ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ...

ಡಾ. ನಟರಾಜ್ ಹುಳಿಯಾರ್ ಕಥೆಗಾರ, ಕಾದಂಬರಿಕಾರ, ಅಂಕಣಕಾರ, ಕವಿ ಮತ್ತು ವಿಮರ್ಶಕರಾಗಿ ನಾಡಿಗೆ ಚಿರಪರಿಚಿತರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿರುವ ನಟರಾಜ್ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ವಿಷಯದ ಕುರಿತು ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಡಾ. ರಾಮ್ ಮನೋಹರ್ ಲೋಹಿಯಾ ಅವರ ಕನ್ನಡ ಅನುವಾದ ಕೃತಿಗಳ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂರು ಸಣ್ಣ ಕಥೆಗಳ ಸಂಗ್ರಹಗಳು, ಎರಡು ನಾಟಕಗಳು, ಒಂದು ಕಾದಂಬರಿ, ಎರಡು ಕವನ ಸಂಕಲನಗಳು, ಜೀವನಚರಿತ್ರೆ, ಮೂರು ಸಾಂಸ್ಕೃತಿಕ ವಿಮರ್ಶೆಯ ಪುಸ್ತಕಗಳನ್ನು ಅವರು ಹೊರತಂದಿದ್ದಾರೆ. ವಿವಿಧ ಯೋಜನೆಗಳಿಗಾಗಿ ಸುಮಾರು 48 ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಮೂರು ಬಾರಿ (1994, 2002, 2009) ಮತ್ತು 2017 ರಲ್ಲಿ ಜೀವಮಾನ ಸಾಹಿತ್ಯ ಸಾಧನೆಗಾಗಿ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

Update: 2024-12-27 10:23 GMT

ಆವಚನ ನನ್ನ ಕಿವಿಗೆ ಬಿದ್ದಿದ್ದು ಆಕಸ್ಮಿಕವಾಗಿತ್ತು. ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರದ ಹಿಂಸೆಯಿಂದಾಗಿ ಶರಣ, ಶರಣೆಯರು ವಚನಗಳ ಕಟ್ಟುಗಳನ್ನು ಬಚ್ಚಿಟ್ಟುಕೊಂಡು ಕನ್ನಡನಾಡಿನ ಬೇರೆ ಬೇರೆ ಭಾಗಗಳಿಗೆ ಚದುರಿಹೋದ ಕಾಲದ ಆತಂಕ, ಛಲ, ಸಾಹಸದ ಚಿತ್ರಗಳು ನನ್ನನ್ನು ಕಾಡತೊಡಗಿದ್ದ ಕಾಲವದು. ಈ ಕಾಲದಲ್ಲೂ ಸಾಹಿತ್ಯದ ಪ್ರಭಾವದ ಬಗ್ಗೆ ಬೆದರಿರುವ, ಸಾಹಿತ್ಯದ್ವೇಷಿಗಳಾದ, ಕೋಮುವಾದಿ ರಕ್ಕಸರು ಸಾಹಿತಿಗಳ, ಸಾಹಿತ್ಯ ಕೃತಿಗಳ ಬೆನ್ನು ಹತ್ತಿದ್ದ ಘಟನೆಗಳು ನನ್ನ ಕಣ್ಣೆದುರಿಗಿದ್ದವು. ಆ ದಿನಗಳಲ್ಲೊಂದು ಸಂಜೆ ಕವಿ ಸಿದ್ಧಲಿಂಗಯ್ಯ, ಸ್ವಾಮಿ ಆನಂದ್ ಜೊತೆ ನಾನು ಕಾವೇರಿ ನದಿಯ ದಂಡೆಯಲ್ಲಿ ಅಡ್ಡಾಡುತ್ತಿದ್ದಾಗ ಗಾಯಕ ಅಂಬಯ್ಯ ನುಲಿ ಸಿಕ್ಕರು. ಆ ರಾತ್ರಿ ಅವರು ಹಾಡಿದ ವಚನಗಳ ನಡುವೆ ಬಸವಣ್ಣನವರದೆಂದು ಹೇಳಲಾದ ಒಂದು ವಚನ ನನ್ನಲ್ಲಿ ಕಣ್ಣೀರು ಉಕ್ಕಿಸಿತು:

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ

ನೀವು ಬಂದ ಕಾರ್ಯಕ್ಕೆ ನಾನೂ ಬಂದೆನಯ್ಯಾ

ನಾನು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾ.

ಕಲ್ಯಾಣವೆಂಬುದು ಪ್ರಣತೆಯಾಗಿತ್ತು

ನಾನು ತೈಲವಾದೆನು, ನೀವು ಬತ್ತಿಯಾದಿರಿ

ಪ್ರಭುದೇವರು ಜ್ಯೋತಿಯಾದರು.

ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು

ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತು

ಕೂಡಲಸಂಗನ ಶರಣರ ಮನ

ನೊಂದಿತ್ತಯ್ಯಾ, ನೊಂದಿತ್ತಯ್ಯಾ...

ಮನೆಗೆ ಬಂದ ನಂತರ ಬಸವಣ್ಣನವರ ವಚನಗಳನ್ನು ಹುಡುಕಿ ನೋಡಿದೆ. ಅಂಬಯ್ಯ ನುಲಿಯವರ ಹಾಡಿನ ಒಂದೆರಡು ಸೂಚನೆಗಳು ಬಸವಣ್ಣನವರ ವಚನವೊಂದರಲ್ಲಿದ್ದವು;ಆದರೆ ವಚನದ ಧ್ವನಿ ಬೇರೆಯಿತ್ತು. ಬಸವಣ್ಣನವರ ವಚನ ಹೀಗಿದೆ:

ನಾನೊಂದು ಕಾರಣಕ್ಕೆ ಮರ್ತ್ಯಕ್ಕೆ ಬಂದೆನು

ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚನ್ನಬಸವಣ್ಣ ಬಂದನು

ಇನ್ನು ಬಾರದಂತೆ ಪ್ರಭುದೇವರು ಬಂದರು.

ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿ ತಂದೆ ಬಂದನು

ನಾನಿನ್ನಾರಿಗಂಜೆನು, ಬದುಕಿದೆನು

ಕಾಣಾ ಕೂಡಲಸಂಗಮದೇವಾ

ಬಸವಣ್ಣನವರು ತಾನೊಂದು ಕಾರಣಕ್ಕಾಗಿ ಭುವಿಗೆ ಬಂದಾಗ, ಚೆನ್ನಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರು ಜೊತೆಗೂಡಿದಾಗ ಉಕ್ಕಿದ ಆತ್ಮವಿಶ್ವಾಸವನ್ನು ಸೂಚಿಸುವ ವಚನವಿದು. ಅಂಬಯ್ಯ ನುಲಿಯವರು ಹಾಡಿದ ವಚನದಲ್ಲಿ ಈ ಆತ್ಮವಿಶ್ವಾಸವಿರಲಿಲ್ಲ. ಬಸವಣ್ಣನವರ ವಚನವನ್ನು ಮುಂದೆ ಮರುಬರವಣಿಗೆ ಮಾಡಿದ ಯಾವುದೋ ಕಾಲದ ಕವಿಯೊಬ್ಬ ಶರಣ ಕ್ರಾಂತಿಯ ದುರಂತವನ್ನು ನೆನೆಯುತ್ತಾ, ವಚನದ ಮೊದಲ ಭಾಗದಲ್ಲಿ ಆಶಾದಾಯಕ ಪ್ರತಿಮೆಗಳನ್ನು ಬಳಸಿ, ನಂತರ ತದ್ವಿರುದ್ಧ ಪ್ರತಿಮೆಗಳನ್ನು ಬಳಸಿರಬಹುದೇನೋ! ಅವತ್ತಿನಿಂದ ‘ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ’ ಎಂಬ ರೂಪಕ ನನ್ನನ್ನು ಬಲವಾಗಿ ಹಿಡಿಯಿತು.

ಇದಾದ ನಂತರ, ಮೈಸೂರಿನಲ್ಲಿ ನಡೆದ ಸೆಮಿನಾರೊಂದರ ನಂತರದ ಪಾರ್ಟಿಯಲ್ಲಿ ಹಲವು ಧಾರೆಗಳ ಗೆಳೆಯರು ಸೇರಿದ್ದರು. ದಲಿತ ಚಿಂತನೆ, ಸೋಷಲಿಸ್ಟ್ ನೋಟ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಪತ್ರಿಕೋದ್ಯಮ, ಸೋಷಿಯಲ್ ಮೀಡಿಯಾ, ಟೀಚಿಂಗ್, ರೈತ ಚಳವಳಿ ಮುಂತಾದ ಹಲವು ವಲಯಗಳ ಗೆಳೆಯರ ನಡುವೆ ಈ ಹಾಡನ್ನು ನುಡಿಯಲೆತ್ನಿಸುತ್ತಾ ಅದರ ಅರ್ಥವನ್ನು ನಮ್ಮ ಕಾಲಕ್ಕೆ ಅನ್ವಯಿಸಲೆತ್ನಿಸಿದೆ: ‘ಕಲ್ಯಾಣದ ಕನಸು ಎಂದೂ ಮಾಯವಾಗುವುದಿಲ್ಲ; ಅದು ಹೀಗೆ ನಾವು ಒಟ್ಟಾಗಿ ಸೇರಿ ಸೆಮಿನಾರ್ ಮಾಡುವುದರಲ್ಲೂ ಇರುತ್ತದೆ. ಇದೇ ಮೈಸೂರಿನಲ್ಲಿ ಕೆ. ರಾಮದಾಸ್ ಮಾಡಿದ ಕೆಲಸವನ್ನು ಮುಂದುವರಿಸುತ್ತಿರುವ ನೀವು ಕೂಡ ಕಲ್ಯಾಣದ ಶರಣರಂತೆ ನಾನು ಬಂದ ಕಾರ್ಯಕ್ಕೆ ಅವನೂ ಇವನೂ ಬಂದರಯ್ಯಾ ಎಂದು ಅನೇಕ ಸಾಂಸ್ಕೃತಿಕ ಉದ್ದೇಶಗಳಿಗಾಗಿ ಸೇರಿಕೊಳ್ಳುತ್ತಲೇ ಇರುತ್ತೀರಿ...’

ಈ ಹಾಡು-ಮಾತು-ಅನುಭವಗಳ ಗುಂಗಿನಲ್ಲಿ ನನ್ನದೊಂದು ನಾಟಕ ‘ಮುಂದಣ ಕಥನ’ ಬೆಳೆಯತೊಡಗಿತು. ಈ ನಾಟಕ ಮೂಡುತ್ತಿರುವ ಕಾಲದಲ್ಲೇ ನಾಟಕಕಾರನ ಜೀವಕ್ಕೆ ಕುತ್ತು ತರುವ ಸೂಚನೆಗಳು ಹಠಾತ್ತನೆ ಎದುರಾಗಿದ್ದವು. ಆ ಆತಂಕವನ್ನು ಮುಖಾಮುಖಿಯಾಗುವಂತೆ ಬಸವಣ್ಣನವರ ವಚನವೊಂದು ಇದ್ದಕ್ಕಿದ್ದಂತೆ ಎದ್ದು ಬಂದು ಆ ಭಯವನ್ನು ಚದುರಿಸಿಬಿಟ್ಟಿತು:

ನಾಳೆ ಬಪ್ಪುದು ನಮಗಿಂದೆ ಬರಲಿ,

ಇಂದು ಬಪ್ಪುದು ನಮಗೀಗಲೆ ಬರಲಿ.

ಇದಕಾರಂಜುವರು, ಇದಕಾರಳುಕುವರು?

‘ಜಾತಸ್ಯ ಮರಣಂ ಧೃವಂ’ ಎಂದುದಾಗಿ...

ವಚನದ ಮುಂದಿನ ಸಾಲುಗಳು ನನಗೆ ಮುಖ್ಯವಾಗಲಿಲ್ಲ. ಇದು ಬಸವಣ್ಣನವರ ಕಲ್ಯಾಣದಲ್ಲಿ ಹುಟ್ಟಿದ ಧೈರ್ಯ ಎಂಬುದು ನೆನಪಾಯಿತು. ಇವತ್ತು ಕೂಡ ಒಂದೇ ಕಾರ್ಯಕ್ಕೆ ಬಂದು ಸೇರುವ ಹಲವು ಧಾರೆಯವರು ಯಾವ ಕಲ್ಯಾಣವನ್ನು ಇಂದು ಹುಡುಕಬೇಕೆಂಬ ದಿಕ್ಕು ಸ್ಪಷ್ಟವಾಗತೊಡಗಿತು. ಎಂಟುನೂರ ಐವತ್ತು ವರ್ಷಗಳ ಕೆಳಗೆ ಕಲ್ಯಾಣದ ಗುರಿಯಿರಿಸಿಕೊಂಡು ಹೊರಟ ವಚನಕಾರರಿಗೆ ಕಲ್ಯಾಣ ಒಂದು ಸ್ಥಳವಾಗಿರಲಿಲ್ಲ; ಅದು ನಿರಂತರ ವ್ಯಾಖ್ಯಾನಕ್ಕೊಳಗಾಗುವ ಆದರ್ಶವಾಗಿತ್ತು. ಅಲ್ಲಮಪ್ರಭುಗಳ ವಚನದಲ್ಲಿ ‘ಕಲ್ಯಾಣವೆಂಬ ಪ್ರಣತೆ’ಯಿದೆ. ಅಕ್ಕಮಹಾದೇವಿಯವರಲ್ಲಿ ‘ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ’ ಎಂಬ ಬಣ್ಣನೆಯಿದೆ. ಕೊನೆಗೆ ಬಸವಣ್ಣನವರಲ್ಲಿ ‘ಕಲ್ಯಾಣ ಕೆಟ್ಟಿತ್ತು’ ಎಂಬ ದಿಗ್ಭ್ರಮೆಯೂ ಇದೆ.

ಆದರೆ ಹಲವು ವಚನಕಾರ, ವಚನಕಾರ್ತಿಯರು ವಿವರಿಸಿಕೊಂಡಿರುವ ‘ಕಲ್ಯಾಣ’ ಒಂದು ಆದರ್ಶ ತಾಣ, ನಾವು ತಲುಪಬಲ್ಲ ಆದರ್ಶ ಸ್ಥಿತಿ, ಅದು ಸಮಾನತೆಯ ಗುರಿ, ಅದೊಂದು ಕನಸು...ಇತ್ಯಾದಿ ಅರ್ಥಗಳನ್ನು ಸೂಚಿಸುತ್ತದೆ. ಶರಣರ ಕಲ್ಯಾಣ ಪಯಣವನ್ನು ಸರಳವಾಗಿ ಹೀಗೆ ವಿವರಿಸಿಕೊಳ್ಳಬಹುದು: ವಚನಯುಗದಲ್ಲಿ ಕಲ್ಯಾಣಕ್ಕೆ ಬಂದು ಸೇರತೊಡಗಿದ ಕವಿ, ಕವಯಿತ್ರಿಯರಿಗೆ, ಬುದ್ಧಿಜೀವಿಗಳಿಗೆ ತಾವು ಈವರೆಗೆ ಬದುಕಿರುವ ಸಮಾಜವ್ಯವಸ್ಥೆ, ಧರ್ಮ ಸರಿಯಿಲ್ಲ ಎನ್ನಿಸಿತು. ಇಲ್ಲಿ ಕಸುಬು, ಹುಟ್ಟು, ಜಾತಿ, ಲಿಂಗಗಳ ನೆಲೆಗಳಲ್ಲಿ ಭೇದಭಾವಗಳಿವೆ; ವೈದಿಕತೆಯ ಹೆಸರಿನಲ್ಲಿ, ಸಾಂಪ್ರದಾಯಿಕ ನೈತಿಕತೆಯ ಹೆಸರಿನಲ್ಲಿ ಮಹಿಳೆಯರ, ಅಸ್ಪಶ್ಯರ ದಮನವಾಗುತ್ತಿದೆ. ದುರ್ಬಲ ಜಾತಿಗಳನ್ನು ತುಳಿಯಲಾಗುತ್ತಿದೆ...ಇದಕ್ಕೆ ಕಲ್ಯಾಣದಲ್ಲಿ ಕೂತು ಉತ್ತರ ಹುಡುಕಬೇಕು ಎನ್ನಿಸಿತು. ಸಮಾಜ ವಿಮರ್ಶೆ, ಆಲೋಚನೆಗಳನ್ನು ವ್ಯಕ್ತಪಡಿಸಲು ತಕ್ಕ ಭಾಷೆ, ಎಲ್ಲರಿಗೂ ದಕ್ಕಬಲ್ಲ, ತಲುಪಬಲ್ಲ ಭಾಷೆ ಬೇಕು ಎನ್ನಿಸಿತು. ಈ ನೆಲದ ವೈದಿಕ ಧರ್ಮವಾಗಲಿ, ಜೈನ ಧರ್ಮವಾಗಲಿ, ಜಾನಪದೀಯ ಧರ್ಮಗಳಾಗಲಿ ಆದರ್ಶ ಧರ್ಮದಂತೆ ಇಲ್ಲ ಎನ್ನಿಸಿತು. ಆಗ ಬಹುಜನ ಸಮುದಾಯಗಳು ಸಾಮೂಹಿಕವಾಗಿ ಸೃಷ್ಟಿ ಮಾಡಲೆತ್ನಿಸಿದ ಆದರ್ಶ ರಾಜ್ಯವೇ ಕಲ್ಯಾಣ.

ಈ ಇಡೀ ಪ್ರಕ್ರಿಯೆಯನ್ನು ವಿಶಾಲವಾಗಿ ನೋಡಿದರೆ, ಶರಣ, ಶರಣೆಯರು ಅರಿವಿದ್ದೋ ಅರಿವಿಲ್ಲದೆಯೋ, ಕನ್ನಡನಾಡನ್ನು ಪ್ರಜಾಪ್ರಭುತ್ವಕ್ಕೆ ಸಜ್ಜು ಮಾಡುತ್ತಾ ಇದ್ದರು ಎನ್ನಿಸುತ್ತದೆ. ಆದರೆ ಬಿಜ್ಜಳನ ರಾಜ್ಯದಲ್ಲಿ ಮಹಾಮನೆಯ ಕೇಂದ್ರದಿಂದ ನಡೆಯುತ್ತಿದ್ದ ಅವರ ಚಳವಳಿಗೆ ಬಿಕ್ಕಟ್ಟುಗಳು ಎದುರಾದವು: ಪ್ರಭುತ್ವದ ಪೆಡಸುತನ, ಸನಾತನಿ ಹಾಗೂ ಸಾಂಪ್ರದಾಯಿಕ ಶಕ್ತಿಗಳು ಪ್ರಭುತ್ವವನ್ನು ನಿಯಂತ್ರಿಸುತ್ತಿದ್ದ ರೀತಿ; ಹೊಸ ಧರ್ಮದ ಉದಯವನ್ನು ಒಲ್ಲದ ಸ್ಥಾಪಿತ ಧರ್ಮಗಳು ಸೃಷ್ಟಿಸಿದ ಬಿಕ್ಕಟ್ಟು; ಇವೆಲ್ಲದರ ಜೊತೆಗೆ ವಚನ ಚಳವಳಿಯ ಅನುಯಾಯಿಗಳ ಅಶಿಸ್ತು, ದುಡುಕು ಕೂಡ ಸೇರಿಕೊಂಡಂತಿದೆ. ಇದೆಲ್ಲವನ್ನೂ ನೋಡನೋಡುತ್ತಾ ಮಹಾನ್ ಕಾರ್ಯಕ್ಕಾಗಿ ವಚನ ಚಳವಳಿಯಲ್ಲಿ ಭಾಗಿಯಾದ ಕವಿ, ಕವಯಿತ್ರಿಯರಿಗೆ ಭ್ರಮನಿರಸನವಾದಂತಿದೆ. ಆ ಘಟ್ಟದಲ್ಲಿ ಬಸವ, ಬಿಜ್ಜಳರೆಂಬ ಇಬ್ಬರು ದೊಡ್ಡ ನಾಯಕರು ಕೂಡ ರಂಗದಿಂದ ನಿರ್ಗಮಿಸಿಬಿಟ್ಟರು.

2

ಕಲ್ಯಾಣದ ಈ ಬಿಕ್ಕಟ್ಟಿನ ಕಾಲವನ್ನು ೧೭೫೦ರಲ್ಲಿ ಪ್ರಕಟವಾದ ಚನ್ನಪ್ಪ ಕವಿಗಳ ‘ಶರಣಲೀಲಾಮೃತ’ ವಿಶಿಷ್ಟವಾಗಿ ಬಿಂಬಿಸಿದೆ. ಮಡಿವಾಳ ಮಾಚಿದೇವರ ನಾಯಕತ್ವದಲ್ಲಿ ವಚನ ರಕ್ಷಣೆ ಮಾಡಿದ ಶರಣರ ಹಾಗೂ ಹೋರಾಟ ಮಾಡಿದವರ ಕತೆಯನ್ನೂ ಹೇಳುವ ಈ ಕೃತಿ ರುದ್ರಮುನಿಗಳು, ಅಕ್ಕನಾಗಮ್ಮನವರು ಹಾಗೂ ಚನ್ನಬಸವಣ್ಣನವರ ನಾಯಕತ್ವದಲ್ಲಿ ಶರಣರು ಉಳುಮೆಗೆ ಹೊರಟ ಕಥಾನಕವನ್ನು ಮರುಸೃಷ್ಟಿ ಮಾಡುತ್ತದೆ. ಚೆನ್ನಪ್ಪ ಕವಿಗಳು ಹದಿನೆಂಟನೇ ಶತಮಾನದಲ್ಲಿ ಮತ್ತೆ ಕಲ್ಯಾಣದ ಕನಸನ್ನು, ಈ ವಚನಗಳನ್ನು ಹೊತ್ತೊಯ್ದು ರಕ್ಷಿಸಿದ ಅಳಿದುಳಿದ ನಾಯಕರ ಹಾಗೂ ಸಾಮಾನ್ಯರ ಕನಸನ್ನು ನೋಡುತ್ತಿದ್ದ ನನಗೆ ‘ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ’ದ ಅರ್ಥವಿಸ್ತಾರವಾಯಿತು. ವಚನ ರಕ್ಷಣೆಯ ಈ ಪಯಣದ ಸಂದೇಶ ಇದು: ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಮುಂತಾದ ವಚನ ಚಳವಳಿಯ ಮುಂದಾಳುಗಳು ರಂಗದಿಂದ ನಿರ್ಗಮಿಸಿರಬಹುದು. ಹಲವರು ವಚನ ಚಳವಳಿಯ ಬಗ್ಗೆ ಭ್ರಮನಿರಸನಗೊಂಡಿರಬಹುದು. ಆದರೆ ಉಳಿದ ಕವಿಗಳು, ವಚನಗಳ ಅನುಯಾಯಿಗಳಾದ ಸಾಮಾನ್ಯರು ಕಲ್ಯಾಣದ ಕನಸನ್ನು ಬಿಟ್ಟುಕೊಡಲು ತಯಾರಿರಲಿಲ್ಲ! ಈ ಕಾಲದಲ್ಲೂ ನಿಜವಾದ ಪ್ರಜಾಪ್ರಭುತ್ವದ ನಾಡನ್ನು ಕಟ್ಟಬೇಕಾದರೆ ನಾಯಕರುಗಳ ನಿರ್ಗಮನದ ನಂತರವೂ ಜನರು ಆ ಕನಸನ್ನು ಮುಂದಕ್ಕೆ ಒಯ್ಯುವುದಕ್ಕೆ ಸಿದ್ಧರಾಗಿರಬೇಕು ಎಂದು ಈ ವಚನ ಪಯಣ ಸೂಚಿಸುವಂತಿದೆ. ‘ಶರಣ ಲೀಲಾಮೃತ’ದಲ್ಲಿ ಬಿಜ್ಜಳನ ಹತ್ಯೆಯ ನಂತರ, ಸೋವಿದೇವನ ಸೈನಿಕರ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಶರಣರು ವಚನಗಳನ್ನು ಇಟ್ಟುಕೊಂಡು ಹುತ್ತದೊಳಗೆ ಅಡಗಿಕೊಂಡಿದ್ದರು; ರೂಪ ಮರೆಸಿಕೊಂಡು ಬದುಕಿದ್ದರು ಮುಂತಾದ ಮನ ಕರಗಿಸುವ ಚಿತ್ರಗಳಿವೆ. ವಚನಕಾರರ ರಕ್ಷಣೆಗಾಗಿ ತುರಗ ವಜೀರರು ಕೂಡ ಜೊತೆಯಾಗಿದ್ದರು ಎಂಬ ಅಚ್ಚರಿಯ ವಿವರವೂ ಇದೆ. ಚನ್ನಬಸವಣ್ಣನವರು ಉತ್ತರಕನ್ನಡದ ಉಳುವೆಗೆ ತಲುಪುವ ಮುನ್ನ ಈ ವಜೀರರನ್ನು ಹರಸಿ ಡಿಳ್ಳಿಪುರಿಗೆ ಕಳಿಸಿದ ಚಿತ್ರವೂ ಇದೆ.

ಈ ಬೆಳವಣಿಗೆಗಳು ವಚನ ಚಳವಳಿಯ ಇಳಿಗಾಲದ ಒಂದು ಹಠಾತ್, ವಿಶಿಷ್ಟ, ತಿರುವನ್ನು ಸೂಚಿಸುವಂತಿವೆ: ಅಕಸ್ಮಾತ್ ಈ ಬಿಕ್ಕಟ್ಟು ಬರದೇ ಇದ್ದರೆ, ಶರಣರು, ವಚನಗಳ ಕೇಳುಗರು ವಚನಗಳನ್ನು ಎತ್ತಿಕೊಂಡು, ಮನನ ಮಾಡಿಕೊಂಡು ಹಾದಿಯಲ್ಲಿ ಕಂಡ ಊರೂರುಗಳಲ್ಲಿ ಹಬ್ಬಿಸುತ್ತಾ, ಹಲವು ದಿಕ್ಕಗಳಲ್ಲಿ ಹರಿದು ಹಂಚಿ ಹೋಗದೇ ಇದ್ದರೆ, ಪ್ರಾಯಶಃ ಈ ವಚನಗಳು ಕಲ್ಯಾಣದ ಸುತ್ತಮುತ್ತ ಇದ್ದು ಸ್ಥಾವರವಾಗಿ ಬಿಡುತ್ತಿದ್ದವೇನೋ! ಒಮ್ಮೆ ಲಂಕೇಶರು ಕಿ. ರಂ. ನಾಗರಾಜರ ಜೊತೆ ಮಾತಾಡುತ್ತಾ, ‘ಬಸವಣ್ಣನವರಿಗೆ ಏನು ಬೇಕಾಗಿತ್ತು ಗೊತ್ತಾ? ಒಂದು ಪ್ರಿಂಟಿಂಗ್ ಪ್ರೆಸ್ ಬೇಕಾಗಿತ್ತು!’ ಎಂದಿದ್ದರು. ವಚನಯುಗದಲ್ಲಿ ಪ್ರಿಂಟಿಂಗ್ ಪ್ರೆಸ್ ಇರಲಿಲ್ಲ; ವಚನಗಳ ‘ಪ್ರಿಂಟಿಂಗ್ ಪ್ರೆಸ್’ ಆಗಿ ಕೆಲಸ ನಿರ್ವಹಿಸಿದವರು ವಚನಗಳ ಅನುಯಾಯಿಗಳು; ಅಳಿದುಳಿದ ಶರಣರು. ವಚನಕಾರರು ಬಂದ ಕಾರ್ಯಕ್ಕೆ ತಾವೂ ಬಂದು ವಚನಗಳನ್ನು ಉಳಿಸಿದವರು!

ಹೀಗೆ ಉಳಿದ ವಚನಗಳನ್ನು ಮರುನಿರೂಪಿಸಿದ ಶೂನ್ಯ ಸಂಪಾದನಕಾರರು ತಾವೂ ಈ ಕಾರ್ಯಕ್ಕೆ ಬಂದು ಸೇರಿಕೊಂಡು ವಚನ ಪರಂಪರೆಯ ಹೊಸ ಚೌಕಟ್ಟು ರೂಪಿಸಿದರು. ಈ ಕಾರ್ಯಕ್ಕೆ ಹದಿನಾರನೆಯ ಶತಮಾನದ ಹೊತ್ತಿಗೆ ಕನ್ನಡ ಜನಪದರು ಹಾಗೂ ಜನಪದ ಕಾವ್ಯ ಸೇರಿಕೊಂಡ ರೀತಿ ಅದ್ಭುತವಾಗಿದೆ. ಪಿ.ಕೆ. ರಾಜಶೇಖರ್ ಸಂಪಾದಿಸಿರುವ ‘ಜನಪದ ಶರಣ ಕಾವ್ಯಗಳು’ ಸಂಪುಟದಲ್ಲಿರುವ ಜನಪದ ಶರಣ ಕಾವ್ಯಗಳಲ್ಲಿ ವಚನ ಚಳವಳಿ ವಿಶಾಲ ಜಾತ್ಯತೀತ ಅಂಶಗಳನ್ನು ಒಳಗೊಂಡು ಬೆಳೆಯುತ್ತದೆ. ಮಲೆಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯಗಳು ವಚನ ಚಳವಳಿಯ ಸ್ಪಿರಿಟ್ಟನ್ನು ಮತ್ತೊಂದು ರೀತಿಯಲ್ಲಿ ಸೃಷ್ಟಿಸಿದವು. ಜನಪದ ಗಾಯಕರಾದ ನೀಲಗಾರರ ಮೂಲಕ ನಿತ್ಯ ಬೆಳೆಯುತ್ತಿದ್ದ ಈ ಕಾವ್ಯಗಳಲ್ಲಿ ವಚನ ಚಳವಳಿಯ ವಿಮರ್ಶೆಯೂ ನಡೆಯುತ್ತಿತ್ತು; ಕಲ್ಯಾಣದ ಕನಸೂ ವಿಸ್ತಾರವಾಗುತ್ತಿತ್ತು. ‘ಮಂಟೇಸ್ವಾಮಿ ಕಾವ್ಯ’ದಲ್ಲಿ ಅಲ್ಲಮಪ್ರಭುಗಳ ಮುಂದುವರಿಕೆಯಾದ ಮಂಟೇದಸ್ವಾಮಿಗಳು ಬಸವಣ್ಣನಿಗೆ ಹೇಳುತ್ತಾರೆ:

ಬಸವಣ್ಣಾ,

ನಿನ್ನ ಕಲ್ಯಾಣದಲ್ಲಿರುವ ಶರಣ ಮಾತ್ಮರೆಲ್ಲಾ

ಒಳ್ಳೆಯ ಶರಣರಲ್ಲ ಕಣಯ್ಯಾ.

ಒಳ್ಳೆಯವರು ಯಾರು, ಕೆಟ್ಟವರು ಯಾರು ಅನ್ನುವುದು ನಿನಗೆ ಗೊತ್ತಿಲ್ಲ ಬಸವಣ್ಣ!

ಬಸವಣ್ಣನವರ ಮುಗ್ಧ ವ್ಯಕ್ತಿತ್ವವನ್ನು ಅದ್ಭುತವಾಗಿ ಸೂಚಿಸುವ ಈ ಭಾಗದಲ್ಲಿ ಮಂಟೇಸ್ವಾಮಿಗಳು ಬಸವಣ್ಣನವರನ್ನು ಒಂದು ಸಾರಿ ‘ಕಂದಾ’ ಎನ್ನುತ್ತಾರೆ. ಇದು ಬಸವಣ್ಣನವರ ವ್ಯಕ್ತಿತ್ವ ಜನಮಾನಸದಲ್ಲಿ ಯಾವ ಯಾವ ರೀತಿಯಲ್ಲಿ ಹಬ್ಬಿಹೋಗಿದೆ ಎನ್ನುವುದನ್ನೂ ಸೂಚಿಸುತ್ತದೆ. ಬಸವಣ್ಣನವರ ಸಮಕಾಲೀನರ ವಚನಗಳಲ್ಲಿ ಅವರು ತಾಯಿಯ ಥರ, ಸ್ನೇಹಿತನ ಥರ, ಮಗುವಿನ ಥರ, ಸಂಗಾತಿಯ ಥರ, ಪೋಷಕನ ಥರ, ನಾಯಕನ ಥರ, ಚಿಂತಕನ ಥರ... ಹೀಗೆ ಅನೇಕ ರೀತಿಯಲ್ಲಿ ಕಾಣಿಸುತ್ತಾರೆ. ಕಲ್ಯಾಣದ ಬಿಕ್ಕಟ್ಟಿನ ಕಾಲದಲ್ಲಿ ಮುಂದೇನು ಮಾಡಬೇಕು ಎಂದು ಬಸವಣ್ಣನವರು ದಿಗ್ಭ್ರಾಂತರಾಗಿದ್ದ ಕಾಲದಲ್ಲಿ ಧರೆಗೆ ದೊಡ್ಡವರಾದ ಮಂಟೇದಸ್ವಾಮಿಗಳು ಹೀಗೆ ನುಡಿಯುತ್ತಾರೆ:

ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ,

ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುರುಬರ ಬೀರಯ್ಯ,

ಈಡಿಗರ ಕ್ಯಾತಪ್ಪ ಇಷ್ಟು ಮಂದಿ ಶರಣ ಮಾತ್ಮರು ನಮ್ಮ ಆದಿ ಕಲ್ಯಾಣದಲ್ಲಿ ಉಳಿದವ್ರೇ.

ಇಷ್ಟು ಮಂದಿ ಶರಣ ಮಾತ್ಮರನ್ನು ಕಟ್ಟಿಕೊಂಡು ಬಸವಣ್ಣಾ,

ಈ ಕಲ್ಯಾಣ ಪಟ್ಟಣ ಈಗಲೀಗ ಹೆಚ್ಚು ಒಕ್ಕಲಾಗಿ ಬಾಳಲಿ ಅಂತ್ಹೇಳಿ

ನಾಮಕರಣ ಕಟ್ಟಿ ನಿಮಗೆ ಈ ಕಲ್ಯಾಣ ಪಟ್ಟಣ ಬಿಟ್ಟು ಮುಂದಕ್ಕೋಯ್ತಿನಿ ಕಂದಾ.

ಇಷ್ಟು ಮಂದಿ ಶರಣಮಾತ್ಮರ ಕಟ್ಕೊಂಡು ವಾಸಸ್ಥಾನ ಮಾಡು ಕಂದಾ.

ಈ ಸಾಲುಗಳನ್ನು ಓದುತ್ತಿರುವಾಗ ನನಗೆ ರೋಮಾಂಚನವಾಯಿತು! ಬಸವಣ್ಣನವರು ಬಂದ ಕಾರ್ಯಕ್ಕೆ ತಾವೂ ಬಂದ ವಿವಿಧ ಶೂದ್ರ, ದಲಿತ ಶರಣಮಹಾತ್ಮರನ್ನು ಹೆಸರಿಸುತ್ತಾ, ಮಂಟೇಸ್ವಾಮಿಗಳು ನಮ್ಮ ಕಾಲದ ‘ಬಹುಜನ ಸಮಾಜ’, ‘ಅಹಿಂದ’ ಪರಿಕಲ್ಪನೆಗಳ ಸ್ಪಷ್ಟ ತಾತ್ವಿಕ ತಳಹದಿಯನ್ನೇ ರೂಪಿಸಿ ಕೊಟ್ಟಿದ್ದಾರೆ ಎನ್ನಿಸಿತು; ಮುಂದೆ ಕಲ್ಯಾಣ ರಾಜ್ಯ ಕಟ್ಟುವವರು ಇವರೇ ಎಂದು ಮಂಟೇಸ್ವಾಮಿಗಳು ಸೂಚಿಸುತ್ತಿದ್ದಾರೆ ಎನ್ನಿಸಿತು. ಇದು ಮಠಗಳ ಕಲ್ಯಾಣದ ಕಲ್ಪನೆಗಿಂತ ಸಂಪೂರ್ಣ ಭಿನ್ನವಾದುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.


ಮುಂದೆ ‘ತುರುಕರ ಪೀರಣ್ಣ’ ಎಂಬ ಲಾವಣಿ ಬಸವಣ್ಣನವರನ್ನು ಹಿಂದೂ-ಮುಸ್ಲಿಮರ ನಡುವಣ ಸಾಮರಸ್ಯದ ರಾಯಭಾರಿಯನ್ನಾಗಿಯೂ ಚಿತ್ರಿಸುತ್ತದೆ. ಈಶ್ವರನೂ ಬಸವಣ್ಣನವರೂ ಭೂಲೋಕಕ್ಕೆ ಬಂದಾಗ ಪೀರಣ್ಣನವರನ್ನು ಕಾಣುತ್ತಾರೆ. ಕನ್ನಡ ಜನಪದ ಸಾಹಿತ್ಯದ ಈ ಅದ್ಭುತ ಸಾಮರಸ್ಯದ ಕಲ್ಪನೆ ಹೇಗಿದೆ ಅಂದರೆ, ಈ ಕಾವ್ಯದಲ್ಲಿ ಪೀರಣ್ಣ, ‘ಮಂಡಿಯೂರಿ ಕೈ ಜೋಡ್ಸಿ ಶಿವನ್ಗೆ ನಮಾಜು ಮಾಡುತಾನೆ; ನಮಾಝ್ ಮಾಡೋದು ನಮ್ಮ ಶಿವುನ ಪಾದಕ್ಕರುವಾಯ್ತು’ ಎಂಬ ಬಣ್ಣನೆ ಇಲ್ಲಿದೆ. ಮುಸ್ಲಿಮರ ನಮಾಝನ್ನೇ ನೆಪವಾಗಿಟ್ಟುಕೊಂಡು ಮತೀಯ ಬಿಕ್ಕಟ್ಟನ್ನು ಸೃಷ್ಟಿ ಮಾಡುವ ಕ್ರೂರಿಗಳಿಗೆ ಜನಪದರ ಬಸವಣ್ಣ ದೊಡ್ಡ ಹೊಡೆತ ಕೊಡುತ್ತಾರೆ. ಈ ಲಾವಣಿಯಲ್ಲಿ ಪೀರನ ಮಗ ಚಿಕ್ಕಪೀರ ತೀರಿಕೊಳ್ಳುತ್ತಾನೆ. ಪೀರನ ಮಗನನ್ನು ಅಪ್ಪಟ ಕನ್ನಡದ ಚಿಕ್ಕಪೀರನನ್ನಾಗಿ ಮಾಡುವ ಈ ಸ್ವೀಕಾರವೂ ಸುಂದರವಾಗಿದೆ. ಚಿಕ್ಕಪೀರ ನಂತರ ಮರು ಜೀವ ಪಡೆಯುತ್ತಾನೆ. ಆಗ ಅವನಿಗೆ ಬಸವಣ್ಣನವರು ಮಾಡುವ ಮಂತ್ರೋಪದೇಶ ಇದು: ‘ನಿನ್ನಂಥ ಶರಣನಿಲ್ಲ, ನೀನು ಮರ್ತ್ಯಲೋಕದಲ್ಲಿರು, ದಿನಕ್ಕೆ ಮೂರು ಹೊತ್ತು ಶಿವನನ್ನು ಕೂಗಪ್ಪಾ, ಶಿವಗ್ಯಾನ ಮರೆಯದಂತೆ ನರ ಮನುಸ್ರಿಗೆ ಎಚ್ರ ಕೊಡು.’

ಇದು ಕನ್ನಡ ಜನಪದರು ಗ್ರಹಿಸಿರುವ ಬಸವಣ್ಣನವರ ಜಾತ್ಯತೀತ ವ್ಯಕ್ತಿತ್ವ; ಇದು ಜನಪದರು ಧರ್ಮ-ಧರ್ಮಗಳ ನಡುವೆ ಬೆಳೆಸಿಕೊಂಡು ಬಂದ ಸಾಮರಸ್ಯ. ಕೋಮುವಾದಿ ರಾಜಕೀಯ ಒಡೆಯುತ್ತಿರುವ ಸಾಮರಸ್ಯವನ್ನು ಜನಪದ ಕಾವ್ಯ ನಮ್ಮ ವಚನಗಳ ಸತ್ವದ ಮೂಲಕವೂ ಉಳಿಸಲೆತ್ನಿಸಿದೆ. ಕಲ್ಯಾಣದ ಸುದೀರ್ಘ ಪಯಣದಲ್ಲಿ ಹುಟ್ಟಿದ ಇಂಥ ಅನೇಕ ಉದಾರ ಧರ್ಮಗಳ ಎದುರು ಜಾತಿ ಆಧಾರಿತ ವೈದಿಕ ಧರ್ಮದ ಸಂಕುಚಿತತೆ ಇನ್ನಷ್ಟು ಎದ್ದು ಕಾಣುತ್ತದೆ. ಜಾತಿಯ ಆಧಾರದ ಮೇಲೆ ಜನರನ್ನು ಹೊರಗಿಡುವ ಧರ್ಮ ‘ಎಕ್ಸ್ಕ್ಲೂಸೀವ್’ ಧರ್ಮ; ಅಂದರೆ, ಕೆಲವು ಜಾತಿಗಳನ್ನು ಸಮಾಜದಿಂದಲೇ 'Exclude' ಮಾಡುವ, ಹೊರಗಿಡುವ ಧರ್ಮ. ಆದರೆ, ಬೌದ್ಧಧರ್ಮದ ಹಾಗೇ ಶರಣ ಧರ್ಮವೂ ಮೂಲದಲ್ಲಿ ಎಲ್ಲರನ್ನೂ ಒಳಗೊಳ್ಳುವ, ‘ಇನ್ಕ್ಲ್ಯೂಸಿವ್’ ಧರ್ಮವಾಗಿತ್ತು. ಜನಪದರು ಮಂಟೇಸ್ವಾಮಿ, ಮಲೆಮಾದೇಶ್ವರರ ಮೂಲಕ ಸೃಷ್ಟಿಸಿರುವ ಧರ್ಮ ಸಮಾನತೆಯ ಆಶಯವನ್ನು ಇನ್ನಷ್ಟು ವಿಸ್ತರಿಸುತ್ತದೆ. ಶರಣ ಧರ್ಮಕ್ಕೂ ಕಾಲದ ಓಟದಲ್ಲಿ ಜಾತಿಯ ವಿಕಾರಗಳು ಅಂಟಿಕೊಂಡಾಗ ಜನಪದ ಶರಣ ಧರ್ಮವು ವಚನಕಾರ, ವಚನಕಾರ್ತಿಯರು ಕಲ್ಯಾಣಕ್ಕೆ ಬಂದು ಆರಂಭಿಸಿದ್ದ ಕಾರ್ಯದ ಮೂಲ ಸತ್ವವನ್ನು ಮುಂದುವರಿಸಲೆತ್ನಿಸಿದೆ. ಆಧುನಿಕ ಕನ್ನಡ ಸಾಹಿತ್ಯವಂತೂ ಈ ಕಾರ್ಯವನ್ನು ಮುಂದುವರಿಸುತ್ತಲೇ ಇದೆ.

ಹೀಗಾಗಿಯೇ ‘ಕಲ್ಯಾಣ’ ಪರಿಕಲ್ಪನೆ ಕನ್ನಡ ಸಂಸ್ಕೃತಿಯಲ್ಲಿ, ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಕನಸು ಹಾಗೂ ಆದರ್ಶವಾಗಿ ಮತ್ತೆ ಮತ್ತೆ ಮೂಡುತ್ತದೆ. ಮುಂದೊಮ್ಮೆ ‘ಕಲ್ಯಾಣ ಕೆಟ್ಟಿತ್ತು’ ಎಂದು ಬಸವಣ್ಣನವರು ದಿಗ್ಭ್ರಮೆಯಿಂದ ಹೇಳಿರಬಹುದು. ಆದರೆ ನಂತರದ ಶರಣ ಶರಣೆಯರು, ಉಳಿದ ವಚನಕಾರ, ವಚನಕಾರ್ತಿಯರು, ವಚನಾನುಯಾಯಿಗಳು ‘ಕೆಟ್ಟಿದ್ದ’ ಕಲ್ಯಾಣದ ಕನಸನ್ನು ತಾವಿದ್ದ ಕಡೆಗಳಲ್ಲೇ ಸರಿಪಡಿಸಲು ಪ್ರಯತ್ನ ಮಾಡುತ್ತಲೇ ಹೋಗಿದ್ದಾರೆಂದು ಊಹಿಸುವೆ. ಯಾಕೆಂದರೆ, ಬಸವಣ್ಣನವರ ಈ ದಿಗ್ಭ್ರಮೆಯ ಉದ್ಗಾರದ ನಂತರವೂ ವಚನಕಾರ, ವಚನಕಾರ್ತಿಯರು ವಚನಗಳನ್ನು ರಚಿಸುತ್ತಲೇ ಹೋಗಿದ್ದಾರೆ. ಈ ವಚನರಚನೆಯ ಮುಂದುವರಿಕೆಯೇ ಕೆಟ್ಟಿದ್ದ ಕಲ್ಯಾಣವನ್ನು ಸರಿಪಡಿಸುವ ಹಾಗೂ ಮರಳಿ ಕಟ್ಟುವ ಕನಸಿನ ಮುಂದುವರಿಕೆ. ಈ ಕನಸಿಲ್ಲದಿದ್ದರೆ ವಚನ ರಚನೆಯ ಹಂಬಲವನ್ನೇ ಅವರು ಕೈ ಬಿಡುತ್ತಿದ್ದರೇನೋ! ಆರೋಗ್ಯಕರ ಬರವಣಿಗೆಯ ಮುಖ್ಯ ಆಶಯಗಳಲ್ಲಿ ಕೆಟ್ಟಿರುವುದನ್ನು ಸರಿಪಡಿಸುವ ಕೆಲಸವೂ ಇರುತ್ತದೆ. ವಚನಗಳು, ವಚನ ಪರಂಪರೆಯ ನಂತರದ ರಚನೆಗಳು ಈ ಕೆಲಸವನ್ನು ದಣಿಯವರಿಯದೆ ಮಾಡುತ್ತಾ ಬಂದಿವೆ.

3

ಕಲ್ಯಾಣವನ್ನು ಮತ್ತೆ ಮತ್ತೆ ಕಟ್ಟುವುದು ಕನ್ನಡನಾಡಿನ ಒಂದು ಸಹಜ ಸಾಂಸ್ಕೃತಿಕ ಅಭ್ಯಾಸ. ಇದು ನಿರಂತರ ಪ್ರಕ್ರಿಯೆ. ಸನಾತನ ಶಕ್ತಿಗಳು ಈ ಕಲ್ಯಾಣವನ್ನು ಕೆಡಹುವುದು, ಉಳಿದ ಬಹುಜನರು ಕಲ್ಯಾಣವನ್ನು ಕಟ್ಟುವುದು... ಈ ಕೆಲಸ ಕನ್ನಡ ಜನಮಾನಸದಲ್ಲಿ ಮುಂದುವರಿಯುತ್ತಲೇ ಇದೆ. ಆದ್ದರಿಂದಲೇ ಈ ಕಾಲದ ಹಿಂಸೆಯನ್ನು ಧಿಕ್ಕರಿಸುವ ನಾವು, ಕಲ್ಯಾಣಕ್ರಾಂತಿಯ ನಂತರ ನಡೆದ ಕೆಲವು ಘಟನೆಗಳಿಗೆ ನೈತಿಕ ನಿಷ್ಠುರತೆಯಿಂದಲೂ ಪ್ರತಿಕ್ರಿಯಿಸಬೇಕಾಗುತ್ತದೆ. ಈ ಕಾಲದಲ್ಲಿ ಧರ್ಮಮೂಲದಿಂದ ಹುಟ್ಟುತ್ತಿರುವ ಹಿಂಸೆಯನ್ನು ನಾವು ತಿರಸ್ಕರಿಸುವುದಾದರೆ, ಹನ್ನೆರಡನೆಯ ಶತಮಾನದಲ್ಲಿ ಧರ್ಮರಕ್ಷಣೆಯ ಹೆಸರಿನಲ್ಲಿ ಜಗದೇವ, ಮಲ್ಲಿ, ಬೊಮ್ಮಿತಂದೆ ಎಂಬ ಧಾರ್ಮಿಕ ಅತಿರೇಕವಾದಿಗಳು ಮಾಡಿದ ಬಿಜ್ಜಳ ಮಹಾರಾಜರ ಹತ್ಯೆಯನ್ನು ಮೊದಲು ಖಂಡಿಸಬೇಕಾಗುತ್ತದೆ. ವಚನ ಪರಂಪರೆಯ, ಶರಣ ಪರಂಪರೆಯ ಅನುಯಾಯಿಗಳು ಈ ಬರ್ಬರ ಹತ್ಯೆಯನ್ನು ಖಂಡಿಸಿ ಅದರ ಕಳಂಕವನ್ನು ತೊಳೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಶೂದ್ರ ಬಿಜ್ಜಳ ಮಹಾರಾಜರನ್ನು ಹತ್ಯೆ ಮಾಡಿದವರು ವಚನಗಳಿಂದ ಪ್ರಭಾವಿತರಾದವರಲ್ಲ. ಇವತ್ತು ಧರ್ಮವನ್ನು ಹಿಂಸೆಗೆ ಬಳಸುತ್ತಿರುವವರಂತೆ, ಅವರು ಕೂಡ ಧರ್ಮವನ್ನು ಅಹಂಕಾರದ ಪ್ರದರ್ಶನವಾಗಿ, ಸೇಡಿನ ಆಯುಧವನ್ನಾಗಿ ಬಳಸಿದವರು. ಅವರು ನಿಜಕ್ಕೂ ಬಸವಣ್ಣನವರು ಬಂದ ಕಾರ್ಯಕ್ಕೆ ಬಂದವರಾಗಿರಲಿಲ್ಲ.

ಆದ್ದರಿಂದಲೇ ಹನ್ನೆರಡನೆಯ ಶತಮಾನದ ಕಲ್ಯಾಣದ ಕನಸಿನ ಜೊತೆಜೊತೆಗೇ ಆ ಕಾಲದ ಬಿಜ್ಜಳ ಮಹಾರಾಜರ ಹತ್ಯೆ ಕುರಿತ ದಿಗ್ಭ್ರಮೆಯೂ ನಮ್ಮನ್ನು ಮುತ್ತಬೇಕು. ಯಾಕೆಂದರೆ, ಬಿಜ್ಜಳ ಮಹಾರಾಜರು ಭಕ್ತಿ ಭಂಡಾರಿ ಬಸವಣ್ಣನವರು ‘ಮರ್ತ್ಯಕ್ಕೆ’ ಬಂದ ಕಾರಣವನ್ನು ಅರಿತು, ಅವರ ಕಾರ್ಯವನ್ನು ಬೆಂಬಲಿಸಿದ್ದವರು. ಇದೇ ಮಹಾರಾಜರು ಮುಂದೆ ಜಾತಿ ಕಟ್ಟಳೆಗಳನ್ನು ಮೀರಿ ತಮ್ಮ ಮಕ್ಕಳ ವಿವಾಹಕ್ಕೆ ಮುಂದಾದ ಅಲ್ಲಯ್ಯ, ಮಧುವರಸರ ಕಣ್ಣು ಕೀಳಿಸಿದ ಕಾಲವೂ ಬಂತು; ಈ ಕ್ರೂರ ಆಜ್ಞೆಯ ಹಿಂದೆ ಜಾತಿಪದ್ಧತಿಯನ್ನು ಕಾಯ್ದುಕೊಳ್ಳುವ ಸಂಪ್ರದಾಯವಾದಿಗಳ ಮಸಲತ್ತಿತ್ತು. ಈ ಘಟನೆಯಿಂದ ಬಸವಣ್ಣನವರು ಬಹುವಾಗಿ ನೊಂದಿದ್ದರು; ಈ ಕ್ರೌರ್ಯವನ್ನು ಖಂಡಿಸಿದ್ದರು. ಅದೇ ರೀತಿಯಲ್ಲಿ ಬಿಜ್ಜಳ ಮಹಾರಾಜರ ಹತ್ಯೆಯನ್ನೂ ಬಸವಣ್ಣನವರು ಖಂಡಿಸುತ್ತಿದ್ದರು ಹಾಗೂ ನೋಯುತ್ತಿದ್ದರು ಎಂಬುದು ನನ್ನ ನಂಬಿಕೆ. ಈ ನಂಬಿಕೆಗೆ ಬಸವಣ್ಣನವರ ವಚನಗಳ ಆಧಾರದಿಂದ ನಾನು ರೂಪಿಸಿಕೊಂಡಿರುವ ಬಸವಣ್ಣನವರ ವ್ಯಕ್ತಿತ್ವವೇ ಆಧಾರ. ಧರ್ಮಪ್ರಚಾರದ ಉದ್ದೇಶ ಮೇಲುಗೈ ಪಡೆದು ಹರಿಹರ ಸೃಷ್ಟಿಸಿರುವ ಬಸವಣ್ಣನವರ ವ್ಯಕ್ತಿತ್ವವನ್ನೇ ನಾವು ಅಧಿಕೃತವೆಂದು ಪರಿಗಣಿಸಿದರೆ, ವಚನಗಳ ಮೂಲಕ ನಾವು ರೂಪಿಸಿಕೊಳ್ಳಬಯಸುವ ಉದಾರವಾದಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ.

ಯಾಕೆಂದರೆ, ‘ಕಲ್ಯಾಣ’ದ ರೂಪಕ ‘ನಾನು ಬಂದ ಕಾರ್ಯಕೆ ನೀವೂ’ ಬರುವ ಕ್ರಿಯೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಇಲ್ಲಿ ಎಲ್ಲರ ದನಿಯನ್ನೂ, ಆರೋಗ್ಯಕರ ಭಿನ್ನಮತೀಯ ದನಿಗಳನ್ನು ಕೇಳಿಸಿಕೊಳ್ಳುವ ಗುಣವಿದೆ. ದುಡಿಯುವ ಜನರಿಗೆ ಮಾನ್ಯತೆಯಿದೆ. ನಿತ್ಯಸಂವಾದವಿದೆ. ನ್ಯಾಯ ದೊರಕಿಸುವ ಹೋರಾಟವಿದೆ. ದುರಹಂಕಾರದಿಂದ ದೂರವಾದ, ಸ್ವಪರೀಕ್ಷೆಯಿಂದ ರೂಪುಗೊಂಡ ಭಾಷೆಯಿದೆ... ಇಂಥ ಹಲವು ಸಂದೇಶಗಳು ವಚನಗಳಿಂದ ಹುಟ್ಟುತ್ತವೆ. ಇವತ್ತು ನಮ್ಮ ಸಂಸ್ಕೃತಿ, ರಾಜಕಾರಣ, ಮಾಧ್ಯಮ ಹಾಗೂ ಸಾರ್ವಜನಿಕ ಜೀವನದಲ್ಲಿ ಭಾಷೆಯ ಬಳಕೆ ಕುರಿತಂತೆ ವಚನಕಾರರ ನೈತಿಕ ಎಚ್ಚರ ಬಹುತೇಕ ಮಾಯವಾಗಿದೆ. ಮಹತ್ತರವಾದ ಒಂದು ಕಾರಣಕ್ಕೋ, ಕಾರ್ಯಕ್ಕೋ ಒಟ್ಟಾದ ಕಾಳಜಿಯ ಜನರಲ್ಲಿ ಕೂಡ ವಚನಗಳು ಹೇಳಿಕೊಟ್ಟ ಸ್ವಪರೀಕ್ಷೆಯ ಭಾಷೆ ಮಾಯವಾಗುತ್ತಿದೆ. ಎಲ್ಲ ವಲಯಗಳಲ್ಲಿನ ಸಾರ್ವಜನಿಕ ನಾಲಗೆಗಳ ರೋಗಗಳಿಗೆ ಸ್ವಪರೀಕ್ಷೆಯಿಲ್ಲದ ಅನೈತಿಕ ಭಾಷೆಯನ್ನು ಬಳಸುತ್ತಿರುವುದೇ ಮುಖ್ಯ ಕಾರಣವಾಗಿದೆ. ಆ ಕಾರಣಕ್ಕಾಗಿ ನಾವು ವಚನಗಳ ಭಾಷೆ, ಪರಿಭಾಷೆಗಳನ್ನು ಸೂಕ್ಷ್ಮವಾಗಿ ಧ್ಯಾನಿಸುತ್ತಲೇ ಇರಬೇಕಾಗುತ್ತದೆ.

ಕಳೆದ ಇನ್ನೂರು ವರ್ಷಗಳಲ್ಲಿ ಸಮಾನತೆಯ ಹಂಬಲದಿಂದ ಸೃಷ್ಟಿಯಾದ ಅನೇಕ ಬಗೆಯ ಫಿಲಾಸಫಿಗಳು ಹಾಗೂ ಸಿದ್ಧಾಂತಗಳ ಜೊತೆಗೆ ಕಲ್ಯಾಣದ ಕನಸು ಗಾಢವಾಗಿ ಬೆಸೆದುಕೊಳ್ಳುವ ಅಗತ್ಯವಿದೆ. ಮಾರ್ಕ್ಸ್ವಾದ, ವಿಚಾರವಾದ, ಸಮಾಜವಾದ, ಗಾಂಧೀವಾದ, ಅಂಬೇಡ್ಕರ್ವಾದ, ದಲಿತವಾದ, ಸ್ತ್ರೀವಾದ, ಜಾತ್ಯತೀತವಾದಗಳು ಸಮಾನತೆಯ ಕನಸುಗಳನ್ನು ವಿವರಿಸುವ, ವಿಸ್ತರಿಸುವ ಹಾಗೂ ಸಾಕಾರಗೊಳಿಸುವ ಕೆಲಸವನ್ನು ಈ ಕಾಲದಲ್ಲಿ ಮಾಡುತ್ತಿವೆ. ವಿಶಾಲ ದೃಷ್ಟಿಯಿಂದ ನೋಡಿದರೆ, ಈ ಮಾರ್ಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಮಾಣಿಕರೆಲ್ಲರೂ ‘ನಾನು ಬಂದ ಕಾರ್ಯಕೆ ನೀವು ಬಂದಿರಯ್ಯ’ ಎಂಬ ಆಶಯವನ್ನೇ ಧ್ವನಿಸುತ್ತಿರುತ್ತಾರೆ. ಈ ದೃಷ್ಟಿಯಿಂದ, ‘ಕಲ್ಯಾಣ’ದ ಕನಸನ್ನು ಚರ್ಚಿಸುವವರು ಈ ಕಾಲದ ಆಧುನಿಕ ತತ್ವಜ್ಞಾನ, ಸಿದ್ಧಾಂತಗಳ ಭಾಷೆ, ಪರಿಕಲ್ಪನೆ, ಮಾರ್ಗಗಳೊಂದಿಗೆ ಸಂವಾದಿಸುವ, ಬೆರೆಯುವ ಅಗತ್ಯವಿದೆ. ‘ಬಸವಣ್ಣನವರ ಕನಸು ಯಾಕೆ ಕುಸಿಯಿತು?’ ಎಂಬ ಪ್ರಶ್ನೆಗೆ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಕೊಟ್ಟ ಉತ್ತರ: ‘ಬಸವಣ್ಣನವರು ಎಲ್ಲವನ್ನೂ ಸಾಂಸ್ಕೃತಿಕವಾಗಿ ಬದಲಾವಣೆ ಮಾಡೋದಕ್ಕೆ ಪ್ರಯತ್ನ ಮಾಡಿದರು. ಆದರೆ ರಾಜ ಬಿಜ್ಜಳ ಅಲ್ಲೇ ಇದ್ದದ್ದರಿಂದ ಆರ್ಥಿಕ ಬದಲಾವಣೆ ಆಗ್ಲಿಲ್ಲ. ಆಸ್ತಿಯ ಪರಿಕಲ್ಪನೆಯಲ್ಲಿ ಬದಲಾವಣೆ ಆಗ್ಲಿಲ್ಲ. ಆದ್ದರಿಂದಲೇ ಬಸವಣ್ಣನವರ ಕನಸು ಕುಸಿಯಿತು.’

ಅಂದರೆ, ಕಲ್ಯಾಣದ ಕನಸು ಸಾಹಿತ್ಯಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹೀಗೆ ಎಲ್ಲ ಬಗೆಯ ಸಮಾನತೆಯ ಕನಸುಗಳನ್ನೂ ಒಳಗೊಳ್ಳಬೇಕಾಗುತ್ತದೆ. ವಚನ ಚಳವಳಿಯಂದಲೇ ಪ್ರೇರೇಪಿತವಾದ ‘ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ’ ಎಂಬ ಆಧುನಿಕ ವಚನದ ಆರಂಭದ ಧ್ವನಿ ಒಂದು ಮಹೋನ್ನತ ಉದ್ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಎಲ್ಲ ವಲಯಗಳಲ್ಲೂ ಮರುದನಿ ಪಡೆಯಬೇಕಾಗುತ್ತದೆ. ಆಗ ಮಾತ್ರ ಈ ವಚನದ ಕೊನೆಯ ಭಾಗದಲ್ಲಿರುವ ‘ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತು’ ಎಂಬ ಚಿತ್ರಗಳು ಹುಟ್ಟಿಸುವ ದುರಂತ, ದಿಗ್ಭ್ರಮೆಗಳನ್ನು ಹಿಮ್ಮೆಟ್ಟಿಸಬಹುದೇನೋ.

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ನಟರಾಜ್ ಹುಳಿಯಾರ್

contributor

Similar News