ಜನಧ್ವನಿಯಾಗಿ ‘ವಾರ್ತಾಭಾರತಿ’

ಜನದನಿಯ ಸಾರಥಿ ‘ವಾರ್ತಾಭಾರತಿ’ 22ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಪತ್ರಿಕೆ ಇದುವರೆಗೆ ನಡೆದುಕೊಂಡು ಬಂದ ಹಾದಿ, ಅದರ ಜನಪರ ಕಾಳಜಿ, ಬದ್ಧತೆಯ ಬಗ್ಗೆ ನಾಡಿನ ಹಲವು ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Update: 2025-01-09 09:13 GMT

ಜನಧ್ವನಿಯಾಗಿ ‘ವಾರ್ತಾಭಾರತಿ’

ಡಾ.ಮಲ್ಲಿಕಾ ಘಂಟಿ

ವಿಶ್ರಾಂತ ಕುಲಪತಿ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಯ ಕುರಿತು ಪ್ರಜ್ಞಾವಂತ ಜನರ ಮಧ್ಯೆ ಚರ್ಚೆಗಳು ನಡೆಯುತ್ತಿವೆ. ಯಾವುದೇ ಮಾಧ್ಯಮವೆಂಬುದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗಿದೆ. ಹೀಗಾಗಿ ಕಾರ್ಯಾಂಗ, ಶಾಸಕಾಂಗಗಳು ಜನವಿರೋಧಿ ನಿಲುವನ್ನು ಹೊರಹಾಕಿದಾ ಗಲೆಲ್ಲ ಮಾಧ್ಯಮಗಳು ಅವುಗಳನ್ನು ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ ಎಂಬ ವಿಶ್ವಾಸ ಜನರಲ್ಲಿತ್ತು. ಹಾಗೆಯೇ ಮಾಧ್ಯಮಗಳು ನಿಷ್ಠುರವಾಗಿ ಜನಧ್ವನಿಯಾಗಿ ಕಾರ್ಯ ಮಾಡಿದ ಹಲವು ಪ್ರಸಂಗಗಳು ಇಂದಿಗೂ ಜನಮಾನಸದಲ್ಲುಳಿದಿವೆ. ಯಾಂತ್ರೀಕರಣದ ಬೆಳವಣಿಗೆಯಿಂದಾಗಿ ಮಾಧ್ಯಮಗಳು ಕಾಲಕ್ಕೆ ತಕ್ಕ ಹಾಗೆ ತನ್ನ ಬಾಹ್ಯ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಹಜ ಸಂಗತಿ. ಅದನ್ನು ಸಮಾಜವು ಒಪ್ಪಿದೆ. ಆದರೆ ಪ್ರಶ್ನೆಗಳಿರುವುದು ಅವುಗಳ ಧೋರಣೆಯ ಬಗ್ಗೆ. ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳು ಮಾಧ್ಯಮದ ಮೂಲ ಅಶಯ, ಆದರ್ಶಗಳಿಂದ ದೂರವಾಗಿರುವುದು ಅವು ತೆಗೆದುಕೊಳ್ಳುವ ನಿಲುವುಗಳಿಂದ ಅರ್ಥವಾಗುತ್ತದೆ. ಪತ್ರಿಕಾಧರ್ಮ, ಮಾಧ್ಯಮ ಧರ್ಮವೆಂಬುದು ಇಂದು ಕಣ್ಮರೆಯಾಗಿದೆ. ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಜ್ಞಾವಂತರು ಮಾಧ್ಯಮಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವರು. ಇಂತಹ ಹೊತ್ತಿನಲ್ಲಿ ಕರ್ನಾಟಕದಲ್ಲಿ ಬೆರಳೆಣಿಕೆಯ ಪತ್ರಿಕೆಗಳು ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ ಇನ್ನೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂಬುದಕ್ಕಾಗಿ ವಾರ್ತಾಭಾರತಿ ಪತ್ರಿಕೆಯನ್ನು ಗೌರವಿಸುತ್ತಿರುವರು ಮತ್ತು ನಂಬಿಕೆಯಿಂದ ಓದುತ್ತಿರುವರು.

ನಾನು ಗಮನಿಸಿದಂತೆ ಕರ್ನಾಟಕದ ದಿನಪತ್ರಿಕೆಗಳಾಗಲಿ, ವಾರಪತ್ರಿಕೆಗಳಾಗಲಿ (ಆನ್‌ಲೈನ್, ಆಫ್‌ಲೈನ್) ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಧರ್ಮವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂದು ನೋಡಿದರೆ ಖಂಡಿತವಾಗಿಯೂ ನಿರಾಶೆಯಾಗುತ್ತದೆ. ಅದರ ಮಧ್ಯದಲ್ಲಿಯೂ ಒಂದಿಷ್ಟು ಭರವಸೆಯನ್ನು ಉಳಿಸಿಕೊಂಡು ಅಚ್ಛೇ ದಿನಕ್ಕಾಗಿ ಕಾಯುವ ಆಸೆಯನ್ನು ‘ವಾರ್ತಾಭಾರತಿ’ಯಂತಹ ಪತ್ರಿಕೆ ಮೂಡಿಸುತ್ತಿದೆ. ಪ್ರಾರಂಭದಲ್ಲಿ ಸುತ್ತಮುತ್ತಲಿಗೆ ಸೀಮಿತವಾಗಿದ್ದ ಪತ್ರಿಕೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದುದ್ದಕ್ಕೂ ಕಾಣಿಸಿಕೊಂಡು ಓದುಗ ವರ್ಗದ ನಂಬಿಕೆಯನ್ನು ಉಳಿಸಿಕೊಂಡಿದೆ.

ಪತ್ರಿಕಾ ರಂಗವೂ ಉದ್ಯಮವಾಗಿ ಪರಿವರ್ತನೆಗೊಂಡಿರುವ ಹೊತ್ತಿನಲ್ಲಿ ‘ವಾರ್ತಾಭಾರತಿ’ ಸೈದ್ಧಾಂತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗುತ್ತಿರುವುದರಿಂದ ಪಟ್ಟಭದ್ರರಿಗೆ ನುಂಗಲಾರದ ತುತ್ತಾಗಿಯೂ ಪರಿಣಮಿಸಿದೆ. ಇಂದು ಎಲ್ಲ ಕ್ಷೇತ್ರಗಳು ಧರ್ಮ, ಜಾತಿ, ಸಂಪತ್ತಿನಾಧಾರದಲ್ಲಿ ವರ್ತಿಸುತ್ತಿರುವ ರೀತಿ ಆತಂಕಕಾರಿ ಬೆಳವಣಿಗೆಯೆನ್ನಬಹುದು. ಧರ್ಮ ನಿರಪೇಕ್ಷಿತ, ಜಾತ್ಯತೀತ, ವರ್ಗಹಿತಾಸಕ್ತಿಯನ್ನು ಮೀರಿ ಪತ್ರಿಕೆಯೊಂದನ್ನು ನಡೆಸುವುದು ಅತ್ಯಂತ ಪ್ರಯಾಸದ ಕೆಲಸ. ಅಂತಹ ಪ್ರಯಾಸದ ಕೆಲಸವನ್ನು ‘ವಾರ್ತಾಭಾರತಿ’ ಮಾಡುತ್ತಿದೆ. ಪತ್ರಿಕೆಯ ಹೆಸರಿನಲ್ಲಿಯೇ ಭಾರತಿ ಇರುವುದರಿಂದ ಆಕೆಯ ರಕ್ಷಣೆಯ ಹೊಣೆಗಾರಿಕೆ ವಾರ್ತೆಗಳ ಮೇಲಿರುತ್ತದೆ. ಶಾಂತಿಯ ತೋಟದಂತಿದ್ದ ಕರ್ನಾಟಕ, ಭಾರತದೊಳಗೆ ಇತ್ತೀಚಿನ ದಿನಗಳಲ್ಲಿ ಪ್ರಭುತ್ವದ ಸರ್ವಾಧಿಕಾರಿತನದ ಹಟಮಾರಿತನ ಮತ್ತು ಮತೀಯ ಶಕ್ತಿಗಳ ವಿಜೃಂಭಣೆಯಿಂದ ನಡೆದಿರುವ ಅನಾಹುತಗಳನ್ನು ಪತ್ರಿಕೆ ನಿರ್ಭಿಡೆಯಿಂದ ಪ್ರಕಟಿಸಿ ಸಾಮಾನ್ಯರಿಗೆ ಅರಿವು ಮೂಡಿಸಿದ್ದರ ಬಗ್ಗೆ ಹೆಮ್ಮೆಯಿದೆ.

ಮಾಧ್ಯಮ ಇಂದು ಎಡಬಲದಲ್ಲಿ ನಿಂತುಕೊಂಡು ಪ್ರಭುತ್ವವನ್ನು ಮುಖಾಮುಖಿಯಾಗುವ ಮಾರ್ಗದ ಮೇಲಿಂದ ಅದರ ಜನಪರತೆಯನ್ನು ಅಳೆಯಬಹುದಾಗಿದೆ. ಎಡದಲ್ಲಿರುವ ಬಲ, ಬಲದಲ್ಲಿರುವ ಎಡಗಳು, ಇದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ಹಲವು ಪ್ರಸಂಗಗಳು, ಘಟನೆಗಳನ್ನು ಪ್ರಕಟಿಸುವ ಪತ್ರಿಕೆಯ ಸಂಕಷ್ಟ ಎಂತಹದ್ದು ಎಂಬುದು ಕೂಡ ಗಮನಿಸಬೇಕಾದ ಸಂಗತಿಯೇ. ಪರಸ್ಪರ ಸ್ವಾರ್ಥಕ್ಕಾಗಿ ಪ್ರಭುತ್ವದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡದ್ದು ಅತ್ಯಂತ ಅಪಾಯಕಾರಿಯಾದ ಸಂಗತಿ. ಪತ್ರಿಕೆಯ ಸಂಪಾದಕ, ಮಾಲಕ ಎಡಬಲಗಳಾಚೆಗೆ ನಿಂತು ಸಮಾಜ, ರಾಜಕೀಯ, ದೇಶ ಭಾಷೆಗಳನ್ನು ಗಮನಿಸುವ ಜೀವಪರಧರ್ಮ ಮಾರ್ಗದಲ್ಲಿದ್ದರೆ ಮಾತ್ರ ಎಲ್ಲ ಮಿತಿಗಳ ಮಧ್ಯದಲ್ಲಿಯೂ ಜನಪರ ಧ್ವನಿಯಾಗಿ ಕಾರ್ಯ ಮಾಡಲು ಸಾಧ್ಯವೆಂಬುದನ್ನು ‘ವಾರ್ತಾಭಾರತಿ’ಯ ನೇತೃತ್ವ ವಹಿಸಿಕೊಂಡಿರುವ ಪ್ರಧಾನ ಸಂಪಾದಕರು ತೋರಿಸಿಕೊಟ್ಟಿರುವರು. ಕಳೆದ ಹತ್ತು ವರ್ಷದ ರಾಜಕೀಯ ವಿದ್ಯಮಾನಗಳು ದೇಶದೊಳಗೆ ಎಂತಹ ಭಯಾನಕತೆಯನ್ನು ಹುಟ್ಟುಹಾಕಿದ್ದವು ಎಂಬುದನ್ನು ಸವಿಸ್ತಾರವಾಗಿ ಜನರಿಗೆ ತಲುಪಿಸುವಲ್ಲಿ ‘ವಾರ್ತಾಭಾರತಿ’ ಮುಂಚೂಣಿಯಲ್ಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರೈತರ, ಮಹಿಳೆಯರ, ಕಾರ್ಮಿಕರ, ದಲಿತರ ಕುರಿತಂತೆ ರಾಜ್ಯ, ಕೇಂದ್ರ ಸರಕಾರಗಳು ತೆಗೆದುಕೊಂಡ ದಮನಕಾರಿ ಯೋಜನೆಗಳ ಕುರಿತು ಪತ್ರಿಕೆ ವಿರೋಧ ಪಕ್ಷದ ಧ್ವನಿಯಾಗಿ ಕೆಲಸ ಮಾಡಿರುವುದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುವೆ.

ಪತ್ರಿಕೆಯೊಳಗೆ ಜಾಗೃತ ಭಾರತದ ಹಲವು ಸ್ವರಗಳು ಮೇಳೈಸಿರುವ ಕಾರಣ ಪತ್ರಿಕೆ ಜಾತಿ ಧರ್ಮದ ಗಡಿ ಮೀರಿನಿಂತು ಕಾರ್ಯ ಮಾಡಲು ಸಾಧ್ಯವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ದೇಶ ಮತ್ತು ನಾಡಿನ ರಾಜಕೀಯ ವಿಷಯಗಳೊಂದಿಗೆ ಸಾಹಿತ್ಯಕ, ಸಾಂಸ್ಕೃತಿಕ ಸಂಗತಿಗಳಿಗೂ ಸ್ಥಳ ಮೀಸಲಿರುವುದರಿಂದ ಪತ್ರಿಕೆ ಎಲ್ಲ ವಲಯದ ಓದುಗರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿದೆ. ಪತ್ರಿಕೆಯ ಅತಿಮುಖ್ಯ ಸಂಗತಿ ಸಂಪಾದಕೀಯ ಮತ್ತು ಅಂಕಣ ಬರಹಗಳು. ಹಿರಿ-ಕಿರಿಯರು ಬರೆಯುವ ಅಂಕಣಗಳು ಸಾಮಾಜಿಕ ಮತ್ತು ರಾಜಕೀಯ ನಾಯಕರುಗಳು ಗಂಭೀರವಾಗಿ ಪರಿಗಣಿಸುವ ಹಲವಾರು ಸಂಗತಿಗಳನ್ನೂ ಒಳಗೊಂಡಿರುತ್ತವೆ. ಗುಹಾ, ಸನತ್‌ಕುಮಾರ್ ಬೆಳಗಲಿ, ರಾಜಶೇಖರ ಹತಗುಂದಿ, ನಿರಂಜನಾರಾಧ್ಯ, ನೆಲ್ಲುಕುಂಟೆ ವೆಂಕಟೇಶ ಮುಂತಾದವರು ಬರೆಯುವ ಅಂಕಣಗಳು ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಲೋಕದ ಮೇಲೆ ಬೆಳಕು ಚೆಲ್ಲುವಂತಿರುತ್ತದೆ. ಇಂದಿನ ದುರಿತ ಕಾಲದ ಕರ್ನಾಟಕದಲ್ಲಿಯ ರಾಜಕೀಯ ತಲ್ಲಣಗಳಿಗೆ ಸಾಂತ್ವನ ಮತ್ತು ಸಲಹೆ, ನೈತಿಕ ಬೆಂಬಲವನ್ನು ನೀಡುವ ಹಾಗೆ ಪತ್ರಿಕೆ ಹೊರಬರುತ್ತಿದೆ. ಕರ್ನಾಟಕದಲ್ಲಿ ಜನಬೆಂಬಲದೊಂದಿಗೆ ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ, ಅದರ ನಾಯಕರೊಂದಿಗೆ ಕೇಂದ್ರ ಸರಕಾರ ಮತ್ತು ರಾಜ್ಯದ ವಿರೋಧ ಪಕ್ಷದೊಳಗಿನವರೊಂದಿಗೆ ಆಳುವ ಪಕ್ಷದ ಜಾತಿವಾದಿ ಸ್ವಾರ್ಥಿಗಳು ಅಸಾಂವಿಧಾನಿಕ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಯಾವ ಪತ್ರಿಕೆಯಾಗಲಿ, ಚಾನೆಲ್‌ಗಳಾಗಲಿ ನಿಷ್ಠುರವಾಗಿ ವಾಸ್ತವತೆಯ ಕುರಿತು ಬರೆಯುತ್ತಿಲ್ಲ. ಆದರೆ ‘ವಾರ್ತಾಭಾರತಿ’ ಪ್ರಾರಂಭವಾದಾಗಿನಿಂದ ತನ್ನ ರಾಜಕೀಯ, ಸಾಮಾಜಿಕ ಬದ್ಧತೆಯನ್ನು ಸೈದ್ಧಾಂತಿಕವಾಗಿ ಪ್ರತಿಪಾದಿಸುತ್ತಿರುವ ಕಾರಣದಿಂದ ಪತ್ರಿಕೆ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿ ನಿಂತಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಕುರಿತು ಅತ್ಯಂತ ವೈಚಾರಿಕವಾಗಿ ಪತ್ರಿಕೆ ಸಮರ್ಥಿಸಿಕೊಂಡಿತ್ತು.

ಧಾರ್ಮಿಕ ತಳಹದಿಯ ಮೇಲೆ ದೇಶವೊಂದು ಸುಭದ್ರವಾಗಿ ನಿಂತ ಉದಾಹರಣೆ ಜಗತ್ತಿನಲ್ಲಿಯೇ ಇಲ್ಲವೆಂಬ ಸಂಗತಿಯನ್ನು ಸನಾತನವಾದಿಗಳಿಗೆ ಮನವರಿಕೆ ಮಾಡಿಕೊಡುವ ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಎಷ್ಟೋ ವಿಷಯಗಳು ಸಾಮಾಜಿಕ ಅರಿವನ್ನು ಮೂಡಿಸಿ ಘಟಿಸಬಹುದಾಗಿದ್ದ ಅನಾಹುತ ಗಳನ್ನು ತಪ್ಪಿಸಿವೆ. ಹಲಾಲ್ ಕಟ್, ಹಿಜಾಬ್‌ನಂತಹ ಸಂಗತಿಗಳ ಕುರಿತು ಪತ್ರಿಕೆ ನಡೆದುಕೊಂಡ ರೀತಿಯ ಸೂಕ್ಷ್ಮತೆಯನ್ನು ನೆನಪಿಸಿಕೊಳ್ಳುತ್ತಾ, ಜನಧ್ವನಿಯಾಗಿ ಪತ್ರಿಕೆ ಓದುಗರೊಂದಿಗಿರುವ ಕಾರಣಕ್ಕಾಗಿ ಪತ್ರಿಕೆ, ಅದರ ಎಲ್ಲ ಬರಹಗಾರರು, ಶಕ್ತಿದಾತ ರನ್ನು ಅಭಿನಂದಿಸುತ್ತೇನೆ. ಪ್ರಜಾಪ್ರಭುತ್ವದ ಶಕ್ತಿ ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟುವುದರ ಮೂಲಕ ದೇಶವನ್ನು ಮುನ್ನಡೆಸುವುದು. ಇಂತಹ ಮುನ್ನಡಿಗೆಯಲ್ಲಿ ಪತ್ರಿಕೆಯು ಹೆಜ್ಜೆ ಹಾಕಲಿ.

 

ಸಂಪಾದಕೀಯ ಪತ್ರಿಕೆಯ ಬಹುದೊಡ್ಡ ಶಕ್ತಿ

 ಶ್ರೀನಿವಾಸ ಕಾರ್ಕಳ

ಕುಂದಾಪುರ ತಾಲೂಕಿನ ಹಳ್ಳಿಮೂಲೆಯೊಂದರಲ್ಲಿ ಬಾಲ್ಯವನ್ನು ಕಳೆದ ನನಗೆ ‘ನವಭಾರತ’ ಪತ್ರಿಕೆಯ ಬಗ್ಗೆ ಕೇಳಿ ಮಾತ್ರ ಗೊತ್ತಿತ್ತು. ಆದರೆ ಅದು ಓದಲು ಸಿಗುತ್ತಿದ್ದುದು ಕಡಿಮೆ. ಮೊದಲು ಓದಲು ಸಿಕ್ಕ ದಿನಪತ್ರಿಕೆ ಮಣಿಪಾಲದಿಂದ ಹೊರಡುತ್ತಿದ್ದ ಉದಯವಾಣಿ.

ಉದಯವಾಣಿ ಪತ್ರಿಕೆ ಶುರುವಾಗಿ (1970) ಐದು ವರ್ಷಗಳಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಯಿತು. ತುರ್ತುಪರಿಸ್ಥಿತಿಯ ನಿರ್ಬಂಧದ ಕಾರಣ ನಿಲ್ಲಿಸಿದ ಸಂಪಾದಕೀಯವನ್ನು ಮತ್ತೆ ಅದು ಆರಂಭಿಸಲೇ ಇಲ್ಲ ಎಂಬುದು ಮುಂದೆ ತಿಳಿಯಿತು. ಹಾಗಾಗಿ ರಾಜಕೀಯ ಸಹಿತ ಸಮಕಾಲೀನ ಅಗುಹೋಗುಗಳ ಬಗ್ಗೆ ಪತ್ರಿಕೆಯ ಸಂಪಾದಕೀಯ ನಿಲುವು ಏನು ಎಂಬುದು ಓದುಗರಿಗೆ ಯಾವತ್ತೂ ತಿಳಿಯುವಂತಿರಲಿಲ್ಲ.

ಆದರೂ, ಅದರಲ್ಲಿನ ಜನತಾವಾಣಿ ಮತ್ತು ದೂರುಗಂಟೆ ಪರಿಣಾಮಕಾರಿಯಾಗಿದ್ದವು. ರವಿವಾರದ ಪುರವಣಿ ಕತೆ, ಕಾವ್ಯಗಳು ರಂಜನೆಯ ಜತೆಯಲ್ಲಿಯೇ ಬೌದ್ಧಿಕ ಬೆಳವಣಿಗೆಗೂ ಕಾರಣವಾಗುವಂತಿದ್ದವು. ಬೇರೆ ಪತ್ರಿಕೆಗಳು ಸಿಗದ ಕಾರಣ, ನಮಗೆ ಉದಯವಾಣಿಯೊಂದೇ ಹೊರ ಜಗತ್ತಿನ ಕಿಂಡಿಯಾಗಿತ್ತು. ಅದನ್ನು ಓದುತ್ತಾ, ಅದಕ್ಕೆ ಬರೆಯುತ್ತಾ ನಾವು ಬೆಳೆದೆವು.

ಇರುವ ಪತ್ರಿಕೆಗಳು ಒಂದು ಮಗ್ಗುಲಿನ ಕಥನವನ್ನು ಮಾತ್ರ ಓದುಗರ ಮುಂದಿಡುತ್ತಿದೆ, ಸ್ಥಾಪಿತ ಮೇಲ್ವರ್ಗದ ಪರವಾಗಿದೆ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವಲ್ಲಿ ವಿಫಲವಾಗುತ್ತಿದೆ, ತನ್ನ ಓದುಗರ ಆಲೋಚನಾಶಕ್ತಿಯನ್ನು ಸ್ಥಗಿತ ಸ್ಥಿತಿಯಲ್ಲಿರಿಸುತ್ತಿದೆ ಎಂಬ ಅನುಮಾನ ಬಲವಾಗತೊಡಗಿದಾಗ ಪರ್ಯಾಯ ಪತ್ರಿಕೆಯೊಂದು ತೀರಾ ಅಗತ್ಯವಿದೆ ಎಂದು ಬಲವಾಗಿ ಅನ್ನಿಸಲಾರಂಭಿಸಿತು.

ಇಂತಹ ಹೊತ್ತಿನಲ್ಲಿಯೇ ‘ಚಿಂತನೆಯ ಮಳೆ ಹರಿಸಿ, ಜನಶಕ್ತಿ ಬೆಳೆ ತೆಗೆವ’ ಕನಸಿನೊಂದಿಗೆ ‘ಮುಂಗಾರು’ ಪತ್ರಿಕೆ ವಡ್ಡರ್ಸೆ ರಘುರಾಮ ಶೆಟ್ಟರ ನೇತೃತ್ವದಲ್ಲಿ ಆರಂಭವಾಗಿ (1984) ನಾಡಿನಲ್ಲಿ ಹೊಸ ಸಂಚಲನವನ್ನು ಮೂಡಿಸಿತು. ಸತ್ಯ ಹೇಳುವಾಗ ಯಾವುದೇ ಮುಲಾಜಿಗೆ ಒಳಗಾಗದ ಮತ್ತು ಜನಸಾಮಾನ್ಯರ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಕಾರಣಕ್ಕೆ ಮುಂಗಾರು ಬಹಳ ಬೇಗ ಜನಪ್ರಿಯವಾಯಿತು.

ಎಷ್ಟು ಬೇಗ ಜನಪ್ರಿಯತೆಯ ಹಾದಿಯಲ್ಲಿ ಸಾಗಿತೋ, ಆರ್ಥಿಕ ಸಹಿತ ಅನೇಕ ಆಂತರಿಕ ಸವಾಲುಗಳನ್ನೂ ಅಷ್ಟೇ ಬೇಗ ಎದುರಿಸಬೇಕಾಗಿ ಬಂದು ಕೊನೆಗೊಮ್ಮೆ ಅದು ನಿಂತೇ ಹೋಯಿತು. ಆದರೆ ಅದು ತನ್ನ ಅಲ್ಪ ಆಯುಷ್ಯದಲ್ಲಿ ಮಾಡಿದ ಸಾಧನೆ ಮಾತ್ರ ಬಹಳ ದೊಡ್ಡದು. ಅನೇಕ ಪತ್ರಕರ್ತರು ಮುಂಗಾರುವಿನ ಮೂಲಕವೇ ಹುಟ್ಟಿ ಬೆಳೆದು, ಇಂದಿಗೂ ನೈಜ ಪತ್ರಕರ್ತರು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತೆ ನಮ್ಮ ಮುಂದಿದ್ದಾರೆ.

ಕರಾವಳಿಯ ಬಗೆಗಿನ ಒಂದು ಭರವಸೆಯೆಂದರೆ, ಇಲ್ಲಿ ಜೀವವಿರೋಧಿ ಶಕ್ತಿಗಳು ಎಷ್ಟಿವೆಯೋ, ಅವನ್ನು ಎದುರಿಸಲು ಸಿದ್ಧವಾಗಿ ನಿಂತಿರುವ ಜೀವಪರ ಶಕ್ತಿಗಳೂ ಅಷ್ಟೇ ಇವೆ. ಜೀವವಿರೋಧಿ ಸಿದ್ಧಾಂತ ಪ್ರತಿಪಾದಿಸುವ ಕಲ್ಲಡ್ಕ ಪ್ರಭಾಕರ ಭಟ್ಟರು ಇರುವ ಹಾಗೆಯೇ ಜೀವಪರ ಸಿದ್ಧಾಂತಕ್ಕೆ ಜೀವನವನ್ನೇ ಮುಡಿಪಾಗಿರಿಸಿದ ಬಾಕ್ರಬೈಲು ಸುರೇಶ ಭಟ್ಟರೂ ಇಲ್ಲಿ ಇದ್ದಾರೆ. ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಪ್ರತಿಪಾದಿಸುವ ಪತ್ರಿಕೆಗಳು ಇರುವಂತೆಯೇ, ಇದಕ್ಕೆ ವಿರುದ್ಧವಾದ ಜೀವಪರ ವಿಚಾರಧಾರೆ ಪ್ರತಿಪಾದಿಸುವ ಮುಂಗಾರು, ಜನವಾಹಿನಿ, ವಾರ್ತಾಭಾರತಿ ಇದ್ದ/ಇರುವ ಪ್ರದೇಶ ಇದು.

ಕಳೆದ ಶತಮಾನದ ಕೊನೆಯ ದಶಕದ ಹೊತ್ತಿಗಾಗುವಾಗ ಮುದ್ರಣ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿ ಆರಂಭವಾಯಿತು. ಹೊಸ ತಂತ್ರಜ್ಞಾನವು ಪತ್ರಿಕೆಯ ವಿನ್ಯಾಸದ ಕೆಲಸವನ್ನು ಸುಲಭ, ಸುಂದರ ಮತ್ತು ಅಚ್ಚುಕಟ್ಟಾಗಿಸಿತು. ಪರಿಣಾಮವಾಗಿ ಪತ್ರಿಕೆಗಳ ಸಂಖ್ಯೆಯೂ ಏರತೊಡಗಿತು. ಪೈಪೋಟಿ ಅಧಿಕವಾಯಿತು. ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಈ ಎಲ್ಲ ಗಾಯದ ಮೇಲೆ ಬರೆ ಎಳೆಯುವಂತೆ, ಬೇರೆ ಕ್ಷೇತ್ರಗಳಲ್ಲಿ ಹೇರಳ ಹಣ ಸಂಪಾದಿಸಿದ ವ್ಯಾಪಾರಿಗಳೂ ಪತ್ರಿಕೆ ಶುರು ಮಾಡಿ ಒಂದು ರೂಪಾಯಿಗೆ ಪತ್ರಿಕೆ ಮಾರ ತೊಡಗಿದರು. ಪರಿಸ್ಥಿತಿ ಹೀಗಿರುವಾಗ ಆರ್ಥಿಕ ಶಕ್ತಿ ಇಲ್ಲದ ಪತ್ರಿಕೆಗಳು ಹೇಗೆ ಬದುಕಿ ಉಳಿಯಬೇಕು?

ಇದೇ ಪರಿಸ್ಥಿತಿ ಮುಂಗಾರುವಿನ ನಂತರ ಹುಟ್ಟಿಕೊಂಡ ‘ಜನವಾಹಿನಿ’ಗೂ ಒದಗಿಬಂತು. ಮುಂಗಾರು ಸೃಷ್ಟಿಸಿದ ಶೂನ್ಯ ತುಂಬುವ ಹಾಗೆ ಉದಯಿಸಿದ ‘ಜನವಾಹಿನಿ’ (1998) ಮುಂಗಾರು ಹಾಕಿ ಕೊಟ್ಟ ದಾರಿಯಲ್ಲಿಯೇ ಚಿಂತನೆಯ ಮಳೆ ಸುರಿಸುವ, ಓದುಗರನ್ನು ವೈಚಾರಿಕತೆಯ ಹಾದಿಯಲ್ಲಿ ಕರೆಯೊಯ್ಯುವ ತೇರನ್ನು ಬಹುದೂರ ಎಳೆದು, ವಸ್ತುನಿಷ್ಠ ಪತ್ರಿಕೋದ್ಯಮದ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿ ಕಣ್ಮುಚ್ಚಿತು.

ಮುಂಗಾರುವಿನ ಆನಂತರ ಜನವಾಹಿನಿಯೂ ಮರೆಯಾದಾಗ ಹೊಸ ಆಶಾಕಿರಣದಂತೆ ಉದಯಿಸಿದ್ದು ‘ವಾರ್ತಾಭಾರತಿ’ (2003). ಹಾಗೆ ನೋಡಿದರೆ ‘ವಾರ್ತಾಭಾರತಿ’ ಉದಯಿಸಿದ್ದು ಮುದ್ರಣ ಮಾಧ್ಯಮದ ಮಟ್ಟಿಗೆ ಅಸಾಧಾರಣ ಆರ್ಥಿಕ ಸವಾಲು ಆರಂಭವಾಗುತ್ತಿದ್ದ, ಜತೆಗೆ ಕೋಮುವಾದಿ ರಾಜಕಾರಣವು ದೇಶದ ಮೇಲೆ ಹಿಡಿತ ಬಲಗೊಳಿಸುತ್ತಿದ್ದ ಕಾಲಘಟ್ಟದಲ್ಲಿ.

ದೇಶದಲ್ಲಿ ಡಿಜಿಟಲ್ ಯುಗವೂ ಆರಂಭವಾಗಿತ್ತು. ಡಿಜಿಟಲ್ ಮಾಧ್ಯಮಗಳು ಮುದ್ರಣದ ಸುದ್ದಿಮಾಧ್ಯಮಗಳಿಗೆ ಮಾರಕ ಹೊಡೆತ ನೀಡಲು ಸಿದ್ಧವಾಗಿದ್ದವು. ಈ ಕ್ಷಣದ ಸುದ್ದಿ ಈಕ್ಷಣವೇ ಸಿಗುವ ಕಾಲದಲ್ಲಿ ಇಂದಿನ ಸುದ್ದಿ ನಾಳೆಗೆ ಯಾರಿಗೆ ಬೇಕು?

ಜನಪರವಾಗಿರಬೇಕೆಂಬ ಆದರ್ಶದ ಬೆನ್ನು ಹತ್ತಿದ ‘ವಾರ್ತಾಭಾರತಿ’ಯದ್ದೋ ಇತರ ಪತ್ರಿಕೆಗಳಿಗಿಲ್ಲದ ಬೇರೆಯದೇ ಸಮಸ್ಯೆ. ಮಾಲಕತ್ವದ ಕಾರಣವಾಗಿ ಅದಕ್ಕೆ ಮತೀಯ ಹಣೆಪಟ್ಟಿ. ಪತ್ರಿಕೆ ದಿಟ್ಟವಾಗಿರಬೇಕು ಎಂಬುದು ಒಂದು ಆದರ್ಶ. ಆದರೆ ಈ ದಿಟ್ಟತನವು ಪತ್ರಿಕೆಯನ್ನು ಮುಗಿಸುವ ಪರಿಸ್ಥಿತಿ ನಿರ್ಮಾಣವಾಗುವಷ್ಟು ದಿಟ್ಟವಾಗಿರಬಾರದು ಎಂಬ ವಾಸ್ತವವನ್ನು ಅರಿಯದ ಸೋಕಾಲ್ಡ್ ಕೆಲ ಪ್ರಗತಿಪರರು ಕೂಡಾ ‘ವಾರ್ತಾಭಾರತಿ’ಗೆ ಮತೀಯತೆಯ ಹಣೆಪಟ್ಟಿ ಕಟ್ಟಿ ಅದನ್ನು ದೂರ ಮಾಡಿದ್ದಿದೆ. ಅದು ಮುಸ್ಲಿಮ್ ಒಲವಿನ ಪತ್ರಿಕೆಯಾದರೆ ಅದನ್ನು ಮುಸ್ಲಿಮರಾದರೂ ಕೊಂಡು ಪ್ರೋತ್ಸಾಹಿಸಬೇಕಲ್ಲವೇ? ಆದರೆ ಆರ್ಥಿಕವಾಗಿ ಬಲಾಢ್ಯರಾಗಿದ್ದೂ ‘ವಾರ್ತಾಭಾರತಿ’ಯನ್ನು ಬೆಂಬಲಿಸದ ಅಸಂಖ್ಯ ಮುಸ್ಲಿಮರು ನನಗೆ ಗೊತ್ತು. ಸಾಮಾನ್ಯವಾಗಿ ಬೇರೆ ಪತ್ರಿಕೆಗಳು ಅನುಭವಿಸದ ಇಂತಹ ವಿಚಿತ್ರ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಲೂ ‘ವಾರ್ತಾಭಾರತಿ’ ಎರಡು ದಶಕಗಳನ್ನು ದಾಟಿ ಮುನ್ನಡೆಯುತ್ತಿದೆ ಎನ್ನುವುದನ್ನು ನಂಬಲೇ ಆಗುತ್ತಿಲ್ಲ.

‘ವಾರ್ತಾಭಾರತಿ’ಯಂತಹ ಪತ್ರಿಕೆಯ ಮಹತ್ವ ಏನು ಎನ್ನುವುದನ್ನು ತಿಳಿಯಬೇಕಿದ್ದರೆ ನಾಡಿನ ಇತರ ಪತ್ರಿಕೆಗಳತ್ತ ಒಮ್ಮೆ ಕಣ್ಣು ಹಾಯಿಸಬೇಕು. ಬಹುತೇಕ ಪತ್ರಿಕೆಗಳು ತಮ್ಮ ವೃತ್ತಿ ಧರ್ಮಕ್ಕೆ ಎಂದೋ ಎಳ್ಳು ನೀರು ಬಿಟ್ಟಿವೆ. ಸತ್ಯ ಹೇಳಲು ಹಿಂದೇಟು ಹಾಕುತ್ತಿವೆ. ಹಿಂದೆ ಒಂದು ಕಾಲದಲ್ಲಿ ಪತ್ರಿಕೆಗಳ ಸಂಪಾದಕೀಯ ಬರಹಕ್ಕೆ ವಿಶೇಷ ಮಹತ್ವ ಇತ್ತು. ಈಗ ನಾಡಿನ ಹೆಚ್ಚಿನ ಪತ್ರಿಕೆಗಳು ಸಂಪಾದಕೀಯವನ್ನು ಕಾಟಾಚಾರಕ್ಕಾಗಿಯಷ್ಟೇ ಬರೆಯುತ್ತಿವೆ. ಅಲ್ಲೂ ಯಾವುದೋ ಒಂದು ರಾಜಕೀಯ ಪಕ್ಷಕ್ಕೋ, ಸರಕಾರಕ್ಕೋ ಹೆದರಿಯೋ ಅಥವಾ ಅವನ್ನು ನೋಯಿಸಬಾರದೆಂದೋ ಅತ್ಯಂತ ಅಳುಕಿನಿಂದ ಬರೆದ ಸಂಪಾದಕೀಯದ ಮಾತುಗಳಿರುತ್ತವೆ.

‘ವಾರ್ತಾಭಾರತಿ’ಯ ಸಂಪಾದಕೀಯಗಳ ಬಗ್ಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಅನಂತ ಮೂರ್ತಿಯವರು ಮೆಚ್ಚಿ ನುಡಿದ ಮಾತುಗಳನ್ನು ಮರೆಯುವುದಾದರೂ ಹೇಗೆ ಸಾಧ್ಯ? ಈ ಸಂಪಾದಕೀಯಗಳು ನೇರವಂತಿಕೆ, ಅಪಾರ ಮಾಹಿತಿ, ಆಳ ವಿಶ್ಲೇಷಣೆಗಳಿಂದ ಸಂಗ್ರಹಯೋಗ್ಯ ಮೌಲಿಕ ಲೇಖನಗಳಿಂತಿರುತ್ತವೆ . ಈ ಅರ್ಥದಲ್ಲಿ ‘ವಾರ್ತಾಭಾರತಿ’ಯ ಸಂಪಾದಕೀಯ ಅದರ ಒಂದು ಬಹುದೊಡ್ಡ ಶಕ್ತಿ ಮತ್ತು ಪತ್ರಿಕೆಯನ್ನು ಇಷ್ಟಪಡಲು ಅದೊಂದೇ ಸಂಗತಿ ಸಾಕು.

ಪತ್ರಿಕೆಯೊಂದು ತನ್ನ ವೃತ್ತಿಧರ್ಮವನ್ನು ಪಾಲಿಸುತ್ತಿದೆಯೇ ಎಂದು ತಿಳಿಯಲು ಬಹಳ ಕಷ್ಟ ಪಡಬೇಕಿಲ್ಲ. ಸುಮ್ಮನೆ ಅದರ ಮುಖಪುಟದ ಮುಖ್ಯ ಸುದ್ದಿಯನ್ನು, ಆ ಸುದ್ದಿಯ ಶೀರ್ಷಿಕೆಯನ್ನು, ಸಂಪಾದಕೀಯ ಬರಹವನ್ನು ಮತ್ತು ಯಾವ ಸುದ್ದಿಯನ್ನು ಆರನೇ ಏಳನೇ ಪುಟದ ಮೂಲೆಗೆ ತಳ್ಳಿದೆ ಎನ್ನುವುದನ್ನು ನೋಡಿ. ಈ ವಿಷಯದಲ್ಲಿ ‘ವಾರ್ತಾಭಾರತಿ’ ಕನ್ನಡದ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿ ನಿಂತಿದೆ.

ಪತ್ರಿಕೆಯ ಎರಡು ಇಡೀ ಪುಟಗಳನ್ನು ಗಂಭೀರ ಲೇಖನಗಳಿಗಾಗಿ ಅದು ಮೀಸಲಿಟ್ಟಿದೆ. ಆದರೆ ಇಷ್ಟೊಂದು ಗಂಭೀರದ ಮತ್ತು ದೀರ್ಘ ಲೇಖನಗಳನ್ನು ಓದುವ ವ್ಯವಧಾನ ಈಗಿನ ಓದುಗರಿಗೆ ಇದೆಯೇ ಎನ್ನುವುದು, ಹಾಗೆಯೇ ಇತರ ಹೆಚ್ಚಿನ ಪತ್ರಿಕೆಗಳಂತೆ ‘ವಾರ್ತಾಭಾರತಿ’ಯೂ ಕತೆ, ಕಾವ್ಯದಂತಹ ಸಾಹಿತ್ಯ ವಿಚಾರಗಳನ್ನು ಕೈಬಿಟ್ಟಿರುವುದರಿಂದ ಎಳೆಯ ಬರೆಹಗಾರರಿಗೆ ಓದುವ ಬರೆಯುವ ಅವಕಾಶ ಇಲ್ಲದಂತಾಗಲಿಲ್ಲವೇ ಎನ್ನುವ ಪ್ರಶ್ನೆಗಳು ಬೇರೆಯೇ ಚರ್ಚೆಯ ವಿಷಯ.

ಇದು ಸರಕಾರದ ಆಮಿಷ ಮತ್ತು ಧಮಕಿಗೆ ದೊಡ್ಡ ದೊಡ್ಡ ಮಾಧ್ಯಮಗಳೇ ಮಂಡಿಯೂರಿ ಆಳುವವರ ಭಜನೆಯಲ್ಲಿ ತೊಡಗಿರುವ ಕಾಲ. ಸತ್ಯೋತ್ತರ ಯುಗದಲ್ಲಿ ಸತ್ಯ ಹೇಳುವುದು ಕಡು ಕಷ್ಟದ ಕೆಲಸ. ಇತ್ತೀಚೆಗೆ ಸಿಕ್ಕ ಕೇಂದ್ರ ಸರಕಾರದ ಅಧಿಕಾರಿಯೊಬ್ಬರಲ್ಲಿ ಅವರ ನಿತ್ಯದ ಕರ್ತವ್ಯಗಳ ಬಗ್ಗೆ ವಿಚಾರಿಸಿದೆ. ‘‘ಬೆಳಿಗ್ಗೆ ನಮ್ಮ ಮೊದಲ ಕೆಲಸ ‘ವಾರ್ತಾಭಾರತಿ’ಯಲ್ಲಿ ಏನು ಬಂದಿದೆ ಎಂಬ ಸಾರಾಂಶವನ್ನು ಕೇಂದ್ರ ಸರಕಾರಕ್ಕೆ ತಲಪಿಸುವುದು’’ ಎಂದು ಅವರು ಹೇಳಿದ್ದರು. ಆರ್ಥಿಕ ಸವಾಲುಗಳ ಜತೆಯಲ್ಲಿ, ಇಂತಹ ಸರಕಾರಿ ಕಣ್ಗಾವಲಿನ ನಡುವೆಯೂ ಕೆಲಸ ಮಾಡುತ್ತಾ, ವೃತ್ತಿಧರ್ಮ ಪಾಲಿಸುತ್ತಲೇ ಅಸ್ತಿತ್ವ ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ.

‘ವಾರ್ತಾಭಾರತಿ’ಯಂತಹ ಜನಪರ ಸುದ್ದಿ ಮಾಧ್ಯಮಗಳ ಮಹತ್ವ ಏನು, ಅವು ಯಾಕೆ ಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಸುಮ್ಮನೆ, ಅಂತಹ ಸುದ್ದಿ ಮಾಧ್ಯಮಗಳು ಇಲ್ಲದ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ.

ನಾಡಿನ ಸಾಕ್ಷಿಪ್ರಜ್ಞೆಯಾಗಿ ಸದಾ ನಮ್ಮ ಜೊತೆಗಿರಲಿ

ಬಿ. ಸುರೇಶ

ನಟ, ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ

ದಿನಪತ್ರಿಕೆಯೊಂದು ಹೊಸ ಶತಮಾನದಲ್ಲಿ ಆರಂಭವಾಗಿ ಇಪ್ಪತ್ತೆರಡನೇ ವಸಂತದವರೆಗೆ ಮುಟ್ಟುವುದೆಂದರೆ ಅದು ನಿಜಕ್ಕೂ ಕನ್ನಡದ ಓದುಗರೇ ಮಾಡಿದ ಪವಾಡ ಅನ್ನಬೇಕು. ಯಾಕೆಂದರೆ ಹೊಸ ಶತಮಾನದ ಆರಂಭದ ಹೊತ್ತಿಗೆ ಈ ದೇಶದಲ್ಲಿ ಜಾಗತೀಕರಣ ಯಾವ ವೇಗದಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಈ ಪ್ರಕ್ರಿಯೆಯು ಬಂಡವಾಳಶಾಹಿ ಪರವಾದುದು. ಹಾಗಾಗಿ ಹಲವು ಪತ್ರಿಕೆಗಳು ಬೃಹತ್ ಬಂಡವಾಳಿಗರಿಗೆ ಮಾರಾಟವಾಗಿದ್ದನ್ನು ಸಹ ಕಂಡಿದ್ದೇವೆ.

ಈ ಬಂಡವಾಳ ವ್ಯವಸ್ಥೆ ಮಾಧ್ಯಮವನ್ನು ಸಹ ಸರಕಾಗಿಸಿ, ಜಾಹೀರಾತಿಗೆ ಆದ್ಯತೆ ಕೊಟ್ಟು, ಮಾಧ್ಯಮಗಳ ಪ್ರಮುಖ ಕೆಲಸವಾದ ಸುದ್ದಿ ಎಂಬುದನ್ನು ನಗಣ್ಯವಾಗಿಸಿ, ರೋಚಕತೆಯನ್ನು ಹೂರಣ ಮಾಡಿದ್ದರ ಪರಿಣಾಮವನ್ನು ನಿತ್ಯ ನೋಡುತ್ತಲೇ ಇದ್ದೇವೆ. ಬಹುತೇಕ ರಾಷ್ಟ್ರೀಯ ಮಟ್ಟದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಆಳುವವರ ಆಣತಿಗೆ ಬಾಲವಾಡಿಸುತ್ತ ಬದುಕಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳು ನಾವು ನಮ್ಮ ಕೆಲಸ ಜವಾಬ್ದಾರಿಯಿಂದ ಮಾಡುತ್ತೇವೆ ಎಂದು ಎದೆ ಸೆಟೆಸಿ ನಿಂತಿವೆ. ಅಂತಹವುಗಳಲ್ಲಿ ‘ವಾರ್ತಾಭಾರತಿ’ ಸಹ ಒಂದು. 2003ರಲ್ಲಿ ಆರಂಭವಾಗಿ ಇಲ್ಲಿಯವರೆಗೆ ತನ್ನ ಸ್ವತಂತ್ರ ಚಿಂತನೆಯನ್ನು, ಮೊನಚಾದ ರಾಜಕೀಯ ವಿಶ್ಲೇಷಣೆಯನ್ನು, ಜೊತೆಗೆ ಸಮಕಾಲೀನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಗತ್ತಿನ ತಲ್ಲಣಗಳನ್ನು, ಎಲ್ಲ ವರ್ಗದ ಜನರ ಪ್ರಾತಿನಿಧ್ಯದ ಜೊತೆಗೆ ‘ವಾರ್ತಾಭಾರತಿ’ ಕಾಯ್ದಿಟ್ಟುಕೊಂಡಿದೆ. ಇದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

ಈ ವರೆಗಿನ ಪಯಣ ಒಂದು ಬಗೆಯಾದರೆ ಮುಂಬರುವ ದಿನಗಳು ಇನ್ನೂ ಕರಾಳವಾಗಬ ಹುದಾದ ಸಾಧ್ಯತೆ ಇದೆ. ಅಂತಹ ಎಲ್ಲಾ ಪ್ರಕ್ಷುಬ್ಧತೆಗಳ ನಡುವೆ ‘ವಾರ್ತಾಭಾರತಿ’ ಸೌಹಾರ್ದದ ಸೊಡರನ್ನು ಜೀವಂತವಾಗಿರಿಸಿ, ನಾಡಿನ ಸಾಕ್ಷಿಪ್ರಜ್ಞೆಯಾಗಿ ಸದಾ ನಮ್ಮ ಜೊತೆಗಿರಲಿ ಎಂದು ಹಾರೈಸುತ್ತೇನೆ.

ಶೋಷಿತ ವರ್ಗಗಳಿಗೆ ಸ್ಫೂರ್ತಿ

ಡಾ. ದಿಲೀಪ್ ನರಸಯ್ಯ ಎಂ.

ಸಂಶೋಧಕರು

ದು 2016ರ ಮೈಸೂರು ದಸರಾ ದಿನಗಳು. ರಾಜ್ಯ ಸರಕಾರ ಮೈಸೂರು ದಸರಾ ತಯಾರಿಯಲ್ಲಿದ್ದರೆ, ಮತ್ತೊಂದೆಡೆ ಮೈಸೂರಿನ ಪ್ರಗತಿಪರ ಸಂಗಾತಿಗಳು ಮಹಿಷ ದಸರಾ ಆಚರಿಸುವ ಉತ್ಸಾಹದಲ್ಲಿದ್ದರು. ದಲಿತ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ದಿವಂಗತ ಶಾಂತರಾಜು ಅವರ ಬಳಗ ಒಳಗೊಂಡಂತೆ ವಿವಿಧ ಚಿಂತಕರು ಮತ್ತು ಹೋರಾಟಗಾರರು ಮಹಿಷಾ ದಸರಾ ಆಚರಣೆ ಮತ್ತು ಅದರ ಪೂರ್ವ ಹಿನ್ನೆಲೆಯನ್ನು ಶ್ರೀಸಾಮಾನ್ಯರಿಗೆ ಮಾಧ್ಯಮಗಳ ಮೂಲಕ ತಿಳಿಸಲು ಒಂದಷ್ಟು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದರು. ಆದರೆ, ವಿಪರ್ಯಾಸವೇನೆಂದರೆ, ಇವರು ಎಷ್ಟೇ ಪತ್ರಿಕಾಗೋಷ್ಠಿಗಳಲ್ಲಿ ಸತ್ಯ ಮಂಡಿಸುತ್ತಿದ್ದರೂ ಬಹುತೇಕ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ದಿಗಳು ಮಾತ್ರ ಚಾಮುಂಡೇಶ್ವರಿ ತಾಯಿ ವಿರುದ್ಧ ಮಹಿಷಾ ದಸರಾ ಆಚರಿಸುತ್ತಿದ್ದಾರೆ ಎಂಬುದು ರಾಜ್ಯದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಅಪಪ್ರಚಾರವಾಗುತ್ತಿತ್ತು. ಆ ಸಂದರ್ಭದಲ್ಲಿ, ಪ್ರಗತಿಪರ ಚಿಂತಕರಾಗಿದ್ದ ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರುರವರು ಮಹಿಷಾಸುರನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ‘ಇತಿಹಾಸ ಸತ್ಯ ಪುರಾಣ ಮಿಥ್ಯೆ’ ಎಂಬ ಅತ್ಯದ್ಭುತ ಲೇಖನವೊಂದನ್ನು ಬರೆದು ಸುದ್ದಿಮನೆಗಳಿಗೆ ಕಳುಹಿಸಿದ್ದರು. ಆದರೆ, ಅವರು ಬರೆದಿದ್ದ ಲೇಖನ ಕೇವಲ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಮಾತ್ರ ಪ್ರಕಟಗೊಂಡಿತ್ತು. ಆ ದಿನ ಬೆಳಗ್ಗೆ ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರು ರವರು ನನಗೆ ಪೋನ್ ಕರೆ ಮಾಡಿ ‘‘ಗುಡ್ ಮಾರ್ನಿಂಗ್ ದಿಲೀಪ್.... ‘ವಾರ್ತಾಭಾರತಿ’ಯಲ್ಲಿ ಮಹಿಷಾಸುರನ ಲೇಖನ ಪ್ರಕಟವಾಗಿದೆ, ಓದಿದ್ರಾ?’’ ಎಂದು ಕೇಳಿದರು. ಅದಕ್ಕೆ, ನಾನು ‘‘ಹೌದು ಸರ್.. ‘ವಾರ್ತಾಭಾರತಿ’ಯವರು ಮಹಿಷಾಸುರನನ್ನು ಮಿಂಚಿಸುತ್ತಿದ್ದಾರೆ’’ ಎಂದು ನಗುನಗುತ್ತ ಉತ್ತರಿಸಿದೆ. ಅದಕ್ಕೆ ಗುರುಗಳು ‘‘ಮೂಲನಿವಾಸಿಗಳ ಅಸ್ಮಿತೆ ಮತ್ತು ನೈಜ ಇತಿಹಾಸವನ್ನು ಧೈರ್ಯವಾಗಿ ಪ್ರಕಟಿಸಲು ಎದೆಗಾರಿಕೆ ಬೇಕು. ಅದು ವಾರ್ತಾಭಾರತಿಗಿದೆ’’ ಎಂದು ಮನದುಂಬಿ ಪತ್ರಿಕೆಯ ಬದ್ಧತೆಯನ್ನು ಶ್ಲಾಘಿಸಿದರು. ‘‘ನೀವು ಮಹಿಷಾಸುರನ ಬಗ್ಗೆ ಒಂದು ಲೇಖನ ಬರೆದು ವಾರ್ತಾಭಾರತಿಗೆ ಮಾತ್ರ ಕಳುಹಿಸಿ’’ ಎಂದು ಹೇಳಿ ಫೋನ್‌ಕಾಲ್ ಕಟ್ ಮಾಡಿದರು. ‘ವಾರ್ತಾಭಾರತಿ’ ಕೃಪೆಯಿಂದ ಪ್ರೊ.ಗುರು ಅವರ ಲೇಖನ ಮಹಿಷಾಸುರ ಇತಿಹಾಸ ಪುರುಷ ಎಂಬುದು ಇಡೀ ರಾಜ್ಯ ತಲುಪಿತ್ತು. ಅಂದು ‘ವಾರ್ತಾಭಾರತಿ’ಯಲ್ಲಿ ಲೇಖನ ಓದಿದ ಎಷ್ಟೋ ಜನರು ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿ ಪ್ರೊ.ಗುರು ಅವರಿಗೆ ಅಭಿನಂದಿಸಿದರು. ಅಂದು ಮೈಸೂರಿನಲ್ಲಿ ‘ವಾರ್ತಾಭಾರತಿ’ ಪತ್ರಿಕೆಯ ಪ್ರತಿಗಳು ಮಧ್ಯಾಹ್ನದ ಹೊತ್ತಿಗೆ ಅಂಗಡಿ-ಮಳಿಗೆಗಳಲ್ಲಿ ಖಾಲಿಯಾಗಿತ್ತು. ಆದ್ದರಿಂದ ಲೇಖನವನ್ನು ಜೆರಾಕ್ಸ್ ಮಾಡಿಸಿ ‘ಮಹಿಷ ದಸರಾ’ ಕಾರ್ಯಕ್ರಮಗಳಲ್ಲಿ ಸಭಿಕರಿಗೆ ಹಂಚಲಾಗಿತ್ತು. ಪ್ರೊ.ಗುರು ಅವರು ಹೇಳಿದ ಹಾಗೆ ಮೂರ್ನಾಲ್ಕು ದಿನ ಬಿಟ್ಟು ನಾನು ಕಳುಹಿಸಿದ್ದ ಲೇಖವೂ ಪ್ರಕಟವಾಯಿತು. ಮಹಿಷಾಸುರನ ಕುರಿತು ‘ವಾರ್ತಾಭಾರತಿ’ ಪತ್ರಿಕೆಯು ರಾಜ್ಯದ ವಿವಿಧ ಲೇಖಕರು ಹಾಗೂ ಚಿಂತಕರು ಬರೆದ ಲೇಖನಗಳನ್ನು ಪ್ರಕಟಿಸಿದ ಪರಿಣಾಮವಾಗಿ ಮಹಿಷ ದಸರಾವನ್ನು 2017ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು ಆಚರಿಸಲು ಮುಂದಾಗಿದ್ದು ಮಾತ್ರ ಒಂದು ಇತಿಹಾಸ.

ಸಮಾಜದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಜನರ ಮುಂದಿಡುವುದು ಮಾತ್ರ ಪತ್ರಿಕೆಗಳ ಕೆಲಸವಲ್ಲ. ಬಹುಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭ್ಯುದಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿರುವುದು ಪತ್ರಿಕೆಗಳ ಜವಾಬ್ದಾರಿಯಾಗಿದೆ. ವೈದಿಕರ ಕುಯುಕ್ತಿಯಿಂದ ಸಾವಿರಾರು ವರ್ಷಗಳಿಂದ ಅಕ್ಷರವಂಚಿತರಾಗಿದ್ದ ಸಮುದಾಯಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಚಾರ-ವಿಚಾರ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ತೆಗೆದು-ಹೆಕ್ಕಿ ಪುನರ್ ವಿಶ್ಲೇಷಿಸುವ ತವಕದಲ್ಲಿರುವವರಿಗೆ ಪತ್ರಿಕೆಗಳು ಕಿವಿ, ಕಣ್ಣು ಮತ್ತು ಧ್ವನಿಯಾಗಬೇಕು. ಆದರೆ, ಇಂದಿನ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಯುಗದಲ್ಲಿ ಬಹುತೇಕ ಮಾಧ್ಯಮಗಳ ನಿಲುವುಗಳು ಅಸ್ಪಷ್ಟ ಹಾಗೂ ಪತ್ರಿಕಾ ಧರ್ಮವಂತೂ ಅಗೋಚರ. ಇಂತಹವರ ಮಧ್ಯೆ ‘ವಾರ್ತಾಭಾರತಿ’ ದಮನಿತ ಮತ್ತು ಶೋಷಿತರ ಪಾಲಿಗೆ ಬಹುಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ‘ಮಹಿಷ ದಸರಾ ಆಚರಣೆ’ ಒಳಗೊಂಡಂತೆ ನೂರಾರು ಉದಾಹರಣೆಗಳಿವೆ.

ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಯಥಾಸ್ಥಿತಿವಾದಿಗಳು ಮೊದಲಾದ ಜನವಿರೋಧಿ ಶಕ್ತಿಗಳ ಕಪಿಮುಷ್ಟಿಗೆ ಸಿಲುಕಿಕೊಂಡು ನರಳುತ್ತಿರುವ ಪತ್ರಿಕೆಗಳ ಮಧ್ಯೆ ವಾರ್ತಾಭಾರತಿ ಪತ್ರಿಕೆಯು ಜಾತ್ಯತೀತ ಮನೋಭಾವ, ಸಾಮಾಜಿಕ ಸೌಹಾರ್ದ, ಶೋಷಿತರ ಹಿತಾಸಕ್ತಿಯ ಹಂಬಲ, ಮಹಿಳಾ ಪರ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನಿಟ್ಟುಕೊಂಡು ಮುನ್ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾಡಿನ ನೆಲ, ಜಲ, ಭಾಷೆ, ನುಡಿ, ಸಾಹಿತ್ಯ, ಸಂಸ್ಕೃತಿ ಪ್ರವರ್ಧನೆಗೆ ತನ್ನದೇ ಆದ ಅಮೋಘ ಸೇವೆ ನೀಡುತ್ತಿದೆ. ದೇಶ ಹಾಗೂ ಪ್ರಚಲಿತ ಘಟನೆಗಳ ಕುರಿತು ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗುವ ನಿಷ್ಠುರ ಸಂಪಾದಕೀಯ, ಅಂಕಣಗಳು ಹಾಗೂ ವೈಚಾರಿಕ ಸುದ್ದಿ ವಿಶ್ಲೇಷಣೆಗಳು ಓದುಗರ ಮಿದುಳನ್ನು ಚುರುಕುಗೊಳಿಸುತ್ತಿದೆ.

ರಾಜ್ಯದೆಲ್ಲೆಡೆ ಜರುಗುತ್ತಿರುವ ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ, ವಿದ್ಯಾರ್ಥಿ ಚಳವಳಿ, ಪರಿಸರ ಚಳವಳಿ, ಮಹಿಳಾ ಚಳವಳಿ ಹೀಗೆ ಮೊದಲಾದ ಪ್ರಗತಿಪರ ಚಳವಳಿಗಳಿಗೆ ‘ವಾರ್ತಾಭಾರತಿ’ ಸ್ಫೂರ್ತಿ ಮತ್ತು ಚೈತನ್ಯ ತುಂಬುತ್ತಿದೆ. ಪತ್ರಿಕೆಯು ತನ್ನ ಅಪೂರ್ವ ಪತ್ರಿಕಾ ಧರ್ಮ, ವೈವಿಧ್ಯಮಯ ಬರಹಗಳು, ಧೀಮಂತ ವಿಶ್ಲೇಷಣೆ ಮತ್ತು ವಿಮರ್ಶೆಗಳು, ಶಿಸ್ತುಬದ್ಧ ತನಿಖಾ ವರದಿಗಳು, ಸೃಜನಶೀಲ ವಿನ್ಯಾಸ, ಪ್ರಯೋಗಗಳು ಹಾಗೂ ಜನನಿಷ್ಠ ಪತ್ರಿಕಾ ಕೃಷಿಯಿಂದಾಗಿ ತನ್ನದೇ ಆದ ಸ್ಥಾನಮಾನವನ್ನು ಕರ್ನಾಟಕ ಪತ್ರಿಕೋದ್ಯಮದಲ್ಲಿ ಉಳಿಸಿಕೊಂಡಿದೆ. ರಾಜ್ಯ ಮತ್ತು ದೇಶದೊಳಗಿರುವ ಭ್ರಷ್ಟ ಮುಖಗಳನ್ನು ಅನಾವರಣಗೊಳಿಸಿ 22ರ ಹೊಸ್ತಿಲಲ್ಲಿರುವ ವಾರ್ತಾಭಾರತಿ ಪತ್ರಿಕೆಯು ರಾಜಕೀಯ ಶುದ್ಧೀಕರಣಕ್ಕೆ ನಿರಂತರವಾಗಿ ನಿರ್ಭೀತಿಯಿಂದ ಹೋರಾಡುತ್ತಿರುವುದು ಓದುಗರ ಕಣ್ಣಿಗೆ ಕಾಣುತ್ತಿದ್ದು ಎಲ್ಲರೂ ಮೆಚ್ಚುವಂತಹದ್ದು. ವಾರ್ತಾಭಾರತಿ ಪತ್ರಿಕೆಯು ರಾಜ್ಯದಲ್ಲಿ ಅನೇಕ ಬರಹಗಾರರನ್ನು, ಸಾಹಿತಿಗಳನ್ನು ಹಾಗೂ ಚಿಂತಕರನ್ನು ಬೆಳೆಸಿದೆ, ಗಳಿಸಿದೆ ಹಾಗೂ ಗಟ್ಟಿಗೊಳಿಸಿದೆ. ಪತ್ರಿಕೆ ಆರಂಭ ಆದಾಗ ಹಾಕಿಕೊಂಡಿದ್ದ ಗುರಿ ತಲುಪಿದ್ದರೂ ಬದಲಾಗುತ್ತಿರುವ ಸನ್ನಿವೇಶಗಳಿಗೆ ನವ ಗುರಿಗಳನ್ನು ನಿರ್ಧರಿಸಿಕೊಂಡು 21 ವರ್ಷಗಳನ್ನು ಪೂರೈಸುತ್ತಿರುವ ಹಾಗೂ ಸತ್ಯದ ಪರ ನಿಲ್ಲುವ ವಾರ್ತಾಭಾರತಿ ಪತ್ರಿಕಾ ತಂಡಕ್ಕೆ ಅಭಿನಂದಿಸುತ್ತೇನೆ. 

 

ಕಷ್ಟದಲ್ಲೂ ಇಷ್ಟದಂತೆಯೇ ನಡೆದು ಬಂದ ಪತ್ರಿಕೆ

ಡಾ. ಬಂಜಗೆರೆ ಜಯಪ್ರಕಾಶ

ಒಟ್ಟಾರೆಯಾಗಿ ಮಾಧ್ಯಮಗಳು ಕಷ್ಟ ಕಾಲದಲ್ಲಿವೆ ಎಂಬುದು ಒಂದು ಸಾರ್ವತ್ರಿಕ ಮಾತಿನಂತಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚಳಗೊಂಡಿರುವುದೊಂದನ್ನೇ ಇದಕ್ಕೆ ಕಾರಣವನ್ನಾಗಿ ಸೂಚಿಸುವವರು ಹೆಚ್ಚಾಗಿದ್ದಾರೆ. ಇದೊಂದೇ ಕಾರಣವಿರಲಾರದೇನೋ. ಸುದ್ದಿ ಮಾಧ್ಯಮಗಳ ಸ್ವಭಾವದಲ್ಲಿ ಬಂದಿರುವ ಬದಲಾವಣೆ ಬಹುಶಃ ಅವುಗಳ ವಿಶ್ವಾಸಾರ್ಹತೆಯ ಬಗ್ಗೆ ಜನರಲ್ಲಿ ನಿರಾಸಕ್ತಿಯನ್ನು ಹುಟ್ಟುಹಾಕಿರಬಹುದೇ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ, ಕರ್ನಾಟಕ ಏಕೀಕರಣ ಹೋರಾಟದ ಕಾಲದಲ್ಲಿ, ದಲಿತ-ರೈತ ಚಳವಳಿಗಳ ಭರಾಟೆಯ ಕಾಲದಲ್ಲಿ ದೇವರಾಜ ಅರಸರ ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಿದ ಕಾಲದಲ್ಲಿ ಸುದ್ದಿ ಮಾಧ್ಯಮಗಳ ನಿಲುವುಗಳಲ್ಲಿ ಪರ ವಿರೋಧ ಸಂಘರ್ಷ ಇರಲಿಲ್ಲ ಎಂದಲ್ಲ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಕೂಡ ಇಂತಹದೊಂದು ತಿಕ್ಕಾಟ ಹುಟ್ಟಿಕೊಂಡಿತ್ತು. ಆಗಲೂ ಸುದ್ದಿ ಮಾಧ್ಯಮಗಳ ಬಗ್ಗೆ ಜನರಲ್ಲಿ ನಿರಾಸಕ್ತಿ ಹುಟ್ಟಿರಲಿಲ್ಲ. ಬದಲಾಗಿ ಪರ ವಿರೋಧದ ನಿಲುವುಗಳ ಬಗ್ಗೆ ಜನ ಅತ್ಯಾಸಕ್ತಿಯಿಂದ ಚರ್ಚಿಸುತ್ತಿದ್ದರು, ವಿಮರ್ಶಿಸುತ್ತಿದ್ದರು, ತಮ್ಮ ತಮ್ಮ ಹಿತಾಸಕ್ತಿಗಳನುಸಾರ ಬೆಂಬಲ ವ್ಯಕ್ತಪಡಿಸುತ್ತಿದ್ದರು.

ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ಇದೊಂದು ಸಹಜ ಪ್ರಕ್ರಿಯೆ ಮಾತ್ರವಲ್ಲ ಅಗತ್ಯವಾದ ಪ್ರಕ್ರಿಯೆ. ಭಿನ್ನ ಮತಗಳಿರುವುದೇ ಪ್ರಜಾಪ್ರಭುತ್ವದ ಸೊಗಸು. ಆ ಭಿನ್ನ ಮತಗಳಿಗೆ ವೇದಿಕೆಯನ್ನೊದಗಿಸಿ, ಆರೋಗ್ಯಕರ ಚರ್ಚೆ ಹುಟ್ಟು ಹಾಕುವುದೇ ಸುದ್ದಿ ಮಾಧ್ಯಮಗಳ ಮಹತ್ತರ ಜವಾಬ್ದಾರಿ. ಇದೆಲ್ಲಾ 20ನೇ ಶತಮಾನದ ಮಾತು.

21ನೇ ಶತಮಾನದ ಈ ಎರಡು ದಶಕಗಳಲ್ಲಿ ಸುದ್ದಿ ಮಾಧ್ಯಮಗಳ ಒಡೆತನದಲ್ಲಿ ಕಾರ್ಪೊರೇಟ್ ಹೌಸ್‌ಗಳ ಪಾಲುದಾರಿಕೆ ವಿಪರೀತಗೊಂಡಿತು.ಹಣಕಾಸು ಹೂಡುವುದಕ್ಕೆ ಸೀಮಿತಗೊಂಡಿದ್ದ, ಈ ಮೊದಲು ತಮಗಿದ್ದ ರಾಜಕೀಯ -ಸಾಮಾಜಿಕ ನಿಲುವುಗಳನ್ನು ತಕ್ಕ ಮಟ್ಟಿಗೆ ಒಳಗಿರಿಸಿಕೊಂಡು ವ್ಯವಹರಿಸುತ್ತಿದ್ದ ಮಾಲಕತ್ವ ಈ ಎರಡು ದಶಕಗಳಲ್ಲಿ ಬಹಿರಂಗವಾಗಿ ಪ್ರದಿಪಾದಿಸುವ ಹಂತಕ್ಕೆ ಬಂದಿತು. ಸುದ್ದಿ ಮಾಧ್ಯಮಗಳ ಮುಖ್ಯಸ್ಥರು ಹಾಗೂ ಸುದ್ದಿ ಸಂಪಾದಕರು, ವರದಿಗಾರರು ಮಾಲಕತ್ವದ ಈ ನಿಲುವುಗಳನ್ನು ಚಾಚು ತಪ್ಪದೆ ಪ್ರತಿಬಿಂಬಿಸಬೇಕಾದ ಒತ್ತಡಕ್ಕೊಳಗಾದರು. ಪ್ರತ್ರಕರ್ತರ ಸ್ವತಂತ್ರ ಮನಸ್ಥಿತಿ, ವಿಮರ್ಶಾತ್ಮಕ ದೃಷ್ಟಿಕೋನ, ವಸ್ತು ನಿಷ್ಠತೆ ಮುಂತಾದ ಗುಣಗಳೆಲ್ಲಾ ಅನಿವಾರ್ಯವಾಗಿ ಪರಿಷ್ಕರಣೆಗೊಂಡವು.

ಸುದ್ದಿ ಎನ್ನುವುದು ಏಕಪಕ್ಷೀಯ ವದಂತಿ ಎಂಬಂತಾಗಿದೆ. ವಿಶ್ಲೇಷಣೆ ಎನ್ನುವುದು ತಮ್ಮ ಮೂಗಿನ ನೇರಕ್ಕೆ ಮಂಡಿಸುವ ವಾದಸರಣಿ ಎಂಬಂತಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇರಬೇಕಾದ ಗೌರವ, ಸಭ್ಯತೆಗಳ ಕೊರತೆ ಸುದ್ದಿ ಪ್ರಕಟಣೆಯಲ್ಲಿ ಅಪರೂಪವಾಗುತ್ತದೆ. ಕಾರಣಗಳನ್ನು ಹುಡುಕುತ್ತಾ ಹೋಗಬೇಕಾಗಿಲ್ಲ. ಬಲಪಂಥೀಯ ರಾಜಕಾರಣ, ಸಾಮಾಜಿಕ, ಸಾಂಸ್ಕೃತಿಕ ಧೋರಣೆಗಳು ಸುದ್ದಿ ಮಾಧ್ಯಮಗಳನ್ನು ಹೆಬ್ಬಾವಿನಂತೆ ಸುತ್ತುವರಿದಿದೆ. ಸುಳುಗಳನ್ನು ಪ್ರಕಟಿಸುವುದಕ್ಕೆ ಇದ್ದ ಹಿಂಜರಿಕೆ ಕಣ್ಮರೆಯಾಗಿದೆಯೇನೋ ಅನಿಸುವಂತಿದೆ. ತಮಗೆ ಬೇಕಾದ ಪಕ್ಷವನ್ನು ಅಧಿಕಾರಕ್ಕೆ ತರಲು, ಅದಕ್ಕೆ ಪೂರಕವಾದ ನಿಲುವುಗಳನ್ನು ಪ್ರಚಾರ ಮಾಡಲು ಸುದ್ದಿ ಮಾಧ್ಯಮಗಳು ಟೊಂಕಕಟ್ಟಿ ನಿಂತಿರುವುದು ಇಂದಿನ ವಿದ್ಯಮಾನ. ಇಂತಹದೊಂದು ವಾತಾವರಣ ಮಾಧ್ಯಮಗಳಲ್ಲಿ ಬಂದ ಆರಂಭದಲ್ಲಿ ಓದುಗರು, ವೀಕ್ಷಕರು ಸ್ವಲ್ಪ ಮಟ್ಟಿಗೆ ಪ್ರಭಾವಿತರಾದರು. ಆದರೆ ಸತ್ಯಕ್ಕಿರುವ ಶಾಶ್ವತ ಶಕ್ತಿ ಸುಳ್ಳುಗಳಿಗಿರುವುದಿಲ್ಲ. ವಸ್ತು ನಿಷ್ಠತೆಗೆ ಇರುವ ಗೌರವ ಪಕ್ಷಪಾತಕ್ಕೆ ಸದಾ ಸಲ್ಲುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳ ಚರ್ಚಾ ಗೋಷ್ಠಿಗೆ ಹೋಗಲು ಮೊದಲಲ್ಲಿ ಕೆಲವರು ಹಿಂಜರಿದರು. ಬರಬರುತ್ತಾ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರರು, ರಾಜಕೀಯ ವಿಶ್ಲೇಷಕರು, ಸಂಸ್ಕೃತಿ ಚಿಂತಕರು ದೊಡ್ಡ ಸಂಖ್ಯೆಯಲ್ಲಿ ಹಿಂಜರಿಯತೊಡಗಿದರು. ಬಲಪಂಥ ಅಥವಾ ಎಡಪಂಥ ಯಾವುದೇ ಇರಲಿ, ವಸ್ತುನಿಷ್ಠತೆ ಮತ್ತು ಸತ್ಯದ ವಿವಿಧ ಆಯಾಮಗಳ ಬಗೆಗಿನ ವಿಚಾರ ಮಂಥನ ಎನ್ನುವುದನ್ನು ನಾಗರಿಕ ಹೊಣೆಗಾರಿಕೆಯ ಮನಸ್ಥಿತಿಯುಳ್ಳ ಎಲ್ಲರೂ ಗೌರವಿಸಬೇಕು. ಅದಿಲ್ಲದಿದ್ದರೆ ಸಾರ್ವಜನಿಕವಾಗಿ ನಮ್ಮ ಮನಸ್ಸಿನ ವಿಚಾರಗಳನ್ನು, ವಿಕೃತ ಗ್ರಹಿಕೆಗಳನ್ನು ಕಾರಿಕೊಳ್ಳಲು ಹಿಂಜರಿಯುವಷ್ಟಾದರೂ ನಾಗರಿಕ ಪ್ರಜ್ಞೆ ಇರೆಬೇಕು. ಈ ನಾಗರಿಕ ಪ್ರಜ್ಞೆಗೂ ಅವಕಾಶವಿರದಷ್ಟು ಏಕಪಕ್ಷೀಯತೆಯನ್ನು ಬಹುಪಾಲು ಸುದ್ದಿ ಮಾಧ್ಯಮಗಳು ಅಳವಡಿಸಿಕೊಂಡವು. ಇದು ಕ್ರಮೇಣ ಓದುಗರ, ವೀಕ್ಷಕರ ನಿರಾಸಕ್ತಿಗೆ ಕಾರಣವಾಯಿತು.

ನ್ಯಾಯ ಪ್ರಜ್ಞೆಯೆನ್ನುವುದು ಈ ಕಾಲಘಟ್ಟದಲ್ಲಿ ದುಬಾರಿ ವಸ್ತು. ಅದನ್ನು ಕೆಲವಾದರೂ ಸುದ್ದಿ ಮಾಧ್ಯಮಗಳು ಕಷ್ಟಪಟ್ಟು ಕಾಪಾಡಿಕೊಳ್ಳುತ್ತಿವೆ ಎನ್ನುವುದು ಪ್ರಜಾಪ್ರಭುತ್ವಕ್ಕಿರುವ ಆಶಾಕಿರಣ. ‘ವಾರ್ತಾಭಾರತಿ’ ಅಂತಹ ಸುದ್ದಿ ಮಾಧ್ಯಮವಾಗಿರುವುದರಿಂದಲೇ ಅದು ನನ್ನ ಮೆಚ್ಚಿನ ಪತ್ರಿಕೆಗಳಲ್ಲಿ ಒಂದಾಗಿದೆ. ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಅದು ಪಟ್ಟಿರುವ ಕಷ್ಟದ ಬಗ್ಗೆ ನನಗೆ ವೈಯಕ್ತಿಕವಾಗಿ ಅಲ್ಪ ಸ್ವಲ್ಪ ಗೊತ್ತಿದೆ. ಹಿಂದಿನ ಸಲದ ಬಿಜೆಪಿ ಸರಕಾರ ‘ವಾರ್ತಾಭಾರತಿ’ಗೆ ಜಾಹೀರಾತು ಕೊಡುವುದನ್ನು ವಿಶೇಷವಾಗಿ ತಡೆಹಿಡಿದಿತ್ತು. ಇದಕ್ಕೆ ನಿಯಮಾವಳಿಯ ಆಧಾರವೇನೂ ಇರಲಿಲ್ಲ. ರಾಜ್ಯಮಟ್ಟದ ಪತ್ರಿಕೆಗಳ ಪಟ್ಟಿಯಲ್ಲಿ ‘ವಾರ್ತಾಭಾರತಿ’ಯೂ ಸೇರಿತ್ತು. ರಾಜ್ಯಮಟ್ಟದ ಪತ್ರಿಕೆಗಳಿಗೆ ಸಿಗಬೇಕಾದ ಜಾಹೀರಾತು ಬೇರೆ ಪತ್ರಿಕೆಗಳಿಗೆ ಸಿಗುವ ಹಾಗೆ ‘ವಾರ್ತಾಭಾರತಿ’ಗೆ ಸಿಗದಿರುವಂತೆ ಅಗೋಚರ ನಿರ್ಬಂಧ ಚಾಲ್ತಿಯಲ್ಲಿತ್ತು. ಅದಕ್ಕೆ ಯಾರು ಕಾರಣರು ಎನ್ನುವುದನ್ನು ವ್ಯಕ್ತಿಗತವಾಗಿ ಮಾತ್ರ ಹುಡುಕಿದರೆ ಸಾಲುವುದಿಲ್ಲ. ಒಂದು ಸರಕಾರ, ಆ ಸರಕಾರದ ಕಾರ್ಯನಿರ್ವಹಣೆಯನ್ನು ನಿರ್ದೇಶಿಸಲು ಸೈದ್ಧಾಂತಿಕ ಕೇಂದ್ರಗಳು ಹಾಗೂ ಅಧಿಕಾರದಲ್ಲಿರುವವರ ಮರ್ಜಿಗಳು ಇವೆಲ್ಲವೂ ಕೂಡ ‘ವಾರ್ತಾಭಾರತಿ’ಯನ್ನು ವಿಂಗಡಿಸಲು ನೋಡಿದವು.

‘ವಾರ್ತಾಭಾರತಿ’ ತನ್ನ ಕಷ್ಟದ ಕಾಲದಲ್ಲಿ ನ್ಯಾಯ ಪ್ರಜ್ಞೆಯನ್ನು ಕಾಪಾಡಿಕೊಂಡಿತು. ಜನಪರ ಧೋರಣೆಯನ್ನು ಮುಂದುವರಿಸಿತು. ಈಗ ಎಲ್ಲ ಸುದ್ದಿ ಮಾಧ್ಯಮಗಳಿಗಿರುವ ಸಾಮಾನ್ಯ ಕಷ್ಟಗಳೇನೋ ‘ವಾರ್ತಾಭಾರತಿ’ಯನ್ನು ಬಿಟ್ಟಿಲ್ಲ. ಹಾಗಿದ್ದರೂ ಒಂದು ಪತ್ರಿಕೆಯನ್ನು ಜನರ ಮಾಧ್ಯಮವನ್ನಾಗಿ ಕಾಪಾಡಿಕೊಂಡು ಮುನ್ನಡೆಸಲು ಹಗಲಿರಳೂ ಶ್ರಮಿಸುತ್ತಿರುವ ‘ವಾರ್ತಾಭಾರತಿ’ ತಂಡಕ್ಕೆ, ಸಂಪಾದಕ ಮಂಡಳಿಗೆ, ಆಡಳಿತ ಮಂಡಳಿಗೆ ನನ್ನ ಶುಭ ಹಾರೈಕೆಗಳು ಸಲ್ಲುತ್ತವೆ.

ಹಿರಿಯ-ಕಿರಿಯ ಸಾಹಿತಿಗಳು, ಚಿಂತಕರು, ಕಾರ್ಯಕರ್ತರು, ಪರ್ತಕರ್ತರು ತಮ್ಮ ಅಭಿಪ್ರಾಯ ಹೇಳಲು ‘ವಾರ್ತಾಭಾರತಿ’ಯಲ್ಲಿ ಅಂಕಣ ಬರೆಯುತ್ತಿದ್ದಾರೆ. ‘ವಾರ್ತಾಭಾರತಿ’ ಕೂಡಾ ಅದಕ್ಕೆ ವೇದಿಕೆ ಒದಗಿಸಿ ಪ್ರಗತಿಪರ ನಿಲುವುಗಳಿಗೆ ಅದನ್ನು ಸದಾ ಮುಕ್ತವಾಗಿರಿಸಿಕೊಂಡಿದೆ. ಈಗಿರುವ ಕೆಲವೇ ಪತ್ರಿಕೆಗಳಲ್ಲಿ ಮಾತ್ರ ಕಾಣಬಹುದಾಗಿರುವ ಒಂದು ಆರೋಗ್ಯಪೂರ್ಣ ಮಾಧ್ಯಮ ಧೋರಣೆ ಹೊಂದಿರುವ ‘ವಾರ್ತಾಭಾರತಿ’ಗೆ ನನ್ನ ಅಭಿನಂದನೆಗಳನ್ನು ಹೇಳಬಯಸುತ್ತೇನೆ.

ನನ್ನ ಜೀವನದ ಅವಿಭಾಜ್ಯ ಅಂಗ

21 ವರ್ಷಗಳನ್ನು ಪೂರೈಸಿ 22ನೇ ವರ್ಷಕ್ಕೆ ಕಾಲಿಟ್ಟಿರುವ ವಾರ್ತಾಭಾರತಿ ಬಳಗಕ್ಕೆ ಶುಭಾಶಯಗಳು.

ವಾರ್ತಾಭಾರತಿ ಕಳೆದ 21 ವರ್ಷಗಳಿಂದ ನನ್ನ ಜೀವನದ ಅವಿಭಾಜ್ಯ ಅಂಗ. ವ್ಯಕ್ತಿ ಹಾಗೂ ಸಮಾಜದ ಬೌದ್ಧಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸಮರ್ಥವಾಗಿ ಹಾಗೂ ಧೈರ್ಯವಾಗಿ ನಿರ್ವಹಿಸುತ್ತಿರುವುದು ವಾರ್ತಾಭಾರತಿ ಮಾತ್ರ.

ಸುಳ್ಳು ಅಪಾಯಕಾರಿ, ಅರ್ಧಸತ್ಯ ಅದಕ್ಕಿಂತ ತುಂಬಾ ಅಪಾಯಕಾರಿ. ಅರ್ಧಸತ್ಯಪತ್ರಿಕೆಗಳ ಜಮಾನದಲ್ಲಿ ವಾರ್ತಾಭಾರತಿಯ ವಸ್ತುನಿಷ್ಠ ಸುದ್ದಿ-ವರದಿಗಳು ಈ ಸಮಾಜಕ್ಕೆ ವರದಾನ. ಪತ್ರಿಕೆಯ ಮುಖವಾಡ ಧರಿಸಿ ರಾಜಕೀಯ ಮಾಡುವ, ಹಣ ಮಾಡುವ, ಓದುಗರನ್ನು ಬಣ್ಣಬಣ್ಣದ ಮಾತುಗಳಿಂದ ದಾರಿತಪ್ಪಿಸುವ, ವಾಸ್ತವಗಳಿಂದ ವಿಮುಖಗೊಳಿಸಿ ಭ್ರಮೆಗೆ ದೂಡುವ, ಮನಸ್ಸುಗಳಲ್ಲಿ ವಿಷಹಿಂಡುವ, ಸಮಾಜದ ವರ್ಗಗಳನ್ನು ಪರಸ್ಪರ ಎತ್ತಿಕಟ್ಟುವ, ಸಮಾಜವನ್ನುಒಡೆಯುವ ಈ ಕಾಲಘಟ್ಟದಲ್ಲಿ, ವಾರ್ತಾಭಾರತಿ ಈ ದೇಶಕ್ಕೆ, ಈ ಸಮಾಜಕ್ಕೆ ದೊಡ್ಡ ಕೊಡುಗೆ.

ವಾರ್ತಾಭಾರತಿ ಮತ್ತಷ್ಟು ಬೆಳೆಯಲಿ, ವಾರ್ತಾಭಾರತಿ ತಂಡಕ್ಕೆ ಭಗವಂತನು ಮತ್ತಷ್ಟು ಯಶಸ್ಸನ್ನು ದಯಪಾಲಿಸಲಿ ಎಂಬ ಹಾರೈಕೆಯೊಂದಿಗೆ..

ಸೈಯದ್ ಹಸನ್, ಓದುಗರು, ಉಡುಪಿ

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News

ಒಳಗಣ್ಣು
ವೃತ್ತಾಂತ