ಸ್ವತಂತ್ರ ಪತ್ರಿಕೋದ್ಯಮ V/s ಪ್ರಭುತ್ವ ಪರ ಸಂಕಥನ

ಪತ್ರಿಕೋದ್ಯಮವು ಪರಾಧೀನತೆಯ ಹಾದಿಯಲ್ಲಿ ಸಾಗುತ್ತಿರುವ ಯುಗದಲ್ಲಿ ಗ್ರೀಷ್ಮಾ ಕುತ್ತಾರ್ ಭಯರಹಿತ ವರದಿಗಾರಿಕೆ ಹಾಗೂ ನ್ಯಾಯಪರತೆಯಿಂದ ದಾರಿದೀಪದಂತೆ ಗೋಚರಿಸುತ್ತಾರೆ. ಧ್ವನಿ ಉಡುಗಿಸಲ್ಪಟ್ಟವರ ಕೂಗನ್ನು ಪ್ರತಿಧ್ವನಿಸುವಲ್ಲಿ ಹೆಸರಾಗಿರುವ ಅವರ ಕೆಲಸ, ಅಂಚಿನಲ್ಲಿರುವ ಸಮುದಾಯಗಳು ಹಾಗೂ ಪ್ರಾತಿನಿಧ್ಯ ಇಲ್ಲದ ಗುಂಪುಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುತ್ತದೆ. ಜಾತಿ ತಾರತಮ್ಯದ ತೀವ್ರತೆಯ ವಾಸ್ತವಿಕ ವರದಿಗಾರಿಕೆಯಿಂದ ಹಿಡಿದು ಇತ್ತೀಚಿನ ಮಣಿಪುರದ ಹಿಂಸಾಕಾಂಡದ ಭೀಕರತೆಯನ್ನು ದಾಖಲಿಸುವವರೆಗೆ ಅವರು, ಅನುಕೂಲಕರವಲ್ಲದ ಸತ್ಯಗಳನ್ನು ಹೇಳಲು ಹಿಂಜರಿಯದ ಪತ್ರಕರ್ತೆ ಎಂದು ಹೆಸರು ಗಳಿಸಿದ್ದಾರೆ. ಅವರು ‘ವಾರ್ತಾಭಾರತಿ’ಯ ವಾರ್ಷಿಕ ಸಂಚಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ನಿರ್ಲಕ್ಷಿಸುವ ಸಂಕಥನಗಳನ್ನು ವರದಿ ಮಾಡುವಾಗ ಇರುವ ಸವಾಲುಗಳನ್ನು ವಿವರಿಸಿದ್ದಾರೆ. ಮಣಿಪುರ ಸಂಘರ್ಷದ ಸಂಕೀರ್ಣತೆಗಳು, ಅಂಚಿನಲ್ಲಿರುವ ಸಮುದಾಯಗಳು ಎದುರಿಸುವ ಸಾಂಸ್ಥಿಕ ಅಡೆತಡೆಗಳು ಮತ್ತು ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಪರಿಸ್ಥಿತಿ ಕುರಿತು ಅವರು ಚರ್ಚಿಸಿದ್ದಾರೆ. ಪ್ರತಿಕೂಲ ಸನ್ನಿವೇಶ ಇದ್ದಾಗಲೂ ಸ್ಥಿರವಾಗಿ ನಿಲ್ಲುವುದು ಎಷ್ಟು ಮುಖ್ಯ ಎಂಬುದನ್ನು ತಮ್ಮ ಒಳನೋಟಗಳ ಮೂಲಕ ವಿವರಿಸಿದ್ದಾರೆ. ಇಂಥ ಧ್ವನಿಗಳ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ಯು ಅವರ ಧ್ವನಿಯನ್ನು ಪ್ರತಿಫಲಿಸಲು ಮುಂದಾಗಿದೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Update: 2025-01-09 06:48 GMT

ಸಂದರ್ಶನ : ಇಸ್ಮಾಯಿಲ್ ಝೋರೇಜ್

► ಭಾರತದಲ್ಲಿ ವಿಶೇಷವಾಗಿ, ಪ್ರಸ್ತುತ ಆಡಳಿತದಡಿ ಸ್ವತಂತ್ರ ಪತ್ರಿಕೋದ್ಯಮದ ಪಾತ್ರವೇನು? ಸ್ವತಂತ್ರ ಪತ್ರಕರ್ತರಾಗಿ ನೀವು ಎದುರಿಸಿದ ಅತಿ ದೊಡ್ಡ ಸವಾಲುಗಳೇನು?

 ಈಗ ಸ್ವತಂತ್ರ ಪತ್ರಿಕೋದ್ಯಮ ಮಾತ್ರ ದೇಶವನ್ನು ಉಳಿಸ ಬಲ್ಲದು. ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು, ಅದು ನೆಟ್ ವರ್ಕ್ 18 ಇಲ್ಲವೇ ಎನ್‌ಡಿ ಟಿವಿ ಆಗಿರಬಹುದು, ಸರಕಾರದ ವಕ್ತಾರರಾಗಿ ಬಿಟ್ಟಿವೆ. ಅಧಿಕಾರದಲ್ಲಿರುವವರ ಪ್ರಚಾರಾಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಅಧಿಕಾರಸ್ಥರ ಧ್ವನಿ ಪ್ರತಿಫಲಿಸಲು ನೆರವಾಗುತ್ತಿವೆ.

ಇಂಥ ಸನ್ನಿವೇಶದಲ್ಲಿ ಸ್ವತಂತ್ರ ವೇದಿಕೆಗಳು ಮಾತ್ರ ಪ್ರಾಮಾಣಿಕ, ಪಕ್ಷಪಾತರಹಿತ ಪತ್ರಿಕೋದ್ಯಮಕ್ಕೆ ಉಳಿದ ವೇದಿಕೆಗಳಾಗಿವೆ. ಕ್ಯಾರವಾನ್ ನಂಥ ಪ್ರಕಟಣೆಗಳು ಸ್ವತಂತ್ರ ಧ್ವನಿಗಳಿಗೆ ಅಗತ್ಯವಾದ ವೇದಿಕೆ ಕಲ್ಪಿಸುತ್ತಿವೆ. ಆದರೆ, ಇವು ಸೀಮಿತ ಅವಕಾಶವನ್ನಷ್ಟೇ ನೀಡುತ್ತಿದ್ದು, ಸವಾಲು ಗಂಭೀರವಾಗಿದೆ.

ಪತ್ರಕರ್ತೆಯರಿಗೆ ನೀಡುವ ಅತಿ ಪ್ರತಿಷ್ಠಿತ ಪ್ರಶಸ್ತಿಯಾದ ಚಮೇಲಿ ದೇವಿ ಜೈನ್ ಪುರಸ್ಕಾರ ಪಡೆದಿದ್ದರೂ, ನಾನು ಯಾವ ವರದಿಗಳನ್ನು ಮಾಡಬೇಕೆಂದಿರುವೆನೋ ಅಂಥ ವರದಿ ಮಾಡಲು ನನಗೆ ಸಾಧ್ಯವಾಗು ತ್ತಿಲ್ಲ. ಇದಕ್ಕೆ ಕಾರಣ ಸ್ಪಷ್ಟ; ಇಂಥ ವರದಿಗಳನ್ನು ಪ್ರಕಟಿಸಲು ಇರುವ ವೇದಿಕೆಗಳು ಬಹಳ ಕಡಿಮೆ. ರಾಷ್ಟ್ರೀಯ ಪ್ರಕಟಣೆಗಳು ನಿರ್ಬಂಧ ಕ್ಕೊಳಗಾಗಿವೆ ಮತ್ತು ಅಂತರ್‌ರಾಷ್ಟ್ರೀಯ ಏಜೆನ್ಸಿಗಳಿಗೆ ಅವುಗಳದ್ದೇ ಆದ ಮಿತಿಗಳಿವೆ.

ಬೆಂಬಲದ ಕೊರತೆ ಹಾಗೂ ವಿಶ್ವಾಸಾರ್ಹ ವೇದಿಕೆಗಳು ಕಡಿಮೆ ಇರುವುದರಿಂದ, ಸ್ವತಂತ್ರ ಪತ್ರಕರ್ತರು ಪರಿಣಾಮಕಾರಿ ವರದಿಗಳನ್ನು ಮಾಡುವುದು ಬಹಳ ಕಷ್ಟವಾಗುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಮುಖ್ಯವಾದ ವಿಷಯಗಳನ್ನು ಎತ್ತಿ ಹಿಡಿಯಬೇಕು ಎಂದುಕೊಂಡಿ ದ್ದೇವೆ; ಆದರೆ, ಇದಕ್ಕೆ ಇರುವ ರಚನಾತ್ಮಕ ಅಡೆತಡೆಗಳು ಒಂದೆರಡಲ್ಲ.

► ಮಣಿಪುರದಲ್ಲಿ ಹಿಂಸೆ ಕುರಿತ ನಿಮ್ಮ ಇತ್ತೀಚಿನ ವರದಿ ಬಹಳಷ್ಟು ಗಮನ ಸೆಳೆಯಿತು. ಇಂಥ ಸೂಕ್ಷ್ಮ ವಿಷಯ ಕುರಿತು ವರದಿ ಮಾಡುವಾಗ ನೀವು ಬಳಸಿದ ಮಾರ್ಗವೇನು ಮತ್ತು ನೀವು ಸೃಷ್ಟಿಸಬೇಕೆಂದು ಕೊಂಡಿದ್ದ ಪರಿಣಾಮದ ಗುರಿಯನ್ನು ಹೇಗೆ ಮುಟ್ಟಿದಿರಿ ಎಂಬುದನ್ನು ಹಂಚಿಕೊಳ್ಳುವಿರಾ?

ಮಣಿಪುರದ ಬಗ್ಗೆ ವರದಿ ಮಾಡಲು ಆರಂಭಿಸಿದಾಗ, ನಾನು ಘಟನೆಗೆ ತುರ್ತಾಗಿ ಪ್ರತಿಕ್ರಿಯಿಸಬೇಕಿತ್ತು. ಆಗ ಅಲ್ಲಿನ ಹಿಂಸಾಕಾಂಡದ ಬಗ್ಗೆ ಯಾವುದೇ ವರದಿ ಆಗಿರಲಿಲ್ಲ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಇಡೀ ದೇಶ ಕತ್ತಲೆಯಲ್ಲಿತ್ತು. ಈ ಮೌನ ಉದ್ದೇಶಪೂರ್ವಕವಾದುದಾಗಿತ್ತು- ಮಣಿಪುರ ಸರಕಾರ ಹಾಗೂ ಕೇಂದ್ರ ಸರಕಾರ ಎರಡೂ ಈ ವಿಷಯ ಸಾರ್ವಜನಿಕರಿಗೆ ಗೊತ್ತಾಗಬಾರದು ಎಂದು ಮುಚ್ಚಿಡಲು ಪ್ರಯತ್ನಿಸು ತ್ತಿದ್ದವು. ಹಿಂಸಾಕಾಂಡ ಈಗಲೂ ಮುಂದುವರಿದಿದ್ದರೂ, ಮಣಿಪುರದ ವಿಷಯ ಚರ್ಚೆಗೆ ಬರುವುದು ಅವರಿಗೆ ಇಷ್ಟವಿಲ್ಲ.

ನನ್ನ ಗುರಿ ಸರಳವಾಗಿತ್ತು- ಅಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುವುದು. ನನ್ನ ವರದಿಗಾರಿಕೆಯಿಂದಾಗಿ ಉಳಿದವರು ಈ ಕುರಿತು ಬರೆಯಲಿದ್ದಾರೆ; ಇದರಿಂದ ಸಂಘರ್ಷ ಕುರಿತು ನಿರಂತರ ಸಂವಾದ ಸೃಷ್ಟಿಯಾಗಲಿದೆ ಎನ್ನುವ ಆಶಾಭಾವ ಹೊಂದಿದ್ದೆ. ಆದರೆ, ಇಂದಿಗೂ ಬೆರಳೆಣಿಕೆಯ ಪತ್ರಕರ್ತರು ಮಾತ್ರ ಈಶಾನ್ಯ ಪ್ರಾಂತದ ಬಗ್ಗೆ ಬರೆಯುತ್ತಿದ್ದಾರೆ.

ಗಮನ ನೀಡುವಲ್ಲಿನ ಇಂಥ ಕೊರತೆಯು ಮಣಿಪುರ ಕುರಿತ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಅಹಿತಕರ ಪ್ರಶ್ನೆಗಳನ್ನು ಎತ್ತುತ್ತದೆ. ದೇಶದ ಬೇರೆ ರಾಜ್ಯಗಳವರು ತಮ್ಮ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ ಎಂದು ಈ ಪ್ರಾಂತಗಳ ಜನರು ಅಂದುಕೊಂಡಿದ್ದಾರೆ. ಈ ಅಭಿಪ್ರಾಯದಲ್ಲಿ ಸ್ವಲ್ಪಮಟ್ಟಿಗೆ ಸತ್ಯವಿದೆ ಮತ್ತು ನಾವೆಲ್ಲರೂ ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಇಂಥ ಧ್ವನಿಯಿಲ್ಲದ ಕಥೆಗಳಿಗೆ ಧ್ವನಿ ನೀಡುವುದು ಹಾಗೂ ಸಣ್ಣ ಪ್ರಮಾಣದಲ್ಲಾದರೂ ಈ ನಿರ್ಲಕ್ಷ್ಯವನ್ನು ಬದಲಿಸಬೇಕು ಎನ್ನುವುದು ನನ್ನ ಗುರಿ.

► ಮಣಿಪುರ ಕುರಿತ ನಿಮ್ಮ ವರದಿಗಳು ಮಾನವ ಹಕ್ಕುಗಳ ಉಲ್ಲಂಘನೆ ವಿಷಯಗಳನ್ನು ಎತ್ತಿಹಿಡಿದವು. ಈ ಹಿಂಸೆಯಿಂದ ಜನರು, ನಿರ್ದಿಷ್ಟವಾಗಿ, ಮಹಿಳೆಯರು ಹೇಗೆ ಹಾನಿಗೊಳಗಾದರು ಮತ್ತು ಅವರ ಅನುಭವಗಳು ನಿಮ್ಮ ವರದಿಯನ್ನು ಹೇಗೆ ಪ್ರಭಾವಿಸಿದವು ಎಂಬ ಒಳನೋಟ ನೀಡಬಹುದೇ?

ಮಣಿಪುರದಲ್ಲಿನ ಹಿಂಸೆಗೆ ಜನಾಂಗೀಯ ಕಾರಣಗಳಿವೆ; ಆದರೆ, ಲಿಂಗ ಸಂಬಂಧಿ ಹಿಂಸೆಗಳು ಸ್ಪಷ್ಟವಾಗಿ ಅದರ ಭಾಗವಲ್ಲವಾದರೂ, ಇಂಥ ಸಂಘರ್ಷದಿಂದ ಮಹಿಳೆಯರು ಮತ್ತು ಮಕ್ಕಳು ಹಿಂಸೆಗೊಳಗಾಗುತ್ತಾರೆ. ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವ ಯುದ್ಧ ಇಲ್ಲವೆ ಹಿಂಸಾಕಾಂಡಗಳಲ್ಲೂ ಇದು ನಿಜ; ಅವರು ಯಾವಾಗಲೂ ಅತ್ಯಂತ ದುರ್ಬಲ ಗುಂಪುಗಳಾಗಿರುತ್ತಾರೆ. ಮಣಿಪುರದಲ್ಲಿ ಎರಡೂ ಗುಂಪಿನ ಶಸ್ತ್ರಧಾರಿ ಪುರುಷರು, ಮಹಿಳೆಯರು ಹಾಗೂ ಮಕ್ಕಳನ್ನು ಗುರಿಯಾಗಿಸಿ ಕೊಂಡು ಹಿಂಸಾಕೃತ್ಯ ಎಸಗಿದ್ದಾರೆ; ಇದರಿಂದ ಸಂಘರ್ಷದ ತೀವ್ರತೆ ಹೆಚ್ಚಿದೆ.

ಹಿಂದಿರುಗಿ ನೋಡಿದರೆ, ವೈರಲ್ ಆದ ವೀಡಿಯೊದಲ್ಲಿ ದಾಖಲಾದ ಘಟನೆಯೂ ಸೇರಿದಂತೆ ಕುಕಿ ಮಹಿಳೆಯರ ಮೇಲೆ ಅತ್ಯಂತ ಹೀನ ಹಿಂಸಾಕೃತ್ಯಗಳು ನಡೆದಿವೆ. ಈ ಘಟನೆಗಳು ನಡೆದು 2 ತಿಂಗಳುಗಳ ಬಳಿಕ ಬೆಳಕಿಗೆ ಬಂದವು ಎನ್ನುವುದು ರಾಜ್ಯ ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಆಡಳಿತದ ನಿರ್ಲಕ್ಷ್ಯ ಮಾತ್ರವಲ್ಲದೆ, ಹಿಂಸೆ ಯನ್ನು ನಿಲ್ಲಿಸುವಲ್ಲಿ ಅದರ ವೈಫಲ್ಯವನ್ನು ತೋರಿಸುತ್ತದೆ. ಘಟನೆಗೆ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದರೂ, ಹಿಂಸಾಕಾಂಡ ಮುಂದು ವರಿಯಿತು; ಮಹಿಳೆಯರು ಇಲ್ಲವೆ ಮಕ್ಕಳು ಸೇರಿದಂತೆ ಇಡೀ ಕುಟುಂಬಗಳ ದಹನದಂಥ ಪರಮಾವಧಿ ಕ್ರೌರ್ಯ ಪ್ರಕರಣಗಳು ಮುಂದುವರಿದವು.

ಮಹಿಳೆಯರ ಅನುಭವವನ್ನು ದಾಖಲಿಸುವಾಗ, ಅವರು ಘಟನೆಯಿಂದ ಘಾಸಿಗೊಂಡಿರುತ್ತಾರೆ ಮತ್ತು ಸಾಮಾಜಿಕ ಬಹಿಷ್ಕಾರ ಮತ್ತಿತರ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಗುರುತಿಸುವುದು ಮುಖ್ಯವಾಗಲಿದೆ. ಆದರೆ, ಸಂಘರ್ಷದಿಂದಾಗುವ ವಿನಾಶವು ಮಹಿಳೆಯರನ್ನು ದಾಟಿ ವಿಸ್ತರಿಸಿರುತ್ತದೆ; ಪುರುಷರು,ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲರ ಮೇಲೆಯೂ ಪರಿಣಾಮ ಬೀರಿರುತ್ತದೆ. ಉದಾಹರಣೆಗೆ, ಹುಡುಗರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಬಲವಂತಪಡಿಸುವ ಮೂಲಕ ಹಿಂಸಾಚಾರಕ್ಕೆ ಉತ್ತೇಜನ ನೀಡಲಾಗು ತ್ತದೆ.

ಮಹಿಳೆಯರ ಮೇಲಿನ ಹಿಂಸೆಯನ್ನು ಎತ್ತಿತೋರಿಸುವುದು ಮುಖ್ಯವಾದರೂ, ಇಂಥ ಜನಾಂಗೀಯ ಸಂಘರ್ಷದಲ್ಲಿ ಮನುಷ್ಯರ ವಿಸ್ತೃತ ವಿನಾಶವನ್ನು ಅರ್ಥ ಮಾಡಿಕೊಳ್ಳಲೇಬೇಕು. ಪ್ರತಿಯೊಂದು ಗುಂಪು ಕೂಡ ಸಂಕೀರ್ಣ ಮತ್ತು ದೊಡ್ಡ ಸವಾಲುಗಳನ್ನು ಎದುರಿಸುತ್ತಿರುತ್ತವೆ; ನನ್ನ ವರದಿಗಳು ಯಾವುದೇ ಧ್ವನಿ ಇಲ್ಲವೆ ಅನುಭವಗಳು ತಪ್ಪಿಹೋಗದಂತೆ ಖಾತ್ರಿಪಡಿಸುವ ಮೂಲಕ ಹಿಂಸೆಯ ಬಹುಮುಖ ಆಯಾಮಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತವೆ.

► ನಿಮ್ಮ ಅನುಭವದ ಪ್ರಕಾರ, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ದಲಿತರು ಹಾಗೂ ಅಂಚಿನಲ್ಲಿರುವ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿರುವ ವಿಷಯಗಳು ಹೇಗೆ ಪ್ರತಿನಿಧಿಸಲ್ಪಡುತ್ತಿವೆ? ನೀವು ಯಾವ ರೀತಿಯ ಕಂದರವನ್ನು ನೋಡಿದ್ದೀರಿ?

ಮುಖ್ಯವಾಹಿನಿ ಮಾಧ್ಯಮದಲ್ಲಿ ಜಾತಿ ಆಧಾರಿತ ಅಪರಾಧಗಳು ಯಾವಾಗಲೂ ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿವೆ. ಇದು ಹೊಸ ಸಂಗತಿಯೇನಲ್ಲ; ಮೊದಲಿನಿಂದಲೂ ಇರುವಂಥದ್ದು. ವ್ಯಕ್ತಿಯೊಬ್ಬನ ಮೇಲೆ ಹಿಂಸೆ, ಸಂಸ್ಥೆಗಳಲ್ಲಿ ವ್ಯವಸ್ಥಾತ್ಮಕ ತಾರತಮ್ಯ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಸೀಟ್ ನೀಡುವಿಕೆಯಲ್ಲಿ ಮೀಸಲು ಸೌಲಭ್ಯ ನಿರಾಕರಣೆ ಇಲ್ಲವೆ ದುರ್ಬಳಕೆ- ಇಂಥವೆಲ್ಲ ಮುಖ್ಯ ಸುದ್ದಿ ಯಾಗುವುದು ಅಪರೂಪ. ಮಾಧ್ಯಮಗಳು ಅಂಚಿನಲ್ಲಿರುವ ಸಮುದಾಯಗಳು ಅನುಭವಿಸುವ ರಾಚನಿಕ ಹಾಗೂ ದೈನಂದಿನ ಹಿಂಸೆಯನ್ನು ವರದಿ ಮಾಡುವಲ್ಲಿ ಸತತವಾಗಿ ವಿಫಲವಾಗಿವೆ.

ಹಾಲಿ ರಾಜಕೀಯ ವಾತಾವರಣದಿಂದಾಗಿ ದೇಶದೆಲ್ಲೆಡೆ ಜಾತಿ ಪ್ರತಿಷ್ಠೆಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರುವ ಸನ್ನಿವೇಶ ಇದ್ದು, ವರದಿಗಾರಿಕೆಯಲ್ಲಿನ ಈ ಕಂದರ ಕಣ್ಣಿಗೆ ರಾಚುತ್ತಿದೆ. ಈ ವಾತಾವರಣವು ಜಾತಿವಾದವನ್ನು ಸಾಮಾನ್ಯೀಕರಿಸುವುದರಿಂದ, ಇಂಥ ವಿಷಯಗಳು ಅಗತ್ಯವಿರುವಷ್ಟು ಗಮನ ಸೆಳೆಯುವುದು ಕಷ್ಟವಾಗುತ್ತಿದೆ.

ಇದಕ್ಕೆ ಪ್ರತಿಯಾಗಿ ಮುಸ್ಲಿಮರ ವಿರುದ್ಧದ ಅಪರಾಧಗಳು, ಪ್ರಾಯಶಃ ಅಂತರ್‌ರಾಷ್ಟ್ರೀಯ ಗಮನ ಸೆಳೆಯುವುದರಿಂದ, ಹೆಚ್ಚು ಪ್ರಚಾರ ಪಡೆಯುತ್ತಿವೆ. ಮೋದಿ ಸರಕಾರವು ಮುಸ್ಲಿಮರ ವಿರುದ್ಧ ಇದೆ ಎಂಬ ಅಭಿಪ್ರಾಯದಿಂದಾಗಿ, ಇಂಥ ಸುದ್ದಿಗಳು ಅಂತರ್‌ರಾಷ್ಟ್ರೀಯ ಮಾಧ್ಯಮ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆದರೆ, ಇದೇ ಮಾತನ್ನು ಜಾತಿ ಆಧಾರಿತ ವಿಷಯಗಳ ಬಗ್ಗೆ ಹೇಳಲು ಆಗುವುದಿಲ್ಲ.

ತುಳಿತಕ್ಕೊಳಗಾಗಿರುವ ಜಾತಿ ಸಮುದಾಯಗಳು ಮುಸ್ಲಿಮರಂಥ ದೊಡ್ಡ ಗುಂಪುಗಳಂತೆ ಜಾಗತಿಕ ಮಟ್ಟದ ಒಕ್ಕೂಟವನ್ನು ಹೊಂದಿಲ್ಲ. ಜಾತಿ ಆಧಾರಿತ ಅಪರಾಧಗಳಿಗೆ ಪ್ರತಿರೋಧವು ದೇಶದೊಳಗಿನ ಸಣ್ಣ ಪ್ರದೇಶ ಗಳಲ್ಲಿ ಹಾಗೂ ವಿದೇಶಗಳ ಕೆಲವು ಗುಂಪುಗಳಿಗೆ ಸೀಮಿತವಾಗಿದೆ. ಇಂಥ ಸುದ್ದಿಗಳು ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟಗೊಳ್ಳದೆ ಇರುವುದರಿಂದ, ಈ ಸಮುದಾಯಗಳು ತಮ್ಮ ಧ್ವನಿ ಕೇಳುವಂತೆ ಮಾಡಲು ಹೆಣಗಾಡಬೇಕಾಗುತ್ತದೆ. ಗಮನ ನೀಡುವಿಕೆಯಲ್ಲಿನ ತಾರತಮ್ಯವು ಜಾತೀಯತೆಯು ಆಳವಾಗಿ ಬೇರೂರಿರುವ ಮತ್ತು ವ್ಯವಸ್ಥಾತ್ಮಕ ಸಮಸ್ಯೆ ಎಂದು ತಿಳಿಸಿಕೊಡುವಲ್ಲಿ ಮಾಧ್ಯಮಗಳು ವಿಫಲವಾಗಿರುವುದನ್ನು ತೋರಿಸುತ್ತದೆ ಮತ್ತು ಈ ಕಂದರವನ್ನು ಶೀಘ್ರವಾಗಿ ತುಂಬಬೇಕಿದೆ.

► ಭಾರತದ ಪತ್ರಕರ್ತರು, ವಿಶೇಷವಾಗಿ, ಸೂಕ್ಷ್ಮ ವಿಷಯಗಳನ್ನು ಬರೆಯುವವರು, ಬೆದರಿಕೆ ಹಾಗೂ ಒತ್ತಡ ಎದುರಿಸುತ್ತಾರೆ. ಇಂಥ ಅನುಭವ ನಿಮಗೆ ಆಗಿದೆಯೇ ಮತ್ತು ಈ ಸನ್ನಿವೇಶವನ್ನು ಹೇಗೆ ನಿರ್ವಹಿಸುತ್ತೀರಿ?

ದೇಶದಲ್ಲಿ ಪತ್ರಕರ್ತರಿಗೆ ಬೆದರಿಕೆ ಒಂದು ವಾಸ್ತವ. ಆದರೆ, ಇಂಥ ಹೆಚ್ಚಿನ ಬೆದರಿಕೆ ಬರುವುದು ಸರಕಾರದಿಂದ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲಿಂಗ್ ಮತ್ತು ಆನ್‌ಲೈನ್‌ನಲ್ಲಿ ಗೋಳು ಹೊಯ್ದುಕೊಳ್ಳುವಿಕೆ ಈ ವೃತ್ತಿಯ ಒಂದು ಭಾಗವಾಗಿಬಿಟ್ಟಿದೆ; ಆದರೆ, ಪ್ರಾಮಾಣಿಕ ವರದಿಗಾರಿಕೆಗೆ ಸುರಕ್ಷಿತ ಸ್ಥಳ ಇಲ್ಲದೆ ಇರುವುದು ಮುಖ್ಯ ಸಮಸ್ಯೆ. ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಸೈದ್ಧಾಂತಿಕವಾಗಿ ಬಲಪಂಥೀಯ ಅಲ್ಲದಿದ್ದರೂ, ಸರಕಾರದ ಪರವಾಗಿ ಇವೆ. ಇದರಿಂದಾಗಿ ಸರಕಾರದ ಪರವಾದ ಸುದ್ದಿ, ವಾತಾವರಣ ಸೃಷ್ಟಿಯಾಗುತ್ತದೆ. ಇಂಥ ವಾತಾವರಣದಲ್ಲಿ ಸತ್ಯವನ್ನು ವರದಿ ಮಾಡುವ ಯಾರೇ ಆದರೂ ಅಪಾಯಕ್ಕೆ ಸಿಲುಕುತ್ತಾರೆ.

ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ, ನಿಜ ಹೊರಹೊಮ್ಮುವ ಮೊದಲೇ ಸುಳ್ಳು ಸಂಕಥನ ಎಲ್ಲೆಡೆ ವ್ಯಾಪಿಸಿ ಸ್ಥಾಪಿತವಾಗಿರುತ್ತದೆ. ಇದರಿಂದ ಸ್ವತಂತ್ರ ಪತ್ರಕರ್ತರ ಕೆಲಸ ಇನ್ನಷ್ಟು ಕಷ್ಟಕರವಾಗಲಿದೆ. ಮುಖ್ಯವಾಹಿನಿ ಸುದ್ದಿ ಸಂಸ್ಥೆಗಳಂತಲ್ಲದೆ, ಸ್ವತಂತ್ರ ಪತ್ರಕರ್ತರು ಮೊದಲಿಗೆ ಸುದ್ದಿಯನ್ನು ವಿವರಿಸಿ, ಪ್ರಕಟಿಸುವ ಮಾಧ್ಯಮ ಸಂಸ್ಥೆಯನ್ನು ಪತ್ತೆ ಹಚ್ಚಿದ ಬಳಿಕ ಸುದ್ದಿಯನ್ನು ಮಾಡಲು ಹೊರಡುವುದರಿಂದ ಹೆಚ್ಚು ಕಾಲ ತೆಗೆದುಕೊಳ್ಳುತ್ತಾರೆ. ಅವರ ವರದಿ ಸಿದ್ಧವಾಗುವಷ್ಟರಲ್ಲಿ ಸರಕಾರದ ಪರ ಇರುವ ಮಾಧ್ಯಮಗಳು ದಾರಿ ತಪ್ಪಿಸುವ ಸುದ್ದಿಗಳ ಮಹಾಪೂರವನ್ನೇ ಹರಿಸಿರುವುದರಿಂದ, ಈ ಗಲಾಟೆ ನಡುವೆ ನಿಜವನ್ನು ಪ್ರಕಟಿಸುವುದು ಕಷ್ಟವಾಗಲಿದೆ.

ಪತ್ರಕರ್ತರು ಎದುರಿಸುವ ಬೆದರಿಕೆಗಳು ಎರಡು ರೀತಿಯವು: ನಿಜವಾದ ವರದಿಗಾರಿಕೆಗೆ ಇರುವ ಸಕ್ರಿಯ ಪ್ರತಿರೋಧ ಮತ್ತು ಸ್ವತಂತ್ರ ಪತ್ರಕರ್ತರು ಎದುರಿಸುವ ರಾಚನಿಕ ಅನನುಕೂಲಗಳು. ಟ್ರೋಲಿಂಗ್ ಮತ್ತು ಆನ್‌ಲೈನ್ ಗೋಳು ಹೊಯ್ದುಕೊಳ್ಳುವುದು ನಿರಂತರ ಸಮಸ್ಯೆಯಾಗಿದೆ; ಇಂಗ್ಲಿಷಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೋಲಿಸಿದರೆ, ಪ್ರಾಂತೀಯ ಭಾಷೆಗಳ ಪತ್ರಕರ್ತರು ಗಂಭೀರ ಅಪಾಯ ಎದುರಿಸುತ್ತಾರೆ.

► ಸ್ವತಂತ್ರ ಪತ್ರಕರ್ತೆಯಾಗಿರುವ ನೀವು ಇಂಥದ್ಧೇ ನಿಲುವು ಹೊಂದಿರಬೇಕು ಎಂದು ದೊಡ್ಡ ಮಾಧ್ಯಮ ಸಂಸ್ಥೆಗಳಿಂದ ಇಲ್ಲವೆ ರಾಜಕೀಯ ಸಂಸ್ಥೆಗಳಿಂದ ಒತ್ತಡ ಎದುರಿಸಿದ್ದೀರಾ? ನಿಮ್ಮ ವರದಿಗಾರಿಕೆಯಲ್ಲಿ ಸ್ವಾತಂತ್ರ್ಯವನ್ನು ಹೇಗೆ ಕಾಯ್ದುಕೊಳ್ಳುತ್ತೀರಿ?

ಪತ್ರಕರ್ತರಾಗಿ ನೀವು ಏನಾಗಬೇಕು ಎಂಬ ಕುರಿತು ನಂಬಿಕೆ ಮತ್ತು ಸ್ಪಷ್ಟತೆ ಮುಖ್ಯ. ನೈತಿಕವಾದ ಮತ್ತು ನಿಜವಾದ ವರದಿಗಾರಿಕೆ ಎಂದರೆ ಏನು ಎಂಬುದು ನಿಮಗೆ ಅರ್ಥವಾಗಿದ್ದಲ್ಲಿ ಹೊರಗಿನ ಒತ್ತಡಗಳು, ಅದು ದೊಡ್ಡ ಮಾಧ್ಯಮ ಸಂಸ್ಥೆಗಳು ಇಲ್ಲವೆ ರಾಜಕೀಯ ಪಕ್ಷವಾಗಿರಬಹುದು, ಹೆಚ್ಚು ಪರಿಣಾಮ ಬೀರುವುದಿಲ್ಲ. ಪತ್ರಿಕಾ ವೃತ್ತಿ ಎಂದರೆ ಸರಿ ಮತ್ತು ತಪ್ಪನ್ನು ಗುರುತಿಸುವುದು; ಈ ಅರ್ಥದಲ್ಲಿ ಹೇಳುವುದಾದರೆ, ನೈತಿಕ ವರದಿಗಾರಿಕೆ ವಿಷಯಕ್ಕೆ ಬಂದರೆ, ಬಿಳಿ ಮತ್ತು ಕಪ್ಪು ಇರುತ್ತದೆಯೇ ಹೊರತು ಬೂದು ಬಣ್ಣ ಎಂಬುದು ಇರುವುದಿಲ್ಲ. ಸಮಗ್ರತೆ ಎನ್ನುವುದು ಒಂದು ಆಯ್ಕೆ; ನೀವು ಪತ್ರಿಕಾವೃತ್ತಿಯನ್ನು ಕೈಗೊಳ್ಳುತ್ತೀರಿ ಎಂದಾದಲ್ಲಿ ನೈತಿಕತೆಯನ್ನು ನಿರಂತರವಾಗಿ ಕಾಪಾಡಬೇಕಾಗುತ್ತದೆ.

ಹಲವು ಮಾಧ್ಯಮ ಸಂಸ್ಥೆಗಳು ಬಹಿರಂಗವಾಗಿಯೇ ಸರಕಾರದೊಟ್ಟಿಗೆ ಕೈ ಜೋಡಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ ಸರಕಾರದ ಪರವಾಗಿ ಯಾರು ಸಾರ್ವಜನಿಕ ಸಂಪರ್ಕ ಕೆಲಸ ಮಾಡುತ್ತಿದ್ದಾರೆ ಮತ್ತು ಯಾರು ನಿಜವಾದ ಪತ್ರಿಕಾ ಧರ್ಮಕ್ಕೆ ಬದ್ಧರಾಗಿದ್ದಾರೆ ಎಂಬುದನ್ನು ಗುರುತಿಸುವುದು ಸುಲಭವಾಗಲಿದೆ. ಇಂಥ ಧ್ರುವೀಕರಣವು ಸ್ವತಂತ್ರ ಧ್ವನಿಗಳಿಗೆ ಕೆಲವೇ ಕೆಲವು ಅವಕಾಶ ಮತ್ತು ಸೀಮಿತ ವೇದಿಕೆಯ ಸವಾಲುಗಳನ್ನು ಒಡ್ಡಬಹುದಾದರೂ, ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸರಳಗೊಳಿಸುತ್ತದೆ.

ಪತ್ರಿಕಾ ವೃತ್ತಿ ಬದಲು ರಾಜ್ಯದ ಕಾರ್ಯಸೂಚಿಯನ್ನು ಪ್ರಚಾರ ಪಡಿಸುವವರಿಗೆ ಹೋಲಿಸಿದರೆ, ಸ್ವತಂತ್ರ ಪತ್ರಿಕೋದ್ಯಮವು ಪ್ರಭುತ್ವ ಪ್ರಣೀತ ಸಂಕಥನದೊಂದಿಗೆ ಹೊಂದಿಕೊಳ್ಳಲು ನಿರಂತರವಾಗಿ ನಿರಾಕರಿಸುತ್ತದೆ. ಇಲ್ಲಿ ಸಾಮಾಜಿಕ ಮಾಧ್ಯಮ ಎರಡು ಪಾತ್ರವನ್ನು ನಿರ್ವಹಿಸುತ್ತದೆ; ಅದು ಸ್ವತಂತ್ರ ವರದಿಗಳನ್ನು ವರ್ಧಿಸುವ ಮೂಲಕ ಪ್ರಮುಖ ಸುದ್ದಿಗಳು ಹೆಚ್ಚು ಜನರನ್ನು ತಲುಪುವಂತೆ ಮಾಡಬಹುದು. ಅದೇ ಹೊತ್ತಿನಲ್ಲಿ ಅದು ಸುಳ್ಳು ಮಾಹಿತಿಗಳ ಮೂಲವಾಗಿ ಪರಿಣಮಿಸ ಬಹುದು; ಇದರಿಂದ ಇಡೀ ವಾತಾವರಣ ಹದಗೆಡುತ್ತದೆ. ನೈತಿಕ ಮಾನದಂಡವನ್ನು ಉಳಿಸಿಕೊಂಡೇ ವರದಿಗಾರಿಕೆಯಲ್ಲಿ ಸ್ವತಂತ್ರವನ್ನು ರಕ್ಷಿಸಿಕೊಂಡು ಸಮತೋಲನ ಗಳಿಸಬೇಕಾಗುತ್ತದೆ.

► ನಿಮ್ಮ ವರದಿಯು ಸಾಮಾಜಿಕ ವೇದಿಕೆಗಳಲ್ಲಿ ನಿಷ್ಪಕ್ಷವಾಗಿರುವಂತೆ ಖಾತ್ರಿಪಡಿಸಿಕೊಳ್ಳಲು ಏನು ಮಾಡುತ್ತೀರಿ ಮತ್ತು ನಿಮ್ಮ ಶ್ರೋತೃಗಳಿಗೆ ನಿಮ್ಮ ಜವಾಬ್ದಾರಿಯೇನು?

ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಮಾಧ್ಯಮವು ಎರಡು ಅಲಗಿನ ಕತ್ತಿ ಇದ್ದಂತೆ. ನಾವು ನಿಜವಾದ ಮಾಹಿತಿಯನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬಹುದಾದರೂ, ಅದು ಸರಿಯಾಗಿ ಇಲ್ಲವೇ ತಪ್ಪಾಗಿ ವ್ಯಾಖ್ಯಾನಿಸಲ್ಪಡುತ್ತದೆಯೇ ಎಂಬುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಿರ್ದಿಷ್ಟ ವಾಗಿ ಹೇಳಬೇಕೆಂದರೆ, ಮಣಿಪುರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರಕಾರವನ್ನು ಬೆಂಬಲಿಸುವ ಹಲವರು ನನ್ನ ವರದಿಗಳು ಪಕ್ಷಪಾತದವು ಎಂದು ದೂರಲು ಸಾಮಾಜಿಕ ಮಾಧ್ಯಮವನ್ನು ಬಳಸಿದರು. ಇದನ್ನು ನಾನು ನಿಲ್ಲಿಸಲು ಸಾಧ್ಯವಿಲ್ಲ; ಅವರು ತಮಗೇನು ಅನ್ನಿಸುತ್ತದೋ ಅದನ್ನು ಹೇಳುತ್ತಾರೆ.

ನನ್ನ ಲಕ್ಷ್ಯ ಇರುವುದು- ನನಗೆ ಲಭ್ಯವಿರುವ ಸ್ಥಳಾವಕಾಶದಲ್ಲಿ ನಿಷ್ಪಕ್ಷ ಹಾಗೂ ಸತ್ಯವಾದ ಸಂಗತಿಗಳನ್ನು ಪ್ರಕಟಿಸುವುದು. ಟ್ರೋಲ್ ಇಲ್ಲವೆ ಐಟಿ ಕೋಶದೊಂದಿಗೆ ಹೊಡೆದಾಟ ಉತ್ಪಾದಕವಲ್ಲ; ಇಂಥ ಹೋರಾಟಕ್ಕೆ ಬೇಕಾದ ಶಕ್ತಿ ಇಲ್ಲವೆ ಸಂಪನ್ಮೂಲ ನನ್ನ ಬಳಿ ಇಲ್ಲ. ಬದಲಾಗಿ, ನಾನು ನನ್ನ ವರದಿಗಳನ್ನು ಸತ್ಯವನ್ನು ಗೌರವಿಸುವ ಓದುಗರಿಗೆ ತಲುಪಿಸಲು ಪ್ರಯತ್ನಿಸುತ್ತೇನೆ. ಇದಕ್ಕೆ ಸಾಮಾಜಿಕ ಮಾಧ್ಯಮ ಅಗತ್ಯವಿದೆ. ಮಣಿಪುರದ ಬಗ್ಗೆ ನಾನು ವರದಿ ಮಾಡಲು ಆರಂಭಿಸಿದಾಗ, ನನ್ನ ಪ್ರಯತ್ನಕ್ಕೆ ಆರ್ಥಿಕ ನೆರವು ನೀಡುವ ಸಂಸ್ಥೆಗಳು ಇರಲಿಲ್ಲ. ಆದರೆ, ನಾನು ಟ್ವಿಟರ್ ನಲ್ಲಿ ಹಾಕಿದ ಸುದ್ದಿಗಳು ಜನರ ಗಮನ ಸೆಳೆದವು ಹಾಗೂ ಹಲವು ಅವಕಾಶಗಳು ತೆರೆದುಕೊಂಡವು.

ಜಾತಿ ಆಧರಿತ ಅಪರಾಧಗಳು ಸೇರಿದಂತೆ ಇಂಥ ವಿಷಯಗಳ ಬಗ್ಗೆ ಎಚ್ಚರ ಮೂಡಿಸಲು ಸಾಮಾಜಿಕ ಮಾಧ್ಯಮಗಳು ನೆರವಾಗಿವೆ. ಟ್ವಿಟರ್, ಯೂಟ್ಯೂಬ್ ಮತ್ತಿತರ ವೇದಿಕೆಗಳಲ್ಲಿ ಜನರು ಜಾತಿ ಸಂಬಂಧಿತ ಕತೆಗಳನ್ನು ಹಂಚಿಕೊಂಡಿದ್ದರಿಂದ, ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಒತ್ತಡವುಂಟಾಗಿ ಅವು ಪ್ರತಿಕ್ರಿಯಿಸಬೇಕಾಗಿ ಬಂದಿತು. ಈ ವೇದಿಕೆಗಳು ತಮ್ಮದೇ ಆದ ಲೋಪಗಳನ್ನು ಹೊಂದಿದ್ದರೂ, ಪ್ರಾತಿನಿಧ್ಯ ಇಲ್ಲದ ವಿಷಯಗಳಿಗೆ ಅವಕಾಶ ನೀಡುವ ಸಾಮರ್ಥ್ಯ ಹೊಂದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಒಬ್ಬ ಪತ್ರಕರ್ತಳಾಗಿ ಸತ್ಯವಾದ ವರದಿಗಳನ್ನು ಪ್ರಕಟಿಸಲು ಈ ವೇದಿಕೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದನ್ನು ಖಾತ್ರಿಪಡಿಸುತ್ತೇನೆ. ಸಾಮಾಜಿಕ ಮಾಧ್ಯಮಗಳು ಓದುಗರನ್ನು, ವಿಶೇಷವಾಗಿ ಯುವಜನರನ್ನು ತಲುಪಲು ನೆರವಾಗುತ್ತವೆ ಮತ್ತು ಸಾಮಾಜಿಕ ಅಸಮಾನತೆ ಹಾಗೂ ಬದಿಗೊತ್ತುವಿಕೆಯಂಥ ಮುಖ್ಯ ವಿಷಯಗಳ ಬಗ್ಗೆ ಅರ್ಥಪೂರ್ಣ ಸಂವಾದ ನಡೆಸಲು ಸ್ಫೂರ್ತಿ ತುಂಬುತ್ತವೆ.

► ಪ್ರಸ್ತುತ ಸನ್ನಿವೇಶದಲ್ಲಿ ಯುವ ಪತ್ರಕರ್ತರ ಪಾತ್ರವೇನು ಮತ್ತು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರಕಾರದ ಕಾರ್ಯನೀತಿಗಳು ಹೇಗೆ ಪರಿಣಾಮ ಬೀರುತ್ತಿವೆ?

ಯುವ ಪತ್ರಕರ್ತರು ಯಾವಾಗಲೂ ಗಮನಾರ್ಹ ಪಾತ್ರ ವಹಿಸುತ್ತಾರೆ. ಆದರೆ, ಪ್ರಸ್ತುತದ ಸವಾಲುಗಳಿರುವ ಸನ್ನಿವೇಶದಲ್ಲಿ ಅವರ ಪಾತ್ರ ಇನ್ನಷ್ಟು ಮುಖ್ಯವಾಗಲಿದೆ. ಕ್ಷೇತ್ರಕ್ಕೆ ಕಾಲಿಡುವ ಯುವ ಪತ್ರಕರ್ತರು ಜನರು ಹಾಗೂ ಅವರ ಸಮಸ್ಯೆಗಳ ಮೇಲೆ ಲಕ್ಷ್ಯ ಇರಿಸಬೇಕು. ಅವರ ಕೆಲಸಗಳು ಸಮಾಜದ ದೃಷ್ಟಿಕೋನವನ್ನು ರೂಪಿಸಲು, ಸರಿ ಮತ್ತು ತಪ್ಪನ್ನು ಗುರುತಿಸಲು ಸಮುದಾಯಗಳಿಗೆ ನೆರವಾಗಬೇಕು. ಇದು ಪತ್ರಿಕಾ ವೃತ್ತಿಯ ಪ್ರಮುಖ ಜವಾಬ್ದಾರಿ.

ದುರದೃಷ್ಟವಶಾತ್ ಈ ದಾರಿಯನ್ನು ಆಯ್ದುಕೊಳ್ಳುವವರಿಗೆ ಉದ್ಯಮದ ಬೆಂಬಲ ಕಡಿಮೆ ಇದೆ. ಹೆಚ್ಚಿನ ಮಾಧ್ಯಮ ಸಂಸ್ಥೆಗಳು ವಾಸ್ತವ ವರದಿಗಾರಿಕೆಗೆ ಆದ್ಯತೆ ನೀಡುತ್ತಿಲ್ಲ. ಕಚೇರಿಯಲ್ಲಿ ಕುಳಿತು ಸುದ್ದಿ ಕ್ರೋಡೀಕರಣಕ್ಕೆ ಆದ್ಯತೆ ನೀಡುತ್ತಿರುವುದರಿಂದ, ಕ್ಷೇತ್ರದಲ್ಲಿ ತಿರುಗಿ ಮಾಡುವ ವರದಿಗಾರಿಕೆ ಪಕ್ಕಕ್ಕೆ ಸರಿದಿದೆ. ಈ ಪ್ರವೃತ್ತಿಯು ಕಳವಳಕಾರಿ; ಏಕೆಂದರೆ, ಸತ್ಯವನ್ನು ಅನಾವರಣಗೊಳಿಸಲು ಹಾಗೂ ವರದಿ ಮಾಡಲು ಕೆಲವೇ ಕೆಲವು ವರದಿಗಾರರನ್ನು ನೇಮಿಸಿಕೊಳ್ಳಲಾಗುತ್ತಿದೆ ಇಲ್ಲವೆ ತರಬೇತಿ ನೀಡಲಾಗುತ್ತಿದೆ. ಅಷ್ಟಲ್ಲದೆ, ಸ್ವತಂತ್ರ ಪತ್ರಿಕೋದ್ಯಮದ ಸುಸ್ಥಿರತೆ ಕಷ್ಟಕರ; ಇಂಥವರಿಗೆ ತಮ್ಮ ವರದಿಗಳನ್ನು ಪ್ರಕಟಿಸಲು ಕಡಿಮೆ ವೇದಿಕೆಗಳು ಇರುವುದರಿಂದ, ವೃತ್ತಿಯಲ್ಲಿ ಮುಂದುವರಿಯುವುದು ಕಠಿಣವಾಗಿ ಪರಿಣಮಿಸುತ್ತದೆ.

ಹಾಲಿ ಸರಕಾರದಡಿ ಪತ್ರಿಕಾ ವೃತ್ತಿ ಇನ್ನಷ್ಟು ಕೆಟ್ಟಿದೆ. ಸರಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಹೊಸಕುವ ಅನೇಕ ಕ್ರಮಗಳನ್ನು ಪರೋಕ್ಷವಾಗಿ ತೆಗೆದುಕೊಂಡಿದೆ. ಪತ್ರಕರ್ತರ ಬಂಧನದಂಥ ನೇರ ಕ್ರಮವಲ್ಲದೆ, ಸರಕಾರ ಸೃಷ್ಟಿಸಿರುವ ವಾತಾವರಣದ ಅಗೋಚರ ಕ್ರಮಗಳು ಹೆಚ್ಚು ಅಪಾಯಕಾರಿಯಾಗಿವೆ. ಸರಕಾರದೊಟ್ಟಿಗೆ ಕೈ ಜೋಡಿಸಿರುವ ಮಾಧ್ಯಮಗಳಲ್ಲದೆ, ಯೂಟ್ಯೂಬರ್‌ಗಳು, ಐಟಿ ಕೋಶಗಳು ಹಾಗೂ ಸುದ್ದಿ ಸೃಷ್ಟಿಸುವವರ ಸಂಯೋಜನೆಯಿಂದ ಪರ್ಯಾಯ ಸಂಕಥನವನ್ನು ಸೃಷ್ಟಿಸಲಾಗುತ್ತಿದೆ ಮತ್ತು ಅದನ್ನು ವಿಸ್ತೃತವಾಗಿ ಹರಡಲಾಗುತ್ತಿದೆ. ಈ ಸಂಕಥನಗಳು, ರೈತ ಹೋರಾಟ, ಮಣಿಪುರದಲ್ಲಿ ಹಿಂಸೆ, ಜಾತಿ ಆಧರಿತ ಪ್ರಕರಣಗಳು ಅಥವಾ ಮೀಸಲು ಕುರಿತ ಸತ್ಯಗಳನ್ನು ಮರೆಮಾಚುತ್ತವೆ.

ಸರಕಾರದೊಂದಿಗೆ ಕೈಜೋಡಿಸಿರುವ ಕಾರ್ಪೊರೇಟ್ ಸಂಸ್ಥೆಗಳ ಹಿಡಿತದಲ್ಲಿರುವ ಮಾಧ್ಯಮಗಳ ಕ್ರೋಡೀಕರಣದಿಂದ, ಇಂಥ ಮರೆಮಾಚುವಿಕೆಯು ಇನ್ನಷ್ಟು ಅತಿಕ್ರಮಿಸಿದೆ. ಪ್ರಮುಖ ಮುಖ್ಯವಾಹಿನಿ ಮಾಧ್ಯಮಗಳಾದ ನೆಟ್ವರ್ಕ್ 18, ಟೈಮ್ಸ್ ಸಮೂಹ ಮತ್ತು ಎನ್‌ಡಿಟಿವಿ ಕಾರ್ಪೊರೇಟ್ ಹಿಡಿತದಲ್ಲಿದ್ದು, ಸರಕಾರದ ಪರ ಪಕ್ಷಪಾತ ಪ್ರವೃತ್ತಿ ತೋರಿಸುತ್ತವೆ. ಸರಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಸಂಬಂಧವು ಪಕ್ಷಪಾತ ರಹಿತ ವರದಿಗಾರಿಕೆಗೆ ಇರುವ ಅತ್ಯಂತ ದೊಡ್ಡ ಸವಾಲಾಗಿದೆ.

ಯುವ ಪತ್ರಕರ್ತರ ಕೆಲಸ ಕಠಿಣವಾದುದು; ಆದರೆ, ಬಹಳ ಮುಖ್ಯವಾದುದು. ಸೀಮಿತ ಅವಕಾಶ ಮತ್ತು ಸಂಪನ್ಮೂಲದ ನಡುವೆಯೂ ಅವರು ನೈತಿಕ ಹಾಗೂ ಭಯರಹಿತ ವರದಿಗಾರಿಕೆ ಮಾಡಬೇಕಿದೆ. ಪತ್ರಕರ್ತರ ರಕ್ಷಣೆ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಲು ಸುಧಾರಣೆ ಅಗತ್ಯವಿದ್ದು, ಸತ್ಯ ಪ್ರಕಟಗೊಳ್ಳಲು ಅಗತ್ಯವಾದ ಸ್ಥಳಾವಕಾಶ ಸೃಷ್ಟಿ ಮೊದಲ ಹೆಜ್ಜೆ ಆಗಿರಬೇಕು. ಇಂಥ ಧ್ವನಿಗಳು ಹೆಚ್ಚು ಪ್ರತಿಧ್ವನಿಸಲು ಸಾಮಾಜಿಕ ಮಾಧ್ಯಮಗಳು ನೆರವಾಗಬಲ್ಲವು. ಆದರೆ, ಇದು ಪರಿಪೂರ್ಣ ಪರಿಹಾರವಲ್ಲ. ಸತ್ಯ ಹೇಳುವುದನ್ನು ತಡೆಯುವಂಥ ವಾತಾವರಣ ಇರುವಾಗ, ಯುವ ಪತ್ರಕರ್ತರು ತಮ್ಮ ಸಿದ್ಧಾಂತಕ್ಕಾಗಿ ನಂಬಿಕೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.

► ದಲಿತರು,ಆದಿವಾಸಿಗಳು ಮತ್ತು ಇನ್ನಿತರ ಪ್ರಾತಿನಿಧ್ಯರಹಿತ ಗುಂಪುಗಳಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆಯೇ? ಸ್ವತಂತ್ರ ಪತ್ರಕರ್ತರು ಈ ಗುಂಪುಗಳ ಗೋಚರಿಸುವಿಕೆ ಮತ್ತು ಸಬಲೀಕರಣಕ್ಕೆ ಏನು ಮಾಡಬಹುದು?

ಈ ಪ್ರಶ್ನೆಗೆ ಉತ್ತರ ಕೊಡುವ ಸ್ಥಾನದಲ್ಲಿ ನಾನು ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಮಾಧ್ಯಮ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆ ತರಬಲ್ಲ ನೇಮಕಗಳನ್ನು ಮಾಡುವ ಇಲ್ಲವೆ ಸಂಪಾದಕರ ಹುದ್ದೆಯಲ್ಲಿ ನಾನು ಇಲ್ಲ. ನನ್ನ ದೃಷ್ಟಿಕೋನದ ಪ್ರಕಾರ, ಮಾಧ್ಯಮ ಕ್ಷೇತ್ರ ತೀವ್ರ ಪಕ್ಷಪಾತದಿಂದ ಕೂಡಿದೆ ಮತ್ತು ಪ್ರಾತಿನಿಧ್ಯರಹಿತವಾಗಿದೆ. ಸಂಪಾದಕರುಗಳು ತಮ್ಮದೇ ಕಾರ್ಯಸೂಚಿ ಹಾಗೂ ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ; ಇದರಿಂದ ಒಳಗೊಳ್ಳುವಿಕೆ ಇಲ್ಲವೆ ವೈವಿಧ್ಯತೆಗೆ ಆದ್ಯತೆ ಸಿಗುವುದಿಲ್ಲ.

ದೇಶದ ಪ್ರಮುಖ ಮಾಧ್ಯಮಗಳಲ್ಲಿ ಹೆಚ್ಚಿನವು ದಿಲ್ಲಿಯಲ್ಲಿ ನೆಲೆಗೊಂಡಿವೆ ಮತ್ತು ಅಲ್ಲಿನ ಸುದ್ದಿಮನೆಗಳು ಇಲ್ಲವೆ ಪ್ರಾಂತೀಯ ಬ್ಯೂರೋಗಳು ಅಂಚಿನಲ್ಲಿರುವ ಸಮುದಾಯಗಳ ನೆಲ ಹಂತದ ವಾಸ್ತವಗಳ ಮೇಲೆ ಲಕ್ಷ್ಯ ಹರಿಸುವುದಿಲ್ಲ. ಸುದ್ದಿಗಳು ದಿಲ್ಲಿ ಕೇಂದ್ರಿತವಾಗಿದ್ದು, ದಲಿತರು, ಆದಿವಾಸಿಗಳು ಹಾಗೂ ಇನ್ನಿತರ ಪ್ರಾತಿನಿಧ್ಯರಹಿತ ಗುಂಪುಗಳು ಸೇರಿದಂತೆ ದೇಶದ ಇತರ ಭಾಗಗಳ ಪ್ರಮುಖ ಸುದ್ದಿಗಳನ್ನು ಕಡೆಗಣಿಸ ಲಾಗುತ್ತಿದೆ.

ಈ ಪ್ರಶ್ನೆಗೆ ಸಂಬಂಧಿಸಿದಂತೆ, ನನ್ನ ಬಳಿ ಆಶಾದಾಯಕ ಪ್ರತಿಕ್ರಿಯೆ ಇಲ್ಲ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಎನ್ನುವುದು ಬಲು ದೂರದ ಗುರಿ ಎನ್ನಿಸುತ್ತದೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅಂತರ್ಗತವಾಗಿರುವ ವ್ಯವಸ್ಥಿತ ಪಕ್ಷಪಾತವನ್ನು ಸ್ವತಂತ್ರ ಮಾಧ್ಯಮಗಳು ದಾಟುತ್ತವೆ ಎಂದು ನಾನು ಭಾವಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - Musaveer

contributor

Byline - ಗ್ರೀಷ್ಮಾ ಕುತ್ತಾರ್

contributor

Similar News

ಒಳಗಣ್ಣು
ವೃತ್ತಾಂತ