ಒಂದೇ ಜಾತಿ ಒಂದೇ ಮತ ಒಂದೇ ದೈವ ಮನುಜಗೆ
ಹಿರಿಯ ಪತ್ರಕರ್ತ, ಲೇಖಕ ಎನ್.ಎ.ಎಂ. ಇಸ್ಮಾಯೀಲ್ ಅವರು ಜನವಾಹಿನಿ, ಉದಯವಾಣಿ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕರಾಗಿದ್ದರು. ಪ್ರಜಾವಾಣಿಯ ಡಿಜಿಟಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಕಲರ್ಸ್ ಕನ್ನಡ ವಾಹಿನಿಯನ್ನು ನಡೆಸುವ ವಯಾಕಾಮ್೧೮ ಮೀಡಿಯಾ ಪ್ರೈ.ಲಿ.ನ ಸಹ ಉಪಾಧ್ಯಕ್ಷರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಅಧಿಕಾರಯುತವಾಗಿ ಬರೆಯಬಲ್ಲ, ಮಾತನಾಡಬಲ್ಲ ಕೆಲವೇ ಕೆಲವು ಸಂಪನ್ಮೂಲ ವ್ಯಕ್ತಿಗಳಲ್ಲಿ ಇಸ್ಮಾಯೀಲ್ ಒಬ್ಬರು. ವಿಜ್ಞಾನ, ಯಕ್ಷಗಾನ ಸಹಿತ ಹಲವು ಕ್ಷೇತ್ರಗಳಲ್ಲಿ ತೀವ್ರ ಆಸಕ್ತರು.
ವೈ ಚಾರಿಕ ಮತ್ತು ಬೌದ್ಧಿಕ ಕೇರಳದ ನಿರ್ಮಾತೃಗಳ ಪಟ್ಟಿಯಲ್ಲಿ ಸೇರುವ ಪ್ರಮುಖ ಹೆಸರು ಸಿ.ವಿ. ಕುಂಞಿರಾಮನ್ ಅವರದ್ದು. ಕವಿ, ನಾಟಕಕಾರ, ವಿಮರ್ಶಕ ಮತ್ತು ‘ಕೇರಳ ಕೌಮುದಿ’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಎಂಬಲ್ಲಿಗೆ ಇವರ ಪರಿಚಯ ಮುಗಿಯುವುದಿಲ್ಲ. 1871ರ ಫೆಬ್ರವರಿ 6ರಂದು ಜನಿಸಿದ ಕುಂಞಿರಾಮನ್ ಎಂಟನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿ ಅರಣ್ಯ ಇಲಾಖೆಯ ನೌಕರಿಗೆ ಸೇರಿದರು. ಅಲ್ಲಿರುವಾಗಲೇ ಶಿಕ್ಷಕನಾಗಲು ಬೇಕಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಕನಾಗಿ ವೃತ್ತಿಯಾರಂಭಿಸಿದರು. 1913ರಲ್ಲಿ ವಕೀಲಿಕೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅವರ ವೃತ್ತಿ ಜೀವನ ಮತ್ತೊಂದು ದಿಕ್ಕಿಗೆ ಹೊರಳಿತು. ಈ ನಡುವೆ ಅವರು ‘ಕೇರಳ ಕೌಮುದಿ’ಯನ್ನು ವಾರಪತ್ರಿಕೆಯಾಗಿ ಆರಂಭಿಸಿದರು. ವಕೀಲಿಕೆಯ ಜೊತೆಗೆ ಪತ್ರಕರ್ತನ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ ಅವರು 1920ರಲ್ಲಿ ‘ಕೇರಳ ಕೌಮುದಿ’ಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿ ಪೂರ್ಣಾವಧಿಗೆ ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡರು. ನಾರಾಯಣ ಗುರುಗಳ ಗೃಹಸ್ಥ ಶಿಷ್ಯರಲ್ಲಿ ಸಿ.ವಿ. ಕುಂಞಿರಾಮನ್ ಪ್ರಮುಖರು. ಅಸ್ಪಶ್ಯತೆಯ ವಿರುದ್ಧ ನಡೆದ ವೈಕಂ ಸತ್ಯಾಗ್ರಹದಲ್ಲಿಯೂ ಇವರದ್ದು ಬಹುಮುಖ್ಯ ಪಾತ್ರ. ಶಿವಗಿರಿ ಮಠದ ಸಾಮಾಜಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದ ಕುಂಞಿರಾಮನ್ ಶ್ರೀನಾರಾಯಣ ಧರ್ಮಪರಿಪಾಲನ ಯೋಗಂನ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ನಾರಾಯಣ ಗುರುಗಳ ಜೊತೆಗೆ ಸಿ.ವಿ. ಕುಂಞಿರಾಮನ್ ನಡೆಸಿದ ಸಂವಾದವು 1925 ಅಕ್ಟೋಬರ್ 9ರಂದು ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ ಈ ಸಂವಾದ ಪ್ರಕಟವಾಯಿತು. ತೊಂಬತ್ತೆಂಟು ವರ್ಷಗಳ ಹಿಂದೆ ಪ್ರಕಟವಾದ ಈ ಸಂದರ್ಶನದಲ್ಲಿ ಪ್ರತಿಪಾದಿತವಾಗಿರುವ ಸಂಗತಿಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿವೆ.
► ಸಿ.ವಿ. ಕುಂಞಿರಾಮನ್(ಸಿವಿಕೆ): ಒಂದೇ ಜಾತಿ ಒಂದೇ ಮತ, ಒಂದೇ ದೈವ ಮನುಜಗೆ ಎಂಬ ತಮ್ಮ ಧರ್ಮೋಪದೇಶವನ್ನು ಶಿಷ್ಯವೃಂದ ಈಗ ಒಂದು ಘೋಷಣೆಯಾಗಿ ಒಪ್ಪಿಕೊಂಡಿದೆ. ಆದರೆ ಇದನ್ನು ಹಲವರು ಆಕ್ಷೇಪಿಸಿದ್ದಾರೆ. ಹಾಗೆಯೇ ಇನ್ನು ಕೆಲವರು ಇದು ನಿಜಕ್ಕೂ ಸರಿಯಾದ ಧರ್ಮೋಪದೇಶವೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಮಹಾತ್ಮಾ ಗಾಂಧಿ ತಮ್ಮ ಆಶ್ರಮಕ್ಕೆ ಭೇಟಿ ನೀಡಿದಾಗಲೂ ಈ ಪರಿಕಲ್ಪನೆಯ ಬಗ್ಗೆ ತಮಗಿರುವ ಭಿನ್ನಾಭಿಪ್ರಾಯವನ್ನು ಪ್ರಸ್ತಾಪಿಸಿದ್ದರು. ಅಷ್ಟೇ ಅಲ್ಲ ತಮ್ಮ ಈ ಉಪದೇಶವನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಈ ವ್ಯಾಖ್ಯಾನಗಳನ್ನು ಕಂಡು ಆಶಾನ್ (ಕವಿ ಕುಮಾರನ್ ಆಶಾನ್) ‘ವ್ಯಾಖಾನಕಾರರಿಂದ ನನ್ನನ್ನು ರಕ್ಷಿಸಿ’ ಎಂದು ಅಲವತ್ತುಕೊಂಡರೇ ಹೊರತು ಸರಿಯಾದ ವ್ಯಾಖ್ಯಾನ ಯಾವುದೆಂದು ಅವರೂ ಹೇಳಲಿಲ್ಲ. ಸರಿಯಾದ ವ್ಯಾಖ್ಯಾನವೊಂದನ್ನು ಶ್ರೀಪಾದರೇ ನೀಡಿದರೆ ಜನಗಳು ಸಂಶಯವನ್ನು ಬಗೆಹರಿಸಿಕೊಂಡು ತೃಪ್ತರಾಗುತ್ತಾರಲ್ಲವೇ?
► ನಾರಾಯಣ ಗುರು: ಕುಂಞಿರಾಮನ್, ಇದಕ್ಕೆ ನಿಮ್ಮ ವ್ಯಾಖ್ಯಾನವೇನು?
► ಸಿವಿಕೆ: ‘‘ಮಾನವನಿಗೊಂದೇ ಜಾತಿ’’ ಎಂಬುದರ ವ್ಯಾಖ್ಯಾನ ಸರಳವಾಗಿದೆ ಎಂದು ನನಗನ್ನಿಸುತ್ತದೆ. ‘‘ಮನುಷ್ಯಾಣಾಂ ಮನುಷ್ಯತ್ವಂ ಜಾತಿರ್ ಗೋತ್ವಂ ಗವಾಂ ಯಥಾ’’ ಎಂದು ತಾವೇ ತಿಳಿಸಿಕೊಟ್ಟಿರುವಂತೆ ಮನುಷ್ಯತ್ವವಿರುವ ಜೀವಿ ಮನುಷ್ಯಜಾತಿಗೆ ಸೇರುತ್ತಾನೆ ಎಂಬುದರ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲದೇ ಇರುವುದರಿಂದ ಅದರ ಬಗ್ಗೆ ಆಕ್ಷೇಪವೂ ಇಲ್ಲ. ‘‘ಮನುಜನಿಗೊಂದೇ ದೈವ’’ ಎಂಬುದಕ್ಕೆ ದೇವರಲ್ಲಿ ನಂಬಿಕೆ ಇರುವವರು ಆಕ್ಷೇಪಿಸಲು ಸಾಧ್ಯವಿಲ್ಲ. ‘‘ಒಂದೇ ಮತ’’ ಎಂಬುದರ ಬಗ್ಗೆ ಎಲ್ಲರಿಗೂ ಸಂಶಯವಿದೆ. ‘ಹಲಮತಸಾರವೂ ಏಕವೆಂದರಿಯದ ಜಗದಲೊಂದಾನೆಯಲಿ ಅಂಧರಂತೆ ಹಲವಿದ ತರ್ಕಗಳನ್ನೊದರುತ ಪಾಮರರಲೆವರು’ ಎಂಬ ಶ್ರೀಪಾದರ ನುಡಿಯೂ ಸಂಶಯವನ್ನು ನಿವಾರಿಸದೇ ಇರುವುದರಿಂದ ‘‘ಒಂದೇ ಮತ’’ ಪರಿಕಲ್ಪನೆಗೊಂದು ವ್ಯಾಖ್ಯಾನದ ಅಗತ್ಯವಿದೆ.
► ಗುರು: ‘‘ಹಲಮತಸಾರವೂ ಏಕವು’’ ಎಂಬುದರ ಬಗ್ಗೆ ಯಾರಿಗಾದರೂ ಆಕ್ಷೇಪವಿದೆಯೇ?
► ಸಿವಿಕೆ: ಅದರ ಬಗ್ಗೆಯೂ ಆಕ್ಷೇಪವಿದೆಯೆಂದೇ ವಾದಿಸಬಹುದು. ಆಸ್ತಿಕ ಮತ ಮತ್ತು ನಾಸ್ತಿಕ ಮತಗಳ ಸಾರ ಒಂದೇ ಅಲ್ಲವಲ್ಲ.
► ಗುರು: ಮತ ಎಂಬ ಪದಕ್ಕೆ ಇರುವ ಹಲವು ಅರ್ಥಗಳು ಈ ಭ್ರಮೆಯನ್ನು ಹುಟ್ಟುಹಾಕುತ್ತದೆ. ನಾಸ್ತಿಕವಾದ ಎಂಬುದು ಕೆಲವು ವ್ಯಕ್ತಿಗಳು ಹೊರಗೆಡವಿರುವ ‘ಅಭಿಪ್ರಾಯಗಳು’ ಮಾತ್ರ. ಅದು ಯಾವತ್ತೂ ಒಂದು ಜನಸಮುದಾಯದ ಮತವಾಗಿರಲಿಲ್ಲ.
► ಸಿವಿಕೆ: ಬೌದ್ಧ ಮತವನ್ನು ಕೆಲವರು ನಾಸ್ತಿಕ ಮತವೆಂದು ಹೇಳುತ್ತಾರೆ.
► ಗುರು: ಅದು ಸರಿಯೇ? ನೀವೆಲ್ಲಾ ಬೌದ್ಧ ಮತ ಪಕ್ಷಪಾತಿಗಳಲ್ಲವೇ?
► ಸಿವಿಕೆ: ದೇವರನ್ನು ನಂಬವುದು ಎಂದರೆ ಯಾರನ್ನು ಅಥವಾ ಯಾವುದನ್ನು ನಂಬುವುದು ಎಂದರಿಯದವರು; ಅರ್ಥಾತ್ ತಮ್ಮ ನಂಬಿಕೆಗಳ ಕುರಿತ ಸೂಕ್ಷ್ಮಪ್ರಜ್ಞೆ ಇಲ್ಲದವರಷ್ಟೇ ಎತ್ತುವ ಆಕ್ಷೇಪವಿದು. ಬೌದ್ಧ ಮತದ ಬಗೆಗಿನ ಮಾತಿಗೂ ಇದು ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
► ಗುರು: ಬೌದ್ಧ ಮತವು ಒಂದು ನಾಸ್ತಿಕ ಮತವಾಗಿರಲು ಸಾಧ್ಯವಿಲ್ಲ. ಶುದ್ಧ ನಾಸ್ತಿಕ ಮತವೊಂದರಲ್ಲಿ ಇಷ್ಟು ದೊಡ್ಡ ಜನಸಮುದಾಯ ಇಷ್ಟು ಕಾಲವೂ ಉಳಿಯುವುದು ಸಂಭವನೀಯ ಸಂಗತಿಯಲ್ಲ. ನಿಮ್ಮ ಈಗಿನ ನಂಬಿಕೆಯನ್ನು ವಿಶ್ಲೇಷಿಸಿ ನೀವೀಗ ನಾಸ್ತಿಕನೋ ಅಥವಾ ಆಸ್ತಿಕನೋ ಎಂಬ ತೀರ್ಮಾನಕ್ಕೆ ಬಂದಿದ್ದೀರಾ?
►ಸಿವಿಕೆ: ತೀರ್ಮಾನಕ್ಕೆ ಬಂದಿದ್ದೇನೆ. ಇಲ್ಲಿಯ ತನಕವೂ ನಾನು ದೇವರ ಅಸ್ತಿತ್ವದಲ್ಲಿ ದೃಢನಂಬಿಕೆ ಇರುವ ಆಸ್ತಿಕ.
► ಗುರು: ನಾಸ್ತಿಕವಾದವನ್ನು ಅನುಸರಿಸುತ್ತೀರಿ ಎಂಬ ಮಾತು ಕೇಳಿದ್ದೇನೆ.
►ಸಿವಿಕೆ: ನನ್ನ ಬಗ್ಗೆ ಹಾಗೆ ಕೇಳಿಬಂದಿದ್ದಲ್ಲಿ ಆಶ್ಚರ್ಯವಿಲ್ಲ. ನಾಸ್ತಿಕರನ್ನು ಖಂಡಿಸಲು ಯತ್ನಿಸುವ ಆಸ್ತಿಕರ ಬಳಿಯೂ ಆಸ್ತಿಕರನ್ನು ಟೀಕಿಸಲು ಮುಂದಾಗುವ ನಾಸ್ತಿಕರ ಬಳಿಯೂ ನಾನು ಸಾಕಷ್ಟು ವಾದ ಮಾಡಿದ್ದೇನೆ.
► ಗುರು: ವಾದಕ್ಕಾಗಿ ವಾದಬೇಡ. ಸಂಶಯ ನಿವಾರಣೆಗೂ, ತಾತ್ವಿಕತೆಯ ಸ್ಪಷ್ಟತೆಗೂ ಬೇಕಾಗಿ ವಾಗ್ವಾದಗಳನ್ನು ನಡೆಸಬೇಕು. ಆಸ್ತಿಕ ಮತಗಳಿಗೆ ಬಾಹ್ಯ ಸ್ವರೂಪದ ಹೊರತಾಗಿ ಆಂತರಿಕ ಸ್ವರೂಪದಲ್ಲೇನಾದರೂ ವ್ಯತ್ಯಾಸವಿದೆಯೇ?
► ಸಿವಿಕೆ: ಕೆಲ ಸಂಗತಿಗಳ ಬಗ್ಗೆ ವಿಚಾರ ಮಾಡಿದಾಗ ಆಂತರಿಕ ಸ್ವರೂಪದಲ್ಲೂ ವ್ಯತ್ಯಾಸಗಳಿವೆ ಎಂದೇ ಹೇಳಬೇಕಾಗುತ್ತದೆ.
► ಗುರು: ಆ ವ್ಯತ್ಯಾಸಗಳು ಯಾವುವು?
► ಸಿವಿಕೆ: ಈ ಪ್ರಪಂಚವನ್ನು ಒಬ್ಬ ಸೃಷ್ಟಿಕರ್ತ ಸೃಷ್ಟಿಸಿದ್ದಾನೆಂದು ಕೆಲವು ಮತಗಳು ಹೇಳಿದರೆ ಇನ್ನು ಕೆಲವು ಮತಗಳು ವಿಕಾಸವಾದಿಗಳು ಹೇಳುವಂತೆ ಬ್ರಹ್ಮಾಂಡದಿಂದ ಆಕಾಶ, ವಾಯು, ಅಗ್ನಿ ಇತ್ಯಾದಿ ಪಂಚಭೂತಗಳುಂಟಾದವು. ಅವುಗಳ ಸಂಶ್ಲೇಷಣಾ ಪ್ರಕ್ರಿಯೆಯಲ್ಲಿ ಕಾಲಾನಂತರಲ್ಲಿ ಜಗತ್ತು ಸೃಷ್ಟಿಯಾಯಿತು ಎನ್ನುತ್ತವೆ. ಹಾಗೆಯೇ ಸೃಷ್ಟಿಕರ್ತನು ಶೂನ್ಯದಿಂದ ಆತ್ಮವನ್ನು ಸೃಷ್ಟಿಸಿದನೆಂದೂ ಅದಲ್ಲ ಬ್ರಹ್ಮವೇ ಆತ್ಮವೆಂದೂ ಹೇಳುವ ಮತಗಳು, ಪುನರ್ಜನ್ಮ ಇದೆಯೆಂದೂ ಇಲ್ಲವೆಂದೂ ಹೇಳುವ ಮತಗಳು, ಕರ್ಮದ ಕುರಿತ ನಂಬಿಕೆ ಸರಿಯೆಂದೂ ಸರಿಯಲ್ಲವೆಂದೂ ಹೇಳುವ ಮತಗಳನ್ನೆಲ್ಲಾ ನೋಡಿದಾಗ ಈ ಮತಗಳ ಆಂತರಿಕ ಸ್ವರೂಪದಲ್ಲಿಯೂ ಭಿನ್ನತೆ ಇದೆ ಎಂದೇ ಹೇಳಬೇಕಾಗುತ್ತದೆ.
► ಗುರು: ತತ್ವಗಳು ಭಿನ್ನವಾಗಿರಬಹುದು. ಆದರೆ ಈ ಮತಗಳ ಉದ್ದೇಶಗಳಲ್ಲಿ ಭಿನ್ನತೆ ಇದೆಯೇ?
► ಸಿವಿಕೆ: ಅದರಲ್ಲೂ ಭಿನ್ನತೆ ಇದೆ ಎನ್ನಬಹುದು. ಕೆಲ ಮತಗಳು ಸ್ವರ್ಗ ಪ್ರಾಪ್ತಿಯನ್ನಷ್ಟೇ ಆದರ್ಶವಾಗಿಟ್ಟುಕೊಂಡಿವೆ. ಇನ್ನು ಕೆಲವು ಧರ್ಮಗಳು ಸ್ವರ್ಗದಾಚೆಗಿನ ಮೋಕ್ಷಪ್ರಾಪ್ತಿಯನ್ನು ಗುರಿಯಾಗಿಟ್ಟುಕೊಂಡಿವೆ.
► ಗುರು: ಸ್ವರ್ಗಾನುಭೂತಿ ಪಡೆದವರಿಗೆ ಅದರಾಚೆಗಿನ ಮತ್ತೊಂದು ಸ್ಥಿತಿಯ ಬಗೆಗಿನ ಅರಿವುಂಟಾಗುವುದು ಸಹಜವಲ್ಲವೇ?
► ಸಿವಿಕೆ: ಅದು ಉಂಟಾಗಲೇಬೇಕಲ್ಲವೇ.
► ಗುರು: ಹೌದು, ಖಂಡಿತವಾಗಿಯೂ ಆ ಅರಿವು ಮೂಡುತ್ತದೆ. ಮೋಕ್ಷವನ್ನು ಪ್ರತಿಪಾದಿಸುವ ಮತಗಳು ಸ್ವರ್ಗವನ್ನು ನಿರಾಕರಿಸುವುದಿಲ್ಲವಲ್ಲ. ಭೂಲೋಕ, ಭುವರ್ಲೋಕ ಮೊದಲಾದ ಊರ್ಧ್ವಗತಿಯಲ್ಲಿರುವ ಏಳು ಲೋಕಗಳೂ ಆನಂತರ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯಗಳೆಲ್ಲವೂ ಮೋಕ್ಷದೆಡೆಗಿನ ಸೋಪಾನಗಳೇ ತಾನೆ. ಇದರಲ್ಲಿ ಯಾವುದೋ ಒಂದು ಮೆಟ್ಟಿಲಿನ ತನಕ ತಲುಪಿದವನಿಗೆ ಮುಂದಿನ ಮೆಟ್ಟಿಲೇರಬೇಕು ಎಂದು ಅನ್ನಿಸದೇ ಇರಲು ಸಾಧ್ಯವೇ?
► ಸಿವಿಕೆ: ಈ ಎಲ್ಲಾ ಸೋಪಾನಗಳನ್ನು ಎಲ್ಲಾ ಮತಗಳವರೂ ಒಪ್ಪುವುದಿಲ್ಲವಲ್ಲ.
► ಗುರು: ಅದರಿಂದ ತೊಂದರೆಯೇನು? ಮೇಲ್ಮುಖ ಚಲನೆಯಲ್ಲದೆ ಕೆಳಮುಖ ಚಲನೆಯನ್ನು ಯಾವುದಾದರೂ ಮತ ಬೋಧಿಸುತ್ತಿದೆಯೇ?
► ಸಿವಿಕೆ: ಇಲ್ಲ...
► ಗುರು: ಎಲ್ಲಾ ಮತಗಳ ಉದ್ದೇಶವೂ ಒಂದೇ. ನದಿಗಳು ಸಮುದ್ರ ಸೇರಿದ ಮೇಲೆ ತೀರ ಮತ್ತು ನಡುಕಡಲೆಂಬ ವ್ಯತ್ಯಾಸವೇ ಅಳಿಯುವುದಿಲ್ಲವೇ? ಜೀವಾತ್ಮಗಳಿಗೆ ಊರ್ಧ್ವಮುಖತ್ವವನ್ನು ನೀಡುವ ಅಧಿಕಾರವಷ್ಟೇ ಮತಗಳಿಗೆ ಇರುವುದು. ಅಷ್ಟು ದೊರೆತ ಮೇಲೆ ಸೂಕ್ಷ್ಮವನ್ನು ಅವರವರೇ ಹುಡುಕಿ ಕಂಡುಕೊಳ್ಳುತ್ತಾರೆ. ಸೂಕ್ಷ್ಮವನ್ನು ಹುಡುಕಲು ಬೇಕಿರುವ ಮಾರ್ಗದರ್ಶಿಗಳಾಗಿ ಮತಗಳಿರುತ್ತವೆ. ಸೂಕ್ಷ್ಮವನ್ನು ಅರಿತವನಿಗೆ ಮತ ಪ್ರಮಾಣವಲ್ಲ. ಅವನೇ ಮತಕ್ಕೆ ಪ್ರಮಾಣ. ನಿರ್ವಾಣ ಮಾರ್ಗವನ್ನು ಬೋಧಿಸುವ ಮೊದಲು ಬುದ್ಧನೇನು ಬೌದ್ಧ ಮತಾಧ್ಯಯನ ಮಾಡಿದ್ದನೇ? ಬುದ್ಧ ನಿರ್ವಾಣ ಮಾರ್ಗವನ್ನು ತಾನೇ ಹುಡುಕಿ ಕಂಡುಕೊಂಡ ಮೇಲೆ ಅದನ್ನು ಬೋಧಿಸಿದ. ಅದುವೇ ಮುಂದೆ ಬೌದ್ಧ ಮತವಾಯಿತು. ಬೌದ್ಧ ಮತದಿಂದ ಬುದ್ಧನಿಗೇನಾದರೂ ಪ್ರಯೋಜನವಿದೆಯೇ?
►ಸಿವಿಕೆ: ಇಲ್ಲ
► ಗುರು: ಕ್ರೈಸ್ತ ಮತದಿಂದ ಕ್ರಿಸ್ತನಿಗೆ ಯಾವ ಪ್ರಯೋಜನವೂ ಇಲ್ಲ. ಇದೇ ಮಾತನ್ನು ಉಳಿದ ಮತಗಳ ಬಗ್ಗೆಯೂ ಹೇಳಬಹುದು. ಆದರೆ ಬೌದ್ಧ ಮತದಿಂದ ಬೌದ್ಧ ಮತಾನುಯಾಯಿಗಳಿಗೆ ಹಾಗೇಯೇ ಕ್ರೈಸ್ತ ಮತದಿಂದ ಕ್ರೈಸ್ತ ಮತಾನುಯಾಯಿಗಳಿಗೆ ಪ್ರಯೋಜನವಿದೆ. ಹಾಗೆಯೇ ಎಲ್ಲಾ ಮತಗಳೂ ಆಯಾ ಮತಾನುಯಾಯಿಗಳಿಗೆ ಪ್ರಯೋಜನಕರವೇ ಆಗಿವೆ.
► ಸಿವಿಕೆ: ಆದರೆ ಹಿಂದೂಗಳು ಹೀಗೆ ಹೇಳುವುದಿಲ್ಲವಲ್ಲ.
► ಗುರು: ಅವರು ಮತ್ತೇನು ಹೇಳುತ್ತಾರೆ?
► ಸಿವಿಕೆ: ಅವರಿಗೆ ವೇದವೇ ಪ್ರಮಾಣ. ವೇದವು ಅಪೌರುಷೇಯ, ಅದು ಬ್ರಹ್ಮಮುಖದಿಂದಲೇ ಬಂದಿದೆ; ಅದರಿಂದಾಗಿ ವೇದಕ್ಕೂ ಮಿಗಿಲಾದ ಪ್ರಮಾಣ ಪುರುಷನೊಬ್ಬ ಇರಬಾರದು ಎಂದವರು ವಾದಿಸುತ್ತಾರೆ.
► ಗುರು: ಕ್ರೈಸ್ತರು ಅವರ ಹತ್ತು ಆದೇಶಗಳ ಕುರಿತು ಏನು ಹೇಳುತ್ತಾರೆ. ಅದೂ ದೇವರಿಂದಲೇ ಬಂದದ್ದೆಂದು ತಾನೇ?
► ಸಿವಿಕೆ: ಹೌದು.
► ಗುರು: ಯಹೋವಾಗೆ ಎಬ್ರಾಯ (ಹೀಬ್ರೂ) ಭಾಷೆ ಮತ್ತು ಬ್ರಹ್ಮನಿಗೆ ಪ್ರಾಚೀನ ಸಂಸ್ಕೃತ ಭಾಷೆಯಷ್ಟೇ ಗೊತ್ತಿದ್ದದ್ದೇ? ವೇದ ಅಪೌರುಷೇಯ ಎಂದರೆ ಎಲ್ಲಾ ವೇದಮಂತ್ರಗಳ ಕರ್ತೃಗಳು ಯಾರೆಂದು ನಮಗೆ ತಿಳಿದಿಲ್ಲ ಎಂದಷ್ಟೇ ಅರ್ಥ. ಅಥವಾ ವೇದಪ್ರತಿಪಾದಿತವಾದ ತತ್ವಗಳು ಅಪೌರುಷೇಯ ಎಂದೂ ಅರ್ಥ ಮಾಡಿಕೊಳ್ಳಬಹುದು.
►ಸಿವಿಕೆ: ವೇದ ಪ್ರಾಮಾಣ್ಯವನ್ನು ಬುದ್ಧ ಮುನಿ ನಿರಾಕರಿಸಿದ್ದಾನೆ. ಮುಂಡಕೋಪನಿಷತ್ತು ಕೂಡಾ ವೇದವನ್ನು ಅಪ್ರಧಾನಶಾಸ್ತ್ರವೆಂದು ಹೇಳುತ್ತದೆ.
► ಗುರು: ಯಾವುದನ್ನೂ ಇದು ಮಾತ್ರ ಸರಿ ಎಂಬಂಥ ಪ್ರಮಾಣವಾಗಿಸಕೂಡದು. ಎಲ್ಲವನ್ನೂ ಯಾವುದು ಸರಿ ಎಂಬುದನ್ನು ಕಂಡುಕೊಳ್ಳಲು ಬೇಕಿರುವ ಉಪಕರಣವಾಗಿಸಿಕೊಳ್ಳಬೇಕು. ಆದರೆ ಈ ಬೋಧನೆಯು ಅನ್ವೇಷಣೆಯ ಕುತೂಹಲ ಮತ್ತು ಜ್ಞಾನದದಾಹ ಇರುವವರಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಜನರಿಗೆ ಅವರು ನಂಬುವ ಮತಕ್ಕೆ ಆಧಾರವಾಗಿರುವ ಗ್ರಂಥವೇ ಪ್ರಮಾಣವಾಗಿರಲಿ.
► ಸಿವಿಕೆ: ಹಾಗೆ ಪ್ರಮಾಣವೆಂದು ಪರಿಗಣಿಸಬೇಕಾದ ಗ್ರಂಥಗಳಲ್ಲಿ ಧರ್ಮ ವಿರೋಧಿ ಯಾದ ಬೋಧನೆಗಳಿದ್ದರೆ ಸಾಮಾನ್ಯರು ಅದನ್ನೂ ನಂಬಿಬಿಡುವರಲ್ಲವೇ?
► ಗುರು: ಅಂಥದ್ದು ನಡೆಯದಂತೆ ಆಯಾ ಮತಗಳ ಗುರುಗಳು ನೋಡಿಕೊಳ್ಳಬೇಕು. ದಯಾನಂದ ಸರಸ್ವತಿಯವರು ವೇದ ಪ್ರಮಾಣವೆಂದು ಹೇಳಿದರೂ ಅದರಲ್ಲಿರುವ ಅಸಂಗತಗಳನ್ನು ಒಪ್ಪುವುದಿಲ್ಲವಲ್ಲ. ಎಲ್ಲಾ ಮತಾಚಾರ್ಯರೂ ಇದನ್ನೇ ಮಾಡಬೇಕು.
► ಸಿವಿಕೆ: ಯಾವುದು ಒಪ್ಪತಕ್ಕದ್ದು, ಯಾವುದು ನಿರಾಕರಿಸಬೇಕಾದದ್ದು ಎಂಬ ವಿವೇಕ ದೊಂದಿಗೆ ಮತ ಗ್ರಂಥಗಳನ್ನು ಓದಬೇಕು ಎಂದು ತಮ್ಮ ಮಾತನ್ನು ಅರ್ಥೈಸಬಹುದೇ? ಅದು ಸರಿಯಾಗಿರಬಹುದೇ?
► ಗುರು: ನಮ್ಮ ಬೋಧನೆ ಅದುವೇ ಆಗಿದೆ. ಆಲುವಾದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಸಂದರ್ಭದಲ್ಲೂ ನಾವಿದನ್ನೇ ಮಂಡಿಸಿದ್ದೆವು. ದೇಶಗಳ ನಡುವಣ ವೈಮನಸ್ಸು ಹಾಗೆಯೇ ಸಮುದಾಯಗಳ ನಡುವಣ ಮೇಲಾಟಗಳು ಒಬ್ಬರು ಮತ್ತೊಬ್ಬರನ್ನು ಸೋಲಿಸುವವಲ್ಲಿ ಮುಗಿಯಬಹುದು. ಮತಗಳ ನಡುವಣ ಯುದ್ಧಕ್ಕೆ ಅಂತ್ಯವೇ ಇಲ್ಲದಿರುವುದರಿಂದ ಒಂದು ಮತ್ತೊಂದನ್ನು ಸೋಲಿಸುವುದು ಅಸಾಧ್ಯ. ಮತಗಳ ನಡುವಣ ಯುದ್ಧವನ್ನು ಕೊನೆಗೊಳಿಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಎಲ್ಲಾ ಮತಗಳನ್ನೂ ಎಲ್ಲರೂ ಸಮಚಿತ್ತದಿಂದ ಅಧ್ಯಯನ ಮಾಡಬೇಕು. ಆಗ ಅವು ಪ್ರತಿಪಾದಿಸುವ ಪ್ರಧಾನ ತತ್ವಗಳಲ್ಲಿ ಪರಸ್ಪರ ದೊಡ್ಡ ಭಿನ್ನತೆಯೇನೂ ಇಲ್ಲವೆಂಬುದು ಬೆಳಕಿಗೆ ಬರುತ್ತದೆ. ಹಾಗೇ ಬೆಳಕಿಗೆ ಬಂದ ಮತವೇ ನಾವು ಬೋಧಿಸುವ ‘ಏಕಮತ’
► ಸಿವಿಕೆ: ಇನ್ನೂ ಒಂದು ಅನುಮಾನವಿದೆ.
► ಗುರು: ಅದೇನು?
► ಸಿವಿಕೆ: ಸಮಾಜದಲ್ಲಿ ಮತಾಂತರದ ಬಗ್ಗೆ ಒಲವು ಹೆಚ್ಚಾಗುತ್ತಿದೆ. ಕೆಲವರು ಬೌದ್ಧ ಮತ ಒಳ್ಳೆಯದೆನ್ನುತ್ತಾರೆ. ಇನ್ನು ಕೆಲವರಿಗೆ ಕ್ರೈಸ್ತ ಮತ ಉತ್ತಮವೆನಿಸುತ್ತಿದೆ. ಇನ್ನೂ ಒಂದಷ್ಟು ಮಂದಿ ಆರ್ಯಸಮಾಜವೇ ಸರಿ ಎನ್ನುತ್ತಿದ್ದಾರೆ. ಹಾಗೆಯೇ ಮತಾಂತರದ ಅಗತ್ಯವೇ ಇಲ್ಲ ಎನ್ನುವವರೂ ಇದ್ದಾರೆ?
► ಗುರು: ಪ್ರತೀ ಮತಕ್ಕೂ ಬಾಹ್ಯ ಮತ್ತು ಆಂತರಿಕ ಎಂದು ಗುರುತಿಸಬಹುದಾದ ಎರಡು ಆಯಾಮಗಳಿವೆ. ಇದರಲ್ಲಿ ಯಾವುದರತ್ತ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಮತದ ಬಾಹ್ಯ ಆಯಾಮದತ್ತ ಒಲವು ತೋರುತ್ತಿದ್ದರೆ ಅದನ್ನು ಮತಾಂತರ ಅಥವಾ ಮತ ಪರಿವರ್ತನೆ ಎನ್ನಲು ಸಾಧ್ಯವಿಲ್ಲ. ಅದು ಸಾಮಾಜಿಕ ಪರಿವರ್ತನೆಯ ಒಲವಷ್ಟೇ. ಮತದ ಆಂತರಿಕ ಆಯಾಮದ ಕಡೆಗಿರುವ ಒಲವಿನಿಂದ ತನ್ನ ಮತವನ್ನು ಬದಲಾಯಿಸಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯೊಳಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ವಿಚಾರದ ಬೆಳವಣಿಗೆಯೊಂದಿಗೆ ಸ್ವಾಭಾವಿಕವಾಗಿ ನಡೆಯುವ ಪರಿವರ್ತನೆಯೇ ಹೊರತು ಮತ್ಯಾರೋ ತರುವ ಬದಲಾವಣೆಯಲ್ಲ. ಹಿಂದೂ ಮತ, ಕ್ರೈಸ್ತ ಮತ ಇತ್ಯಾದಿ ಹೆಸರುಗಳಲ್ಲಿ ಗುರುತಿಸಲಾಗುವ ಮತಗಳನ್ನು ಪಾಲಿಸುವವರು ಆಯಾ ಮತಗಳಲ್ಲಿ ನಂಬಿಕೆ ಕಳೆದುಕೊಂಡರೆ ಅವರು ತಮ್ಮ ಮತವನ್ನು ಬದಲಾಯಿಸಿಕೊಳ್ಳುವುದೇ ಸರಿಯಾದುದು. ನಂಬಿಕೆ ಇಲ್ಲದ ಮತದಲ್ಲೇ ಇರುವುದು ಕಪಟತನವಾಗುತ್ತದೆ. ಇಂಥವರು ಮತಾಂತರಗೊಳ್ಳುವುದು ಅವರಿಗೂ ಅವರು ನಂಬಿಕೆ ಕಳೆದುಕೊಂಡ ಮತಕ್ಕೂ ಒಳ್ಳೆಯದು. ಯಾವ ಮತದೊಳಗೂ ಅದನ್ನು ನಂಬದವರ ಸಂಖ್ಯೆ ಹೆಚ್ಚುತ್ತಾಹೋಗುವುದು ಶ್ರೇಯಸ್ಕರವಲ್ಲ.
► ಸಿವಿಕೆ: ಹಿಂದೂ ಮತದಲ್ಲೇ ಉಳಿಯಬೇಕು ಎಂದು ಹೇಳುವವರೂ ಈಗಿನ ಹಿಂದೂ ಮತ ಒಳ್ಳೆಯದಲ್ಲ ಎಂದೂ ಹೇಳುತ್ತಾರೆ.
► ಗುರು: ಅಂದರೆ ಅವರು ಹಿಂದೂಗಳಿಗಷ್ಟೇ ಅಲ್ಲ ಹಿಂದೂ ಮತಕ್ಕೂ ಬದಲಾವಣೆ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಹಿಂದೂ ಮತವೆಂಬ ಒಂದು ಮತವೇ ಇಲ್ಲವಲ್ಲ. ಹಿಂದೂಸ್ಥಾನದ ನಿವಾಸಿಗಳನ್ನು ಹಿಂದೂಗಳೆಂದು ವಿದೇಶಿಯರು ಗುರುತಿಸುತ್ತಾ ಬಂದರು. ಹಿಂದೂಸ್ಥಾನ ನಿವಾಸಿಗಳದ್ದು ಹಿಂದೂ ಮತವೆಂಬ ಅರ್ಥ ಅದಕ್ಕಿದ್ದರೆ ಇಲ್ಲಿ ವಾಸಿಸುವ ಕ್ರೈಸ್ತರು ಮತ್ತು ಮಹಮದೀಯರದ್ದೂ ಹಿಂದೂ ಮತವೇ ಆಗಿಬಿಡುತ್ತದೆ. ಹಾಗೆ ಯಾರೂ ಹೇಳುತ್ತಿಲ್ಲ; ಹಾಗೆಂದು ಒಪ್ಪುವುದೂ ಇಲ್ಲ. ಹಿಂದೂಸ್ಥಾನಕ್ಕೆ ಹೊರಗಿನಿಂದ ಬಂದ ಕ್ರೈಸ್ತ, ಮಹಮದೀಯ ಮತಗಳನ್ನು ಹೊರತು ಪಡಿಸಿ ಹಿಂದೂಸ್ಥಾನದಲ್ಲೇ ಹುಟ್ಟಿದ ಮತಗಳನ್ನೆಲ್ಲಾ ಒಟ್ಟಾಗಿಟ್ಟುಕೊಂಡು ಅದನ್ನು ಹಿಂದೂ ಮತವೆಂದು ಗುರುತಿಸಲಾಗುತ್ತಿದೆ. ಆದ್ದರಿಂದ ಬೌದ್ಧ ಮತ, ಜೈನ ಮತ ಮುಂತಾದುವುಗಳನ್ನೂ ಹಿಂದೂ ಮತವೆಂದೇ ಹಲವರು ಹೇಳುತ್ತಾರೆ. ವೈದಿಕ ಮತ, ಸಾಂಖ್ಯ ಮತ, ವೈಶೇಷಿಕ ಮತ, ಮೀಮಾಂಸಕ ಮತ, ಶೈವ ಮತ, ಶಾಕ್ತೇಯ ಮತ, ವೈಷ್ಣವ ಮತ ಹೀಗೆ ಪರಸ್ಪರ ಭಿನ್ನವೂ ವಿಶಿಷ್ಟವೂ ಆದ ಅನೇಕ ಮತಗಳಿಗೆ ಸಾಮಾನ್ಯೀಕೃತವಾದ ಹೆಸರಿಟ್ಟು ‘ಹಿಂದೂ ಮತ’ ಎಂದು ಕರೆಯುವುದು ತರ್ಕಹೀನವಲ್ಲ ಎಂದಾದರೆ, ಮನುಷ್ಯಜಾತಿಯ ಮೋಕ್ಷಪ್ರಾಪ್ತಿಗೆ ಉಪಯುಕ್ತವಾದ, ದೇಶಕಾಲಗಳಿಗೆ ಅನುಗುಣವಾಗಿ ಒಬ್ಬೊಬ್ಬ ಆಚಾರ್ಯರೂ ಬೋಧಿಸಿದ ಎಲ್ಲಾ ಮತಗಳನ್ನೂ ಅದರ ಏಕೋದ್ದೇಶದ ಮೂಲಕ ಗುರುತಿಸುವ ‘ಏಕಮತ’ ಎಂಬ ಹೆಸರಿನಿಂದ ಕರೆಯುವುದು ಹೇಗೆ ತರ್ಕಹೀನವಾಗುತ್ತದೆ?
► ಸಿವಿಕೆ: ಈ ವಿಷಯದಲ್ಲಿ ತಪ್ಪು ಕಲ್ಪನೆಗಳಿಂದ ಉಂಟಾಗಿರುವ ಗೊಂದಲಗಳು ಹಿಂದೂಗಳ ನಡುವೆಯಷ್ಟೇ ಅಲ್ಲ, ಹಿಂದೂಯೇತರ ಮತಗಳಲ್ಲೂ ಇವೆ. ಕ್ರಿಸ್ತನಿಗೂ ಮುಂಚಿನ ಮೋಸೆಸ್ ಮತ್ತು ಸೊಲೋಮನ್ನ ಹಾಗೆಯೇ ಕ್ರಿಸ್ತಾನಂತರದ ಸಂತ ಪಾಲ್ನ ಬೋಧನೆಗಳನ್ನೂ ‘ಕ್ರಿಸ್ತ ಮತ’ವೆಂಬ ಒಂದು ಹೆಸರಿನೊಳಕ್ಕೆ ತುರುಕುವ ಕೆಲಸವನ್ನು ಕ್ರೈಸ್ತರೂ ಮಾಡಿದ್ದಾರೆ.
► ಗುರು: ಹೆಚ್ಚು-ಕಡಿಮೆ ಎಲ್ಲಾ ಮತಗಳವರೂ ಅದನ್ನೇ ಮಾಡಿದ್ದಾರೆ. ಹಲವು ಆಚಾರ್ಯರ ಬೋಧನೆಗಳನ್ನು ಒಬ್ಬ ಮತಾಚಾರ್ಯರ ಹೆಸರಿಗೆ ಅಂಟಿಸಿ ಅದನ್ನೊಂದು ಮತವೆಂದು ಕರೆಯಬಹುದಾದರೆ ಹಲವು ಆಚಾರ್ಯರು ಸ್ಥಾಪಿಸಿರುವ ಎಲ್ಲಾ ಮತಗಳನ್ನೂ ಒಟ್ಟುಗೂಡಿಸಿ ಅದಕ್ಕೆ ಒಂದು ಮತವೆಂದೋ, ಏಕಮತವೆಂದೋ, ಮನುಜಮತವೆಂದೋ ಅಥವಾ ಮಾನವಧರ್ಮವೆಂದೋ ಹೆಸರಿಡಬಾರದೇಕೆ? ಹೀಗೆ ಮಾಡುವುದು ತರ್ಕಹೀನವೂ ಅಂಸಗತವೂ ಆಗಿದ್ದರೆ ಅದು ಈಗಾಗಲೇ ಅಸ್ತಿತ್ವದಲ್ಲಿ ಇರುವ ಎಲ್ಲಾ ಮತಗಳಲ್ಲೂ ಈ ಅಸಂಗತತೆ ಇದೆ ಎಂಬುದನ್ನೂ ಒಪ್ಪಬೇಕು. ತಮ್ಮ ತಮ್ಮ ಮತಗಳ ಚೌಕಟ್ಟಿನೊಳಗೆ ನಿಂತು ಏಕತೆಯಲ್ಲಿರುವ ವೈವಿಧ್ಯವನ್ನೂ ವೈವಿಧ್ಯದಲ್ಲಿರುವ ಏಕತೆಯನ್ನೂ ವಿವರಿಸುವ ಚತುರ ಮಾತುಗಾರರಿಗೆ ಮಾನವ ಜಾತಿಯ ಮತವನ್ನು ಒಟ್ಟಾಗಿ ಗ್ರಹಿಸಿ ಅದರ ಏಕತೆಯಲ್ಲಿರುವ ವೈವಿಧ್ಯವನ್ನೂ ಹಾಗೆಯೇ ವೈವಿಧ್ಯದಲ್ಲಿರುವ ಏಕತೆಯನ್ನೂ ಕಾಣಲಾಗದೇ ಹೋದದ್ದು ಆಶ್ಚರ್ಯಕರವೇ ಸರಿ. ಮಹಾತ್ಮಾಜಿ ಇಲ್ಲಿಗೆ ಬಂದಿದ್ದಾಗ ಮಾಡಿದ ಭಾಷಣದಲ್ಲಿ ಆಶ್ರಮದ ಅಂಗಳದಲ್ಲಿರುವ ಮಾವಿನ ಮರವನ್ನು ತೋರಿಸಿ ಅದರ ಕೊಂಬೆ-ರೆಂಬೆಗಳೂ ಎಲೆಗಳೂ ಹೇಗೆ ಒಂದಕ್ಕಿಂತ ಮತ್ತೊಂದು ಭಿನ್ನವೋ ಹಾಗೆಯೇ ಮನುಷ್ಯರೂ ಭಿನ್ನವ್ಯಕ್ತಿಗಳೇ ಆಗಿದ್ದಾರೆ. ಈ ಭಿನ್ನತೆ ಇರುವಷ್ಟು ಕಾಲವೂ ಮನುಷ್ಯರು ಅನುಸರಿಸುವ ಮತಗಳೂ ಭಿನ್ನವೇ ಆಗಿರುತ್ತವೆ ಎಂದು ಹೇಳಿದರು. ಅವರು ಹೇಳಿದ್ದು ಸರಿಯೇ. ಆದರೆ ನೈಯಾಯಿಕ ದೃಷ್ಟಿಕೋನದಲ್ಲಿ ಅದನ್ನು ವಿಶ್ಲೇಷಿಸಿದರೆ ಪ್ರತೀ ವ್ಯಕ್ತಿಗೊಂದು ಮತ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹಾಗಾದಾಗ ಹಿಂದೂವಾಗಿರುವ ರಾಮನೂ ಕೃಷ್ಣನೂ ಅನುಸರಿಸುವ ಮತಗಳು ಬೇರೆ ಬೇರೆಯಾಗಿರುತ್ತವೆ. ಅಂದರೆ ಈಗಿರುವ ಇಪ್ಪತ್ತು ಕೋಟಿ ಹಿಂದೂಗಳದ್ದೂ ಇಪ್ಪತ್ತು ಕೋಟಿ ಬೇರೆ ಬೇರೆ ಮತಗಳಾಗುತ್ತವೆ. ವಾಸ್ತವ ಇದುವೇ ಆಗಿದೆ. ಆದರೂ ಈ ಇಪ್ಪತ್ತು ಕೋಟಿ ನಂಬಿಕೆಗಳಲ್ಲೂ ಕೆಲವು ಸಾಮಾನ್ಯ ಲಕ್ಷಣಗಳಿವೆ. ಈ ಲಕ್ಷಣಗಳನ್ನು ಹೊಂದಿರುವವರನ್ನೆಲ್ಲಾ ಸೇರಿಸಿ ಒಂದು ನಿರ್ದಿಷ್ಟ ಮತದವರು ಎಂದು ಗುರುತಿಸುತ್ತೇವೆ. ಹಾಗೆಯೇ ಎಲ್ಲಾ ಮತಗಳ ನಂಬಿಕೆಗಳನ್ನು ಹೋಲಿಸಿ ನೋಡಿದಾಗಲೂ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಮನುಷ್ಯರೆಲ್ಲಾ ಒಂದೇ ಮತಕ್ಕೆ ಸೇರಿದವರೇ ಆಗುತ್ತಾರೆ. ಸನಾತನವಾದ (ಶಾಶ್ವತವಾದ) ಯಾವುದೋ ಒಂದು ಧರ್ಮವನ್ನೋ (ಮೌಲ್ಯವನ್ನೋ) ಸತ್ಯವನ್ನೋ ಆಧಾರವಾಗಿಟ್ಟುಕೊಳ್ಳದೆ ಯಾವುದೇ ಮತಕ್ಕೂ ತನ್ನ ಅಸ್ತಿತ್ವವನ್ನುಳಿಸಿಕೊಳ್ಳಲು ಸಾಧ್ಯವಿಲ್ಲ. ಮುಹಮ್ಮದರ ಮತ ಸೋದರತಾಭಾವವನ್ನು ಮುಖ್ಯವೆಂದು ಪರಿಗಣಿಸಿದರೆ ಕ್ರೈಸ್ತ ಮತವು ಪ್ರೀತಿಯನ್ನು ಮುಖ್ಯವೆಂದು ಭಾವಿಸುತ್ತದೆ. ಆದರೆ ಸೋದರತೆಯು ಪ್ರೀತಿಯನ್ನೂ ಹಾಗೆಯೇ ಪ್ರೀತಿಯು ಸೋದರಭಾವವನ್ನೂ ಆಶ್ರಯಿಸಿದೆ. ಇದನ್ನರಿಯದೆ ಸೋದರತೆಯೇ ಶ್ರೇಷ್ಠ ಅಥವಾ ಪ್ರೀತಿಯೇ ಶ್ರೇಷ್ಠ ಎಂಬ ವಿವಾದವನ್ನುಂಟು ಮಾಡಿದರೆ ಅದೊಂದು ವ್ಯರ್ಥ ವಿವಾದವೆನ್ನದೆ ಬೇರೆ ದಾರಿಯಿದೆಯೇ? ಸನಾತನವಾದ ಧರ್ಮಗಳೆಲ್ಲವೂ ಮೌಲ್ಯಪ್ರಧಾನವಾದವು. ದೇಶ ಮತ್ತು ಕಾಲಗಳು ಬೇಡುವ ಅಗತ್ಯಗಳಿಗೆ ಅನುಗುಣವಾಗಿ ಯಾವುದೋ ಒಂದು ಮೌಲ್ಯಕ್ಕೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು ಅನಿವಾರ್ಯವಾಗುತ್ತದೆ. ಹಿಂಸೆಯೇ ವಿಜೃಂಭಿಸುತ್ತಿದ್ದ ದೇಶ-ಕಾಲದಲ್ಲಿ ಜಗದ್ಗುರುಗಳು ಅಹಿಂಸಾಧರ್ಮಕ್ಕೆ ಉಳಿದೆಲ್ಲಾ ಧರ್ಮಗಳಿಗಿಂತೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಬುದ್ಧನ ಕಾಲದಲ್ಲಿ ಹಿಂಸೆ ಮೆರೆಯುತ್ತಿತ್ತು. ಹಾಗಾಗಿ ಬುದ್ಧ ಅದನ್ನು ಆದ್ಯತೆಯಾಗಿ ಪರಿಗಣಿಸಿದ. ನಬಿಯ (ಪ್ರವಾದಿ ಮುಹಮ್ಮದ್) ಕಾಲದಲ್ಲಿ ಅರೇಬಿಯದಲ್ಲಿ ಸೋದರತಾಭಾವವನ್ನು ಎತ್ತಿಹಿಡಿಯುವ ಅಗತ್ಯವಿತ್ತು. ಅದರಿಂದಾಗಿ ಅವರ ಮತದಲ್ಲಿ ಸೋದರತೆ ಮುಖ್ಯವಾಯಿತು. ಇಂದಿನ ಇಂಡಿಯಾದ ಅಗತ್ಯವೇನು? ಜಾತಿ ಮತ್ತು ಮತಗಳ ಮೇಲಾಟದಿಂದ ವಿಮೋಚನೆ ಪಡೆಯುವುದು. ಸಮಚಿತ್ತ ಮತ್ತು ಸಮಾನ ಗೌರವದಿಂದ ಎಲ್ಲಾ ಮತಗಳನ್ನು ಎಲ್ಲರೂ ಕಲಿತು ಅರಿತು ಹಾಗೂ ಈ ಅರಿವನ್ನು ಪ್ರೀತಿಯಿಂದ ಹಂಚಿಕೊಳ್ಳಲು ಪ್ರಯತ್ನಿಸಲಿ. ಮೇಲಾಟ ನಡೆಯುತ್ತಿರುವುದು ಮತಗಳ ನಡುವೆಯಲ್ಲ ಮದ ತುಂಬಿದವರ ಮಧ್ಯೆ ಎಂದು ಎಲ್ಲರೂ ಅರಿಯುತ್ತಾರೆ. ಆಗ ಮತಾಂತಗೊಳ್ಳುವ ಉತ್ಸಾಹವೂ ಅಸ್ತಮಿಸುತ್ತದೆ.
►ಸಿವಿಕೆ: ಹಾಗಿದ್ದರೆ ಶ್ರೀಪಾದರ ಶಿಷ್ಯವೃಂದವನ್ನು ಸೇರಲು ಹಿಂದೂ ಮತವನ್ನು ಅನುಸರಿಸುವವರಿಗೂ ಬೌದ್ಧ, ಕ್ರೈಸ್ತ ಮತ್ತು ಮಹಮದೀಯ ಮತವನ್ನು ಪಾಲಿಸುವವರಿಗೂ ಅವಕಾಶಕೊಡಬೇಕಲ್ಲವೇ?
► ಗುರು: ಅವಕಾಶ ನೀಡುವುದಕ್ಕೆ ನಮ್ಮ ವಿರೋಧವೂ ಇಲ್ಲ.
►ಸಿವಿಕೆ: ನನಗೆ ಇತರ ಎಲ್ಲಾ ಮತಗಳಿಗಿಂತ ಬೌದ್ಧ ಮತದ ಬಗ್ಗೆಯೇ ಹೆಚ್ಚು ನಂಬಿಕೆ ಮತ್ತು ಗೌರವ.
► ಗುರು: ಹಾಗೆಂದು ನಿಮಗೆ ಇತರ ಮತಗಳ ಕುರಿತ ದ್ವೇಷವಿಲ್ಲವಲ್ಲ.
► ಸಿವಿಕೆ: ಇಲ್ಲವೇ ಇಲ್ಲ.
► ಗುರು: ಬೌದ್ಧ ಮತದ ಗ್ರಂಥಗಳನ್ನು ಓದಿದ್ದೀರಾ?
►ಸಿವಿಕೆ: ಅನುವಾದಗಳನ್ನು ಓದಿದ್ದೇನೆ.
► ಗುರು: ಅದೇಕೆ ಬೌದ್ಧ ಮತದ ಬಗ್ಗೆ ಇಷ್ಟು ಆಸಕ್ತಿ?
► ಸಿವಿಕೆ: ಈ ಕಾಲದೇಶಗಳ ಸಂದರ್ಭದಲ್ಲಿ ಬುದ್ಧ ಮುನಿಯ ಧರ್ಮೋಪದೇಶಗಳ ಬಗ್ಗೆ ಆಸಕ್ತಿ ಹುಟ್ಟದೇ ಇರಲು ಸಾಧ್ಯವಿಲ್ಲ. ಜಾತಿಭೇದ, ಮತಭೇದ ಮತ್ತು ಮೂಢ ಆಚಾರಗಳಿಂದ ಜನರನ್ನು ವಿಮೋಚಿಸುವುದಕ್ಕೆ ಉಳಿದೆಲ್ಲಾ ಮತಗಳಿಗಿಂತಲೂ ಬೌದ್ಧ ಮತವೇ ಒಳ್ಳೆಯದೆಂಬುದು ನನ್ನ ಬಲವಾದ ನಂಬಿಕೆ.
► ಗುರು: ನಮ್ಮ ಸನ್ಯಾಸಿ ಬಳಗವನ್ನು ಸೇರುವುದರ ಬಗ್ಗೆ ಆಲೋಚಿಸಿದ್ದಿದೆಯೇ?
► ಸಿವಿಕೆ: ಸೇರಿಕೊಳ್ಳುವ ಆಸಕ್ತಿ ಇದೆ. ಬೌದ್ಧ ಮತದ ಪ್ರಕಾರವಿರುವ ಸಂನ್ಯಾಸವಾದರಷ್ಟೇ ನಾನು ಸೇರಲು ಸಾಧ್ಯ.
► ಗುರು: ಬೌದ್ಧ ಮತದ ಪ್ರಕಾರವೇ ಇರುವ ಸನ್ಯಾಸವಾದರೂ ಸಾಕೆಂದು ನಾವು ಆಲುವಾದಲ್ಲಿಯೇ ಹೇಳಿದ್ದೆವಲ್ಲವೇ?
► ಸಿವಿಕೆ: ಬೌದ್ಧ ಮತದ ಗುರುಗಳು ಕ್ಷಯ ರೋಗಿಗಳಿಗೆ ಸನ್ಯಾಸದೀಕ್ಷೆ ನೀಡುವುದಿಲ್ಲ.
► ಗುರು: ವಾತರೋಗಿಗಳಿಗೆ ಅವರು ಸನ್ಯಾಸ ದೀಕ್ಷೆ ನೀಡುತ್ತಾರೆಯೇ?
► ಸಿವಿಕೆ: ಅದು ನನಗೆ ತಿಳಿಯದು.
► ಗುರು: ಈ ಬಗೆಯ ಕಾಲಹರಣದ ನಿರ್ಬಂಧಗಳು ಕೆಲವು ಎಲ್ಲಾ ಮತಗಳಲ್ಲಿಯೂ ಇವೆ.
► ಸಿವಿಕೆ: ನಾನು ತಮ್ಮ ಹಸ್ತದಿಂದಲ್ಲದೆ ಇನ್ಯಾರಿಂದಲೂ ಸನ್ಯಾಸ ದೀಕ್ಷೆ ಪಡೆಯುವುದಿಲ್ಲ.