ವಚನಗಳು ಹಾಗೂ ಛಾಯಾ ರಚನೆಗಳು
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದಿರುವ ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಸದ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಚನಗಳು, ಶರಣ ಸಂಸ್ಕೃತಿ, ದೇಸಿ ಮಾರ್ಗದ ಬಗ್ಗೆ ಒಲವುಳ್ಳವರು. ‘ಗಾಲ್ಫ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರುಜೇವಣಿ’, ‘ಕರೆಬಳೆಗ’, ‘ಬೀದಿ ಅಲ್ಲಮ’, ‘ಕಾಯ ಮಾಯದ ಕಾಡು’, ‘ಅರಿವು ನಾಚಿತ್ತು’ ಎಂಬ ಕವನ ಸಂಕಲನಗಳನ್ನು; ‘ದಂಡೆ’, ‘ದಾಳ’, ‘ಅನ್ನದಾತ’ ಎಂಬ ನಾಟಕಗಳು, ‘ಅಂಬಿಗರ ಚೌಡಯ್ಯ’- ‘ಒಂದು ಓದು’, ‘ಯಡೆಕುಂಟೆ ಗೆಣೆಸಾಲು’, ‘ಕೇಡಿಲ್ಲವಾಗಿ’, ‘ಸಾಲಾವಳಿ’, ‘ನಿಶಬ್ದದ ಜಾಡು’, ‘ಕಣ್ಣಗಾಯದ ಕಾಲುದಾರಿಗಳು’, ಯಡೆಸಾಲು ಎಂಬ ವಿಮರ್ಶಾ ಕೃತಿಗಳು; ‘ಕನ್ನಡ ಪುಸ್ತಕ ಜಗತ್ತು’ ಎಂಬ ಅನುಭವ ಕಥನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 3ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಪು.ತಿ.ನ. ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.
ವಚನ ಪದದ ಅರ್ಥ ಬಹುಳತೆ
ವಚನಗಳು ಅಂದರೆ ತಕ್ಷಣ ನಮಗೆ ನೆನಪಾಗುವುದು 12ನೇ ಶತಮಾನ. ಏಕೆಂದರೆ ಇವು ಆ ಕಾಲಮಾನದಲ್ಲಿ ಹುಟ್ಟಿದವು ಅಷ್ಟೇ ಅಲ್ಲ ಆ ಕಾಲಮಾನದ ಕನ್ನಡದ ಬದುಕನ್ನು ಇನ್ನಿಲ್ಲದಂತೆ ಪ್ರಭಾವಿಸಿದವು. ಕನ್ನಡವನ್ನು ಕನ್ನಡ ಸಂಸ್ಕೃತಿಯನ್ನು ಬೆಳಗಿಸಿದವು. ಇವು ಕನ್ನಡದ ಕನ್ನಡಿಗರ ಅಸ್ಮಿತೆಗಳು. ಇಷ್ಟು ಹೇಳಿದರೆ ಇವುಗಳ ಅನನ್ಯತೆಯನ್ನು ಕುರಿತು ಹೇಳಿದಂತಾಗುವುದಿಲ್ಲ. ಕಾರಣ ಒಂದೆರಡು ವಾಕ್ಯಗಳಲ್ಲಿ ಅರ್ಥ ಹೇಳಿ ಕೈತೊಳೆದುಕೊಳ್ಳುವುದಕ್ಕೆ ಸೀಮಿತವಾದ ಪದ ಇದಲ್ಲ. ವಚನ ಎಂಬುದಕ್ಕೆ ಮಾತು, ನುಡಿ, ಪ್ರಮಾಣ, ಆಣೆ ಭಾಷೆ, ಮಾತುಕೊಡು ಇತ್ಯಾದಿ ನಾಮವಾಚಿ ಕ್ರಿಯಾವಾಚಿ ಅರ್ಥಗಳಿವೆ. ಇವೆಲ್ಲವೂ ಸಾಂದರ್ಭಿಕ ಪ್ರಯೋಗದಲ್ಲಿ ವಚನ ಪದವು ಪಡೆದುಕೊಳ್ಳುವ ಅರ್ಥ ಬಾಹುಳ್ಯದ ವಿಶೇಷಗಳು. ಆದರೆ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾಜ ಧರ್ಮ ರಾಜಕೀಯ ಈ ಬಹುಮುಖೀ ಆಯಾಮಗಳ ನೆಲೆಯಲ್ಲಿ ವಚನಕ್ಕೆ ಬೇರೆಯದೇ ಆದ ಅರ್ಥ ಪರಂಪರೆಯೇ ಇದೆ. 12ನೇ ಶತಮಾನದ ಕರ್ನಾಟಕದ ಬದುಕನ್ನು ಬದಲು ಮಾಡಿದ ಮಹತ್ವದ ಕಾಲಘಟ್ಟದ ಎಲ್ಲ ಮಗ್ಗುಲುಗಳ ಒಳ ವಿವರಗಳನ್ನೂ ಈ ವಚನ ಪದ ಒಳಗೊಂಡು ಕನ್ನಡ - ಕನ್ನಡಿಗ - ಕರ್ನಾಟಕದ ಅಸ್ಮಿತೆಯನ್ನು ಪ್ರತಿಮಿಸುವ ಪದವಾಗಿದೆ.
ಚಳವಳಿಯ ಉಪ ಉತ್ಪನ್ನಗಳು
ವಚನಗಳು ಚಳವಳಿಯ ಉಪ ಉತ್ಪನ್ನಗಳು. ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸಮಸಮಾಜದ ಕನಸು ಹೊತ್ತು ನಡೆಸಿದ ಹೋರಾಟವದು. ಎಲ್ಲ ಜೀವಿಗಳೂ ಸಂಘಟಿತವಾಗಿ ನಡೆಸಿದ ಈ ಚಳವಳಿಯನ್ನು ಕಾಯಕ ಜೀವಿಗಳ ಚಳವಳಿ ಎಂದೂ ಕರೆದಿದ್ದಾರೆ. ಆದರೆ ಚಳವಳಿಯಲ್ಲಿ ಕಾಯಕ ಜೀವಿಗಳು ಮಾತ್ರ ಭಾಗವಹಿಸಲಿಲ್ಲ. ಬದುಕಿನ ಎಲ್ಲ ಕ್ಷೇತ್ರದ ಜನವರ್ಗದವರೂ ಅವೈದಿಕ ಚಿಂತನೆಯಲ್ಲಿ ತೊಡಗಿಸಿಕೊಂಡವರೆಲ್ಲರೂ ಭಾಗಿಯಾಗಿದ್ದರು. ಹೀಗಾಗಿ ಈ ಚಳವಳಿ ಬಹುತ್ವಗಳ ನೆಲೆಯ ಎಲ್ಲ ವರ್ಣ - ವರ್ಗ ಮೂಲಗಳ ಜನರ ಭಾಗವಹಿಸುವಿಕೆಯಲ್ಲಿ ರೂಪು ತಳೆದ ಚಳವಳಿಯಾಗಿತ್ತು. ಸಹಜವಾಗಿ ಹಲವು ನೆಲೆಯ ಚಿಂತನೆಗಳ ಚಿಂತನಾಶೀಲ ಮನಸ್ಸುಗಳ ಸಮಾವೇಶ ಇದಾದ್ದರಿಂದ ಅಲ್ಲಿ ಸರಳವಾಗಿ ಒಪ್ಪಿಕೊಳ್ಳುವ ಗುಣಕ್ಕಿಂತ ಸಂಘರ್ಷಾತ್ಮಕವಾಗಿ ಚರ್ಚಿಸುವ ಸಂವಾದಾತ್ಮಕ ಕ್ರಿಯೆ ಪ್ರಧಾನ ಪಾತ್ರ ವಹಿಸಿತ್ತು. ಆ ಅಂಥ ಸಂವಾದಾತ್ಮಕ ನಡೆಯ ಫಲಿತವೇ ವಚನ ರಚನೆ. ಮಾತು ಮಾತು ಮಥಿಸಿ ಬಂದ ನಾದದ ನವನೀತವೆನ್ನುವಂತೆ ಚಿಂತನೆಗಳ ಪ್ರಶ್ನೋತ್ತರಗಳ ಫಲಿತದಲ್ಲಿ ಹೊಸಧರ್ಮವೊಂದನ್ನು ರೂಪಿಸುವ ಚಳವಳಿ ಇದಾಯಿತು. ಹೀಗೆ ಚಳವಳಿಯೊಂದು ಸಂಘಟನಾತ್ಮಕವಾಗಿ ರೂಪುಗೊಳ್ಳುತ್ತಲೇ ಅದರ ಆಶಯ ಪಠ್ಯಗಳಾಗಿ ವಚನಗಳು ರಚನೆಗೊಂಡವು. ಬಹುತ್ವ ಮೂಲಗಳ ಜನರ ಭಾಗವಹಿಸುವಿಕೆ ಇಲ್ಲಿ ಇದ್ದದ್ದರಿಂದ ಇವು ಏಕಮಾದರಿಯ ರಚನೆಗಳಲ್ಲ. ಆಕೃತಿಯಲ್ಲಿ ಏಕಮಾದರಿಯಂತೆ ಕಂಡರೂ ಅವುಗಳ ಒಳಗಿನ ಪ್ರಕೃತಿಸತ್ಯ ಬಹುತ್ವಗಳ ನೆಲಮೂಲದ ವಿಭಿನ್ನ ವಿಶೇಷತೆಗಳನ್ನು ಒಳಗೊಂಡಿದೆ.
ಬಹುನೆಲೆಯ ಆಲೋಚನೆ, ಚಿಂತನೆ, ಭಾವನೆಗಳ ಸಂಘರ್ಷ ಇಲ್ಲಿದ್ದರೂ ಅವೆಲ್ಲವೂ ತಮ್ಮ ತಮ್ಮ ನೆಲೆಯ ನಿಲುವುಗಳನ್ನು ಪ್ರತಿಪಾದಿಸುತ್ತಲೇ ಪರಿಷ್ಕರಿಸಿಕೊಂಡು ಪಥಗಾಮಿಯಾದವುಗಳು. ಸಂಘಟನಾತ್ಮಕ ನೆಲೆಯಲ್ಲಿ ಹೊಸ ಸಮಾಜದ ಕನಸು ಕಂಡವು. ಹಾಗೆಯೇ ನವಸಮಾಜವನ್ನು ಕಟ್ಟಲು ಪ್ರಯತ್ನಶೀಲವಾದವು. ಆದ್ದರಿಂದ ಇವುಗಳ ಶೈಲಿ ಸಹಜವಾಗಿ ಪ್ರಶ್ನೋತ್ತರವೂ ಸಂವಾದಾತ್ಮಕವೂ ಸಂಬೋಧನಾ ಗುಣವಿಶೇಷತೆಯಿಂದ ಕೂಡಿದ್ದೂ ಆಗಿದೆ. ಹೀಗಾಗಿ ಏಕಕಾಲದಲ್ಲಿ ಇಲ್ಲಿ ವ್ಯಕ್ತಿ ನಿಷ್ಠೆ ಮತ್ತು ಸಮಾಜ ನಿಷ್ಠೆಗಳು ಸಂಲಗ್ನಗೊಂಡಿವೆ. ಇವುಗಳನ್ನು ವಚನಕಾರರು ಸೂಳ್ನುಡಿಗಳು ಎಂದು ಕರೆದಿದ್ದಾರೆ.
ವೈದಿಕ ವಿರೋಧಿ ರಚನೆಗಳು:
ವಚನಗಳು ಚಳವಳಿಯ ಉಪ ಉತ್ಪನ್ನಗಳು ಅಂದಾಗ ಚಳವಳಿ ಯಾವುದು? ಯಾಕಾಗಿ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ವಚನ ಚಳವಳಿ ನೇರವಾಗಿ ವೈದಿಕ ವಿರೋಧಿ ಚಳವಳಿ. ಚಾತುರ್ವರ್ಣ ವ್ಯವಸ್ಥೆಯ ವಿರೋಧಿ ನೆಲೆಯ ಚಳವಳಿ. ಭಾರತದ ವ್ಯಾಪ್ತಿಯಲ್ಲಿ ವೈದಿಕ ಧರ್ಮದ ಅಸಮಾನತೆ ಅಮಾನವೀಯತೆ, ಶೋಷಣೆ ತಾರತಮ್ಯನೀತಿ ಕರ್ಮ ಸಿದ್ಧಾಂತ ಇತ್ಯಾದಿ ಕೆಟ್ಟ ಹಳವಂಡವನ್ನು ವಿರೋಧಿಸಿ ಹಲವು ಪಂಥ ಪದ್ಧತಿಗಳು ಧರ್ಮಗಳು ಹುಟ್ಟಿವೆ. ಆದರೆ ಅವು ಯಾವುವೂ ನೇರವಾಗಿ ವೈದಿಕವನ್ನು ಉದ್ದೇಶಿಸಿದಂತೆ ವಿರೋಧಿಸಿ ಮಾತನಾಡಲಿಲ್ಲ. ಅವುಗಳೆಲ್ಲವೂ ತಮ್ಮ ಪಾಡಿಗೆ ತಾವು ತಮ್ಮ ಬದುಕಿನ ಮಾರ್ಗವನ್ನು ಬೋಧಿಸುತ್ತಾ ನಡೆದವು. ತಾವು ಕಂಡ ತಾತ್ವಿಕ ಅಂಶಗಳನ್ನು ಸೈದ್ದಾಂತಿಕ ವಿಚಾರಗಳನ್ನು ಅನುಷ್ಠಾನ ಮಾರ್ಗವಾಗಿ ತಿಳಿಯ ಹೇಳುತ್ತಾ ನಡೆದವು. ಇವುಗಳೆಲ್ಲವೂ ಅದಕ್ಕಾಗಿ ಬಳಸಿಕೊಂಡಿದ್ದು ಜನಭಾಷೆಯನ್ನು. ಪ್ರಾದೇಶಿಕ ಭಾಷೆಗಳನ್ನು. ಉದಾಹರಣೆಗೆ ಜೈನಧರ್ಮ ಪ್ರಾಕೃತವನ್ನು ಪ್ರಧಾನವಾಗಿ ಬಳಸಿದರೆ ಬೌದ್ಧರು ಪಾಳಿಯನ್ನು ಬಳಸಿದರು. ಆಜೀವಕ ಚಾರ್ವಾಕ ನಾಥ ಸಿದ್ಧ ಆರೂಢ ಇತ್ಯಾದಿ ಪರಂಪರೆಗಳು ಆಯಾ ಪ್ರದೇಶದ ಭಾಷೆಗಳನ್ನು ಬಳಸಿಕೊಂಡರು. ಯಾರು ಸಂಸ್ಕೃತವನ್ನು ಅವಲಂಬಿಸಲಿಲ್ಲ ಎಂಬುದು ಮುಖ್ಯ ವಿಚಾರ. ಇವೆಲ್ಲಕ್ಕಿಂತ ಭಿನ್ನವಾಗಿ ಕನ್ನಡ ನೆಲದಲ್ಲಿ ಹುಟ್ಟಿದ ವಚನಧರ್ಮ ಶರಣಧರ್ಮ ಅರ್ಥಾತ್ ಲಿಂಗಾಯತ ಧರ್ಮ ನೇರವಾಗಿ ವೈದಿಕವನ್ನು ವಿರೋಧಿಸಿ ಮಾತನಾಡತೊಡಗಿತು. ಇದು ಬೇರೆ ಧರ್ಮಗಳಿಗೂ, ಲಿಂಗಾಯತ ಧರ್ಮಕ್ಕೂ ಇರುವ ಬಹು ಪ್ರಮುಖ ವ್ಯತ್ಯಾಸ. ಚಳವಳಿಯೇ ನೇರವಾಗಿ ವೈದಿಕ ಧರ್ಮದ ಸನಾತನ ಕರ್ಮಠತ್ವದ ವಿರುದ್ಧವಾಗಿ ನಡೆದದ್ದು. ಆ ಧರ್ಮವನ್ನು ತಿರಸ್ಕರಿಸುತ್ತಾ ಬೇರೆಯದೇ ಆದ ಧರ್ಮವನ್ನು ರೂಪಿಸಿತು. ಅದಕ್ಕಾಗಿ ಚಳವಳಿಯೊಳಗೆ ಸಂವಾದಾತ್ಮಕ ನೆಲೆಯಲ್ಲಿ ಚರ್ಚೆಗೆ ತೊಡಗಿತು. ಈ ಚರ್ಚೆಯ ಫಲಿತ ರೂಪಗಳೇ ವಚನಗಳು.
ಹೀಗಾಗಿ ವಚನ ಚಳವಳಿಯಲ್ಲಿ ತೊಡಗಿದ್ದ ಎಲ್ಲ ಶರಣರೂ ಈ ಚಿಂತನೆಯಲ್ಲಿ ಭಾಗವಹಿಸಿದರು. ವೈಯಕ್ತಿಕವಾಗಿ ಅವರು ತೋರಿದ ವೈದಿಕ ವಿರೋಧಿ ವಿಚಾರವು ಅವರವರು ಬಂದ ಜಾತಿ ಸಮುದಾಯ, ಕಾಯಕ ಮೂಲಗಳ ಆಸ್ಮಿತೆಗಳನ್ನು ಅನುಭವ ಜನ್ಯವಾಗಿಸಿಕೊಂಡು ದಾಖಲಾದವು. ಈ ಕಾರಣದಿಂದಾಗಿಯೇ ಇಲ್ಲಿನ ವಚನಗಳು ವರ್ಣ ವ್ಯವಸ್ಥೆಯ ಅವಮಾನ ಹಸಿವು ಕೀಳರಿಮೆ ಮೇಲರಿಮೆ ಶ್ರೇಷ್ಠ - ಕನಿಷ್ಠ ಇತ್ಯಾದಿಗಳನ್ನು ಗೆಲ್ಲುವ ಸ್ವಾಭಿಮಾನಶೀಲ ಗುಣವನ್ನು ಮೈಗೂಡಿಸಿಕೊಂಡಿವೆ. ವರ್ಣನಿಷ್ಠ ನೆಲೆಯ ಅನುಭವಾತ್ಮಕ ಪ್ರತಿಕ್ರಿಯೆಗಳಾಗಿಯೂ ಪ್ರತಿರೋಧವನ್ನು ವ್ಯಕ್ತಪಡಿಸಿವೆ. ವೈದಿಕದ ಜಡ ತಾತ್ವಿಕತೆಗಳಿಗೆ ವಿರುದ್ಧವಾಗಿ ಹೊಸ ಬಗೆಯ ತಾತ್ವಿಕತೆಗಳನ್ನು ಕಟ್ಟಿಕೊಟ್ಟಿವೆ.
ಈಗ ಲಭ್ಯವಿರುವ ವಚನಗಳಲ್ಲಿಯೇ ನಲವತ್ತೊಂದು ವಚನಕಾರರು ಬರೆದಿರುವ 341 ವೈದಿಕ ವಿರೋಧಿ ನೆಲೆಯ ವಚನಗಳು ನೇರವಾಗಿ ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ವಿರೋಧಿಸಿ ನಿಷ್ಠುರವಾಗಿ ಮಾತನಾಡಿವೆ. ಬ್ರಾಹ್ಮಣ್ಯದ ಪಠ್ಯಗಳಾದ ವೇದ ಆಗಮ ಪುರಾಣ ಸ್ಮತಿ ಶೃತಿ ತರ್ಕಗಳನ್ನು ನೇರವಾಗಿ ತಿರಸ್ಕರಿಸಿ ಮಾತನಾಡಿದ್ದಾರೆ. ವೈದಿಕವು ತನ್ನ ಧರ್ಮವನ್ನು ಸನಾತನವೆಂದು ಕರೆದುಕೊಂಡಿದೆ. ಶರಣರು ಸನಾತನಕ್ಕೆ ವಿರುದ್ಧವಾಗಿ ಪುರಾತನವನ್ನು ಮುಂದಿಟ್ಟಿದ್ದಾರೆ. ಪುರಾತನವೆಂದರೆ ಹಳತು ಅಲ್ಲ. ಅದು ಪರಂಪರೆ. ಪರಂಪರೆಯನ್ನು ಧಾರಣ ಮಾಡಿಕೊಂಡ ವರ್ತಮಾನ. ಸನಾತನವೆಂಬುದು ಜಡ. ಪುರಾತನವೆಂಬುದು ಜಂಗಮ.
ಚಳವಳಿಯ ಪಠ್ಯಗಳು ಅರ್ಥಾತ್ ಧರ್ಮ ಪಠ್ಯಗಳು
ಆದಿ ವಚನಕಾರ ಜೇಡರ ದಾಸಿಮಯ್ಯ ನಿಮ್ಮ ಶರಣರ ಸೂಳ್ನುಡಿಯನೊಂದರಗಳಿಗೆ ಇತ್ತಡೆ ನಿಮ್ಮನಿತ್ತೇ ಕಾಣಾ ರಾಮನಾಥ ಎಂದಿದ್ದಾರೆ. ಈ ಮಾತಿನ ಅರ್ಥ ಇವು ಅನುಸರಣೀಯ ಯೋಗ್ಯ ರಚನೆಗಳು. ಅಂದರೆ ಇವು ಸಂಘಟನಾತ್ಮಕವಾಗಿ ರೂಪುಗೊಂಡ ಚಳವಳಿಯ ಹುಟ್ಟು ಬೆಳವಣಿಗೆಗೆ ಕಾರಣವಾದಷ್ಟೇ ಅವರು ಕಟ್ಟಲಿರುವ ಧರ್ಮದ ಪಠ್ಯಗಳಾಗಿಯೂ ಸ್ವೀಕೃತವಾದವು. ಆ ಕಾರಣದಿಂದಲೇ ಶರಣ ಸಿದ್ಧ ರಾಮಣ್ಣ, ನಮ್ಮ ನಡಾವಳಿಗೆ ನಮ್ಮ ಪುರಾತನರ ನುಡಿಯೇ ಇಷ್ಟವಯ್ಯಾ ಎಂದು ಹೇಳುತ್ತಾ ವೈದಿಕ ಪಠ್ಯಗಳಂತಿರುವ ವೇದ ಆಗಮ ಪುರಾಣಗಳನ್ನು ತಿರಸ್ಕರಿಸಿದ್ದಾನೆ. ಪುರಾತನರ ನುಡಿಗಳನ್ನು ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗದ ಹೃದಯದೊಳು ಗ್ರಂಥಿಯಾಗಿರಲಿ ಎಂದು ಸ್ವಸ್ಥ ಸಮಸಮಾಜ ನಿರ್ಮಾಣಕ್ಕೆ ಇವುಗಳನ್ನು ಪಠ್ಯಗಳಂತೆ ಸ್ವೀಕರಿಸಿದ್ದಾನೆ. ಆದ್ದರಿಂದ ಇವು ಚಳವಳಿಯನ್ನು ರೂಪಿಸುತ್ತಲೇ ಹುಟ್ಟಿದವು ಮತ್ತು ಚಳವಳಿಗೆ ಪಠ್ಯಗಳಾಗಿಯೂ ಬಳಕೆಯಾದವು. ಒಂದು ಮಿತಿಯಲ್ಲಿ ಚಳವಳಿಯ ಸಂವಿಧಾನಾತ್ಮಕ ರಚನೆಗಳು. ಹೀಗಾಗಿ ಚಳವಳಿ ನಡೆ - ನುಡಿ ಸಿದ್ಧಾಂತವಾದ ವಚನ ಧರ್ಮವನ್ನು ಹುಟ್ಟುಹಾಕುತ್ತಲೇ ತನ್ನ ಉಪ ಉತ್ಪನ್ನಗಳಾದ ವಚನಗಳನ್ನು ಆ ಧರ್ಮದ ಪಠ್ಯಗಳಾಗಿಯೂ ಸ್ವೀಕರಿಸಿದೆ. ಈ ಧರ್ಮವನ್ನು ಕನ್ನಡದ ವಚನಧರ್ಮವೆಂದು ಕರೆಯುವುದು ಈ ಕಾರಣದಿಂದ ಸರ್ವವಿಧದಿಂದಲೂ ಸಮರ್ಥನೀಯವಾಗಿದೆ. ಶರಣರು ಕಟ್ಟಿದ ಚಳವಳಿ ಇದಾದ್ದರಿಂದ ಇದು ಶರಣಧರ್ಮ; ಆ ಧರ್ಮದ ಅಸ್ಮಿತೆಯಾಗಿ ಇಷ್ಟಲಿಂಗ ಧಾರಣೆಯನ್ನು ಸ್ವೀಕರಿಸಿದ್ದರಿಂದ ಇದು ಲಿಂಗಾಯತ ಧರ್ಮ. ಈ ಧರ್ಮವನ್ನು ರೂಪಿಸಿದ ವಚನಗಳೇ ಈ ಧರ್ಮದ ಸಂವಿಧಾನಗಳು. ಧಾರ್ಮಿಕ ಪಠ್ಯಗಳು.
ವಚನಗಳಲ್ಲಿ ಪರಿಭಾಷೆಗಳು
ಚಳವಳಿಯಲ್ಲಿ ಭಾಗವಹಿಸಿದವರು ಎಲ್ಲಾ ಕಾಯಕ ಮೂಲಗಳಿಂದ ಬಂದವರಾಗಿದ್ದರು. ಅವರು ತಾತ್ವಿಕವಾಗಿ ತಾವು ಕಟ್ಟಬೇಕಾಗಿದ್ದ ನಡೆ - ನುಡಿ ಸಿದ್ಧಾಂತದ ಧರ್ಮ ಜಿಜ್ಞಾಸೆಗೆ ಸಹಜವಾಗಿ ಬಳಸಿದ್ದು ತಮ್ಮ ದಿನನಿತ್ಯದ ಭಾಷೆ, ಆಡುಭಾಷೆ. ಅನುದಿನದ ಭಾಷೆಯೆಂದರೆ ತಮ್ಮ ಬದುಕಿನ ಭಾಗವಾದ ವೃತ್ತಿ ಮೂಲದ ಭಾಷೆ. ಈ ವೃತ್ತಿಯನ್ನು ಕರ್ಮವೆಂದು ಕರೆಯದೆ ಕಾಯಕವೆಂದು ಕರೆದಿದ್ದು ಬಹುದೊಡ್ಡ ಬದಲಾವಣೆ. ಕರ್ಮವೆಂಬುದು ಜನ್ಮಜನ್ಮಾಂತರದ ಕರ್ಮಸಿದ್ಧಾಂತ ಮೂಲದ ಕೊಳಕಿನ ಹೊಂಡ. ಇದರಿಂದ ಬಿಡುಗಡೆಗೊಳಿಸಿ ತಮ್ಮ ವೃತಿಯನ್ನು ಕಸುಬನ್ನು ಕಾಯಕವೆಂದು ಗೌರವಕ್ಕೆ ಭಾಜನವಾಗಿಸಿದರು. ಕಾಯಕವನ್ನು ವ್ಯಕ್ತಿ ಮಾಡಿದರೂ ಅದು ಕೃತ್ಯಕಾಯಕ. ಅದು ಸಮಾಜಕ್ಕೆ ಹಿತಕಾರಿಯಾದುದರಿಂದ ಅದು ಸತ್ಯಶುದ್ಧ ಕಾಯಕ ಎಂದು ಘನತೆಗೇರಿಸಿದರು. ಇಂಥ ವ್ಯಕ್ತಿಯ ಕೃತ್ಯಮೂಲದ ಯಾವುದೇ ಕಾಯಕವೂ ಅದು ಸಮಾಜಕ್ಕೆ ಹಿತಕಾರಿಯಾಗಿದ್ದಾದರೆ, ಅದು ಸತ್ಯಶುದ್ಧ ಕಾಯಕವಷ್ಟೇ ಅಲ್ಲ, ಅದು ಯಾವುದೇ ಕಾಯಕವಾದರೂ ಎಲ್ಲಾ ಕಾಯಕಗಳೂ ಸಮಭಾವದ ಗೌರವಕ್ಕೆ ಅರ್ಹವಾದವು ಎಂದರು. ಹೀಗೆ ಕರ್ಮಸಿದ್ಧಾಂತದ ನೆಲೆಯ ಕರ್ಮದ ಮೇಲು ಕೀಳಿನ ಶ್ರೇಷ್ಠ - ಕನಿಷ್ಠತೆಯ ಭಿನ್ನ ಭೇದಗಳನ್ನು ತೊಡೆದು ಕಾಯಕವೆಂಬುದನ್ನು ಸಮಾನ ಗೌರವದಲ್ಲಿ ಕಂಡದ್ದು ವಚನಧರ್ಮದ ಹಿರಿಮೆ. ಎಲ್ಲ ಕಾಯಕ ಜೀವಿಗಳ ಸ್ವಾಭಿಮಾನವನ್ನು ಘನತೆಗೇರಿಸಿದ್ದು ಲಿಂಗಾಯತ ಧರ್ಮದ ಬಲುಮೆ. ಹೀಗಾಗಿ ವಚನಗಳು ಸಮಾನತೆಯನ್ನು ಸಾರುವ ಸಂವಿಧಾನ ರೂಪಿ ಪಠ್ಯಗಳು. ಸಹಜವಾಗಿ ಈ ಧರ್ಮ ದೃಷ್ಟಿ ಕಾಯಕವನ್ನು ಗೌರವಿಸುವಾಗ, ಕಾಯಕವನ್ನು ಅನುದಿನದ ನಡೆ - ನುಡಿ ಸಿದ್ಧಾಂತದ ಆಧ್ಯಾತ್ಮವಾಗಿಸಿತು. ಅಧ್ಯಾತ್ಮ ಎಲ್ಲೋ ಆಕಾಶದಿಂದ ಉದುರುವುದಿಲ್ಲ. ಅದು ಬದುಕಿನ ವಿಧಾನದಲ್ಲಿ ಅನುಭವವನ್ನು ಅನುಭಾವಿಕತೆಗೆ ಏರಿಸುತ್ತಾ ಅನುಭಾವಿಕತೆಯನ್ನೇ ಆಧ್ಯಾತ್ಮವಾಗಿಸುವುದು. ಆಧ್ಯಾತ್ಮವನ್ನೇ ಬದುಕಾಗಿಸುವುದು. ಈ ಪ್ರಕ್ರಿಯೆ ಎಷ್ಟು ಸಹಜವಾದದ್ದೆಂದರೆ ಕಾಯಕ ನಿರತನಾದವನಿಗೆ ಕಾಯ ಕಾಯಕ ಸಂಬಂಧದ ಅನುಬಂಧದಲ್ಲಿ ಆಡುವ ನುಡಿಯೆಲ್ಲ ಆಧ್ಯಾತ್ಮದ ಕಡೆಗಿನ ನಡೆಯಾಯಿತು. ನಡೆಯೆಲ್ಲಾ ಜಂಗಮವಾಯಿತು. ಸಹಜವಾಗಿ ಕಾಯ - ಕಾಯಕದ ಅನುಬಂಧದಂತೆಯೇ ಕಾಯಕ ಪರಿಭಾಷೆಗಳು ಧಾರ್ಮಿಕ ಪರಿಭಾಷೆಗಳಾದವು. ಧರ್ಮದ ಒಳಸೂಕ್ಷ್ಮಗಳನ್ನು ಸರಳ ಬದುಕಿನ ತತ್ವಗಳಾಗಿಸಲು ಕಾಯಕ ಜೀವಿಗಳಿಗೆ ಕಾಯಕಪರಿಭಾಷೆಗಳೇ ಧರ್ಮದ ದಾರಿದೀಪಗಳಾದವು; ದೇಹವೇ ದೇವಾಲಯವಾದಂತೆ; ಕಾಯವೇ ಕಾಯಕವಾದಂತೆ; ಕಾಯಕ ಪರಿಭಾಷೆಗಳೇ ಕೈಲಾಸದ (ಕಲ್ಯಾಣ ರಾಜ್ಯದ) ಕೈದೀವಿಗೆಗಳಾದುವು. ಹೀಗಾಗಿ ಪ್ರತಿಯೊಬ್ಬ ವಚನಕಾರನು ತನ್ನ ತನ್ನ ಕಾಯಕ ಮೂಲದ ಭಾಷೆಯನ್ನು ತನ್ನ ಅಧ್ಯಾತ್ಮದ ಪರಿಭಾಷೆಯಾಗಿಸುತ್ತಾ ಅದಕ್ಕೆ ಧಾರ್ಮಿಕ ಘನತೆಯನ್ನು ತಂದುಕೊಟ್ಟ. ಕರ್ಮತತ್ವದಲ್ಲಿ ಹೀನಾರ್ಥ ಪಡೆದುಕೊಂಡಿದ್ದ ಕುಲಕಸುಬಿನ ಪದಗಳು ಕಾಯಕ ಜೀವಿಗಳ ಕಾರಣ ಕ್ರಿಯೆಗಳಿಂದಾಗಿ ಪದೋನ್ನತಿಯ ಅರ್ಥಗೌರವಕ್ಕೆ ಭಾಜನವಾದವು. ಉದಾಹರಣೆಗೆ - ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ಅಕ್ಕಮ್ಮ ತನ್ನ ವೃತ್ತಿಯನ್ನು ವ್ರತಧರ್ಮದ ಸ್ವೀಕಾರದಲ್ಲಿ ವ್ರತಾಚರಣೆಯಾಗಿಸುತ್ತಾಳೆ. ತನ್ನನ್ನು ವ್ರತಧಾರಣಿ ಎಂದು ಕರೆದುಕೊಳ್ಳುತ್ತಾಳೆ. ಅವಳು ತನ್ನ ವ್ರತಾಚರಣೆಗೆ ಸಂಬಂಧಿಸಿದಂತೆ ಕರ್ಮದ ಪಾಂಗನ್ನು ಹರಿದುಕೊಂಡು ವ್ರತಧರ್ಮದ ದೀಕ್ಷಾ ಬದ್ಧಳಾಗುತ್ತಾಳೆ. ಸಮಗ್ರಾಹಕ ಎಂಬ ಪದ ಅವಳ ಸೃಷ್ಟಿ. ಕನ್ನಡಕ್ಕೆ ಅವಳು ಕೊಟ್ಟ ತನ್ನ ವೃತ್ತಿ ಮೂಲದ ಪರಿಭಾಷೆ. ಗಿರಾಕಿ ವಿಟ ಎರಡೂ ಹೀನಾರ್ಥ ಪದಗಳೇ. ಸಮಾಜದಲ್ಲಿ ತೀರ ತಿರಸ್ಕಾರಕ್ಕೆ ಭಾಜನವಾದ ನಡೆ - ನುಡಿಗಳೇ ಇವು. ಆದರೆ ತನ್ನ ವ್ರತಾಚರಣೆಯ ಕಾರಣ ಮೂಲದಲ್ಲಿ ಸಮಗ್ರಾಹಕನಿಗೆ ಶರಣೆ ಅಕ್ಕಮ್ಮ ವಿಧಿಸುವ ಕಟ್ಟುಪಾಡುಗಳ ನೆಲೆಯಲ್ಲಿ ಕಾಯಕವನ್ನು ಘನತೆಗೇರಿಸಿದ್ದಾಳೆ. ಸಮಾಜ ದ್ರೋಹಿ ಕೃತ್ಯವಾಗಿಸದೆ ಅನೈತಿಕ ಕತ್ಯವಾಗಿಸದೆ ಸಂವಿಧಾನ ಬದ್ಧ ಅಂಗೀಕಾರಕ್ಕೆ ಒಳಗಾಗುವ ವ್ರತಾಚರಣೆಯಾಗಿಸುವ ವಿಧಿಬದ್ಧವಾಗಿಸಿದ್ದಾಳೆ. ಅವನು ಸಮಗ್ರಾಹಕನಷ್ಟೇ ಅಲ್ಲ, ಅವನು ಸಮಶೀಲಕ ಎಂಬ ಸಮಾನ ನೆಲೆಯಲ್ಲಿ ಪರಿಭಾಷೆಗೆ ಒಳಗು ಮಾಡುತ್ತಾಳೆ. ಸಂಸಾರಿಗಳನ್ನು ಕೂಡದ ಸಮಶೀಲಕರನ್ನು ಮಾತ್ರ ಸ್ವೀಕಾರಯೋಗ್ಯರೆನ್ನುವ ಈ ಕೃತ್ಯ ಕಾಯಕ ತನ್ನ ಮಿತಿಯಲ್ಲಿ ಆಧ್ಯಾತ್ಮೀಕರಣ ವ್ರತಾಚರಣೆಯೇ ಆಗಿದೆ. ಇನ್ನು ಬೇರೆ ಬೇರೆ ಕಾಯಕ ಮೂಲದ ಶರಣರ ವಚನಗಳನ್ನು ಗಮನಿಸಿದಾಗ ಅಲ್ಲಿಯ ವೃತ್ತಿ ಮೂಲದ ಪದಗಳು ಧಾರ್ಮಿಕ ತತ್ವ ವಿವರಣೆಗೆ ಎಷ್ಟು ಅನುಭವ ಸಹಜ ಭಾವತೀವ್ರತೆಯಲ್ಲಿ ಅನುಭಾವಿಕ ಎತ್ತರಕ್ಕೇರಿವೆ ಎಂಬುದನ್ನು ಮನಗಾಣಬಹುದಾಗಿದೆ. ಕಾಯಕ ಪರಿಭಾಷೆಯಲ್ಲಿ ಅಧ್ಯಾತ್ಮವನ್ನು ವ್ಯಾವರ್ಣಿಸುವ ಜೇಡರ ದಾಸಿಮಯ್ಯನ ವಚನಗಳನ್ನು ಇಲ್ಲಿ ಗಮನಿಸಬಹುದು.
ಉಂಕಿಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆಯ ನೆಯ್ದವ ನಾನೋ ನೀನೋ ರಾಮನಾಥ...
ಅದೇರೀತಿ ಬಡಗಿ, ಕಮ್ಮಾರ, ಒಕ್ಕಲಿಗ, ನಾಯಿಂದ, ಕಬ್ಬಲಿಗ, ಮೇದಾರ, ಚಮ್ಮಾರ, ಕುರಿಗಾಹಿ, ದನಗಾಹಿ - ಹೀಗೆ ಒಂದಲ್ಲ ಎರಡಲ್ಲ. ಬೆವರಿನ ಶ್ರಮದಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಎಲ್ಲಾ ಶರಣರೂ ತಮ್ಮ ತಮ್ಮ ಕಾಯಕ ಮೂಲದ ಪದಗಳನ್ನೂ ಪರಿಭಾಷೆಗಳಾಗಿ ತಮ್ಮ ವಚನಗಳಲ್ಲಿ ಬಳಸಿದ್ದಾರೆ; ಬೆಳೆಸಿದ್ದಾರೆ; ಕಾಯಕ ಪರಿಭಾಷೆಗಳನ್ನು ಬೆಳಗಿಸಿದ್ದಾರೆ. ಈ ಕಾರಣದಿಂದ ಕನ್ನಡ ಭಾಷೆ ಶ್ರೀಮಂತವಾಯಿತು. ಕನ್ನಡ ಬದುಕು ಶ್ರೀಮಂತವಾಯಿತು. ಕನ್ನಡದ ವಿವೇಕ ಘನತೆಗೇರಿತು. ಇದು ವಚನ ಬೆಳವಣಿಗೆಯ ಕೊಡುಗೆ; ವಚನಗಳ ವಿಶಿಷ್ಟತೆ.
ವಚನಗಳಲ್ಲಿ ಅಂಕಿತ:
ವಚನಗಳಲ್ಲಿ ಅಂಕಿತಗಳನ್ನು ಬಳಸುವುದು ಒಂದು ನಿಯಮದಂತೆ ಪಾಲಿತವಾಗಿದೆ. ಈ ಅಂಕಿತ ಹೆಚ್ಚಿನದಾಗಿ ವಚನಕಾರನ ಇಷ್ಟ ದೈವ ಎಂಬುದು ಒಂದು ನಂಬಿಕೆಯಾಗಿದೆ. ಆದರೆ ವಚನಗಳನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಗು ಮಾಡಿದಂತೆ ಓದಿದ ಯಾರಿಗಾದರೂ ಅರಿವಿಗೆ ಬರುವ ಸಂಗತಿಯೆಂದರೆ ಅಂಕಿತಗಳು ವಚನಕಾರನ ವ್ಯಕ್ತಿತ್ವದ ಅಸ್ಮಿತೆಗಳು. ಇಷ್ಟದೈವ ಎಂಬುದು ಸಾಮಾನ್ಯೀಕರಣಗೊಂಡ ಗ್ರಹಿಕೆಯಾದರೆ ಇಷ್ಟ ದೈವದ ಸಂಬಂಧ ಮತ್ತು ಆ ದೈವದ ಹೆಸರಿನಲ್ಲಿ ಧ್ವನಿತವಾಗುವ ಭಾವ ವಿಶೇಷತೆಯನ್ನು ಗಮನಿಸಿದಾಗ ಈ ಅಸ್ಮಿತೆಯ ವಿಶೇಷತೆ ಏನು ಎಂಬುದು ಗೊತ್ತಾಗುತ್ತದೆ. ಬಸವಣ್ಣನವರ ಕೂಡಲ ಸಂಗಮ ದೇವ ಎಂಬ ಅಂಕಿತವನ್ನು ಗಮನಿಸಿದರೆ ಇಲ್ಲಿ ಒಂದೇ ಅರ್ಥಕೊಡುವ ಎರಡು ಪದಗಳಿವೆ. ಒಂದು ಕನ್ನಡ ಪದ ಕೂಡಲ ಇನ್ನೊಂದು ಸಂಸ್ಕೃತದ ಪದ ಸಂಗಮ ಇವೆರಡೂ ಕೂಡಿಕೊಂಡ ದೇವ, ಬಸವಣ್ಣನವರ ಕೂಡಲ ಸಂಗಮ ದೇವ. ಇವನಾರವ ಇವನಾರವ ಇವನಾರವನೆಂದಿನಿಸದೆ ಇವ ನಮ್ಮವ ಇವ ನಮ್ಮವನೆಂದಿಸಯ್ಯಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂದು ಎಲ್ಲರನ್ನೂ ಒಳಗೊಳ್ಳುವ ಬಸವ ಪ್ರಜ್ಞೆ ಬಸವ ಧರ್ಮದ ಅಸ್ಮಿತೆ. ಬಸವಣ್ಣನವರ ವ್ಯಕ್ತಿತ್ವದ ಅಸ್ಮಿತೆ. ಉತ್ತಮಕುಲದಲ್ಲಿ ಹುಟ್ಟಿದನೆಂಬ ಕಷ್ಟತನದ ಹೊರೆಯ ಹೊರಸದಿರಯ್ಯಾ ಎಂದು ಶ್ರೇಷ್ಠತೆಯ ವ್ಯಸನಕ್ಕೆ ಹೇಸಿದ ಬಸವ ಪ್ರಜ್ಞ ಅಸ್ಪ್ರಶ್ಯರ ಮನೆಯ ಮಗನೆಂದು ತನ್ನನ್ನು ಅಪವರ್ಣೀಕರಿಸಿಕೊಂಡಿದೆ. ಸಂಸ್ಕೃತದ ಶ್ರೇಷ್ಠತೆ ಕನ್ನಡದ ಕೀಳರಿಮೆ ಇವೆರಡೂ ಅರಿಮೆಗಳನ್ನು ನೀಗಿಕೊಂಡ ಸಮಭಾವದ ಸಮಚಿತ್ತದ ಒಳಗೊಳ್ಳುವ ಸಂಲಗ್ನ ಸ್ವಭಾವ ಬಸವಣ್ಣನವರದು. ಅದಕ್ಕೆ ಹೊಂದಿಕೊಂಡ ಅಂಕಿತ ಕೂಡಲಸಂಗಮ ದೇವಾ.
ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ. ವೃತ್ತಿಯೇ ಜಾತಿಯಾಗಿ ಜಾತಿ ಮೂಲದಲ್ಲಿ ಹೀಗಳಿಕೆಗೆ ಒಳಗಾಗಿದ್ದವ ಅಂಬಿಗರ ಚೌಡಯ್ಯ. ಇಂಥ ಚೌಡಯ್ಯನ ವಚನಗಳ ಅಂಕಿತ ಅಂಬಿಗರ ಚೌಡಯ್ಯ ಕೆಲವೊಮ್ಮೆ ಪ್ರಯೋಗದಲ್ಲಿ ಅದು ನಂಬಿಗ ಚೌಡಯ್ಯನೂ ಆಗುತ್ತದೆ.
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು ನಂಬಿದರೆ ಒಂದೇ ಹುಟ್ಟಲ್ಲಿ ದಡವ ಹಾಯಿಸುವೆ ನಂಬಿಗ ಚೌಡಯ್ಯ
ಎಂದು ತುಂಬು ಸ್ವಾಭಿಮಾನದ ಮಾತುಗಳನ್ನಾಡುತ್ತಾನೆ ಚೌಡಯ್ಯ. ಅಂದರೆ ಜಾತಿನಿಂದನೆಯನ್ನು ವಿರೋಧಿಸಿ ತನ್ನ ಕಾಯಕ ಗೌರವದ ನೆಲೆಯಲ್ಲಿ ಸ್ವಾಭಿಮಾನದಿಂದ ತನ್ನ ಕಾಯಕವನ್ನು ವಿಶೇಷಣವಾಗಿಸಿ ತನ್ನ ಹೆಸರನ್ನೇ ತನ್ನ ವಚನಗಳ ಅಂಕಿತವಾಗಿರಿಸಿಕೊಂಡಾತ ಅಂಬಿಗ ಚೌಡಯ್ಯ. ಇದು ಅವನ ವ್ಯಕ್ತಿತ್ವದ ಅಸ್ಮಿತೆ.
ಪುಣ್ಯಸ್ತ್ರೀಯರು ಪಣ್ಯ ಸ್ತ್ರೀಯರಾಗಿದ್ದ ಕುಟುಂಬ ಮೂಲದವರು. ಅವರಿಗೆ ಸಾಂಸಾರಿಕ ಬದುಕನ್ನು ಕೊಟ್ಟವರು ಕಾಯಕಜೀವಿ ಶರಣರು. ಆದ್ದರಿಂದಲೇ ಪುಣ್ಯಸ್ತ್ರೀ ಯರು ತುಂಬಾ ಕೃತಜ್ಞತಾ ಭಾವದಲ್ಲಿ ತಮ್ಮ ಗಂಡನ ಹೆಸರಿನ ಜೊತೆಗೆ ಪುಣ್ಯಸ್ತ್ರೀ ಪದವನ್ನು ಸೇರಿಸಿ ತಮ್ಮ ಹೆಸರನ್ನು ವಚನದ ಅಂಕಿತವಾಗಿರಿಸಿಕೊಂಡಿದ್ದಾರೆ. ಇದು ಅವರ ವ್ಯಕ್ತಿತ್ವದ ಕೃತಜ್ಞತಾ ಭಾವದ ಅಸ್ಮಿತೆ. ಈ ಬಗೆಯ ಅಂಕಿತಗಳು ವಚನ ಧರ್ಮದ ಜಂಗಮ ಭಾವದ ನಡೆಗೆ ನುಡಿಸೂಚಿಗಳಂತಿವೆ. ಹೀಗೆ ವಿವರಿಸುತ್ತಾ ಹೋದರೆ ಅಂಕಿತಗಳು ಚಳವಳಿಯ ಆಶಯ ಗರ್ಭದಲ್ಲಿನ ಹೊಸ ವಿವೇಕದ ಪ್ರತೀಕಗಳೇ ಆಗಿವೆ. ನವ ಸಮಾಜದ ನಡೆಯ ಜಂಗಮ ಭಾವದ ವಿವೇಕಗಳಾಗಿವೆ.
ವಚನಗಳಲ್ಲಿ ಚಳವಳಿಯ ಆಶಯಗಳು
ವಚನಕಾರರು ಭಾಷೆಗಿದ್ದ ಗಂಡು ಗರ್ವವನ್ನು ಆದಷ್ಟು ನಿವಾರಿಸಲು ತೊಡಗಿದ್ದಾರೆ. ಭಾಷೆಗಿರುವ ಗಂಡುದನಿ ಗಂಡು ಸಂಬೋಧನಾ ಪ್ರಧಾನತೆಯಿಂದ ಹಿಡಿದು ಹೆಣ್ಣನ್ನು ಕೀಳಾಗಿ ಕಾಣುವ ರೂಢಿಗತ ಪದ ಬಳಕೆಯವರೆಗೆ ಪುರುಷಾಹಂಕಾರಿ ಧೋರಣೆಯಿಂದ ಕೂಡಿದೆ. ಉದಾಹರಣೆಗೆ ಮಾನವ ಮನುಷ್ಯ ಪದಗಳನ್ನೇ ಗಮನಿಸಿದಾಗ ಅಲ್ಲಿ ಪುರುಷ ಕಾಣುತ್ತಾನೆಯೇ ಹೊರತು ಮಹಿಳೆಯ ಗೈರುಹಾಜರು ಕಾಣುತ್ತದೆ.
ಮಾನವ ಕುಲ, ಮನುಷ್ಯ ಜಾತಿ ಈ ಪದಗಳ ಪ್ರಯೋಗದಲ್ಲಿ ಸ್ತ್ರೀಯ ನೆಲೆ ಯಾವುದು? ಎಂಬ ಪ್ರಶ್ನೆ ಏಳುತ್ತದೆ ಇನ್ನು ವಿಚಾರಗಳನ್ನು ವಿವರಿಸುವಾಗ ತತ್ವ ಸಿದ್ಧಾಂತ ವಿಚಾರ ಎಲ್ಲವೂ ಅವನನ್ನು ನಿರ್ದೇಶಿಸಿರುತ್ತಾರೆಯೇ ಹೊರತು ಅಲ್ಲಿ ಅವಳು ಕಾಣುವುದಿಲ್ಲ. ಈ ಧೋರಣೆಯನ್ನು ತ್ಯಜಿಸಿ ಶರಣರು ತಮ್ಮ ಭಾಷೆಯ ಬಳಕೆಯಲ್ಲಿ ಬದಲಾವಣೆಗಳನ್ನು ತರಲು ಆದಷ್ಟು ಪ್ರಯತ್ನಶೀಲರಾಗಿದ್ದಾರೆ. ವಚನಗಳಲ್ಲಿ ಆದಷ್ಟು ಸ್ತ್ರೀ ಸಂಬೋಧನೆಯ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ ಅಕ್ಕಾ ಅವ್ವಾ ಕೇಳಾತಂಗಿ ಇಂಥ ಸಂಬೋಧನೆಗಳಿಂದ ತಮ್ಮ ಸ್ತ್ರೀಪರ ಕಾಳಜಿಯನ್ನು ಮೆರೆದಿದ್ದಾರೆ. ಗಂಡು ಹೆಣ್ಣಿನ ಭೇದ ನೀತಿಯನ್ನು ಪ್ರಶ್ನಿಸುತ್ತಲೇ ಮಹಿಳಾ ಸಮಾನತೆಯನ್ನು ಸಾರಿದ್ದಾರೆ.
ಮೊಲೆ ಮೂಡಿ ಬಂದರೆ ಹೆಣ್ಣೆಂಬರು ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ
ಎಂದು ಆತ್ಮ ಅರ್ಥಾತ್ ಜೀವಕ್ಕೆ ಸಮಾನತೆಯ ತಾತ್ವಿಕ ಮನ್ನಣೆ ಸಾರಿದ್ದಾರೆ ಪುರುಷ ನೆಲೆಯಲ್ಲಿ ಈ ಬಗೆಯ ಸಮಾನತೆಯನ್ನು ಕಂಡರೆ ಗೊಗ್ಗವ್ವೆಯು -
ಮೊಲೆಮುಡಿ ಬಂದಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದಡೆ ಗಂಡೆಂಬರು
ಈ ಉಭಯ ಜ್ಞಾನ ಗಂಡೋ ಹೆಣ್ಣೋ
ಎಂದು ಪ್ರಶ್ನೆ ಹಾಕುತ್ತಾಳೆ. ಹೀಗೆ ಮಹಿಳೆಯ ವಿವೇಕ ಸೂಕ್ಷ್ಮತೆ ಪುರುಷ ಅಹಂಕಾರದ ಭಾಷೆಯ ಬಳಕೆಯ ಬಗ್ಗೆಯೂ ಅಲ್ಲಿ ಪ್ರತಿರೋಧದ ನೆಲೆಗಳನ್ನು ಕಾಣಬಹುದು.
ಆವರಣದ ರಚನೆಗಳಲ್ಲ:
ವಚನಗಳು ಯಾವುದೇ ಶಾಸ್ತ್ರ ಬದ್ಧ ಜಡ ಆವರಣಕ್ಕೆ ಬದ್ಧವಾಗಿ ರಚಿಸಿದವುಗಳಲ್ಲ ಅವು ಷಟ್ಪಲ ಅಷ್ಟಾವರಣ ಇತ್ಯಾದಿ ಆವರಣಗಳಿಗೆ ಉದ್ದೇಶಿತವಾದಂತೆ ನಿರ್ದಿಷ್ಟತೆಯಲ್ಲಿ ಶಾಸ್ತ್ರ ಬದ್ಧ ಸಂಗತಿಗಳಾಗಿ ಸಂಗತಿಗಳನ್ನು ವಿವರಿಸುವ ಶಾಸ್ತ್ರೀಯ ಜಡ ವ್ಯಾಖ್ಯಾನಗಳಾಗಿ ರಚಿತವಾದವುಗಳಲ್ಲ. ಅವುಗಳಲ್ಲಿರುವ ವಿಚಾರ ಏಕವ್ಯಕ್ತಿ ಪ್ರತಿಪಾದಿತ ವಿಷಯವಾಗದೆ ಬಹು ನೆಲೆಯ ಆಯಾಮಗಳಲ್ಲಿ ಚರ್ಚೆಗೊಳಗಾಗುತ್ತಾ ಪ್ರಜಾಪ್ರಭುತ್ವವಾದಿ ದೃಷ್ಟಿ ಧೋರಣೆಯಲ್ಲಿ ವಿಚಾರಗಳನ್ನು ವಿಶ್ಲೇಷಿಸುತ್ತಾ ರೂಪುಗೊಂಡ ರಚನೆಗಳಾಗಿವೆ. ಹೀಗಾಗಿಯೇ ನಿರ್ದಿಷ್ಟ ವಚನವೊಂದು ಒಬ್ಬ ಶರಣನನ್ನು ಉದ್ದೇಶಿತ ವಿಷಯವೊಂದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತಿದರೆ ಅದಕ್ಕೆ ಉತ್ತರದ ವಿವರಣೆಯನ್ನು ಆ ಶರಣ ನೀಡಿದಂತೆ ಅವನ ವಚನ ರಚನೆಯಾಗುತ್ತದೆ. ಹೀಗಾಗಿ ಹಲವು ವಚನಗಳು ಸಮೂಹ ಸೃಷ್ಟಿಯ ರಚನೆಗಳಾಗಿವೆ. ಆದರೆ ಜಾನಪದದಂತೆ ಹೆಸರಿಲ್ಲದ ಹೆಸರೊಲ್ಲದ ವ್ಯಕ್ತಿ ನಿರಪೇಕ್ಷ ನೆಲೆಯ ಸಮೂಹ ಸೃಷ್ಟಿಯಲ್ಲ. ವ್ಯಕ್ತಿಗಳ ಅಭಿಪ್ರಾಯದ ಅಧಿಕೃತತೆಯನ್ನು ಸ್ಥಾಪಿಸುತ್ತಲೇ ಸಾಮೂಹಿಕ ತೊಡಗಿಸಿಕೊಳ್ಳುವ ಭಾಗವಾಗಿ ಒಡಮೂಡಿದವುಗಳಾಗಿವೆ. ಇಲ್ಲಿ ಸಂಬಂಧಾತ್ಮಕ ಸಂವಾದೀ ನೆಲೆಯ ಈ ಗುಣ ಬಹುತೇಕ ವಚನಕಾರರ ಮೂಲ ಗುಣವಾಗಿದೆ. ಹೀಗಾಗಿ ಇಲ್ಲಿ ವ್ಯಕ್ತಿನಿಷ್ಠ ಅಸ್ಮಿತೆಯನ್ನು ಸಮೂಹ ನಿಷ್ಠೆ ಸಮಾಜ ವ್ಯಾಪ್ತಿಯ ಹೊಣೆಯರಿತ ಭಾವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಭಾದ್ಯತೆಗಳನ್ನು ಗೌರವಿಸಿದಂತೆ ಈ ಸಂವಾದ ಸೃಷ್ಟಿ ರೂಪಗೊಂಡಿದೆ. ಆದ್ದರಿಂದಲೇ ವಚನಗಳಲ್ಲಿ ನಾಟಕೀಯತೆ ಸಹಜ ಸತ್ವವಾಗಿದೆ. ಇದು ವ್ಯಕ್ತಿಗತ ಸೃಷ್ಟಿಯ ಪ್ರತಿಭಾ ಫಲರೂಪಿಯಾಗದೆ ಚಳವಳಿಯ ಪರಿಣಾಮದಲ್ಲಿ ಅಯಾಚಿತವಾಗಿ ಮೈತಾಳಿದ ಋತುಗಾನವಾಗಿದೆ.
ಛಾಯಾ ರಚನೆಗಳು:
ಈ ಎಲ್ಲಾ ವಿಶೇಷತೆಗಳ ಹಿನ್ನೆಲೆಯಲ್ಲಿ ವಚನಗಳನ್ನು ಕುರಿತು ಯೋಚಿಸಿದಾಗ ವಚನಗಳೆಂದರೆ ಅವು ಹನ್ನೆರಡನೇ ಶತಮಾನದ ಚಳವಳಿಯ ಉಪ ಉತ್ಪನ್ನಗಳಾದ ರಚನೆಗಳಿಗೆ ಅನ್ವಯಿಸುವ ಮಾತೇ ಹೊರತು ಬೇರೆಯಲ್ಲ. ಹನ್ನೆರಡನೇ ಶತಮಾನದ ನಂತರದಲ್ಲಿ ಬಸವೋತ್ತರ ಯುಗದ ರಚನೆಗಳಿಗೆ ಈ ವಚನ ಪದ ಅನ್ವಯಿಸುವುದಿಲ್ಲ. ಅವು ಛಾಯಾ ರಚನೆಗಳೇ ಹೊರತು ನಿಜ ವಚನಗಳಲ್ಲ. ನಿಜ ವಚನಗಳ ಮೂಲ ಗುಣದ ಬಿಸುಪು ಅಲ್ಲಿ ಕಾಣುವುದಿಲ್ಲ. ಅಂಕಿತ ಬಳಕೆಯಿಂದ ಹಿಡಿದು ಎಲ್ಲ ವಿಚಾರಗಳಲ್ಲೂ ಅವು ವ್ಯಕ್ತಿ ಕೇಂದ್ರಿತ ರಚನೆಗಳೇ ಹೊರತು ಸಮೂಹ ಸಾಂಗತ್ಯ ಪಡೆದ ಸಂವಾದಾತ್ಮಕ ಸೊಗಡನ್ನು ಅಲ್ಲಿ ಕಾಣಲಾರೆವು. ಇವು ಸಾಹಿತ್ಯ ಸೃಷ್ಟಿಗಳೇ ಹೊರತು ಚಳವಳಿಯ ಉಪ ಉತ್ಪನ್ನಗಳಲ್ಲ. ಹಾಗೆಯೇ ವಚನಗಳ ಹೆಸರಿನಲ್ಲಿ ಆಧುನಿಕ ಸಂದರ್ಭದಲ್ಲಿ ಹರಿದು ಬರುತ್ತಿರುವ ರಚನೆಗಳನ್ನು ಗಮನಿಸಿದಾಗಲೂ ಅವುಗಳು ಛಾಯಾ ರಚನೆಗಳೇ ಹೊರತು ವಚನಗಳ ಮೂಲ ದ್ರವ್ಯಾಂಶವನ್ನು ಅಲ್ಲಿ ಕಾಣಲಾಗುವುದಿಲ್ಲ. ಈ ಎಲ್ಲಾ ರಚನೆಗಳಲ್ಲಿ ಅಂಕಿತವೆಂಬುದು ವ್ಯಕ್ತಿಯ ಇಷ್ಟದ ಪದ ಪ್ರಯೋಗವಾಗಿ ಅದು ಶುಷ್ಟ ಪ್ರಯೋಗವಾಗಿದೆಯೇ ಹೊರತು, ಅದಕ್ಕೆ ವ್ಯಕ್ತಿತ್ವದ ಅಸ್ಮಿತೆಯ ನಖಮಾಂಸ ಸಂಬಂಧವಿರುವುದಿಲ್ಲ. ಆದ್ದರಿಂದ ಆಧುನಿಕ ವಚನ ಮಾದರಿಯ ರಚನೆಗಳನ್ನು ವಚನಗಳೆಂದು ಕರೆಯುವಾಗ ಮನಸ್ಸು ಅಳುಪುತ್ತದೆ.
ಆದರೆ ಬಸವೋತ್ತರ ಕಾಲದ ರಚನೆಗಳು ವ್ಯಕ್ತಿಗತ ನೆಲೆಯಲ್ಲಿ ಧರ್ಮನುಯಾಯಿಯೊಬ್ಬ ತನ್ನ ಧರ್ಮಕ್ಕೆ ಆವರಣದ ನಿಯಮ ನಿಬಂಧನಾ ಸೂತ್ರಗಳನ್ನು ಹೇಳುತ್ತಾ ತನ್ನ ದೃಷ್ಟಿಯ ಧರ್ಮ ಧೋರಣೆಯನ್ನು ಪ್ರತಿಪಾದಿಸುವ ರಚನೆಗಳಾಗಿವೆ. ಹೀಗಾಗಿ ಇವುಗಳಲ್ಲಿ ಹನ್ನೆರಡನೇ ಶತಮಾನದ ವಚನಗಳಲ್ಲಿರುವ ಚಳವಳಿಯ ಕಾವಾಗಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಬಾಧ್ಯತೆಗಳ ಗೌರವ ಘನತೆಯ ಮಾನ್ಯತೆಯಾಗಲಿ ಇಲ್ಲ. ಈ ಕಾಲದ ರಚನೆಗಳು ವಚನಗಳ ಆಕೃತಿ ಮಾತ್ರವನ್ನು ಅನುಕರಿಸಿದ ರಚನೆಗಳೇ ಹೊರತು ಚಳವಳಿಯ ಉಪ ಉತ್ಪನ್ನಗಳಲ್ಲ. ಅದೇ ರೀತಿ ಆಧುನಿಕ ಸಂದರ್ಭದಲ್ಲಿ ಇತ್ತೀಚಿನವರು ಬರೆಯುವ ವಚನದ ಹೆಸರಿನ ರಚನೆಗಳು ಕೂಡ ವಚನಗಳಲ್ಲ, ಅವು ಛಾಯಾ ರಚನೆಗಳು. ಇಲ್ಲಿಯೂ ಅಂಕಿತಗಳಿಂದ ಹಿಡಿದು ವಿಷಯ ಚಿಂತನೆ ಎಲ್ಲವೂ ಆಧುನಿಕ ವರ್ತಮಾನಕ್ಕೆ ಮುಖಮುಖಿಯಾದುವು. ಹೀಗಾಗಿ ಇವುಗಳೆಲ್ಲ ವಚನಗಳ ಆಕೃತಿಯಲ್ಲಿ ಇದ್ದರೂ ಅವುಗಳು ಆಧುನಿಕ ಕಾವ್ಯದ ಒಂದು ಪ್ರಭೇದ ಎಂದು ಹೇಳಬಹುದು. ಹಾಯಕು, ಮಿಡಿಕವಿತೆ, ಹನಿಕವಿತೆ, ಗಜಲ್ ಇತ್ಯಾದಿಗಳಂತೆ ಇವು ಕೂಡ ಮೂಲದ ಭಾಷೆಯ ಆಶಯಗಳಿಗಿಂತ ಆಕೃತಿಯ ಅನುಕರಣೆಯ ರಚನೆಗಳೇ ಹೊರತು ಮೂಲ ಬಿಸುಪು ಕಸುವು ತುಂಬಿಕೊಂಡು ಅವುಗಳೇ ಆದವುಗಳಲ್ಲ. ಹೀಗಂದಾಕ್ಷಣ ನಾನು ಈ ಬಗೆಯ ರಚನೆಗಳನ್ನು ನಿರಾಕರಿಸುವುದಿಲ್ಲ. ಆದರೆ ಅಧ್ಯಯನ ಸಂದರ್ಭದಲ್ಲಿ ಈ ವ್ಯತ್ಯಾಸದ ಅರಿವಿನಲ್ಲಿ ನಮ್ಮ ಗ್ರಹಿಕೆ ವಿಮರ್ಶೆ ಹರಿಯಬೇಕು ಎಂಬುದಷ್ಟೇ ನನ್ನ ಅಭೀಪ್ಸೆ.