ಸಿತಾರ್ ರತ್ನ ರಹಿಮತ್ ಖಾನ್

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊನಕೆರೆ ಗ್ರಾಮದವರಾದ ನಂಜುಂಡೇಗೌಡ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಒಟ್ಟು 35 ವರ್ಷಗಳ ಅನುಭವ ಹೊಂದಿದ್ದಾರೆ. ಪತ್ರಕರ್ತನಾಗಿ ಮೈಸೂರಿನಲ್ಲಿ ವೃತ್ತಿ ಜೀವನ ಆರಂಭಿಸಿ ಬಳಿಕ ಧಾರವಾಡ, ಶಿವಮೊಗ್ಗ ದಾವಣಗೆರೆ, ಬೆಂಗಳೂರು ಮತ್ತು ದಿಲ್ಲಿಯಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ದಶಕಗಳಿಂದ ವಿವಿಧ ಬ್ಯೂರೋಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಧಾರವಾಡ ಜಿಲ್ಲೆಯ ಸತ್ತೂರು ಗ್ರಾಮದ ರೈತನ ಆತ್ಮಹತ್ಯೆಯಿಂದ ಆರಂಭಿಸಿ ಜಿ-20 ಸಮ್ಮೇಳನದವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಮಾಜಿ ಪ್ರಧಾನಿ ಮನಮೋಹನಸಿಂಗ್, ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರೊಂದಿಗೆ ಪಾಕಿಸ್ತಾನ, ಸೌದಿ ಅರೇಬಿಯಾ ದೇಶಗಳಿಗೆ ತೆರಳಿ ವರದಿ ಮಾಡಿದ್ದಾರೆ. ನೇಪಾಳ ಭೂಕಂಪದ ವರದಿಗಾರಿಕೆಗೂ ತೆರಳಿದ್ದ ನಂಜುಂಡೇಗೌಡ ಅವರು ಸದ್ಯ ಬಳ್ಳಾರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2023ನೇ ಸಾಲಿನ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಅವರಿಗೆ ಲಭಿಸಿದೆ.

Update: 2025-01-08 10:22 GMT

ಧಾರವಾಡ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ನಗರ. ಈ ನಗರದ ಯಾವುದೇ ಮೂಲೆಯಲ್ಲಿ ನಿಂತು ಕಲ್ಲೆಸೆದರೆ ಯಾವುದಾದರೂ ಸಾಹಿತಿಗಳು, ಕಲಾವಿದರು ಅಥವಾ ಸಂಗೀತಗಾರರ ಮನೆಯ ಮೇಲೆ ಬೀಳುತ್ತದೆ ಎನ್ನುವುದು ಹಳೆಯ ಮಾತು. ಅಂದರೆ, ಅಲ್ಲಿದ್ದಷ್ಟು, ಇರುವಷ್ಟು ಸಾಹಿತಿಗಳು, ಕಲಾವಿದರು, ಸಂಗೀತಗಾರರು ಬೇರಾವ ನಗರಗಳಲ್ಲೂ ಇಲ್ಲ ಎನ್ನುವುದೇ ಈ ಮಾತಿನ ಅರ್ಥ. ದ.ರಾ. ಬೇಂದ್ರೆ, ಚನ್ನವೀರ ಕಣವಿ, ಗುರುಲಿಂಗ ಕಾಪ್ಸೆ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್.ಆಮೂರ, ಗಿರಡ್ಡಿ ಗೋವಿಂದರಾಜ, ಎಂ.ಎಂ. ಕಲಬುರ್ಗಿ, ಗಿರೀಶ್ ಕಾರ್ನಾಡ್, ಚಂಪಾ ಎಲ್ಲರನ್ನೂ ಸಾಹಿತ್ಯಿಕವಾಗಿ ಹದಗೊಳಿಸಿದ್ದು ಈ ಮಣ್ಣು. ಸಂಗೀತ ಕ್ಷೇತ್ರವೂ ಇಲ್ಲಿ ಅಷ್ಟೇ ಶ್ರೀಮಂತ. ಇದನ್ನು ‘ಹಿಂದೂಸ್ತಾನಿ ಸಂಗೀತದ ಕೊನೆಯ ನಿಲ್ದಾಣ’ ಎಂದೂ ಹೇಳುವುದುಂಟು. ಹಳೇ ಮೈಸೂರು ಭಾಗ ‘ಕರ್ನಾಟಕ ಸಂಗೀತ’ಕ್ಕೆ ಹೆಸರುವಾಸಿ. ಈಚೀಚೆಗೆ ಹಿಂದೂಸ್ತಾನಿ ಸಂಗೀತವೂ ಬೆಳೆಯುತ್ತಿದೆ. ಆ ಮಾತು ಬೇರೆ. ‘ಕಿರಾಣ ಘರಾಣ’ ಖ್ಯಾತಿಗೆ ಹಿಂದೂಸ್ತಾನಿ ಗಾಯಕರಾದ ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಅವರ ಗುರುಗಳಾದ ಸವಾಯಿ ಗಂಧರ್ವರು, ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ, ಬಸವರಾಜ ರಾಜಗುರು, ಡಾ. ಮಲ್ಲಿಕಾರ್ಜುನ ಮನ್ಸೂರ, ಪಂ. ವೆಂಕಟೇಶ್ ಕುಮಾರ್ ಎಲ್ಲರೂ ಈ ನೆಲದಲ್ಲೇ ತಾಲೀಮು ಮಾಡಿದ್ದು.

ಹಿಂದೂಸ್ತಾನಿ ಗಾಯಕರಷ್ಟೇ ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಹಲವು ಗಾಯಕರಿಗಿಂತ ಮೊದಲೇ ರಹಿಮತ್ ಖಾನ್ ಧಾರವಾಡದಲ್ಲಿ ಸಿತಾರ್ ಕಂಪು ಹರಡಿದವರು. ಉತ್ತರ ಭಾರತದಿಂದ ಧಾರವಾಡಕ್ಕೆ ಬಂದವರು. ಇಲ್ಲೇ ನೆಲೆಸಿ ಭಾರತೀಯ ಸಂಗೀತ ವಿದ್ಯಾಲಯದ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದವರು. ಶಿಷ್ಯಂದಿರನ್ನು ಬೆಳೆಸಿದವರು. ಕರ್ನಾಟಕದ ಸಂಗೀತಗಾರರ ಬಗ್ಗೆ ಬರೆಯುವಾಗ ರಹಿಮತ್ ಖಾನ್ ಅವರನ್ನು ಕುರಿತು ಪ್ರಸ್ತಾಪಿಸದಿದ್ದರೆ ಬರವಣಿಗೆ ಅಪೂರ್ಣವಾಗುತ್ತದೆ.

 

ರಹಿಮತ್ ಖಾನ್ ಅವರ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಸಿತಾರ್ ವಾದನಕ್ಕೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಅಷ್ಟೇ ಅಲ್ಲ, ಅವರ ಪೂರ್ವಜರೂ ಸಂಗೀತ ಕ್ಷೇತ್ರದ ಮಹಾನ್ ಸಾಧಕರು. ಈ ಕುಟುಂಬದ ಎಂಟು ಮತ್ತು ಒಂಭತ್ತನೇ ತಲೆಮಾರಿನ ಕಲಾವಿದರು ಈಗ ಕಾರ್ಯಕ್ರಮ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಒಂಭತ್ತು ತಲೆಮಾರು ಸಾಗಿ ಬರುವುದು ಸಣ್ಣ ವಿಷಯವಲ್ಲ..

ಉಸ್ತಾದ್ ಬಾಲೆಖಾನ್ ಅವರ ಪುತ್ರ, ಆಕಾಶವಾಣಿ ‘ಎ ಗ್ರೇಡ್’ ಕಲಾವಿದ ಹಫೀಝ್ ಖಾನ್ ಹೇಳುವಂತೆ, ಉಸ್ತಾದ್ ಬಡೆ ಮುಹಮ್ಮದ್ ಖಾನ್ ಈ ಕುಟುಂಬದ (ಮೊದಲ ತಲೆಮಾರಿನ ಸಂಗೀತಗಾರ) ಹಿರಿಯ. ರಾಜಸ್ಥಾನದ ಮೂಲದವರಾದ ಮುಹಮ್ಮದ್ ಖಾನ್ ಹಿಂದೂಸ್ತಾನಿ ಗಾಯಕರಾಗಿದ್ದರು. ಇದರೊಟ್ಟಿಗೆ ರುದ್ರವೀಣೆಯನ್ನೂ (ಬೀನ್) ನುಡಿಸುತ್ತಿದ್ದರು. ಅವರ ಮಗ ದೌಲತ್ ಖಾನ್, ಮೊಮ್ಮಗ ಮದಾರ್ ಭಕ್ಷ್, ಮರಿಮಗ ಗುಲಾಂ ಹುಸೇನ್‌ಖಾನ್ ಎಲ್ಲರೂ ಹಿಂದೂಸ್ತಾನಿ ಗಾಯಕರು. ರುದ್ರವೀಣೆ ವಾದನವೂ ಅವರಿಗೆ ಕರಗತವಾಗಿತ್ತು. ಗುಲಾಂ ಹುಸೇನ್‌ಖಾನ್ ಮೆಹರ್‌ವಾಡ ಸಂಸ್ಥಾನದಲ್ಲಿ ಆಸ್ಥಾನ ಕಲಾವಿದರಾಗಿದ್ದರು. ಅವರು ಅಲ್ಲಿಂದ ಗುಜರಾತಿನ ಭಾವನಗರಕ್ಕೆ ಬಂದರು. ಅಲ್ಲೂ ಅವರಿಗೆ ರಾಜಾಶ್ರಯ ದೊರೆಯಿತು. ಮಧ್ಯಪ್ರದೇಶದ ಬಡೋದಾ ಸಂಸ್ಥಾನದಲ್ಲೂ ಗುಲಾಂ ಹುಸೇನ್ ಖಾನ್ ಕಾರ್ಯಕ್ರಮ ನೀಡುತ್ತಿದ್ದರು.

ಗುಲಾಂ ಹುಸೇನ್ ಖಾನ್ ಅವರ ಮೊದಲ ಮಗ ಉಸ್ತಾದ್ ಉಸ್ಮಾನ್ ಖಾನ್, ಎರಡನೇ ಮಗ ಉಸ್ತಾದ್ ರಹಿಮತ್ ಖಾನ್ ಅವರಿಗೂ ಗಾಯನ ಮತ್ತು ರುದ್ರವೀಣೆ ವಾದನ ತಂದೆಯಿಂದ ಬಳುವಳಿಯಾಗಿ ಬಂದಿತ್ತು. ಆದರೆ, ರಹಿಮತ್ ಖಾನ್ ಅವರಿಗೆ ಗಾಯನಕ್ಕಿಂತಲೂ ರುದ್ರವೀಣೆ ಕಡೆ ಹೆಚ್ಚಿನ ಒಲವಿತ್ತು. ಅವರು ತಮ್ಮ ಮನದಾಳದ ಇಂಗಿತವನ್ನು ತಂದೆಯ ಬಳಿ ಹೇಳಿಕೊಂಡರು. ಮಗನ ಇಷ್ಟಕ್ಕೆ ಅಪ್ಪ ಅಡ್ಡಿಯಾಗಲಿಲ್ಲ. ಗುಲಾಂ ಹುಸೇನ್ ಖಾನ್ ತಮ್ಮ ಮಗನಿಗೆ ಉಸ್ತಾದ್ ಹಬೀಬ್‌ಖಾನ್ ಅವರ ಬಳಿ ರುದ್ರವೀಣೆ ಪಾಠ ಹೇಳಿಸಿದರು. ಒಮ್ಮೆ ಬಡೋದಾ ಮಹಾರಾಜರು ಮಹಾನ್ ರುದ್ರವೀಣೆ ಕಲಾವಿದ ಬಂದೆ ಅಲಿಖಾನ್ ಅವರನ್ನು ಆಸ್ಥಾನಕ್ಕೆ ಆಹ್ವಾನಿಸಿದ್ದರು. ಅದೇ ಆಸ್ಥಾನದಲ್ಲಿ ಗುಲಾಂ ಹುಸೇನ್ ಖಾನ್ ಕಲಾವಿದರಾಗಿದ್ದರು. ತಮ್ಮ ಓರೆಗೆಯವರೇ ಆಗಿದ್ದ ಬಂದೆ ಅಲಿಖಾನ್ ಅವರ ಬಳಿ ತಮ್ಮ ಮಗನಿಗೆ ರುದ್ರವೀಣೆ ಕಲಿಸುವಂತೆ ಗುಲಾಂ ಹುಸೇನ್ ಖಾನ್ ಮನವಿ ಮಾಡಿದರು. ಶಿಶುನಾಳ ಶರೀಫರಂತೆ ಬಂದೆ ಅಲಿಖಾನ್ ಸಂತರು. ಹೇಳಿದಂತೆ ನಡೆಯುತ್ತಿದ್ದರು. ಒಳ್ಳೆಯದು, ಕೆಟ್ಟದನ್ನು ಮುಂಚಿತವಾಗಿಯೇ ಗ್ರಹಿಸುತ್ತಿದ್ದರಂತೆ. ರಾಜನ ಮರ್ಜಿಗೆ ಬಿದ್ದು ಅವರು ಎಂದೂ ರುದ್ರವೀಣೆ ನುಡಿಸುತ್ತಿರಲಿಲ್ಲ. ಅವರಿಗೆ ಮನಸ್ಸು ಬಂದಾಗ ಮಾತ್ರ ನುಡಿಸುತ್ತಿದ್ದರಂತೆ. ಬಳಿಕ ಬಂದೆ ಅಲಿಖಾನ್ ಅವರ ಬಳಿ ರಹಿಮತ್ ಖಾನ್ ರುದ್ರವೀಣೆ ತಾಲೀಮು ನಡೆಯಿತು.

ರಹಿಮತ್ ಖಾನ್ ಅವರಿಗೆ ಬಂದೆ ಅಲಿಖಾನ್, ‘ನೀನು ರುದ್ರವೀಣೆ ನುಡಿಸಿ ಹಣ ಗಳಿಸಬೇಡ. ದೇವರ ಕಾರ್ಯಗಳಿಗೆ ಮಾತ್ರ ಇದನ್ನು ಮೀಸಲಿಡು’ ಎಂದು ತಾಕೀತು ಮಾಡಿದರಂತೆ. ಗುರುಗಳ ಮಾತಿನಂತೆ ರಹಿಮತ್ ಖಾನ್ ನಡೆದುಕೊಂಡರು. ಇದರಿಂದ ಆರ್ಥಿಕ ಸಂಕಷ್ಟಕ್ಕೂ ಸಿಕ್ಕಿಕೊಂಡರು. ಶಿಷ್ಯನ ಸಂಕಷ್ಟ ಅರ್ಥ ಮಾಡಿಕೊಂಡ ಬಂದೆ ಅಲಿಖಾನ್, ‘ಹೊಟ್ಟೆ ಪಾಡಿಗೆ ಸಿತಾರ್ ನುಡಿಸು’ ಎಂದು ಸಲಹೆ ಮಾಡಿದರಂತೆ. ಅಲ್ಲಿಂದ ರಹಿಮತ್ ಖಾನ್ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು. ಮುಂದೆ ತಮ್ಮ ಸೋದರ ಮಾವ ನಬೀಬ್ ಖಾನ್ ಅವರ ಬಳಿ ಸಿತಾರ್ ಅಭ್ಯಾಸ ಮಾಡಿದರು.

ರುದ್ರವೀಣೆಯಲ್ಲಿ ಸಂತೃಪ್ತಿ ಕಂಡುಕೊಂಡಿದ್ದ ರಹಿಮತ್ ಖಾನ್ ಅವರಿಗೆ ಸಿತಾರ್ ಖುಷಿ ಕೊಡಲಿಲ್ಲ. ರುದ್ರವೀಣೆ ಬಿಟ್ಟು ಸಿತಾರ್ ಹಿಡಿಯಲು ಅವರ ಕೈಗಳು ಒಪ್ಪಲಿಲ್ಲ. ಐದಾರು ತಿಂಗಳ ಬಳಿಕ ಗುರು ಅಲಿಖಾನ್ ಅವರನ್ನು ಭೇಟಿಯಾದ ರಹಿಮತ್ ಖಾನ್, ‘ನಾನು ಭಿಕ್ಷೆ ಬೇಡಿ ಬದುಕುತ್ತೇನೆ. ಆದರೆ, ಸಿತಾರ್ ನುಡಿಸಲಾರೆ. ಸಿತಾರ್ ಪರಿಪೂರ್ಣ ವಾದ್ಯವಲ್ಲ. ಇದು ನನಗೆ ಇಷ್ಟವಾಗುತ್ತಿಲ್ಲ’ ಎಂದು ಸಿತಾರ್ ವಾಪಸ್ ಕೊಟ್ಟರಂತೆ. ಅದಕ್ಕೆ ಗುರುಗಳು, ‘ನಿನಗೆ ಸಿತಾರ್ ಅನ್ನು ಪರಿಪೂರ್ಣ ವಾದ್ಯವಾಗಿಸುವ ಸಾಮರ್ಥ್ಯವಿದೆ. ಅದನ್ನು ಮಾಡು’ ಎಂದು ಹೇಳಿದರಂತೆ. ಅದರಂತೆ, ರಹಿಮತ್ ಖಾನ್ ಸಿತಾರ್ ಅನ್ನು ಪರಿಪೂರ್ಣ ವಾದ್ಯವಾಗಿ ಮಾರ್ಪಡಿಸಿದರು. ಸಿತಾರ್‌ನಲ್ಲಿ ಮೂರು ಸಪ್ತಕ್ ಮಾತ್ರ ಇದ್ದವು. ರುದ್ರವೀಣೆಯ ಎರಡು ದಪ್ಪ ತಂತಿಗಳನ್ನು ಸಿತಾರ್ ಗೆ ಅಳವಡಿಸಿದರು. ಇದರಿಂದ ‘ಲೋವರ್ ಸಪ್ತಕ್’ ಹಿಡಿಯಲು ಸಾಧ್ಯವಾಯಿತು. ಹೊಸ ಪ್ರಯೋಗ ಸಫಲವಾಯಿತು. ಅಲ್ಲಿಂದಾಚೆ ಸಿತಾರ್ ವಾದನವೇ ಖಾನ್ ಅವರ ಕಾಯಕವಾಯಿತು. ಆನಂತರದ ತಲೆಮಾರಿನವರೂ ರಹಿಮತ್ ಖಾನ್ ಅವರ ಹಾದಿಯನ್ನೇ ತುಳಿದರು.

 

 

ರಹಿಮತ್‌ಖಾನ್ ಅವರಿಗೆ ನಾಲ್ವರು ಗಂಡು ಮಕ್ಕಳು. ಅವರಲ್ಲಿ ಉಸ್ತಾದ್ ಅಬ್ದುಲ್ ಕರೀಂ ಖಾನ್, ಉಸ್ತಾದ್ ಗುಲಾಂ ಖಾದಿರ್ ಖಾನ್ ಮತ್ತು ಉಸ್ತಾದ್ ಗುಲಾಂ ದಸ್ತಗೀರ್ ಖಾನ್ ಸಿತಾರ್ ನುಡಿಸುತ್ತಿದ್ದರು. ಒಬ್ಬರು ಮಾತ್ರ ಇದರಿಂದ ದೂರ ಉಳಿದಿದ್ದರು. ಅಬ್ದುಲ್ ಕರೀಂ ಖಾನ್ ಅವರ ಒಂಭತ್ತು ಗಂಡು ಮಕ್ಕಳಲ್ಲಿ ಉಸ್ತಾದ್ ಉಸ್ಮಾನ್ ಖಾನ್, ಉಸ್ತಾದ್ ಬಾಲೆಖಾನ್, ಮೆಹಬೂಬ್ ಖಾನ್, ಹಮೀದ್‌ಖಾನ್, ಛೋಟೆ ರಹಿಮತ್‌ಖಾನ್, ಶಫೀಕ್‌ಖಾನ್, ರಫೀಕ್ ಖಾನ್ ಸಿತಾರ್ ವಾದಕರು. ಮೆಹಮೂದ್ ಖಾನ್ ಮತ್ತು ನಝೀರ್ ಖಾನ್ ಮಾತ್ರ ತಮ್ಮ ತಂದೆಯನ್ನು ಹಿಂಬಾಲಿಸಲಿಲ್ಲ.

ಉಸ್ತಾದ್ ಹಮೀದ್ ಖಾನ್ ಅವರ ಮಗ ಮುಹಿಸಿನ್ ಖಾನ್, ಬಾಲೆಖಾನ್ ಅವರ ಇಬ್ಬರು ಮಕ್ಕಳಾದ ರೈಸ್ ಖಾನ್ ಮತ್ತು ಹಫೀಝ್ ಖಾನ್ ಸಿತಾರ್ ವಾದಕರು. ರೈಸ್ ಖಾನ್ ಮತ್ತು ಹಫೀಝ್ ಖಾನ್ ಆಕಾಶವಾಣಿ ಎ ಗ್ರೇಡ್ ಕಲಾವಿದರು. 2007ರಲ್ಲಿ ಬಾಲೆಖಾನ್ ತೀರಿಕೊಂಡರು. ಈಗವರ ಸೋದರರು, ಮಕ್ಕಳು ಹಾಗೂ ಮೊಮ್ಮಕ್ಕಳು ಎಲ್ಲೆಡೆ ಸಿತಾರ್ ಕಂಪು ಹರಡುತ್ತಿದ್ದಾರೆ. ಹಫೀಝ್ ಖಾನ್ ಅವರ ಮಗ ಹಾರಿಸ್ ಖಾನ್ ಈ ಕುಟುಂಬದ ಒಂಭತ್ತನೇ ತಲೆಮಾರಿನ ಸಿತಾರ್ ಕಲಾವಿದ.

ರಹಿಮತ್ ಖಾನ್ ನೆನಪಿಗೆ ಸಂಗೀತೋತ್ಸವ

2004ರ ಡಿಸೆಂಬರ್ ತಿಂಗಳು. ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾ ಭವನದಲ್ಲಿ ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್ ಸ್ಮರಣಾರ್ಥ ಸುವರ್ಣ ಮಹೋತ್ಸವ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅದು ಐದು ದಿನಗಳ ಕಾರ್ಯಕ್ರಮ. ಖ್ಯಾತ ಗಾಯಕರಾದ ಪಂ. ಅಜಯ್ ಪೋಣಕರ್, ಅಶ್ವಿನಿ ಬಿಢೆ, ಹೆಸರಾಂತ ತಬಲಾ ಕಲಾವಿದ ಅನಿಂದೊ ಚಟರ್ಜಿ, ಪಿಟೀಲು ಕಲಾವಿದೆ ಎನ್. ರಾಜಂ ಅವರಂಥ ಹಿರಿಯ ಕಲಾವಿದರು, ರಾಜಂ ಅವರ ಪುತ್ರಿ, ಪಿಟೀಲು ವಾದಕಿ ಸಂಗೀತ ಶಂಕರ್ ಮತ್ತು ಅನಿಂದೊ ಅವರ ಪುತ್ರ, ತಬಲಾ ಕಲಾವಿದ ಅನುಬ್ರತೊ ಚಟರ್ಜಿ ಅವರಂಥ ಕಿರಿಯ ಕಲಾವಿದರು ಸೇರಿದಂತೆ ಹತ್ತಾರು ಕಲಾವಿದರು ಕಾರ್ಯಕ್ರಮ ಕೊಟ್ಟರು.

‘ಸಿತಾರ್ ರತ್ನ ಉಸ್ತಾದ್ ರಹಿಮತ್ ಖಾನ್ ಸಂಗೀತೋತ್ಸವ ಸಮಿತಿ’ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ರಹಿಮತ್ ಖಾನ್ ಅವರ ಮೊಮ್ಮಗ ದಿವಂಗತ ಉಸ್ತಾದ್ ಬಾಲೆಖಾನ್ ಸಿತಾರ್ (ಸೋಲೋ) ಕಚೇರಿ ನಡೆಸಿದರು. ಅವರಿಗೆ ಅನಿಂದೊ ಚಟರ್ಜಿ ತಬಲಾ ಸಾಥ್ ನೀಡಿದರು. ಚುಮುಚುಮು ಚಳಿಯಲ್ಲೂ ಕದಲದೆ ಕುಳಿತಿದ್ದ ಸಂಗೀತಾಸಕ್ತರು ವಾಹ್- ಭೇಷ್, ವಾಹ್- ಭೇಷ್ ಎಂದು ತಲೆದೂಗುತ್ತಾ ಮೈಮರೆತು ಸಂಗೀತ ಆಸ್ವಾದಿಸುತ್ತಿದ್ದರು. ಇಡೀ ಕಲಾಭವನ ಸಂಗೀತದ ಭಾವೋನ್ಮಾದದಲ್ಲಿ ತೇಲಾಡಿತ್ತು. ಅದೇ ವೇದಿಕೆಯಲ್ಲಿ ರಹಿಮತ್ ಖಾನ್ ಕುಟುಂಬ ಸದಸ್ಯರ ‘ಪಂಚ ಸಿತಾರ’ (ಐವರು ಕಲಾವಿದರು) ಮೊಳಗಿತು. ಹಮೀದ್‌ಖಾನ್, ಛೋಟೆ ರಹಿಮತ್‌ಖಾನ್, ರಫೀಕ್ ಖಾನ್, ಶಫೀಕ್‌ಖಾನ್, ರೈಸ್‌ಖಾನ್ ಅವರ ಬೆರಳುಗಳು ಸಿತಾರ್ ಮೇಲೆ ಲೀಲಾಜಾಲವಾಗಿ ಹರಿದಾಡಿ ಸಂಗೀತದ ರಸದೌತಣ ಉಣ ಬಡಿಸಿದವು.

 

ಕೈ ಬೀಸಿ ಕರೆದ ಧಾರವಾಡ...

ಬಾರೋ ಸಾಧನಕೇರಿಗೆ... ಮರಳಿ ನನ್ನೀ ಊರಿಗೆ... ಮಳೆಯು ಎಳೆಯುವ ತೇರಿಗೆ... ಎಂದು ಹಿರಿಯ ಕವಿ ಬೇಂದ್ರೆ ಬರೆದಿದ್ದಾರೆ. ಈ ಕವಿತೆ ಓದಿ ಬಹಳಷ್ಟು ಜನ ಧಾರವಾಡಕ್ಕೆ ಬಂದಿರಬಹುದು. ಧಾರವಾಡದ ವಾತಾವಾರಣವೇ ಅಂತಹದ್ದು. ಅನುಭವಿಸಿದರಿಗೆ ಮಾತ್ರ ಅದರ ಮಜಾ ಗೊತ್ತು. ಅಲ್ಲಿನ ವಾತಾವರಣಕ್ಕೆ ಮನಸೋತು ರಹಿಮತ್ ಖಾನ್ ಅವರೂ ಬಂದು ನೆಲೆಸಿದರು. ಖಾನ್ ಧಾರವಾಡಕ್ಕೆ ಬಂದಿದ್ದರ ಹಿಂದೆ ಒಂದು ಕಥೆಯೂ ಇದೆ.

ರಹಿಮತ್ ಖಾನ್ ಅವರಿಗೆ ‘ಸಿತಾರ್ ರತ್ನ’ ಬಿರುದು ಕೊಟ್ಟವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಒಡೆಯರ್ ಪ್ರತಿ ವರ್ಷ ರಹಿಮತ್ ಖಾನ್ ಅವರನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸುತ್ತಿದ್ದರು. ಮೈಸೂರು ಅರಮನೆಯಲ್ಲಿ ರಹಿಮತ್ ಖಾನ್ ಸಿತಾರ್ ನುಡಿಸುತ್ತಿದ್ದರು. ಅವರ ಸಿತಾರ್ ವಾದನಕ್ಕೆ ಮನಸೋತಿದ್ದ ಮಹಾರಾಜರು ‘ಸಿತಾರ್ ರತ್ನ’ ಬಿರುದು ನೀಡಿ ಗೌರವಿಸಿದರು. ಮೈಸೂರು ಸಂಸ್ಥಾನಕ್ಕೆ ಬರುತ್ತಿದ್ದ ರಹಿಮತ್‌ಖಾನ್ ರೈಲು ಬದಲಿಸಲು ಹುಬ್ಬಳ್ಳಿಯಲ್ಲಿ ಒಂದೂವರೆ ತಾಸು ಕಾಯುತ್ತಿದ್ದರು. ಆಗ ಅವರಿಗೆ ಪಕ್ಕದ ಧಾರವಾಡ ಪರಿಚಯವಾಯಿತು. ಅಲ್ಲಿನ ವಾತಾವರಣ ಹಿಡಿಸಿತು. 1901ರಲ್ಲಿ ಅವರು ಧಾರವಾಡಕ್ಕೆ ಬಂದು ನೆಲೆಸಿದರು. ಸಿತಾರ್‌ನಲ್ಲಿ ಹಿಂದೂಸ್ತಾನಿ ಸಂಗೀತ ಶೈಲಿಯನ್ನು ಧಾರವಾಡಕ್ಕೆ ಪರಿಚಯಿಸಿದವರೇ ರಹಿಮತ್‌ಖಾನ್. ಅವರದು ‘ಗ್ವಾಲಿಯರ್ ಘರಾಣ’. ಮುಂದೆ 2015ರಲ್ಲಿ ಅದು ‘ಧಾರವಾಡ ಘರಾಣ’ ಎಂದೇ ಹೆಸರಾಯಿತು. ಹೆಚ್ಚುಕಡಿಮೆ 125 ವರ್ಷ ಕಳೆದರೂ ಧಾರವಾಡದ ಜನ ರಹಿಮತ್ ಖಾನ್ ಅವರನ್ನು ಮರೆತಿಲ್ಲ. ಅವರ ಸಿತಾರ್ ಪರಂಪರೆ ಈಗಲೂ ಮುಂದುವರಿದಿದೆ.

ಎಲ್ಲೆಲ್ಲೂ ಸಂಗೀತವೇ??..

ಎಲ್ಲೆಲ್ಲೂ ಸಂಗೀತವೇ? ಎಂಬುದು ಕನ್ನಡ ಸಿನೆಮಾವೊಂದರ ಹಾಡು. ಈ ಹಾಡು ರಹಿಮತ್ ಖಾನ್ ಅವರ ಕುಟುಂಬಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಬಾಲೆಖಾನ್ ಅವರ ಸೋದರರು ಮತ್ತು ಮಕ್ಕಳು ಧಾರವಾಡ, ಬೆಂಗಳೂರು, ಮಂಗಳೂರು ಮಾತ್ರವಲ್ಲದೆ, ಗೋವಾ ಮತ್ತು ಪುಣೆಯಲ್ಲೂ ಸಿತಾರ್ ಕಂಪನ್ನು ಹರಡುತ್ತಿದ್ದಾರೆ. ಹಫೀಝ್ ಖಾನ್ ಬೆಂಗಳೂರಿನಲ್ಲಿ ‘ಉಸ್ತಾದ್ ಬಾಲೆಖಾನ್ ಸ್ಮಾರಕ ಪ್ರತಿಷ್ಠಾನ’ ಮಾಡಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ‘ಇನ್ಫೋಸಿಸ್ ಪ್ರತಿಷ್ಠಾನ’ದ ನೆರವಿನಿಂದ ಪ್ರತೀ ವರ್ಷ ಪ್ರಮುಖ ಸಂಗೀತ ಕಲಾವಿದರೊಬ್ಬರಿಗೆ ಬಾಲೆಖಾನ್ ಅವರ ಹೆಸರಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡುತ್ತಿದ್ದಾರೆ. ಪ್ರಶಸ್ತಿಯ ಮೌಲ್ಯ ಒಂದು ಲಕ್ಷ ರೂಪಾಯಿ. ಈ ಹಿಂದೆ ಸಿತಾರ್ ವಾದ್ಯ ತಯಾರಿಸುವ ಕಲಾವಿದ ಅಹಮದ್ ಸಾಬ್ ಅವರಿಗೆ ಪ್ರಶಸ್ತಿ ಕೊಡಲಾಗಿದೆ. ಈ ವರ್ಷ ಅಶ್ವಿನಿ ಬಿಢೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ಸಹ ಕಲಾವಿದರೊಬ್ಬರಿಗೂ ಪ್ರಶಸ್ತಿ ನೀಡುತ್ತಿದ್ದಾರೆ. ಜೀವಮಾನದ ಒಂದು ಭಾಗವನ್ನು ಸಂಗೀತಕ್ಕೆ ಮುಡಿಪಾಗಿಟ್ಟ ಸಿತಾರ್ ರತ್ನ ರಹಿಮತ್ ಖಾನ್ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಅವರಿಗೆ ಈ ಸಲದ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಮೊತ್ತ 25 ಸಾವಿರ ರೂಪಾಯಿ. ಸಂಗೀತ ಅಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಬ್ಬರಿಗೆ ವರ್ಷ ತಲಾ 12 ಸಾವಿರ ರೂಪಾಯಿ ಕೊಡುವ ಮಹತ್ವದ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿದೆ.

1932ರಲ್ಲಿ ಧಾರವಾಡದಲ್ಲಿ ರಹಿಮತ್ ಖಾನ್ ಅವರಿಂದ ಆರಂಭವಾದ ‘ಭಾರತೀಯ ಸಂಗೀತ ವಿದ್ಯಾಲಯ’ದ ಹೆಸರಿನಡಿ ಶಫೀಕ್ ಖಾನ್ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದೇ ರೀತಿ ಮಂಗಳೂರಿನಲ್ಲಿ ರಫೀಕ್ ಖಾನ್, ಗೋವಾದಲ್ಲಿ ಛೋಟೆ ರಹಿಮತ್ ಖಾನ್, ಪುಣೆಯಲ್ಲಿ ರೈಸ್ ಖಾನ್ ಸಂಗೀತ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಯಾರಿಗಾದರೂ ಆಸಕ್ತಿ ಇದ್ದರೆ ಅದಕ್ಕೆ ಸಿತಾರ್ ರತ್ನ ರಹಿಮತ್ ಖಾನ್ ಕುಟುಂಬವೇ ವಸ್ತು ವಿಷಯವಾಗುವುದರಲ್ಲಿ ಸಂದೇಹವಿಲ್ಲ.

ಸರ್ವ ಧರ್ಮ ಪ್ರತಿನಿಧಿಸುವ ಕುಟುಂಬ

‘ರಹಿಮತ್ ಖಾನ್ ಅವರ ಕುಟುಂಬ ಸರ್ವ ಧರ್ಮವನ್ನು ಪ್ರತಿನಿಧಿಸುತ್ತಿದೆ. ಜಾತ್ಯತೀತತೆ ಹೇಳದೆ, ಅದನ್ನು ಪಾಲಿಸಿಕೊಂಡು ಬರುತ್ತಿದೆ. ರಹಿಮತ್ ಖಾನ್ ಅವರ ಕುಟುಂಬದ ಕೆಲವು ಸದಸ್ಯರು ಹಿಂದೂ ಹಾಗೂ ಕ್ರಿಶ್ಚಿಯನ್ ಮಹಿಳೆಯರನ್ನು ಮದುವೆಯಾಗಿದ್ದಾರೆ’ ಎಂದು ಈ ಕುಟುಂಬದ ಜತೆ ಆತ್ಮೀಯವಾಗಿ ಒಡನಾಡುತ್ತಿರುವ ರಹಿಮತ್ ಖಾನ್ ಸಂಗೀತೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಹೇಳುವುದುಂಟು.

ರಾಘವೇಂದ್ರ ಆಯಿ ಮತ್ತು ರಹಿಮತ್ ಖಾನ್ ಕುಟುಂಬದ ನೆಂಟು 1970ರ ದಶಕದಲ್ಲಿ ಆರಂಭವಾಗಿದ್ದು. ಈ ಕುಟುಂಬದ ಸದಸ್ಯರನ್ನು ಮೊದಲ ಸಲ ಭೇಟಿಯಾದ ಸಂದರ್ಭವನ್ನು ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಆಯಿ ಒಮ್ಮೆ ಧಾರವಾಡದ ಮಾಳಮಡ್ಡಿಯಲ್ಲಿ ನಡೆದು ಹೋಗುವಾಗ ಸಿತಾರ್ ತರಂಗ ಕಿವಿಗೆ ಬಿತ್ತಂತೆ. ಅದನ್ನು ಹಿಂಬಾಲಿಸಿಕೊಂಡು ಹೋದಾಗ ಮನೆಯೊಂದರ ನೆಲ ಮಹಡಿ ಮತ್ತು ಅಟ್ಟದ ಮೇಲೆ ಇಬ್ಬರು ಕಲಾವಿದರು ಪ್ರತ್ಯೇಕವಾಗಿ ತಮ್ಮ ಶಿಷ್ಯಂದಿರಿಗೆ ಪಾಠ ಹೇಳಿಕೊಡುತ್ತಿದ್ದರಂತೆ. ಅಟ್ಟದ ಮೇಲೆ ಸಂಗೀತ ಹೇಳಿಕೊಡುತ್ತಿದ್ದ ಹಮೀದ್ ಖಾನ್ ಅವರನ್ನು ಪರಿಚಯ ಮಾಡಿಕೊಂಡರಂತೆ ರಾಘವೇಂದ್ರ ಆಯಿ. ಅಂದು ಆರಂಭವಾದ ಈ ಕುಟುಂಬದ ಜತೆಗಿನ ಅವರ ಸಂಬಂಧ ಇನ್ನೂ ಮುಂದುವರಿದಿದೆ. ವರ್ಷದಿಂದ ವರ್ಷಕ್ಕೆ ಸ್ನೇಹ ಬಲಗೊಳ್ಳುತ್ತಿದೆಯಂತೆ. ಹಬ್ಬಗಳಲ್ಲಿ ಅವರ ಮನೆಗೆ ಇವರು ಖಾಯಂ ಅತಿಥಿ. ಇವರಿಗೆ ಸಸ್ಯಾಹಾರವೂ ಖಾಯಂ.

‘ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಭೀಮಸೇನ ಜೋಷಿ 2011ರಲ್ಲಿ ನಿಧನರಾದಾಗ ತಮ್ಮ ಸಮಿತಿ ಎಂಟು ದಿನಗಳ ಕಾರ್ಯಕ್ರಮ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದೆ’ ಎಂದು ಆಯಿ ಸ್ಮರಿಸುತ್ತಾರೆ. ಭಾರತೀಯ ಸಂಗೀತ ವಿದ್ಯಾಲಯ ಮತ್ತು ರಹಿಮತ್ ಖಾನ್ ಸಂಗೀತೋತ್ಸವ ಸಮಿತಿ ಬ್ಯಾನರ್ ಅಡಿ ಧಾರವಾಡದಲ್ಲಿ ಸಂಗೀತ ಕ್ಷೇತ್ರದ ಅತಿರಥ- ಮಹಾರಥರು ಕಾರ್ಯಕ್ರಮ ಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ಹೊನಕೆರೆ ನಂಜುಂಡೇಗೌಡ

contributor

Similar News

ಒಳಗಣ್ಣು
ವೃತ್ತಾಂತ