ಎಲ್ಲ ಸರ್ವಾಧಿಕಾರ, ಡಿಸ್ಟೋಪಿಯನ್ ಕಾಲಗಳಿಗೂ ಸಮಕಾಲೀನ ಈ ಜಾರ್ಜ್ ಆರ್ವೆಲ್

ಡಿ.ಉಮಾಪತಿ ಅವರು ಮೂಲತಃ ಚಿತ್ರದುರ್ಗದ ನಿವಾಸಿ. ಹಿರಿಯ ಪತ್ರಕರ್ತರು ಮತ್ತು ಬರಹಗಾರರು. ಕರ್ನಾಟಕದ ರಾಜ್ಯಮಟ್ಟದ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ದೆಹಲಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಾ ಬರೆದ ಲೇಖನಗಳು ನಾಡಿನ ಗಮನ ಸೆಳೆದಿವೆ. ಅವರು ಬರೆದ ಪುಸ್ತಕಗಳಲ್ಲಿ ‘‘ದೆಹಲಿ ನೋಟ’’ ಮತ್ತು ನಿಯಾಜ್ ಫಾರೂಕಿ ಅವರ “An Ordinary Man's Guide To Radicalism - Growing up Muslim In India” ಕೃತಿಯನ್ನು ‘‘ಪದ ಕುಸಿಯೆ ನೆಲವಿಲ್ಲ’’(ಮುಸ್ಲಿಮ್ ಬದುಕಿನ ತವಕ ತಲ್ಲಣ) ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ತಮ್ಮ ರಾಜಕೀಯ ವಿಶ್ಲೇಷಣೆಗಳು, ವಿಮರ್ಶೆಗಳ ಮೂಲಕ ಬರೆಯುವ ಕಾಯಕವನ್ನು ಮುಂದುವರಿಸಿದ್ದಾರೆ. ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ೨೦೨೨-೨೩ನೇ ಸಾಲಿನ ಬಾಬಾ ಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪತ್ರಿಕಾ ಸಂಪಾದಕರ ಸಂಘ ನೀಡುವ ರಾಜ್ಯ ಮಟ್ಟದ ಬಿ.ರಾಚಯ್ಯ ಸ್ಮಾರಕ ಪಶಸ್ತಿಗಳನ್ನು ಉಮಾಪತಿಯವರು ಪಡೆದಿದ್ದಾರೆ. ಪ್ರಸ್ತುತ ಈದಿನ.ಕಾಂ ನ ಕನ್ಸಲ್ಟಿಂಗ್ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Update: 2024-01-04 10:48 GMT
Editor : Ismail | Byline : ಡಿ. ಉಮಾಪತಿ

ಬ್ರಿಟಿಷ್ ಕಾದಂಬರಿಕಾರ ಪತ್ರಕರ್ತ ಪ್ರಬಂಧಕಾರ ಜಾರ್ಜ್ ಆರ್ವೆಲ್ 1903ರಲ್ಲಿ ಬ್ರಿಟಿಷ್ ಭಾರತದ ಬಿಹಾರದ ಮೋತಿಹಾರಿಯಲ್ಲಿ ಹುಟ್ಟಿದ್ದ. ಈತನ ತಂದೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಕೆಲಸ ಮಾಡುತ್ತಿದ್ದ. ಎರಿಕ್ ಆರ್ಥರ್ ಬ್ಲೇರ್ ಈತನ ನಿಜನಾಮಧೇಯ. ಜಗತ್ತಿನ ಅತ್ಯಂತ ಪ್ರಭಾವೀ ಬರೆಹಗಾರರಲ್ಲಿ ಒಬ್ಬ. ವಿಶ್ವವನ್ನು ಬಾಧಿಸಿದ ರಾಜಕೀಯ- ಸಾಮಾಜಿಕ ವಿಕೃತಿಗಳ ಕುರಿತು ಬರೆದ. ಪೊಲೀಸ್ ಕೆಲಸ ಆರ್ವೆಲ್ ಮೊದಲ ಉದ್ಯೋಗ. ‘ಟ್ರಿಬ್ಯೂನ್’ ಎಂಬ ಎಡಪಂಥೀಯ ನಿಯತಕಾಲಿಕದ ಸಂಪಾದಕನಾಗಿದ್ದ. ಬಿ.ಬಿ.ಸಿ. ಸುದ್ದಿ ಸಂಸ್ಥೆಗೆ ಕೆಲಸ ಮಾಡಿದ.

ಖುದ್ದು ಬಡತನ- ಕಾಯಿಲೆಯಲ್ಲಿ ಬದುಕಿದ್ದ. ಇಂಗ್ಲೆಂಡಿನ ಬಡ ನಿರುದ್ಯೋಗಿ ಗಣಿಕಾರ್ಮಿಕರ ಕುರಿತು ಆತ ಬರೆದ ಕಾದಂಬರಿ The Road to Wigan Pier (1937). ದೀನರ ಸಂಕಟ ಸಂಘರ್ಷಗಳನ್ನು ಪ್ರತ್ಯಕ್ಷ ತಿಳಿದುಕೊಳ್ಳಲು ದೀರ್ಘ ಕಾಲ ಅಲೆಮಾರಿ ಭಿಕ್ಷುಕನಂತೆ ವೇಷ ಮರೆಸಿಕೊಂಡು ತಿರುಗಿದ್ದ. ಸಾಮ್ರಾಜ್ಯವೊಂದರ ಕೊಳಕು ಕೃತ್ಯವನ್ನು ಬಹಳ ಸಮೀಪದಿಂದ ಗಮನಿಸಿ ಬರೆದ ಕಾದಂಬರಿ “Shooting an Elephant” (1936). ಅನುಭವ ಜೀವನಪರ್ಯಂತ ಈತನನ್ನು ಸಾಮ್ರಾಜ್ಯಶಾಹಿಯ ವಿರೋಧಿಯನ್ನಾಗಿ ಪರಿವರ್ತಿಸಿತು.

 ನಾನೇಕೆ ಬರೆಯುತ್ತೇನೆ ಎಂಬ ಆರ್ವೆಲ್ ಪ್ರಬಂಧವೊಂದರಿಂದ ಆಯ್ದ ಕೆಲ ವಾಕ್ಯಗಳು ಹೀಗಿವೆ- ಪಕ್ಷಪಾತೀಯತೆ ಮತ್ತು ಅನ್ಯಾಯದ ಪ್ರಜ್ಞೆಯೇ ನನ್ನ (ಬರವಣಿಗೆಯ) ಆರಂಭ ಬಿಂದು. ಪುಸ್ತಕವೊಂದನ್ನು ಬರೆಯಲು ಕುಳಿತಾಗ ಕಲಾಕೃತಿಯೊಂದನ್ನು ರಚಿಸಲು ಹೊರಟಿದ್ದೇನೆ ಎಂದು ನನಗೆ ನಾನೇ ಹೇಳಿಕೊಳ್ಳುವುದಿಲ್ಲ. ನಾನು ಬಯಲಿಗೆಳೆಯಬೇಕಿರುವ ಅಸತ್ಯವೊಂದಿದೆ, ಗಮನ ಸೆಳೆಯಬೇಕಿರುವ ವಾಸ್ತವವೊಂದಿದೆಯೆಂದು ಬರೆಯುತ್ತೇನೆ ನಾನು. ಕೇಳುವ ಕಿವಿಗಳು- ನಡೆಯುವ ವಿಚಾರಣೆ ನನ್ನ ಆರಂಭಿಕ ಕಾಳಜಿ. ಅದೊಂದು ಸೌಂದರ್ಯಪ್ರಜ್ಞೆ ಅಥವಾ ಕಲಾತ್ಮಕ ಕ್ರಿಯೆ ಆಗದೆ ಹೋದರೆ ಪುಸ್ತಕವನ್ನಾಗಲಿ, ನಿಯತಕಾಲಿಕದ ದೀರ್ಘ ಪ್ರಬಂಧವನ್ನೇ ಆಗಲಿ ಬರೆಯುವುದು ನನ್ನಿಂದ ಸಾಧ್ಯವಿಲ್ಲ.

ರಶ್ಯನ್ ಕ್ರಾಂತಿಗೆ ಮೋಸ ಮಾಡಿದನೆಂದು 1947ರಲ್ಲಿ ಆತ ಬರೆದ ಸ್ಟಾಲಿನ್ ವಿರೋಧಿ ಕಾದಂಬರಿ ‘Animal Farm’. ನಾಲ್ಕು ವರ್ಷಗಳ ನಂತರ ಬರೆದ ಕಾದಂಬರಿ 1984 ಅಥವಾ ‘The Last Man in Europe’. ಇವೆರಡೂ ದಾರ್ಶನಿಕ ಕೃತಿಗಳು.

1949ರಲ್ಲಿ 1984 ಪ್ರಕಟಗೊಂಡಿತು. ಮರುವರ್ಷವೇ ಸಾವು ಸೆಳೆದೊಯ್ಯಿತು. ಆರ್ವೆಲ್ ಗಂಭೀರ ಕ್ಷಯರೋಗ ದಿಂದ ರಕ್ತವಾಂತಿ ಮಾಡಿಕೊಳ್ಳುತ್ತಿದ್ದ ದಿನಗಳವು. ಕೃತಿಯ ಕಥಾನಾಯಕ ವಿನ್ಸ್ಟನ್ ಸ್ಮಿತ್. ಬಿಗ್ ಬ್ರದರ್ ಸರಕಾರದ ಸತ್ಯದ ಮಂತ್ರಾಲಯದಲ್ಲಿ (Ministry of Truth) ಟೈಮ್ಸ್ ಪತ್ರಿಕೆಗೆ ಸಂಪಾದಕೀಯಗಳನ್ನು ತಿದ್ದಿ ಬರೆಯುವ ಪತ್ರಕರ್ತ. ಎಲ್ಲ ಸಂಪಾದಕೀಯಗಳು ಮತ್ತು ಲೇಖನಗಳನ್ನು ಆಳುವ ಪಕ್ಷದ ಇತ್ತೀಚಿನ ರೀತಿ ನೀತಿಗಳಿಗೆ ಅನುಗುಣವಾಗಿ ತಿದ್ದಿ ಸರಿಪಡಿಸುತ್ತಿದ್ದ. ಅಧಿಕಾರದ ಗುರಿಯು ಅಧಿಕಾರವೇ ಆಗಿದೆ ಎಂಬುದು ಕೃತಿಯ ಪಾತ್ರವೊಂದು ಆಡುವ ಮಾತು.

ಅಪ್ಪಟ ಅಧಿಕಾರದ ಎದುರು ನಿಂತು ಹೇಳಬಾರದ್ದನ್ನು ಹೇಳಿದ ದಿಟ್ಟತನ ಇವನದು. ಸ್ವಾತಂತ್ರ್ಯ ಅರ್ಥವೇನಾದರೂ ಇದ್ದರೆ, ಅದು ಜನ ಕೇಳಿಸಿಕೊಳ್ಳಲು ಬಯಸದಿರುವುದನ್ನು ಅವರಿಗೆ ಹೇಳುವುದು ಸರ್ವಾಧಿಕಾರದಲ್ಲಿ ಸಾಹಿತ್ಯಸೃಷ್ಟಿ ಅಸಾಧ್ಯ. ಸಾಹಿತ್ಯವೆಂದರೆ ಎಲ್ಲ ಗದ್ಯ ಬರೆಹ, ಕಲ್ಪನೆಯ ಕಟ್ಟುಕತೆಯಿಂದ ಹಿಡಿದು ರಾಜಕೀಯ ಪತ್ರಿಕಾವೃತ್ತಿಯ ತನಕ ಎಂದಿದ್ದ ಆರ್ವೆಲ್. ರಾಜಕೀಯರಹಿತ ಸಾಹಿತ್ಯವೆಂಬುದು ಇಲ್ಲವೇ ಇಲ್ಲ. ಅದರಲ್ಲೂ ವಿಶೇಷವಾಗಿ ಕನಿಷ್ಠ ಪಕ್ಷ, ನೇರ ರಾಜಕೀಯಸ್ವರೂಪದ ಭಯಗಳು, ದ್ವೇಷಗಳು ಹಾಗೂ ನಿಷ್ಠೆಗಳು ಪ್ರತಿಯೊಬ್ಬರ ಪ್ರಜ್ಞೆಪಾತಳಿಯ ಮೇಲ್ಪದರದಲ್ಲೇ ಕಾಣಿಸಿಕೊಳ್ಳುತ್ತಿರುವ ನಮ್ಮಂತಹ ಕಾಲಮಾನದಲ್ಲಿ... ಸಾಹಿತ್ಯವನ್ನು ನಿಶ್ಚೇತನಗೊಳಿಸುವ ಪರಿಣಾಮ ಪ್ರಭುತ್ವದ ಭಯೋತ್ಪಾದನೆಯ ನಂತರವೂ ಉಳಿಯಬಹುದಾದ್ದು... ಸಾಹಿತ್ಯ ಕೆಲವೊಮ್ಮೆ ಸರ್ವಾಧಿಕಾರಿ ಆಳ್ವಿಕೆಗಳಲ್ಲಿ ಏಳಿಗೆ ಕಂಡಿರುವುದುಂಟು. ಸರ್ವಾಧಿಕಾರ ಹೇರಿದ ಅಸ್ಥಿರತೆಗೆ ತೋರುವ ಪ್ರತಿಕ್ರಿಯೆಯಲ್ಲಿ ವೈಶ್ವಿಕ ನೋಟವನ್ನು ನಿರಂತರ ಹೊಂದಾಣಿಕೆ ಮಾಡಿಕೊಳ್ಳುವ ಕ್ರಿಯೆ. ಬರೆಹಗಾರನ ಪಾಲಿಗೆ ಇಲ್ಲವೇ ಬರೆಹದ ಪಾಲಿಗೆ ಮಾರಕವಿದು.

ಸರ್ವಾಧಿಕಾರಿ ಸಮಾಜಗಳ ಎರಡು ಚಹರೆಗಳನ್ನು ಆತ ಗುರುತಿಸಿದ್ದ. ಒಂದು ಸುಳ್ಳು ಹೇಳುವುದು ಮತ್ತೊಂದು Schizophrenia (ಛಿದ್ರಮನಸ್ಕತೆ..ನಿರಂತರ ಭ್ರಾಂತಿಗಳಿಂದ ಕೂಡಿದ ಮಾನಸಿಕ ವ್ಯಾಧಿ). ಸಂಘಟಿತವಾಗಿ ಸುಳ್ಳು ಹೇಳುವುದು ಸರ್ವಾಧಿಕಾರಿ ಪ್ರಭುತ್ವದ ಅವಿಭಾಜ್ಯ ಅಂಗ. ಯಾತನಾಶಿಬಿರಗಳು ಮತ್ತು ಗುಪ್ತಪೊಲೀಸ್ ದಳಗಳು ಇಲ್ಲದೆಯೂ ಸಾಗುವಂತಹುದು. ವರ್ತಮಾನಕ್ಕೆ ಸ್ಥಾನ ಕಲ್ಪಿಸಲು ಗತವನ್ನು ನಿರಂತರವಾಗಿ ತಿದ್ದಿ ಬರೆಯುವುದೂ ಸುಳ್ಳು ಹೇಳುವಿಕೆಯಲ್ಲಿ ಸೇರಿದೆ. ಇಂತಹುದು ಎಲ್ಲೆಡೆಯೂ ನಡೆಯುತ್ತದೆ. ಆದರೆ ನಿರ್ದಿಷ್ಟ ಕಾಲಮಾನದಲ್ಲಿ ಕೇವಲ ಒಂದು ಅಭಿಪ್ರಾಯಕ್ಕೆ ಮಾತ್ರ ಅನುಮತಿಯಿರುವಲ್ಲಿ ಸುಳ್ಳಿನ ಪ್ರವೃತ್ತಿಯು ಸಮಾಜಗಳನ್ನು ಆಕಾರಗೆಡಿಸಿ ವಿಕೃತಗೊಳಿಸುತ್ತದೆ. ಗತವನ್ನು ನಿರಂತರ ತಿದ್ದಿಬರೆದು ವರ್ತಮಾನದ ಸುಳ್ಳುಗಳಿಗೆ ಬದಲಾಯಿಸುವುದನ್ನು, ದೀರ್ಘ ಕಾಲದಲ್ಲಿ ಸತ್ಯದ ಅಸ್ತಿತ್ವದಲ್ಲೇ ಅಪನಂಬಿಕೆಯನ್ನು ಬೇಡಿ ಆಗ್ರಹಿಸುತ್ತದೆ ಸರ್ವಾಧಿಕಾರಿ ಪ್ರಭುತ್ವ. ಇಂತಹ ಯಶಸ್ವೀ ಪ್ರಭುತ್ವ Schizophrenic ಆಲೋಚನಾ ವ್ಯವಸ್ಥೆಯನ್ನೇ ಏರ್ಪಡಿಸಿಬಿಡುತ್ತದೆ. ನಿತ್ಯದ ಸಾಮಾನ್ಯಜ್ಞಾನ, ಸಾಮಾನ್ಯಪ್ರಜ್ಞೆಯಲ್ಲಿ ಮತ್ತು ವಿಜ್ಞಾನಗಳ ಪ್ರಕಾರ ಒಳ್ಳೆಯದಾಗಿ ತೋರುವ ನಿಯಮಗಳು ರಾಜಕಾರಣಿ, ಇತಿಹಾಸಕಾರ ಹಾಗೂ ಸಮಾಜಶಾಸ್ತ್ರಜ್ಞರಿಂದ ಅನಾದರಕ್ಕೆ ತುತ್ತಾಗುತ್ತವೆ. ಸುಳ್ಳುಗಳೇ ಸರ್ವಾಧಿಕಾರೀ ಆಳ್ವಿಕೆಯ ಮೂಲಾಧಾರ. ಕಾಲಾನುಕ್ರಮದಲ್ಲಿ ಸರ್ವಾಧಿಕಾರಿ ಆಳ್ವಿಕೆಯು ಸತ್ಯದ ಪರಿಕಲ್ಪನೆಯನ್ನೂ ಆದರ ಸಾಧ್ಯತೆಗಳನ್ನೂ ನಾಶಪಡಿಸುತ್ತದೆ.

ಆರ್ವೆಲ್ ಹೆಸರನ್ನು ಅಜರಾಮರ ಆಗಿಸಿದ್ದು ೧೯೮೪. ಭವಿಷ್ಯತ್ತಿನ ಸರ್ವಾಧಿಕಾರಿ ಸಮಾಜದ ಕುರಿತ Dystopian ಕೃತಿಯಲ್ಲಿ ಮೊದಲ ಬಾರಿಗೆ ಬಳಸಲಾದ 'Big Brother is Watching You', 'Newspeak' and 'Doublethink'ನಂತಹ ಪದಪುಂಜಗಳು ಎಲ್ಲ ಕಾಲಕ್ಕೂ ಸಂದಿವೆ. ಅಗ್ರಶ್ರೇಣಿಯ ನಿಘಂಟುಗಳಿಗೆ ಸೇರಿ ಸಾರ್ವತ್ರಿಕವಾಗಿವೆ. You and the Atomic Bomb (1945) ಎಂಬ ಪ್ರಬಂಧದಲ್ಲಿ 'Cold War' ಪದ ಪರಿಚಯಿಸಿದ್ದು ಈತನೇ.

Dystopia ಪದ ಗ್ರೀಕ್ ಮೂಲದ್ದು. ಕೇಡಿನ ಸ್ಥಳ ಎಂಬುದು ಶಬ್ದಶಃ ಅರ್ಥ. Utopia (ಕಲ್ಯಾಣ ರಾಜ್ಯದ ಉತ್ತುಂಗ ಸ್ಥಿತಿ) ವಿರುದ್ಧಾರ್ಥ ಅಭಿವ್ಯಕ್ತಿ. ಎಡೆಬಿಡದ ಪ್ರಚಾರಸಮರ (Propaganda) ಹರಿಯಬಿಟ್ಟು ಜನಮಾನಸದ ಮೇಲೆ ಸಾರಾಸಗಟು ಬಿಗಿಹಿಡಿತ ಸಾಧಿಸುವುದು, ಧರ್ಮಾಂಧರೂ ಕ್ರೂರಿಗಳೂ ಆದ ಸರ್ವಾಧಿಕಾರಿಗಳ ಫ್ಯಾಶಿಸ್ಟ್ ಆಡಳಿತ, ವ್ಯವಸ್ಥೆಯನ್ನು ವ್ಯರ್ಥಗೊಳಿಸುವ ದುಷ್ಟತನವನ್ನು ಮನರಂಜನೆಯೆಂದು ಭಾವಿಸಿ ನಿಷ್ಕ್ರಿಯವಾಗಿ ವೀಕ್ಷಿಸುವುದು, ಮುಕ್ತಚಿಂತನೆಯ ನಿಷೇಧ, ಪ್ರಭುತ್ವದ ನಿರಂತರ ಕಣ್ಗಾವಲು, ಸಾಧಿಸಲು ಸಾಧ್ಯವಿಲ್ಲದ ಗುರಿಯನ್ನು ಜನತೆಯ ಮುಂದೆ ತೂಗುಬಿಟ್ಟು ಅದನ್ನು ವೈಭವೀಕರಿಸಿ ಆರಾಧಿಸುವುದು ಡಿಸ್ಟೋಪಿಯ ಮುಖ್ಯ ಗುಣಲಕ್ಷಣಗಳು

ಖಾಸಗೀಕರಣ, ಸರಕಾರಗಳನ್ನು ಕಟ್ಟುವ ಮತ್ತು ಕೆಡವುವ ಹಾಗೂ ಪರ್ಯಾಯ ಆಡಳಿತ ವ್ಯವಸ್ಥೆಯನ್ನೇ ಸೃಷ್ಟಿಸುವ ಸರ್ವಶಕ್ತ ಕಾರ್ಪೊರೇಟುಗಳ ಪ್ರಾಬಲ್ಯ, ಆಡಳಿತವರ್ಗ ಮತ್ತು ಕುಲೀನ ಸಮುದಾಯಗಳ ಲೋಲುಪ ಐಷಾರಾಮ, ತಳಾತಳಕ್ಕೆ ತುಳಿಯಲ್ಪಟ್ಟು ದುರ್ಗತಿಗೀಡಾದ ದುಡಿಯುವ ವರ್ಗಗಳು, ಧಾರ್ಮಿಕ ಗುಂಪುಗಳ ದಬ್ಬಾಳಿಕೆ, ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿ ರೂಪು ತಳೆಯುವ ಅಸಮಾನತೆ, ವಿಜ್ಞಾನದ ಮೂಲಕ ಪ್ರಕೃತಿಯ ನಿಯಂತ್ರಣ ಮತ್ತು ಮಾನವಸಹಜ ಪ್ರವೃತ್ತಿಗಳ ನಿರ್ಮೂಲನೆಗೆ ಕೈ ಹಾಕುವ ಸರಕಾರ, ಬುದ್ಧಿಶಕ್ತಿಯನ್ನೇ ಆಧರಿಸಿದ ಸಾಮಾಜಿಕ ಏಣಿಶ್ರೇಣಿಯ ನಿರ್ಮಾಣ, ಇಂತಹ ಏಣಿಶ್ರೇಣಿಯ ನಿರ್ಮಾಣಕ್ಕೆ ಪೂರಕವಾಗಿ ಜೈವಿಕ ತಂತ್ರಜ್ಞಾನ ಬಳಕೆ, ಸಂತಾನೋತ್ಪತ್ತಿ ತಂತ್ರಜ್ಞಾನ, ನಿದ್ರಾವಸ್ಥೆಯಲ್ಲಿ ಕಲಿಕೆ-ಕಲಿಸುವಿಕೆಯಂತಹ ಅಂಶಗಳನ್ನೂ ಸೇರಿಸಬಹುದು.

೧೯೮೪ ಕಾದಂಬರಿಗಿಂತ ಮೊದಲು ಪ್ರಕಟವಾದ ಆಲ್ಡಸ್ ಹಕ್ಸ್ ಲೀ ಅವರ ಮತ್ತೊಂದು ಡಿಸ್ಟೋಪಿಯನ್ ಕೃತಿ Brave New World ಉದಾಹರಣೆ ಕುತೂಹಲಕರ. ಎಲ್ಲ ವರ್ಗಗಳ ಜನರ ತಲೆಯಲ್ಲೂ ತಾವೇ ಶ್ರೇಷ್ಠರು, ಉಳಿದ ವರ್ಗದವರು ಕನಿಷ್ಠರು ಎಂಬ ಧ್ವನಿಮುದ್ರಿತ ಘೋಷಣೆಗಳನ್ನು ಹುಟ್ಟಿನಿಂದಲೇ ನಿದ್ರಾವಸ್ಥೆಯಲ್ಲೂ ಕೇಳಿಸಿ ಭ್ರಮೆಗಳಲ್ಲಿ ಕೈದು ಮಾಡಲಾಗುತ್ತದೆ. ಅಳಿದುಳಿದ ಅಸಂತೋಷದ ನಿವಾರಣೆಗೆ ಖಿನ್ನತೆನಿಗ್ರಹದ ಮತ್ತು ಸೋಮ ಎಂಬ ಭ್ರಾಂತಿ ಹುಟ್ಟಿಸುವ ಮಾದಕ ದ್ರವ್ಯವನ್ನು ನೀಡಲಾಗುತ್ತದೆ.

ಯುದ್ಧಗಳು, ಸರಕಾರಿ ಬೇಹುಗಾರಿಕೆ-ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ರಾಜಕೀಯ ದಬ್ಬಾಳಿಕೆಯ ಸತತ ಭಯದಲ್ಲಿ ಬದುಕುತ್ತವೆ ೧೯೮೪ ಕೃತಿಯ ಪಾತ್ರಗಳು. ಇಲ್ಲಿ ಚಿತ್ರಿಸಿರುವ ಲಂಡನ್, ಕುಸಿಯುತ್ತಿರುವ ಕೊಳಕು ನಗರ. ಆಹಾರದ ಕೊರತೆ, ಸಿಡಿಯುವ ಬಾಂಬುಗಳು ಹಾಗೂ ದೀನ ದುಃಖಿತ ನಾಗರಿಕರಿಂದ ತುಂಬಿರುವ ನಗರ. ೧೯೮೪ ಕೃತಿಯಲ್ಲಿನ ಪ್ರಭುತ್ವವು ಸರ್ವಶಕ್ತ. ದಮನ ಮತ್ತು ನಿಯಂತ್ರಣದಲ್ಲಿ ಅದರ ಪೈಪೋಟಿಗೆ ಸಾಟಿಯೇ ಇಲ್ಲ. ಅಸ್ಮಿತೆಗಳು ಮತ್ತು ಕನಸುಗಳನ್ನು ರೆಪ್ಪೆ ಮಿಟುಕಿಸದೆ ಜಜ್ಜಬಲ್ಲದು. ಭ್ರಷ್ಟತೆ ಮತ್ತು ದಬ್ಬಾಳಿಕೆ ಮನುಷ್ಯರಿಗೆ ಸ್ವಭಾವಜನ್ಯ ಎಂಬುದು ಕೃತಿಕಾರ ಜಾರ್ಜ್ ಆರ್ವೆಲ್ ಪ್ರತಿಪಾದನೆ.

ಆರಂಭದ ವಾಕ್ಯವೇ ಕಣ್ಣು ಕುಕ್ಕುವಂತಹುದು. ಎಪ್ರಿಲ್ ತಿಂಗಳ ಚಳಿಯ ದಿನ, ಗಡಿಯಾರ ಗಳು ಗಂಟೆ ಹದಿಮೂರನ್ನು ಬಡಿಯುತ್ತಿದ್ದವು... ದೊಡ್ಡಣ್ಣನ (ಬಿಗ್ ಬ್ರದರ್) ಇರವು ಕಾದಂಬರಿಯ ಶುರುವಾತಿನಲ್ಲೇ ಓದುಗರ ಗಮನ ಸೆಳೆಯುತ್ತದೆ. ಕಥಾನಾಯಕ ವಿನ್ಸ್ಟನ್ ಸ್ಮಿತ್ ಮುಖಾಮುಖಿಯಾಗುತ್ತಾನೆ. ಅವನು ಬದುಕುತ್ತಿರುವ ಸಮಾಜದ ಮಿನುಗು ನೋಟಗಳು ಕಾಣುತ್ತವೆ. ಕಟ್ಟಡದ ವಾಸನೆ, ದ್ವೇಷ ಸಪ್ತಾಹ ಆಚರಣೆಯ ಸಿದ್ಧತೆಗೆಂದು ವಿದ್ಯುಚ್ಛಕ್ತಿಯ ಸರಬರಾಜನ್ನು ಪಡಿತರಗೊಳಿಸಿರುವುದನ್ನು ನೋಡುತ್ತೇವೆ. ಕನಿಷ್ಠ ಅನುಕೂಲ ಗಳೂ ಇಲ್ಲದ ದಮನಕಾರಿ ಸಮಾಜದಲ್ಲಿ ಕೃತಿ ಅನಾವರಣಗೊಳ್ಳುತ್ತ ಸಾಗುತ್ತದೆ.

ಆಳುವ ಪಕ್ಷ ಹೇಳಿದ್ದೇ ಅಂತಿಮ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕೋ ಅಥವಾ ಐದೋ ಎಂದು ಅನುಮಾನಿಸುವ ಅನಿಶ್ಚಯತೆಯ ಹಂತಕ್ಕೆ ಜನತೆಯನ್ನು ತಳ್ಳಲಾಗುತ್ತದೆ. ಹೀಗೆ ತಳ್ಳಲು ಮಾನಸಿಕ ಭಯ ಬಿತ್ತುವ ಮತ್ತು ದೈಹಿಕ ಚಿತ್ರಹಿಂಸೆ ನೀಡಲಾಗುತ್ತದೆ. ಮಧ್ಯಯುಗೀನ ದೈಹಿಕ ಚಿತ್ರಹಿಂಸೆಗೆಂದೇ ನಿಗದಿಯಾದ ಕೋಣೆ ಸಂಖ್ಯೆ ೧೦೧. ಕೆಲವು ಸಲ, ನಿರ್ದಿಷ್ಟ ತಾತ್ವಿಕ ಅಥವಾ ಸೈದ್ಧಾಂತಿಕ ಪರಿಕಲ್ಪನೆಗಳ ಸಂದರ್ಭದಲ್ಲಿ ಎರಡಕ್ಕೆ ಎರಡು ಸೇರಿಸಿದರೆ ಐದು ಕೂಡ ಆಗಬಹುದು ಎಂದು ಪ್ರಜೆಗಳು ಒಪ್ಪಬೇಕಾಗುತ್ತದೆ. ಕಟ್ಟಕಡೆಗೆ ಎರಡಕ್ಕೆ ಎರಡು ಸೇರಿಸಿದರೆ ಆಳುವ ಪಕ್ಷ ಎಷ್ಟು ಹೇಳುತ್ತದೋ ಅಷ್ಟು ಎಂಬ ಸ್ಥಿತಿಗೆ ಅವರನ್ನು ಬಗ್ಗಿಸಲಾಗುತ್ತದೆ. ಪ್ರೇಮಕ್ಕೆ ಅವಕಾಶವಿರದು. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ರಾಜಕೀಯ ದಮನದ ನಡುವೆ ಗೆಲುವು ದಮನಕ್ಕೇ ನಿಶ್ಚಿತ. ಪ್ರೇಮಿ ಮತ್ತು ಆಳುವ ಪಕ್ಷ- ಸರಕಾರದ ಮುಖ್ಯಸ್ಥ ದೊಡ್ಡಣ್ಣನ (ಬಿಗ್ ಬ್ರದರ್) ನಡುವೆ ಆಯ್ಕೆಯ ಪ್ರಶ್ನೆ ಬಂದರೆ ದೊಡ್ಡಣ್ಣನ ಆಯ್ಕೆಯೇ ಕಡ್ಡಾಯ. ಆಗಷ್ಟೇ ಪ್ರಜೆಗಳು ವಿಧೇಯ ಮತ್ತು ವಿಶ್ವಾಸಿ ಪಾರ್ಟಿ ಮೆಂಬರುಗಳಾಗಿ ಮುಂದುವರಿಯಬಹುದು. ಸಮಾಜದಲ್ಲಿ ಬದುಕಿ ಬಾಳಬಹುದು.

ಕಥಾನಾಯಕ ವಿನ್ಸ್ಟನ್ ಸ್ಮಿತ್ ಕ್ರಾಂತಿಕಾರಕ ಕನಸುಗಳನ್ನು ಇರಿಸಿಕೊಂಡ ಬುದ್ಧಿಜೀವಿ. ಸತ್ಯದ ಮಂತ್ರಾಲಯದ (Minstry of Truth) ಉದ್ಯೋಗಿ. ಸರ್ವಾಧಿಕಾರಿ ಪ್ರಭುತ್ವದ ಮತ್ತು ದಮನದ ದ್ವೇಷಿ. ನಾಯಕಿ ಎನ್ನಬಹುದಾದ ಜ್ಯೂಲಿಯಾ, ಕಪ್ಪು ತಲೆಗೂದಲ ಚೆಲುವೆ. ಅದೇ ಮಂತ್ರಾಲಯದ ಕಟ್ಟುಕಥೆ (Fiction) ವಿಭಾಗದ ಉದ್ಯೋಗಿ. ಲೈಂಗಿಕ ಕ್ರಿಯೆಯನ್ನು ಆನಂದಿಸುವಾಕೆ. ಪಾರ್ಟಿ ಸದಸ್ಯರೊಂದಿಗೆ ಹಲವು ಸಂಬಂಧಗಳನ್ನು ಹೊಂದಿದ್ದಾಕೆ. ಆಳುವ ಪಕ್ಷದ ವಿರುದ್ಧ ಆಕೆಯ ಬಂಡಾಯ ಪುಟ್ಟದು ಮತ್ತು ಆಕೆಯ ಆನಂದಮೂಲದ ವ್ಯಕ್ತಿಗತ ಸ್ವರೂಪದ್ದು. ಕಥಾನಾಯಕ ವಿನ್ಸ್ಟನ್ ಬಂಡಾಯ ಸೈದ್ಧಾಂತಿಕ ಪ್ರೇರಣೆಯ ದೊಡ್ಡಸ್ತಿಕೆ ಈಕೆಯದಲ್ಲ.

ಬಿಗ್ ಬ್ರದರ್ (Big Brother) ಪಾತ್ರ ಕಾದಂಬರಿಯಲ್ಲಿ ಮೈತಳೆಯುವುದೇ ಇಲ್ಲ. ಓಶಿಯಾನಿಯಾ ಎಂಬ ಕಾಲ್ಪನಿಕ ಭೂಭಾಗದ ಸುಪ್ರೀಮ್ ರೂಲರ್. ಈತ ಅಸ್ತಿತ್ವದಲ್ಲೇ ಇಲ್ಲದಿರಲೂಬಹುದು. ಆದರೆ ಬಹುಮುಖ್ಯ ವ್ಯಕ್ತಿತ್ವ. ಈತನ ಪೋಟೊದ ಭಿತ್ತಿಪತ್ರಗಳು ಸರ್ವವ್ಯಾಪಿ. ದೊಡ್ಡಣ್ಣ ನಿಮ್ಮನ್ನು ಗಮನಿಸುತ್ತಿದ್ದಾನೆ (BIG BROTHER IS WATCHING YOU) ಎಂಬ ಸಂದೇಶ ಅವುಗಳಲ್ಲಿ. ನಾಣ್ಯಗಳ ಮೇಲೂ ಆತನದೇ ಮುಖದ ಅಚ್ಚು. ಟೆಲಿಸ್ಕ್ರೀನ್ ಗಳ ಮೇಲೆಲ್ಲ ರಾರಾಜಿಸಿದ್ದು ಈತನದೇ ಚಹರೆ. ಯುದ್ಧಗಳ ಹೀರೋ. ಅಪ್ರತಿಮ ಸಂಶೋಧಕ ಮತ್ತು ತತ್ವಜ್ಞಾನಿ. ಪಕ್ಷವನ್ನು ಅಧಿಕಾರಕ್ಕೆ ತಂದ ಕ್ರಾಂತಿಯ ಮೂಲ ಪ್ರೇರಕ. ಜನಸಮೂಹಗಳಲ್ಲಿ ನಿಷ್ಠೆ ಮತ್ತು ಭಯ ಹುಟ್ಟಿಸಲು ಈತನ ಮುಖಚಹರೆಯನ್ನು ಬಳಸುತ್ತಿತ್ತು ಆಳುವ ಪಕ್ಷ. ದೊಡ್ಡಣ್ಣನ ಗುಣಸ್ವಭಾವ ವ್ಯಾಖ್ಯಾನಗಳನ್ನು ಮೀರಿದ್ದು. ಕಾದಂಬರಿಯ ನಿಜಸ್ಥಿತಿಯಲ್ಲೂ ಬದಲಾವಣೆಗೆ ಒಳಪಡುವಂತಹುದು. ದೊಡ್ಡಣ್ಣ ಹಿಂದೆ ಏನು ಹೇಳಿದ್ದನೆಂಬುದನ್ನು ಹಳೆಯ ಲೇಖನಗಳನ್ನು ಹುಡುಕಿ ನೋಡಿ, ಆತನ ಸಮಕಾಲೀನ ಅನಿಸಿಕೆಗಳಿಗೆ ತಕ್ಕಂತೆ ಅವುಗಳನ್ನು ತಿದ್ದಿ ಹೊಂದಿಸಿ ಬದಲಾಯಿಸುವುದು ಕಥಾನಾಯಕನ ಉದ್ಯೋಗದ ಭಾಗ.


 



ದೊಡ್ಡಣ್ಣನನ್ನು ಯಾರೂ ನೋಡಿರುವುದಿಲ್ಲ. ಅಂಶ ಆತನನ್ನು ಇನ್ನಷ್ಟು ಸರ್ವಶಕ್ತ ನನ್ನಾಗಿ ಮಾಡಿರುತ್ತದೆ. ಆಳುವ ಪಕ್ಷದ ಪ್ರಕಾರ ಆತ ಸಾವನ್ನೂ ಜಯಿಸಿದವನು.

ಬಿಗ್ ಬ್ರದರ್ ನಂತೆ ಗೋಲ್ಡಸ್ಟೀನ್ ವ್ಯಕ್ತಿತ್ವ ಕೂಡ ಅಸ್ತಿತ್ವದಲ್ಲಿ ಇಲ್ಲದಿರಬಹುದು. ನಾಗರಿಕರನ್ನು ಭಾವೋದ್ರೇಕಗೊಳಿಸಲು ಆಳುವ ಪಕ್ಷ ಬಳಸುವ ಪ್ರಚಾರಸಮರದ (Propaganda) ಸಾಧನ ಈತ. ನಾಗರಿಕರನ್ನು ಹದ್ದುಬಸ್ತಿನಲ್ಲಿಟ್ಟು, ಬಂಡಾಯವನ್ನು ತಡೆಗಟ್ಟಲು ಮುಂದೆ ಮಾಡುವ ಪೆಡಂಭೂತ. ಈಸ್ಟೇಷಿಯಾ ಮತ್ತು ಯೂರೇಶಿಯಾ ದೇಶಗಳು ಓಶಿಯಾನಾದ ಶತ್ರು ದೇಶಗಳು. ಅವುಗಳಂತೆ ಈತನೂ ಜನತೆಯ ಮುಂದೆ ಇರಿಸಲು ಬಳಸಲಾಗುವ ಒಬ್ಬ ಕಲ್ಪಿತ ಶತ್ರು. ಆಳುವ ಪಕ್ಷವು ಜನಹಿತಕ್ಕೆ ವಿರೋಧವಾದ ಕೆಲಸಗಳನ್ನು ಮಾಡಿದಾಗಲೆಲ್ಲ, ನಿಂದಿಸಲು ಗೋಲ್ಡಸ್ಟೀನ್ ಮತ್ತು ಅವನ ಅನುಯಾಯಿಗಳನ್ನು ಬಳಸಿಕೊಳ್ಳುತ್ತಿತ್ತು. ಅವರು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದಾರೆಂದು ನಿಂದಿಸಲಾಗುತ್ತಿತ್ತು. ಇಲ್ಲವೇ ಅವರಿಂದ ನಡೆಯುವ ಇನ್ನಷ್ಟು ದಾಳಿಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಚರ್ಚೆಗೆ ತರಲಾಗುತ್ತಿತ್ತು.

ದೇಶದ ಜನತೆಯನ್ನು ನಿಯಂತ್ರಣದಲ್ಲಿಡಲು ಅಂತ್ಯವಿಲ್ಲದ ಯುದ್ಧವನ್ನು, ಇತಿಹಾಸವನ್ನು ತಿರುಚುವ ಹಾಗೂ ಆಲೋಚನೆ ಪೊಲೀಸರನ್ನು (Thought Police) ಬಳಸುತ್ತಿತ್ತು ಆಳುವ ಪಕ್ಷ. ಬಂಡುಕೋರರನ್ನು ಸೆಳೆಯಲು ಬಂಡಾಯದ ಚಿಂತನೆಗಳ ಪುಸ್ತಕವೊಂದನ್ನು ತಾನೇ ತೇಲಿಬಿಟ್ಟಿತ್ತು ಕೂಡ.

೧೯೮೪ ಕಾದಂಬರಿಯಲ್ಲಿ ಆರ್ವೆಲ್ ಅನಾವರಣಗೊಳಿಸಿದ್ದು ಪಕ್ಕಾ ಸರ್ವಾಧಿಕಾರಿ ಪ್ರಭುತ್ವವನ್ನು. ಕಲ್ಪನೆಯಲ್ಲೂ ತೀವ್ರತುದಿಯನ್ನು ಮುಟ್ಟಿದ ಆಧುನಿಕ ದಿನಮಾನದ ನಿರಂಕುಶ ಸರಕಾರವನ್ನು. ನಿಕಟಭವಿಷ್ಯದಲ್ಲಿ ನಿಜವಾಗಬಹುದಾದ ಸಾಧ್ಯತೆಯನ್ನು ಹೊಂದಿದ ಕತೆಯಿದು ಎಂದು ೧೯೪೯ರಷ್ಟು ಹಿಂದೆಯೇ ಓದುಗರಿಗೆ ತಿಳಿಸುವುದು ಆರ್ವೆಲ್ ಉದ್ದೇಶವಾಗಿತ್ತು. ಪ್ರಭುತ್ವವೊಂದು ಮನುಷ್ಯ ಬದುಕಿನ ಪ್ರತಿಯೊಂದು ಮಗ್ಗುಲನ್ನೂ ನಿಯಂತ್ರಿಸುವ ಸರಕಾರವನ್ನು ಆತ ಚಿತ್ರಿಸಿದ್ದಾನೆ. ಇಂತಹ ಸರಕಾರದ ಪ್ರಕಾರ ಅವಿಧೇಯ ಆಲೋಚನೆ ಕೂಡ ಕಾನೂನುಬಾಹಿರ. ನಾಗರಿಕರನ್ನು ನಿಯಂತ್ರಿಸಲು ಆಳುವ ಪಕ್ಷ ಕೆಳಕಂಡ ಹಲವು ತಂತ್ರಗಳನ್ನು ಅನುಸರಿಸುತ್ತದೆ.

ಮನಶ್ಯಾಸ್ತ್ರೀಯ ಕೈವಾಡ- ಸ್ವತಂತ್ರ ಆಲೋಚನೆಗೆ ಅವಕಾಶ ನೀಡದಂತೆ ಮಿದುಳುಗಳ ಮೇಲೆ ದಾಳಿ ನಡೆಸುವುದು. ಆಳುವ ಪಕ್ಷದ ವೈಫಲ್ಯಗಳನ್ನು ಮತ್ತು ಕೊರತೆಗಳನ್ನು ಯಶಸ್ವೀ ವಿಜಯೋತ್ಸವಗಳೆಂದು ಪ್ರತಿಯೊಂದು ಮನೆಯ ದೈತ್ಯ ಟೆಲಿಸ್ಕ್ರೀನ್ ಮೂಲಕ ನಿರಂತರ ಪ್ರಚಾರಸಮರವನ್ನು ಅಪ್ಪಳಿಸುವುದು. ಟೆಲಿಸ್ಕ್ರೀನುಗಳು ನಾಗರಿಕರ ವರ್ತನೆಯ ಮೇಲೆ ಕಣ್ಣಿಟ್ಟಿರುತ್ತಿದ್ದವು. ದೊಡ್ಡಣ್ಣ ನಿಮ್ಮ ಮೇಲೆ ನಿಗಾ ಇಟ್ಟಿದ್ದಾನೆ (BIG BROTHER IS WATCHING YOU) ಎಂಬ ಸಂದೇಶಗಳು ಸರ್ವಾಂತರಿಯಾಮಿ ಆಗಿದ್ದವು. ಪ್ರಭುತ್ವ ಮಕ್ಕಳ ಮಿದುಳು ತೊಳೆದು ಅವರಿಂದ ತಮ್ಮ ತಂದೆತಾಯಿಗಳು, ಹಿರಿಯರ ಚಲನವಲನಗಳು, ಪಕ್ಷವಿರೋಧಿ ಚಟುವಟಿಕೆಗಳ ಕುರಿತು ಗುಟ್ಟಾಗಿ ಬೇಹುಗಾರಿಕೆ ವರದಿಗಳನ್ನು ಪಡೆಯುತ್ತಿತ್ತು.

ಲೈಂಗಿಕ ಕ್ರಿಯೆಯ ಗುರಿ ಆಳುವ ಪಕ್ಷಕ್ಕೆ ಹೊಸ ಸದಸ್ಯರನ್ನು ಹುಟ್ಟಿಸುವ ಸಂತಾನೋತ್ಪತ್ತಿ ಮಾತ್ರ. ಹೀಗಾಗಿ ಲೈಂಗಿಕ ವಾಂಛೆಗಳನ್ನು ಅದುಮಿಡಬೇಕೆಂದು ಎಲ್ಲರನ್ನೂ ಬಲವಂತಪಡಿಸುತ್ತಿತ್ತು. ಹೀಗೆ ಅದುಮಿಟ್ಟ ಹತಾಶೆ ಮತ್ತಿತರೆ ಭಾವನೆಗಳನ್ನು ಆಳುವ ಪಕ್ಷದ ರಾಜಕೀಯ ಶತ್ರುಗಳ ವಿರುದ್ಧ ತೀವ್ರ ದ್ವೇಷದ ಭೀಕರ ಪ್ರದರ್ಶನಗಳನ್ನಾಗಿ ಹರಿಯಬಿಡುತ್ತಿತ್ತು. ಆಳುವ ಪಕ್ಷ ಉದ್ದೇಶಕ್ಕೆಂದೇ ಶತ್ರುಗಳನ್ನು ಸೃಷ್ಟಿ ಮಾಡುತ್ತಿತ್ತು.

ದೈಹಿಕ ನಿಯಂತ್ರಣ- ಮಾನಸಿಕ ನಿಯಂತ್ರಣದ ಜೊತೆಜೊತೆಗೆ ತನ್ನ ಪ್ರಜೆಗಳ ದೇಹಗಳನ್ನೂ ನಿಯಂತ್ರಿಸುತ್ತಿತ್ತು ಆಳುವ ಪಕ್ಷ. ದಸ್ತಗಿರಿಗೆ ಮುಖದ ಮೇಲಿನ ಗೆರೆಯ ಸಣ್ಣ ಕದಲುವಿಕೆಯೂ ಸಾಕಿತ್ತು. ವ್ಯಕ್ತಿಯ ಪಾಲಿಗೆ ಆಕೆಯ ಅಥವಾ ಆತನ ನರಮಂಡಲ ವ್ಯವಸ್ಥೆಯೇ ಬಹುದೊಡ್ಡ ಶತ್ರುವಾಗಿತ್ತು. ಜನತೆಯನ್ನು ಮೈಮುರಿವಂತೆ ದುಡಿಸಿ ಸದಾ ಬಳಲಿಕೆಯ ಸ್ಥಿತಿಯಲ್ಲಿ ಇಟ್ಟಿರುತ್ತಿತ್ತು. ಉಲ್ಲಂಘಿಸಿದವರನ್ನು ಪಾಶವೀ ಚಿತ್ರಹಿಂಸೆಗೆ ಗುರಿಪಡಿಸಿ ಮರುಕಲಿಕೆ ಮೂಲಕ ಶಿಕ್ಷಿಸುತ್ತಿತ್ತು. ವಿಧಾನದಲ್ಲಿ ವಾಸ್ತವತೆಯನ್ನು ನಿಯಂತ್ರಿಸುತ್ತಿತ್ತು. ಎರಡಕ್ಕೆ ಎರಡನ್ನು ಸೇರಿಸಿದರೆ ಐದಾಗುತ್ತದೆಂದು ಜನರಿಗೆ ಮನವರಿಕೆ ಮಾಡಿಸುತ್ತಿತ್ತು.

ಮಾಹಿತಿ ಮತ್ತು ಚರಿತ್ರೆಯ ನಿಯಂತ್ರಣ- ತನ್ನ ಅನುಕೂಲಗಳು ನಿರೂಪಣೆಗಳು ಧ್ಯೇಯೋದ್ದೇಶಗಳಿಗೆ ಸರಿಹೊಂದುವಂತೆ ಎಲ್ಲ ಸುದ್ದಿಪತ್ರಿಕೆಗಳು ಮತ್ತು ಇತಿಹಾಸಗಳನ್ನು ತಿದ್ದಿಬರೆಯುತ್ತಿತ್ತು. ವ್ಯಕ್ತಿಗಳು ತಮ್ಮ ಗತವನ್ನು ಕುರಿತ ಯಾವುದೇ ದಾಖಲೆ ದಸ್ತಾವೇಜು, ಫೋಟೊಗಳನ್ನು ಇಟ್ಟುಕೊಳ್ಳುವುದು ನಿಷಿದ್ಧವಾಗಿತ್ತು. ಪರಿಣಾಮವಾಗಿ ನೆನಪುಗಳು ಮಸುಕಾಗಿ ಆಳುವ ಪಕ್ಷ ಹೇಳಿದ್ದೆಲ್ಲವನ್ನೂ ಕೇಳುತ್ತಿದ್ದರು ಪ್ರಜೆಗಳು. ವರ್ತಮಾನವನ್ನು ನಿಯಂತ್ರಿಸುವ ಮೂಲಕ ಗತವನ್ನು ತಿರುಚಲಾಗುತ್ತಿತ್ತು. ಗತವನ್ನು ನಿಯಂತ್ರಿಸುವ ಮೂಲಕ, ವರ್ತಮಾನದ ತನ್ನ ಎಲ್ಲ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುತ್ತಿತ್ತು.

ತಂತ್ರಜ್ಞಾನ- ಟೆಲಿಪರದೆಗಳು ಮತ್ತು ಅಡಗಿಸಿಟ್ಟ ಮೈಕ್ರೋಫೋನುಗಳ ಮೂಲಕ ಆಳುವ ಪಕ್ಷ ತನ್ನ ಸದಸ್ಯರ ಮೇಲೆ ಸದಾ ನಿಗಾ ಇಟ್ಟಿರುತ್ತಿತ್ತು. ತಾನು ಶತ್ರುಗಳೆಂದು ಕಾಣುವವರನ್ನು ಚಿತ್ರಹಿಂಸೆಗೆ ಗುರಿಪಡಿಸಲು ಭಯಾನಕ ಮಷಿನರಿಗಳು ಮತ್ತು ವಿಧಾನಗಳನ್ನು ಬಳಸುತ್ತಿತ್ತು. ಆರ್ಥಿಕ ಉತ್ಪಾದನೆ ಮತ್ತು ಮಾಹಿತಿ ಮೂಲಗಳನ್ನು ನಿಯಂತ್ರಿಸುತ್ತಿತ್ತು.

ಮಿದುಳು ನಿಯಂತ್ರಣಕ್ಕೆ ಭಾಷೆಯ ಬಳಕೆ- ಅವಿಧೇಯ ಮತ್ತು ಬಂಡುಕೋರ ಆಲೋಚನೆಗಳು ಕೂಡ ಹುಟ್ಟದಂತೆ ಭಾಷೆಯನ್ನು ಮರುರಚಿಸುವುದು. ಆಲೋಚನೆಗೆ ಬೇಕಾದ ಪದಗಳನ್ನೇ ಇಲ್ಲವಾಗಿಸುವುದು. ಇಂಗ್ಲಿಷಿಗೆ ಬದಲಾಗಿ Newspeak ಎಂಬ ಭಾಷೆಯನ್ನು ಬಳಕೆಗೆ ತರುವುದು. ಆಳುವ ಪಕ್ಷದ ನಿರಂಕುಶ ಅಧಿಕಾರವನ್ನು ಪ್ರಶ್ನಿಸುವುದು ಅಸಾಧ್ಯವಾಗುವಂತೆ Newspeak ಭಾಷೆಯನ್ನು ನಿರಂತರ ಪರಿಷ್ಕರಿಸಿ ಪರಿಪೂರ್ಣಗೊಳಿಸಲಾಗುತ್ತಿತ್ತು. ವಸಾಹತುಶಾಹಿ ಆಡಳಿತದ ವಿದೇಶೀ ಸರಕಾರ ತನ್ನದೇ ಭಾಷೆಯನ್ನು ಸರಕಾರಿ ಮತ್ತು ವ್ಯಾಪಾರಿ ಭಾಷೆಯೆಂದು ಗೊತ್ತುಪಡಿಸಿದ ಉದಾಹರಣೆಗಳಿವೆ. ತೊತ್ತಳ ತುಳಿತದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಇತಿಹಾಸದ ಸಂಪರ್ಕಕೊಂಡಿಗಳೇ ಕಳಚಿ ಹೋಗಿವೆ.

ಸ್ವಾಮಿನಿಷ್ಠೆ- ಆಳುವ ಪಕ್ಷಕ್ಕೆ ನಿಷ್ಠೆ ತೋರುವುದೇ ಏಕೈಕ ನಿಷ್ಠೆ. ಮೂಲಭೂತ ನಿಷ್ಠೆಯಿಂದ ಹಿಡಿದು ಕ್ಷುಲ್ಲಕ ನಿಷ್ಠೆಯ ತನಕ ಎಲ್ಲ ಬಗೆಯ ನಿಷ್ಠೆಗಳನ್ನು ಆಳುವ ಪಕ್ಷ ನಾಶಪಡಿಸುತ್ತದೆ. ನೆರೆಹೊರೆಯವರು ಮತ್ತು ಜೊತೆಗೆ ಕೆಲಸ ಮಾಡುವ ಕಾರ್ಮಿಕರು ಪರಸ್ಪರರ ಮೇಲೆ ಬೇಹುಗಾರಿಕೆ ಮಾಡುತ್ತಾರೆ. ಸ್ವಂತ ಮಗುವೇ ತಂದೆಯ ವಿರುದ್ಧ Thought Policeಗೆ ವರದಿ ಮಾಡುತ್ತದೆ. ಪ್ರತಿರೋಧ ಮತ್ತು ಸ್ವಾತಂತ್ರ್ಯದ ಸಾಧನ ಸಲಕರಣೆಗಳನ್ನು ತನಗೆ ಮಾರಾಟ ಮಾಡಿದವನು Thought Police ಸದಸ್ಯನೆಂದು ಕಥಾನಾಯಕನಿಗೆ ತರುವಾಯ ತಿಳಿದು ಬರುತ್ತದೆ.

ಪ್ರತಿರೋಧ ಮತ್ತು ಕ್ರಾಂತಿ- ಕಣ್ಣಲ್ಲಿ ಕಣ್ಣಿರಿಸಿ ನೋಡುವುದು, ದನಿಯ ಏರಿಳಿತ, ಪ್ರಾಸಂಗಿಕವಾಗಿ ಪಿಸುಗುಟ್ಟಿದ ಪದವೊಂದನ್ನು ಕೂಡ ಬಂಡಾಯ ಎಂದು ಪರಿಗಣಿಸಲಾಗುತ್ತಿತ್ತು. ನಿಯತಕಾಲಿಕವೊಂದನ್ನು ಇರಿಸಿಕೊಳ್ಳುವ ಮತ್ತು ಆಲಂಕಾರಿಕ ಪೇಪರ್ ವೇಯ್ಟ್ ಖರೀದಿಸಿದ ಕಥಾನಾಯಕನ ಸರಳ ಕ್ರಿಯೆ ಕೂಡ ಬಂಡಾಯ ಎನಿಸಿಕೊಳ್ಳುತ್ತದೆ.

ದುಡಿಯುವ ವರ್ಗದವರ ಜನಸಂಖ್ಯೆ ತಾವೇ ಒಂದು ಕ್ರಾಂತಿ ಮಾಡುವಷ್ಟು ದೊಡ್ಡ ಸಂಖ್ಯೆಯಲ್ಲಿ ಬೆಳೆದಿರುತ್ತದೆ. ಹಾಗೆ ಮಾಡಲು ಅವರು ತಮ್ಮನ್ನು ತಾವೇ ಸಂಘಟಿಸಿಕೊಳ್ಳಬೇಕಿರುತ್ತದೆ. ಸಮಸ್ಯೆಯೆಂದರೆ ಬಡತನದಲ್ಲಿ ನರಳುವ ಅವರು ನಿತ್ಯ ಬದುಕಿ ಉಳಿಯುವುದರ ಆಚೆಗೆ ಯಾವುದೇ ಗುರಿಯನ್ನು ಕಲ್ಪಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಉತ್ತಮ ಜಗತ್ತೊಂದರ ಕಲ್ಪನೆ ಕೂಡ ಅವರಿಗೆ ಅಸಾಧ್ಯವಾಗಿರುತ್ತದೆ. ಬ್ರಿಟಿಷ್ ಸಾಮಾಜಿಕ ಏಣಿಶ್ರೇಣಿಯನ್ನು ಕಿತ್ತೊಗೆದ ಕ್ರಾಂತಿ ತರುವಾಯ ಆಳುವ ಪಕ್ಷವನ್ನು ಕಟ್ಟಲಾಗಿರುತ್ತದೆ. ಕ್ರಾಂತಿ ಇನ್ನೂ ಮುಗಿದಿಲ್ಲ, ತಾನು ಸಂಪೂರ್ಣ ನಿಯಂತ್ರಣ ಹೊಂದಿದ ನಂತರವೇ ಕ್ರಾಂತಿ ಈಡೇರಿದಂತೆ ಎನ್ನುತ್ತದೆ ಆಳುವ ಪಕ್ಷ.

ಸ್ವಾತಂತ್ರ್ಯ ಮತ್ತು ಅಸ್ಮಿತೆ- ಜನತೆಯ ನಿಯಂತ್ರಣಕ್ಕೆ ಪಕ್ಷದ ಪ್ರಾಥಮಿಕ ಸಾಧನ ಇತಿಹಾಸ. ಅದರ ಜೊತೆಗೆ ಸ್ವಾತಂತ್ರ್ಯ ಮತ್ತು ಅಸ್ಮಿತೆಯ ನಿಯಂತ್ರಣವನ್ನು ಸೇರಿಸಿಕೊ ಳ್ಳುತ್ತದೆ ಪಕ್ಷ. ಉದಾಹರಣೆಗೆ ತಮ್ಮ ಅಸ್ಮಿತೆಯನ್ನು ಸ್ಥಾಪಿಸಿಕೊಳ್ಳುವ ಮೂಲಭೂತ ಸಾಧನ ಗಳನ್ನು ಪ್ರಜೆಗಳಿಗೆ ನಿರಾಕರಿಸಲಾಗಿರುತ್ತದೆ. ಉದಾಹರಣೆಗೆ ತನಗೆಷ್ಟು ವಯಸ್ಸಾಗಿದೆ, ಮದುವೆಯಾಗಿದೆಯೇ ಇಲ್ಲವೇ, ತನ್ನ ತಾಯಿ ಬದುಕಿದ್ದಾಳೆಯೇ ಎಂಬದು ಕೂಡ ಕಥಾನಾಯಕನಿಗೆ ಗೊತ್ತಿರುವುದಿಲ್ಲ. ನೈಜ ನೆನಪುಗಳ್ಯಾವುವು ಮತ್ತು ಕಲ್ಪಿತ ನೆನಪುಗಳೇನು ಎಂದು ಚಿಕ್ಕಂದಿನ ಜ್ಞಾಪಕಗಳನ್ನು ವಿಂಗಡಿಸುವುದು ಅಸಾಧ್ಯವಾಗಿರುತ್ತದೆ. ಫೋಟೊಗಳಾಗಲಿ, ದಾಖಲೆ ದಸ್ತಾವೇಜುಗಳಾಗಲಿ ಇರುವುದಿಲ್ಲ. ಪಕ್ಷದ ಎಲ್ಲ ಸದಸ್ಯರು ಅದೇ ಬಟ್ಟೆ ಧರಿಸುತ್ತಾರೆ, ಅದೇ ಸಿಗರೇಟು ಸೇದುತ್ತಾರೆ, ಅದೇ ಪೇಯ ಸೇವಿಸುತ್ತಾರೆ.

ತನ್ನದೇ ಅಸ್ಮಿತೆಯನ್ನು ಕಟ್ಟಿಕೊಳ್ಳಲು ಕಥಾನಾಯಕ ಪ್ರಯತ್ನಿಸುತ್ತಾನೆ. ತನ್ನ ಆಲೋಚನೆಗಳನ್ನು ಬರೆದಿಡಲು ದಿನಚರಿ ಪುಸ್ತಕದ (ಡೈರಿ) ಖರೀದಿಯು ನೆನಪು ಮತ್ತು ಚರಿತ್ರೆಯನ್ನು ಸೃಷ್ಟಿಸುವ ಪ್ರಯತ್ನ. ಆಳುವ ಪಕ್ಷ ಅಧಿಕಾರಕ್ಕೆ ಬರುವ ಮುನ್ನಿನ ತನ್ನ ದಿನಗಳ ನೆನಪಿಗೆಂದು ಪೇಪರ್ ವೇಯ್ಟೊಂದನ್ನು ಖರೀದಿಸುತ್ತಾನೆ. ಜ್ಯೂಲಿಯಾ ಜೊತೆ ಬದುಕು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಹೀಗೆ ಕಟ್ಟಿಕೊಳ್ಳುವ ವ್ಯಕ್ತಿತ್ವವೊಂದರ ಎಲ್ಲ ಮಗ್ಗುಲುಗಳನ್ನೂ ಸಂಪೂರ್ಣವಾಗಿ ಕಳಚಿ ನಾಶಪಡಿಸುತ್ತದೆ ಓಶಿಯಾನಾದ ಪ್ರೇಮ ಮಂತ್ರಾಲಯ (Ministry of Love). ದೈಹಿಕ ಮಾನಸಿಕ ಚಿತ್ರಹಿಂಸೆಯ ನಂತರ ಮತ್ತೆ ಆತನನ್ನು ಸಮಾಜದ ನಡುವೆ ಬಾಳಲು ಬಿಡುಗಡೆ ಮಾಡಲಾಗುತ್ತದೆ. ಹೊತ್ತಿಗೆ ಅವನು ಪಕ್ಷದ ಮುಖರಹಿತ ಸಮುದಾಯದ ಭಾಗ ಆಗಿರುತ್ತಾನೆ.

ಹೀಗೆ ಎಲ್ಲ ಡಿಸ್ಟೋಪಿಯನ್ ಕಾದಂಬರಿಗಳ ಪೈಕಿ ಎದ್ದು ನಿಲ್ಲುವ ದಾರ್ಶನಿಕ ಕೃತಿ ೧೯೮೪.

 

 

 

Writer - ವಾರ್ತಾಭಾರತಿ

contributor

Editor - Ismail

contributor

Byline - ಡಿ. ಉಮಾಪತಿ

contributor

Similar News

ಭಾವ - ವಿಕಲ್ಪ
ಕಥೆಗಾರ