‘ವಾರ್ತಾಭಾರತಿ’ ಕನ್ನಡ ಪತ್ರಿಕೋದ್ಯಮದ ‘ವೈಚಾರಿಕ ಬೆಳಕು’

‘ವಾರ್ತಾಭಾರತಿ’ಯು 22ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಓದುಗರು ತಮ್ಮ ಸಂಭ್ರಮವನ್ನು, ಪತ್ರಿಕೆಯ ಜೊತೆಗಿನ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಪತ್ರಿಕೆಗೆ ಶುಭ ಹಾರೈಸಿದ್ದಾರೆ. ಈ ಪೈಕಿ ಆಯ್ದ ಬರಹಗಳು ಇಲ್ಲಿವೆ.

Update: 2025-01-09 09:31 GMT

ಕನ್ನಡ ಪತ್ರಿಕೋದ್ಯಮದ ‘ವೈಚಾರಿಕ ಬೆಳಕು’

ಕನ್ನಡ ಪತ್ರಿಕೋದ್ಯಮ ಇತಿಹಾಸದ-ಸಮಕಾಲೀನ ಸಂದರ್ಭದಲ್ಲಿ ‘ವಾರ್ತಾಭಾರತಿ’ ದೈನಿಕವು ನಿಜದ ನೇರಕ್ಕೆ ನಡೆದು, ಪ್ರಜಾಸತ್ತಾತ್ಮಕ ಮೌಲ್ಯ, ಸಂಸ್ಕೃತಿಯ ರಕ್ಷಣೆಗೆ ರಾಜಿ ಇಲ್ಲದ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ‘ವಾರ್ತಾಭಾರತಿ’ಯಲ್ಲಿ ಪ್ರತಿನಿತ್ಯ ಪ್ರಕಟವಾಗುತ್ತಿರುವ ವಸ್ತುನಿಷ್ಠ ವರದಿಗಳು, ವೈಚಾರಿಕ ಲೇಖನಗಳು, ವಿಶ್ಲೇಷಣೆಗಳು ಸಂಸದೀಯ ಪ್ರಜಾಸತ್ತೆಯ ತಳಪಾಯವಾದ ಸಾಮಾಜಿಕ ಪ್ರಜಾಪ್ರಭುತ್ವವನ್ನು ವಿಸ್ತಾರಗೊಳಿಸುವ, ಜೀವಂತ ವಾಗಿಡುವ ಮಹಾನ್ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಇದರ ಪರಿಣಾಮವಾಗಿ ಜನಸಾಮಾನ್ಯರಲ್ಲಿ ವೈಚಾರಿಕ, ರಾಜಕೀಯ ಜಾಗೃತಿ, ಸಮೂಹ ಹಿತಾಸಕ್ತಿ, ಸಾಮಾಜಿಕ ಸಾಮರಸ್ಯದ ಭಾವಗಳು ನೆಲೆಯೂರಲು ಸಾಧ್ಯವಾಗುತ್ತಿದೆ. ಇಂತಹ ಹಲವಾರು ಸದುದ್ದೇಶಗಳನ್ನು ಸಕ್ರಿಯಗೊಳಿಸಿರುವ ‘ವಾರ್ತಾಭಾರತಿ’ಯ ಕೊಡುಗೆ ಎಲ್ಲ ಕಾಲಕ್ಕೂ ವಿಶಿಷ್ಟ ಎನಿಸಿಕೊಳ್ಳುತ್ತದೆ. ಕನ್ನಡ ಪತ್ರಿಕೋದ್ಯಮದ ವೈಚಾರಿಕ ಬೆಳಕು ‘ವಾರ್ತಾಭಾರತಿ’ಗೆ ಸಮಾಜದ ಪ್ರೋತ್ಸಾಹ ಸದಾ ಇರಲಿ.

ಪ್ರೊ.ಹುಲ್ಕೆರೆ ಮಹಾದೇವ,

ಸಂಸ್ಕೃತಿ ಚಿಂತಕ, ಮಂಡ್ಯ

ನಿಖರ ಸುದ್ದಿಗಳನ್ನು ನೀಡುವುದರಲ್ಲಿ ಎತ್ತಿದ ಕೈ

ನಾನು ಕಂಡಂತೆ ಅತ್ಯುತ್ತಮವಾದ ಪತ್ರಿಕೆಯಾಗಿರುವ ‘ವಾರ್ತಾಭಾರತಿ’ ಇನ್ನಷ್ಟು ಬೆಳೆಯಬೇಕು. ‘ವಾರ್ತಾಭಾರತಿ’ ದೇಶದ ಆರ್ಥಿಕ ಪರಿಸ್ಥಿತಿ, ಕ್ರೀಡೆ, ಆಟಗಳು, ವ್ಯಾಪಾರ ಮತ್ತು ವಾಣಿಜ್ಯದ ಬಗ್ಗೆ ನಿಖರ ಸುದ್ದಿಗಳನ್ನು ನೀಡುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಾಗದು. ವಾಸ್ತವ ವಿಷಯಗಳನ್ನು ಜನರ ಮುಂದಿಟ್ಟು ಜಾಗೃತಿ ಮೂಡಿಸುತ್ತಿದೆ. ಸುಳ್ಳು ಮಾಹಿತಿ, ವಿಚಾರಗಳನ್ನು ಪ್ರಕಟಿಸಿ ಜನರು ಸುಳ್ಳನ್ನೇ ಸತ್ಯವೆಂದು ನಂಬುವಂತೆ ಮಾಡುವ ಈ ದಿನಗಳಲ್ಲಿ ‘ವಾರ್ತಾಭಾರತಿ’ ನೀರಿಗೆ ಬಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತೆ ಎಂದರು ತಪ್ಪಾಗಲಾರದು. ನಾನು ಕಂಡಂತೆ ಈ ಪತ್ರಿಕೆಯಲ್ಲಿ ಅಶ್ಲೀಲ ಜಾಹೀರಾತುಗಳು ಪ್ರಕಟವಾಗುವುದಿಲ್ಲ. ಎಲ್ಲಾ ಪುಟಗಳು ಬಹುತೇಕವಾಗಿ ಸುದ್ದಿಗಳಿಂದಲೇ ಕೂಡಿರುತ್ತವೆ. ನನ್ನ ಅಮ್ಮ ದಿ. ಜಯಂತಿ ಕೂಡ ವಾರ್ತಾಭಾರತಿಯ ಅಭಿಮಾನಿ. ಅವರು ಬೆಳಗ್ಗಿನ ಚಹಾ ಆದರೂ ಬಿಟ್ಟಾರು ವಾರ್ತಾಭಾರತಿ ಪತ್ರಿಕೆ ಓದುವುದನ್ನು ಮರೆಯುತ್ತಿರಲಿಲ್ಲ. ವಾರ್ತಾಭಾರತಿ ವೆಬ್‌ಸೈಟ್ ಮಾಧ್ಯಮ ಸಾಕಷ್ಟು ಓದುಗರು, ವೀಕ್ಷಕರನ್ನು ಒಳಗೊಂಡಿರುವಂತೆ ಪತ್ರಿಕೆಯೂ ಎಲ್ಲರಿಗೂ ದೊರಕುವಂತಾಗಬೇಕು. ಇನ್ನಷ್ಟು ಕ್ರಾಂತಿಕಾರಿ ಮಾಧ್ಯಮವಾಗಿ ‘ವಾರ್ತಾಭಾರತಿ’ ಸಮಾಜದ ಧ್ವನಿ ಆಗಲಿ ಎಂಬುದು ನನ್ನ ಆಶಯ.

ಪ್ರೊ.ಮಂಜುಳಾ ನಾಯಕ್, ಸಾಮಾಜಿಕ ಕಾರ್ಯಕರ್ತೆ, ಮಂಗಳೂರು

ಇತರ ಪತ್ರಿಕೆಗಳಿಗೂ ಮಾದರಿಯಾಗಲಿ

ಮಾಧ್ಯಮಗಳು ಸಮಾಜದ ಕನ್ನಡಿ. ಸಮಾಜದಲ್ಲಿನ ತಪ್ಪು ಗಳನ್ನು ಸರಿಪಡಿಸಿ ಅದರ ಸೌಂದರ್ಯವನ್ನು ಹೆಚ್ಚಿಸುವುದೇ ಮಾಧ್ಯಮಗಳ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ಜನರಿಗೆ ಸತ್ಯ ತಿಳಿಸುತ್ತಿರುವ ಏಕೈಕ ಪತ್ರಿಕೆ ಎಂದರೆ ಅದು ‘ವಾರ್ತಾಭಾರತಿ’. ಓದುಗ ಪತ್ರಿಕೆ ಯಿಂದ ನಿರೀಕ್ಷಿಸುವುದು ಸತ್ಯವನ್ನು ಮಾತ್ರ. ಆ ಸತ್ಯವನ್ನು ‘ವಾರ್ತಾಭಾರತಿ’ಯಲ್ಲಿ ನೋಡಲು ಸಾಧ್ಯ. ಇದೊಂದು ಅಲ್ಪಸಂಖ್ಯಾತರ ಪತ್ರಿಕೆ, ಕೇವಲ ಮುಸ್ಲಿಮರ ವಿಚಾರಗಳನ್ನು ಮಾತ್ರ ಮುನ್ನೆಲೆಗೆ ತರುತ್ತದೆ ಎನ್ನುವ ಅಭಿಪ್ರಾಯ ಕೆಲವರಲ್ಲಿ ಇದೆ. ಆದರೆ ಈ ಅಭಿಪ್ರಾಯವನ್ನು ಹೇಳುವವರು ಯಾರೂ ಪತ್ರಿಕೆ ಓದುವವರಲ್ಲ. ‘ವಾರ್ತಾಭಾರತಿ’ ಪತ್ರಿಕೆ ಓದಿದರೆ ಬಹುಶಃ ಅವರಿಗೆ ಈ ಅಭಿಪ್ರಾಯ ಖಂಡಿತವಾಗಿಯೂ ಬರುವುದಿಲ್ಲ. ಒಂದು ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡದೇ, ಸಂವಿಧಾನದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ಪತ್ರಿಕೆ ಕೆಲಸ ಮಾಡುತ್ತಿದೆ. ಈ ಪತ್ರಿಕೆಯ ಕಾರ್ಯ ಇತರ ಪತ್ರಿಕೆಗಳಿಗೆ ಮಾದರಿಯಾಗಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳದೆ, ರಾಜಕೀಯ ಪಕ್ಷಗಳು ತಪ್ಪು ಮಾಡಿದಾಗ ಅದನ್ನು ಟೀಕಿಸುವ ಮತ್ತು ಪ್ರಶ್ನಿಸುವ, ಸುದ್ದಿಯಲ್ಲಿ ರಾಜಿಯಾಗದೆ, ಇದ್ದಿದ್ದನ್ನು ಇದ್ದಹಾಗೆ ಪ್ರಕಟಿಸುತ್ತಿರುವುದು ಪತ್ರಿಕೆಯ ಬದ್ಧತೆಯನ್ನು ತೋರಿಸುತ್ತದೆ. ಪತ್ರಿಕೆಯ ಜನಪರತೆ ಹೀಗೇ ಮುಂದುವರಿಯಲಿ.

ನಾಗೇಶ್ ಅರಳಕುಪ್ಪೆ,

ವಿಚಾರವಾದಿಗಳ ವೇದಿಕೆಯ ಸಂಚಾಲಕ,

ಸಾಮಾಜಿಕ ಜವಾಬ್ದಾರಿ ಹೊತ್ತ ಪತ್ರಿಕೆ

ಒಂದು ಪತ್ರಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ‘ವಾರ್ತಾಭಾರತಿ’ ಸ್ಪಷ್ಟ ನಿದರ್ಶನ. ರಾಜಕೀಯ ಮತ್ತು ಸಾಮಾಜಿಕ ಸಂದಿಗ್ಧತೆಯ ಸಂದರ್ಭದಲ್ಲಿ ‘ವಾರ್ತಾಭಾರತಿ’ಯು ಅತ್ಯಂತ ಜವಾಬ್ದಾರಿಯಿಂದ ಪ್ರಕಟಗೊಳ್ಳುತ್ತಿರುವ ಪತ್ರಿಕೆಯಾಗಿದೆ. ನಾನು ಗಮನಿಸಿದಂತೆ ಈ ಪತ್ರಿಕೆಯಲ್ಲಿ ಊಹಾಪೋಹದ ಸುದ್ದಿಗೆ ಅವಕಾಶವಿಲ್ಲ. ರಾಜಕೀಯ ವಿಚಾರಗಳ ಜೊತೆಗೆ ಸಾಂಸ್ಕೃತಿಕ ವಿಚಾರಗಳಿಗೂ ಆದ್ಯತೆ ನೀಡುತ್ತಿರುವ ಪತ್ರಿಕೆ, ಸಾಮಾಜಿಕ ಬದಲಾವಣೆಗೆ ಕಾರಣವಾಗಬಹುದಾದ ಸಣ್ಣ ಸಣ್ಣ ವಿಷಯಗಳಿಗೂ ಮಹತ್ವ ನೀಡಿ ಪ್ರಕಟಿಸುತ್ತಿದೆ. ಸರಕಾರದ ಮತ್ತು ಅಧಿಕಾರಿಗಳ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುತ್ತಿರುವ ‘ವಾರ್ತಾಭಾರತಿ’, ರಾಜಕಾರಣಿಗಳಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿರುವವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಶಿಕ್ಷಣ, ಕೈಗಾರಿಕೆ, ವಾಣಿಜ್ಯ ವ್ಯವಹಾರ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆಯೂ ಉತ್ತಮ ವರದಿ ಮತ್ತು ಲೇಖನಗಳನ್ನು ಪ್ರಕಟಿಸುತ್ತಿರುವುದರಿಂದ ಪತ್ರಿಕೆ ಬಹಳ ಜನಪ್ರಿಯವಾಗಿದೆ. ಭಾಷೆ ಸರಳವಾಗಿ ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿರುವುದೂ ಈ ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ,

ಸರಕಾರಗಳನ್ನು ಎಚ್ಚರಿಸುತ್ತಿದೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳಬೇಕು. ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾಗುತ್ತದೆ. ಸದ್ಯ ಪ್ರಜಾಪ್ರಭುತ್ವದ ಉಳಿವಿಗೆ ಶ್ರಮಿಸಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಕೆಲಸ ಮಾಡುತ್ತಿದೆ.

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಸರಕಾರಗಳು ಪ್ರಜಾಪ್ರಭುತ್ವದ ನೀತಿಗಳಿಗೆ ಅನುಸಾರವಾಗಿ ಜನರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಸರಕಾರಗಳು ದಿಕ್ಕುತಪ್ಪಿದಾಗ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಸರಕಾರಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಬೇಕಾಗುತ್ತದೆ. ಆ ಕೆಲಸವನ್ನು ‘ವಾರ್ತಾಭಾರತಿ’ ನಿರ್ಭೀತಿಯಿಂದ ಮಾಡುತ್ತಿರುವುದು ಗಮನಾರ್ಹ.

ಪತ್ರಿಕೆಗಳು ಕೇವಲ ಸರಕಾರಗಳು ನೀಡುವ ಹೇಳಿಕೆಗಳನ್ನು ಮಾತ್ರ ಪ್ರಚಾರಮಾಡದೆ, ಸರಕಾರಗಳು ಮಾಡಬೇಕಾದ ಕೆಲಸಗಳ ಬಗ್ಗೆಯೂ ಬೆಳಕು ಚೆಲ್ಲಬೇಕಾಗುತ್ತದೆ. ಪತ್ರಿಕೆಯು ಪ್ರಗತಿಪರ ಆಲೋಚನೆಗಳನ್ನು ಇಟ್ಟುಕೊಂಡಿದ್ದು, ಎಷ್ಟೇ ಸಂಕಷ್ಟಗಳು ಎದುರಾದರೂ ಪತ್ರಿಕಾ ಧರ್ಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ.

ರಾಘವೇಂದ್ರ ಎಸ್., ತುಮಕೂರು

 

ಜನಸಾಮಾನ್ಯರ ಸಂಗಾತಿ

ದೇಶದ 90 ಶೇ. ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಈ ಕಾರಣಕ್ಕಾಗಿಯೇ ಅಂತಹ ಮಾಧ್ಯಮಗಳು ಉಳ್ಳವರ ಪರ ವಹಿಸುತ್ತಿವೆ. ಆದರೆ ‘ವಾರ್ತಾಭಾರತಿ’ಯು ಜನಸಾಮಾನ್ಯರ ಬೆಂಬಲದಿಂದ ಮೂಡಿ ಬಂದ ಪತ್ರಿಕೆ. ಆದುದರಿಂದ ಪತ್ರಿಕೆಯು ಜನಸಾಮಾನ್ಯರ ಸಂಗಾತಿಯಂತಿದೆ. ಧ್ವನಿ ಇಲ್ಲದವರ, ದಮನಿತರ ಪರ ಸುದ್ದಿಗಳು ಕೇವಲ ‘ವಾರ್ತಾಭಾರತಿ’ಯಲ್ಲಿ ಮಾತ್ರ ಕಾಣಲು ಸಾಧ್ಯ. ಕನ್ನಡದ ಇತರ ಪತ್ರಿಕೆಗಳಲ್ಲಿನ ಸುದ್ದಿಗಳು ಏಕರೂಪದಲ್ಲಿ ಇದ್ದರೆ ‘ವಾರ್ತಾಭಾರತಿ’ಯಲ್ಲಿನ ಸುದ್ದಿಗಳು ಭಿನ್ನವಾಗಿರುತ್ತದೆ. ತಳ ಸಮುದಾಯದ ಪ್ರತಿನಿಧಿಯಾಗಿರುವ ‘ವಾರ್ತಾಭಾರತಿ’ ಇನ್ನಷ್ಟು ಬೆಳೆಯಲಿ.

ಡಾ.ಪದ್ಮಶ್ರೀ ಟಿ. ಉಪನ್ಯಾಸಕರು ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮಾನಸಗಂಗೋತ್ರಿ ಮೈಸೂರು

ಬಹುತ್ವದ ನಿಜದನಿ

ನನಗೆ ‘ವಾರ್ತಾಭಾರತಿ’ ಪರಿಚಯವಾದದ್ದು 2005ರಲ್ಲಿ. ಮೊದಲ ಓದಿನಲ್ಲೇ ಪತ್ರಿಕೆ ನನ್ನನ್ನು ಸೆಳೆಯಿತು. ಕೋಲಾರದಲ್ಲೇ ಕೆಲವೇ ಸ್ಟಾಲ್‌ಗಳಲ್ಲಿ ‘ವಾರ್ತಾಭಾರತಿ’ ಸಿಗುತ್ತಿತ್ತು. ಪತ್ರಿಕೆ ಸಿಗದ ದಿನ ರೈತ ಸಂಘದ ಆಫೀಸ್‌ಗೋ, ಸಾರ್ವಜನಿಕ ಗ್ರಂಥಾಲಯಕ್ಕೋ ಹೋಗಿ ಓದುತ್ತಿದ್ದೆ. ಕೆಲ ದಿನಗಳ ನಂತರ ‘ವಾರ್ತಾಭಾರತಿ’ ಕೋಲಾರದ ಎಲ್ಲ ಕಡೆಯೂ ಸಿಗತೊಡಗಿತು.

ಅಂದಿನಿಂದ ಇಂದಿಗೂ ನನ್ನ ಪ್ರತಿನಿತ್ಯದ ಓದು-ಚಿಂತನ-ಸಂಶೋಧನೆ ಯಾನದಲ್ಲಿ ವಾರ್ತಾಭಾರತಿಯೂ ಜೊತೆಗಿದೆ. ಪೂರ್ವಾಗ್ರಹಪೀಡಿತ ಪತ್ರಿಕೆಗಳು ಯಾವುದನ್ನು ನಿರ್ಲಕ್ಷ್ಯ ಮಾಡಿದ್ದವೋ ಅಂತಹ ವರದಿಗಳತ್ತ ಗಮನ ನೀಡಿದ ‘ವಾರ್ತಾಭಾರತಿ’ಯು ನಿರ್ಲಕ್ಷಿತರ ಪರ ಧ್ವನಿಯಾಯಿತು. ‘ವಾರ್ತಾಭಾರತಿ’ಯ ಸಂಪಾದಕೀಯ, ಲೇಖನಗಳು, ಜನಾಭಿಪ್ರಾಯಗಳು ಮತ್ತು ಸುದ್ದಿಗಳು ನಿಖರತೆ ಹಾಗೂ ಸಮಚಿತ್ತತೆಯಿಂದ ಕೂಡಿದ ಕಾರಣ, ಪ್ರತೀ ದಿನವೂ ಪತ್ರಿಕೆಯನ್ನು ಓದಬೇಕಿನಿಸುತ್ತದೆ. ಇತರ ಪತ್ರಿಕೆಗಳಲ್ಲಿ ಚರ್ಚಿತಗೊಳ್ಳದ ಬಹುಮುಖ್ಯ ಸಮಕಾಲೀನ ಸಂಗತಿಗಳಿಗೆ ‘ವಾರ್ತಾಭಾರತಿ’ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ಕಾರಣಕ್ಕಾಗಿ ‘ವಾರ್ತಾಭಾರತಿ’ಯ ಮೇಲೆ ವಿಶೇಷ ಗೌರವ ಮೂಡುತ್ತಿದೆ.

ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ,

ಕನ್ನಡ ಸಹಾಯಕ ಪ್ರಾಧ್ಯಾಪಕರು ಕೆ.ನಾರಾಯಣಪುರ, ಬೆಂಗಳೂರು.

ಓದುಗರೇ ಬೆನ್ನೆಲುಬು

‘ವಾರ್ತಾಭಾರತಿ’ ಮಾಧ್ಯಮ ಕ್ಷೇತ್ರ ಭಿನ್ನ ಪ್ರಯೋಗ. ಯಾವುದೇ ರಾಜಕೀಯ ಪಕ್ಷದ ಅಡಿಯಾಳಾಗದೇ ನಿರ್ಭೀತಿಯಿಂದ ಪ್ರಸಾರಗೊಳ್ಳುತ್ತಿರುವ ‘ವಾರ್ತಾಭಾರತಿ’ಗೆ ಓದುಗರೇ ಬೆನ್ನೆಲುಬು. ಸ್ಥಳೀಯ ಸುದ್ದಿಯಿಂದ ಹಿಡಿದು ವಿದೇಶದ ಸುದ್ದಿಗಳೂ ‘ವಾರ್ತಾಭಾರತಿ’ಯಲ್ಲಿ ಲಭ್ಯ. ಜಾನಪದ ಕಲೆ, ಗುಡ್ಡಗಾಡು ಪ್ರದೇಶದ ಸಮಸ್ಯೆ ಬಗೆಹರಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸುವ ಪತ್ರಿಕೆ ‘ವಾರ್ತಾಭಾರತಿ’ಯಾಗಿದೆ.

ಸಿ.ಎಂ. ನರಸಿಂಹಮೂರ್ತಿ

ಅಂತರ್‌ರಾಷ್ಟ್ರೀಯ ಜಾನಪದ ಕಲಾವಿದ, ಚಾಮರಾಜನಗರ

ನೊಂದವರ ಧ್ವನಿ

ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ, ನೊಂದವರ, ಶೋಷಿತರ ಪರ ಧ್ವನಿಯಾಗಿ ‘ವಾರ್ತಾಭಾರತಿ’ ಕಾರ್ಯನಿರ್ವಹಿಸುತ್ತಿದೆ. ಉಳ್ಳವರ ಪರ ಹಲವು ಪತ್ರಿಕೆಗಳಿದ್ದರೂ ‘ವಾರ್ತಾಭಾರತಿ’ ಮಾತ್ರ ಶೋಷಿತರ ಪರ ನಿಂತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುವ ‘ವಾರ್ತಾಭಾರತಿ’ಯನ್ನು ತಳ ಸಮುದಾಯದ ಜನರೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ಸಂತೋಷ ಜಾಬೀನ್

ಸಾಮಾಜಿಕ ಕಾರ್ಯಕರ್ತ, ಕಲಬುರಗಿ.

ಜನ ಜಾಗೃತಿ ಮೂಡಿಸುವ ಕೆಲಸ

ನಾನು ‘ವಾರ್ತಾಭಾರತಿ’ ಪತ್ರಿಕೆಯನ್ನು ಪ್ರಾರಂಭದಿಂದಲೂ ಓದುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಪ್ರಸಾರದಲ್ಲಿ ಅಭಿವೃದ್ಧ್ಧಿ ಹೊಂದುತ್ತಿರುವುದು ಈ ಪತ್ರಿಕೆಯಲ್ಲಿ ಬರುತ್ತಿರುವ ವರದಿ, ಲೇಖನ, ಸಂಪಾದಕೀಯ, ಜಾಹೀರಾತು ಮೊದಲಾದ ವಿಷಯಗಳು ಜನರಿಗೆ ಇಷ್ಟವಾಗುತ್ತಿರುವುದರ ಹೆಗ್ಗುರುತು ಎಂದರೂ ತಪ್ಪಾಗಲಾರದು. ಸುದ್ದಿಗಳನ್ನು ಒದಗಿಸುವ ಜೊತೆಗೆ ಜನರಿಗೆ ಶಿಕ್ಷಣ, ಮನೋರಂಜನೆ, ಜಾಗೃತಿಯನ್ನು ಮೂಡಿಸುವ ಕೆಲಸವನ್ನೂ ‘ವಾರ್ತಾಭಾರತಿ’ ಮಾಡುತ್ತಿದೆ. ಅಲ್ಲದೆ ರಾಜಕೀಯ, ವ್ಯಾಪಾರ, ಕ್ರೀಡೆ, ಕಲೆ ಮತ್ತು ವಿಜ್ಞಾನದಂತಹ ವಿವಿಧ ಕೃತಿಗಳನ್ನು ಒಳಗೊಂಡಿರುವ ಅತ್ಯುತ್ತಮ ಪತ್ರಿಕೆಯಾಗಿದೆ. ಒಟ್ಟಾರೆಯಾಗಿ ‘ವಾರ್ತಾಭಾರತಿ’ ಜನಮಾನಸದ ಪತ್ರಿಕೆ. ಇದು ಇನ್ನೂ ಹೆಚ್ಚು ಬೆಳೆಯಲಿ, ಶತ ಶತಮಾನಗಳ ಕಾಲ ಬೆಳಗಲಿ ಎಂದು ಮನ ತುಂಬಿ ಹಾರೈಸುವೆ.

ಬಿ.ಮನಮೋಹನ ರಾವ್, ನಿವೃತ್ತ ಸಬ್ ಇನ್‌ಸ್ಪೆಕ್ಟರ್

ಪತ್ರಿಕಾ ರಂಗದ ಘನತೆಗೆ ಮೆರುಗು

ದಮನಿತ, ಶೋಷಿತ ವರ್ಗಗಳ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ‘ವಾರ್ತಾಭಾರತಿ’ ಪತ್ರಿಕಾರಂಗದ ಘನತೆಯನ್ನು ಎತ್ತಿಹಿಡಿದಿದೆ. ಕಳೆದ ಹತ್ತು ವರ್ಷಗಳಿಂದ ನಾನು ‘ವಾರ್ತಾಭಾರತಿ’ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದೇನೆ. ಈ ಪತ್ರಿಕೆ ಓದುವ ಗೀಳು ಹಚ್ಚಿದ ಮೇಲೆ ಸಾಕಷ್ಟು ವಿಷಯಗಳು ಲಭ್ಯವಾಗಿವೆ. ಪ್ರತಿಯೊಂದು ಮಾಹಿತಿಗಳು, ಅಂಕಣ ಮತ್ತು ಸುದ್ದಿಗಳು ವಿಷಯಾಧಾರಿತವಾಗಿರುತ್ತದೆ. ‘ವಾರ್ತಾಭಾರತಿ’ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿದೆ. ಸಮಾಜದ ಕಟ್ಟಕಡೆಯ ಸಮುದಾಯಗಳ ಬಗ್ಗೆಯೂ ವಿಶೇಷ ಕಾಳಜಿಯನ್ನು ಹೊಂದಿ ದಲಿತ, ಆದಿವಾಸಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದೆ. ದಲಿತ, ದಮನಿತರ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ‘ವಾರ್ತಾಭಾರತಿ’ ನಿರಂತರ ದುಡಿಯುತ್ತಿದೆ.

ಕುಮಾರಿ ಎಚ್., ಪ್ರೌಢಶಾಲೆ ಸಹ ಶಿಕ್ಷಕಿ, ನಂಜನಗೂಡು, ಮೈಸೂರು ಜಿಲ್ಲೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News

ಒಳಗಣ್ಣು
ವೃತ್ತಾಂತ