ಆರೋಗ್ಯ ಸೇವೆಗಳ ಅನಾರೋಗ್ಯ ಉಲ್ಬಣ
ಮಂಗಳೂರಿನ ಸ್ಪಂದನಾ ಸೆಂಟರ್ ಫಾರ್ ಮೆಟಬಾಲಿಕ್ ಮೆಡಿಸಿನ್ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಹಾಗೂ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಿಂದ ೧೯೯೨ರಲ್ಲಿ ಸ್ನಾತಕೋತ್ತರ (ಎಂ.ಡಿ.) ಪದವಿ ಪಡೆದರು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರಲ್ಲಿ ಒಬ್ಬರಾದ ಬಿ.ವಿ.ಕಕ್ಕಿಲ್ಲಾಯ ಅವರ ಪುತ್ರರಾಗಿರುವ ಶ್ರೀನಿವಾಸ ಅವರು ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ. ಕಕ್ಕಿಲ್ಲಾಯ ಕೃತಿಯನ್ನು ಸಂಪಾದಿಸಿದ್ದಾರೆ. ಕೊರೋನಾ ಸೋಂಕಿನ ಕಾಲದಲ್ಲಿ ಸರಕಾರದ ಅವೈಜ್ಞಾನಿಕ ಕ್ರಮಗಳನ್ನು ದಿಟ್ಟವಾಗಿ ವಿರೋಧಿಸಿ ವೈಜ್ಞಾನಿಕ ಜಾಗೃತಿ ಬೆಳೆಸುವಲ್ಲಿ ಅವರ ಬರಹಗಳ ಪಾತ್ರ ದೊಡ್ಡದು. ‘ಫ್ಲೂ’, ‘ಕೊರೋನಾ ಹೆದರದಿರೋಣ’, ‘ಆರೋಗ್ಯ ಆಶಯ’ ಅವರ ಪ್ರಮುಖ ಕೃತಿಗಳು.
ಆರು ವರ್ಷಗಳಾದರೂ ಅಲ್ಲೇ ಉಳಿದ ಆರೋಗ್ಯ ನೀತಿ, ಆಯುಸ್ಸನ್ನು ವೃದ್ಧಿಸದೆ, ಆರೋಗ್ಯವನ್ನೂ ಕಾಯದೆ ಕೋಟಿಗಳ ಲೆಕ್ಕವಷ್ಟೇ ಆಗಿರುವ ಆಯುಷ್ಮಾನ್ ಭಾರತ್, ಏಳೆಂಟು ವರ್ಷಗಳಲ್ಲಿ ಸಾಮಾನ್ಯ ಔಷಧಗಳ ಬೆಲೆ ನಾಲ್ಕೈದು ಪಟ್ಟು ಹೆಚ್ಚಿಸಿದ್ದಕ್ಕೆ ಮೌನವಿದ್ದು, ಪ್ರತಿನಿತ್ಯ ಸುದ್ದಿ ಮಾಡುವ ಜನೌಷಧಿ, ಫೋಟೊ ಸಹಿತ ಲಸಿಕೆ ಹಾಕಿ, ಬೃಹತ್ ಫಲಕಗಳನ್ನು ಎಲ್ಲೆಡೆ ಏರಿಸಿ ಆದ ಮೇಲೆ ಗುಟ್ಟಾಗಿಯೇ ಉಳಿದಿರುವ ಅದರ ಒಳಿತು-ಕೆಡುಕುಗಳ ಲೆಕ್ಕ, ತಿಂಗಳಿಗೊಂದರಂತೆ ರಾಜ್ಯಾದೇಶ ಪ್ರಕಟಿಸಿ, ವಾರದೊಳಗೆ ಅವನ್ನು ಹಿಂಪಡೆಯುತ್ತಲೇ ಇರುವ ರಾಷ್ಟ್ರೀಯ ವೈದ್ಯಕೀಯ ಆಯೋಗ, ಆಧುನಿಕ ವೈದ್ಯ ವಿಜ್ಞಾನದಲ್ಲಿ ಆಯುರ್ವೇದ-ಯೋಗ ಕಲಬೆರಕೆ ಮಾಡಿ ಹಾಳುಗೆಡಹುವ ಶಿಕ್ಷಣ ನೀತಿ, ಆಧುನಿಕ ವೈದ್ಯಕೀಯ ಪಠ್ಯವನ್ನು ಹಿಂದಿ ಮತ್ತಿತರ ಭಾಷೆಗಳಲ್ಲಿ ತರಹೊರಟು ಅಲ್ಲಿಗೇ ಮುಗ್ಗರಿಸಿದ ರಾಜಕೀಯ ನಾಟಕ, ಪ್ರವೇಶ ಪರೀಕ್ಷೆಯ ಅರ್ಹತಾ ಅಂಕಗಳನ್ನು ಸೊನ್ನೆಗೆ ಇಳಿಸುವಂತೆ ಒತ್ತಾಯಿಸಿ ತೀರಾ ಅನರ್ಹರಿಗೂ ಸೀಟು ಮಾರುವುದನ್ನು ಸ್ವಾಗತಿಸಿ ಚಪ್ಪಾಳೆ ತಟ್ಟುವ ವೈದ್ಯಕೀಯ ಸಂಘಗಳು, ನ್ಯಾಯಾಲಯಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಪ್ರಚೋದಿಸುವ ಆರೋಗ್ಯ ಸೇವೆಗಳ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆ, ಆಳುವವರನ್ನು ಭಜಿಸುವ ಭರಾಟೆಯಲ್ಲಿ ಇವು ಯಾವುದನ್ನೂ ನೋಡಲು, ಬರೆಯಲು, ಹೇಳಲು ಮನಸ್ಸು, ಧೈರ್ಯ, ಪುರುಸೊತ್ತಿಲ್ಲದ ಭಟ್ಟಂಗಿ ಮಾಧ್ಯಮಗಳು - ಇದು ಭಾರತದ ಇಂದಿನ ಆರೋಗ್ಯದ ಸ್ಥಿತಿ.
ಕೋವಿಡ್ ನಿಯಂತ್ರಣದ ನೆಪದಲ್ಲಿ ಜಗತ್ತಿನ ಹಲವು ದೇಶಗಳು ಜನರನ್ನು ಹೆದರಿಸಿ, ಅವರ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿ, ಅವರ ನಿತ್ಯಜೀವನದ ಮೇಲೆ ನಿಗಾ ಇರಿಸುವ ವ್ಯವಸ್ಥೆಗಳನ್ನು ಮಾಡಿದವು, ಜನರು ಭಯಭೀತರಾಗಿ ಇವೆಲ್ಲವನ್ನೂ ಪ್ರತಿರೋಧವಿಲ್ಲದೆ ಪಾಲಿಸಿದರು. ಇಡೀ ಭಾರತದಲ್ಲಿ ಕೇವಲ 560ರಷ್ಟು ಕೋವಿಡ್ ಪ್ರಕರಣಗಳಿದ್ದಾಗ 138 ಕೋಟಿ ದೇಶವಾಸಿಗಳ ಸಂವಿಧಾನದತ್ತ ಹಕ್ಕುಗಳನ್ನು ಹಾಗೂ ಸ್ವಾತಂತ್ರ್ಯಗಳನ್ನು ರಾತ್ರೋರಾತ್ರಿ ನಿರ್ಬಂಧಿಸಿ ಯಾರೂ ತಮ್ಮ ಮನೆಗಳಿಂದ ಹೊರಬಾರದಂತೆ ದಿಗ್ಬಂಧನ ವಿಧಿಸಲಾಯಿತು. ಅಧಿಕೃತವಾಗಿ ಸೂಚಿಸಲಾಗಿದ್ದ ಚಿಕಿತ್ಸಾಕ್ರಮಗಳೂ ಅವೈಜ್ಞಾನಿಕವಾಗಿದ್ದವು.
ಈಗ ಕೇಂದ್ರದಲ್ಲಿರುವ ಸರಕಾರವು ಮೊದಲಿಗೆ ಅಧಿಕಾರ ವಹಿಸಿ ಏಳು ತಿಂಗಳಾಗುತ್ತಲೇ ಹೊಸ ಆರೋಗ್ಯ ನೀತಿಯ ಕರಡನ್ನು ಪ್ರಕಟಿಸಿತ್ತು, ಮೂರು ವರ್ಷ ಕಾದು 2017ರಲ್ಲಿ ಅಂತಿಮ ರೂಪವನ್ನು ಪ್ರಕಟಿಸಿತ್ತು. ಬರುವ 2025ರ ವೇಳೆಗೆ ಆರೋಗ್ಯ ಕ್ಷೇತ್ರದ ಅನುದಾನವನ್ನು ರಾಷ್ಟ್ರೀಯ ಉತ್ಪನ್ನದ ಶೇ. 2.5ಕ್ಕೆ ಏರಿಸುವ ಭರವಸೆ ಅದರಲ್ಲಿತ್ತು. ಜಗತ್ತಿನ ಅನೇಕ ದೇಶಗಳಲ್ಲಿ, ಅದರಲೂ ಶಿಕ್ಷಣ ಮತ್ತು ಆರೋಗ್ಯರಕ್ಷಣೆಗಳಿಗೆ ಆದ್ಯತೆ ನೀಡುವ ದೇಶಗಳಲ್ಲಿ, ಆರೋಗ್ಯ ಸೇವೆಗಳಿಗಾಗಿ ಜಿಡಿಪಿಯ ಕನಿಷ್ಠ ಶೇ.6-12ರಷ್ಟನ್ನು ವ್ಯಯಿಸಲಾಗುತ್ತಿರುವಲ್ಲಿ ಈ ಶೇ.2.5 ಅಗತ್ಯದ ಅರ್ಧಕ್ಕಿಂತಲೂ ಕಡಿಮೆಯೇ ಆಗಿದೆ. ಅದನ್ನೂ 2025ಕ್ಕೆ ವಾಸ್ತವದಲ್ಲಿ ಪೂರೈಸುವ ಖಾತರಿಯಿಲ್ಲ. ಕೋವಿಡ್ ಕಾಲದ 2021-22ರ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರದ ಅನುದಾನವನ್ನು ಶೇ.137ರಷ್ಟು ಹೆಚ್ಚಿಸಿ ಶತಮಾನದಲ್ಲೇ ಅತ್ಯಧಿಕ ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ಕೊಡಲಾಗಿದೆ ಎಂದು ವಿತ್ತ ಸಚಿವರು ಹೇಳಿಕೊಂಡಿದ್ದರು. ಆದರೆ ಆಯವ್ಯಯ ಪತ್ರವನ್ನು ಕೆದಕಿದಾಗ, ಆರೋಗ್ಯದ ಜೊತೆಗೆ ನೀರು, ನೈರ್ಮಲ್ಯ ಹಾಗೂ ಪೌಷ್ಟಿಕ ಆಹಾರಗಳ ಅನುದಾನವೆಲ್ಲವನ್ನೂ ಸೇರಿಸಿ, ಜೊತೆಗೆ ಕೋವಿಡ್ ಲಸಿಕೆಗಾಗಿ ಕೊಟ್ಟ ರೂ. 30 ಸಾವಿರ ಕೋಟಿಯನ್ನೂ ಸೇರಿಸಿ ಹೀಗೆ ಶೇ.137 ಏರಿಕೆಯಾಗಿತ್ತೆನ್ನುವುದು ತಿಳಿದಿತ್ತು!
ಆಯವ್ಯಯದಲ್ಲಿ ಹೀಗೆಲ್ಲ ಮಾಡಿದರೆ ವಾಸ್ತವ ಬದಲಾಗುತ್ತದೆಯೇ? ಭಾರತದಲ್ಲಿ ವರ್ಷದೊಳಗಿನ ಶಿಶುಗಳ ಮರಣ ದರವು ಸಾವಿರಕ್ಕೆ 26 ಇದ್ದರೆ, ನೆರೆಯ ಬಾಂಗ್ಲಾದಲ್ಲಿ 22 ಇದೆ, ಶ್ರೀಲಂಕಾದಲ್ಲಿ ಕೇವಲ 6 ಮಾತ್ರವಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಭಾರತದ ಸ್ಥಾನವು ಕೆಳಗಿಳಿಯುತ್ತಲೇ ಸಾಗಿದ್ದು, 2023ರಲ್ಲಿ 191 ದೇಶಗಳಲ್ಲಿ 132ಕ್ಕೆ ಇಳಿದಿದೆ, ಶ್ರೀಲಂಕಾ ಹಾಗೂ ಬಾಂಗ್ಲಾಗಳು ಸುಧಾರಿಸುತ್ತಾ ನಮ್ಮಿಂದ ಮೇಲೇರಿವೆ. ವೈದ್ಯರು ಮತ್ತು ಆರೋಗ್ಯಕರ್ಮಿಗಳ ಲಭ್ಯತೆಯಲ್ಲೂ ನಾವು ನೆರೆಯ ಚೀನಾ, ನೇಪಾಳ, ಶ್ರೀಲಂಕಾಗಳಿಗಿಂತ ಕೆಳಗಿದ್ದೇವೆ. ನಮ್ಮಲ್ಲಿ ಶೇ. 65ರಷ್ಟು ಆರೋಗ್ಯ ವೆಚ್ಚವು ವೈಯಕ್ತಿಕ ಕಿಸೆಗಳಿಂದಲೇ ಖರ್ಚಾಗುತ್ತಿದ್ದರೆ ಚೀನಾ, ಶ್ರೀಲಂಕಾ, ನೇಪಾಳಗಳಲ್ಲಿ ಇದು ಗಣನೀಯವಾಗಿ ಕಡಿಮೆಯಿದೆ. ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಸರಕಾರಿ ಆರೋಗ್ಯ ಸೇವೆಗಳಲ್ಲಿ, ಅದರಲ್ಲೂ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ, ವೈದ್ಯರು ಹಾಗೂ ಇತರ ಸಿಬ್ಬಂದಿಯ ಕೊರತೆಯು ಶೇ.10-40ರಷ್ಟಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಇದೇ ಕೆಲದಿನಗಳ ಹಿಂದೆ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆಯನ್ನು ಆರಂಭಿಸಿದೆ.
ಸಾರ್ವಜನಿಕ ಆರೋಗ್ಯ ಸೇವೆಗಳು ಹೀಗೆ ಕೆಡಿಸುತ್ತಾ, ಆರೋಗ್ಯಕ್ಕೆ ಅನುದಾನದ ಏರಿಕೆಯನ್ನು ಕಾಗದದ ಹಾಳೆಗಳಲ್ಲೇ ಉಳಿಸುತ್ತಾ ಆರೋಗ್ಯ ಸೇವೆಗಳನ್ನು ಖಾಸಗಿ ರಂಗಕ್ಕೆ ಹೊರಗುತ್ತಿಗೆಗೆ ಕೊಡುವ ಯೋಜನೆಗಳನ್ನು ಬೆಳೆಸುತ್ತಾ ಹೋಗಲಾಗುತ್ತಿದೆ. ಆಯುಷ್ಮಾನ್ ಭಾರತ್ ಹೆಸರಲ್ಲಿ ವೈಯಕ್ತಿಕ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಬೊಕ್ಕಸದ ಹಣ ನೀಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತೊಡಗಿ ಜಿಲ್ಲಾಸ್ಪತ್ರೆಗಳನ್ನೂ, ವಿಶೇಷ ಆಸ್ಪತ್ರೆಗಳನ್ನೂ ಖಾಸಗಿಯವರಿಗೆ ವಹಿಸುವುದು ಈ ಸರಕಾರದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿಯೇ ಇದೆ. ಅದನ್ನು ಭಾರೀ ಪ್ರಚಾರದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಹೀಗೆ ಖಾಸಗಿಯವರಿಗೆ ಸುರಿಯುತ್ತಿರುವ ಹಣದಲ್ಲಿ ಅನೇಕ ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸಲು ಕ್ರಮ ಕೈಗೊಂಡರೆ ಇಡೀ ಸಮಾಜಕ್ಕೆ ಒಳಿತಾಗಬಹುದೆನ್ನುವ ಸಾಮಾನ್ಯ ಜ್ಞಾನ ಯಾರಿಗೂ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಕಳೆದ ಏಳೆಂಟು ವರ್ಷಗಳಿಂದಲೂ ಆರೋಗ್ಯ ಉಪಕೇಂದ್ರಗಳನ್ನು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸುವ ಬಗ್ಗೆ ಪ್ರತೀ ಆಯವ್ಯಯದಲ್ಲೂ ಹೇಳಲಾಗುತ್ತಿದ್ದರೂ, ಆರೋಗ್ಯವೂ ಇಲ್ಲ, ಕ್ಷೇಮವೂ ಇಲ್ಲ ಎಂಬಂತಾಗಿದೆ, ಬದಲಿಗೆ, ಆ ನೆಪದಲ್ಲಿ ಆಯುರ್ವೇದ ಮತ್ತು ಯೋಗಪಟುಗಳನ್ನು ಈ ಕೇಂದ್ರಗಳಲ್ಲಿ ನಿಯುಕ್ತಿಗೊಳಿಸುವ ಯೋಜನೆಯಂತೆ ಭಾಸವಾಗುತ್ತಿದೆ. ಈಗ ಹೆಲ್ತ್ ಕಿಯೋಸ್ಕ್ ಎಂಬಿತ್ಯಾದಿ ತೆರೆಯುವ ಯೋಜನೆಗಳು ರಕ್ತ ಪರೀಕ್ಷೆ ಇತ್ಯಾದಿ ಆರೋಗ್ಯ ತಪಾಸಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಯೋಜನೆಗಳಂತೆ ಕಾಣುತ್ತಿವೆ. ಕಾರ್ಪೊರೇಟ್ ಆಸ್ಪತ್ರೆಗಳ ಸಹಯೋಗದಲ್ಲಿ ಟೆಲಿಮೆಡಿಸಿನ್ ಯೋಜನೆಗಳು ಕೂಡ ಈ ಖಾಸಗಿ ಕಂಪೆನಿಗಳನ್ನು ಸಾಕುವ ಮತ್ತು ಅವನ್ನು ಅವಲಂಬಿಸಿಕೊಂಡು ರೋಗಿಗಳನ್ನು ಅವುಗಳಲ್ಲಿಗೇ ರವಾನಿಸುವ ಯೋಜನೆಗಳಾಗಲಿವೆ. ಈ ಎಲ್ಲಾ ಯೋಜನೆಗಳಿಂದಾಗಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಶಾಶ್ವತ ನೇಮಕಾತಿಯು ಇನ್ನಷ್ಟು ಕುಂಠಿತಗೊಳ್ಳಲಿದೆ.
ಕಳೆದ ಏಳೆಂಟು ವರ್ಷಗಳಲ್ಲಿ ಎಲ್ಲಾ ಔಷಧಗಳ ದರಗಳು ನಾಲ್ಕೈದು ಪಟ್ಟು ಏರಿಕೆಯಾಗಿವೆ, ಅವುಗಳ ಮೇಲಿನ ತೆರಿಗೆಗಳನ್ನೂ ಏರಿಸಲಾಗಿದೆ. ಅತ್ಯಗತ್ಯ ಔಷಧಗಳೆಂಬ ಪಟ್ಟಿಯಲ್ಲಿರುವ ಹಲವು ಔಷಧಗಳು ಲಾಭವಿಲ್ಲದ ಕಾರಣಕ್ಕೆ ಮಾರುಕಟ್ಟೆಯಿಂದ ಮಾಯವಾಗಿವೆ, ಕೆಲವು ಔಷಧಗಳ ಬಗ್ಗೆ ಅಪಪ್ರಚಾರ ನಡೆಸುತ್ತಾ (ಉದಾ: ರಾನಿಟಿಡಿನ್) ಅವಕ್ಕಿಂತ ಹಲವು ಪಟ್ಟು ಹೆಚ್ಚು ಬೆಲೆಯ ಔಷಧಗಳನ್ನು ಮುಂದೊತ್ತಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯು ಮುಂದುವರಿದೇ ಇದೆ, ಅಂತಲ್ಲಿ ಯಾವ ಉಪಯೋಗಕ್ಕೂ ಬಾರದ ಆಯುಷ್ ‘ಕಿಟ್ಟು’ಗಳನ್ನು, ಬೇರು-ಕಷಾಯಗಳನ್ನು ತುಂಬಿಸಿಡಲಾಗುತ್ತಿದೆ.
ಔಷಧ ತಯಾರಕರ ಮೇಲೆ ಯಾವುದೇ ನಿಯಂತ್ರಣವೇ ಇಲ್ಲವೇನೋ ಎಂಬಂತಾಗಿದ್ದು, ಕಳೆದೊಂದು ವರ್ಷದಲ್ಲೇ ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್ ಮತ್ತಿತರ ಔಷಧಗಳಲ್ಲಿ ವಿಷಯುಕ್ತ ರಾಸಾಯನಿಕಗಳಿದ್ದುದರಿಂದ ಜೀವಹಾನಿಯಾಗಿರುವ ಬಗ್ಗೆ ಅನೇಕ ವರದಿಗಳಾಗಿ, ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸುವಂತಾಗಿದೆ. ಮೊದಲಲ್ಲಿ ನಮ್ಮ ಸರಕಾರ ಮತ್ತದರ ಕೂಗುಮಾರಿ ಬೆಂಬಲಿಗರು ಇದನ್ನು ನಿರಾಕರಿಸುವ ಪ್ರಯತ್ನ ಮಾಡಿದರಾದರೂ, ಬಳಿಕ ತನಿಖೆ ನಡೆಸಲು ಹೊರಟು ತೇಪೆ ಹಚ್ಚುವ ಪ್ರಯತ್ನಗಳಾಗಿವೆ.
ದಶಕದ ಹಿಂದೆ ಪ್ರತಿಜೈವಿಕಗಳ ದುರ್ಬಳಕೆಯನ್ನು ತಡೆದು ನಿಯಂತ್ರಿಸುವ ಉದ್ದೇಶದಿಂದ ಶೆಡ್ಯೂಲ್ ಎಚ್1 ಎಂಬ ನಿಯಮವನ್ನು ತರಲಾಗಿತ್ತು, ಆದರೆ ಅದೇನೆಂದು ಯಾರಿಗೂ ಅರಿವಿಲ್ಲದಂತೆ ಆಗಿಬಿಟ್ಟಿದೆ; ದೇಶದಲ್ಲಿ ಪ್ರತಿಜೈವಿಕಗಳ ದುರ್ಬಳಕೆ ಅವ್ಯಾಹತವಾಗಿ ಮುಂದುವರಿದಿದ್ದು, ಹಲವು ಸೂಕ್ಷ್ಮಾಣುಗಳು ಯಾವುದೇ ಪ್ರತಿಜೈವಿಕಕ್ಕೂ ಬಗ್ಗದಂತೆ ಆಗಿ, ಸೋಂಕುಗಳ ಚಿಕಿತ್ಸೆ ಅಸಾಧ್ಯವಾಗುವ ಅಪಾಯ ಎದುರಾಗಿದೆ. ಈ ಬಗ್ಗೆ ಕೇವಲ ಹೇಳಿಕೆಗಳನ್ನಷ್ಟೇ ಹೊರಡಿಸುವುದನ್ನು ಬಿಟ್ಟರೆ ಬೇರೇನೂ ಆಗುತ್ತಿಲ್ಲ. ಅವೈಜ್ಞಾನಿಕವಾಗಿ, ಅನಗತ್ಯವಾಗಿ ಬಗೆಬಗೆಯ ಪ್ರತಿಜೈವಿಕಗಳನ್ನು ಬೆರಕೆ ಮಾಡಿರುವ ಮಾತ್ರೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇತ್ತೀಚಿನ ವರದಿಯಂತೆ ಶೇ. 70ರಷ್ಟು ಪ್ರತಿಜೈವಿಕಗಳ ಮಾತ್ರೆಗಳು ಇಂಥವೇ ಆಗಿವೆ.
ಔಷಧ ತಯಾರಕರ ಮೇಲೆ ಯಾವುದೇ ನಿಯಂತ್ರಣವೇ ಇಲ್ಲವೇನೋ ಎಂಬಂತಾಗಿದ್ದು, ಕಳೆದೊಂದು ವರ್ಷದಲ್ಲೇ ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್ ಮತ್ತಿತರ ಔಷಧಗಳಲ್ಲಿ ವಿಷಯುಕ್ತ ರಾಸಾಯನಿಕಗಳಿದ್ದುದರಿಂದ ಜೀವಹಾನಿಯಾಗಿರುವ ಬಗ್ಗೆ ಅನೇಕ ವರದಿಗಳಾಗಿ, ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸುವಂತಾಗಿದೆ. ಮೊದಲಲ್ಲಿ ನಮ್ಮ ಸರಕಾರ ಮತ್ತದರ ಕೂಗುಮಾರಿ ಬೆಂಬಲಿಗರು ಇದನ್ನು ನಿರಾಕರಿಸುವ ಪ್ರಯತ್ನ ಮಾಡಿದರಾದರೂ, ಬಳಿಕ ತನಿಖೆ ನಡೆಸಲು ಹೊರಟು ತೇಪೆ ಹಚ್ಚುವ ಪ್ರಯತ್ನಗಳಾಗಿವೆ.
ಇವುಗಳೆಲ್ಲ ನಡೆಯುತ್ತಿರುವಾಗಲೇ, ದೇಶದ ವೈದ್ಯರೆಲ್ಲರೂ ತಾವು ಬರೆಯುವ ಔಷಧ ಚೀಟಿಗಳಲ್ಲಿ ಅವುಗಳ ಜೆನೆರಿಕ್ ಹೆಸರುಗಳನ್ನೇ ಬರೆಯಬೇಕು ಎಂಬ ಆದೇಶವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಹೊರಡಿಸಲಾಯಿತು, ಔಷಧಗಳನ್ನು ನಿರ್ದಿಷ್ಟ ಬ್ರಾಂಡ್ಗಳ ಹೆಸರಲ್ಲಿ ಬರೆಯುವ ವೈದ್ಯರೆಲ್ಲರೂ ಕಂಪೆನಿಗಳ ಪ್ರಭಾವಕ್ಕೆ ಸಿಲುಕಿರುವವರು ಎಂಬರ್ಥದಲ್ಲಿ ಎಲ್ಲೆಡೆ ಕೂಗೆಬ್ಬಿಸಲಾಯಿತು. ಹಿಂದಿನ ಸರಕಾರವಿದ್ದಾಗ 2008ರಲ್ಲಿ ಆರಂಭಿಸಿದ್ದ ಜನೌಷಧಿ ಯೋಜನೆಯನ್ನು ಈಗಿನ ಪ್ರಧಾನಿ ಹೆಸರಲ್ಲೇ ನಡೆಸಲಾಗುತ್ತಿದ್ದರೂ, ಒಂದೇ ಔಷಧವು ಒಂದೊಂದು ಜನೌಷಧಿ ಅಂಗಡಿಯಲ್ಲಿ ಒಂದೊಂದು ಕಂಪೆನಿಯದ್ದಾಗಿ, ಒಂದೊಂದು ದರದ್ದಾಗಿ ಹಲವು ಸಂಶಯಗಳು ಉತ್ತರವಿಲ್ಲದವಾಗಿರುವಾಗ, ಈ ಆದೇಶವು ಅಪ್ರಾಯೋಗಿಕವೆನಿಸಲ್ಪಟ್ಟು ಎರಡೇ ವಾರಗಳಲ್ಲಿ ಅದನ್ನು ಹಿಂಪಡೆಯಬೇಕಾಯಿತು. ಆದರೂ, ಭಾರತೀಯರಿಗೆ ಅತಿ ಕಡಿಮೆ ದರದಲ್ಲಿ ಅತ್ಯಾಧುನಿಕ ಔಷಧಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಒದಗಿಸಲೆಂದು ನೆಹರೂ ಆಡಳಿತವು ಸ್ಥಾಪಿಸಿದ್ದ ಐಡಿಪಿಎಲ್, ಹಿಂದೂಸ್ತಾನ್ ಆಂಟಿಬಯಾಟಿಕ್ಸ್ ಮುಂತಾದ ಸಂಸ್ಥೆಗಳನ್ನು ನಿರ್ಜೀವಗೊಳಿಸಿ, ಆರೋಗ್ಯ ಸೇವೆಗಳನ್ನೂ ಖಾಸಗಿ ನಿಯಂತ್ರಣಕ್ಕೊಪ್ಪಿಸಿ, ಆರೋಗ್ಯ ಸೇವೆಗಳು ಮತ್ತು ಔಷಧಗಳು ದುಬಾರಿಯಾಗಿರುವಾಗ ಅದರ ಹೊಣೆಯನ್ನೂ, ಅಪವಾದವನ್ನೂ ಆಧುನಿಕ ವೈದ್ಯರ ಮೇಲೇರಿಸುವ ತಂತ್ರಗಳು ಎಗ್ಗಿಲ್ಲದೆ ಮುಂದುವರಿದಿವೆ.
ಸ್ನಾತಕೋತ್ತರ ಪ್ರವೇಶಕ್ಕೆ ಹೊಸ ನೀತಿಯಡಿ ನೆಕ್ಸ್ಟ್ ಪರೀಕ್ಷೆ ನಡೆಸುವ ಬಗ್ಗೆ, ವೈದ್ಯರನ್ನು ನಿಯಂತ್ರಿಸುವ ವೃತ್ತಿ ಸಂಹಿತೆಯ ಬಗ್ಗೆ, ವೈದ್ಯರ ನೋಂದಣಿಯ ಬಗ್ಗೆ, ವೈದ್ಯಕೀಯ ಶಿಕ್ಷಣದ ಪಠ್ಯದ ಬಗ್ಗೆ ರಾಷ್ಟ್ರೀಯ ಆಯೋಗವು ಒಂದರ ಹಿಂದೆ ಒಂದರಂತೆ ಹೊರಡಿಸಿದ್ದ ರಾಜ್ಯಾದೇಶಗಳೆಲ್ಲವನ್ನೂ ಹಾಗೆಯೇ ಎರಡು ವಾರಗಳೊಳಗೆ ಹಿಂಪಡೆಯಬೇಕಾಯಿತು. ಆಧುನಿಕ ವೈದ್ಯವಿಜ್ಞಾನದೊಳಗೆ ಆಯುರ್ವೇದ, ಯೋಗಗಳನ್ನು ತುರುಕಿಸುವುದಕ್ಕೆ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ಕಾಯಬೇಕಾದ ಎನ್ಎಂಸಿಯಿಂದಲೇ ಚರಕ ಶಪಥ ಬೋಧನೆ, ಗಿಡಮೂಲಿಕೆ ನೆಡುವಿಕೆ, ಯೋಗ ದಿನಾಚರಣೆ, ಪಠ್ಯದಲ್ಲೂ ಆಯುರ್ವೇದ, ಯೋಗಾಭ್ಯಾಸಗಳ ಸೇರ್ಪಡೆ ಇತ್ಯಾದಿ ಪ್ರಯತ್ನಗಳಾದವು, ಮತೀಯವಾದಿ ರಂಗಿನ ಆಧುನಿಕ ವೈದ್ಯರ ಸಂಘಟನೆಯೊಂದು ಇದಕ್ಕೆ ಬೆಂಬಲವನ್ನೂ ನೀಡಿ, ಅವು ತನ್ನವೇ ಸಲಹೆಗಳು ಎಂದು ಘೋಷಿಸಿಕೊಂಡದ್ದೂ ಆಯಿತು. ಆದರೆ ಕೆಲವೇ ಕೆಲವರ ವಿರೋಧದಿಂದಾಗಿ ಈ ಪ್ರಯತ್ನಗಳೂ ಸದ್ಯಕ್ಕೆ ನನೆಗುದಿಗೆ ಬೀಳುವಂತಾಗಿದೆ. ಆಧುನಿಕ ವೈದ್ಯಕೀಯ ಶಿಕ್ಷಣದ ಪಠ್ಯ ಪುಸ್ತಕಗಳನ್ನು ಹಿಂದಿ ಮತ್ತಿತರ ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವ ದೊಡ್ಡ ರಾಜಕೀಯ ಪ್ರೇರಿತ ಪ್ರಹಸನವೂ ನಡೆದು, ಎರಡೇ ವಾರಗಳಲ್ಲಿ ನಗೆಪಾಟಲಾಗಿ ಕಮರಿ ಹೋಯಿತು. ಹಿಂದೆ ವೈದ್ಯರಿಂದಲೇ ಚುನಾಯಿತವಾಗಿ ವೈದ್ಯರೇ ಇರುತ್ತಿದ್ದ ಎಂಸಿಐಯನ್ನು ತೆಗೆದು ಸರಕಾರದ ಮುಷ್ಟಿಯೊಳಗೇ ಇರುವ ಹೊಸ
ಎನ್ಎಂಸಿಯನ್ನು ರಚಿಸುವ ಪ್ರಸ್ತಾವವು 2016ರಲ್ಲಿ ಬಂದಾಗಲೇ ಈಗ ಬಂದಿರುವ ಇಂತಹ ಸ್ಥಿತಿಯುಂಟಾಗಬಹುದು ಎಂದು ನಾವು ಕೆಲವರು ಎಚ್ಚರಿಸಿದ್ದೆವು. ಆಗ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಒಂದಷ್ಟು ತಿಂಗಳು ತೋರಿಕೆಯ ಪ್ರತಿಭಟನೆಗಳನ್ನು ನಡೆಸಿತ್ತು. ಕೊನೆಗೆ ಮಸೂದೆಯು ಸದನಗಳಲ್ಲಿ ಬಂದಾಗ ತೆಪ್ಪಗಿದ್ದು ಅದರ ಜಾರಿಗೆ ಅನುಕೂಲ ಮಾಡಿಕೊಟ್ಟಿತು. ಈಗಲೂ ಎನ್ಎಂಸಿ ಹಾಗೂ ಸರಕಾರದ ನಡೆಗಳ ಬಗ್ಗೆ ಬಹುಪಾಲು ಮೌನವನ್ನೇ ಆಚರಿಸುತ್ತಿರುವ ಐಎಂಎ, ಕೆಲವಾರಗಳ ಹಿಂದೆ ಸ್ನಾತಕೋತ್ತರ ನೀಟ್ ಪ್ರವೇಶ ಪರೀಕ್ಷೆಗಳ ಅರ್ಹತಾ ಅಂಕಗಳನ್ನು ಸೊನ್ನೆಗೆ ಇಳಿಸಬೇಕೆಂಬ ಬೇಡಿಕೆಯಿಟ್ಟಿತು, ಸರಕಾರ ಅದನ್ನು ಅನುಮೋದಿಸಿತು, ಅದಕ್ಕೆ ಐಎಂಎಯೂ (ಕರ್ನಾಟಕ ಘಟಕ ಹೊರತು ಪಡಿಸಿ), ಕಿರಿಯ ವೈದ್ಯರ ಸಂಘಟನೆಗಳೂ ಸಂಭ್ರಮಾಚರಣೆ ಮಾಡಿದವು! ವೈದ್ಯಕೀಯ ಶಿಕ್ಷಣವನ್ನು ಖಾಸಗಿಯವರ ಅಡಿಗೊಪ್ಪಿಸಿ, ಶುಲ್ಕವನ್ನು ಕೋಟಿಗಟ್ಟಲೆಗೇರಿಸಿ, ಪ್ರತಿಭಾವಂತರಿಗೆ ಅವಕಾಶ ನಿರಾಕರಿಸಿ, ನೀಟ್ ಪರೀಕ್ಷೆಯಲ್ಲಿ ಸೊನ್ನೆಗಿಂತಲೂ ಕಡಿಮೆ ಅಂಕ ಪಡೆದಿದ್ದರೂ ಧನಿಕರ ಮಕ್ಕಳಿಗೆ ಸೀಟು ಕೊಡಿಸಲು ಬೇಡಿಕೆಯಿಡುವ ವೈದ್ಯಕೀಯ ಸಂಘಟನೆಗಳು, ಅದಕ್ಕೆ ಒಪ್ಪುವ ಸರಕಾರ, ಅದಕ್ಕೆ ಸಂಭ್ರಮಾಚರಣೆ, ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಎಲ್ಲ ಬಗೆಯ ಕಲಬೆರಕೆ, ಕಳಪೆ ಗುಣಮಟ್ಟ ಎಂಬ ಸ್ಥಿತಿಯಿದೆ ಎಂದರೆ ಈ ದೇಶದ ಆರೋಗ್ಯ ರಕ್ಷಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತದೆ.
ಕೋವಿಡ್ ನಿಯಂತ್ರಣದ ನೆಪದಲ್ಲಿ ಜಗತ್ತಿನ ಹಲವು ದೇಶಗಳು ಜನರನ್ನು ಹೆದರಿಸಿ, ಅವರ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿ, ಅವರ ನಿತ್ಯಜೀವನದ ಮೇಲೆ ನಿಗಾ ಇರಿಸುವ ವ್ಯವಸ್ಥೆಗಳನ್ನು ಮಾಡಿದವು, ಜನರು ಭಯಭೀತರಾಗಿ ಇವೆಲ್ಲವನ್ನೂ ಪ್ರತಿರೋಧವಿಲ್ಲದೆ ಪಾಲಿಸಿದರು. ಇಡೀ ಭಾರತದಲ್ಲಿ ಕೇವಲ 560ರಷ್ಟು ಕೋವಿಡ್ ಪ್ರಕರಣಗಳಿದ್ದಾಗ 138 ಕೋಟಿ ದೇಶವಾಸಿಗಳ ಸಂವಿಧಾನದತ್ತ ಹಕ್ಕುಗಳನ್ನು ಹಾಗೂ ಸ್ವಾತಂತ್ರ್ಯಗಳನ್ನು ರಾತ್ರೋರಾತ್ರಿ ನಿರ್ಬಂಧಿಸಿ ಯಾರೂ ತಮ್ಮ ಮನೆಗಳಿಂದ ಹೊರಬಾರದಂತೆ ದಿಗ್ಬಂಧನ ವಿಧಿಸಲಾಯಿತು. ಅಧಿಕೃತವಾಗಿ ಸೂಚಿಸಲಾಗಿದ್ದ ಚಿಕಿತ್ಸಾಕ್ರಮಗಳೂ ಅವೈಜ್ಞಾನಿಕವಾಗಿದ್ದವು. ಇವನ್ನೆಲ್ಲ ಪ್ರಶ್ನಿಸಿ ಸರಕಾರಕ್ಕೆ ವೈಜ್ಞಾನಿಕವಾಗಿ ಮಾರ್ಗದರ್ಶನ ಮಾಡಬೇಕಿದ್ದ ಐಎಂಎ ಮುಂತಾದ ವೈದ್ಯಕೀಯ ಸಂಘಟನೆಗಳು ಸರಕಾರವನ್ನೇ ಹೊಗಳುತ್ತಾ ಹೋದವು, ದಿಗ್ಬಂಧನವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಅಸಂಬದ್ಧ ಸಲಹೆಗಳನ್ನು ನೀಡಿದವು. ಸೋಂಕು ರೋಗಗಳ ನಿಯಂತ್ರಣಕ್ಕೆ ಸಂಬಂಧವೇ ಇಲ್ಲದ ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಕ್ಯಾನ್ಸರ್ ತಜ್ಞರು ಅಸಂಬದ್ಧವಾದ, ಅವೈಜ್ಞಾನಿಕವಾದ, ಆಧಾರರಹಿತವಾದ ಸಲಹೆಗಳನ್ನು ಕೊಡುತ್ತಲೇ ಹೋದರು, ಸರಕಾರವೂ, ಮಾಧ್ಯಮಗಳೂ ಅವೇ ವೇದವಾಕ್ಯವೆಂದು ಅನುಸರಿಸಿದವು. ಇವುಗಳಿಂದ ಕೊರೋನ ನಿಯಂತ್ರಿಸಲಾಗಲಿಲ್ಲ, ಸಾವುಗಳನ್ನು ತಡೆಯಲಾಗಲಿಲ್ಲ, ಬದಲಿಗೆ ಜನರ ಜೀವನದ ಮೇಲೆ, ದೈಹಿಕ-ಮಾನಸಿಕ ಆರೋಗ್ಯಗಳ ಮೇಲೆ, ಆರ್ಥಿಕತೆಯ ಮೇಲೆ, ಗಂಭೀರ ಪರಿಣಾಮಗಳಾದವು. ಹದಿನಾಲ್ಕು ವಯಸ್ಸಿನವರೆಗೆ ಶಿಕ್ಷಣವು ಮೂಲಭೂತ ಹಕ್ಕಾಗಿದ್ದರೂ ಅದನ್ನು ಕೂಡ ಮೊಟಕುಗೊಳಿಸಿ ಒಂದೂವರೆ ವರ್ಷಗಳ ಕಾಲ ಶಾಲೆಗಳನ್ನು ಮುಚ್ಚಿ ಹಾಕಿ ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡಲಾಯಿತು, ಇದರಿಂದ ಮಕ್ಕಳ ಕಲಿಕೆಯಷ್ಟೇ ಅಲ್ಲ, ದೈಹಿಕ, ಮಾನಸಿಕ, ಬೌದ್ಧಿಕ, ಪೌಷ್ಟಿಕ ಬೆಳವಣಿಗೆಗಳೆಲ್ಲವೂ ಶಾಶ್ವತವಾಗಿ ಹಾನಿಗೀಡಾದವು.
ಕೋವಿಡ್ ಲಸಿಕೆಗಳ ವಿಚಾರದಲ್ಲೂ ಇಂಥವೇ ನಿರ್ಧಾರಗಳಾದವು. ಯೂರೋಪಿನ ಹಲವು ದೇಶಗಳು ಬಳಸಲಾರಂಭಿಸಿ ಎರಡು-ಮೂರು ತಿಂಗಳುಗಳಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆಗಳಾಗುತ್ತಿದ್ದುದನ್ನು ಗುರುತಿಸಿದ ಕಾರಣಕ್ಕೆ ಹಿಂಪಡೆದಿದ್ದ ಅಥವಾ ಮಿತಿಗೊಳಿಸಿದ್ದ ಲಸಿಕೆಯನ್ನು ಭಾರತದಲ್ಲಿ ನೂರು ಕೋಟಿ ಜನರಿಗೆ ನೀಡಲಾಯಿತು, ಯುರೋಪಿನಲ್ಲೂ, ಆಸ್ಟ್ರೇಲಿಯದಲ್ಲೂ 50 ವರ್ಷಕ್ಕಿಂತ ಕೆಳಗಿನವರಿಗೆ ಆ ಲಸಿಕೆಯನ್ನು ಕೊಡದಂತೆ ತಡೆದಿದ್ದರೆ, ಇಲ್ಲಿ ಅದೇ ಲಸಿಕೆಯನ್ನು ಪಡೆಯದಿದ್ದರೆ ವಿದ್ಯಾರ್ಥಿಗಳು ಕಾಲೇಜು ಹೊಕ್ಕುವಂತಿಲ್ಲ ಎಂದು ವಿಧಿಸಲಾಯಿತು. ಯಾವ ದೇಶದಲ್ಲೂ ಅನುಮೋದಿಸದೇ ಇದ್ದ ಲಸಿಕೆಯನ್ನು ಸಣ್ಣ ಮಕ್ಕಳಲ್ಲಿ ಬಳಸುವುದಕ್ಕೆ ಕೊರೋನ ಮುಗಿದ ನಂತರದಲ್ಲಿ ತುರ್ತು ಅನುಮೋದನೆ ನೀಡಲಾಯಿತು. ಲಸಿಕೆ ಹಾಕಿಸುವಂತೆ ಬಲವಂತ ಮಾಡುವಂತಿಲ್ಲ, ಅದು ಐಚ್ಛಿಕವಾದುದು ಎಂದು ಸರ್ವೋಚ್ಚ ನ್ಯಾಯಾಲಯವು ಮೇ 2022ರಲ್ಲಿ ಆದೇಶಿಸಿದ ವೇಳೆಗೆ ಶೇ.90ಕ್ಕೂ ಹೆಚ್ಚು ಜನರು ಲಸಿಕೆಗಳನ್ನು ಪಡೆದಾಗಿತ್ತು.
ಈಗ ಕೆಲವು ತಿಂಗಳುಗಳಿಂದ ಅನೇಕ ಹೆಸರಾಂತರು, ಅದರಲ್ಲೂ ಯುವಜನರು, ಹಠಾತ್ ಹೃದಯ ಸ್ತಂಭನದಿಂದ ಮೃತರಾಗುತ್ತಿರುವ ಬಗ್ಗೆ ಹೆಚ್ಚೆಚ್ಚು ವರದಿಗಳು ಬರುತ್ತಿರುವಾಗ ಕೊರೋನ ಸೋಂಕಿಗೂ, ಅದರ ಲಸಿಕೆಗಳಿಗೂ ಇವಕ್ಕೂ ಸಂಬಂಧಗಳಿವೆಯೇ ಎಂಬ ಪ್ರಶ್ನೆಗಳೂ, ಆತಂಕವೂ ಸಹಜವಾಗಿಯೇ ಎದ್ದಿವೆ. ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದು ಪ್ರಚಾರ ಮಾಡಿ ಬೆಂಬಲಿಸಿದ್ದ ವೈದ್ಯರು, ಹೃದ್ರೋಗ ತಜ್ಞರು, ವೈದ್ಯಕೀಯ ಸಂಘಟನೆಗಳು, ವೈದ್ಯಕೀಯ ಅಂಕಣಕಾರರು ಈ ಸಂಶಯಗಳಿಗೆ ಉತ್ತರಿಸುವ ಗೋಜಿಗೆ ಹೋಗದೆ ತೆಪ್ಪಗಿದ್ದಾರೆ. ಕೊರೋನ ಸೋಂಕಿತರು ಎರಡು ವರ್ಷ ವಿಶ್ರಾಂತಿ ಪಡೆಯದೇ ಇದ್ದುದೇ ಹಠಾತ್ ಸಾವಿಗೆ ಕಾರಣವೆಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರೆ, ಅದು ತಪ್ಪು, ಬದಲಿಗೆ ನಿತ್ಯ ಜೀವನದ ಒತ್ತಡವೇ ಕಾರಣ ಎಂದು ಒಬ್ಬ ಹೃದ್ರೋಗ ತಜ್ಞರು ಹೇಳುತ್ತಾರೆ, ಅದಲ್ಲ, ವಿಪರೀತ ವ್ಯಾಯಾಮ ಕಾರಣ ಎಂದು ಮತ್ತೊಬ್ಬ ಹೃದ್ರೋಗ ತಜ್ಞರು ಹೇಳಿದರೆ, ಅದೂ ಅಲ್ಲ, ಶಕ್ತಿದಾಯಕ ಪೇಯಗಳೇ ಕಾರಣ ಎನ್ನುತ್ತಾರೆ ಇನ್ನೊಬ್ಬ ಹೃದ್ರೋಗ ತಜ್ಞರು, ಇನ್ನೂ ಒಬ್ಬ ಹೃದ್ರೋಗ ತಜ್ಞರು ಇವು ಯಾವುವೂ ಅಲ್ಲ, ಮಾಂಸಾಹಾರವೇ ಕಾರಣ ಎನ್ನುತ್ತಾರೆ. ಹೀಗೆ ತಮ್ಮೊಳಗೆಯೇ ಒಮ್ಮತವಿಲ್ಲದೆ ಮನಬಂದಂತೆ ಮಾತಾಡುವ ಈ ತಜ್ಞರೆನಿಸಿಕೊಂಡವರು ಜನರ ಸಂಶಯಗಳನ್ನು ಪರಿಹರಿಸುವುದು ಹೇಗೆ ಸಾಧ್ಯ?
ಇವೆಲ್ಲವುಗಳ ನಡುವೆ, ಸಾಂಕ್ರಾಮಿಕ ರೋಗ ಕಾಡಿದರೆ ಜನರ ಸ್ವಾತಂತ್ರ್ಯಗಳನ್ನು ಕಿತ್ತು ದಿಗ್ಬಂಧಿಸುವ ಬಗ್ಗೆ ಜಾಗತಿಕ ನೀತಿಯನ್ನು ರೂಪಿಸಲು ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಸಮಾಲೋಚನೆಗಳಾಗುತ್ತಿವೆ; ಎಲ್ಲರ ಆರೋಗ್ಯ ಮಾಹಿತಿಯನ್ನು ಯಾವುದೇ ಕಾನೂನಿಲ್ಲದೆಯೂ ಸಂಗ್ರಹಿಸಿಟ್ಟು ದೊಡ್ಡ ಕಂಪೆನಿಗಳಿಗೆ ಒದಗಿಸುವುದಕ್ಕೆ ನಮ್ಮ ದೇಶದಲ್ಲಿ ಸಿದ್ಧತೆಗಳಾಗುತ್ತಿವೆ; ಕೊರೋನ ಕಾಲದ ತಪ್ಪುಗಳಿಗೆ ಚಪ್ಪಾಳೆ ಹೊಡೆದಿದ್ದ ಐಎಂಎ ಶಾಂತಿ ಪ್ರಶಸ್ತಿ ಪಡೆಯುತ್ತದೆ; ಸರಕಾರ ಮಾಡಿದ್ದೆಲ್ಲವನ್ನೂ ಬೆಂಬಲಿಸಿ ಬೊಬ್ಬಿರಿದಿದ್ದ ಮಾಧ್ಯಮಗಳು ತಪ್ಪನ್ನರಿತು ಸರಕಾರದ ನೀತಿಗಳನ್ನು, ಆರೋಗ್ಯ ಸೇವೆಗಳ ದುಸ್ಥಿತಿಯನ್ನು ಪರಾಮರ್ಶಿಸುವ ಬದಲಿಗೆ ಹಿಂದೂ-ಮುಸ್ಲಿಮ್, ಆ ಪಕ್ಷ-ಈ ಪಕ್ಷ ಜಪದಲ್ಲಿ ತಲ್ಲೀನವಾಗಿವೆ.