ಕನ್ನಡದ ಜನಪ್ರಿಯ ಮಹಿಳಾ ಕಾದಂಬರಿಗಳು
ಭಾರತಿ ಹೆಗಡೆ ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ವಾಗ್ಮಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಎಲ್ಲೆಡೆ ಸುಪರಿಚಿತರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಕವನ ಬರೆಯುತ್ತಿದ್ದರು. ಸಾಹಿತ್ಯ, ಯಕ್ಷಗಾನ, ನಾಟಕ ಎಲ್ಲವೂ ಇವರ ಇಷ್ಟದ ವಿಷಯಗಳು. ಬೇರೆ ಬೇರೆ ಪತ್ರಿಕೆಗಳಲ್ಲಿ ಹದಿನೈದು ವರ್ಷಗಳ ಕಾಲ ಮಹಿಳಾ ಪುರವಣಿಗಳ ಉಸ್ತುವಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದರು. ಕೆಲವು ವರ್ಷ ಸೆಲ್ಕೋ ಫೌಂಡೇಶನ್ ಎಂಬ ಎನ್ಜಿಒ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕರಾಗಿ ಜವಾಬ್ದಾರಿ ನಿರ್ವಹಿಸಿದರು. ಎರಡು ಬಾರಿ ರಾಜ್ಯ ಸಿನೆಮಾ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿದ್ದರು. ಅವರೀಗ ಹವ್ಯಾಸಿ ಪತ್ರಕರ್ತೆ ಮತ್ತು ಟಿವಿ ಧಾರಾವಾಹಿಗಳಿಗೆ ಚಿತ್ರಕಥೆ ಸಂಭಾಷಣೆ ಬರೆಯುತ್ತಾರೆ. ಭಾರತಿ ಹೆಗಡೆ ಅವರಿಗೆ ೨೦೧೧ರಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಸಂದಿತು. ‘ಮಣ್ಣಿನ ಗೆಳತಿ’ ಕೃತಿಗೆ ಕೃಷಿ ವಿಶ್ವವಿದ್ಯಾಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ ಸಂದಿದೆ. ಇದಲ್ಲದೆ ಕೆಯುಡಬ್ಲ್ಯುಜೆ ಕೃಷಿ ಪ್ರಶಸ್ತಿ ಮತ್ತು ಸಿಡಿಎಲ್ ಸಂಸ್ಥೆಯ ಚರಕ ಪ್ರಶಸ್ತಿಗಳೂ ಸಂದಿವೆ.
ಅವಳು ಚೆಂದನೆಯ ಸೀರೆ ಉಟ್ಟು, ಕೈಗೆರಡು ಚಿನ್ನದ ಬಳೆಗಳು, ಉದ್ದನೆಯ ಜಡೆ, ತಲೆ ತುಂಬ ಮಲ್ಲಿಗೆ ಹೂವುಗಳು, ಹೂವು, ಹಣ್ಣುಗಳಿರುವ ಬುಟ್ಟಿಯನ್ನು ಹಿಡಿದು ಸೀರೆ ನಿರಿಗೆ ಚಿಮ್ಮುತ್ತ ರಾಯರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಮನೆಗೆ ಬಂದಳು. ಬಂದವಳೇ ಅಪ್ಪ ಅಮ್ಮನ ಕಾಲಿಗೆರಗಿ ಅವರಿಗೂ ಪ್ರಸಾದ ಕೊಟ್ಟು ನಂತರ ತನ್ನ ದೈನಂದಿನ ಚಟುವಟಿಕೆಗಳಲ್ಲಿ ನಿರತಳಾಗುತ್ತಾಳೆ. ಅವಳ ಈ ಸದ್ ನಡವಳಿಕೆಗೆ ಅವನು ಮಾರುಹೋಗುತ್ತಾನೆ.
ಸಣ್ಣಗೆ ನಡುಗುವ ತುಟಿಗಳು, ಉದ್ದನೆಯ ಜಡೆಯ ಸುಂದರಿ ನಾಯಕಿ ತಲೆ ತಗ್ಗಿಸಿ ಕಾಲೇಜಿಗೆ ಹೋಗುವವಳು, ಶ್ರೀಮಂತ ಮನೆತನದ ಸುಂದರ ತರುಣ ಅವಳನ್ನು ನೋಡಿ ಮರುಳಾಗಿ ಅವಳನ್ನೇ ಮದುವೆಯಾಗುವನು.
ಇಂಥ ರೋಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತ ಬೆಳೆದವರು ನಾವು.
ಅದು ನನ್ನ ಹೈಸ್ಕೂಲಿನ ದಿನಗಳು. ನನ್ನೂರಿನಲ್ಲಿ ಸರ್ಕ್ಯುಲೇಟಿಂಗ್ ಲೈಬ್ರರಿಯಲ್ಲಿ ಸಿಗುವ ಬಹುತೇಕ ಮಹಿಳಾ ಕಾದಂಬರಿಗಳನ್ನು ಹುಚ್ಚೆದ್ದು ಓದುತ್ತಿದ್ದ ಕಾಲವದು. ಹೈಸ್ಕೂಲಿನಲ್ಲಿ ಹಿಂದಿನ ಬೆಂಚಿನಲ್ಲಿ ಕೂತು ಕಾಲಮೇಲೆ ಶಾಲೆಯ ಪಠ್ಯ ಪುಸ್ತಕ ಇಟ್ಟುಕೊಂಡು ಅದರ ಮೇಲೆ ಕಾದಂಬರಿ ಇಟ್ಟುಕೊಂಡು ಮೇಷ್ಟ್ರ ಕಣ್ಣುತಪ್ಪಿಸಿ ಕಾದಂಬರಿಗಳನ್ನು ಓದುತ್ತಿದ್ದ ಆ ಸುಖವೇ ಬೇರೆ. ಅದೆಷ್ಟು ನಮ್ಮನ್ನು ಸೆಳೆದಿತ್ತೆಂದರೆ, ನಾವು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕೆಂಬ ರಮ್ಯ ಕಲ್ಪನೆಯನ್ನು ಈ ಕಾದಂಬರಿಗಳು ನಮ್ಮಲ್ಲಿ ಬಿತ್ತಿದ್ದವು. ಜೊತೆಗೆ ಹೆಣ್ಣೊಬ್ಬಳು ಹೀಗೆಯೇ ಇರಬೇಕೆಂಬ ಒಂದು ಚೌಕಟ್ಟನ್ನೂ ಅವು ಹಾಕಿಕೊಟ್ಟಿದ್ದವು.
ಬಹುತೇಕ ಇಂಥ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು ನಮ್ಮ ಕನಸಿನ ರಾಣಿಯರಾಗಿದ್ದರು. ಅಥವಾ ನಾವೇ ಅವರಾಗಿದ್ದೆವು ಎಂದರೂ ತಪ್ಪಿಲ್ಲ.
ಅದು ಮಲೆನಾಡಿನ ಮೂಲೆಯಲ್ಲಿರುವ ಹಳ್ಳಿಯಂಥಾ ಒಂದು ಚಿಕ್ಕ ಪಟ್ಟಣ, ಅಡಕೆ ಬೆಳೆಗಾರರೇ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ಕೆಲವು ಕೊಂಕಣಿಗರೂ ಇದ್ದರು. ಲಿಂಗಾಯತ ಸಮುದಾಯ, ಮುಸ್ಲಿಮ್ ಸಮುದಾಯವಿದ್ದರೂ ಬಹುಸಂಖ್ಯಾತರು ಅಲ್ಲಿ ಹವ್ಯಕ ಬ್ರಾಹ್ಮಣರು. ಸಹಜವಾಗಿಯೇ ಆಗೆಲ್ಲ ಮದುವೆ ಮುಂಜಿ ಎಂದು ಕೃಷಿಕ ಕುಟುಂಬಗಳಲ್ಲಿ ನಡೆಯುತ್ತಿದ್ದ ರೀತಿ ನೀತಿಗಳನ್ನೇ ಅನುಸರಿಸಲಾಗುತ್ತಿತ್ತು. ಅದನ್ನೆಲ್ಲ ನೋಡುತ್ತಿದ್ದ ನಮಗೆ, ಬೆಂಗಳೂರು, ಮೈಸೂರು, ತುಮಕೂರುಗಳ ಬದುಕಿನ ಸಂಸ್ಕೃತಿಯನ್ನು ಕಲಿಸಿಕೊಟ್ಟಿದ್ದು ಒಂದು ಅಂದಿನ ಸಿನೆಮಾಗಳಾಗಿದ್ದರೆ, ಇನ್ನೊಂದು ಇಂಥ ಕಾದಂಬರಿಗಳು.
ಅದು ಎಂಭತ್ತರ ದಶಕ. ಆಗ ಮನರಂಜನೆಗೆ ಇದ್ದ ಏಕೈಕ ಮಾರ್ಗವೆಂದರೆ ಈ ಜನಪ್ರಿಯ ಕಾದಂಬರಿಗಳು ಮತ್ತು ಸಿನೆಮಾಗಳು. ಸಿನೆಮಾಗಳನ್ನು ನೋಡಲು ಅಷ್ಟಾಗಿ ಬಿಡುತ್ತಿದ್ದ ಕಾಲ ಅದಾಗಿರಲಿಲ್ಲ. ಹಾಗಾಗಿ ನಾವೆಲ್ಲ ಮೊರೆ ಹೋಗುತ್ತಿದ್ದುದು ಈ ಕಾದಂಬರಿಗಳಿಗೇ.
ಕಾದಂಬರಿಗಳನ್ನು ಓದಿದರೆ ವಿದ್ಯಾರ್ಥಿಗಳು ಹಾಳಾಗುತ್ತಾರೆ ಎಂಬ ನಂಬಿಕೆ ದಟ್ಟವಾಗಿದ್ದ ಆ ಕಾಲದಲ್ಲಿ, ದಿವಸಕ್ಕೆ ಎರಡು ಮೂರು ಕಾದಂಬರಿಗಳನ್ನು ಓದಿದ ದಾಖಲೆಗಳೂ ಇದ್ದವು. ಪ್ರತಿದಿವಸ ಬೆಳಗ್ಗೆ ೧೦ ಗಂಟೆಗೆ ನಮ್ಮ ಹೈಸ್ಕೂಲು ಪ್ರಾರಂಭವಾಗುತ್ತಿತ್ತು. ೧೧:೩೦ಗೆ ಲೀಸರ್ ಪೀರಿಯಡ್ ಇರುತ್ತಿತ್ತು. ಆಗ ಒಂದಷ್ಟು ಗೆಳತಿಯರು ಮೊದಲೇ ಮಾತನಾಡಿಕೊಂಡು ಮೇಷ್ಟ್ರುಗಳಿಗೆ ಗೊತ್ತಾಗದಂತೆ ಹಿಂದಿನ ಬಾಗಿಲಿನಿಂದ ಒಬ್ಬೊಬ್ಬರಾಗೇ ಸರ್ಕ್ಯುಲೇಟಿಂಗ್ ಲೈಬ್ರರಿಗೆ ಬಂದು ಕಾದಂಬರಿಯನ್ನು ತೆಗೆದುಕೊಂಡು ಲಂಗದಲ್ಲಿ ಮುಚ್ಚಿಟ್ಟುಕೊಂಡು ಹೈಸ್ಕೂಲಿಗೆ ಹೋಗಿ ಹಿಂದಿನ ಬೆಂಚಿನಲ್ಲಿ ಕೂತು ಓದುತ್ತಿದ್ದೆವು. ಅನೇಕ ಮಡಿವಂತ ಹುಡುಗಿಯರು ಮುಂದಿನ ಬೆಂಚೇ ಬೇಕೆಂದು ಹಾತೊರೆದು ಕೂರುತ್ತಿದ್ದರೆ ನಮಗೆಲ್ಲ ಹಿಂದಿನ ಬೆಂಚೆಂದರೆ ಇಷ್ಟ್ಟವಾಗುತ್ತಿದ್ದದ್ದು ಇದೇ ಕಾರಣಕ್ಕೆ. ಈ ಕಾದಂಬರಿಗಳ ಪೈಕಿ ಸಾಯಿಸುತೆ ಅವರದ್ದೇ ಸಿಂಹಪಾಲು. ಅದು ಬಿಟ್ಟರೆ ಉಷಾ ನವರತ್ನರಾಂ, ಎಚ್.ಜಿ. ರಾಧಾದೇವಿ, ವಿಶಾಲಾಕ್ಷಿ ದಕ್ಷಿಣಾ ಮೂರ್ತಿ, ವಾಣಿ ಮುಂತಾದವರ ಕಾದಂಬರಿಗಳಿದ್ದರೂ ಹೆಚ್ಚಿನ ಮಹಿಳಾ ಓದುಗರನ್ನು ಸೆಳೆದದ್ದು ಮಾತ್ರ ಸಾಯಿಸುತೆ ಅವರ ಕಾದಂಬರಿಗಳು.
ಹದಿಹರೆಯದ ಹೊಸ್ತಿಲಲ್ಲಿದ್ದ ನಮಗೆ ನಮ್ಮ ಮುಂದಿನ ಬದುಕು ಹೀಗೆಯೇ ಇರುತ್ತದೆಂದು ಒಂದು ರಮ್ಯ ಚೌಕಟ್ಟನ್ನು ಒದಗಿಸಿಕೊಟ್ಟಂಥ ಕಾದಂಬರಿಗಳಿವು. ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲಿ ಬಿತ್ತಿದ್ದ ಆ ಕನಸು ಎಂಥದ್ದಾಗಿತ್ತೆಂದರೆ, ಅಲ್ಲಿ ನಾವೆಲ್ಲರೂ ಸೌಂದರ್ಯವತಿಯರು. ಉದ್ದನೆಯ ಜಡೆ, ನೀಳಮುಖ ಅಥವಾ ಗುಂಡಗಿನ ಮುಖ, ಬೆಳ್ಳಗಿನ ಚರ್ಮ ಹೊತ್ತ ಸೌಂದರ್ಯವತಿಯರು ಮತ್ತು ಮಧ್ಯಮ ವರ್ಗದ ನಮ್ಮನ್ನೆಲ್ಲ ಯಾರಾದರೂ ಶ್ರೀಮಂತ ಹುಡುಗ ಬಂದು ಮದುವೆಮಾಡಿಕೊಂಡು ಹೋಗುತ್ತಾನೆ. ನಾವಲ್ಲಿ ರಾಣಿಯರ ಹಾಗೆ ಇರುತ್ತೇವೆ ಎನ್ನುವ ಕನಸು.
ಸಾಯಿಸುತೆಯವರ ಬಾಡದ ಹೂ ಭಾಗ 1 ಮತ್ತು ಭಾಗ 2, ಆರಾಧಿತೆ, ಗಂಧರ್ವಗಿರಿ, ಇಬ್ಬನಿ ಕರಗಿತು, ಬಾಡದ ಹೂ, ಬಾನು ಮಿನುಗಿತು, ಮತ್ತೊಂದು ಬಾಡದ ಹೂ, ಮಿಡಿದ ಶ್ರುತಿ, ನಾಟ್ಯಸುಧಾ, ಕಲ್ಯಾಣ ರೇಖೆ, ಕೋಗಿಲೆ ಹಾಡಿತು ಮುಂತಾದ ಕಾದಂಬರಿಗಳನ್ನು ನಾವು ಗೆಳತಿಯರು ಅದೆಷ್ಟು ಸಲ ಓದಿದ್ದೇವೋ ಗೊತ್ತಿಲ್ಲ. ಬಾಡದ ಹೂ, ಇಬ್ಬನಿ ಕರಗಿತು ಕಾದಂಬರಿಗಳು ಸಿನೆಮಾ ಆಗಿ ಬಂದಾಗ ಹುಚ್ಚೆದ್ದು ಹೋಗಿ ನೋಡಿಬಂದಿದ್ದೆವು.
ವಧು ಪರೀಕ್ಷೆಯಲ್ಲಂತೂ ಈ ಕಾದಂಬರಿಗಳ ನಾಯಕಿಯರು ಸೀರೆ ಉಟ್ಟು, ಮಲ್ಲಿಗೆ ಹೂವು ಮುಡಿದು, ನಡುಗುವ ಕೈಗಳಿಂದ ಹುಡುಗನಿಗೆ ಕಾಫಿ ಕೊಡುತ್ತಿದ್ದದ್ದನ್ನು ಓದಿ ನಾವೂ ಹಾಗೆಯೇ ಇರಬೇಕು, ಎಂದು ಎಷ್ಟು ಸಲ ಕನಸು ಕಾಣುತ್ತಿದ್ದೆವೋ...
ಮನೆಯಲ್ಲೆಲ್ಲ ಅಷ್ಟರಾಗಲೇ ಶಿವರಾಮ ಕಾರಂತ, ಬೈರಪ್ಪ, ಅನಕೃ ಮುಂತಾದವರ ಕಾದಂಬರಿಗಳನ್ನು ಓದಿ ಅರಗಿಸಿಕೊಂಡು ನನ್ನ ಬಳಿ ‘ಅದರಲ್ಲೆಲ್ಲ ಏನಿದೆ ಅಂತ ಓದುತ್ತೀರೆ ನೀವು’ ಎಂದು ಕೇಳಿದರೆ, ‘ಒಮ್ಮೆ ನೀವೂ ಓದಿ ನೋಡಿ ಎಷ್ಟು ಚೆನ್ನಾಗಿರುತ್ತದೆ ಎಂದು ನಿಮಗೇ ತಿಳಿಯುತ್ತದೆ’ ಎಂದು ಅವರಿಗೇ ಈ ಕಾದಂಬರಿಗಳನ್ನು ಓದಲು ಹಚ್ಚುತ್ತಿದ್ದೆವು. ಹಗಲೂ ರಾತ್ರಿಗಳ ವ್ಯತ್ಯಾಸವೇ ಇಲ್ಲದಂತೆ ಕೂತು ಓದುತ್ತಿದ್ದೆವು. ಅವಳೇನಾಗುತ್ತಾಳೆ, ಅವನನ್ನೇ ಮದುವೆಯಾಗುತ್ತಾಳಾ ಅಥವಾ ಅವನು ಬೇರೆಯಾರನ್ನಾದರೂ ಮದುವೆಯಾಗಿಬಿಡುತ್ತಾನಾ ಎಂಬುದೇ ನಮಗೆ ಬಹುದೊಡ್ಡ ಪ್ರಶ್ನೆಯಾಗಿ, ಆ ಕುತೂಹಲಕ್ಕೆ ರಾತ್ರಿಯಿಡೀ ಕೂತು ಓದಿದ್ದೂ ಇದೆ.
ಸಾಯಿಸುತೆ ಅವರ ಕಾದಂಬರಿಗಳು ನಮ್ಮ ಮೇಲೆ ಬೀರಿದಷ್ಟೇ ಪ್ರಭಾವ ಉಷಾ ನವರತ್ನರಾಂ ಅವರ ಕಾದಂಬರಿಗಳೂ ಬೀರಿದ್ದವು. ಸಾಯಿಸುತೆ ಅವರ ಕಾದಂಬರಿಗಳಲ್ಲಿ ಅಪ್ಪಟ ಭಾರತೀಯ ನಾರಿಯರ ಲಕ್ಷಣ ಹೊಂದಿದ ರೋಮ್ಯಾಂಟಿಕ್ ಹೀರೋಯಿನ್ಗಳು ಸಿಕ್ಕರೆ, ಉಷಾ ನವರತ್ನರಾಂ ಅವರ ಕಾದಂಬರಿಗಳ ನಾಯಕಿಯರಲ್ಲಿ ಸ್ವಲ್ಪ ಮಟ್ಟಿಗೆ ಫೆಮಿನಿಸಂನ ಛಾಯೆಗಳಿರುತ್ತಿದ್ದವು.
ನನಗೆ ನೆನಪಿರುವ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಆಗ ನಾನು ಎಂಟನೇ ಕ್ಲಾಸಲ್ಲಿ ಓದುತ್ತಿದ್ದೆ. ವಾರಪತ್ರಿಕೆಯೊಂದರಲ್ಲಿ ‘ಕೈ ಹಿಡಿದು ನಡೆಸೆನ್ನನು’ ಎಂಬ ಕಾದಂಬರಿ ಧಾರಾವಾಹಿಯಾಗಿ ಬರುತ್ತಿತ್ತು. ಅದರಲ್ಲಿನ ನಾಯಕಿಗೆ ಮದುವೆಯಾಗಿ ಸಂಸಾರ ಶುರುಮಾಡಿ ಕೆಲವೇ ತಿಂಗಳಲ್ಲಿ ಗಂಡ ತೀರಿಹೋಗುತ್ತಾನೆ. ಎಲ್ಲರೂ ಅವಳಿಗೆ ‘ಕುಂಕುಮ ಅಳಿಸು, ಬಳೆ ಹಾಕಬೇಡ, ಹೂ ಮುಡಿಯಬೇಡ’ ಎಂಬೆಲ್ಲ ಕಟ್ಟುಪಾಡುಗಳನ್ನು ವಿಧಿಸಲು ಬಂದಾಗ ನಾಯಕಿ ಅದರ ವಿರುದ್ಧ ಸಿಡಿದೇಳುತ್ತಾಳೆ. ‘ಹುಟ್ಟಿನಿಂದ ಬಂದ ಈ ಕುಂಕುಮ, ಅರಿಶಿನವನ್ನು ನಾನು ಖಂಡಿತ ಅಳಿಸುವುದಿಲ್ಲ. ಹೂ ಮದುವೆಗೆ ಮೊದಲೂ ಮುಡಿಯುತ್ತಿದ್ದೆ, ಮದುವೆಯಾದಮೇಲೆ ಇವ್ಯಾವುದೂ ನನ್ನೊಂದಿಗೆ ಬಂದದ್ದಲ್ಲ. ಮೊದಲೇ ಬಂದದ್ದು. ಯಾಕೆ ನಾನು ಇವೆಲ್ಲವುಗಳಿಗೆ ನಿಷೇಧಿತಳಾಗಿ ಬದುಕಬೇಕು. ಇಷ್ಟಕ್ಕೂ ಹೆಂಡತಿ ತೀರಿಹೋದರೆ ಅಂಥ ಗಂಡಸಿಗೆ ನೀವು ಯಾವ ನಿಷೇಧವನ್ನು ಹೇರುತ್ತೀರಿ. ಅವನು ಬೇಕಿದ್ದರೆ ಬೇರೊಂದು ಮದುವೆಯೂ ಆಗಬಹುದು. ಹೆಣ್ಣಿಗೆ ಮಾತ್ರ ಯಾಕೆ ಇಂಥ
ನಿಷೇಧಗಳು’ ಎಂದು ಪ್ರಶ್ನಿಸುತ್ತಾಳೆ. ಅವಳ ವಾದ ನಮ್ಮಂಥ ಅದೆಷ್ಟು ಹುಡುಗಿಯರ ಮೇಲೆ ಗಾಢವಾದ ಪ್ರಭಾವ ಬೀರಿತ್ತೆಂದರೆ ಆ ಕಾದಂಬರಿ ಓದಿ ಮುಗಿಸಿದ ಮೇಲೆ ನಾವು ಒಂದಷ್ಟು ಗೆಳತಿಯರೆಲ್ಲ ಸೇರಿಕೊಂಡು, ಮದುವೆಯಾದ ಮೇಲೆ ನಮಗೇನಾದರೂ ಇಂಥ ಪರಿಸ್ಥಿತಿ ಒದಗಿಬಂದರೆ ಯಾವ ಕಾರಣಕ್ಕೂ ಹೂವು, ಕುಂಕುಮ, ಬಳೆ ಯಾವುದನ್ನೂ ಬಿಡಬಾರದು. ಎಲ್ಲವನ್ನೂ ಧರಿಸಬೇಕೆಂದು ಅವತ್ತೇ ಶಪಥಗೈದಿದ್ದೆವು,
ಅಷ್ಟರ ನಂತರ ಅವರ ಬಂಧನ ಕಾದಂಬರಿ, ಹೊಂಬಿಸಿಲು ಕಾದಂಬರಿಗಳೆಲ್ಲವೂ ಎಷ್ಟು ಇಷ್ಟವಾಗಿತ್ತೆಂದರೆ ನಾವೂ ಡಾಕ್ಟರುಗಳಾಗಬೇಕೆಂಬ ಬಯಕೆ ನಮ್ಮೊಳಗೆ ಮೂಡಿರುತ್ತಿತ್ತು. ಹಾಗೆಯೇ ಯಾರಾದರೂ ಒಬ್ಬ ಡಾಕ್ಟರ್ ಅನ್ನೇ ಲವ್ ಮಾಡಿ ಮದುವೆಯಾಗಬೇಕೆಂಬ ಕನಸೂ ನಮ್ಮೊಳಗೆ ಸದ್ದಿಲ್ಲದೆ ಬಿತ್ತಿದ್ದವು ಈ ಕಾದಂಬರಿಗಳು.
ಅಂಥ ಒಂದು ಘಟನೆ ಕೂಡ ನಮ್ಮ ನಡುವೆ ನಡೆದು ಹೋಯಿತು.
ನಾವೆಲ್ಲ ಹೈಸ್ಕೂಲು ಮುಗಿಸಿ ಕಾಲೇಜಿಗೆ ಹೋಗುವಾಗ ಬಹುತೇಕರು ಕಲಾ ವಿಭಾಗಕ್ಕೆ ಹೋದರೆ ಒಂದಿಬ್ಬರು ವಿಜ್ಞಾನ ವಿಭಾಗಕ್ಕೂ ಹೋದವರಿದ್ದರು. ಆ ಪೈಕಿ ಒಬ್ಬ ಹುಡುಗಿ, ನೋಡಲು ಸುರಸುಂದರಿ. ಅವಳ ಕನಸು ತಾನೂ ಡಾಕ್ಟರಾಗಬೇಕೆಂಬುದು. ಆ ಕನಸು ಅವಳ ಅಪ್ಪನದ್ದೂ ಆಗಿತ್ತು. ಅವನೂ ತನ್ನ ಮಗಳು ಮೆಡಿಕಲ್ ಓದುತ್ತಾಳೆ, ನಂತರ ಡಾಕ್ಟರಾಗುತ್ತಾಳೆ. ಆಮೇಲೆ ಯಾರಾದರೂ ಡಾಕ್ಟರನ್ನೇ ಲವ್ ಮಾಡಿ ಮದುವೆಯೂ ಆಗುತ್ತಾಳೆಂದು ಎಲ್ಲಕಡೆ ಹೇಳಿಕೊಂಡು ತಿರುಗುತ್ತಿದ್ದ. ಇವಳ ಮೇಲೆ ಈ ಕಾದಂಬರಿಗಳು ನಮಗಿಂತಲೂ ಹೆಚ್ಚಿಗೆ ಪ್ರಭಾವ ಬೀರಿದೆ ಎಂದು ತಮಾಷೆ ಮಾಡಿದ್ದೆವು. ಆದರೆ ಅವಳು ಪಿಯುಸಿಯಲ್ಲೇ ಫೇಲಾಗಿ, ಮೆಡಿಕಲ್ಗೆ ಹೋಗಲಾಗಲಿಲ್ಲ. ಅಂದರೆ ವಾಸ್ತವಿಕ ಪ್ರಜ್ಞೆಯನ್ನೂ ಲೆಕ್ಕಿಸದೇ ನಾವೇನು, ನಮ್ಮ ಮಿತಿಯೇನು ಎಂಬುದನ್ನು ಅರಿಯದೇ ನಾವು ಕನಸು ಕಾಣುತ್ತಿದ್ದೆವು.
ಅಷ್ಟರಲ್ಲಾಗಲೇ ತ್ರಿವೇಣಿ, ಎಂ.ಕೆ.ಇಂದಿರಾ, ಅನುಪಮಾ ನಿರಂಜನ ಮುಂತಾದವರೆಲ್ಲ ಹೆಸರು ಮಾಡಿದ್ದರೂ ಆ ಹದಿಹರೆಯದ ವಯಸ್ಸಿನಲ್ಲಿ ನಮನ್ನು ಅತಿಯಾಗಿ ಸೆಳೆದದ್ದು ಮಾತ್ರ ಸಾಯಿಸುತೆ, ಉಷಾನವರತ್ನರಾಂ ಮತ್ತು ವಾಣಿಯವರ ಕಾದಂಬರಿಗಳು.
ವಾಣಿಯವರ ಕಾದಂಬರಿಗಳಲ್ಲಿ ಮೈಸೂರಿನ ಘಮ, ಅಲ್ಲಿನ ಸಾಂಸ್ಕೃತಿಕ ಚಿತ್ರಣವಿದ್ದರೆ ಸಾಯಿಸುತೆ ಅವರ ಕಾದಂಬರಿಗಳಲ್ಲಿ ತುಮಕೂರು, ಮೈಸೂರಿನ ಸಂಸ್ಕೃತಿಗಳು ಮೇಳೈಸುತ್ತಿತ್ತು. ಇವತ್ತಿಗೂ ನನಗೆ ತುಮಕೂರು, ಮೈಸೂರುಗಳೆಂದರೆ ಸಾಯಿಸುತೆ, ವಾಣಿಯವರ ಕಾದಂಬರಿಗಳ ನಾಯಕಿಯರು ನೆನಪಾಗುತ್ತಾರೆ. ಯಾರಾದರೂ ತುಮಕೂರು, ಮೈಸೂರಿನ ವಯಸ್ಸಾದ ಮಹಿಳೆಯರು ಕಂಡರೆ ಇವರು ಪ್ರಾಯಗಾಲದಲ್ಲಿ ಆ ಇಬ್ಬರ ಕಾದಂಬರಿಗಳಲ್ಲಿ ಬರುವ ನಾಯಕಿಯರಂತೆಯೇ ಸಂಗೀತ ಕಲಿಯಲು ಹೋಗುತ್ತಿದ್ದರಾ..? ಮಧ್ಯಮವರ್ಗದ ಮನೆಗಳಲ್ಲಿ ಮಾಡುತ್ತಿದ್ದ ಚಕ್ಕುಲಿ, ಕೋಡುಬಳೆಗಳನ್ನು ಇವರೂ ಹೊಸೆದಿದ್ದರಾ...? ಅದೇ ರೀತಿ ತಲೆ ತುಂಬ ಮಲ್ಲಿಗೆ ಹೂವು ಮುಡಿದು ಗಂಡನ ಮುಂದೆ ತಲೆ ತಗ್ಗಿಸಿ ನಿಲ್ಲುತ್ತಿದ್ದರಾ ಎಂಬೆಲ್ಲ ಬೆಚ್ಚನೆಯ ಭಾವ ಮೂಡುತ್ತದೆ.
ಆ ನಂತರ ಬಂದ ವಿಶಾಲಾಕ್ಷಿ ದಕ್ಷಿಣಾ ಮೂರ್ತಿ ಅವರ ಕಾದಂಬರಿಗಳು, ಎಚ್. ಜಿ.ರಾಧಾದೇವಿ ಅವರ ಅನುರಾಗ ಅರಳಿತು, ಸುವರ್ಣ ಸೇತುವೆ, ದುಂಬಿ ಮುಟ್ಟದ ಹೂವು, ಒಲಿದು ಬಂದ ಅಪ್ಸರೆ, ಗೆಲುವಿನ ಹಾದಿ ಮುಂತಾದ ಕಾದಂಬರಿಗಳು ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾದಂಬರಿಗಳಾಗಿದ್ದರೂ ಒಂದು ಚೌಕಟ್ಟಿನೊಳಗಿದ್ದುಕೊಂಡೇ ದಿಟ್ಟತನದ ನಡವಳಿಕೆಯ ನಾಯಕಿಯರನ್ನು ಚಿತ್ರಿಸಿದ್ದವು.
ತ್ರಿವೇಣಿಯವರ ಸೋತುಗೆದ್ದವಳು, ಹೂವುಹಣ್ಣು, ಶರಪಂಜರ ಮುಂತಾದ ಕಾದಂಬರಿಗಳು, ಡಾ. ಅನುಪಮಾ ನಿರಂಜನ ಅವರ ಮಾಧವಿ, ದಿಟ್ಟೆ, ಹಿಮದ ಹೂವು, ಮುಕ್ತಿ ಚಿತ್ರ, ಎಳೆ, ಋಣಮುಕ್ತಳು ಮುಂತಾದ ಕಾದಂಬರಿಗಳು ನಮ್ಮನ್ನು ಬೇರೆಯದೇ ರೀತಿಯಲ್ಲಿ ತಟ್ಟಿದ್ದವು. ಕನ್ನಡದ ಬಹು ಪ್ರಮುಖ ಕಾದಂಬರಿಗಾರ್ತಿ ಎಂ.ಕೆ. ಇಂದಿರಾ ಅವರ ಗೆಜ್ಜೆಪೂಜೆ, ಫಣಿಯಮ್ಮ, ಪೂರ್ವಾಪರ, ತುಂಗಭದ್ರ ಮುಂತಾದ ಕಾದಂಬರಿಗಳು ಸಾಮಾಜಿಕ ಪಿಡುಗುಗಳ ಕುರಿತು ಎಚ್ಚರಿಸುವಂಥದ್ದಾಗಿದ್ದವು.
ವಿಮರ್ಶೆಯ ದೃಷ್ಟಿಯಿಂದ ನೋಡಿದಾಗ ಗಂಭೀರ ಸಾಹಿತ್ಯವನ್ನು ಪರಿಗಣಿಸುವಾಗ ಇಲ್ಲಿನ ಬಹುತೇಕ ಕಾದಂಬರಿಗಳನ್ನು ಪರಿಗಣಿಸುವುದಿಲ್ಲ. ನಿಜ, ಕನ್ನಡ ಕಾದಂಬರಿಗಳಲ್ಲಿ ಜನಪ್ರಿಯ ಎಂಬ ಭಿನ್ನತೆಯಿಂದ ಕೆಲವು ಕಾದಂಬರಿಗಳನ್ನು ನಿರ್ಲಕ್ಷಿಸಲಾಗಿದೆ. ಶಾಂತಾಬಾಯಿ ನೀಲಗಾರ ಅವರನ್ನು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರ್ತಿ ಎಂದು ಗುರುತಿಸಲಾಗುತ್ತದೆ. ೧೯೦೮ರಲ್ಲಿ ಸದ್ಗುಣಿ ಕೃಷ್ಣಾಬಾಯಿ ಎನ್ನುವ ಏಕೈಕ ಕಾದಂಬರಿಯನ್ನು ರಚಿಸಿದ್ದಾರೆ. ತಿರುಮಲಾಂಬಾ ಅವರ ಸುಶೀಲೆ ೧೯೧೩ರಲ್ಲಿ ಪ್ರಕಟವಾಯಿತು. ಆಗಿನ ಕಾಲದಲ್ಲಿ ತಾವು ಬದುಕುತ್ತಿರುವ ರೀತಿ ಸಮಾಜದ ನೀತಿ ಹೆಣ್ಣುಮಕ್ಕಳಿಗೆ ಇದ್ದ ಸೂಕ್ಷ್ಮವಾದ ಸಂವೇದನೆಗಳು ಆಕೆಯ ಆಸೆಯ ಆಕಾಂಕ್ಷೆಗಳು, ತಲ್ಲಣಗಳು, ಪ್ರೀತಿ ಪ್ರೇಮ, ಕರುಣೆ ಮುಂತಾದವುಗಳೇ ಇವರ ವಿಷಯಗಳಾಗಿದ್ದವು. ಕೆಲವೊಮ್ಮೆ ಸಮಾಜವನ್ನು ಬಡಿದೆಚ್ಚರಿಸುವ ಸಾಹಿತ್ಯ ಕೂಡ ಮಹಿಳೆಯರಿಂದ ಸೃಷ್ಟಿಯಾಯಿತು. ಹೀಗಿದ್ದೂ ಇವೆಲ್ಲ ಅವಗಣನೆಗೆ ತುತ್ತಾಗಿದ್ದವು ಎಂಬುದನ್ನು ಮರೆಯುವಂತಿಲ್ಲ.
ಸಾಮಾಜಿಕ ವಾತಾವರಣ ಬದಲಾಗುತ್ತ ಹೋದಂತೆ ತಮ್ಮ ಬರಹದ ಧಾಟಿ, ಧೋರಣೆಗಳನ್ನೂ ಲೇಖಕಿಯರು ಬದಲಾಯಿಸಿಕೊಂಡದ್ದನ್ನು ನಾವು ಕಾಣಬಹುದು. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅನೇಕ ಮಹಿಳೆಯರು ಭಾಗವಹಿಸಿದರು. ಅದುವರೆಗೆ ಅಡುಗೆಮನೆಯ ಸಾಹಿತ್ಯ ಎಂದು ಮೂದಲಿಕೆಗೆ ತುತ್ತಾದ ಮಹಿಳಾ ಸಾಹಿತ್ಯ ಮುಂದಿನ ದಿನಗಳಲ್ಲಿ ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸುತ್ತ ಹೋಗುವುದನ್ನೂ ನಾವು ಕಾಣಬಹುದು. ನಂತರದ ಪೀಳಿಗೆಯವರಾದ ಶಾಮಲಾದೇವಿ, ಕೊಡಗಿನ ಗೌರಮ್ಮ, ಶಾಮಲಾದೇವಿ ಬೆಳಗಾಂವ್ಕರ್ ಮುಂತಾದವರು ಸಾಮಾಜಿಕ ಸಮಸ್ಯೆಗಳಿಗೆ ಕಲಾತ್ಮಕ ರೂಪ ಕೊಟ್ಟು ಬರೆಯತೊಡಗಿದ್ದು ವಿಶೇಷ. ಮುಂದೆ ಮಹಿಳಾ ಸಾಹಿತ್ಯ ವಿಸ್ತಾರವನ್ನು ಪಡೆದುಕೊಂಡು, ಅನೇಕ ಕವಯಿತ್ರಿಯರು, ಕಥೆಗಾರ್ತಿಯರು, ಕಾದಂಬರಿಗಾರ್ತಿಯರು ಹುಟ್ಟಿಕೊಂಡರು. ಅದರಲ್ಲೂ ಜನಪ್ರಿಯ ಕಾದಂಬರಿಗಾರ್ತಿಯರ ಸಾಲು ಬಹುದೊಡ್ಡದಾಯಿತು.
ವಿಮರ್ಶಕ ವಲಯದಿಂದ ನಿರ್ಲಕ್ಷಕ್ಕೆ ಒಳಗಾಗಿದ್ದರೂ ಈ ಜನಪ್ರಿಯ ಕಾದಂಬರಿಗಳು ಹದಿಹರೆಯದಲ್ಲಿ ಒಂದಷ್ಟು ಓದುಗ ವಲಯವನ್ನು ಕಟ್ಟಿ ನಿಲ್ಲಿಸಿದ್ದಂತೂ ಸುಳ್ಳಲ್ಲ. ನನಗೀಗಲೂ ಈ ಕಾದಂಬರಿಗಳು ಒಂದು ಅಗಾಧ ಮಟ್ಟದ ಓದುಗ ವಲಯವನ್ನು ಸೃಷ್ಟಿಸಿದ್ದರ ಬಗ್ಗೆ ಸೋಜಿಗವಿದೆ. ಹಾಗೆ ನೋಡಿದರೆ ಕೇವಲ ಮಹಿಳಾ ವರ್ಗವನ್ನು ಮಾತ್ರ ಈ ಕಾದಂಬರಿಗಳು ಸೆಳೆದಿರಲಿಲ್ಲ. ಪುರುಷರನ್ನೂ ಸೆಳೆದಿದ್ದವು. ಇವತ್ತಿಗೂ ಕೆಲವು ಬರಹಗಾರರು ಅಡೋಲಸಂಟ್ ಏಜ್ನಲ್ಲಿ ಹೆಚ್ಚಾಗಿ ನಮ್ಮನ್ನು ಸೆಳೆದೆದ್ದೆಂದರೆ ಸಾಯಿಸುತೆ ಕಾದಂಬರಿಗಳು ಎಂದು ಹೇಳಿದ್ದನ್ನು ಕೇಳಿದ್ದೇನೆ. ಆ ಕಾಲಕ್ಕೆ ಮಹಿಳೆಯರಲ್ಲಿ ಓದುವ ಅಭಿರುಚಿಯನ್ನು ಹುಟ್ಟುಹಾಕುವಲ್ಲಿ ಈ ಕಾದಂಬರಿಗಳು ಯಶಸ್ವಿಯಾಗಿದ್ದವು ಎಂಬುದನ್ನೂ ಅಲ್ಲಗಳೆಯುವಂತಿಲ್ಲ.