ಪ್ರತಿಪಕ್ಷಗಳು ಮಾಧ್ಯಮಗಳನ್ನು ಬಿಟ್ಟು ಚುನಾವಣೆಯನ್ನು ಎದುರಿಸಬೇಕು

ಹಿರಿಯ ಡಿಜಿಟಲ್ ಪತ್ರಕರ್ತ ದಯಾಶಂಕರ್ ಮಿಶ್ರಾ ಅವರೊಂದಿಗಿನ ವಿಶೇಷ ಸಂದರ್ಶನ ಇದು. ‘ನೆಟ್ವರ್ಕ್ 18’ ನಲ್ಲಿನ ಕಾರ್ಯನಿರ್ವಾಹಕ ಸಂಪಾದಕ (ಡಿಜಿಟಲ್) ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ ಸಂದರ್ಭದ ಬಗ್ಗೆ ಈ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ. ಎರಡು ದಶಕಗಳ ಶ್ರೀಮಂತ ಅನುಭವ ಇರುವ ಮಿಶ್ರಾ, ರಾಹುಲ್ ಗಾಂಧಿ ಕುರಿತು ಪುಸ್ತಕ ಬರೆದಿದ್ದಕ್ಕೆ ಎದುರಿಸಿದ ಸವಾಲುಗಳ ಬಗ್ಗೆ ಮತ್ತು ಅಂತಿಮವಾಗಿ ಅದು ಅವರ ವೃತ್ತಿಜೀವನದಲ್ಲಿ ಒಂದು ಬಹು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವಾದುದರ ಬಗ್ಗೆ ಇಲ್ಲಿ ಹೇಳಿದ್ದಾರೆ. ಪತ್ರಿಕೋದ್ಯಮದಲ್ಲಿನ ಸತ್ಯದ ಹಾದಿಯ ಕಷ್ಟಗಳು ಮತ್ತು ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿ ತನ್ನ ಆಲೋಚನೆ ಮತ್ತು ದೃಷ್ಟಿಕೋನವನ್ನು ವ್ಯಕ್ತಪಡಿಸುವಾಗ ಎದುರಾಗುವ ಅನಿರೀಕ್ಷಿತ ತಿರುವುಗಳ ಬಗ್ಗೆ ತಮ್ಮ ಒಳನೋಟಗಳನ್ನು ಈ ವಿಶೇಷ ಸಂದರ್ಶನದಲ್ಲಿ ಮಿಶ್ರಾ ಹಂಚಿಕೊಂಡಿದ್ದಾರೆ. ಭಾರತದಲ್ಲಿನ ಸದ್ಯದ ಮಾಧ್ಯಮದ ಸ್ಥಿತಿ ಮತ್ತು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದ ‘ನೆಟ್ವರ್ಕ್ 18’ ಗೆ ರಾಜೀನಾಮೆ ನೀಡಲು ಕಾರಣವಾದ ಪುಸ್ತಕದ ಬಗ್ಗೆಯೂ ಚರ್ಚಿಸಿದ್ದಾರೆ.

Update: 2024-01-04 09:57 GMT


ಸಂದರ್ಶನ : ಇಸ್ಮಾಯೀಲ್ ಝೋರೇಜ್

 ರಾಹುಲ್ ಗಾಂಧಿ ಕುರಿತ ನಿಮ್ಮ ಪುಸ್ತಕದ ವಿಚಾರವಾಗಿ ‘ನೆಟ್ವರ್ಕ್ 18’ ಮ್ಯಾನೇಜ್ಮೆಂಟ್ನಿಂದ ನೀವು ಎದುರಿಸಿದ ಒತ್ತಡಗಳನ್ನು ವಿವರಿಸಿ. ನೀವು ರಾಜೀನಾಮೆ ನೀಡುವುದಕ್ಕೆ ಅದು ಹೇಗೆ ಕಾರಣವಾಯಿತು?

►  ಪ್ರತಿಪಕ್ಷ ಮತ್ತು ರಾಹುಲ್ ಗಾಂಧಿಯವರನ್ನು ಬದಿಗೆ ಸರಿಸುವ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದರ ಕುರಿತ ಈ ಪುಸ್ತಕದ ಕೆಲಸವನ್ನು ನಾನು 2011ರಿಂದ ಶುರು ಮಾಡಿದೆ. ಈ ಪುಸ್ತಕ ಲೋಕಪಾಲ್ ಬಿಲ್ ಚಳವಳಿಯ ಸಮಯದಲ್ಲಿನ ಮಾಧ್ಯಮ ಚಲನಶೀಲತೆಯನ್ನು ಮತ್ತು ಆ ಚಳವಳಿ ಹೇಗೆ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡಿತು ಎಂಬುದನ್ನು ಚರ್ಚಿಸುತ್ತದೆ. 2011ರಲ್ಲಿ ಆರೆಸ್ಸೆಸ್ ರಾಹುಲ್ ಗಾಂಧಿಯನ್ನು ಅಪಾಯಕಾರಿ ಎಂದು ಗ್ರಹಿಸಿತು ಮತ್ತು ಅವರ ಚಾರಿತ್ರ್ಯಕ್ಕೆ ಕಳಂಕ ತರುವ ಸಂಚನ್ನು ರೂಪಿಸಿತು. ನಾನು ಪುಸ್ತಕದ ಬಗ್ಗೆ ‘ನೆಟ್ವರ್ಕ್ 18’ಗೆ ತಿಳಿಸಿದೆ. ನನ್ನ ಮೊದಲ ಪುಸ್ತಕ ಯಾವುದೇ ತೊಂದರೆಯಿಲ್ಲದೆ ಬಂದಿತ್ತು. ಆದರೂ ಸಿಇಒ ಅವರ ಒಪ್ಪಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ಅಂತಹ ಯಾವ ಒಪ್ಪಿಗೆಯೂ ಇಲ್ಲದೆ ಇನ್ನೊಬ್ಬ ಸಂಪಾದಕರು ಪ್ರಧಾನಿ ಮೋದಿ ಕುರಿತು ಪುಸ್ತಕ ಬರೆದಿದ್ದರು. ಪುಸ್ತಕ ಬರೆಯುವ ವಿಚಾರ ಕೈಬಿಡುವಂತೆ ಇಲ್ಲವೆ ರಾಜೀನಾಮೆ ನೀಡುವಂತೆ ನನಗೆ ಹೇಳಲಾಯಿತು. ನಾನು ರಾಜೀನಾಮೆ ನೀಡಲು ನವೆಂಬರ್ 22ರಂದು ನಿರ್ಧರಿಸಿದೆ. ಅವರ ಹೇಳಿಕೆಯಲ್ಲಿ ಬೆದರಿಕೆಯ ಭಾಷೆ ಬಳಸಲಾಗಿತ್ತು. ಸಾಂವಿಧಾನಿಕ ಹಕ್ಕುಗಳನ್ನು ನಿರ್ಲಕ್ಷಿಸಲಾಗಿತ್ತು ಮತ್ತು ಅವರು ಇದ್ದಕ್ಕಿದ್ದಂತೆ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಅದರಲ್ಲಿ ಭಯ ಸ್ಪಷ್ಟವಿತ್ತು. ನನ್ನ ಪುಸ್ತಕ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ.

 ನೀವು ಅನುಮತಿ ಪಡೆದಿರಲಿಲ್ಲ ಮತ್ತು ಕಂಪೆನಿಯ ನೀತಿಯನ್ನು ಉಲ್ಲಂಘಿಸಿದ್ದೀರಿ ಎಂದು ನ್ಯೂಸ್ ನೆಟ್ವರ್ಕ್ 18 ಹೇಳಿದೆ. ಪುಸ್ತಕ ಬರೆಯದಂತೆ ನಿಮ್ಮನ್ನು ನಿರ್ಬಂಧಿಸುವ ಯಾವುದೇ ಲಿಖಿತ ನಿಯಮ ಇತ್ತೇ?

►  ಇಲ್ಲ, ಬರೆಯಕೂಡದು ಎಂಬ ಯಾವುದೇ ಲಿಖಿತ ಕರಾರು ಇರಲಿಲ್ಲ. ನಾನು ಈಗಾಗಲೇ ಯಾವುದೇ ಅಡ್ಡಿಯಿಲ್ಲದೆ ಪುಸ್ತಕ ಬರೆದಿದ್ದೇನೆ. ನನ್ನ ಹಿಂದಿನ ಪುಸ್ತಕ ರಾಜಕೀಯದ ಬಗ್ಗೆ ಇರಲಿಲ್ಲ ಎಂದು ಅವರೀಗ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಂತಹ ಭಿನ್ನತೆಯ ವಿಚಾರವನ್ನೂ ಈ ಹಿಂದೆ ಎತ್ತಿರಲಿಲ್ಲ. ಯಾವುದೇ ನೋಟಿಸ್ ನೀಡಿರಲಿಲ್ಲ. ಇದೆಲ್ಲದರ ಹಿನ್ನೆಲೆಯಲ್ಲಿಯೇ ನಾನು ಯಾವುದೇ ಅನುಮತಿ ಅಗತ್ಯವಿಲ್ಲ ಎಂದುಕೊಂಡಿದ್ದೆ.

 ನೆಟ್ವರ್ಕ್ 18 ಮ್ಯಾನೇಜ್ಮೆಂಟ್ನೊಂದಿಗಿನ ಚರ್ಚೆಗಳೂ ಸೇರಿದಂತೆ ನಿಮ್ಮ ರಾಜೀನಾಮೆಗೆ ಕಾರಣವಾದ ಘಟನೆಗಳ ಕುರಿತು ಹಂಚಿಕೊಳ್ಳಬಹುದೇ? ರಾಜಿ ಪ್ರಯತ್ನಗಳೇನಾದರೂ ನಡೆದಿದ್ದವೇ?

►  ನಾನು ಪುಸ್ತಕದ ಬಗ್ಗೆ ನಂಬರ್ ಟು ಹುದ್ದೆಯಲ್ಲಿರುವ ಸಂತೋಷ್ ಮೆನನ್ ಅವರಿಗೆ ತಿಳಿಸಿದ್ದೆ. ಮುಂಬೈ ಮೂಲದ ಎಂ.ಡಿ.ಯಿಂದ ಅನುಮತಿ ಪಡೆಯುವಂತೆ ಸೂಚಿಸಿದರು. ನೀವೇ ಇದನ್ನು ಪರಿಶೀಲಿಸಿ ಅನುಮತಿ ಕೊಡಿಸಬಹುದಾ ಎಂದು ನಾನು ಕೇಳಿದಾಗ, ನಾನು ನಿಮಗೆ ಹೇಳುತ್ತೇನೆ ಎಂದರು. ನಂತರ ಇಡೀ ಪರಿಸ್ಥಿತಿ ಹೀಗಾಯಿತು.

ಸಹೋದ್ಯೋಗಿಗಳು ಸಹಾನುಭೂತಿ ವ್ಯಕ್ತಪಡಿಸಿದರು. ಸಂತೋಷ್ ಕೂಡ ವಿಷಾದ ವ್ಯಕ್ತಪಡಿಸಿ, ಬೇಸರವಾಗುತ್ತಿದೆ ಎಂದರು. ಆದರೂ, ಈ ಪುಸ್ತಕದಲ್ಲಿ ನನ್ನೊಂದಿಗೆ ತೊಡಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಮ್ಯಾನೇಜ್ಮೆಂಟ್ ಉದ್ಯೋಗಿಗಳ ಲ್ಯಾಪ್ಟಾಪ್ಗಳನ್ನು ತಪಾಸಣೆ ಮಾಡಿದ್ದರಿಂದ ನ್ಯೂಸ್ ರೂಮ್ನಲ್ಲಿ ಭಯ ಆವರಿಸಿತು. ಒಬ್ಬ ಸಹೋದ್ಯೋಗಿಯನ್ನಂತೂ, ನಾನು ಇತರರಂತೆ ಪ್ರೂಫ್ ರೀಡಿಂಗ್ಗಾಗಿ ಕಳಿಸಿದ್ದ ಬರಹವೊಂದು ಅವರ ಬಳಿ ಇತ್ತೆಂಬ ಕಾರಣಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತು ಮತ್ತು ಬಲವಂತ ಮಾಡಲಾಯಿತು. ಭಯದ ವಾತಾವರಣ ಸೃಷ್ಟಿಸಲು, ನಿಯಮ ಉಲ್ಲಂಘನೆ ಆರೋಪವಿದ್ದ ನನ್ನ ವಿರುದ್ಧದ ದಾಖಲೆಗಳಿಗೆ ಸಹಿ ಹಾಕುವಂತೆ ನೌಕರರನ್ನು ಒತ್ತಾಯಿಸಲಾಯಿತು.

 ನೀವು ಪ್ರಚಾರಕ್ಕಾಗಿ ಈ ನಾಟಕೀಯ ನಿರ್ಗಮನ ಮಾಡಿದಿರಿ ಎಂದು ನೆಟ್ವರ್ಕ್ 18 ಆರೋಪಿಸಿದೆ. ರಾಜೀನಾಮೆ ಮತ್ತು ಸಾರ್ವಜನಿಕ ಹೇಳಿಕೆಗಳ ಹಿಂದಿನ ನಿಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುವಿರಾ?

►  ಇದು ವಿಪರ್ಯಾಸ. ನಾಟಕೀಯ ನಿರ್ಗಮನದಿಂದ ನನಗಾಗುವ ಲಾಭವೇನು? ನನ್ನ ವೃತ್ತಿಜೀವನ ಮುಗಿದುಹೋಯಿತು ಮತ್ತು ನನ್ನನ್ನು ನೇಮಿಸಿಕೊಳ್ಳದಂತೆ ಇತರರ ಮೇಲೆ ಅವರು ಒತ್ತಡ ಹೇರುತ್ತಿದ್ದಾರೆ. ಹಿರಿಯ ಪತ್ರಕರ್ತನನ್ನು ನಡೆಸಿಕೊಂಡ ಈ ರೀತಿ ಆತಂಕಕಾರಿಯಾಗಿದೆ. ಮೋದಿ ಮತ್ತು ಅಡ್ವಾಣಿ ಸೇರಿದಂತೆ ನಾಯಕರನ್ನು ಟೀಕಿಸುವ ಪುಸ್ತಕಗಳಿವೆ. ನಾಯಕರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದೆ. ಆದರೆ ಪ್ರಮುಖ ಪ್ರತಿಪಕ್ಷ ನಾಯಕನ ವಿರುದ್ಧದ ಪಿತೂರಿಯನ್ನು ಬಹಿರಂಗಪಡಿಸುತ್ತಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ.

ನನ್ನ ಅನೇಕ ಸ್ನೇಹಿತರು ಪುಸ್ತಕದ ಬಿಡುಗಡೆಯ ಬಗ್ಗೆ ನನ್ನನ್ನು ಕೇಳುತ್ತಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಈ ಒಟ್ಟಾರೆ ಪರಿಸ್ಥಿತಿ ನನ್ನನ್ನು ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಸಿದೆ. ಪುಸ್ತಕಕ್ಕೆ ಪ್ರಕಾಶಕರು ಸಿಗಲಿಲ್ಲ ಮತ್ತು ನಾನೇ ಪ್ರಕಟಿಸುತ್ತಿದ್ದೇನೆ. ಈ ಪುಸ್ತಕಕ್ಕಾಗಿ ನನ್ನ ಸ್ನೇಹಿತರು ಮತ್ತು ಹಿತೈಷಿಗಳಿಂದ ಸಾಲ ತೆಗೆದುಕೊಂಡಿದ್ದೇನೆ ಮತ್ತು ಎಲ್ಲವೂ ಅನಿಶ್ಚಿತ ವಾಗಿದೆ. ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಪುಸ್ತಕ ಬಿಡುಗಡೆ ಮಾಡಲಿ? ಈಗಾಗಲೇ ಅಮೆಝಾನ್ನಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಆದರೆ ಔಪಚಾರಿಕವಾಗಿ ಬಿಡುಗಡೆ ಮಾಡಲು ಅಥವಾ ಅದಕ್ಕಾಗಿ ಸಮಾರಂಭವನ್ನು ವ್ಯವಸ್ಥೆ ಮಾಡಲು ನನಗೆ ಸಾಧ್ಯವಾದೀತೆ ಎಂಬುದು ಗೊತ್ತಿಲ್ಲ.

 ನಿಮ್ಮ ರಾಜೀನಾಮೆ ಹೇಳಿಕೆಯಲ್ಲಿ, ನ್ಯೂಸ್ರೂಮ್ನಲ್ಲಿನ ರಾಜಿಗಳಿಗೆ ಪ್ರಾಯಶ್ಚಿತ್ತವಾಗಿ ಈ ಪುಸ್ತಕ ಎಂದು ನೀವು ಹೇಳಿದ್ದಿರಿ. ಪತ್ರಿಕೋದ್ಯಮದಲ್ಲಿ ಆಗಿರುವ ಅಂತಹ ಹೊಂದಾಣಿಕೆಗಳ ಉದಾಹರಣೆಗಳನ್ನು ನೀಡಬಹುದೇ?

►  2011ರಿಂದಲೂ ಮಾಧ್ಯಮಗಳು ಮಾಡಿಕೊಳ್ಳುತ್ತಿರುವ ಹೊಂದಾಣಿಕೆಗಳನ್ನು ಪುಸ್ತಕ ಪರಿಶೀಲಿಸುತ್ತದೆ. ಸರಕಾರಗಳನ್ನು ಟೀಕಿಸುವುದರ ಬದಲಾಗಿ ಮೋದಿ ಸರಕಾರವನ್ನು ಪ್ರಶ್ನಾತೀತವಾಗಿ ಅನುಮೋದಿಸುವ ಬದಲಾವಣೆಗೆ ಹೊರಳಿರುವುದನ್ನು ಗಮನಿಸುತ್ತದೆ. ನೆಟ್ವರ್ಕ್ 18 ನಲ್ಲಿ ಮಾತ್ರವಲ್ಲದೆ 2011ರಿಂದ ವಿವಿಧ ನ್ಯೂಸ್ರೂಮ್ಗಳಲ್ಲಿ ಕೆಲಸ ಮಾಡಿದವನಾಗಿ, ಈ ಸಂಸ್ಥೆಗಳಾದ್ಯಂತದ ರಾಜಿಗಳನ್ನು ವಿವರಿಸಿದ್ದೇನೆ.

ಕುತೂಹಲಕಾರಿ ಸಂಗತಿಯೆಂದರೆ, ನಾನು ರಾಜೀನಾಮೆ ನೀಡಿದಾಗ, ನೆಟ್ವರ್ಕ್ 18 ಗೆ ಅದರಲ್ಲಿ ಸಮಸ್ಯೆ ಇರಲಿಲ್ಲ. ನನ್ನ ರಾಜೀನಾಮೆ ಮತ್ತು ಪುಸ್ತಕದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಾಗ ಮತ್ತದು ವೈರಲ್ ಆದಾಗ ಸಮಸ್ಯೆ ಶುರುವಾಯಿತು. ಅವರು ಭಯಗೊಂಡರು. ನನ್ನನ್ನು ತಕ್ಷಣ ಕೆಲಸದಿಂದ ಬಿಡುಗಡೆ ಮಾಡಲು ನಿರ್ಧರಿಸಿದರು. ಅದಕ್ಕೂ ಮೊದಲು, ನಾನು ನೋಟಿಸ್ ಅವಧಿ ಮತ್ತು ಎಲ್ಲಾ ಔಪಚಾರಿಕತೆಗಳನ್ನು ಪೂರೈಸುತ್ತೇನೆ ಎಂದೇ ಅಂದುಕೊಂಡಿದ್ದೆ. ಆದರೆ ಪೋಸ್ಟ್ ವೈರಲ್ ಆದಾಗ, ಇದ್ದಕ್ಕಿದ್ದಂತೆ, ನನ್ನನ್ನು ತಕ್ಷಣ ಹೊರಡುವಂತೆ ಹೇಳಿದರು. ನನ್ನ ಲ್ಯಾಪ್ಟಾಪ್ ಇತ್ಯಾದಿಗಳನ್ನು ತೆಗೆದುಕೊಂಡು ಹೋದರು. ಆದರೆ ಪುಸ್ತಕದಲ್ಲಿ ಚರ್ಚಿಸಲಾದ ನ್ಯೂಸ್ರೂಮ್ ರಾಜಿಗಳು ನೆಟ್ವರ್ಕ್ 18ಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲಾ ನ್ಯೂಸ್ರೂಮ್ಗಳ ಸಾಮಾನ್ಯ ಕಥೆಗಳು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

 ನಿಮ್ಮ ಪುಸ್ತಕವು 2011ರಲ್ಲಿ ರಾಹುಲ್ ಗಾಂಧಿಯವರ ವಿರುದ್ಧದ ಸುಳ್ಳು ಪ್ರಚಾರವನ್ನು ಪರಿಶೀಲಿಸುತ್ತದೆ. ಆ ಅಪಪ್ರಚಾರಕ್ಕೆ ಪ್ರತಿಯಾದ ಮತ್ತು ವಾಸ್ತವವನ್ನು ತಿಳಿಸುವ ಪ್ರಮುಖ ಅಂಶಗಳನ್ನು ಎತ್ತಿಹೇಳಬಹುದೆ?

►  ಪುಸ್ತಕವು ಅಣ್ಣಾ ಹಝಾರೆ ಚಳವಳಿ, ಮೋದಿ ಸರಕಾರ, ಹೆಚ್ಚುತ್ತಿರುವ ಅಸಹಿಷ್ಣುತೆ, ಗುಂಪು ಹತ್ಯೆಗಳು ಮತ್ತು ದಾಭೋಲ್ಕರ್, ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಅವರನ್ನು ಒಳಗೊಂಡ ಘಟನೆಗಳನ್ನು ವ್ಯಾಪಕವಾಗಿ ಒಳಗೊಂಡಿದೆ. ದೊಡ್ಡದಾದ, ತೆರೆಯ ಹಿಂದಿನ ಚಿತ್ರವನ್ನು ಬಯಲು ಮಾಡುವಂತೆ ಕೂಡಿಕೊಳ್ಳುವ ಈ ಎಲ್ಲ ವಿಚಾರಗಳನ್ನು ಪುಸ್ತಕ ವಿಶ್ಲೇಷಿಸುತ್ತದೆ. ಜೆಎನ್ಯು ಸಂಬಂಧದ ನಡೆ ಮತ್ತು ಮಹಾತ್ಮಾ ಗಾಂಧಿ ವಿರುದ್ಧದ ಬಲಪಂಥೀಯ ಟೀಕೆಗಳೂ ಒಳಗೊಂಡಂತೆ ಪ್ರಸ್ತುತ ಸರಕಾರದಿಂದ ತಲೆದೋರಿರುವ ಅಪಾಯಗಳನ್ನು ಪರಿಶೋಧಿಸುತ್ತದೆ.

 ನಿಮ್ಮ ಪುಸ್ತಕ ಭಾರತದಲ್ಲಿ ಹಿಂದುತ್ವ ಮತ್ತು ಅದರ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ಎತ್ತಿದಂತೆ ಕಾಣುತ್ತಿದೆ. ಗುಂಪು ಹತ್ಯೆ, ಸುಳ್ಳುಗಳು ಮತ್ತು ಹಿಂದುತ್ವದ ಉದಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸವಾಲುಗಳು ಮತ್ತು ವಿವಾದಗಳನ್ನು ಚರ್ಚಿಸುವಿರಾ?

► ಹಿಂದುತ್ವದ ಉದಯವನ್ನು ಪುಸ್ತಕ ವ್ಯಾಪಕವಾಗಿ ಪರಿಶೀಲಿಸುತ್ತದೆ. ಮಹಾತ್ಮಾ ಗಾಂಧಿಯವರನ್ನೂ ಖಂಡಿಸುವ ಆತಂಕಕಾರಿ ಅಂಶವನ್ನು ಗಮನಿಸುತ್ತದೆ. ಗುಂಪು ಹತ್ಯೆ ಪ್ರಕರಣಗಳ ಆರೋಪಿಗಳನ್ನು ಅವರ ಬಿಡುಗಡೆ ನಂತರ ಸ್ವಾಗತಿಸುವ ಮಂತ್ರಿಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ.

ಸೆಂಗೋಲ್ ವಿಷಯ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಜೈಲುವಾಸಕ್ಕೆ ಕಾರಣವಾದ ವ್ಯವಸ್ಥಿತ ಪಿತೂರಿ, ಪೆಗಾಸಸ್ ವಿವಾದ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ, ಎನ್ಡಿಟಿವಿ ಸ್ವಾಧೀನ, ರವೀಶ್ ಕುಮಾರ್ ರಾಜೀನಾಮೆ ಮತ್ತು ರಾಹುಲ್ ಗಾಂಧಿ ವಿರುದ್ಧದ ಪ್ರಚಾರದಂತಹ ವಿಷಯಗಳನ್ನು ಚರ್ಚಿಸಲಾಗಿದೆ. ಈ ಪುಸ್ತಕ ರಾಹುಲ್ ಗಾಂಧಿಯವರ ಜೀವನ ಚರಿತ್ರೆಯಲ್ಲ, ಭಾರತವನ್ನು ಹಿಂದೂ ರಾಷ್ಟ್ರವಾಗಿ ಹೇಗೆ ಬಿಂಬಿಸಲಾಗುತ್ತಿದೆ ಎಂಬುದರ ವಿಮರ್ಶಾತ್ಮಕ ದಾಖಲೆ.

 ಭಾರತದಲ್ಲಿ, ವಿಶೇಷವಾಗಿ ಬಲಪಂಥೀಯ ಆಡಳಿತದ ಅಡಿಯಲ್ಲಿ ಪ್ರಸ್ತುತ ಮಾಧ್ಯಮದ ಸ್ಥಿತಿಯನ್ನು ನೀವು ಹೇಗೆ ಗ್ರಹಿಸುತ್ತೀರಿ? ಇದು ಪತ್ರಿಕೋದ್ಯಮವನ್ನು ಹೇಗೆ ಪ್ರಭಾವಿಸಿದೆ ಮತ್ತು ಮಾಧ್ಯಮವು ತನ್ನ ಪ್ರಾಥಮಿಕ ಕರ್ತವ್ಯವನ್ನೇ ಮರೆತು ಯಾವ ರೀತಿಯಲ್ಲಿ ರಾಜಿಯಾಗುವುದನ್ನು ನೀವು ನೋಡಿದ್ದೀರಿ?

►  ರವೀಶ್ ಕುಮಾರ್ ಅವರು ಚಲಾವಣೆಗೆ ತಂದ ‘ಗೋದಿ ಮೀಡಿಯಾ’ ಎಂಬ ಪದ ಇಂದಿನ ಮಾಧ್ಯಮ ಕ್ಷೇತ್ರದ ಸ್ಥಿತಿಯನ್ನು ಸಂಪೂರ್ಣವಾಗಿ ಹಿಡಿದಿಡುತ್ತದೆ. ಇದು ಸರಕಾರಕ್ಕೋಸ್ಕರ ಅತಿಯಾಗಿ ಕೆಲಸ ಮಾಡುತ್ತದೆ, ಆಗಾಗ ಸರಕಾರದ ನಿರೀಕ್ಷೆಗಳನ್ನು ಮೀರಿಸುತ್ತದೆ. ಸರಕಾರ ಒಂದು ವಿಷಯವನ್ನು ಬೆಂಬಲಿಸಲು ಕೇಳಿದರೆ, ಅವು ಸರಕಾರವನ್ನು ಹತ್ತು ವಿಷಯಗಳಲ್ಲಿ ಬೆಂಬಲಿಸುತ್ತವೆ ಮತ್ತು ಅನುಮೋದಿಸುತ್ತವೆ.

ಮಾಧ್ಯಮಗಳು ಸರಕಾರದ ಸುಳ್ಳನ್ನು ಸತ್ಯವನ್ನಾಗಿ ಪರಿವರ್ತಿಸುವ ಸಾಧನವಾಗಿ ಬದಲಾಗಿವೆ. ಉದಾಹರಣೆಗೆ, ರಾಹುಲ್ ಗಾಂಧಿಯವರು ‘ಯಹಾ ಸೇ ಆಲೂ ಡಾಲೋ, ಯಹಾ ಸೇ ಸೋನಾ ನಿಕ್ಲೇಗಾ (ಒಂದು ಕಡೆಯಿಂದ ಆಲೂಗಡ್ಡೆ ಹಾಕಿ ಮತ್ತು ಅದು ಇನ್ನೊಂದು ಕಡೆಯಿಂದ ಚಿನ್ನವಾಗಿ ಹೊರಬರುತ್ತದೆ) ಎಂದು ಹೇಳುವ ವೀಡಿಯೊವನ್ನು ಅವರ ವಿರುದ್ಧ ಅಪಪ್ರಚಾರಕ್ಕೆ ಜಾಣ್ಮೆಯಿಂದ ಬಳಸಲಾಗಿದೆ. ಅದು, ಅವರು ನರೇಂದ್ರ ಮೋದಿಯವರನ್ನು ಸೂಚಿಸಿ ಹೇಳಿದ್ದು ಎಂಬುದನ್ನು ಮರೆಮಾಚಲಾಗಿದೆ.

ಈ ಸರಕಾರದ ಅಡಿಯಲ್ಲಿ, ಭಾರತದಲ್ಲಿ ಮಾಧ್ಯಮ ತನ್ನ ನೈತಿಕ ತಳಹದಿಯನ್ನೇ ಕಳೆದುಕೊಂಡಿರುವುದು ಭವಿಷ್ಯದ ಬಗ್ಗೆ ಆತಂಕ ಹೆಚ್ಚುವುದಕ್ಕೆ ಕಾರಣವಾಗಿದೆ.

 ಮುಂಬರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ, ನಿರೂಪಣೆಗಳನ್ನು ರೂಪಿಸುವಲ್ಲಿ ಮಾಧ್ಯಮವು ತನ್ನ ಪಾತ್ರ ನಿರ್ವಹಿಸುವುದನ್ನು ನೀವು ಹೇಗೆ ನೋಡುತ್ತೀರಿ?

►  2024ರ ಚುನಾವಣೆಗಳು ಸಮೀಪಿಸುತ್ತಿರುವಾಗ, ಮಾಧ್ಯಮಗಳು, ವಿಶೇಷವಾಗಿ ನೆಟ್ವರ್ಕ್ 18, ರಾಹುಲ್ ಗಾಂಧಿಯವರ ಬಗ್ಗೆ ಭಯಪಡುತ್ತಿರುವಂತೆ ಕಾಣಿಸುತ್ತಿದೆ. ಮಾಧ್ಯಮ ಕ್ಷೇತ್ರ, ವಿಶೇಷವಾಗಿ ಹಿಂದಿ ಮಾಧ್ಯಮದಲ್ಲಿ, 2019ರ ಚುನಾವಣೆಗಳಲ್ಲಿನದೇ ಮಾದರಿಯನ್ನು ಪುನರಾವರ್ತಿಸುವ ಮೂಲಕ ಸತ್ಯದಿಂದ ದೂರ ಹೋಗಬಹುದು. ಹಿಂದಿ ಮಾಧ್ಯಮದ ಮೇಲೆ ಸರಕಾರದ ಗಮನ, ಹಿಂದಿ ಭಾಷಿಕ ಪ್ರದೇಶಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಉತ್ತರ-ದಕ್ಷಿಣವೆಂಬ ಒಡಕಿಗೆ ಕಾರಣವಾಗುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಏನು ಪ್ರಕಟವಾಗುತ್ತಿದೆ ಎಂಬುದರ ಬಗ್ಗೆ ಸರಕಾರ ತಲೆಕೆಡಿಸಿಕೊಂಡಿಲ್ಲ. ಅದರ ಕಾಳಜಿಯೇನಿದ್ದರೂ ಹಿಂದಿ ಮಾಧ್ಯಮದ ಬಗ್ಗೆ ಮಾತ್ರ.

ವಿಶ್ವಾಸಾರ್ಹತೆ ಮರಳಲು, ಪ್ರತಿಪಕ್ಷಗಳು ಮಾಧ್ಯಮ ರಹಿತ ವಿಧಾನವನ್ನು ಪರಿಗಣಿಸಬೇಕು. ಮಾಧ್ಯಮದ ಒಳಗೊಳ್ಳುವಿಕೆ ಇಲ್ಲದೆ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯನ್ನು ಹೇಗೆ ನಿರ್ವಹಿಸಿದರೊ ಹಾಗೆ ಪ್ರತಿಪಕ್ಷಗಳು ಮಾಧ್ಯಮಗಳನ್ನು ಬಿಟ್ಟು ಚುನಾವಣೆಯನ್ನು ಎದುರಿಸಬೇಕು. ಮಾಧ್ಯಮ ಹೆಚ್ಚು ಏಕಪಕ್ಷೀಯ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು 2024ರಲ್ಲಿ ಅದನ್ನು ಅವಲಂಬಿಸುವುದು ಪ್ರತಿಪಕ್ಷಗಳಿಗೆ ಹಾನಿ ಉಂಟುಮಾಡಬಹುದು.

 ಪತ್ರಕರ್ತರು ತಮ್ಮ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿಯೇ ತಮ್ಮ ಪ್ರಾಣ ಮತ್ತು ಉದ್ಯೋಗಗಳಿಗೆ ಸಂಚಕಾರ ಎದುರಿಸುತ್ತಿರುವ ಈ ಸಮಯದಲ್ಲಿ, ಯುವ ಮತ್ತು ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ನಿಮ್ಮ ಸಲಹೆ ಏನು?

►  ವೃತ್ತಿಗಾಗಿ ಮುಖ್ಯವಾಹಿನಿಯ ಮಾಧ್ಯಮವನ್ನಷ್ಟೇ ಅವಲಂಬಿಸಬೇಡಿ ಎಂಬುದು ಯುವ ಮತ್ತು ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ನನ್ನ ಸಲಹೆ. ಯೂಟ್ಯೂಬ್ನಂತಹ ಪರ್ಯಾಯ ವೇದಿಕೆಗಳನ್ನು ಕಂಡುಕೊಳ್ಳಲು ತಂತ್ರಜ್ಞಾನದೊಂದಿಗೆ ತಯಾರಾಗಿ. ಇಂದಿನ ಮಾಧ್ಯಮ ಪರಿಸರ ಗ್ಯಾಸ್ ಚೇಂಬರ್ನಂತೆ ಭಾಸವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ದೇಶದ ಮುಕ್ತ ಮನೋಭಾವದ ಉಸಿರುಗಟ್ಟಿಸುತ್ತಿದೆ. ಭಾರತದಲ್ಲಿ ಅಧಿಕಾರದಲ್ಲಿ ಬದಲಾವಣೆಯಾಗುವವರೆಗೆ ನೈಜ ಮತ್ತು ಮುಕ್ತ ಪತ್ರಿಕೋದ್ಯಮವು ಸವಾಲಾಗಿದೆ. ಈ ಸನ್ನಿವೇಶದಲ್ಲಿ ಯುವ ಪತ್ರಕರ್ತರು ರವೀಶ್ ಕುಮಾರ್ ಮತ್ತಿತರ ಪತ್ರಕರ್ತರ ಅನುಭವಗಳಿಂದ ಕಲಿಯುವ ಮೂಲಕ, ಸಂಭವನೀಯ ನೋವು ಮತ್ತು ಆಘಾತಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ದಯಾಶಂಕರ್ ಮಿಶ್ರಾ

contributor

Similar News

ಭಾವ - ವಿಕಲ್ಪ
ಕಥೆಗಾರ