹುದಾದ ಕಾಲ ಸುಮಾರು ಕ್ರಿ.ಶ. ಮೂರನೇ ಶತಮಾನ. ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕರ್ನಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲದ ತಂಜಾವೂರು ಪ್ರದೇಶ ಹೆಚ್ಚು ಫಲವತ್ತಾಗಿತ್ತು. ಬದುಕುವುದಕ್ಕೆ ಅನುಕೂಲವಾಗಿದ್ದ ಸ್ಥಳವಾಗಿತ್ತು. ಆದರೆ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ತಮ್ಮ ದಕ್ಷಿಣಾ ಪಥದ ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭೂ ಭಾಗವನ್ನಲ್ಲ, ಬದಲು ಕರ್ನಾಟಕದ ಕನ್ನಡ ಭಾಷಾ ಪ್ರದೇಶವನ್ನು. ಜೈನರು ಮುಂದೆ ಕರ್ನಾಟಕವನ್ನು ಜಿನ ಧರ್ಮದ ಆಡುಂಬೊಲಂ ಮಾಡಿಕೊಂಡರು. ಕನ್ನಡಕ್ಕೆ ಶ್ರೀವಿಜಯ, ಶಿವಕೋಟ್ಯಾಚಾರ್ಯ, ಪಂಪ, ಪೊನ್ನ, ರನ್ನ, ನಾಗಚಂದ್ರ, ನಾಗವರ್ಮ, ನೇಮಿಚಂದ್ರ, ಕೇಶೀರಾಜ, ಜನ್ನ, ರತ್ನಾಕರ ವರ್ಣಿ, ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟ ಜೈನರು ಕನ್ನಡ ಸಂವೇದನೆಯನ್ನು ಅತ್ಯಂತ ನವಿರಾಗಿ ರೂಪಿಸಿದರು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಮೇಲುನೋಟಕ್ಕೆ ಕಾಣೆಯಾದಂತಿರುವ ಬೌದ್ಧ ಧರ್ಮವು ಕರ್ನಾಟಕದ ಅನೇಕ ಜನಪದ ಆಚರಣೆಗಳಲ್ಲಿ ಸೂಕ್ಷ್ಮವಾಗಿ ಇಂದಿಗೂ ಉಳಿದು ಬಂದಿದೆ. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸದೆ ಮೇಲುಕೋಟೆಯಲ್ಲಿ ಸ್ಥಳ ನೀಡಿದರು. ಕೇರಳದ ಕಾಲಟಿಯಿಂದ ಹೊರಟ ಶಂಕರಾಚಾರ್ಯರು ಬಿಹಾರದಲ್ಲಿ ಮಂಡನಮಿಶ್ರರನ್ನು ವಾದದಲ್ಲಿ ಸೋಲಿಸಿ, ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಶೃಂಗೇರಿಗೆ ಕಳಿಸುತ್ತಾರೆ. ಉಡುಪಿಯಲ್ಲಿ ಮಧ್ವಾಚಾರ್ಯರು ದ್ವೈತ ಮತವನ್ನು ಸ್ಥಾಪಿಸಿ ಪ್ರಸಾರ ಮಾಡಿದರು.
ಏಳನೆಯ ಶತಮಾನದ ಹೊತ್ತಿಗೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಕನ್ನಡ ಸಂಸ್ಕೃತಿಯೊಡನೆ ಸೇರಿಹೋಗಿದ್ದಾರೆ. ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ್ಯ ಎಂಬ ಮುಸ್ಲಿಮ್ ದೈವಗಳು, ಭೂತಗಳು ಸೃಸ್ಟಿಯಾಗಿ ಪೂರ್ಣ ದೇಸೀ ಎಂದೇ ಪರಿಗಣಿತವಾದ ಪಾಡ್ದನಗಳ ಒಳಗೂ ಕಾಣಿಸಿಕೊಂಡರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆಯಿತು.
ಚಾರಿತ್ರಿಕವಾಗಿ ಕನ್ನಡದ ಮಣ್ಣು ಅನೇಕ ಜನಸಮುದಾಯಗಳನ್ನು ತನ್ನಲ್ಲಿಗೆ ಬರಮಾಡಿ ಕೊಂಡಿದೆ. ಇಥಿಯೋಪಿಯಾದಿಂದ ಕ್ರಿಸ್ತ ಶಕದಾರಂಭದಲ್ಲಿ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ ‘ಹಬಶಿ’ ಗುಂಪಿನ ಯೋಧರು, ದಿಲ್ಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, 1459ರ ಹೊತ್ತಿಗೆ ದಿಲ್ಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕರ್ನಾಟಕದ ಬಹಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕದಲ್ಲ್ಯೇ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ಧಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು.
ಹೀಗೆ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡ ಪ್ರಜ್ಞೆಯನ್ನು ಅನ್ಯ ಪ್ರಭಾವ ಗಳಿಂದ ಮುಕ್ತ ಗೊಳಿಸಿ ನೋಡಲಾಗುವುದಿಲ್ಲ. ಜೈನ ರಾಮಾಯಣದ ಪ್ರಭಾವದಿಂದ ಕರ್ನಾಟಕದ ಮಣ್ಣಿನ ಕಲೆಯೆಂದೇ ಬಣ್ಣಿಸಲಾದ ಯಕ್ಷಗಾನವು ಪ್ರಭಾವಿತಗೊಂಡು ದುರಂತ ರಾವಣನನ್ನು ಸೃಜಿಸಿಕೊಂಡಿದೆ. ಬಾಗಲಕೋಟೆಯ ಇಬ್ರಾಹೀಂ ಸುತಾರರು ಕನ್ನಡದಲ್ಲಿ ಪವಿತ್ರ ಕುರ್ಆನಿನ ಸಂದೇಶವನ್ನು ಸರಳವಾಗಿ ಜನರಿಗೆ ರವಾನಿಸಿದ್ದಾರೆ. ಉತ್ತರದಿಂದ ಆಗಮಿಸಿದ ಬೌದ್ಧರ ಕೇಂದ್ರವಾಗಿದ್ದ ಕದರಿಯು ಇಂದು ಕನ್ನಡಿಗರ ಕೇಂದ್ರವಾಗಿ ಬೆಳೆದಿದೆ. ವ್ಯಾಸನ ಭಾರತವು ಪಂಪ ಭಾರತ, ಕುಮಾರವ್ಯಾಸನ ಭಾರತ, ಜೈಮಿನಿ ಭಾರತಗಳಾಗಿ ಕನ್ನಡದ ಮಣ್ಣಲ್ಲಿ ಆಳವಾಗಿ ಬೇರೂರಿದೆ. ಕರಾವಳಿ ಕರ್ನಾಟಕದಲ್ಲಿ ಕನ್ನಡ ಜೈಮಿನಿ ಭಾರತದ ನಾಲ್ಕಾರು ಪದ್ಯಗಳನ್ನು ಬಾಯಿ ಪಾಠ ಹೇಳದಿದ್ದರೆ ಅವನಿಗೆ ಯಾರೂ ಹೆಣ್ಣುಕೊಡುತ್ತಿರಲಿಲ್ಲ ಎಂಬುದು ಈ ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಹೀಗೆ ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಷ್ಟಿಸಿಕೊಂಡು ಕರ್ನಾಟಕ - ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ ಅನೇಕ ಭಾಷೆಗಳಿಗೆ ಇಲ್ಲದ ಈ ಗುಣವನ್ನು ಇವತ್ತು ಕರ್ನಾಟಕ ಹುಸಿ ರಾಷ್ಟ್ರೀಯತೆಗೆ ಬಲಿ ಬಿದ್ದು ವೇಗವಾಗಿ ಕಳೆದುಕೊಳ್ಳುತ್ತಿದೆ. ಬಹುಶ: ಪ್ರಬಲವಾದ ಪ್ರಾದೇಶಿಕ ಪಕ್ಷವೊಂದೇ ಮುಂದಿನ ದಿನಗಳಲ್ಲಿ ಕರ್ನಾಟಕ- ಕನ್ನಡವನ್ನು ಉಳಿಸಬಲ್ಲುದು.
ಕರ್ನಾಟಕ ಉಳಿವಿಗೆ ಪ್ರಬಲ ಪ್ರಾದೇಶಿಕ ಪಕ್ಷವೊಂದರ ಅಗತ್ಯ
ರಾಜಕೀಯ ಪಕ್ಷವೊಂದು ರಾಷ್ಟ್ರೀಯ ಪಕ್ಷವಾಗಲು ಹೊರಟು, ಅಲ್ಲಿ ವಿಫಲವಾದಾಗ, ತನ್ನ ಜಾತಿಯನ್ನೋ, ಕುಟುಂಬದವರನ್ನೋ, ಊರನ್ನೋ ಆಧರಿಸಿಕೊಂಡು ಸೀಮಿತವಾಗಿ ಬೆಳೆದರೆ, ಅದನ್ನು ಪ್ರಾದೇಶಿಕ ಪಕ್ಷ ಎಂದು ಕರೆಯಲಾಗದು. ಇಂಥ ಪಕ್ಷಗಳಿಗೆ ಪ್ರಾದೇಶಿಕ ನಿಷ್ಠವಾದ ವಸ್ತು ವಿಷಯಗಳನ್ನು ಆಧರಿಸಿ ಜನರ ಬಳಿ ಹೋಗುವ ಸೈದ್ಧಾಂತಿಕ ತಿಳಿವಳಿಕೆಯಾಗಲೀ, ಅದಕ್ಕೆ ಬೇಕಾದ ಪೂರ್ವ ತಯಾರಿಯಾಗಲೀ ಇರುವುದಿಲ್ಲ. ಪ್ರಾದೇಶಿಕ ಪಕ್ಷವೆಂದು ಘೋಷಿಸಿಕೊಂಡವರ ಪ್ರಣಾಳಿಕೆಯನ್ನು ಯಾವ ರಾಷ್ಟ್ರೀಯ ಪಕ್ಷಕ್ಕಾದರೂ ಸುಲಭವಾಗಿ ಅನ್ವಯಿಸಬಹುದಾದರೆ, ಅವುಗಳನ್ನು ಪ್ರಾದೇಶಿಕ ಪಕ್ಷಗಳ ಪ್ರಣಾಳಿಕೆ ಎಂದು ಯಾಕಾದರೂ ಕರೆಯಬೇಕು? ಹಿಂದುತ್ವದೊಡನೆ ಗುರುತಿಸಿಕೊಂಡೇ ರಾಜಕೀಯ ಮಾಡಿದ ಶ್ರೀ ಯಡಿಯೂರಪ್ಪನವರೂ ಕೆಜೆಪಿ ಕಟ್ಟಿದಾಗ ಅವರ ಪ್ರಣಾಳಿಕೆಯಲ್ಲಿ ಕರ್ನಾಟಕ ಎಂಬ ಪದ ಸೇರಿದ್ದು ಬಿಟ್ಟರೆ, ಉಳಿದಂತೆ ಯಾವ ಬದಲಾವಣೆಯೂ ಆಗಿರಲಿಲ್ಲ. ಹಾಗಾಗಿ ಅವರಿಗೆ ಮತ್ತೆ ಭಾಜಪದಲ್ಲಿ ಅವಕಾಶ ಸಿಕ್ಕಾಗ ಹಿಂದಿರುಗಲು ಯಾವುದೇ ಸಮಸ್ಯೆ ಆಗಲಿಲ್ಲ. ತಮ್ಮದು ಪ್ರಾದೇಶಿಕ ಪಕ್ಷವೆಂದು ಹೇಳುತ್ತಾ ಬಂದಿದ್ದ ಕುಮಾರಸ್ವಾಮಿಯವರಿಗೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಆಗಲಿಲ್ಲವಲ್ಲ!. ರಾಜಕೀಯ ಅವಕಾಶವಾದಿತನವನ್ನು ಪ್ರಾದೇಶಿಕ ಎಂದು ಕರೆದು ಜನರ ಭಾವನೆಗಳನ್ನು ಬಡಿದೆಬ್ಬಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ. ಅದನ್ನು ನಾವು ನಂಬಬಾರದು ಅಷ್ಟೇ.
ತಮಿಳುನಾಡಿನಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ. ಡಿಎಂಕೆ ಮತ್ತು ಎಐಎಡಿಎಂಕೆ. ಈ ಎರಡೂ ಪಕ್ಷಗಳಿಗೆ ಸುದೀರ್ಘವಾದ ಹಿನ್ನೆಲೆಯಿದೆ. ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದ ಸ್ವತಂತ್ರ ಪಕ್ಷವು ವಾಸ್ತವವಾಗಿ ‘ಸ್ವತಂತ್ರ ದ್ರಾವಿಡ ಸ್ಥಾನ’ದ ಬೇಡಿಕೆಯನ್ನು ಮುಂದಿಟ್ಟು, ಉತ್ತರ ಭಾರತದ ‘ಆರ್ಯ ಕೇಂದ್ರಿತ’ ಚಿಂತನಾ ಕ್ರಮವನ್ನು ದಿಟ್ಟವಾಗಿ ವಿರೋಧಿಸಿತ್ತು. ಇದರ ಜೊತೆಗೆ ಜಸ್ಟಿಸ್ ಪಕ್ಷವು ‘ತಮಿಳು ಹೆಮ್ಮೆ’ಯನ್ನು ಆಧರಿಸಿ, ಹಿಂದಿಯ ಹೇರಿಕೆಯ ಬಗ್ಗೆ ಹೋರಾಟ ನಡೆಸಿತ್ತು. ನಿಧಾನವಾಗಿ ಈ ಎರಡೂ ಪಕ್ಷಗಳೂ ಒಟ್ಟು ಸೇರಿ ಡಿಎಂಕೆ ಆಯಿತು. ಡಿಎಂಕೆಯು ಪ್ರತ್ಯೇಕ ದ್ರಾವಿಡ ಸ್ಥಾನದ ಬೇಡಿಕೆಯನ್ನು ಕೈಬಿಟ್ಟು, ಭಾರತದ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ‘ತಮಿಳುನಾಡಿಗೆ’ ಬೇಡಿಕೆ ಸಲ್ಲಿಸಿತು, ಅದರಲ್ಲಿ ಯಶಸ್ವಿಯಾಯಿತು. ಉತ್ತರ ಭಾರತದ ಸಾಂಸ್ಕೃತಿಕ ಆಕ್ರಮಣ, ಬ್ರಾಹ್ಮಣೀಕರಣ, ಹಿಂದಿ ಹೇರಿಕೆ ಮತ್ತು ‘ಆರ್ಯ ವಿರೋಧಿ’ ಧೋರಣೆಗಳು ತಮಿಳುನಾಡಿನ ಜನರನ್ನು ಪ್ರಾದೇಶಿಕ ಪಕ್ಷ ಡಿಎಂಕೆಯ ಕಡೆಗೆ ಭಾವನಾತ್ಮಕವಾಗಿ ಸೆಳೆದವು. ಇದು ಸ್ವಲ್ಪ ಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ನಿಜ, ಆದರೆ 1972ರಲ್ಲಿ ಎಂ.ಜಿ. ರಾಮಚಂದ್ರನ್ ಅವರು ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿದಾಗ ಚಳವಳಿ ದುರ್ಬಲವಾಯಿತು ಮಾತ್ರವಲ್ಲ, ಮುಂದೆ ಜಯಲಲಿತಾ ಅವರು ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಲ್ಲಿಗೆ ತಮಿಳರ ಪ್ರಾದೇಶಿಕ ಹೋರಾಟದ ಸ್ವರೂಪ ವಿರೂಪಗೊಂಡಿತು. ಮುಂದೆ ಡಿಎಂಕೆ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿತು. ತಮಿಳುನಾಡಿನ ಮಾದರಿಯಲ್ಲಿಯೇ 1982ರಲ್ಲಿ ‘ತೆಲುಗು ಸಾಂಸ್ಕೃತಿಕ ಹೆಮ್ಮೆ’ ಯನ್ನು ಆಧರಿಸಿ ತೆಲುಗು ದೇಶಂ ಅಸ್ತಿತ್ವಕ್ಕೆ ಬಂದು ಸ್ವಲ್ಪ ಕಾಲ ಸದ್ದು ಮಾಡಿತು, ಅದರೆ ಮುಂದೆ ಚಂದ್ರಬಾಬು ನಾಯ್ಡು ಕಾಲದಲ್ಲಿ ಅದು ಕೂಡಾ ರಾಷ್ಟ್ರಿಯ ಪಕ್ಷವಾದ ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಿತು. ಅಲ್ಲಿಗೆ ತೆಲುಗು ಹೆಮ್ಮೆಯ ಕತೆ ಕೊನೆಯಾಯಿತು.
ಪಂಜಾಬ್ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದ ಅಕಾಲಿ ದಳವು ಸ್ವಾತಂತ್ರ್ಯ ಪೂರ್ವದಲ್ಲಿ ‘ಸಿಖ್ ಧರ್ಮ’ ವನ್ನು ಆಧರಿಸಿ ‘ಪ್ರಾದೇಶಿಕ’ ಬೇಡಿಕೆಯನ್ನು ಮಂಡಿಸಿತ್ತು. ಪರಿಣಾಮವಾಗಿ 1966ರಲ್ಲಿ ‘ಪಂಜಾಬ್’ ರಚನೆಯಾಯಿತು. ಮುಂದೆ ಅಕಾಲಿ ದಳದಲ್ಲಿದ್ದ ಕೆಲವು ಉಗ್ರಗಾಮಿಗಳು ಪ್ರತ್ಯೇಕ ಖಾಲಿಸ್ತಾನಕ್ಕೆ ಬೇಡಿಕೆಯಿಟ್ಟರೂ ಅದು ವಿಫಲವಾಯಿತು. ‘ಪಂಜಾಬೀ ಹೆಮ್ಮೆ’ಯ ತೀವ್ರ ಪ್ರತಿಪಾದಕರಾದ ಅಕಾಲಿ ದಳವು ಕೂಡಾ ಮುಂದೆ ಬಿಜೆಪಿಯ ತೆಕ್ಕೆಗೆ ಸೇರಿಕೊಂಡು ಇದೀಗ ಮರೆಯಾಗುವ ಹಂತದಲ್ಲಿದೆ. ಮಹಾರಾಷ್ಟ್ರ ಮತ್ತು ಅಸ್ಸಾಮಿನಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಗೆ ಕಾರಣವಾದದ್ದು ‘ಮಣ್ಣಿನ ಮಕ್ಕಳ’ ಪರಿಕಲ್ಪನೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಸ್ಸಾಮನ್ನು ಪೂರ್ವ ಬಂಗಾಳದೊಂದಿಗೆ ಸೇರಿಸಲಾಗಿತ್ತು. ಕಾರಣ ಬಂಗಾಳಿಗಳು ಅಸ್ಸಾಮಿನ ಉದ್ದಗಲಗಳಲ್ಲಿ ಇರುವುದು ಸಹಜವಾಗಿತ್ತು. ಅಸ್ಸಾಮ್ನಿಂದ ಬಂಗಾಳಿಗಳನ್ನು ಹೊರಹಾಕುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಪ್ರಣಾಳಿಕೆ ಇರಿಸಿಕೊಂಡ ಅಸೋಂ ಗಣ ಪರಿಷತ್ಗೆ 1980ರ ದಶಕದಲ್ಲಿ ಗಣನೀಯವಾಗಿ ಬೆಂಬಲ ದೊರೆಯಿತು. ಮುಂದೆ ಈ ಪಕ್ಷವೂ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿತು. ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿಯಲ್ಲಿ ಗುಜರಾತಿ ಮತ್ತು ಕನ್ನಡಿಗರನ್ನು ಹೊರಹಾಕುವ ಉದ್ದೇಶದಿಂದ ಬೆಳೆದ ಮಹಾರಾಷ್ಟ್ರದ ಶಿವಸೇನೆಯು ಮರಾಠೀ ಹೆಮ್ಮೆಯನ್ನು ‘ಹಿಂದೂ ಹೆಮ್ಮೆ’ ಜೊತೆ ಸಮೀಕರಿಸಿಕೊಂಡು ಬೆಳೆಯಿತು ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಗೆಳೆತನ ಸಾಧಿಸಿಕೊಂಡಿತು. ಈಗ ಅದು ಕಾಂಗ್ರೆಸ್ನ ಜೊತೆಗಿದೆ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಇಂದು ಪ್ರಾದೇಶಿಕ ಪಕ್ಷಗಳು ತಲೆ ಎತ್ತುತ್ತಿದ್ದರೂ ಅವುಗಳಲ್ಲ್ ಹೆಚ್ಚಿನವು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾ ನಿರ್ನಾಮವಾಗುತ್ತಿವೆ. ಮೊದಲು ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಿತ್ತು. ಆ ಕೆಲಸವನ್ನು ಈಗ ಬಿಜೆಪಿ ಮುಂದುವರಿಸುತ್ತಿದೆ.
ಒಂದೆಡೆ ಪ್ರಾದೇಶಿಕತೆಯ ಮಾತು, ಇನ್ನೊಂದೆಡೆ ಬಿಜೆಪಿಯ ಆಕರ್ಷಣೆ- ಇವೆರಡರ ನಡುವಣ ಸ್ವಯಂ ವೈರುಧ್ಯಗಳ ನಡುವೆ ಕರ್ನಾಟಕದ ಜೆಡಿಎಸ್ ತನ್ನ ರಾಜಕೀಯ ನಡೆಸುತ್ತಿದೆ. ಆ ಪಕ್ಷಕ್ಕೆ ಪ್ರಾದೇಶಿಕ ಅಭಿವೃದ್ಧಿಯ ಬಗೆಗೆ ಯಾವುದೇ ಸ್ಪಷ್ಟ ತಿಳುವಳಿಕೆ ಇದ್ದಂತಿಲ್ಲ. ಬಡವರ ಅಭಿವೃದ್ಧಿ, ಕಡಿಮೆ ಬೆಲೆಗೆ ಅಕ್ಕಿ, ಎಲ್ಲರಿಗೂ ಮನೆ, ಬಡ ಮಕ್ಕಳಿಗೆ ಸೈಕಲ್, ಮೊದಲಾದುವುಗಳನ್ನು ಹೇಳುವುದಕ್ಕೆ ‘ಪ್ರಾದೇಶಿಕ’ ಪದ ಯಾಕೆ ಬೇಕು? ಅದು ಎಲ್ಲರಿಗೂ ಬೇಕಾದ್ದೇ ಅಲ್ವಾ?
ಕರ್ನಾಟಕವನ್ನು ಒಂದು ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡುವುದು ಸುಲಭವಲ್ಲ. ಏಕೆಂದರೆ ಕರ್ನಾಟಕವು ಇಂದು ಭೌಗೋಳಿಕವಾಗಿ ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ, ಹಳೆ ಮೈಸೂರು, ಕರಾವಳಿ ಕರ್ನಾಟಕಗಳೇ ಮೊದಲಾದ ಹಲವು ಪ್ರಾದೇಶಿಕ ವ್ಯತ್ಯಾಸಗಳನ್ನು ಒಳಗೊಂಡಿದೆ. ಕರ್ನಾಟಕದ ಜನಸಮುದಾಯವು, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ದಲಿತ ಮತ್ತಿತರ ಸಮುದಾಯಗಳ ನಡುವೆ ಆಳವಾಗಿ ಒಡೆದು ಹೋಗಿದೆ. ಇಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬಹಳ ವ್ಯತ್ಯಾಸಗಳಿವೆ. ದ್ವೈತ-ಅದ್ವೈತ-ವಿಶಿಷಾದ್ವೈತ, ಜೈನ, ಬೌದ್ಧ, ಲಿಂಗಾಯತ-ವೀರಶೈವ, ಇಸ್ಲಾಮ್, ಕ್ರಿಶ್ಚಿಯನ್ ಮೊದಲಾದುವುಗಳು ಇಲ್ಲಿವೆ. ಜೊತೆಗೆ, ಕರಾವಳಿಯಲ್ಲಿ ಜನ ಭೂತಾರಾಧನೆಯಲ್ಲಿ ತೊಡಗಿದರೆ, ಹಳೆ ಮೈಸೂರಿನಲ್ಲಿ ಮಾದೇಶ್ವರ-ಮಂಟೇಸ್ವಾಮಿಯವರಿಗೆ ಹರಿಕೆ ಒಪ್ಪಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಹುಲಿಗೆಮ್ಮ, ಎಲ್ಲಮ್ಮ, ಮೈಲಾರ ಮತ್ತಿತರ ಜನಪದ ದೈವಗಳಿದ್ದು, ಇವೆಲ್ಲವುಗಳನ್ನೂ ಒಂದು ವಿವರಣೆಯಿಂದ ಕಟ್ಟಿ ಹಾಕುವುದು ಸುಲಭ ಸಾಧ್ಯವಲ್ಲ. ಆರ್ಥಿಕವಾಗಿಯೂ ಕರ್ನಾಟದ ಅಭಿವೃದ್ಧಿ ಎಲ್ಲೆಡೆಯೂ ಸಮಾನವಾಗಿಲ್ಲ. ಕನ್ನಡದ ಜೊತೆಗೆ ತುಳು, ಕೊಡವ, ಉರ್ದು, ಕೊಂಕಣಿ, ತಮಿಳು, ತೆಲುಗು, ಮರಾಠಿ ಮೊದಲಾದ 70ಕ್ಕೂ ಹೆಚ್ಚು ಭಾಷೆಗಳೂ ಇಲ್ಲಿವೆ. ಇವೆಲ್ಲವನ್ನೂ ಪರಿಗಣಿಸುತ್ತಾ, ಸಮರ್ಪಕವಾದ ಚೌಕಟ್ಟಿನಲ್ಲಿ ಕರ್ನಾಟಕದ ‘ಪ್ರಾದೇಶಿಕ ಪರಿಕಲ್ಪನೆ’ಯನ್ನು ನಿರ್ವಚಿಸುವ ಹೊಸ ರಾಜಕೀಯ ನಾಯಕರನ್ನು ಕರ್ನಾಟಕ ಹುಡುಕಿಕೊಳ್ಳಬೇಕಾಗಿದೆ.
‘ಪ್ರಾದೇಶಿಕ ಪಕ್ಷ’ವೆಂಬ ಮಾತು ಅವಕಾಶವಾದಿ ರಾಜಕಾರಣದ ಭಾಗವಾಗದಂತೆ ಬೆಳೆದರೆ ಕರ್ನಾಟಕಕ್ಕೆ ಬಹಳ ಪ್ರಯೋಜನ ಇದೆ. ಅಥವಾ ಒಂದು ರಾಜಕೀಯ ಪಕ್ಷವು ಏಕಕಾಲಕ್ಕೆ ರಾಷ್ಟ್ರೀಯವೂ ಪ್ರಾದೇಶಿಕವೂ ಆಗುವುದು ಹೇಗೆ ಎಂಬುದರ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಾಗಿದೆ.
ಕರ್ನಾಟಕವನ್ನು ಒಂದು ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡುವುದು ಸುಲಭವಲ್ಲ. ಏಕೆಂದರೆ ಕರ್ನಾಟಕವು ಇಂದು ಭೌಗೋಳಿಕವಾಗಿ ಹೈದರಾಬಾದ್ ಕರ್ನಾಟಕ, ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ, ಹಳೆ ಮೈಸೂರು, ಕರಾವಳಿ ಕರ್ನಾಟಕಗಳೇ ಮೊದಲಾದ ಹಲವು ಪ್ರಾದೇಶಿಕ ವ್ಯತ್ಯಾಸಗಳನ್ನು ಒಳಗೊಂಡಿದೆ. ಕರ್ನಾಟಕದ ಜನಸಮುದಾಯವು, ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ದಲಿತ ಮತ್ತಿತರ ಸಮುದಾಯಗಳ ನಡುವೆ ಆಳವಾಗಿ ಒಡೆದು ಹೋಗಿದೆ. ಇಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬಹಳ ವ್ಯತ್ಯಾಸಗಳಿವೆ.