ಇತಿಹಾಸಕ್ಕಂಟಿದ ಧೂಳು ಝಾಡಿಸಿದಾಗ ಗೋಚರಿಸುವ ಸತ್ಯ
ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿಯ ಶ್ರೀಮತಿ ವಿ.ಎಚ್.ಡಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿದ್ದಾರೆ. ಕನಕಪುರದ ರೂರಲ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿರುತ್ತಾರೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ, ಬೆಂಗಳೂರು ವಿ.ವಿ.ಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ, ಮೈಸೂರು ಮುಕ್ತ ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವೀಧರರು. ಕೃತಿಗಳು: ‘ಕ್ಯಾಸ್ಟ್ ಕೆಮಿಸ್ಟ್ರಿ’, ‘ಚಿತ್ರಲೆ ವೃಕ್ಷ’ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ‘ಥಾಯ್ಲ್ಯಾಂಡ್ ಎಂಬ ಮುಗುಳ್ನಗೆ’ (ಪ್ರವಾಸ ಕಥನ), ‘ನಿಜ ಭ್ರಮೆಗಳ ರೂಪಕ’ (ಲೇಖನಗಳ ಸಂಗ್ರಹ), ‘ಮತಾಂತರ ಸತ್ಯಾನ್ವೇಷಣೆ’ (ಸಂಪಾದನೆ), ‘ಕರ್ನಾಟಕದ ಸಮಾಜಶಾಸ್ತ್ರ’ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ) ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ.
ದಕ್ಷಿಣ ಏಶ್ಯದಲ್ಲಿ ಬುದ್ಧನ ಅರಿವು ಮತ್ತು ಇರುವು ಇಲ್ಲದ ಜಾಗವನ್ನು ಹುಡುಕುವುದು ಕಷ್ಟ. ಭಾರತ ಅದರಲ್ಲಿಯೂ ಕನ್ನಡ ನಾಡಿನಲ್ಲಿ ಬುದ್ಧ ಸಾಹಿತ್ಯ, ಕಾವ್ಯ ಮತ್ತು ಸಂಸ್ಕೃತಿಯ ಭಾಗವಾಗಿದ್ದಾನೆ. ಕನ್ನಡ ಕಾವ್ಯ ಪರಂಪರೆಯಂತೂ ಬುದ್ಧನ ಅರಿವಿನಲ್ಲಿ ತನ್ನನ್ನು ಮರುಶೋಧಿಸಿಕೊಳ್ಳುವ, ನಿಕಶಕ್ಕೆ ಒಡ್ಡಿಕೊಳ್ಳುವ ಕೆಲಸ ಮಾಡುತ್ತಲೇ ಬಂದಿದೆ. ನಮ್ಮ ಸ್ಥಳೀಯ ಪ್ರಜ್ಞೆಯಲ್ಲಿ ಬೌದ್ಧ ಧರ್ಮ ಎನ್ನುವ ಪರಿಕಲ್ಪನೆಗಿಂತ ಬುದ್ಧ ಪ್ರಜ್ಞೆಯು ಆಳಕ್ಕಿಳಿದಂತೆ ತೋರುತ್ತದೆ. ಎಲ್ಲ ಪ್ರಗತಿಪರ ಚಳವಳಿಗಳು ಒಂದಲ್ಲ ಒಂದು ರೀತಿಯಲ್ಲಿ ಬುದ್ಧನನ್ನು ತಮ್ಮ ವಿಶ್ವಾತ್ಮಕತೆಯ ಭಾಗವನ್ನಾಗಿಸಿಕೊಂಡಿದ್ದಾರೆ. ಕಟ್ಟಾ ಎಡಪಂಥೀಯರು ಬುದ್ಧ ಪ್ರಜ್ಞೆಯ ಬಗೆಗೆ ಮೃದು ಧೋರಣೆಯನ್ನು ತಳೆಯುತ್ತಾರೆ. ಕನ್ನಡ ನಾಡಿನಲ್ಲಿ ಮಾನವೀಯ ಸೆಲೆ ಬತ್ತಿಹೋಗದಂತೆ ಕಾಪಾಡಿರುವ ತಲಪರಿಗೆಗಳಲ್ಲಿ ಬುದ್ಧನೂ ಒಬ್ಬ.
ದಲಿತ ಚಳವಳಿಯು ಮೊದಲಿನಿಂದಲೂ ಬಾಬಾ ಸಾಹೇಬರ ಜೊತೆಗೆ ಬುದ್ಧನನ್ನೂ ತನ್ನ ಪ್ರಜ್ಞೆಯಲ್ಲಿ ಇರಿಸಿಕೊಂಡು ಸಾಗುತ್ತಿದೆ. ದಿನದಿಂದ ದಿನಕ್ಕೆ ಇದು ಜಾಸ್ತಿಯಾಗುತ್ತಿದೆ. ಪ್ರಗತಿಪರ ಚಳವಳಿಗಳನ್ನು ಹೊರತುಪಡಿಸಿಯೂ ಸಾರ್ವಜನಿಕವಾಗಿ ಬುದ್ಧನ ಸ್ವೀಕಾರ ಗಣನೀಯವಾಗಿ ಕಂಡುಬರುತ್ತದೆ. ಹೋಟೆಲ್ಗಳಲ್ಲಿ, ಮನೆ ಒಳಾಲಂಕಾರದಲ್ಲಿ, ಉದ್ಯಾನವನಗಳಲ್ಲಿ, ಸೂಪರ್ ಮಾರ್ಕೆಟ್ನ ಪ್ರಾಂಗಣಗಳಲ್ಲಿ ಬುದ್ಧನ ಮೂರ್ತಿ ಅಥವಾ ಪೇಂಟಿಂಗ್ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಇತರ ದೇವಮಾನವರಿಗೆ ದೊರಕದ ಸ್ವೀಕೃತಿಯು ಒಂದು ವಿಶಿಷ್ಟ ವಿದ್ಯಮಾನವಾಗಿದೆ. ಇಂತಹ ಸ್ವೀಕೃತಿಗೆ ಕಾರಣವೇನು?
ಥಾಯ್ಲೆಂಡಿನಲ್ಲಿಯೋ, ಬರ್ಮಾದಲ್ಲಿಯೋ ಮತ್ತು ಶ್ರೀಲಂಕಾದಲ್ಲಿಯೋ ಇಂತಹ ವಿದ್ಯಮಾನಕ್ಕೆ ವಿಶೇಷ ಅರ್ಥವೇನಿಲ್ಲ. ಏಕೆಂದರೆ ಬೌದ್ಧ ಧರ್ಮೀಯರು ಅಪಾರ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ನಗಣ್ಯ ಎನಿಸುವಷ್ಟು ಬೌದ್ಧರ ಜನಸಂಖ್ಯೆ ಇದೆ. ಇಲ್ಲಿ ಬೌದ್ಧರಿದ್ದರೆ ಅದು ಬಾಬಾ ಸಾಹೇಬರು ಅನುಸರಿಸಿದ ನವಯಾನ. ನವಯಾನ ಬೌದ್ಧ ಪಂಥಕ್ಕೆ ಸೇರಿದವರೇ ಜಾಸ್ತಿ. ಆದರು ಸಹ ಬೌದ್ಧ ಧರ್ಮೀಯರಲ್ಲದ ವಿವಿಧ ಜಾತಿಗಳಿಗೆ ಸೇರಿರುವ ಧರ್ಮಗಳ ಜನರು ಯಾವುದೇ ಮಡಿವಂತಿಕೆಯನ್ನು ತೋರದೆ ಬುದ್ಧನ ಕಲಾ ರೂಪದ ಇರುವಿಕೆಯನ್ನು ಒಪ್ಪಿ ಕೊಂಡಿದ್ದಾರೆ. ಇದು ಕೇವಲ ಸೌಂದರ್ಯ ಪ್ರಜ್ಞೆಯಿಂದ ಮಾತ್ರ ಬರುವುದಲ್ಲ, ಸಂಸ್ಕೃತಿಯೊಂದರ ಪ್ರಜ್ಞೆಯ ಭಿತ್ತಿಯಲ್ಲಿ ಇದರ ಕುರುಹುಗಳು ಅಡಗಿರಬೇಕು. ಅದನ್ನು ಅನಾವರಣಗೊಳಿಸುವುದು ಅಧ್ಯಯನ ಮಾಡುವುದು ಸಮಾಜ ಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು ಮತ್ತು ಚರಿತ್ರಕಾರರ ಆಸಕ್ತಿಗೆ ಬಿಟ್ಟಿದ್ದು.
ನಾಗರಿಕತೆಗಳ ಘರ್ಷಣೆ, ತೀವ್ರಗೊಳ್ಳುತ್ತಿರುವ ಕೋಮುವಾದ ಮತ್ತು ಧಾರ್ಮಿಕ ಸಂಘರ್ಷಗಳ ನಡುವೆ ಇದ್ಯಾವುದಕ್ಕೂ ಸಿಲುಕದೆ ಬುದ್ಧ ಕಲೆಯಾಗಿ, ಕಾವ್ಯವಾಗಿ, ಗದ್ಯವಾಗಿ, ಕಾದಂಬರಿಯಾಗಿ ಅಲಂಕಾರಿಕ ವಸ್ತುವಾಗಿ ನೆಮ್ಮದಿ ನೀಡುವ ಧ್ಯಾನಸ್ಥನಾಗಿ ಕಾಣಿಸಿಕೊಳ್ಳುತ್ತಿರುವ ಪರಿಯು ವಿಶಿಷ್ಟವಾಗಿದೆ. ಇಂಥ ವಿಸ್ಮಯವನ್ನು ಅರ್ಥಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ನನಗೆ ಡಗ್ಲಾಸ್ ಒಬರ್ ಅವರ ‘ಡಸ್ಟ್ ಆನ್ ದ ಥ್ರೋನ್’ ಕೃತಿಯು ದೊರಕಿತು.
ಡಗ್ಲಾಸ್ ಒಬರ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಮತ್ತು ಗ್ಲೋಬಲ್ ಅಫೇರ್ಸ್ನ ಇತಿಹಾಸ ವಿಭಾಗದಲ್ಲಿ ಇರುವ ಸಂಶೋಧಕ ಮತ್ತು ಅಧ್ಯಾಪಕ. ಏಶ್ಯಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಗಳನ್ನು ಮಾಡಿದವರು. ಟಿಬೆಟ್ನಲ್ಲಿ ಬೆಂಕಿಗೆ ಆಹುತಿಯಾಗುವುದರ ಕುರಿತು, ಭಾರತದಲ್ಲಿನ ಬೌದ್ಧ ಪರಂಪರೆಯನ್ನು ಕುರಿತ ರಾಜಕೀಯದ ಬಗ್ಗೆ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಹಿಂದೂ ಕಲಾ ಪ್ರದರ್ಶನ ಕುರಿತು, ಮ್ಯಾನ್ಮಾರ್ನಲ್ಲಿನ ರೊಹಿಂಗ್ಯಾ ಬಿಕ್ಕಟ್ಟು ಮತ್ತು ವಸಾಹತುಶಾಹಿ ಭಾರತದ ಮೇಲೆ ಸೋವಿಯತ್ ಪ್ರಭಾವವನ್ನು ಕುರಿತು ಸಂಶೋಧನೆಗಳನ್ನು ಮಾಡಿದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ಏಶ್ಯ ಖಂಡವನ್ನು ಅದರಲ್ಲಿಯೂ ದಕ್ಷಿಣ ಏಶ್ಯವನ್ನು ತಮ್ಮ ಅಧ್ಯಯನದ ಕೇಂದ್ರವನ್ನಾಗಿಸಿಕೊಂಡಿರುವ ಡಗ್ಲಾಸ್ ಒಬರ್, ಫುಲ್ ಬ್ರೈಟ್ ಫೆಲೊಶಿಪ್ ಪಡೆದು ಆಧುನಿಕ ಭಾರತದಲ್ಲಿ ಬೌದ್ಧ ಧರ್ಮದ ಕುರಿತು ಹುಡುಕಾಟ ವನ್ನು ನಡೆಸಿದ್ದಾರೆ. ಈ ಹುಡುಕಾಟದ ಭಾಗವಾಗಿಯೇ ಅವರ ‘ಡಸ್ಟ್ ಆನ್ ದ ಥ್ರೋನ್ - ದ ಸರ್ಚ್ ಫಾರ್ ಬುದ್ಧಿಸಂ ಇನ್ ಮಾಡರ್ನ್ ಇಂಡಿಯಾ’ ಕೃತಿಯು ರೂಪುಗೊಂಡಿದೆ. ಇದನ್ನು ನವಯಾನ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ.
ಡಗ್ಲಾಸ್ ಒಬರ್ರ ಕೃತಿಯು ನನಗೆ ದೊರಕಿದ ಕೂಡಲೇ ಅಪಾರ ಸಂತೋಷ ಉಂಟಾಯಿತು. ಜಾಲತಾಣಗಳಲ್ಲಿ ಡಗ್ಲಾಸ್ ಒಬರ್ ಮತ್ತು ಅವರ ಕೃತಿಯ ಸಣ್ಣ ಪುಟ್ಟ ವಿವರಗಳನ್ನು ನೋಡಿ ಅದನ್ನು ಓದಲೇಬೇಕೆಂಬ ಆಸಕ್ತಿ ಉಂಟಾಯಿತು. ಏಕೆಂದರೆ ನನಗೆ ಅಲ್ಲಿಯವರೆಗೂ ಬುದ್ಧ ಮತ್ತು ಅವನ ದಮ್ಮ ಕುರಿತು ಒಂದು ಸಣ್ಣ ಪ್ರಮಾಣದ ತಿಳುವಳಿಕೆ ಇತ್ತು. ದಲಿತ ಚಳವಳಿಯ ಸಂಪರ್ಕದಿಂದಾಗಿ ಮತ್ತು ನನಗೆ ತಿಳಿಯದ ಅನೇಕ ಕಾರಣಗಳಿಗಾಗಿ ಬುದ್ಧನ ಕಡೆಗೆ ಅದಮ್ಯ ಪ್ರೀತಿಯು ಬೆಳೆದಿತ್ತು. ಬೌದ್ಧ ಧರ್ಮ ಭಾರತದಲ್ಲಿತ್ತು, ನಂತರ ಇಲ್ಲಿಂದ ಕಾಣೆಯಾಯಿತು ಎಂಬ ಪ್ರಮೇಯವು ಸದಾ ಗಿರಕಿ ಹೊಡೆಯುತ್ತಿತ್ತು. ಅದಕ್ಕೆ ಪೂರಕವಾಗಿ ಭಗವಾನ್ರವರ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಸ್ತಕದ ಓದು ನೆರವಾಯಿತು. ಮತ್ತಷ್ಟು ತಿಳುವಳಿಕೆ ಬಂದಂತೆ ಬಾಬಾ ಸಾಹೇಬರು ಬೌದ್ಧ ಧರ್ಮವನ್ನು ಸ್ವೀಕರಿಸಿದ ವಿಚಾರವು ಬುದ್ಧ ಮತ್ತು ಅವನ ದಮ್ಮದ ಬಗೆಗಿನ ಪ್ರೀತಿಯನ್ನು ಇಮ್ಮಡಿಗೊಳಿಸಿತು. ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’ ಎಂಬ ಹೇಳಿಕೆಯು ನಮ್ಮ ನಂಬಿಕೆ ಮತ್ತು ವಿಚಾರಗಳಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿತು. ಹಾಗೆಯೇ ಬುದ್ಧನ ಬಗೆಗಿನ ವಿಚಾರ, ವಿಮರ್ಶೆ ಅರಳಿಮರದಂತೆ ಬೇರುಬಿಡತೊಡಗಿತು. ಇದೆಲ್ಲವನ್ನೂ ಬರೆಯುವಾಗ ಕಂಡುಬರುವಷ್ಟು ಸ್ಪಷ್ಟತೆ ನಮ್ಮ ಯೋಚನೆಗಳಲ್ಲಿ ಇರಲಿಲ್ಲವೆನಿಸುತ್ತದೆ. ಆದರೆ ಇವೆಲ್ಲವೂ ಬುದ್ಧನ ಕುರಿತು ನಮ್ಮದೇ ಕೆಲವು ನಿರ್ಣಯಗಳಿಗೆ ತಲುಪುವಂತೆ ಮಾಡಿದವು. ಅವುಗಳಲ್ಲಿ ಪ್ರಮುಖವಾದುದು 12 ಮತ್ತು 13ನೇ ಶತಮಾನದಲ್ಲಿ ಬೌದ್ಧ ಧರ್ಮವು ಶಂಕರಾಚಾರ್ಯರ ದಾಳಿ ಮತ್ತು ಬ್ರಾಹ್ಮಣವಾದದ ವ್ಯವಸ್ಥಿತ ಪ್ರಯತ್ನದಿಂದ ಸಂಪೂರ್ಣವಾಗಿ ಕಣ್ಮರೆಯಾಯಿತು, ಅದನ್ನು 1950ರ ದಶಕದಲ್ಲಿ ಬಾಬಾ ಸಾಹೇಬರು ಪುನರುಜ್ಜೀವನಗೊಳಿಸಿದರು ಎಂಬ ನಿರ್ಣಯವನ್ನು ಮರುಪರಿಶೀಲಿಸುವಂತೆ ಡಗ್ಲಾಸ್ ಒಬರ್ ಅವರ ಡಸ್ಟ್ ಆನ್ ದ ಥ್ರೋನ್ ಪುಸ್ತಕವು ಒತ್ತಾಯಿಸುತ್ತದೆ.
ಕೆಲವು ಸಂಶೋಧನಾ ಕೃತಿಗಳು ಮಾಹಿತಿಯನ್ನು ಒದಗಿಸುತ್ತವೆ, ಆಕರಗಳನ್ನು ನಿರ್ಲಿಪ್ತವಾದ ಭಾಷೆಯಲ್ಲಿ ವಿವರಿಸುತ್ತವೆ, ಕುತೂಹಲವನ್ನು ಕಾಯ್ದುಕೊಳ್ಳುವುದಿಲ್ಲ, ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುವಲ್ಲಿ ವಿಫಲವಾಗುತ್ತವೆ. ಕೆಲವು ಸಂಶೋಧನಾ ಕೃತಿಗಳು ಪ್ರಚೋದನಾಕಾರಿಯಾಗಿರುತ್ತವೆ. ಆಕರಗಳ ಕೊರತೆ ಇರುತ್ತದೆ, ಓದುಗನನ್ನು ಒಪ್ಪಿಸಲು ತಿಣುಕಾಡುತ್ತವೆ, ಅವುಗಳಿಗೆ ಭವಿಷ್ಯದ ದಿಕ್ಸೂಚಿಯ ಬಗೆಗೆ ನಿರಾಸಕ್ತಿ ಇರುತ್ತದೆ. ದೊರಕುವ ಶಾಸನ, ಪುರಾತತ್ವ ದಾಖಲೆ, ಕರಪತ್ರ, ಯಾವುದೋ ವ್ಯಕ್ತಿಯ ಸಂದರ್ಶನ, ಚಾರಿತ್ರಿಕ ಘಟನೆ - ಇವುಗಳನ್ನು ಹದವಾಗಿ ಜೋಡಿಸಿ ಮಂಡಿಸುವ ಕಲೆಯನ್ನು ಅರಿತಿರುವುದಿಲ್ಲ. ಇದರಿಂದಾಗಿ ಎಷ್ಟೋ ಸಂಶೋಧನಾ ಕೃತಿಗಳು ಓದಿಸಿಕೊಳ್ಳುವುದೂ ಇಲ್ಲ. ಹಾಗೆಂದರೆ ಅವು ಮಾರುಕಟ್ಟೆಯ ತಂತ್ರವಾಗಿರಬೇಕೆಂಬ ಭಾಗವಾಗಿ ಹೇಳುತ್ತಿಲ್ಲ. ಸಾಮಾನ್ಯ ಓದುಗನೊಬ್ಬನ ತಿಳುವಳಿಕೆಗೆ ನಿಲುಕುವಂತಿರಬೇಕು. ಅಂತಹ ಅಪರೂಪದ ಪುಸ್ತಕಗಳಲ್ಲಿ ಡಸ್ಟ್ ಆನ್ ದ ಥ್ರೋನ್ ಕೂಡ ಒಂದು. ಈ ಪುಸ್ತಕದಲ್ಲಿ ಏಳು ಅಧ್ಯಾಯಗಳಿವೆ. ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ನೀಡಿರುವ ಸಂಕ್ಷಿಪ್ತ ಪದಗಳ ವಿವರಣೆ, ಭಾಷಾ ಬಳಕೆಯನ್ನು ಕುರಿತ ಪೀಠಿಕೆಯು ಕಂಡುಬರುತ್ತದೆ. ಕಡೆಯಲ್ಲಿ ಸರಿಸುಮಾರು 100 ಪುಟಗಳಷ್ಟು ಅಡಿ ಟಿಪ್ಪಣಿ, ಗ್ರಂಥಋಣ, ಕೃತಜ್ಞತೆ, ಗ್ರಂಥ ಸೂಚಿ, ಛಾಯಾಚಿತ್ರ ಮೊದಲಾದವುಗಳನ್ನು ಒಳಗೊಂಡಿದೆ. ಈ ನೂರು ಪುಟಗಳಲ್ಲಿ ಅಡಗಿರುವ ಅಗಾಧತೆಯು ಮುಂದಿನ ಗಹನ ಸಂಶೋಧನೆಗಳಿಗೆ ದಾರಿಮಾಡಿಕೊಡುತ್ತದೆ.
ಅಂತಹ ಗಹನ ಸಂಶೋಧನೆ ಏನೆಂದರೆ, ಈಗಾಗಲೇ ಮೇಲೆ ತಿಳಿಸಿದಂತೆ ಬಹುತೇಕ ಭಾರತೀಯರು ನಂಬಿರುವಂತೆ ಬೌದ್ಧ ಧರ್ಮವು 12-13ನೇ ಶತಮಾನದಲ್ಲಿ ಸಂಪೂರ್ಣವಾಗಿ ಭಾರತದಿಂದ ನಿರ್ಗಮಿಸಿತು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ವಿದ್ಯಮಾನದ ಅಡಿಯಲ್ಲಿ ಪುನರುಜ್ಜೀವನಗೊಂಡಿತು ಎಂಬ ಪ್ರಮೇಯಗಳಲ್ಲಿಯೇ ಸ್ಥಿರವಾಗಿತ್ತು. ಈ ಸ್ಥಿರತೆಯನ್ನು ಪ್ರಶ್ನಿಸಿ ಅದರಿಂದಾಚೆಗೆ ಮತ್ತೇನಾದರೂ ನಡೆದಿದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಸಂಶೋಧನೆಯು ಸಾಗುತ್ತದೆ. ಇಲ್ಲಿ ಮತ್ತೂ ಒಂದು ತೊಡಕಿದೆ. ಬಹುತೇಕ ಜನ ನಿರ್ವಸಾಹತೀಕರಣ (ಡಿಕಾಲೊನೈಸೇಜನ್)ದ ಬಗೆಗೆ ಮಾತನಾಡುತ್ತಾರೆ. ಆದರೆ ಆ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ಸಂಶೋಧನೆಯ ಆಧಾರಗಳಲ್ಲಿ ವಿವರಿಸುವುದಿಲ್ಲ. ಅದಕ್ಕೆ ಉತ್ತರವೆಂಬಂತೆ ಡಗ್ಲಾಸ್ ಒಬರ್ ಆಧುನಿಕ ಭಾರತದಲ್ಲಿ 1800ರಿಂದ 1956ರವರೆಗೆ ವಸಾಹತುಶಾಹಿ ಚಿಂತಕರು ಮತ್ತು ಯೂರೋಪಿಯನ್ ವಿದ್ವಾಂಸರ ತಿಳುವಳಿಕೆಯ ಹೊರತಾಗಿಯೂ ತಮ್ಮದೇ ರೀತಿಯಲ್ಲಿ ಬುದ್ಧ ಮತ್ತು ಅವನ ದಮ್ಮದ ಚಹರೆಗಳನ್ನು ಉಳಿಸಿಕೊಂಡು ಬೆಳೆಸುತ್ತಾ ಹೋಗಿರುವುದನ್ನು ಸಂಕಥನದ ರೂಪದಲ್ಲಿ ನೀಡಿರುವುದೇ ಈ ಪುಸ್ತಕದ ಮಹತ್ವವನ್ನು ತಿಳಿಸುತ್ತದೆ. ಸೃಜನಶೀಲತೆ ಮತ್ತು ಸಂಶೋಧನೆಯನ್ನು ಮೇಳೈಸಿ ಪತ್ತೆದಾರಿ ಶೈಲಿಯನ್ನು ತಂತ್ರವಾಗಿ ಬಳಸಿ, ಆದರೆ ಸಂಶೋಧನಾ ವಿಷಯದ ಘನತೆಗೆ ಕುಂದುಂಟುಮಾಡದಂತೆ ಈ ಕೃತಿಯು ರೂಪಿತವಾಗಿದೆ.
ಕೃತಿಯಲ್ಲಿ ಭಾಷಾ ಬಳಕೆಯ ಬಗ್ಗೆ ಎಚ್ಚರವನ್ನು ವಹಿಸಿರುವುದು ಕಾಣಿಸುತ್ತದೆ. ಲೇಖಕ ಜನಸಾಮಾನ್ಯರು ಬಳಸುವ ಪದಗಳನ್ನೇ ಬಳಸಲು ಪ್ರಯತ್ನಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ತಳ ಸಮುದಾಯಗಳ ಜನರ ಚರಿತ್ರೆಯು ದಾಖಲಿಸಲ್ಪಡುವುದಿಲ್ಲ, ಏಕೆಂದರೆ ಅದು ಅನೇಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಘರ್ಷಣೆಗಳನ್ನು ಒಳಗೊಂಡಿರುತ್ತದೆ. ಎಷ್ಟೋ ಸಾರಿ ಅರಾಜಕವಾಗಿ ಅಸಂಬದ್ಧವಾಗಿ, ಅಚಾರಿತ್ರಿಕವಾಗಿ ಜೋಡಿಸಲ್ಪಟ್ಟಿರುತ್ತದೆ ಎಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡಂತೆ ಬುದ್ಧ ಮತ್ತು ಅವನ ದಮ್ಮದ ಚರಿತ್ರೆಯನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಆಧುನಿಕ ಭಾರತದಲ್ಲಿ ಯಾವುದಾದರೂ ಸಂಶೋಧನೆ, ಹೊಸ ಪ್ರಯತ್ನ ಅಥವಾ ಸಾಧನೆಗಳಿದ್ದರೆ ಅದು ಬ್ರಿಟಿಷರ ಪ್ರಯತ್ನದ ಫಲ ಎಂಬಂತೆ ಬಿಂಬಿತವಾಗುವುದು ಮತ್ತು ಜನರು ಅದನ್ನು ಒಪ್ಪಿಕೊಳ್ಳುವುದು ನಡೆಯುತ್ತದೆ. ಆದರೆ ಬೌದ್ಧ ಧರ್ಮದ ಆಧುನಿಕ ಇತಿಹಾಸವನ್ನು ಗಮನಿಸುವಾಗ ಇದು ಪ್ರಶ್ನಾರ್ಹವಾಗಿದೆ. ಬೌದ್ಧ ಧರ್ಮದ ಜೊತೆಗೆ ಬ್ರಾಹ್ಮಣ ಧರ್ಮಕ್ಕೆ ನಿರಂತರವಾದ ಸಂಘರ್ಷವಿದೆ. ಬ್ರಿಟಿಷ್ ರಾಜತಾಂತ್ರಿಕ ವಿಲ್ಕಿನ್ಸನ್ ಸಂಸ್ಕತ ಕಲಿಯಲು ಪಂಡಿತ್ ಸುಬಾಜಿ ಬಾಪು ಎಂಬ ಸಂಸ್ಕತ ವಿದ್ವಾಂಸನನ್ನು ನೇಮಿಸಿಕೊಳ್ಳುತ್ತಾನೆ. ವಿಲ್ಕಿನ್ಸನ್ಗೆ ವಜ್ರಸುಚಿ ಎಂಬ ಹದಿಮೂರು ಪುಟಗಳ ಸಂಸ್ಕತದ ಹಸ್ತಪ್ರತಿಯೊಂದು ದೊರೆಯುತ್ತದೆ. ಹಸ್ತಪ್ರತಿಯನ್ನು ಪ್ರಕಟಿಸಲೇಬೇಕೆಂಬ ಮಹತ್ವಾಕಾಂಕ್ಷೆ ಉಂಟಾಗುತ್ತದೆ. ಆದರೆ ಪಂಡಿತ್ ಸುಬಾಜಿ ಪ್ರಕಟಿಸಲು ನಿರಾಸಕ್ತಿಯನ್ನು ತೋರುತ್ತಾನೆ. ಕೊನೆಗೂ ಅವರಿಬ್ಬರ ನಡುವೆ ಒಪ್ಪಂದವಾಗಿ ಬ್ರಾಹ್ಮಣರನ್ನು ಕಟುವಾಗಿ ಟೀಕಿಸುವ ಈ ಬೌದ್ಧ ಹಸ್ತಪ್ರತಿಗೆ ಮುನ್ನುಡಿಯನ್ನು ಸುಬಾಜಿ ಬರೆಯಲು ಒಪ್ಪಿಕೊಂಡು ಅದನ್ನು ಕಟುವಾಗಿ ಟೀಕಿಸುತ್ತಾನೆ. ವಿಲ್ಕಿನ್ಸನ್ ಇದನ್ನು ಪ್ರಕಟಿಸುತ್ತಾನೆ. ಬೌದ್ಧ ಧರ್ಮದ ನೆನಪು ಅಥವಾ ಕೃತಿಗಳು ಹೊರಬರುವಾಗ ಉಂಟಾದ ತಾತ್ವಿಕ ಸಂಘರ್ಷ ಕುತೂಹಲಕಾರಿಯಾಗಿದೆ. ವಸಾಹತುಶಾಹಿ ಭಾರತದಲ್ಲಿ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಇನ್ಸ್ಟ್ರಕ್ಷನ್ ಮೂರು ಸಂಪುಟಗಳ ಚರಿತ್ರೆಯ ಪುಸ್ತಕಗಳನ್ನು ಪ್ರಕಟಿಸುತ್ತದೆ. ಪುಸ್ತಕದ ಹೆಸರು ಇತಿಹಾಸ್, ತಿಮಿರ್ ನಾಶಕ್ (ಕತ್ತಲನ್ನು ಓಡಿಸುವ ಬೆಳಕಾಗಿ ಇತಿಹಾಸ) ಎಂಬ ಪುಸ್ತಕವನ್ನು ರಾಜಾ ಶಿವಪ್ರಸಾದ್ ಎನ್ನುವವರು 19ನೇ ಶತಮಾನದಲ್ಲಿ 4ನೇ ತರಗತಿಯಿಂದ 10ನೇ ತರಗತಿಯವರೆಗೂ ಪಠ್ಯವಾಗಿರಿಸುತ್ತಾರೆ. ಶಿವಪ್ರಸಾದ್ ಮೂಲಭೂತವಾಗಿ ಜೈನ ವ್ಯಾಪಾರಿ ಕುಟುಂಬಕ್ಕೆ ಸೇರಿದವರು. ಆದರೆ ಅವರ ಆಸಕ್ತಿಯು ಬೌದ್ಧ ಧರ್ಮದ ಕಡೆಗಿತ್ತು ಮತ್ತು ಈ ಪಠ್ಯ ಪುಸ್ತಕದಲ್ಲಿ ಬ್ರಾಹ್ಮಣರನ್ನು ಕಟುವಾಗಿ ಟೀಕಿಸಲಾಗಿತ್ತು. ಬೌದ್ಧ ಧರ್ಮದ ಬಗೆಗೆ ಅಭಿಮಾನ ಮೂಡಿಸುವಂತಿತ್ತು. ನಮ್ಮವರೆಗೂ ಹರಿದು ಬಂದಿರುವ ಬೌದ್ಧ ಧರ್ಮದ ಅಭಿಮಾನದಲ್ಲಿ ಈ ಪುಸ್ತಕದ ಪಾಲೂ ಇದೆ ಎಂದು ಸೂಚ್ಯವಾಗಿ ಸಂಶೋಧನೆಯು ತಿಳಿಸುತ್ತದೆ.
1987ರಲ್ಲಿ ಕೋಲ್ಕತಾದ ಏಶ್ಯಾಟಿಕ್ ಸೊಸೈಟಿಯ ರಾಜೇಂದ್ರ ಲಾಲ್ ಮಿತ್ರ ‘ಲಲಿತಾ ವಸ್ತ್ರ ಸೂತ್ರ’ ಎಂಬ ಮೂರನೇ ಶತಮಾನದ ಕೃತಿಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸುತ್ತಾರೆ. 1885ನೇ ಇಸವಿಯಲ್ಲಿ ದಕ್ಷಿಣ ಮದರಾಸಿನ ಪೈಲ್ವಾನ್ ಭಿಕ್ಕು ಮಹಾವೀರ್ ಸಿಂಗ್, ಬಾಲ್ಯದಲ್ಲಿ ಸೈನಿಕನಾಗಿದ್ದು, ಬ್ರಿಟಿಷರ ವಿರುದ್ಧ ದಂಗೆಯಲ್ಲಿ ಭಾಗವಹಿಸಿ ನಂತರದಲ್ಲಿ ಬೌದ್ಧ ಭಿಕ್ಕುವಾಗುತ್ತಾನೆ. ರಾಜೇಂದ್ರ ಲಾಲ್ ಮಿತ್ರರ ಕೃತಿಗಳು ಬೌದ್ಧ ಧರ್ಮದ ವಿವಿಧ ಆಯಾಮಗಳನ್ನು ತೆರೆದಿಟ್ಟವು. ಶರತ್ಚಂದ್ರ ಬೋಸ್ ಏಶ್ಯಾಟಿಕ್ ಕ್ವಾರ್ಟರ್ಲಿ ರಿವ್ಯೆ, ಓಪನ್ ಕೋಟ್ ಮತ್ತು ದ ಅಕಾಡಮಿಯಲ್ಲಿ ಪ್ರಕಟವಾದ ಲೇಖನಗಳು ಬೌದ್ಧ ಧರ್ಮದ ಬಗೆಗೆ ಹೊಸ ಬೆಳಕನ್ನು ಚೆಲ್ಲಿದವು. ಶರತ್ಚಂದ್ರ, ಟಿಬೆಟ್ ಮುಂತಾದ ಭಾಗಗಳಲ್ಲಿ ಪ್ರಯಾಣ ಮಾಡಿ ಬೌದ್ಧ ಧರ್ಮದ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ. 1923ರಲ್ಲಿ ಅಂಗಾರಿಕ ಧರ್ಮಪಾಲ ಎಂಬ ಬೌದ್ಧ ಭಿಕ್ಕು ಆಲ್ ಇಂಡಿಯಾ ಮಹಾ ಸಭಾದ ಮಹಾ ಸಮ್ಮೇಳನದಲ್ಲಿ ಎಲ್ಲ ಬೌದ್ಧರು ಹಿಂದೂಗಳೇ ಎಂದು ಘೋಷಿಸಿದನು. ಇದು ಹಿಂದೂ ಮಹಾ ಸಭಾದ ಘೋಷವಾಕ್ಯವಾಯಿತು. ಅಲ್ಲಿಂದಾಚೆಗೆ ಬೌದ್ಧ ಧರ್ಮವನ್ನು ಹಿಂದೂ ಮಹಾ ಸಭಾದ ಜೊತೆಗೆ ತಳಕು ಹಾಕಲಾಯಿತು. ಬುದ್ಧ ವಿಷ್ಣುವಿನ ಅವತಾರ, ಹಿಂದೂ ಧರ್ಮವನ್ನು ಉದ್ಧರಿಸಲು ಬಂದವನು, ಹಿಂದೂಗಳ ಹಿಂದೂ ಎಂಬ ಪರಿಕಲ್ಪನೆಯು ಹರಡಲು ಪ್ರಾರಂಭವಾಯಿತು.
ಮಾರ್ವಾರಿ ಉದ್ಯಮಶೀಲ ಬಲ್ದೇವ್ ದಾಸ್ ಬಿರ್ಲಾ ರಾಜಸ್ಥಾನಕ್ಕೆ ಸೇರಿದವರು. ತನ್ನ ಕುಟುಂಬದ ವ್ಯಾಪಾರ ವಹಿವಾಟನ್ನು ನೋಡಿಕೊಳ್ಳುತ್ತಿದ್ದ ಬಿರ್ಲಾ, ಆಗ ಕಾಂಗ್ರೆಸಿನಲ್ಲಿದ್ದ ಮದನ್ ಮೋಹನ್ ಮಾಳವೀಯಾ ಜೊತೆಗಿದ್ದವರು. ಬಿರ್ಲಾ ಗಾಂಧಿಯ ಜೊತೆ ಎಷ್ಟು ನಿಷ್ಠಾವಂತರಾಗಿದ್ದರೋ ಅಷ್ಟೇ ನಿಷ್ಠೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೂ ಬೆಳೆಸಿಕೊಂಡಿದ್ದರು. ಜೊತೆಗೆ, ಅನೇಕ ಬೌದ್ಧ ದೇವಾಲಯಗಳನ್ನು ನಿರ್ಮಿಸಲು ಹಣವನ್ನು ದಾನಮಾಡಿದನು. ಏಕ ಕಾಲದಲ್ಲಿ ಮಹಾತ್ಮಾ ಗಾಂಧಿ, ರಾಷ್ಟ್ರೀಯ ಸ್ವಯಂ ಸೇವಕ ಮತ್ತು ಮಹಾಬೋಧಿಯ ಜೊತೆಗೆ ಸಖ್ಯ ಹೊಂದಿದ್ದ ಬಿರ್ಲಾ ಬೌದ್ಧ ಧರ್ಮದ ಪ್ರತ್ಯೇಕ ಅಸ್ತಿತ್ವವನ್ನು ಗೌಣಗೊಳಿಸಿ ಹಿಂದೂ ಧರ್ಮದ ಅಂಗವೆಂಬಂತೆ ರೂಪಿಸಿದಂತೆ ಕಾಣುತ್ತದೆ. ಇದರ ಜೊತೆಗೆ ಗಾಂಧಿಯವರು ಬೌದ್ಧ ಧರ್ಮದ ಬಗೆಗೆ ಅಷ್ಟೇನೂ ಆಸಕ್ತಿಯನ್ನು ಹೊಂದಿರಲಿಲ್ಲವೆಂಬ ಅಂಶವು ಕೃತಿಯಲ್ಲಿ ಬಂದು ಹೋಗುತ್ತದೆ. ಈಗ ಎಲ್ಲ ಕಡೆ ಪ್ರಸಿದ್ಧವಾಗಿರುವ ವಿಪಸ್ಸನ ಧ್ಯಾನ ತಂತ್ರದ ಎಸ್.ಎನ್. ಗೋಯಂಕ, ತನ್ನ ಲೇಖನಗಳು ಮತ್ತು ಜೀವನ ಚರಿತ್ರೆಯಲ್ಲಿ ಬೌದ್ಧ ಧರ್ಮವನ್ನು ಕುರಿತು ಇರುವ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ದಾಖಲಿಸುತ್ತಾರೆ. ಇಂಥಾ ಅನೇಕ ಹೊಳಹುಗಳನ್ನು ಈ ಕೃತಿಯು ನೀಡುತ್ತದೆ. ಬ್ರಾಹ್ಮಣ ಧರ್ಮದ ಅಥವಾ ಸನಾತನವಾದದ ಪ್ರತಿಭಟನಾ ಸೂಚಕವಾಗಿ ಹೊರಹೊಮ್ಮಿದ ಬೌದ್ಧ ಧಾರ್ಮಿಕ ನಿರೂಪಣೆಯು ಅಂತಿಮವಾಗಿ ಹಿಂದುತ್ವದ ತೆಕ್ಕೆಗೆ ಜಾರುವುದನ್ನು ಕೃತಿಯು ಸಮರ್ಥವಾಗಿ ನಿರೂಪಿಸುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಬುದ್ಧ ಮತ್ತು ಅವನ ದಮ್ಮ ಕೃತಿಯನ್ನು ರೂಪಿಸಿ ದಮ್ಮಕ್ಕೆ ಮತಾಂತರವಾಗುವವರೆಗೆ ಅವರಿಗೆ ಆಧುನಿಕ ಭಾರತೀಯ ಚರಿತ್ರೆಯಲ್ಲಿ ನಡೆದುಬಂದ ಬುದ್ಧ ಹಾದಿಯ ಕುರಿತು ಮಾಹಿತಿ ಇತ್ತು ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ತಮಿಳುನಾಡಿನ ಅಯೋತಿ ದಾಸ್ ಮತ್ತು ಲಕ್ಷ್ಮೀನರಸುರವರ ವಿಚಾರಗಳು ಅಂಬೇಡ್ಕರ್ರವರನ್ನು ಪ್ರಭಾವಿಸಿದೆ ಮತ್ತು ಅವರ ನಡುವೆ ಒಂದು ಕೊಡುಕೊಳ್ಳುವಿಕೆಯ ಸಂಬಂಧವಿತ್ತೆಂಬುದನ್ನು ಡಗ್ಲಾಸ್ ಒಬರ್ ಆಧಾರ ಸಮೇತವಾಗಿ ನಿರೂಪಿಸುತ್ತಾರೆ. ಬಾಬಾ ಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರವಾಗುವುದರೊಂದಿಗೆ ಆಧುನಿಕ ಭಾರತದ ಬೌದ್ಧ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಳ್ಳುತ್ತದೆ. ಈ ಕೃತಿಯಲ್ಲಿ ಕಂಡುಬರುವ ಮತ್ತೊಂದು ಅಂಶವೆಂದರೆ ನಮ್ಮ ದೇಶದಲ್ಲಿ ಬೌದ್ಧ ಧರ್ಮದ ಇರುವಿಕೆಯಲ್ಲಿ ನೆಹರೂ ವಹಿಸಿರುವ ಪಾತ್ರ. ಟಿಬೆಟ್ನ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡುವುದರೊಂದಿಗೆ ಬೌದ್ಧ ಧರ್ಮದ ವಿವಿಧ ರೀತಿಯ ಪಂಥಗಳು ಅಸ್ತಿತ್ವ ಕಂಡುಕೊಳ್ಳಲು ನೆರವಾಗುತ್ತದೆ. ನೆಹರೂರವರಿಗೆ ಬೌದ್ಧ ಧರ್ಮದ ಜೊತೆ ಇರುವ ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಸಂಬಂಧವನ್ನು ಅಂತರ್ರಾಷ್ಟ್ರೀಯ ನೆಲೆಯಲ್ಲಿ ಗುರುತಿಸುವ ಪ್ರಯತ್ನವನ್ನು ಸಂಶೋಧನೆಯು ನಿರ್ವಹಿಸುತ್ತದೆ.
ಇಂತಹ ಕೃತಿಗಳನ್ನು ನಿರ್ದಿಷ್ಟ ಮಿತಿಯಲ್ಲಿ ಪರಿಚಯಿಸುವುದು ಕಷ್ಟ, ಇದರ ಹರವು ವಿಸ್ತಾರವಾದುದು. ಭಾರತೀಯ ನಾಗರಿಕತೆ ಸಮಕಾಲೀನವಾಗಿ ಎದುರಿಸುತ್ತಿರುವ ಸಮಸ್ಯೆಗಳು, ಬ್ರಾಹ್ಮಣವಾದ ಮತ್ತು ಬೌದ್ಧ ಧರ್ಮದ ಸಂಘರ್ಷ, ಸ್ಥಳೀಯ ಚರಿತ್ರೆಯ ಹಿರಿಮೆ, ತಳಸಮುದಾಯಗಳ ಚಹರೆ ಮತ್ತು ಗತ ಇತಿಹಾಸದ ಸುವರ್ಣ ಪುಟಗಳನ್ನು ತಿಳಿಸುವ ಈ ಕೃತಿಯು ಅಧ್ಯಯನ ಯೋಗ್ಯವಾದುದು. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕಣ್ಣಿನ ಪೊರೆಯನ್ನು ಕಳಚಿ ಹೊಚ್ಚ ಹೊಸದಾಗಿ ನೋಡುವಂತೆ ಪ್ರೇರೇಪಿಸುವ ಡಸ್ಟ್ ಆನ್ ದಿ ಥ್ರೋನ್ ಎಲ್ಲರೂ ಓದಲೇಬೇಕಾದ ಕೃತಿ.