ಇಮಾಮ್ ಘಝಾಲಿ ಅವರ ಅಮೃತ ನುಡಿಗಳು
ಇಮಾಮ್ ಅಬೂ ಹಾಮಿದ್ ಅಲ್ ಘಝಾಲಿ (1057 -1111) ಮುಸ್ಲಿಮ್ ಜಗತ್ತಿನಲ್ಲಿ ಅತ್ಯಂತ ವಿಖ್ಯಾತ, ಜನಪ್ರಿಯ ಹಾಗೂ ಗೌರವಾನ್ವಿತ ವಿದ್ವಾಂಸರಲ್ಲೊಬ್ಬರು. ಇರಾನ್ನ ತೂಸ್ ಪ್ರಾಂತದಲ್ಲಿ ಜನಿಸಿದ ಇಮಾಮ್ ಘಝಾಲಿಯವರು ಇಸ್ಲಾಮೀ ತತ್ವಶಾಸ್ತ್ರ, ಕಾನೂನು ಶಾಸ್ತ್ರ, ಅಧ್ಯಾತ್ಮ ಇತ್ಯಾದಿ ಕ್ಷೇತ್ರಗಳಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳನ್ನು ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಇಂದಿಗೂ ಭಾರೀ ಗೌರವದೊಂದಿಗೆ ಸ್ಮರಿಸಲಾಗುತ್ತದೆ.
"ನಿಮ್ಮ ಕಣ್ಣಿಗೆ ಕಾಣಿಸದ ಹದಿಮೂರು ಶತ್ರುಗಳ ವಿರುದ್ಧ ಹೋರಾಡಿರಿ: ಅಹಂಕಾರ, ಉದ್ಧಟತನ, ಕಾಪಟ್ಯ, ಸ್ವಾರ್ಥ, ಲೋಭ, ಜಿಪುಣತೆ, ಲೈಂಗಿಕ ಭೋಗಾಪೇಕ್ಷೆ, ಅಸಹನೆ, ಕೋಪ, ಸುಳ್ಳು, ವಂಚನೆ, ವದಂತಿ, ದೂಷಣೆ."
"ಆಶೆಯು ದೊರೆಗಳನ್ನು ದಾಸರಾಗಿಸಿ ಬಿಡುತ್ತದೆ.
ಅದೇ ವೇಳೆ, ಸಹನೆಯು ದಾಸರನ್ನು ದೊರೆಗಳಾಗಿಸುತ್ತದೆ."
"ನೀರ ಹನಿಯ ಸಾರ್ಥಕತೆ ಅಡಗಿರುವುದು ನದಿಯನ್ನು ಸೇರಿಕೊಳ್ಳುವುದರಲ್ಲಿ"
"ಮಣ್ಣಿನೊಳಗೆ ಅಡಗಿರುವ ಬೀಜದಂತೆ, ಜ್ಞಾನವು ಮನುಷ್ಯನ ಚೇತನದಲ್ಲಿ ಅಡಗಿರುತ್ತದೆ - ಕಲಿಯುವ ಪ್ರಕ್ರಿಯೆಯು ಅದನ್ನು ಪ್ರತ್ಯಕ್ಷಗೊಳಿಸುತ್ತದೆ."
"ಮನುಷ್ಯನು ಪ್ರತಿದಿನ ತನ್ನ ಚಿತ್ತದೊಡನೆ ಹೀಗೆ ಹೇಳಬೇಕು: ನೋಡು, ದೇವರು ಇಂದು ನಿನಗೆ ಇಪ್ಪತ್ತನಾಲ್ಕು ಖಜಾನೆಗಳನ್ನು ನೀಡಿದ್ದಾನೆ. ಅವುಗಳಿಂದ ಗರಿಷ್ಠ ಲಾಭ ಪಡೆ. ಆ ಪೈಕಿ ಒಂದು ಕೂಡಾ ಒಮ್ಮೆ ಕಳೆದು ಹೋದರೆ ಅದನ್ನು ಮತ್ತೆ ಗಳಿಸಲು ನಿನಗೆಂದೂ ಸಾಧ್ಯವಾಗದು. ಮಾತ್ರವಲ್ಲ ಅದನ್ನು ಕಳೆದುಕೊಂಡ ಬಗ್ಗೆ ನೀನು ಪರಿತಪಿಸತೊಡಗಿದಾಗ ನಿನಗಾಗುವ ಸಂಕಟವನ್ನು ಸಹಿಸಿಕೊಳ್ಳಲಿಕ್ಕೂ ನಿನಗೆಂದೂ ಸಾಧ್ಯವಾಗದು."
"ನನ್ನದೇ ಚೇತನದ ಜೊತೆ ನಾನು ನಡೆಸಿದ ವ್ಯವಹಾರವು ನನ್ನ ಅತ್ಯಂತ ಕಠಿಣ ವ್ಯವಹಾರವಾಗಿತ್ತು. ಅದು ಕೆಲವೊಮ್ಮೆ ನನಗೆ ಸಹಾಯಕವಾಗಿದ್ದರೆ, ಕೆಲವೊಮ್ಮೆ ಪ್ರತಿಕೂಲವಾಗಿತ್ತು."
ಸಂಗ್ರಹ - ಕನ್ನಡಾನುವಾದ: ಎ. ಹಾಜಿರಾ, ಪುತ್ತಿಗೆ