1857ರ ದಂಗೆಯ ಏಕೈಕ ಪ್ರತ್ಯಕ್ಷದರ್ಶಿ ಕೃತಿ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಪ್ರಗತಿಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ.

Update: 2024-01-03 10:17 GMT

ಮಹಾರಾಷ್ಟ್ರದ ಕುಲಾಬಾ (ಅಲಿಬಾಗ್) ಜಿಲ್ಲೆಯ ಪೇಣ ತಾಲೂಕಿನ ವರಸಯಿ ಪಂಡಿತಭಿಕ್ಷುಕರ ಗ್ರಾಮವಾಗಿದ್ದು ಚಿತ್ಪಾವನ ಗೋಡ್ಸೆ ಬ್ರಾಹ್ಮಣರೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ವಿಷ್ಣುಭಟ್ಟ ಗೋಡ್ಸೆ (1827 - 1904) ಎಂಬ ನೈಷ್ಠಿಕ ಬ್ರಾಹ್ಮಣ 1857ರಿಂದ 1859ರ ವರೆಗೆ ನಡೆದ ಸಿಪಾಯಿ ಬಂಡಾಯದ (ಪ್ರಥಮ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ) ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡು ಪಡಬಾರದ ಕಷ್ಟಗಳನ್ನು ಪಟ್ಟ ಘಟನಾ ವಳಿಗಳಿಂದ ಕೂಡಿದ ‘‘ನನ್ನ ಪ್ರವಾಸ’’ ಒಂದು ಅನನ್ಯ ಕೃತಿಯಾಗಿದೆ. 

 ನ್ಯಾಯಾಧೀಶರೊಬ್ಬರ ಕೋರಿಕೆ ಮೇರೆಗೆ ವಿಷ್ಣುಭಟ್ಟ ಈ ಪುಸ್ತಕವನ್ನು 1883ರಲ್ಲಿ ಮರಾಠಿಯಲ್ಲಿ ‘ಮಾಝಾ ಪ್ರವಾಸ’ ಹೆಸರಲ್ಲಿ ಬರೆದ. ನಂತರ ಗೋಡ್ಸೆ ತೀರಿಕೊಂಡ ಬಳಿಕ 1907ರಲ್ಲಿ ಪುಸ್ತಕ ಪ್ರಕಟವಾಯಿತು. 

 ಗೋಡ್ಸೆ ಸಕಲ ವೇದ ಶಾಸ್ತ್ರ ಪಾರಂಗತನಾಗಿದ್ದರೂ ಸಾಹಿತಿ ಮತ್ತು ಇತಿಹಾಸಕಾರನಾಗಿದ್ದಿಲ್ಲ. ಆದರೆ ಇತಿಹಾಸಕಾರರಿಗೆ, ಪ್ರವಾಸ ಕಥನ ಬರೆಯುವವರಿಗೆ, ನಿಸರ್ಗಪ್ರಿಯರಿಗೆ, ಸೃಜನಶೀಲ ಬರಹಗಾರರಿಗೆ, ಭಾಷಾ ತಜ್ಞರಿಗೆ, ವೇದಶಾಸ್ತ್ರ ಪಂಡಿತರಿಗೆ, ನ್ಯಾಯಪಕ್ಷಪಾತಿಗಳಿಗೆ, ಕಂಡದ್ದನ್ನು ಕಂಡ ಹಾಗೆ ಹೇಳುವ ತವಕವುಳ್ಳವರಿಗೆ ಮತ್ತು ಮಾನವೀಯ ಚಿಂತಕರಿಗೆ ಈ ಪುಸ್ತಕ ಮಾರ್ಗದರ್ಶಿಯಾಗಿದೆ.

ಗ್ವಾಲಿಯಾರದ ರಾಣಿ ವಾಯಜಾ ಬಾಯಿ ಸಿಂಧಿಯಾ ಅವರು ಆರೇಳು ಲಕ್ಷ ರೂಪಾಯಿ ವೆಚ್ಚದ ‘ಸರ್ವತೋ ಮುಖ ಯಜ್ಞ’ ಮಾಡುವವರಿದ್ದು ಅಲ್ಲಿಂದ ಒಂದಿಷ್ಟು ಹಣ ಕೂಡಿಸಿಕೊಂಡು ಬಂದರೆ ಸ್ವಲ್ಪ ಸಾಲ ತೀರಿಸಬಹುದು ಎಂಬ ಉದ್ದೇಶದಿಂದ ತನ್ನ ಚಿಕ್ಕಪ್ಪ ರಾಮಭಟ್ಟರ ಜೊತೆ ವಿಷ್ಣುಭಟ್ಟ ಪ್ರವಾಸ ಪ್ರಾರಂಭಿಸಿದ. ಆರು ತಿಂಗಳೊಳಗೆ ವಾಪಸ್ ಬರುವ ಉದ್ದೇಶವಿತ್ತು. ಆದರೆ ಸಿಪಾಯಿ ಬಂಡಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಮೂರು ವರ್ಷಗಳವರೆಗೆ ಮರಳಲಿಕ್ಕಾಗಲಿಲ್ಲ. ಅಂಥ ದುರ್ಗಮ ಮತ್ತು ಭಯಂಕರ ಪ್ರವಾಸ ಅದಾಗಿತ್ತು. ಆಗ ಪ್ರವಾಸಕ್ಕೆ ಯಾವುದೇ ವ್ಯವಸ್ಥೆ ಇರಲಿಲ್ಲ. ಕಾಲುದಾರಿಯಲ್ಲಿ ಉಪವಾಸ ವನವಾಸ ಹೋಗುವಂಥ ಪರಿಸ್ಥಿತಿ ಇತ್ತು.

 

 ಅವರು ಪ್ರವಾಸ ಮಾಡುತ್ತ ಇಂದೋರ್ ಜಿಲ್ಲೆಯ ಮಹೂ ದಂಡುಪ್ರದೇಶದ ಬಳಿ ಬಂದರು. ‘ಇಂದಿನಿಂದ ಮೂರನೇ ದಿನ ದೇಶದಲ್ಲಿ ಭಯಂಕರ ರಾಜ್ಯಕ್ರಾಂತಿ ಆಗುವುದಿದೆ. ಲೂಟಿ, ಮಾರಣ ಹೋಮ ನಡೆಯಲಿದೆ. ನೀವು ಆದಷ್ಟು ಬೇಗ ನಿಮ್ಮ ನಾಡಿಗೆ ಹಿಂದಿರುಗಿ’ ಎಂದು ದಾರಿ ಮಧ್ಯೆ ಸಿಕ್ಕ ಸಿಪಾಯಿಗಳು ಸಲಹೆ ನೀಡಿದರು. 

 ಅದಾಗಲೇ ಬ್ರಿಟಿಷರು ಹೊಸ ಬಂದೂಕು ಮತ್ತು ಗುಂಡುಗಳನ್ನು ತರಿಸಿ ದೇಶದ ತುಂಬ ಸಿಪಾಯಿಗಳಿಗೆ ಹಂಚಿದ್ದರು. ಅದಕ್ಕಾಗಿ ಕಾಡತೂಸುಗಳನ್ನು ಸಿದ್ಧಪಡಿಸಿದ್ದರು.

 ಈಸ್ಟ್ ಇಂಡಿಯಾ ಕಂಪೆನಿಯ ಒಂದು ಸೇನಾ ಕ್ಯಾಂಪಿನಲ್ಲಿ ಒಂದು ದಿನ ಒಂದು ಘಟನೆ ನಡೆಯಿತು. ಒಬ್ಬ ಬ್ರಾಹ್ಮಣ ಸಿಪಾಯಿ ಸ್ನಾನ ಮಾಡಲು ಬಾವಿಯ ಬಳಿಗೆ ಹೋದ. ಅಲ್ಲಿ ಒಬ್ಬ ಚಮ್ಮಾರ ನೀರು ಕುಡಿಯಲು ಲೋಟ ಕೇಳಿದ. ‘ನಿನಗೆ ಲೋಟ ಕೊಟ್ಟರೆ ಮೈಲಿಗೆ ಆಗುತ್ತದೆ’ ಎಂದು ಆ ಬ್ರಾಹ್ಮಣ ಸಿಪಾಯಿ ಹೇಳಿದ. ಆಗ ಆ ಚಮ್ಮಾರ ಸಿಟ್ಟಿನಿಂದ ‘ಅರೆ ಹೋಗು ಹೋಗು. ಜಾತಿ ಅಹಂಕಾರ ಹೆಚ್ಚು ತೋರಿಸಬೇಡ. ಇಲ್ಲಿ ಕಾಡತೂಸುಗಳು ತಯಾರಾಗುತ್ತವೆ. ಅದರಲ್ಲಿ ದನ ಮತ್ತು ಹಂದಿಯ ಚರ್ಬಿ ಹಾಕುತ್ತಾರೆ. ಆ ಚರ್ಬಿಯನ್ನು ಸಿದ್ಧಮಾಡಿ ಕೊಡುವವರು ನಾವೇ. ಅದಕ್ಕೆ ನೀವು ಬಾಯಿ ಹಾಕುತ್ತೀರಿ. ಯಾಕೆ ಸುಮ್ಮನೆ ಧರ್ಮದ ಅಹಂಕಾರ ತೋರಿಸುತ್ತೀಯಾ’ ಎಂದು ಹೇಳಿಬಿಟ್ಟ. ಈ ಸುದ್ದಿ ಎಲ್ಲೆಡೆ ಹಬ್ಬಿತು. ದನದ ಚರ್ಬಿಯ ಕಾರಣ ಹಿಂದೂ ಸಿಪಾಯಿಗಳು ಮತ್ತು ಹಂದಿಯ ಚರ್ಬಿಯ ಕಾರಣ ಮುಸ್ಲಿಮ್ ಸಿಪಾಯಿಗಳು ಸಿಟ್ಟಿಗೆದ್ದರು ಎಂದು ಆ ಸಿಪಾಯಿಗಳು ವಿಷ್ಣುಭಟ್ಟನಿಗೆ ತಿಳಿಸಿದರು.

 ಧರ್ಮಯುದ್ಧಕ್ಕಾಗಿ ನಿಗದಿ ಪಡಿಸಿದ ದಿನಾಂಕ ಇಂದಿನಿಂದ ಮೂರುದಿನಕ್ಕೆ (1857ನೇ ಜೂನ್ 10 ರಂದು) ಇದೆ. ಕಾಡತೂಸು ವಾಪಸ್ ತೆಗೆದುಕೊಳ್ಳಲು ಕಂಪೆನಿ ಸರಕಾರ ಒಪ್ಪದಿದ್ದರೆ ದಂಡುಪ್ರದೇಶಕ್ಕೆ ಬೆಂಕಿ ಹಚ್ಚಲಾಗುವುದು ಎಂದು ಮೇರಠ್ ದಂಡುಪ್ರದೇಶದಿಂದ ಬಂದ ಗುಪ್ತ ಪತ್ರಗಳನ್ನು ಬೇರೆ ಬೇರೆ ದಂಡುಪ್ರದೇಶಗಳಿಗೆ ಮುಟ್ಟಿಸಲಾಗಿದೆ. ಭಾರೀ ಕೋಲಾಹಲವಾಗಲಿದೆ. ಮರಳಿ ಹೋಗುವುದು ಒಳ್ಳೆಯದು ಎಂದು ಆ ಸಿಪಾಯಿಗಳು ಪುನರುಚ್ಚರಿಸಿದರು.

ಉಜ್ಜಯನಿ

ಇದಾದಮೇಲೆ ವಿಷ್ಣುಭಟ್ಟ ಚಿಕ್ಕಪ್ಪನ ಜೊತೆ ಉಜ್ಜಯನಿ ತಲುಪಿದ. ಅಲ್ಲಿ ಐದಾರು ದಿನ ಕಳೆದ ಮೇಲೆ, ಧಾರಾ ದೇಶದ ರಾಜ ಸತ್ತುಹೋದ ಸುದ್ದಿ ಬಂತು. ಉತ್ತರಕ್ರಿಯೆಗಾಗಿ ಎಂಟು ಲಕ್ಷ ಖರ್ಚು ಮಾಡಲು ರಾಣಿ ನಿರ್ಧರಿಸಿದಳು. ಉಜ್ಜಯನಿಯ ಬ್ರಾಹ್ಮಣರು ಹಿಂಡು ಹಿಂಡಾಗಿ ಧಾರಾ ದೇಶಕ್ಕೆ ಹೊರಟರು. ಪಂಡಿತಭಿಕ್ಷುಕರಾದ ಕಾರಣ ವಿಷ್ಣುಭಟ್ಟ ಮತ್ತು ಚಿಕ್ಕಪ್ಪ ಅಂತ್ಯ ಸಂಸ್ಕಾರದ ವೇಳೆ ಕೊಡುವ ದಾನವನ್ನು ಸ್ವೀಕರಿಸುವುದಿಲ್ಲ. ಆದರೆ ಆ ದೇಶದಲ್ಲಿ 8-10 ದಿನ ಇದ್ದು ಮಹಾದಾನದ ವೈಭವವನ್ನು ನೋಡುವ ಉದ್ದೇಶದಿಂದ ಧಾರಾ ನಗರಕ್ಕೆ ಹೊರಟರು.

 ಧಾರಾ ನಗರದ ತುಂಬ ಬ್ರಾಹ್ಮಣರೇ ತುಂಬಿಕೊಂಡಿದ್ದರು. ಎಲ್ಲೆಡೆಯಿಂದ ಸುಮಾರು 10 ಸಾವಿರ ಬ್ರಾಹ್ಮಣರು ದಕ್ಷಿಣೆಗಾಗಿ ಬಂದಿದ್ದರು. ಅಲ್ಲಿನ ಬೃಹತ್ ದ್ವಾರದ ಒಳಗಿನಿಂದ ಕೆಲ ಪ್ರಮುಖ ಬ್ರಾಹ್ಮಣರ ಹೆಸರು ಕರೆದಾಗ ಅವರು ಮಾತ್ರ ಒಳಗೆ ಹೋಗುತ್ತಿದ್ದರು. 

 

 ಪ್ರಮುಖ ಬ್ರಾಹ್ಮಣರಿಗೆ ದಾನದಲ್ಲಿ ಭಾರೀ ಹಣ ಮತ್ತು ವಸ್ತುಗಳನ್ನು ಕೊಡುತ್ತಿದ್ದರು. ಅಂಬಾರಿ, ಆನೆಗಳು, ಕುದುರೆಗಳು ಮುಂತಾದವುಗಳನ್ನು ಸಹಸ್ರಾರು ರೂಪಾಯಿಗಳ ದಕ್ಷಿಣೆಯೊಂದಿಗೆ ಕೊಡಲಾಗುತ್ತಿತ್ತು. ಆನೆಗಳಲ್ಲಿನ ಒಂದು ಸುಸಜ್ಜಿತವಾದ ಭಾರಿ ಗಾತ್ರದ ಆನೆಯೊಂದಿಗೆ 8,000 ರೂ. ಕೊಟ್ಟರು! ಇನ್ನುಳಿದ ಮೂರು ಆನೆಗಳನ್ನು ಐದೈದು ಸಾವಿರ ರೂಪಾಯಿಗಳೊಂದಿಗೆ ಕೊಟ್ಟರು. ಆ ದಿನ ನಾಲ್ಕು ಆನೆ, ನಾಲ್ಕು ಕುದುರೆ, ಮೂರು ಒಂಟೆ, ಹತ್ತು ಎತ್ತು, ಹತ್ತು ಎಮ್ಮೆ ಮತ್ತು ಹದಿಮೂರು ದಾಸಿಯರನ್ನು ನೀಡಲಾಯಿತು. ಒಂದು ಶಯ್ಯಾದಾನ ನಡೆಯಿತು. ಪಾತ್ರೆ ಪರಡಿಗಳ ದಾನವಾಯಿತು.

 ಶಯ್ಯಾದಾನ ಪಡೆದ ಬ್ರಾಹ್ಮಣ ಚತುರ್ವೇದಿಯಾಗಿದ್ದ. ಅವನನ್ನು ಪಲ್ಲಂಗದ ಮೇಲೆ ಕೂಡಿಸಿ, ಚಿನ್ನದ ಒಂದು ಮೃತದೇಹವನ್ನು ಆತನ ಪಕ್ಕದಲ್ಲಿರಿಸಿ ನಾಲ್ಕು ಜನ ಹೆಗಲು ಕೊಟ್ಟು ಹೊರಗೆ ಹೊತ್ತು ತರುತ್ತಿದ್ದರು. ಆನೆ, ಕುದುರೆ ಮುಂತಾದವುಗಳನ್ನು ದಾನವಾಗಿ ಹಿಡಿದವರು ಹೊರಗೆ ಬರುತ್ತಲೇ ರಾಜಸೇವಕರಿಗೆ ಮಾರುತ್ತಿದ್ದರು. ಈ ರೀತಿ ಮೂರು ದಿನಗಳವರೆಗೆ ದಾನದ ಸಂಭ್ರಮವನ್ನು ಅವರು ನೋಡಿದರು. ನಾಲ್ಕನೆಯ ದಿನ, ಎಷ್ಟು ಜನ ಬ್ರಾಹ್ಮಣರಿದ್ದರೋ ಅವರೆಲ್ಲರಿಗೆ ಜೋಡು ಧೋತಿಯೊಂದಿಗೆ ಐದೈದು ರೂಪಾಯಿ ಕೊಟ್ಟರು. ಅವರಿಬ್ಬರೂ ಇನ್ನೊಂದು ದಿನ ಧಾರಾ ನಗರ ಸುತ್ತಾಡಿ ಉಜ್ಜಯನಿಗೆ ಬಂದು ಗ್ವಾಲಿಯಾರ್ ತಲುಪಿದರು. ಆದರೆ ದಂಗೆ ಎದ್ದಿರುವ ಕಾರಣ ಸರ್ವತೋಮುಖ ಯಜ್ಞವನ್ನು ಸ್ಥಗಿತಗೊಳಿಸಲಾಗಿತ್ತು. ಜಾಯಜಾ ಬಾಯಿಯವರು ದಕ್ಷಿಣದ ಬ್ರಾಹ್ಮಣರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. 

ದಂಗೆಯ ಸುದ್ದಿ

ನಾಲ್ಕು ತಿಂಗಳು ಗ್ವಾಲಿಯಾರ್‌ನಲ್ಲಿ ಇದ್ದಾಗ ಪ್ರತಿದಿನವೂ ದಂಗೆಯ ಸುದ್ದಿಯ ಕಡೆಗೆ ವಿಷ್ಣುಭಟ್ಟ ಗಮನ ಹರಿಸುತ್ತಿದ್ದ. ಮೇರಠ್ ದಂಡುಪ್ರದೇಶದ ಶೂರ ಸಿಪಾಯಿಗಳು ಧರ್ಮದ ರಕ್ಷಣೆಗಾಗಿ ಇಂಗ್ಲಿಷರನ್ನು ಹೊಡೆದುಹಾಕಿ ದಿಲ್ಲಿ ಬಾದಷಹರನ್ನು ತಮ್ಮ ಅಧಿಪತಿ ಎಂದು ಒಪ್ಪಿಕೊಂಡಿದ್ದು ಎಲ್ಲೆಡೆ ಪ್ರಚಾರವಾಗಿತ್ತು. ಬಿಠೂರಿನ ನಾನಾಸಾಹೇಬ ಪೇಶ್ವೆ ಅವನ ಸಹೋದರರಾದ ಬಾಬಾಸಾಹೇಬ ಮತ್ತು ರಾವಸಾಹೇಬ ಕಂಪೆನಿ ಸರಕಾರಕ್ಕೆ ವಿರುದ್ಧವಾಗಿದ್ದರು.. ನಾನಾಸಾಹೇಬನಿಗೆ ಆತ್ಮೀಯನಾಗಿದ್ದ ತಾತ್ಯಾ ಟೋಪೆ ಜೊತೆ ಸೇರಿ ಕ್ರಾಂತಿ ಮಾಡುವ ಯೋಜನೆ ರೂಪಿಸಿದರು. 

 ವಿಷ್ಣುಭಟ್ಟ ಗ್ವಾಲಿಯಾರಲ್ಲಿ ಇದ್ದಾಗ, ನಾನಾಸಾಹೇಬರ ಆಪ್ತ ತಾತ್ಯಾ ಟೋಪೆ ಒಂದು ದಿನ ಸಿಂಧಿಯಾ ಮಹಾರಾಜನ ಬಳಿ ಬಂದು ಹೋರಾಟಕ್ಕಾಗಿ ಗಾಡಿ, ಕುದುರೆ, ಒಂಟೆ ಮುಂತಾದವುಗಳ ಸಹಾಯ ಕೇಳಿದ. ‘‘ನೀನು ಬಯಸಿದ್ದನ್ನೆಲ್ಲ ಒದಗಿಸುತ್ತೇನೆ. ನನ್ನ ದೇಶಕ್ಕೆ ಹಾನಿ ಮಾಡಬೇಡ’’ ಎಂದು ಮಹಾರಾಜ ಹೇಳಿ ಸಹಾಯ ಮಾಡಿದ. ಸಿಂಧಿಯಾ ಬಳಿ 12 ವಿಷದ ಫಿರಂಗಿಗಳಿದ್ದವು. ಫಿರಂಗಿ ಹಾರಿಸಿದಾಗ ಅದರಿಂದ ಹೊರಡುವ ಹೊಗೆಗೆ ಕಣ್ಣುಗಳು ಒಡೆದು ಜನ ಸಾವನ್ನಪ್ಪುತ್ತಿದ್ದರು. ತಾತ್ಯಾ ಟೋಪೆ ಮುರಾರ್ ದಂಡುಪ್ರದೇಶದ ಸೈನಿಕರ ಜೊತೆ ಅವೆಲ್ಲವುಗಳನ್ನು ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋದ. 

 ಬಿಠೂರಿನ ನಾನಾಸಾಹೇಬ ಪೇಶ್ವೆ ನೇತೃತ್ವದಲ್ಲಿ ತಾತ್ಯಾ ಟೋಪೆ ಬಂಡಾಯಗಾರರನ್ನು ಸಂಘಟಿಸಿ ಕಾನ್ಪುರದಲ್ಲಿನ ಇಂಗ್ಲಿಷರ ಸೈನ್ಯ ತುಕಡಿಯ ಮೇಲೆ ದಾಳಿ ಮಾಡಿದ. ವಿಷದ ತೋಪು ಹಾರಿಸಿದ್ದರಿಂದ ಅವರ ಕಣ್ಣುಗಳು ಒಡೆದವು. ಬಹಳಷ್ಟು ಬ್ರಿಟಿಷರು ಸತ್ತರು. ಓಡಿ ಹೋಗಲು ಯತ್ನಿಸುತ್ತಿದ್ದವರನ್ನು ಬಂಡಾಯವೆದ್ದ ಸೈನಿಕರು ಬಂಧಿಸಿದರು. ಬಂಡಾಯಗಾರರು ಕಾನ್ಪುರದ ಮೇಲೆ ವಿಜಯ ಸಾಧಿಸಿದರು. 

 ಮುಂದೆ 15 ದಿನಗಳೊಳಗಾಗಿ ಬ್ರಿಟಿಷರ ಸೈನ್ಯಪಡೆ ಕಾನ್ಪುರಕ್ಕೆ ಮುತ್ತಿಗೆ ಹಾಕಿತು. ಈ ಸುದ್ದಿ ಬಿಠೂರಿಗೆ ತಲುಪಿತು. ತಾತ್ಯಾ ಟೋಪೆ, ನಾನಾಸಾಹೇಬ, ಬಾಳಾಸಾಹೇಬ ಮತ್ತು ರಾವಸಾಹೇಬರು ಮತ್ತಿತರರು ಸೈನ್ಯದೊಂದಿಗೆ ಕಾನ್ಪುರ ಮುಟ್ಟುವಾಗ ಯುದ್ಧ ಪ್ರಾರಂಭವಾಗಿತ್ತು. 10 ದಿನಗಳ ವರೆಗೆ ಯುದ್ಧ ನಡೆಯಿತು. ಎರಡೂ ಕಡೆ ಬಹಳಷ್ಟು ಪ್ರಾಣಹಾನಿ ಆಯಿತು. ಇಂಗ್ಲಿಷರ ಕೈ ಮೇಲಾಯಿತು. ಪೇಶ್ವೆ ಸೈನಿಕರು ದಿಕ್ಕಾಪಾಲಾಗಿ ಓಡಿಹೋದರು. ಇಂಥ ಸ್ಥಿತಿಯಲ್ಲಿ ಏನೂ ಮಾಡಲಿಕ್ಕಾಗದೆ ನಾನಾಸಾಹೇಬ, ಬಾಳಾಸಾಹೇಬ ಮತ್ತು ರಾವಸಾಹೇಬರು ಕುದುರೆ ಏರಿ ಬಿಠೂರಿಗೆ ಮರಳಿ ತಮ್ಮ ಪರಿವಾರದೊಂದಿಗೆ ಬಿಠೂರಿನಿಂದ ಪಾರಾದರು. ಇತ್ತ ಕಾನ್ಪುರ ಮತ್ತು ಪೇಶ್ವೆ ರಾಜಧಾನಿ ಬಿಠೂರು (ಬ್ರಹ್ಮಾವರ್ತ)ಗಳಲ್ಲಿ ಬ್ರಿಟಿಷರು ಕಂಡ ಕಂಡವರನ್ನೆಲ್ಲ ಕೊಂದರು. ಅರಮನೆ ಸಮೇತ ಎಲ್ಲೆಡೆ ಲೂಟಿ ಮಾಡಿದರು. 

 

ಝಾನ್ಸಿ

ಝಾನ್ಸಿ ಸಂಸ್ಥಾನದ ಸಂಸ್ಥಾನಾಧಿಪತಿ ಗಂಗಾಧರ ಬಾಬಾನ ಹೆಂಡತಿ ತೀರಿಕೊಂಡಿದ್ದಳು. ನಂತರ ಬಿಠೂರಿನ ಶ್ರೀಮಂತ ಪೇಶ್ವೆಯ ಹೋಮಶಾಲೆಯಲ್ಲಿ ಮೋರೋಪಂತ ತಾಂಬೆ ಹೆಸರಿನ ಕರಾಡ ಬ್ರಾಹ್ಮಣನ ಸ್ಫುರದ್ರೂಪಿ ಮಗಳನ್ನು ಆತ ಮದುವೆಯಾದ. ಅವಳಿಗೆ ಎಲ್ಲರೂ ಛಬೀಲಿ (ಸುಂದರಿ) ಎಂದು ಕರೆಯುತ್ತಿದ್ದರು. ಮದುವೆ ನಂತರ ಲಕ್ಷ್ಮೀಬಾಯಿ ಎಂದು ನಾಮಕರಣ ಮಾಡಲಾಯಿತು. ಅವಳೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ. (19.11.1828 - 18.06.1858)

 ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಅವಳು ಶ್ರೀಮಂತ ಪೇಶ್ವೆಯ ಹುಡುಗ ರೊಂದಿಗೆ ಬೆಳೆದಳು. ಅಕ್ಷರಜ್ಞಾನ ಪಡೆದಳು. ಬಿಲ್ವಿದ್ದೆ, ಕತ್ತಿವರಸೆ, ಬಂದೂಕು ಬಳಕೆ, ಆನೆ ಕುದುರೆ ಸವಾರಿ ಮುಂತಾದವುಗಳನ್ನು 12 ವರ್ಷ ದಾಟುವುದರೊಳಗಾಗಿ ಕಲಿತಿದ್ದಳು. 

 ಪುತ್ರಸಂತಾನವಿಲ್ಲದ್ದಕ್ಕಾಗಿ ಮೋರೋಪಂತ ತಾಂಬೆಗೆ ಎರಡನೇ ಮದುವೆ ಮಾಡುವುದಕ್ಕೆ ಮತ್ತು ಝಾನ್ಸಿಯಲ್ಲಿ ಇರಲು ಬಂಗಲೆಗಾಗಿ ಝಾನ್ಸಿ ರಾಜ ವ್ಯವಸ್ಥೆ ಮಾಡಿದ. ಮೋರೋಪಂತ ತಾಂಬೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಾದವು.

 ರಾಜಾ ಗಂಗಾಧರರಾವ ಬಾಬಾನ ಜೊತೆ ವಿವಾಹ ಆದ ಮೇಲೆ ಲಕ್ಷ್ಮೀಬಾಯಿಗೆ ಸುಖ ಸಿಗಲಿಲ್ಲ. ಆತನ ನಿಷ್ಠುರ ಸ್ವಭಾವದಿಂದ ಹಿಂಸೆ ಆಯಿತು. ಮಹಲಿನ ಒಳಗೂ ಆಕೆ ಪಹರೆಯಲ್ಲಿ ಇರಬೇಕಾಗಿತ್ತು. ಸಶಸ್ತ್ರ ಸ್ತ್ರೀಯರು ಎಲ್ಲ ಹೊತ್ತಿನಲ್ಲೂ ಅಲ್ಲಿಯೆ ಇರುತ್ತಿದ್ದರು ಎಂದು ವಿಷ್ಣುಭಟ್ಟ ತಿಳಿಸಿದ್ದಾನೆ.

 ಗಂಗಾಧರರಾವ ಹೆಚ್ಚುಕಾಲ ಬದುಕುಳಿಯಲಿಲ್ಲ. ಝಾನ್ಸಿ ರಾಜ್ಯ ಆಂಗ್ಲರ ಆಡಳಿತದ ಪಾಲಾಯಿತು. ಕೋಟೆಯ ಆವರಣದೊಳಗಿನ ಪ್ರದೇಶ ಮಾತ್ರ ಲಕ್ಷ್ಮೀಬಾಯಿಗೆ ಉಳಿಯಿತು. ರಾಣಿ ಒಬ್ಬ ಬಾಲಕನನ್ನು ದತ್ತು ತೆಗೆದುಕೊಂಡಳು. ಝಾನ್ಸಿ ನಗರ ಮತ್ತು ಕೋಟೆಯಲ್ಲಿ ಆಡಳಿತ ನಡೆಸಿದಳು. ದತ್ತು ಮಗನಿಗೆ ರಾಜ್ಯ ಕೊಡುವ ಬಗ್ಗೆ ಕಂಪೆನಿ ಸರಕಾರದ ಜೊತೆ ಪತ್ರವ್ಯವಹಾರ ಶುರು ಮಾಡಿದಳು.

 ಝಾನ್ಸಿ ನಗರದ ಬಗ್ಗೆ ಬರೆಯುತ್ತ ಈ ಹಿಂದೆ ನಡೆದ ಘಟನೆಯೊಂದನ್ನು ವಿಷ್ಣುಭಟ್ಟ ವಿವರಿಸುತ್ತಾನೆ. ಝಾನ್ಸಿಯ ಪಾರೋಲ್ಕರನ ಆಶ್ರಿತನಾಗಿ ನಾರಾಯಣ ಶಾಸ್ತ್ರಿ ಎಂಬ ವಿದ್ವಾನ್ ಬ್ರಾಹ್ಮಣ ಇದ್ದ. ಆತ ರಸಿಕನಾಗಿದ್ದ. ಒಮ್ಮೆ ಒಬ್ಬ ಭಂಗಿ ಹುಡುಗಿಯನ್ನು ನೋಡಿ ಸೌಂದರ್ಯಕ್ಕೆ ಮಾರುಹೋದ. ಆಕೆಯ ತಾಯಿಯನ್ನು ಪುಸಲಾಯಿಸಿ ಅವಳನ್ನು ತನ್ನ ವಶಕ್ಕೆ ತೆಗೆದುಕೊಂಡ. ಅವಳು ಪ್ರಾಯಕ್ಕೆ ಬರುತ್ತಲೆ ರಮಿಸಲು ಶುರು ಮಾಡಿದ. ಕೆಲವು ಸಲ ಆಕೆಯನ್ನು ಮನೆಗೂ ಕರೆದುಕೊಂಡು ಬಂದಿದ್ದ. ಅವಳ ಮೇಲೆ ಅನೇಕ ಬ್ರಾಹ್ಮಣರ ಕಣ್ಣುಬಿತ್ತು. ಆ ಕುರಿತು ಅವಳು ಶಾಸ್ತ್ರಿಗೆ ತಿಳಿಸಿದಳು. ನಿನಗೆ ಹಣದ ಆಸೆ ಇಲ್ಲ. ಅವರು ರಮಿಸಿದ ನಂತರ ಹಣದ ಬದಲಿಗೆ ಜನಿವಾರ ಪಡೆದು ಸಂಗ್ರಹಿಸಿಡು ಎಂದು ತಿಳಿಸಿದ. ಕೆಲ ದಿನಗಳ ನಂತರ ಶಾಸ್ತ್ರಿಯ ಹೆಂಡತಿಗೆ ಆತನ ರಾಸಲೀಲೆಯ ವರ್ತಮಾನ ಸಿಕ್ಕಿತು. ಜಗಳ ಶುರುವಾಯಿತು. ಆಗ ಅವಳನ್ನು ಹೊಡಿಬಡಿ ಮಾಡಿ ಪರಿಹಾರ ಕೊಟ್ಟು ತವರುಮನೆಗೆ ಕಳಿಸಿದ. ಇದೆಲ್ಲ ಸುದ್ದಿಯಾದ ನಂತರ ಪಾರೋಲ್ಕರ್ ಅವನನ್ನು ಕರೆದು ವಿಚಾರಿಸಿದ. ನಾನೊಬ್ಬನೇ ಅಲ್ಲ, ನಗರದ ಬಹುತೇಕ ಬ್ರಾಹ್ಮಣರು ಆಕೆಯ ಜೊತೆಗೆ ಇದ್ದಾರೆ ಎಂದ. ಸಂಗ್ರಹಿಸಿದ ಜನಿವಾರ ತೋರಿಸಲು ಆ ಭಂಗಿ ಯುವತಿಗೆ ಹೇಳಿದ. ಇದನ್ನೆಲ್ಲ ನೋಡಿ ಪಾರೋಲ್ಕರ್ ಗಾಬರಿಯಾದ. ಬೇರೆ ಕಡೆಗಳ ಬ್ರಾಹ್ಮಣರನ್ನು ಕರೆಸಿ ಪಟ್ಟಣದ ಎಲ್ಲಾ ಬ್ರಾಹ್ಮಣರನ್ನು ಊರ ಹೊರಗೆ ಒಯ್ದು ಕ್ಷೌರ ಮಾಡಿಸಿ, ಪಂಚಗವ್ಯ ತಿನಿಸಿ ಶುದ್ಧೀಕರಣ ಮಾಡಿಸಿದ. ಆದರೆ ಈ ನಾರಾಯಣ ಶಾಸ್ತ್ರಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಪ್ಪಲಿಲ್ಲ. ಆ ಭಂಗಿ ಯುವತಿಯೊಂದಿಗೆ ಊರ ಹೊರಗೇ ಉಳಿದ!

 ಆಸ್ಥಾನ ಪುರೋಹಿತ ಲಾಲೂಭಾಯಿ ದೇಂಕರೆ ಅವರನ್ನು ವಿಷ್ಣುಭಟ್ಟ ಭೇಟಿಯಾದ. ಅವನ ವಿದ್ವತ್ತಿಗೆ ಮನ್ನಣೆ ಸಿಕ್ಕಿತು. ಅರಮನೆಯ ಆವರಣದಲ್ಲಿನ ಬಂಗಲೆಯಲ್ಲಿ ಉಳಿಯುವ ವ್ಯವಸ್ಥೆ ಆಯಿತು. ಝಾನ್ಸಿ ರಾಣಿಗೆ ಹತ್ತಿರದವನಾದ. ವಿಷ್ಣುಭಟ್ಟ ಇಂಥ ವೈಭವದ ದಿನಗಳನ್ನು ಮೊದಲ ಬಾರಿಗೆ ಕಂಡ.

ಝಾನ್ಸಿ ರಾಣಿಯ ದಿನಚರಿ

ರಾಣಿ ಲಕ್ಷ್ಮೀಬಾಯಿಯ ದೈನಂದಿನ ಚಟುವಟಿಕೆಗಳ ಕುರಿತು ವಿಷ್ಣುಭಟ್ಟ ಬರೆದಿದ್ದಾನೆ. ನಸುಕಿನಲ್ಲಿ ಎದ್ದು ವ್ಯಾಯಾಮ ಮಾಡುವುದು, ಕುದುರೆ ಸವಾರಿ ಮಾಡುತ್ತ ಗೋಡೆ ಹಾರಿಸುವುದು, ಕಂದಕ ದಾಟಿಸುವುದು, ಕುದುರೆಯ ಹೊಟ್ಟೆಗೆ ಅಂಟಿಕೊಂಡು ಕೂಡುವುದು, ಆನೆ ಮೇಲೆ ಸವಾರಿ ಹೋಗುವುದು ಮುಂತಾದ ಚಟುವಟಿಕೆಗಳನ್ನು ರಾಣಿ ಬೆಳಗ್ಗೆ 7 ಗಂಟೆಯ ವರೆಗೆ ಮಾಡುತ್ತಿದ್ದಳು. ಕೆಲವೊಂದು ಸಲ ಒಂದು ಗಂಟೆ ತನಕ ನಿದ್ರಿಸಿದ ನಂತರ ಸ್ನಾನಕ್ಕೆ ಹೋಗುತ್ತಿದ್ದಳು. ಸ್ನಾನವೆಂದರೆ ಬಹಳ ಖುಷಿ. ಪ್ರತಿದಿನ 15 ಹಂಡೆ ಕಾಯಿಸಿದ ನೀರಿನಿಂದ ಸ್ನಾನವಾಗುತ್ತಿತ್ತು. ಹತ್ತು ಹಂಡೆಗಳ ನೀರು ಸುವಾಸನೆ ಭರಿತ ದ್ರವ್ಯಗಳಿಂದ ಕೂಡಿತ್ತು. ಸ್ನಾನದ ನಂತರ ಬಿಳಿ ಚಂದೇರಿ ಸೀರೆ ಉಟ್ಟು ಭಸ್ಮ ಧಾರಣೆ ಮಾಡಿ ಆಸನದಲ್ಲಿ ಕೂಡುತ್ತಿದ್ದಳು. ಎಲ್ಲ ಕಡೆ ಗಮನ ಹರಿಸುವ ಚಾಕಚಕ್ಯತೆ ಇತ್ತು. ನೂರೈವತ್ತು ಮುಜರೆಯವರಲ್ಲಿ ಯಾರಾದರೂ ಬರದಿದ್ದರೆ ಮರುದಿನ ಕೇಳುತ್ತಿದ್ದಳು. 12 ಗಂಟೆ ತನಕ ದೇವರ ಪೂಜೆ ಆದಮೇಲೆ ಊಟವಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಬಂದ ಕಾಣಿಕೆಗಳನ್ನು ರೇಷ್ಮೆ ವಸ್ತ್ರದಲ್ಲಿ ಮುಚ್ಚಿ ಅವಳ ಮುಂದೆ ಇಡಲಾಗುತ್ತಿತ್ತು. ತನಗೆ ಇಷ್ಟವಾದ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಉಳಿದದ್ದನ್ನು ಆಶ್ರಿತರಿಗೆ ಹಂಚಿಬಿಡುತ್ತಿದ್ದಳು. ಅದರಲ್ಲಿ ವಿಷ್ಣುಭಟ್ಟನ ಪಾಲೂ ಇರುತಿತ್ತು.

 ಮೂರು ಗಂಟೆಗೆ ಸರಿಯಾಗಿ ಕಚೇರಿ ಸೇರುತ್ತಿತ್ತು. ಆಗ ಕೆಲವೊಮ್ಮೆ ಅವಳು ಪುರುಷ ವೇಷದಲ್ಲಿ ಇರುತ್ತಿದ್ದಳು. ಪಾಯಿಜಾಮಾ ಕುರ್ತಾ ಧರಿಸಿ, ತಲೆಯ ಮೇಲೆ ಟೋಪಿ ಹಾಕಿ ತುರಾಯಿ ಸಿಕ್ಕಿಸಿಕೊಳ್ಳುತ್ತಿದ್ದಳು. ಗೌರ ವರ್ಣದ ರಾಣಿ ಸಾಕ್ಷಾತ್ ಗೌರಿಯಂತೆ ಕಾಣುತ್ತಿದ್ದಳು. ಕೆಲವೊಮ್ಮೆ ಸ್ತ್ರೀಯರ ಉಡುಪು ಇರುತ್ತಿತ್ತು. ಪತಿ ತೀರಿಕೊಂಡ ಬಳಿಕ ನತ್ತು ಮುಂತಾದ ವಸ್ತುಗಳನ್ನು ಬಳಸುತ್ತಿರಲಿಲ್ಲ. ಕೈಗಳಲ್ಲಿ ಚಿನ್ನದ ಬಳೆಗಳು, ಬೆರಳಲ್ಲಿ ಉಂಗುರ ಮತ್ತು ಕೊರಳಲ್ಲಿ ಮುತ್ತಿನ ಹಾರ ಮಾತ್ರ ಇರುತ್ತಿದ್ದವು. ಕೂದಲುಗಳನ್ನು ಒಂದು ದೊಡ್ಡ ಜಡೆಯಾಗಿ ಕಟ್ಟುತ್ತಿದ್ದಳು. ಬಿಳಿ ಶಾಲನ್ನು ಹೊದ್ದುಕೊಳ್ಳುತ್ತಿದ್ದಳು. ಸಿಂಹಾಸನದ ಗದ್ದಿಯ ಮೇಲೆ ದೊಡ್ಡ ದಿಂಬಿನ ಆಧಾರದಲ್ಲಿ ಕುಳಿತುಕೊಳ್ಳುತ್ತಿದ್ದಳು. ಎರಡೂ ಕಡೆ ಎಂಟು ಕಾರಕೂನರು ಇರುತ್ತಿದ್ದರು. ಎದುರುಗಡೆ ಲಕ್ಷ್ಮಣರಾವ ದಿವಾನ ಕೈಜೋಡಿಸಿ ಕಾಗದ ಪತ್ರಗಳನ್ನು ಹಿಡಿದುಕೊಂಡು ನಿಲ್ಲುತ್ತಿದ್ದ. ದೇಶಸ್ಥ ಬ್ರಾಹ್ಮಣ ಲಕ್ಷ್ಮಣರಾವ ಭಾರೀ ಅಕ್ಷರಶತ್ರು ಆಗಿದ್ದ. ಓದು ಬರೆಯುವುದು ಅಷ್ಟಕ್ಕಷ್ಟೇ. ಆದರೆ ತಲೆ ಮಾತ್ರ ಬಹಳ ದೂರ ಓಡುತ್ತಿತ್ತು. ಕಚೇರಿಯಲ್ಲಿ ಮಂತ್ರಿ ಪರಿಷತ್, ಸೈನ್ಯ ವಿಚಾರ ಮತ್ತು ದೇಶದ ಎಲ್ಲ ಕಾರ್ಯಗಳ ಕುರಿತು ಚಿಂತನೆ ನಡೆಯುತ್ತಿತ್ತು. ಕುಶಾಗ್ರಮತಿ ರಾಣಿ ತಕ್ಷಣವೇ ವಸ್ತು ಸ್ಥಿತಿ ಅರಿತು ಆದೇಶಿಸುತ್ತಿದ್ದಳು. ಓದು ಬರಹದಲ್ಲಿ ಪರಿಣತಳಾಗಿದ್ದಳು. ಕೆಲವೊಮ್ಮೆ ತಾನೇ ಕಾಗದದಲ್ಲಿ ಹುಕುಮ್ ಬರೆಯುತ್ತಿದ್ದಳು. ನ್ಯಾಯದ ವಿಚಾರದಲ್ಲಿ ಕಠೋರ ನಿಲುವುಳ್ಳವಳು. ಕೆಲವು ಸಲ ಸ್ವತಃ ಆನೆಯ ಮೇಲೆ ಕುಳಿತು ಚಾಟಿ ಹಿಡಿದು ಅಪರಾಧಿಗಳಿಗೆ ಶಿಕ್ಷೆ ಕೊಡುತ್ತಿದ್ದಳು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ದತ್ತುಪುತ್ರನ ಜೊತೆ ಮಹಾಲಕ್ಷ್ಮೀ ದೇವಸ್ಥಾನದ ದರ್ಶನಕ್ಕೆ ಹೋಗುತ್ತಿದ್ದಳು.

ರಾಣಿ ಲಕ್ಷ್ಮೀಬಾಯಿ ಸಾರ್ವಜನಿಕ ದರ್ಶನಕ್ಕಾಗಿ ಸಾಲಂಕೃತ ಡೋಲಿಯಲ್ಲಿ ಹೋಗುವಾಗ ಸವಾರಿಯ ಮುಂದೆ ಸೌಮ್ಯವಾಗಿ ರಣವಾದ್ಯ ಬಾರಿಸುತ್ತಿದ್ದರು. ಅವರ ಹಿಂದೆ ಇನ್ನೂರು ಅರಬಮುಸ್ಲಿಮ್ ಸೈನಿಕರು ಇರುತ್ತಿದ್ದರು. ಸವಾರಿಯ ಹಿಂದೆ ಕೂಡ ಅಷ್ಟೇ ಸೈನಿಕರಿರುತ್ತಿದ್ದರು. ಡೋಲಿಯ ಜೊತೆಗೆ ಕುದುರೆಗಳ ಮೇಲೆ ಕುಲಪುರೋಹಿತರು, ಲಿಪಿಕರು ಮತ್ತು ಆಶ್ರಿತ ಮಂಡಳಿಯವರು ಇರುತ್ತಿದ್ದರು.

ಚಿನ್ನ ಮತ್ತು ವಜ್ರದ ಆಭರಣಗಳಿಂದ ಅಲಂಕೃತರಾದ ನಾಲ್ಕಾರು ಸುಂದರ ದಾಸಿಯರು ಚಿನ್ನ ಮತ್ತು ಬೆಳ್ಳಿಯ ಚಾಮರಗಳನ್ನು ಹಿಡಿದು ಡೋಲಿಯ ಅಕ್ಕಪಕ್ಕ ಹಿಂಬಾಲಿಸುತ್ತಿದ್ದರು. ದಕ್ಷಿಣದಿಂದ ಒಳ್ಳೊಳ್ಳೆ ಮನೆಯ ಹೆಣ್ಣುಮಕ್ಕಳನ್ನು ಖರೀದಿಸಿ ತರುತ್ತಿದ್ದರು. ಅವಿವಾಹಿತರಾದ ಅವರು ತಾರುಣ್ಯದ ಮದದಿಂದ ಅದ್ಭುತವಾಗಿ ಕಾಣುತ್ತಿದ್ದರು. ಅವರಲ್ಲಿ ಕೆಲವರು ಲುಚ್ಚರ ಬಲೆಗೆ ಬಿದ್ದು ಗರ್ಭವತಿಯರಾಗುತ್ತಿದ್ದರು. ಅಂಥವರನ್ನು ಅರಮನೆ ಶುಚಿಗೊಳಿಸುವ ಕೆಲಸಕ್ಕೆ ಹಚ್ಚುತ್ತಿದ್ದರು.

ದತ್ತು ಮಾನ್ಯ ಮಾಡದ ಕಂಪೆನಿ ಸರಕಾರ

ಕೊನೆಗೂ ಕಂಪೆನಿ ಸರಕಾರ ದತ್ತು ಮಾನ್ಯ ಮಾಡಲಿಲ್ಲ. ಝಾನ್ಸಿಯನ್ನು ತಮ್ಮ ವಶಕ್ಕೆ ಪಡೆಯಿತು. ಕೇವಲ ರಾಜಭವನ ಮತ್ತು ಅದರೊಳಗಿನ ಸಂಪತ್ತನ್ನು ಇಟ್ಟುಕೊಳ್ಳಲು ಅನುಮತಿ ನೀಡಿತು. ದಿವಂಗತ ರಾಜನ ಸಾಲದ ನೆಪವೊಡ್ಡಿ ಪೆನ್ಷನ್ ಕೂಡ ರದ್ದುಗೊಳಿಸಿತು. ಬಾಲ್ಯದಿಂದಲೂ ಆತ್ಮೀಯ ಅಣ್ಣನಂತಿದ್ದ ನಾನಾಸಾಹೇಬ ಪೇಶ್ವೆಗೆ ಪತ್ರ ಬರೆದಳು. ಇಂಗ್ಲಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದಳು.

 ಮೊದಲೇ ನಿರ್ಧರಿಸಿದಂತೆ ಬಂಡೆದ್ದ ಸಿಪಾಯಿಗಳು ಗಲಭೆಗೆ ತೊಡಗಿದರು. ಮದ್ದು ಗುಂಡುಗಳ ಖಜಾನೆಯನ್ನು ವಶಕ್ಕೆ ಪಡೆದರು. ಬಿಳಿಯರ ದಂಡುಪ್ರದೇಶಕ್ಕೆ ಬೆಂಕಿ ಇಟ್ಟರು. ಕೆಲ ಬಿಳಿಯರನ್ನು ಕೊಂದು ಡೇರೆಗಳಿಗೆ ಬೆಂಕಿ ಇಟ್ಟು ಬೂದಿ ಮಾಡಿದರು. ಝಾನ್ಸಿ ರಾಣಿಯವರ ಮಹಲಿನ ಎದುರುಗಡೆ ಬಂದು ಜಯಕಾರ ಹಾಕಿದರು. ಈ ರೀತಿ ರಾಣಿ ಲಕ್ಷ್ಮೀಬಾಯಿ ಅವರಿಗೆ ರಾಜ್ಯ ಪುನಃ ದೊರೆಯಿತು. ಹನ್ನೊಂದು ತಿಂಗಳವರೆಗೆ ಯಾವುದೇ ಅಡತಡೆಗಳಿಲ್ಲಿದೆ ರಾಜ್ಯಭಾರ ಮಾಡಿದಳು. 

 ನಂತರ ಬಿಳಿಯ ಸೈನಿಕರ ತುಕಡಿಗಳು ಹಿಂದೂಸ್ತಾನಕ್ಕೆ ಬರತೊಡಗಿದವು. ಅವರು ಮದ್ರಾಸಿನ ಕರಿಯರ ತುಕಡಿಗಳನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಹೈದರಾಬಾದ್ ನಿಜಾಮನಿಂದ ಐದು ಸಾವಿರ ಸವಾರರನ್ನು ಪಡೆದರು. ಸಿಂಧಿಯಾ, ಹೋಳ್ಕರ್, ಗಾಯಕವಾಡ, ಘೋರ್ಪಡೆ ಮೊದಲಾದ ಸರದಾರರ ಸಹಾಯವನ್ನು ಪಡೆದುಕೊಂಡು ಕ್ಯಾಪ್ಟನ್ ಹ್ಯೂ ರೋಜ್ ಮುಂಬೈಯಿಂದ ಸಾಗಿದ. 

 ಕಂಪೆನಿ ಸರಕಾರದ ಸೈನ್ಯದಲ್ಲಿ ಮೂರು ಪ್ರಕಾರದವರಿದ್ದರು. ಗೆದ್ದ ಪ್ರದೇಶಗಳಲ್ಲಿ ಮೊದಲಿಗೆ ಬಂಗಾರ ಬೆಳ್ಳಿ ಲೂಟಿ ಮಾಡಲು ಬಿಳಿಯ ಸೈನಿಕರು ಬರುತ್ತಿದ್ದರು. ನಂತರ ತಾಮ್ರ ಹಿತ್ತಾಳೆ ವಸ್ತುಗಳ ಲೂಟಿಗಾಗಿ ದೇಶೀ ಸೈನಿಕರು ಬರುತ್ತಿದ್ದರು. ತದನಂತರ ಹೈದರಾಬಾದ ಕಡೆಯಿಂದ ಸೈನ್ಯ ಸೇರಿದವರು. ರೇಷ್ಮೆ ಸೀರೆ ಮುಂತಾದ ಬಟ್ಟೆ ಬರೆಗಳನ್ನು ಲೂಟಿ ಮಾಡುತ್ತಿದ್ದರು. ಇದೆಲ್ಲ ಕಟ್ಟುನಿಟ್ಟಿನ ಕ್ರಮವಾಗಿತ್ತು. ನಂತರ ಅವರು ಲೂಟಿ ಮಾಡಿದ ವಸ್ತುಗಳನ್ನು ಲಿಲಾವು ಮಾಡಿ ಹಣ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತು. ಕೆಲವೊಂದು ಸಲ ಬಂಡಾಯಗಾರರು ಸೋಲುವ ಸ್ಥಿತಿಯಲ್ಲಿದ್ದಾಗ, ಅವರೊಳಗಿನ ಲಫಂಗರು ಕೂಡ ಲೂಟಿ ಮಾಡಿಕೊಂಡು ಓಡಿಹೋಗುತ್ತಿದ್ದರು!

ಝಾನ್ಸಿಯ ಮೇಲೆ ಆಕ್ರಮಣ

 ಕಂಪೆನಿ ಸರಕಾರ ಝಾನ್ಸಿಯ ಸುತ್ತ ನಾಲ್ಕು ಕಡೆ ದೂರದ ಮೈದಾನದಲ್ಲಿ ಸೈನ್ಯ ಜಮಾಯಿಸಿತು. ಒಳ ಸಂಚುಕಾರರಿಂದಲೂ ಆಂಗ್ಲರಿಗೆ ಯುದ್ಧ ತಂತ್ರಕ್ಕೆ ಸಂಬಂಧಿಸಿದ ಮಾಹಿತಿ ಸಿಕ್ಕಿತ್ತು. ತೋಪುಗಳು ಗುಂಡು ಹಾರಿಸತೊಡಗಿದವು. ಝಾನ್ಸಿಯ ಸೈನಿಕರೂ ಪ್ರತ್ಯುತ್ತರ ಕೊಡುತ್ತಿದ್ದರು. ಜನರ ಬಗ್ಗೆ ಯೋಚಿಸುತ್ತ ರಾಣಿ ದುಃಖಿತಳಾದರೂ ತೋರಿಸಿಕೊಳ್ಳದೆ ಧೈರ್ಯ ತುಂಬುತ್ತಿದ್ದಳು. ಜನರು ಮತ್ತು ಮನೆಗಳು ಗುಂಡಿಗೆ ಆಹುತಿಯಾಗತೊಡಗಿದವು. ಏಳನೆಯ ದಿನ ಸೂರ್ಯಾಸ್ತವಾಗುತ್ತಲೇ ಶತ್ರುಗಳ ಕೈ ಮೇಲಾಯಿತು. ಎಂಟನೆಯ ದಿನ ಬೆಳಗ್ಗೆ ಆಂಗ್ಲ ಸೈನಿಕರು ಶಂಕರ ಕೋಟೆಯ ಮೇಲೆ ಗುಂಡಿನ ಮಳೆಗರೆಯತೊಡಗಿದರು. ಮದು ್ದಗುಂಡಿನ ಕಾರ್ಖಾನೆಗೆ ಆಂಗ್ಲರ ಗುಂಡು ಬಿದ್ದಾಗ ಸುಟ್ಟು ಭಸ್ಮವಾಯಿತು. ಸಾವಿರಾರು ಜನರು ಫಿರಂಗಿಗಳ ಗುಂಡಿಗೆ ಆಹುತಿಯಾದರು. ಅಳಿದುಳಿದವರು ತಮ್ಮ ಜೀವಭಯದಿಂದ ಎಲ್ಲೆಂದರಲ್ಲಿ ಅವಿತುಕೊಳ್ಳಲು ಜಾಗ ಹುಡುಕುತ್ತಿದ್ದರು. ಕೋಟೆ ಮೇಲೆ ಸೈನಿಕರು ಸತ್ತಂತೆಲ್ಲ ಹೊಸ ಸೈನಿಕರು ರಕ್ಷಣೆಗೆ ಧಾವಿಸುತ್ತಿದ್ದರು.

 ಆಂಗ್ಲರ ಸೇನೆ ಭಾರೀ ವಿನಾಶ ಮಾಡಿತು. ರಾತ್ರಿ ಹೊತ್ತಿನಲ್ಲಿ ಫಿರಂಗಿಗಳು ಭಾರೀ ಗಾತ್ರದ ಕೆಂಪು ಕೆಂಪು ಗುಂಡುಗಳ ಮಳೆ ಸುರಿಸುತ್ತಿದ್ದವು. ಝಾನ್ಸಿ ರಾಣಿ ಎಲ್ಲ ಕಡೆ ಸುತ್ತುತ್ತ ಹುರಿದುಂಬಿಸುತ್ತ ವ್ಯವಸ್ಥೆ ಮಾಡುತ್ತಿದ್ದಳು. ಪೇಶ್ವೆ ಕಡೆಯಿಂದ ಸಹಾಯ ಬಾರದೆ ಇದ್ದುದಕ್ಕೆ ಬಹಳ ಸಮಸ್ಯೆ ಆಯಿತು. ರಾವಸಾಹೇಬ ಪೇಶ್ವೆ ಅವರು ಕೂಡಲೇ ಬರುವಂತಾಗಲು ಗಣಪತಿ ಮಂದಿರದಲ್ಲಿ ನೂರು ಬ್ರಾಹ್ಮಣರಿಂದ ಅನುಷ್ಠಾನ ಮಾಡಿಸಲಾಯಿತು!

ಇತ್ತ ಕಾಲಪಿಯಿಂದ ತಾತ್ಯಾ ಟೋಪೆ 15 ಸಾವಿರ ಸೈನ್ಯದೊಂದಿಗೆ ವೇಗವಾಗಿ ಬಂದು ಝಾನ್ಸಿ ತಲುಪಿದ. ರಾತ್ರೋರಾತ್ರಿ ನಾಲ್ಕೂ ಕಡೆ ಸೇನೆಯನ್ನು ನಿಯೋಜಿಸಿದ. ಎಲ್ಲೆಡೆ ಸೀಟಿ, ರಣವಾದ್ಯ ಮತ್ತು ಗುಂಡುಗಳ ಸದ್ದೇ ಕೇಳಿಸುತ್ತಿತ್ತು. ಕೊನೆಗೆ ತಾತ್ಯಾ ಟೋಪೆಯ ಸೈನ್ಯ ದುರ್ಬಲವಾಗತೊಡಗಿತು. ಕುದುರೆ ಸವಾರರ ಪಡೆಯೂ ಓಡತೊಡಗಿತು. ಆಂಗ್ಲರು ಓಡಿಹೋಗುತ್ತಿದ್ದವರ ಮೇಲೆಯೂ ತೋಪುಗಳಿಂದ ಗುಂಡು ಎಸೆದರು. ಆಗ ತಾತ್ಯಾ ಟೋಪೆ ದೊಡ್ಡ ದೊಡ್ದ ದೊಡ್ಡ ತೋಪುಗಳನ್ನೆಲ್ಲ ಬಿಟ್ಟು ಪಾರಾಗುವುದು ಅನಿವಾರ್ಯವಾಯಿತು. ಅವೆಲ್ಲ ಆಂಗ್ಲರ ಪಾಲಾದವು.

 ರಾತ್ರಿ ಕಳೆದು ಯುದ್ಧ ಹನ್ನೊಂದನೇ ದಿನಕ್ಕೆ ಕಾಲಿಟ್ಟಿತು. ಝಾನ್ಸಿ ರಾಣಿ ತಲ್ವಾರ ಹಿಡಿದು ತಿರುಗುತ್ತ ಎಲ್ಲರಿಗೂ ಧೈರ್ಯ ತುಂಬುತ್ತಿದ್ದಳು. ನಿಂತುಹೋದ ತೋಪುಗಳು ಮತ್ತೆ ಆರಂಭವಾದವು. ಆಗ ಆಂಗ್ಲರು ಅರಮನೆಯ ಮೇಲೆಯೇ ಗುಂಡು ಹಾರಿಸತೊಡಗಿದರು. ಒಳಗಿದ್ದವರು ನೆಲಮಾಳಿಗೆಯಲ್ಲಿ ಅವಿತುಕೊಳ್ಳತೊಡಗಿದರು. ಒಂದೇ ಕೋಣೆಯಲ್ಲಿ 64 ಜನರ ನೂಕು ನುಗ್ಗಲಾಯಿತು. ವಿಷ್ಣುಭಟ್ಟ ಅದರಲ್ಲೇ ಇದ್ದ. ಬೇಸಿಗೆ ಕಾಲ, ಗುಂಡಿನ ದಾಳಿಯ ಭಯ ಮತ್ತು ಜನಸಂದಣಿಯಿಂದಾಗಿ ಉಸಿರುಗಟ್ಟಿದಂತಾಗಿ ಬೆವರು ಸುರಿಯತೊಡಗಿತು. ಎಲ್ಲ ಜೀವಗಳು ಒದ್ದಾಡುತ್ತಿದ್ದವು.

 ಈ ರೀತಿ ನಿರಂತರ 12 ದಿನಗಳ ವರೆಗೆ ಯುದ್ಧ ನಡೆಯಿತು. ಎಂದಿನಂತೆ ಆ ರಾತ್ರಿ ಕೂಡ ಝಾನ್ಸಿ ರಾಣಿ ಗಸ್ತು ತಿರುಗುತ್ತ ಬಂದೋಬಸ್ತಿನಲ್ಲಿ ನಿರತಳಾಗಿದ್ದಳು. ಬೆಳಗಾಗುವಷ್ಟರಲ್ಲಿ ಬ್ರಿಟಿಷ್ ಸೈನಿಕರು ಮುತ್ತಿಗೆ ಹಾಕಿದರು. ಆಗ ಝಾನ್ಸಿ ರಾಣಿ ತಲ್ವಾರ್ ಹಿಡಿದು 1,500 ನಿಷ್ಠಾವಂತ ಅರಬಮುಸ್ಲಿಮ್ ಸೈನಿಕರನ್ನು ಕರೆದುಕೊಂಡು ಕೋಟೆಯಿಂದ ಕೆಳಗಿಳಿದರು. ಆ ಮುಸಲ್ಮಾನ ಯೋಧರೆಲ್ಲ ಕುದುರೆ ಸವಾರರು ಅವರ ಬಳಿ ಖಡ್ಗಗಳಿದ್ದವು. ಬಂದೂಕುಗಳಿರಲಿಲ್ಲ. ಹೀಗಾಗಿ ಬ್ರಿಟಿಷರ ಗುಂಡಿಗೆ ಬಲಿಯಾಗುವ ಪರಿಸ್ಥಿತಿ ಉಂಟಾಯಿತು. ಆಂಗ್ಲರ ಮತ್ತು ಮುಸ್ಲಿಮ್ ಸೈನಿಕರ ಮಧ್ಯದ ಯುದ್ಧ ರೋಮಾಂಚನಕಾರಿಯಾಗಿತ್ತು. ಝಾನ್ಸಿ ರಾಣಿ ತಲ್ವಾರ್ ಎತ್ತಿ ಹಿಡಿದು ಕೊಚ್ಚಿ ಕೊಚ್ಚಿ ಹಾಕುತ್ತಿದ್ದಳು. ಎಲ್ಲ ಕಡೆಯಿಂದ ಒಳನುಗ್ಗಿದ ಆಂಗ್ಲರ ಪಡೆ 5 ವರ್ಷದಿಂದ 80 ವರ್ಷದವರ ತನಕ ಸಿಕ್ಕಸಿಕ್ಕವರನ್ನು ಕೊಚ್ಚಿ ಹಾಕಿತು. ಮನೆ ಮನೆಗಳಿಗೆ ನುಗ್ಗಿ ಕೊಲೆ ಲೂಟಿ ಮಾಡತೊಡಗಿತು.  ಪರಿಸ್ಥಿತಿ ಕೈ ಮೀರಿತು. ನಂತರ ಪುರುಷವೇಷದಲ್ಲಿದ್ದ ರಾಣಿ ಲಕ್ಷ್ಮೀಬಾಯಿ ಎಲ್ಲ ಸಿದ್ಧತೆ ಮಾಡಿಕೊಂಡು 12 ವರ್ಷದ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಮಧ್ಯರಾತ್ರಿಯಲ್ಲಿ ಹೊರಟಳು. ಆಂಗ್ಲರ ಸೈನ್ಯವನ್ನು ಎದುರಿಸುತ್ತಲೇ ಗಂಡಾಂತರವನ್ನು ದಾಟಿ ಮರುದಿನ ಅರ್ಧರಾತ್ರಿ ಸುಮಾರಿಗೆ ಕಾಲಪಿ ತಲುಪಿದಳು.

 ಯುದ್ಧ ಮುಗಿದ ನಂತರ 15 ದಿನಗಳವರೆಗೆ ಝಾನ್ಸಿಯಲ್ಲೇ ಇದ್ದ ವಿಷ್ಣುಭಟ್ಟ ಚಿಕ್ಕಪ್ಪನ ಜೊತೆ ಕಾಶಿಗೆ ಹೋಗಲು ನಿರ್ಧರಿಸಿದ. ಇಬ್ಬರೂ ಕಾಲಪಿಯ ಮಾರ್ಗ ಹಿಡಿದು ಹೊರಟರು. ಕಾಲಪಿ ಇನ್ನೂ ಎರಡು ಮೈಲಿ ದೂರವಿದ್ದಾಗ ಹಳ್ಳಿಯೊಂದನ್ನು ತಲುಪಿದರು. ಅಲ್ಲಿಯೆ ರಾತ್ರಿ ಕಳೆದರು. ಬೆಳಗ್ಗೆ ಬಾವಿ ಬಳಿ ನೀರು ಸೇದಿ ಮುಖ ತೊಳೆದುಕೊಂಡು ಕುಳಿತರು. ಆಗ ನಾಲ್ಕೈದು ಕುದುರೆ ಸವಾರರು ಬಾವಿಯ ಬಳಿ ಬಂದರು. ಅವರಲ್ಲಿ ಪಠಾಣಿ ಪೋಷಾಕಿನಲ್ಲಿ ಝಾನ್ಸಿ ರಾಣಿಯೂ ಇದ್ದಳು. ಶರೀರ ಧೂಳಿನಿಂದ ಕೂಡಿತ್ತು. ನೀವು ವಿದ್ವಾನ್ ಬ್ರಾಹ್ಮಣರು. ನೀರು ಸೇದುವುದು ಬೇಡ, ನಾನೇ ಸೇದಿಕೊಳ್ಳುತ್ತೇನೆ ಎಂದು ಝಾನ್ಸಿ ರಾಣಿ ಹೇಳಿದಳು!

 ನಂತರ ಗ್ವಾಲಿಯಾರ್ ಬಳಿಯ ಮುರಾರಿನಲ್ಲಿ ಬ್ರಿಟಿಷರ ಜೊತೆಗೆ ನಡೆದ ಯುದ್ಧದಲ್ಲಿ ಝಾನ್ಸಿ ರಾಣಿ ಗುಂಡೇಟಿನಿಂದ ಗಾಯಗೊಂಡಳು. ಆದರೂ ಹೋರಾಡುತ್ತ ಹುತಾತ್ಮಳಾದಳು!

 ಪರಿಶುದ್ಧ ಮನಸ್ಸಿನ ವಿಷ್ಣುಭಟ್ಟ ಹೀಗೆ 1857ರ ಹೋರಾಟದ ಒಳನೋಟಗಳನ್ನು ದಾಖಲಿಸಿದ್ದಾನೆ. ಪ್ರವಾಸದಲ್ಲಿ ವ್ರತನಿಷ್ಠನಾಗಿ ಮತ್ತು ಸ್ಥಿತಪ್ರಜ್ಞನಾಗಿ ಆತ ಅನುಭವಿಸಿದ ಕಷ್ಟನಷ್ಟಗಳು ನಮ್ಮ ವೈರಿಗೂ ಬರಬಾರದು ಎಂದು ಓದುಗರಿಗೆ ಅನಿಸದೆ ಇರಲಾರದು. ಕಡುಬಡತನದಲ್ಲಿ ಬದುಕುತ್ತಿದ್ದ ಅವರಿಗೆ ಒಂದು ಪೈಸೆಯೂ ಉಳಿಯಲಿಲ್ಲ. ಸಿಕ್ಕ ಹಣವೆಲ್ಲ ದಾರಿಗಳ್ಳರ ಪಾಲಾಯಿತು!

ಡಾ. ಜಿ.ಭಾಸ್ಕರ ಮಯ್ಯ ಅವರು ಶ್ರದ್ಧೆಯಿಂದ ‘ಮಾಝಾ ಪ್ರವಾಸ’ವನ್ನು ಅನುವಾದಿಸಿ ‘ನನ್ನ ಪ್ರವಾಸ’ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ರಂಜಾನ್ ದರ್ಗಾ

contributor

Similar News

ಭಾವ - ವಿಕಲ್ಪ
ಕಥೆಗಾರ