‘ಉದಯವಾಗಲಿ’ ಹಾಡುತ್ತಲೇ ಇರಬೇಕು

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ರಹಮತ್ ತರೀಕೆರೆ, ಕನ್ನಡ ಸಾಹಿತ್ಯ ಲೋಕದ ಜಂಗಮ. ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರು, ವಿಮರ್ಶಕರು ಎಂದು ಗುರುತಿಸಿಕೊಂಡಿರುವ ಇವರ ‘ಮರದೊಳಗಿನ ಕಿಚ್ಚು’ ಕೃತಿ ನೆಲಮೂಲಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ. ‘ಕತ್ತಿಯಂಚಿನ ದಾರಿ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ತಿರುಗಾಟ ಮತ್ತು ಅದರಿಂದ ದಕ್ಕಿದ ಅನುಭವಗಳ ನೆಲೆಯಲ್ಲಿ ಅವರು ಬರೆದ ಬರಹಗಳು ಪ್ರವಾಸಿ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ನೀಡಿವೆ. ಕರ್ನಾಟಕದ ಸೂಫಿಗಳ ಕುರಿತಂತೆ ಅವರು ಬರೆದಿರುವ ಅಧ್ಯಯನ ಕೃತಿ, ಕನ್ನಡತನದ ವ್ಯಾಖ್ಯಾನವನ್ನು ಹಿಗ್ಗಿಸಿದೆ. ‘ಅಂಡಮಾನ್ ಕನಸು’, ‘ಕರ್ನಾಟಕದ ನಾಥಪಂಥ’, ‘ಧರ್ಮಪರೀಕ್ಷೆ’ ಸೇರಿದಂತೆ, ೧೫ಕ್ಕೂ ಅಧಿಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಇವರ ಸಾಧನೆಗಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವು ಗೌರವಗಳು ಸಂದಿವೆ.

Update: 2024-12-26 10:33 GMT

ನಾರಾಯಣ ಹುಯಿಲಗೋಳರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡು ರಚಿಸಿದರಷ್ಟೆ. ಇದನ್ನು ಏಕೀಕರಣಗೊಂಡ ಬಳಿಕ ಅಧಿಕೃತ ಸಮಾರಂಭವೊಂದರಲ್ಲಿ ಗಾಯಕ ಕಾಳಿಂಗರಾಯರು ‘ಉದಯವಾಯಿತು’ ಎಂದು ತಿದ್ದುಪಡಿಗೊಳಿಸಿ ಹಾಡಿದರಂತೆ; ಆಗ ಸಭೆಯಲ್ಲಿದ್ದ ಬೇಂದ್ರೆಯವರು ‘ಉದಯವಾಗಲಿ ಎಂದೇ ಹಾಡಬೇಕು. ಉದಯ ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಳ್ಳುವುದೂ ಇಲ್ಲ’ ಎಂದರಂತೆ. ಉದಯ ಆಯಿತು ಮತ್ತು ಆಗಲಿ ಎಂಬ ಭೂತ ಮತ್ತು ಭವಿಷ್ಯತ್ ಸೂಚಕ ಕ್ರಿಯಾಪದಗಳ ಈ ವಿಂಗಡಣೆಯ ಪ್ರಕರಣವು ಮಾರ್ಮಿಕವಾಗಿದೆ. ವ್ಯಕ್ತಿತ್ವವಾಗಲಿ, ನಾಡಾಗಲಿ, ದೇಶವಾಗಲಿ, ಸಮಾಜವಾಗಲಿ, ಧರ್ಮವಾಗಲಿ ಎಂದೂ ಪರಿಪೂರ್ಣತೆಯ ತುದಿಯನ್ನು ಮುಟ್ಟುವುದಿಲ್ಲ. ಮುಟ್ಟಿಬಿಟ್ಟರೆ ಸ್ಥಗಿತತೆ. ಬದಲಿಗೆ ಅದು ಆಗು ಹಾದಿಯಲ್ಲಿ ಚಲಿಸುತ್ತಲೇ ಇರಬೇಕು. ಕುವೆಂಪುರವರ ಕವನದಲ್ಲಿ ‘ಆಗು ಆಗು ಆಗು ಆಗು ನೀ ಅನಿಕೇತನ’ ಎಂಬಲ್ಲಿರುವ ಕ್ರಿಯಾಶಯದ ಪುನರುಕ್ತಿಯನ್ನು ಗಮನಿಸಬೇಕು. ಆಗುವಿಕೆಯು ಒಂದು ಚಲನಶೀಲ ಪ್ರಕ್ರಿಯೆ. ಆದರೆ ಚಲನೆಯ ಹಾದಿಯಲ್ಲಿ ಪಯಣವು ಏರುತನದಲ್ಲೇ ಇರಬೇಕಿಲ್ಲ. ಅಧಃಪತನದಲ್ಲೂ ಇರಬಹುದು. ಏರುಪೇರಿನ ಈ ಚಲನೆಯನ್ನು ಯಾವ ನಾಡಿಗೂ, ಧರ್ಮಕ್ಕೂ, ಸಂಸ್ಕೃತಿಗೂ ತಪ್ಪಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಏಕೀಕರಣಗೊಂಡ ನಂತರ ಕರ್ನಾಟಕದ ಏರುಪೇರುಗಳನ್ನು ಗಮನಿಸಬಹುದು. ಆರ್ಥಿಕ ಅಭಿವೃದ್ಧಿಯಲ್ಲಿ ಅದು ಏರುಮುಖಿಯಾಗಿದೆ. ಆದರೆ ಸಾಮಾಜಿಕ ಧಾರ್ಮಿಕ ಸಂಬಂಧಗಳಲ್ಲಿ ಅದು ಕೆಳಮುಖಿಯಾಗಿದೆ. ಏಕೀಕರಣವು, ಏಕರೂಪೀಕರಣದತ್ತ ಚಲಿಸುತ್ತಿದೆ.

ಎಲ್ಲವನ್ನು ಒಂದು ಸಿದ್ಧಾಂತ, ಸಂಸ್ಕೃತಿ, ಧರ್ಮದ ಎರಕದಲ್ಲಿ ಹೊಯ್ದು, ಪಡಿಯಚ್ಚುಗಳನ್ನು ನಿರ್ಮಿಸುವುದು ಏಕರೂಪೀಕರಣ (ಯೂನಿಫಾರ್ಮೈಜೇಶನ್). ರಾಜಕೀಯ ಧಾರ್ಮಿಕ ಸರ್ವಾಧಿಕಾರ ಶುರುವಾಗುವುದು ಇಲ್ಲಿಂದ. ಹಲವು ಛಿದ್ರತೆಗೆ ಒಳಗಾಗಿರುವ ನಾಡನ್ನು, ಚಳವಳಿಯನ್ನು, ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಸಂಘಟಿಸುವ ಡೆಮಾಕ್ರಟಿಕ್ ಕ್ರಿಯೆಯು ಏಕೀಕರಣ (ಯೂನಿಫಿಕೇಶನ್). ವೈವಿಧ್ಯಗಳನ್ನು ಬಲಿಷ್ಠರು ತಮ್ಮ ಹಿತಾಸಕ್ತಿಗೆ ತಕ್ಕಂತೆ ಸಪಾಟುಗೊಳಿಸುವುದು ಏಕರೂಪೀಕರಣವಾದರೆ, ಅವನ್ನು ಸಮಾನತೆಯ ನೆಲೆಯಲ್ಲಿ ದೇಶಕಟ್ಟುವ ಮತ್ತು ಸಮಾಜ ಪರಿವರ್ತನೆಯ ಉದ್ದೇಶಕ್ಕೆ ಒಗ್ಗೂಡಿಸುವುದು ಏಕೀಕರಣ. ಏಕರೂಪೀಕರಣವನ್ನು ವಿರೋಧಿಸಲು ಸಾಮಾನ್ಯವಾಗಿ ದೇಶದಲ್ಲಿರುವ ವೈವಿಧ್ಯ ಮತ್ತು ಬಹುತ್ವಗಳನ್ನು ಪರ್ಯಾಯ ಆದರ್ಶಮೌಲ್ಯವಾಗಿ ಮಂಡಿಸಲಾಗುತ್ತದೆ. ಆದರೆ ಚರಿತ್ರೆಯ ನಿರ್ದಿಷ್ಟ ಸನ್ನಿವೇಶಗಳಲ್ಲಿ ವೈವಿಧ್ಯ ಮತ್ತು ಬಹುತ್ವಗಳ ಆವಾಹನೆ ಮತ್ತು ಆರಾಧನೆಗಳೂ ಸಮಸ್ಯೆ ಸೃಷ್ಟಿಸಿವೆ. ಅಸ್ತಿತ್ವದಲ್ಲಿರುವ ಪ್ರತಿಯೊಂದು ಘಟಕ-ಗುರುತಿಗೂ ಮಾನ್ಯತೆ ಕೊಡುವ ಮತ್ತು ಅವನ್ನು ಬೆರೆಸುವ ಉಪಕ್ರಮವು, ತುಸು ಎಡವಿದರೂ ಅಸ್ಮಿತೆಗಳ ಹೆಸರಿನ ಅಸಂಖ್ಯ ಸೀಳುಗಳನ್ನು ಸೃಷ್ಟಿಸಬಹುದು. ಆಗ ಏಕೀಕರಣದ ಅಪೇಕ್ಷೆ ಮತ್ತೊಮ್ಮೆ ಪ್ರಕಟವಾಗತೊಡಗುತ್ತದೆ. ವಿಭಜನೆಗೊಂಡು ದಾಯಾದಿ ಕಲಹ ಮಾಡಿದ ದೇಶಗಳಲ್ಲೂ ಸುಪ್ತವಾಗಿ ಏಕೀಕರಣದ ಹಂಬಲಗಳಿರುತ್ತವೆ.

ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾತಂತ್ರ್ಯ ಚಳವಳಿಗಾಗಿ ಧರ್ಮ, ಜಾತಿ, ಪ್ರಾಂತ, ಭಾಷೆ ಮೊದಲಾದ ಅಸ್ಮಿತೆಗಳ ಗಡಿಮೀರಿ ಒಗ್ಗಟ್ಟನ್ನು ಸಾಧಿಸಲಾಯಿತು. ಇದೇ ಹೊತ್ತಲ್ಲಿ ಭಾಷೆ, ಬುಡಕಟ್ಟು ಹೆಸರಲ್ಲಿ ಪ್ರಾದೇಶಿಕ ಆಶೋತ್ತರಗಳು ಜೀವಂತಗೊಂಡವು. ಇವು ರಾಷ್ಟ್ರೀಯ ವಿಮೋಚನ ಚಳವಳಿಯಲ್ಲಿ ಬಿರುಕುಂಟು ಮಾಡುವ ಸಾಧ್ಯತೆಯಿತ್ತು. ಇದನ್ನು ರಾಷ್ಟ್ರೀಯ ಹೋರಾಟದೊಂದಿಗೆ ಬಿರುಕಿಲ್ಲದೆ ಬೆಸೆಯಲು ಯತ್ನಿಸಲಾಯಿತು. ಆಗ ದೇಶ ವಿಭಜನೆ, ಮುಸ್ಲಿಮರ ಸ್ಥಾನಮಾನದ ಪ್ರಶ್ನೆ, ಗಾಂಧಿಹತ್ಯೆ, ಮತೀಯ ದ್ವೇಷದ ಹರಡಿಕೆ, ದಲಿತರ ಹಕ್ಕುಗಳ ಪ್ರಶ್ನೆ, ಬುಡಕಟ್ಟುಗಳ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆ, ಭಾರತ ಒಕ್ಕೂಟದೊಳಗೆ ಪ್ರಾಂತಗಳ ವಿಲೀನ-ವಿಲೀನ ವಿರೋಧ, ವಿಭಿನ್ನ ಸೈದ್ಧಾಂತಿಕ ಮತ್ತು ಪ್ರಾದೇಶಿಕ ಹಿನ್ನೆಲೆಯ ರಾಜಕೀಯ ಪಕ್ಷಗಳು ಒಂದಾಗಿ ಸರಕಾರ ರಚಿಸುವ ಸವಾಲು-ಮೊದಲಾದ ಚಾರಿತ್ರಿಕ ಒತ್ತಡಗಳಿದ್ದವು. ವಿವಿಧತೆಯಲ್ಲಿ ಏಕತೆಯ ಮಾತು ಆಗ ಚಾಲ್ತಿ ಪಡೆಯಿತು.

ಸ್ವಾತಂತ್ರ್ಯಾ ನಂತರ ಪ್ರಾದೇಶಿಕ ಅಸ್ಮಿತೆಗಳ ಪ್ರಶ್ನೆ ಬೇರೊಂದು ರೂಪದಲ್ಲಿ ಮೇಲೆದ್ದಿತು. ಈ ಅಸ್ಮಿತೆಗಳು ದೇಶ ವಿಭಜನೆಯಿಂದ ಚೇತರಿಸಿಕೊಳ್ಳುತ್ತಿದ್ದ ಭಾರತವನ್ನು ಮತ್ತೊಮ್ಮೆ ವಿಭಜನೆಗೆ ಪ್ರೋತ್ಸಾಹಿಸಬಹುದು ಎಂಬ ಆತಂಕ ನೆಹರೂ ಅವರಿಗಿತ್ತು. ಆದರೆ ಪೊಟ್ಟಿ ಶ್ರೀರಾಮುಲು ತೆಲುಗು ಭಾಷಿಕ ಪ್ರದೇಶಗಳನ್ನು ಏಕೀಕರಿಸಲು ಮಾಡಿದ ಉಪವಾಸ ಮತ್ತು ಜೀವತ್ಯಾಗ, ಭಾಷಾವಾರು ಪ್ರಾಂತಗಳನ್ನು ನಿರ್ಮಿಸುವ ಅನಿವಾರ್ಯತೆ ಸೃಷ್ಟಿಸಿತು. ಆಗ ಭಾರತದಲ್ಲಿ ಬೇರೆಬೇರೆ ಪ್ರಾಂತಗಳು ಒಕ್ಕೂಟದಲ್ಲಿ ವಿಲೀನಗೊಳ್ಳುತ್ತಿದ್ದವು. ಅದೇ ಕಾಲದಲ್ಲಿ ಭಾಷಿಕ ಪ್ರದೇಶಗಳು ಏಕೀಕರಣಗೊಂಡು ಸ್ವತಂತ್ರ ರಾಜ್ಯಗಳಾಗಿ ಉದಿಸುತ್ತಿದ್ದವು. ಆದರೆ ಭಾಷಿಕ ನೆಲೆಯಲ್ಲಿ ಸಂಭವಿಸಿದ ಈ ಏಕೀಕರಣ ಅಂತಿಮವಾಗಲಿಲ್ಲ. ಪ್ರಾದೇಶಿಕ ಅಸಮಾನತೆಯ ಪ್ರಶ್ನೆಗಳು ಮತ್ತೆಮತ್ತೆ ಅವುಗಳ ವಿಭಜನೆಗೂ, ಹೊಸರಾಜ್ಯ ಸ್ಥಾಪನೆಗೂ ನಾಂದಿ ಹಾಡಿದವು. ಏಕೀಕೃತ ಆಂಧ್ರಪ್ರದೇಶವು, ಪ್ರಾದೇಶಿಕ ಹಿಂದುಳಿವಿಕೆ ಮತ್ತು ವಿಶಿಷ್ಟ ತೆಲುಗಿನ ನೆಲೆಯಲ್ಲಿ ತೆಲಂಗಾಣಕ್ಕೆ ಜನ್ಮಕೊಟ್ಟಿತು. ಬುಡಕಟ್ಟು ಆಧಾರದಲ್ಲಿ ಜಾರ್ಖಂಡ್-ಛತ್ತೀಸ್ಗಡಗಳು ಹುಟ್ಟಿದವು. ಹಿಮಾಲಯ ಪರ್ವತ ಪ್ರದೇಶಗಳ ಭೌಗೋಳಿಕತೆಯ ಆಧಾರದಲ್ಲಿ, ಉತ್ತರ ಪ್ರದೇಶದ ನದಿಬಯಲಿನ ಪ್ರದೇಶಗಳಿಂದ ಬೇರ್ಪಟ್ಟು ಉತ್ತರಾಖಂಡ ಮೂಡಿತು.

 

ಏಕೀಕರಣ ಮತ್ತು ಮರುವಿಭಜನೆಗಳ ಈ ಆಟವು ಪ್ರಾಂತ-ರಾಜ್ಯಗಳಿಗೆ ಸೀಮಿತವಲ್ಲ. ವಿಕೇಂದ್ರೀಕರಣದ ಆಧಾರದಲ್ಲಿ ಹೊಸ ಜಿಲ್ಲೆ-ತಾಲೂಕುಗಳ ರಚನೆಗೂ ವಿಸ್ತರಿಸುತ್ತದೆ. ರಾಜಕೀಯಪಕ್ಷ, ಸಂಘಟನೆ, ಚಳವಳಿಗಳಿಗೂ ಅನ್ವಯವಾಗುತ್ತದೆ. ಭಾರತದ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ, ಕರ್ನಾಟಕದ ದಲಿತ ಸಂಘಟನೆ, ರೈತ ಸಂಘಟನೆಗಳು ಇದಕ್ಕೆ ಸಾಕ್ಷಿ. ಸವರ್ಣೀಯ ಭೂಮಾಲಕರು ಆಚರಿಸುವ ಅಸ್ಪಶ್ಯತೆ ಮತ್ತು ದಬ್ಬಾಳಿಕೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಅಸ್ಪಶ್ಯ ಸಮುದಾಯದ ಬಣಗಳು ಏಕೀಕರಣಗೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸೈದ್ಧಾಂತಿಕ ಭಿನ್ನಮತ, ವ್ಯಕ್ತಿಸಂಘರ್ಷ ಹಾಗೂ ಒಳಪಂಗಡಗಳ ಆಧಾರದಲ್ಲಿ ವಿಭಜನೆಗೊಂಡಿತು. ಆದರೆ ದಲಿತರ ಮೇಲಿನ ಹಲ್ಲೆಗಳು, ಅಂಬೇಡ್ಕರ್ ಅವರಿಗೆ ಅಪಮಾನದ ಪ್ರಸಂಗದಲ್ಲಿ ಬಣಗಳೆಲ್ಲ ಒಂದಾಗುತ್ತವೆ. ಭಾರತದ ಏಕೀಕೃತ ಕಮ್ಯುನಿಸ್ಟ್ ಪಾರ್ಟಿಯು ವಿಭಜಿತವಾಗಿ, ಹಲವಾರು ಬಣಗಳಾಯಿತು. ದಮನಿತರು ಕಟ್ಟುವ ಚಳವಳಿಗಳಲ್ಲಿ ಅಸ್ಮಿತೆಯ ಪ್ರಶ್ನೆ ಮತ್ತು ಸೈದ್ಧಾಂತಿಕ ಭಿನ್ನಮತಗಳು ನ್ಯಾಯಬದ್ಧ ವಿಕೇಂದ್ರೀಕರಣದಂತೆ ತೋರುತ್ತವೆ. ಆದರೆ ತಾರ್ಕಿಕವಾಗಿ ಅವು ಛಿದ್ರೀಕರಣದಲ್ಲಿ ಮುಗಿದಿರುತ್ತವೆ. ಈ ಛಿದ್ರೀಕರಣದಲ್ಲಿ ಏಕರೂಪೀಕರಣವಾದಿ ಶಕ್ತಿಗಳ ಮಧ್ಯಪ್ರವೇಶವೂ ಇರುತ್ತದೆ. ಸಮಾನತೆಯ ಆಶಯಕ್ಕಾಗಿ ಏಕೀಕರಣಗೊಂಡ ಸಂಘಟನೆ/ಚಳವಳಿ ವಿಘಟಿತವಾದರೆ, ಬಹುಜನರ ಬಹುತ್ವ ನೆಲೆಯ ಸಮಾಜ ನಿರ್ಮಾಣಕ್ಕೆ ಹಿನ್ನಡೆಯಾಗುತ್ತದೆ. ವಿಘಟಿತ ವೈವಿಧ್ಯವು ನಿರ್ದಿಷ್ಟ ಚಾರಿತ್ರಿಕ ಬಿಕ್ಕಟ್ಟುಗಳಲ್ಲಿ ಒಂದು ಶಾಪ. ತನ್ನೆಲ್ಲ ತುಣುಕು ಭಾರತದ ಫ್ಯಾಶಿಸಂ ತನ್ನ ಆಂತರಿಕ ಭಿನ್ನಮತ, ಬಣಸಂಘರ್ಷಗಳನ್ನು ಬದಿಗಿಟ್ಟು ಘನೀಕರಣಗೊಂಡಿರುವ ಈ ಹೊತ್ತಲ್ಲಿ ದಲಿತ ಸಂಘಟನೆ ಮತ್ತು ಎಡಪಕ್ಷಗಳ ಬಣವೈವಿಧ್ಯ ಹಾನಿಕರವಾಗಿದೆ. ರಾಜಕೀಯ ವಲಯದಲ್ಲಿ ಎಡಪಕ್ಷಗಳ ಏಕೀಕರಣದ ಅಪೇಕ್ಷೆ ವ್ಯಕ್ತವಾಗುತ್ತಲೇ ಇದೆ. ವಿಭಿನ್ನ ಧರ್ಮ, ಜಾತಿ, ಭಾಷೆಗೆ ಸೇರಿದ ಜನ ಒಟ್ಟುಗೂಡಿ ಚಳವಳಿ ಮಾಡುವಾಗ ‘ಆವಾಜ್ ದೊ ಹಂ ಏಕ್ ಹೈ’ ಎಂಬ; ‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂಬ ಘೋಷಣೆಗಳು ಮೊಳಗುತ್ತವೆ. ಆದರೆ ಕಠಿಣ ಬಿಕ್ಕಟ್ಟಿನಲ್ಲಿ ಅವು ಒಂದಾಗದೆ ಉಳಿದಿವೆ. ಇದೊಂದು ವಿಕಟ ವೈರುಧ್ಯ. ಸೈದ್ಧಾಂತಿಕ ಭಿನ್ನಮತ, ಸಾಂಸ್ಕೃತಿಕ ವೈವಿಧ್ಯ, ಸೈದ್ಧಾಂತಿಕ ಬಹುತ್ವ, ಏಕೀಕರಣದ ಹಂಬಲ, ವಿಘಟನೆಯ ಅಪೇಕ್ಷೆ- ಇವು ತಮಗೆ ತಾವೇ ಒಳಿತು-ಕೆಡುಕುಗಳಲ್ಲ. ಇವು ಯಾವ ಉದ್ದೇಶಕ್ಕೆ ಮತ್ತು ಚಾರಿತ್ರಿಕ ಸನ್ನಿವೇಶದಲ್ಲಿ ಸಂಘಟಿತ-ವಿಘಟಿತ ಆದವು, ಪರಿಣಾಮ ಏನಾಯಿತು ಎಂಬುದರ ಮೇಲೆ ಮೌಲ್ಯ-ಅಪಮೌಲ್ಯ ಆಗುತ್ತವೆ. ದಮನಿತರ ಬಿಡುಗಡೆಯ ಆಶಯದಿಂದ ಹುಟ್ಟುವ ಯಾವುದೇ ಏಕೀಕರಣವು, ತಾತ್ಕಾಲಿಕವಾಗಿ ಬಣ ವಿಶಿಷ್ಟತೆಗಳನ್ನು ಬದಿಗೆ ಸರಿಸಿರುವಂತೆ ಕಂಡರೂ, ದೂರಗಾಮಿ ಪರಿಣಾಮದಲ್ಲಿ ಧನಾತ್ಮಕ ಸಂಗತಿಯಾಗಿದೆ.

ಈ ಸನ್ನಿವೇಶದಲ್ಲಿ ಅರವಿಂದರ ಹೇಳಿಕೆಯನ್ನು ಉಲ್ಲೇಖಿಸಬೇಕು: ‘‘ದೇಶದಲ್ಲಿ ಒಂದು ಸಾಮಾನ್ಯ ಕೂಗಿದೆ. ಅದೆಂದರೆ ನಾವು ವಿಮೋಚಿತರಾಗುವ ಮೊದಲು ಪರಿಣಾಮಕಾರಿ ಏಕತೆ ಬರಬೇಕೆಂದು. ಆದರೆ ಯಾವುದು ಹೆಚ್ಚು ಪರಿಣಾಮಕಾರಿ ಅಥವಾ ಟೊಳ್ಳು ಏಕತೆ ಎಂಬ ಬಗ್ಗೆ ಯಾರೂ ದನಿ ಎತ್ತುತ್ತಿಲ್ಲ. ನಾವು ಮಾತಾಡುತ್ತಿರುವ ಏಕತೆಯ ಅಗತ್ಯದ ಅರ್ಥವೇನು? ಏಕತೆಯೆಂದರೆ, ಏಕೀಕರಣವಲ್ಲ ಮತ್ತು ಎಲ್ಲ ವಿಭಿನ್ನತೆಗಳನ್ನು ನಿರಾಕರಿಸುವುದಲ್ಲ. ಧರ್ಮದಲ್ಲಿ ಏಕತೆಯನ್ನು ಪ್ರತಿಪಾದಿಸುವ ಕೆಲವರು ಏಕರೂಪೀಕರಣವನ್ನು ಮಾತ್ರ ಬಯಸುತ್ತಿದ್ದಾರೆ. ಆದರೆ ಧರ್ಮಗಳಲ್ಲಿ ಏಕರೂಪತೆಯು, ಮನುಷ್ಯ ಮನಸ್ಸಿನ ಮೂಲಭೂತ ಗುಣದ ಹಿನ್ನೆಲೆಯಲ್ಲಿ ಮನೋವೈಜ್ಞಾನಿಕವಾಗಿ ಅಸಾಧ್ಯವಾದ ನಿಷೇಧವಾಗಿದೆ. ಎಲ್ಲಿಯ ತನಕ ಜನರಲ್ಲಿ ಆಧ್ಯಾತ್ಮಿಕ ಸಾಧನೆಯಲ್ಲಿ ವಿಭಿನ್ನ ಬೌದ್ಧಿಕತೆ, ಭಾವಾವೇಶಗಳು ಇರುತ್ತವೆಯೊ, ಅಲ್ಲಿತನಕ ವಿವಿಧ ಧರ್ಮಗಳಿರುತ್ತವೆ. ಒಂದೇ ಧರ್ಮದಲ್ಲಿ ವಿವಿಧ ಬಣಗಳಿರುತ್ತವೆ’’

ಅರವಿಂದರ ಈ ಬಹುತ್ವವಾದಿ ಹೇಳಿಕೆಯಲ್ಲಿ ನಾಲ್ಕು ಸಂಗತಿಗಳಿವೆ: ಏಕತೆಯ ಕೂಗಿನಲ್ಲಿ ಟೊಳ್ಳಿರುವುದಕ್ಕೆ ಸಾಧ್ಯತೆಯಿದೆ. ವೈವಿಧ್ಯವು ನಿವಾರಿಸಿಕೊಳ್ಳಬೇಕಾದ ಸಮಸ್ಯೆಯಲ್ಲ. ಅದನ್ನು ನಿವಾರಿಸಬಾರದು ಮತ್ತು ಅದನ್ನು ನಿವಾರಿಸಲು ಸಾಧ್ಯವೂ ಇಲ್ಲ. ಆದರೆ ಅವರು ಹೇಳುವಂತೆ, ಭಾರತದಲ್ಲಿ ಬಹುತ್ವವು ಕೇವಲ ಮನಃಶಾಸ್ತ್ರೀಯ ಸಾಧ್ಯತೆಯಲ್ಲ. ವಿಭಿನ್ನ ಗುರುತಿನ ಜನರು ಸಾಮಾಜಿಕವಾಗಿ, ರಾಜಕೀಯವಾಗಿ ಅಸ್ತಿತ್ವ ಪಡೆದುಕೊಳ್ಳುವುದಕ್ಕೆ ಅಗತ್ಯವಾದ ಬುನಾದಿಪ್ರಾಯದ ಸಂಗತಿ ಕೂಡ. ವೈವಿಧ್ಯಗಳ ನಿವಾರಣೆಯ ಹಿಂದೆ ಅಧಿಕಾರಸ್ಥ ಮತಧರ್ಮ ಅಥವಾ ರಾಜಕೀಯ ಹೇರಿಕೆಯಿದ್ದಾಗ, ಬಹುತ್ವವು ಜನರ ಮೂಲಭೂತ ಸಾಂಸ್ಕೃತಿಕ ಹಕ್ಕಾಗುತ್ತದೆ. ವೈವಿಧ್ಯಗಳ ಜಾಗದಲ್ಲಿ ಸ್ವಾತಂತ್ರ್ಯ ಸಮಾನತೆ, ಸೋದರತ್ವದ ಪರಿಕಲ್ಪನೆಯುಳ್ಳ ಪರ್ಯಾಯ ಧರ್ಮದ ಮಂಡನೆಯಿದ್ದಾಗ, ಅದನ್ನು ಬಹುತ್ವವಿರೋಧಿ ಎನ್ನುವುದು ಸರಳೀಕರಣ ಆಗುತ್ತದೆ. ಕೆಲವು ಏಕದೇವೋಪಾಸಕ ಧರ್ಮಗಳಲ್ಲಿರುವ ಏಕೀಕರಣದ ಪ್ರಕ್ರಿಯೆಯನ್ನು ಗಮನಿಸಬೇಕು. ಅವು ದೈವವೈವಿಧ್ಯವನ್ನು ನಿವಾರಿಸಿಕೊಳ್ಳಬೇಕಾದ ಕೇಡೆಂದು ಪರಿಭಾವಿಸುವುದು ತಾತ್ವಿಕವಾಗಿ ವೈವಿಧ್ಯವಿರೋಧಿ ನಿಲುವು. ಆದರೆ ಈ ನಿಲುವು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಅಗತ್ಯವಾಗಿದ್ದಿರಬಹುದು. ಇಸ್ಲಾಮಿನ ಬಹುದೇವತಾರಾಧನೆಯ ನಿರಾಕರಣೆಯ ಹಿಂದೆ ಅರಬರಲ್ಲಿದ್ದ ಬುಡಕಟ್ಟು ಸಂಘರ್ಷ ನಿವಾರಿಸುವ ಉದ್ದೇಶವಿತ್ತು. ಶರಣರ ಏಕದೇವನಿಷ್ಠೆಯ ಹಿಂದೆಯೂ ಸಾಮಾಜಿಕ ವೈವಿಧ್ಯದ ಭಾಗವಾಗಿದ್ದ ಶ್ರೇಣೀಕೃತ ಜಾತಿಪದ್ಧತಿಯನ್ನು ನಿರಾಕರಿಸಿ ಲಿಂಗದೀಕ್ಷೆ ಪಡೆದ ಎಲ್ಲರನ್ನು ಸಮಾನತೆಯ ನೆಲೆಯಲ್ಲಿ ಒಂದು ಚೌಕಟ್ಟಿನೊಳಗೆ ತರುವ ಆಶಯವಿತ್ತು; ಧಾರ್ಮಿಕ, ಸಾಮಾಜಿಕ ನೆಲೆಯ ಸಮಾನತಾ ಸಮಾಜದ ಕನಸಿತ್ತು. ವಿಭಿನ್ನ ಭಾಷೆ, ಮತ, ಧರ್ಮಗಳಲ್ಲಿ ಒಡೆದುಹೋದ ಸಮಾಜಗಳನ್ನು ಕೂಡಿಸಲು, ಇಂತಹ ಧನಾತ್ಮಕ ಏಕೀಕರಣ ತತ್ವವು ಪ್ರಯೋಗಗೊಂಡಿರುವ ನಿದರ್ಶನ ಆಧುನಿಕ ಕಾಲದಲ್ಲೂ ಇದೆ. ವಿವಿಧ ಪಂಗಡಗಳೊಳಗೆ ಒಡೆದಿರುವ ದಲಿತರನ್ನು ದಮ್ಮದೊಳಗೆ ಏಕೀಕರಿಸುವ ಯತ್ನವು ಇದರಲ್ಲೊಂದು. ಆದರೆ ಸಕಾರಾತ್ಮಕ ಉದ್ದೇಶದಿಂದ ಏಕೀಕರಣಗೊಂಡು ಸಂಘಟಿತವಾಗುವ ಯಾವುದೇ ಧರ್ಮವು, ಅಧಿಕಾರಸ್ಥ ಶಕ್ತಿಯಾಗಿ ದುರ್ಬಲ ಧರ್ಮಗಳ ಮೇಲೆ ಆಕ್ರಮಣಕಾರಿಯಾಗಿ ಏರಿಹೋದಾಗ, ತನ್ನ ಹುಟ್ಟಿನ ಕಾಲದಲ್ಲಿ ಇರಿಸಿಕೊಂಡಿದ್ದ ಪಾಸಿಟಿವ್ ಶಕ್ತಿಯನ್ನು ಕಳೆದುಕೊಂಡು ಏಕರೂಪೀಕರಣವಾದಿಯೂ, ಸರ್ವಾಧಿಕಾರಿಯೂ ಆಗುತ್ತದೆ.

ಸಾಮಾನ್ಯವಾಗಿ ಧರ್ಮಗಳ ಸಾಂಸ್ಥೀಕರಣದ ಘಟ್ಟದಲ್ಲಿ ಹುಟ್ಟುವ ಮೂಲಭೂತವಾ ದಗಳು, ವಿಕೇಂದ್ರೀಕೃತ ಬಹುರೂಪಿ ಸಮಾಜವನ್ನು ಅಲ್ಲಗಳೆಯುತ್ತ ಹುಟ್ಟಿದ ಸರ್ವಾಧಿಕಾರಿ ಏಕರೂಪೀಕರಣಗಳು; ಪ್ರಾದೇಶಿಕತೆ ಮತ್ತು ಸ್ಥಳೀಯತೆಗಳು ಕೇಂದ್ರೀಕೃತ ರಾಷ್ಟ್ರೀಯತೆಯ ಹೇರಿಕೆಯನೊಲ್ಲದೆ ಹುಟ್ಟಿದ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣಗಳು. ವಿಶೇಷವೆಂದರೆ ಚರಿತ್ರೆಯಲ್ಲಿ ಇವು ತಮ್ಮ ಪಾತ್ರ ಬದಲಾವಣೆ ಮಾಡಿಕೊಳ್ಳುವುದು. ಕುವೆಂಪು ಅವರು ಸಂಸ್ಕೃತಿ, ಪರಂಪರೆ, ಧರ್ಮಗಳ ಹೆಸರಲ್ಲಿರುವ ಗೌರವಾನ್ವಿತವಾಗಿರುವ ಜಾತಿ, ಮತ, ವರ್ಣಗಳ ನೇತ್ಯಾತ್ಮಕ ವೈವಿಧ್ಯ ನಿರಾಕರಿಸಿದರು. ಬಹುತ್ವದ ನೆಲೆಯಲ್ಲಿ ಏಕೀಕರಣಗೊಳ್ಳುವ ವಿಶ್ವಮಾನವತೆ ಪ್ರತಿಪಾದಿಸಿದರು; ಜತೆಯಲ್ಲೇ ವಿಶ್ವಮಾನವತೆಯಲ್ಲಿ ಸ್ಥಳೀಯತೆಯ ವೈವಿಧ್ಯವನ್ನು ನಿರಾಕರಿಸಲಿಲ್ಲ. ಅದು ದ್ವೀಪವಾಗಬಾರದು ಎಂಬ ಎಚ್ಚರವನ್ನೂ ತೋರಿದರು. ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಹೇಳಿಕೆಯಲ್ಲಿ, ವಿಶ್ವಾತ್ಮಕ ಚಲನೆಯನ್ನು ನ್ಯಾಯಬದ್ಧಗೊಳಿಸುವ ಆಶಯವಿದೆ. ಈ ಚಲನೆಯು ಬೇರಿಲ್ಲದ ಅರಾಜಕತೆಯಾಗದಂತೆ ಸ್ಥಳೀಯತೆಗೆ ಬಿಗಿದು ಕಟ್ಟುವ ಸ್ವನಿಯಂತ್ರಣವೂ ಇದೆ; ವೈವಿಧ್ಯಕರ ಸ್ಥಳೀಯತೆಯಲ್ಲಿರುವ ಜಿಗುಟುತನದ ನಿರಾಕರಣೆಯೂ ಇದೆ, ಏಕರೂಪೀಕರಣದಂತೆ ತೋರುವ ಇತ್ಯಾತ್ಮಕ ಬಹುತ್ವವುಳ್ಳ ವಿಶ್ವಮಾನವತೆಯೂ ಇದೆ. ವಿಶ್ವಮಾನವತೆಯನ್ನು ಪ್ರತಿಪಾದಿಸಿದ ಸೂಫಿಗಳು ಸ್ಥಳೀಯತೆಯಲ್ಲಿ ಬೇರು ತಳೆದವರು; ಮನುಕುಲವನ್ನು ವಿಶ್ವಾತ್ಮಕ ಪ್ರೇಮದ ಕೇಂದ್ರದಲ್ಲಿ ಏಕೀಕರಿಸಿದವರು. ಬೌದ್ಧ, ಆರೂಢ, ಅವಧೂತ ಮೊದಲಾದ ಅನುಭಾವಿ-ಆಧ್ಯಾತ್ಮಿಕ ಪಂಥಗಳು ದರ್ಶನ ಮತ್ತು ಸಾಧನೆ ವಿಷಯದಲ್ಲಿ ಏಕೀಕರಣದ ಚಹರೆ ಹೊಂದಿವೆ. ಆದರೆ ತಮ್ಮ ಅಭಿವ್ಯಕ್ತಿಯನ್ನು ಮಾತ್ರ ಸ್ಥಳೀಯ ನುಡಿವೈವಿಧ್ಯದೊಳಗೆ ಮಾಡಿವೆ. ವೈವಿಧ್ಯಗಳನ್ನು ಎತ್ತಿಹಿಡಿಯುವಾಗ ಅವನ್ನು ಕೂಡಿಸುವ ಒಂದು ಕೇಂದ್ರವಿಲ್ಲದೆ ಹೋಗಬಹುದು. ಆಗ ವೈವಿಧ್ಯದಲ್ಲಿ ಸಮಾನಕೇಂದ್ರ ಹುಡುಕುವುದು ಅಗತ್ಯವಾಗುತ್ತದೆ. ಇದಕ್ಕೆ ನಾರಾಯಣ ಗುರು ಹಾಗೂ ಗಾಂಧಿಯವರು ಮರದ ಕೆಳಗೆ ಕೂತು ಮಾಡಿದ ಮಾತುಕತೆ ಚೆನ್ನಾಗಿ ಅನ್ವಯಿಸುತ್ತದೆ.

 

(ಹುಯಿಲಗೋಳ ನಾರಾಯಣರಾವ್)

 

ಗಾಂಧಿ: ನಮ್ಮ ತಲೆಯ ಮೇಲೆ ಚಪ್ಪರವಾಗಿರುವ ಈ ದೊಡ್ಡ ಮರದಲ್ಲಿ ಲಕ್ಷಾಂತರ ಎಲೆಗಳಿವೆ. ಇವುಗಳಲ್ಲಿ ಒಂದರ ಹಾಗೆ ಇನ್ನೊಂದು ಇಲ್ಲ.

ನಾರಾಯಣ ಗುರು: ಹೌದು. ಆದರೆ ಬಾಯಲ್ಲಿಟ್ಟು ಜಗಿದು ನೋಡಿದರೆ ಎಲ್ಲವುಗಳ ರುಚಿಯೂ ಒಂದೇ.

ಇಬ್ಬರ ಗಮನಿಕೆಗಳಲ್ಲೂ ಸತ್ಯವಿದೆ. ಆದರೆ ಯಾವ ಸತ್ಯವು ಬಹುತ್ವಕ್ಕೆ ಹೆಚ್ಚು ಸಮೀಪ ಎನ್ನುವುದನ್ನು ಪ್ರತಿಯೊಂದು ಚಾರಿತ್ರಿಕ ಸನ್ನಿವೇಶ ನಿರ್ಧರಿಸುತ್ತದೆ. ಜಾತಿ ವೈವಿಧ್ಯ ಒಪ್ಪಿಕೊಂಡಿದ್ದ ಗಾಂಧಿ ಅದನ್ನೊಂದು ಸಾಮಾಜಿಕ ವೈವಿಧ್ಯ ಮತ್ತು ವಿಶಿಷ್ಟತೆಯಾಗಿ ಪರಿಭಾವಿಸಬಲ್ಲರು. ಆದರೆ ಜಾತಿವಿನಾಶ ಬಯಸುತ್ತಿದ್ದ ನಾರಾಯಣಗುರು, ವೈವಿಧ್ಯದಲ್ಲಿ ಸಮಾನ ಅಂಶವನ್ನು ಹುಡುಕುತ್ತಿದ್ದಾರೆ.

ಕರ್ನಾಟಕದ ಬಹುತ್ವವನ್ನು ಹೆಚ್ಚು ಸಾಧಿಸಿದ ಕ್ಷೇತ್ರಗಳಲ್ಲಿ ಹಿಂದೂಸ್ತಾನಿ ಸಂಗೀತ ಬಿಟ್ಟರೆ, ಸಾಹಿತ್ಯವೇ. ಏಕೀಕರಣಕ್ಕೂ ಮುನ್ನವೇ ಕುವೆಂಪು ಧಾರವಾಡ ಸಾಹಿತ್ಯ ಸಮ್ಮೇಳನಕ್ಕೂ, ಬೇಂದ್ರೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನಕ್ಕೂ ಅಧ್ಯಕ್ಷರಾದರು; ಕರಾವಳಿಯ ಕಾರಂತರು ಹಲಸಂಗಿ ಗೆಳೆಯರ ಭೇಟಿಗೆ ಧಾವಿಸುತ್ತಿದ್ದರು. ಲೇಖಕರು ವಿಭಿನ್ನ ಪ್ರಾಂತಗಳಿಂದ ಬಂದವರಾಗಿದ್ದರೂ, ವಿಭಿನ್ನ ಭಾಷಿಕ ರೂಪಗಳನ್ನು ಬಳಸಿದರೂ, ತಮ್ಮ ಭಾಷಿಕ, ಸಾಮಾಜಿಕ, ಧಾರ್ಮಿಕ, ಪ್ರಾದೇಶಿಕ ಹಿನ್ನೆಲೆಗಳ ಎಲ್ಲೆ ದಾಟಿ ಕನ್ನಡ ಲೇಖಕರಾದರು. ಚಾರಿತ್ರಿಕ ಅಗತ್ಯವುಳ್ಳ ಎಲ್ಲ ಏಕೀಕರಣಗಳ ಹಿಂದೆ, ವೈರುಧ್ಯ ಮತ್ತು ವೈವಿಧ್ಯಗಳನ್ನು ತಾತ್ಕಾಲಿಕವಾಗಿ ಬದಿಗೆ ಸರಿಸುವ ಪ್ರವೃತ್ತಿ ಇರುತ್ತದೆ; ವೈವಿಧ್ಯ ಮತ್ತು ಬಹುತ್ವದ ಹೆಸರಲ್ಲಿ ಬಿಡಿತನವು ಒಡಕಿಗೆ ಕಾರಣವಾದೀತು ಎಂಬ ಅಳುಕಿರುತ್ತದೆ. ಇಂತಹ ಉಪಾದಿಗಳನ್ನು ಮೀರಿ ಶಂಬಾ, ಬೇಂದ್ರೆ, ಕುವೆಂಪು, ಕಾರಂತ, ತೇಜಸ್ವಿ, ಲಂಕೇಶ್ ಬಹುತ್ವಪ್ರಜ್ಞೆಯ ಸಾಹಿತ್ಯವನ್ನು ಸೃಷ್ಟಿಸಿದರು.

ಏಕೀಕರಣಗಳು ವೈವಿಧ್ಯವನ್ನು ಸಮಾನತೆಯ ಪ್ರಜ್ಞೆಯಲ್ಲಿ ಒಳಗೊಳ್ಳುವಾಗ ಮತ್ತು ಅವನ್ನು ಬಹುತ್ವದ ಕೇಂದ್ರಕ್ಕೆ ಜೋಡಿಸುವಾಗ, ವಿರುದ್ಧ ಪರಿಣಾಮ ಸಂಭವಿಸಬಹುದು. ಕರ್ನಾಟಕದಲ್ಲಿ ಚದುರಿದ ಅರಾಜಕ ವೈವಿಧ್ಯಗಳೆಲ್ಲ ಏಕೀಕರಣಗೊಂಡು ಒಂದು ನಾಡಾಗುವಾಗ, ಅದರೊಳಗಿರುವ ಕನ್ನಡೇತರ ಭಾಷೆಗಳನ್ನು ಸಮಾನವಾಗಿ ನಡೆಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ಆಗಲಿಲ್ಲ. ಹೀಗಾಗಿಯೇ ಸಂಸ್ಕೃತ, ಇಂಗ್ಲಿಷ್, ಹಿಂದಿಗಳ ವಿರುದ್ಧ ಹೋರಾಟ ಶುರುವಾದಾಗೆಲ್ಲ, ಅವು ಬಲವಿಲ್ಲದ ಅಲ್ಪಸಂಖ್ಯಾತ ತಮಿಳು, ತುಳು, ಕೊಡವ, ಉರ್ದುಗಳ ವಿರುದ್ಧ ತಿರುಗಿಕೊಳ್ಳುತ್ತವೆ. ಅವನ್ನು ಪ್ರಜಾಸತ್ತಾತ್ಮಕವಾಗಿ ನಡೆಸಿಕೊಳ್ಳುವ ಬಗ್ಗೆ ಕಾಳಜಿ ಕ್ಷೀಣಗೊಳ್ಳುತ್ತದೆ. ‘ನಮ್ಮ ನಾಡಿನ ಗಾಳಿ, ನೀರು, ಆಹಾರ ಕುಡಿದು ತಿಂದು ಇಲ್ಲಿನ ಭಾಷೆ ಕಲಿತಿಲ್ಲ’ ಎಂಬ ಸರಳೀಕೃತ ಆರೋಪ ಹೊರೆಸಲ್ಪಡುತ್ತದೆ. ಯಾವುದೇ ಏಕೀಕರಣಗೊಂಡ ಸಮಾಜ ಧರ್ಮ ಚಳವಳಿ ನಾಡುಗಳಲ್ಲಿ, ವೈವಿಧ್ಯಗಳನ್ನು ಸಮಾನತೆಯ ನೆಲೆಯಲ್ಲಿ ಒಳಗೊಳ್ಳುವ ವಿಶಾಲ ಮತ್ತು ಪ್ರಜಾಸತ್ತಾತ್ಮಕ ಬಾಹುಗಳಿಲ್ಲದೆ ಇದ್ದರೆ ಅವು ಅರೆಬರೆಯಾಗಿ ಉಳಿಯುತ್ತವೆ. ಈ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಉದಯವಾಗಲಿ ಎಂದೇ ಹಾಡಬೇಕು’ ಎಂಬ ಮಾತು ಮುಖ್ಯವಾದುದು. ಇದು ಪ್ರಕ್ರಿಯೆಯಲ್ಲಿ, ಚಲನೆಯಲ್ಲಿ ನಂಬಿಕೆ ಇಟ್ಟಿರುವ ದಾರ್ಶನಿಕ ಹೇಳಿಕೆ; ವೈವಿಧ್ಯ ಮತ್ತು ಬಹುತ್ವದ ವಿಷಯದಲ್ಲಿ ನಿತ್ಯ ನಡೆವ ಘಟನೆಗಳನ್ನು ಪರಿಶೀಲಿಸುತ್ತಲೇ ಇರಬೇಕಾದ ಎಚ್ಚರವನ್ನು ಸೂಚಿಸುವ ಚಲನಶೀಲತ್ವದ ಕಾರಣಿಕ ಕೂಡ.

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ರಹಮತ್ ತರೀಕೆರೆ

contributor

Similar News