ವೃತ್ತಾಂತ

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ ಹೊರತಂದಿದ್ದಾರೆ. ‘ಗೆಲಿಯಾನೋ’, ‘ಇಟಾಲೋ ಕಾಲ್ವಿನೊ’ ಕೃತಿಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ ಸಂಬಂಧಿಸಿ ಅಧ್ಯಯನಗಳನ್ನು ಮಾಡಿದ್ದಾರೆ. ಕಥೆಗಾರರಾಗಿಯೂ ಇವರು ಗಮನ ಸೆಳೆಯುತ್ತಿದ್ದಾರೆ.

Update: 2025-01-09 06:11 GMT

ಬಸವರಾಜು ಮನೆ ಹೊರಗಿನ ಪುಟ್ಟ ಸಿಮೆಂಟ್ ಬೆಂಚ್ ಮೇಲೆ ಲುಂಗಿ ಕೊಂಚ ಮೇಲೇರಿಸಿ ಮಂಡಿ ನೋವಿಗೆ ಎಣ್ಣೆ ಹಾಕಿ ಮಸಾಜ್ ಮಾಡುತ್ತಾ ಕೂರುವರು. ಬೆಳಗ್ಗೆಯ ಮಾಮೂಲಿ ಕೆಲಸ ಅದು. ‘ನಸು ಬೆಳಗಲ್ಲೇ ಮಾಡ್ಕೊಂಡು ಬೇಗ ಬಿಸಿನೀರು ಹಾಕೊಳ್ಳಿ’ ಅಂತ ಮಗ, ಸೊಸೆ ಹೇಳಿದರೂ ಅದೇಕೋ ಒಂಭತ್ತು ಗಂಟೆ ವರೆಗೆ ಅವರಿಗೆ ಪುರುಸೊತ್ತಾಗುತ್ತಿರಲಿಲ್ಲ. ಯಾರಾದರೂ ಮನೆಗೆ ಬರೋ ಟೈಮ್ ಅದು. ಕೊಂಚ ಟೈಮ್ ಅಡ್ಜಸ್ಟ್ ಮಾಡ್ಕೊಬಾರ್ದಾ? ಎಂದು ಸೊಸೆ ಸಿಡುಕುವಳು.

ಅದೇನೋ ಎಷ್ಟೇ ಪ್ರಯತ್ನ ಮಾಡಿದರೂ ಬೇಗ ಈ ಕೆಲಸಕ್ಕೆ ಅಣಿಯಾಗಲು ಆಗದೇ ಇರುವುದಕ್ಕೆ ಬಸವರಾಜು ಅವರಿಗೆ ಕಿರಿಕಿರಿ ಆಗುತ್ತಿತ್ತು.

ಮಗ ಸಿದ್ಧೇಶ್ವರ ಹೆಚ್ಚೇನೂ ಹೇಳುತ್ತಿರಲಿಲ್ಲ. ಅಪ್ಪ ಸ್ನಾನ ಮುಗಿಸಿ ಡ್ರೆಸ್ ಮಾಡಿಕೊಂಡು ಕೂತಿರಬೇಕು, ಬರೋರು ಡ್ರಾಯಿಂಗ್ ರೂಮಲ್ಲಿ ಅಪ್ಪನನ್ನೂ ಮಾತಾಡಿಸ್ತಾರೆ, ಅವರೇ ಯಾಕೆ ಬಾಗಿಲ ಬಳಿ ಬಂದು, ಏನ್ಸಾರ್ ಚೆನ್ನಾಗಿದೀರಾ ಅಂತ ಮಾತಾಡಿಸಿ ಒಳಗೆ ಬರಬೇಕು ಎಂಬುದಷ್ಟೇ ಅವನ ಪ್ರಶ್ನೆ.

ಬೆಳಗ್ಗೆ ಎದ್ದ ತಕ್ಷಣ ಚಹಾ, ಆಮೇಲೆ ಶೌಚ ಇತ್ಯಾದಿ, ಆಮೇಲೆ ಬಸವರಾಜು ಅವರು ವಾಕಿಂಗ್ ಹೋಗುವರು. ಅಂದಾಜು ಮುಕ್ಕಾಲು ಗಂಟೆ. ಅದರಲ್ಲಿ ವಾಕಿಂಗ್ ಪಾಲು ಕಡಿಮೆ. ಪಾರ್ಕಲ್ಲಿ ಅವರ ಓರಗೆಯ ಗೆಳೆಯರು ಸಿಗುವರು. ಅವರೊಂದಿಗೆ ಹರಟೆ ಹೊಡೆದು ಮನೆಗೆ ವಾಪಾಸು ಬಂದರೆ ಸೊಸೆ, ಮಗನ ಸ್ನಾನ, ಸ್ಕೂಲಿಗೆ ತಯಾರಿ ನಡೆಸಿ ಸ್ವತಃ ಸ್ನಾನ, ಅಡುಗೆ ಮುಗಿಸಿ ಮಗನನ್ನು ಸ್ಕೂಲ್ ಬಸ್ಸಿಗೆ ತಳ್ಳಿ ತಾನೂ ಆಫೀಸಿಗೆ ಒಂಭತ್ತು ಗಂಟೆಗೆ ಹೊರಡಬೇಕಲ್ಲ. ಅವಳ ಸಮಯದ ಬಿಗಿ ತಂತಿ ನಡಿಗೆಯನ್ನು ತಾಳ್ಮೆಯಿಂದ ಗಮನಿಸುವರು.

ಎಲ್ಲಾ ಅಚ್ಚುಕಟ್ಟು ಅವಳದ್ದು. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಸಾರು, ಸಾಂಬಾರ್, ಪಲ್ಯ, ಚಪಾತಿ, ಫಿಲ್ಟರ್‌ನಲ್ಲಿ ಕಾಫಿ ಡಿಕಾಕ್ಷನ್- ಕೊಂಚವೂ ಏದುಸಿರು ಬಿಡದೇ ಮಾಡುವ ಕ್ರಮಕ್ಕೆ ಬಸವರಾಜು ಅವರಿಗೆ ಕೃತಜ್ಞತೆ ಇದೆ. ಏನಾದರೂ ಸಹಾಯ ಮಾಡಲೇನಮ್ಮಾ ಎಂದು ಕೇಳಿದರೆ ಸೊಸೆ, ಏನೂ ಬೇಡ ಮಾವಾ, ಇಷ್ಟು ವರ್ಷ ಜೀವ ತೇದಿದೀರಿ, ಈಗ ಆರಾಮ ಇರಿ ಎಂದು ಹೇಳುವಳು.

ಮಾವನ ಬಗ್ಗೆ ಆಕೆಗೆ ಗೌರವ ಇದೆ. ತೀರಿಕೊಂಡ ಅತ್ತೆಯನ್ನು ಅವಳು ನೋಡಿಲ್ಲ. ಆದರೆ ಆಕೆಯ ಫೋಟೋಕ್ಕೊಂದು ಹೂವು ತಗಲಿಸದೇ ಅವಳು ಇರಲ್ಲ.

ಮಗ ತಮ್ಮ ಹಾದಿಯಲ್ಲೇ ಹೆಜ್ಜೆ ಇಟ್ಟ ಬಗ್ಗೆ ಬಸವರಾಜು ಅವರಿಗೆ ಬಲು ಹೆಮ್ಮೆ ಇತ್ತು.

ತಮ್ಮ ಕಾಲದ ಹೋರಾಟಗಳ ಬಗ್ಗೆ ಹೇಳಿಕೊಳ್ಳಲು ಯಾರಾದರೂ ಸಿಕ್ಕಿಯಾರೇ ಎಂಬ ತಹತಹದಲ್ಲೇ ಬಸವರಾಜು ದಿನ ದೂಡುತ್ತಿದ್ದರು. ಯಾರಲ್ಲಿ ಹೇಳೋದು. ಮನೆಗೆ ಬರುವವರಿಗೆಲ್ಲಾ ಅವರ ಜೀವನ ಚರಿತ್ರೆ ಪೂರಂಪೂರಾ ಗೊತ್ತು. ಮಗ ಅದನ್ನು ಎಲ್ಲರಿಗೂ ಬಾಯಿಪಾಠ ಮಾಡಿಸಿದ್ದ ಅನ್ನಿಸುತ್ತೆ ಎಂದು ಒಮ್ಮೆ ಬಸವರಾಜು ಗೊಣಗಿದ್ದರು.

ವರ್ಷಕ್ಕೆ ಐದಾರು ಬಾರಿ ಬಸವರಾಜು ವೇದಿಕೆ ಹತ್ತುವರು. ಕೆಲವೊಮ್ಮೆ ಪ್ರತಿಭಟನಾ ರ್ಯಾಲಿಯ ಉದ್ಘಾಟನೆ, ಶುಭ ಕೋರುವುದು ಹೀಗೆ.

ಆಗೆಲ್ಲಾ ಹೊಸ ಹುಡುಗರು ತೋರುವ ಗೌರವ ಕಂಡು ಬಸವರಾಜು ಅವರ ಮನಸ್ಸು ತುಂಬುವುದು.

ಮಾರನೇ ದಿನದ ಪತ್ರಿಕೆಗಳಲ್ಲೂ ಅಷ್ಟೆ. ವೇದಿಕೆಯಲ್ಲಿ ಬಸವರಾಜು ಉಪಸ್ಥಿತರಿದ್ದರು ಎಂದೋ, ಬಸವರಾಜು ಅವರು ಕರೆಕೊಟ್ಟರು ಎಂದೋ ಫೋಟೋ ಸಹಿತ ಪ್ರಕಟವಾಗುವುದು. ಅವರ ಮೊಮ್ಮಗ ಪತ್ರಿಕೆ ನೋಡಿ, ತಾತಾ ನಿನ್ ಫೋಟೊ ಬಂದಿದೆ, ಹೆಸರೂ ಪ್ರಿಂಟಾಗಿದೆ ಎಂದು ಬೆರಗಲ್ಲಿ ಹೇಳಿ ಅವರನ್ನು ಕಂಗ್ರಾಜುಲೇಟ್ ಮಾಡುವನು. ತಾತಾ ಸಂಜೆ ಐಸ್ ಕ್ರೀಮ್ ಕೊಡ್ಸು, ನಿನ್ ಫೋಟೊ ಬಂದಿದ್ದಕ್ಕೆ ಎಂದು ಬೇಡಿಕೆ ಇಡುವನು.

ಸರಕಾರಿ ಫ್ಯಾಕ್ಟರಿನಲ್ಲಿ ಒಂದೇ ಪ್ರಮೋಷನ್ ಸಿಕ್ಕಿದರೂ ಗೊಣಗದೇ ರಿಟೈರ್ ಆಗಿ , ಸರ್ವಿಸಿನಲ್ಲಿದ್ದಾಗಲೇ ಒಂದು ಸೈಟು ತೆಗೊಂಡು, ಅದರಲ್ಲಿ ಸಾಲ ಸೋಲ ಮಾಡಿ ಪುಟ್ಟ ಮನೆ ಕಟ್ಟಿಸಿ, ರಿಟೈರ್ ಆಗೋ ಮೊದಲು ಇನ್ನೊಂದು ಸೈಟು ತೆಗೊಂಡಿದ್ದಷ್ಟೇ ಬಸವರಾಜು ಅವರ ಸಾಧನೆ.

ಫ್ಯಾಕ್ಟರಿ ಕೆಲಸ ಮುಗಿಸಿ ಲೇಬರ್ ಯೂನಿಯನ್ ಆಫೀಸಿಗೆ. ಅಲ್ಲಿ ಒಬ್ಬೊಬ್ಬರ ರಗಳೆ ಶೋಷಣೆ ಕತೆ ಕೇಳಿ ಅದಕ್ಕೆ ಬೇಕಾದ ದೂರು/ ಮನವಿ/ ಸಮಜಾಯಿಷಿ ಪತ್ರ ಬರೆದು ಕೊಟ್ಟು, ಮನೆ ಸೇರುವಾಗ ಗಂಟೆ ಹತ್ತಾಗೋದು. ಪ್ರತಿಭಟನೆ ರ್ಯಾಲಿ ಅಂತ ಇದ್ದರೆ ಅದರ ಪಾಂಪ್ಲೆಟ್ ಡ್ರಾಫ್ಟ್ ಪ್ರಿಂಟಿಗೆ ಕೊಡೋದು, ಪ್ರೂಫ್ ನೋಡೋದು, ಪ್ಲಕಾರ್ಡಿಗೆ ಬೇಕಾದ ಪೋಸ್ಟರ್ ಬರೆದದ್ದು ಸರಿಯಾಗಿದೆಯಾ ಅಂತ ನೋಡೋದು. ಹುಡುಗರಿಗೆ ಟೀ ತಂದ ಲೆಕ್ಕ ನೋಡಿ ಟೀ ಹುಡುಗನಿಗೆ ಕಾಸು ಕೊಡೋದು..

ಆಫೀಸಿಗೆ ಬಸೂನೇ ಸರಿ ಅಂತ ದೊಡ್ಡ ಕಾಮ್ರೇಡುಗಳು ಕೃತಜ್ಞತೆಯಲ್ಲಿ ಹೇಳೋರು.

ಎಷ್ಟು ವರ್ಷ? ಹತ್ತಿರ ಹತ್ತಿರ ನಾಲ್ಕು ದಶಕ. ಕಚೇರಿ ಸಹಾಯಕನ ಕೆಲಸದಿಂದ ಶುರು ಮಾಡಿದ ಬಸವರಾಜು, ನಿಧಾನಕ್ಕೆ ದೊಡ್ಡ ನಾಯಕರ ಜೊತೆ ಫೀಲ್ಡಿಗೆ ಹೋಗತೊಡಗಿದರು. ಅಚ್ಚುಕಟ್ಟಾಗಿ ನೋಟ್ಸ್ ಬರೆದುಕೊಂಡು ಪತ್ರಿಕಾ ಹೇಳಿಕೆ ತಯಾರು ಮಾಡುವ ಬಸವರಾಜು ಅವರ ಶ್ರದ್ಧೆಗೆ ಎಲ್ಲಾ ನಾಯಕರೂ ಮೆಚ್ಚೋರು. ಹೋದಲ್ಲಿ ಸಮಯ, ಸಂದರ್ಭ, ಯಾರದ್ದೋ ಗೈರು ಹಾಜರಿ ಗಮನಿಸಿ ಬಸವರಾಜು ಅವರಿಗೂ ನಾಲ್ಕು ಮಾತಾಡಿ ಎನ್ನುವರು. ಹೀಗೆ ಬಸವರಾಜು ಭಾಷಣ ಮಾಡಲೂ ಕಲಿತರು.

ಹತ್ತಿಪ್ಪತ್ತು ವರ್ಷ ಹೀಗೆ ನುರಿದೇ ಬಸವರಾಜು ಕಾರ್ಮಿಕ ನಾಯಕರಾಗಿ ಪತ್ರಿಕೆಗಳಲ್ಲಿ ಗುರುತಿಸಲ್ಪಟ್ಟಿದ್ದು. ಅದು ಯಾವುದೂ ಅವರ ಮೇಲೆ ಪರಿಣಾಮ ಬೀರಿರಲಿಲ್ಲ. ಎಂದಿನಂತೆ ಫ್ಯಾಕ್ಟರಿ ಕೆಲಸ ಮುಗಿಸಿ ಕಚೇರಿಗೆ ಹೋಗುವುದು, ಆಯಾ ದಿನದ ಏಳೆಂಟು ಪೇಪರು ಆದ್ಯಂತ ಓದುವುದು.. ಪಿಟಿಷನ್ನುಗಳನ್ನು ಗಮನಿಸಿ ತಿದ್ದುವುದು ಹೀಗೆ ಅವರ ದಿನಚರಿಗೇನೂ ಭಂಗ ಬಂದಿರಲಿಲ್ಲ.

ಆದರೆ ಕಳೆದ ಒಂದು ದಶಕದಲ್ಲಿ ಕಚೇರಿಗೂ ಹೊಸ ರೂಪ ಬಂದಿತ್ತು. ಒಂದೆರಡು ಕಂಪ್ಯೂಟರ್ ಬಂದಿತ್ತು. ಹಳೇ ಟೈಪ್ ರೈಟರ್ ದಾಸ್ತಾನು ರೂಮಿನೊಳಗೆ ಸೇರಿತ್ತು. ಇಂಟರ್ ನೆಟ್ ಕೂಡಾ ಬಂದ ಕಾರಣ ಮೊದಲಿನ ತರ ಪಾಂಪ್ಲೆಟ್ ಪ್ರೂಫ್ ನೋಡುವುದು ಇತ್ಯಾದಿ ಕೆಲಸ ಇರಲಿಲ್ಲ. ಆದರೆ ಕಚೇರಿಗೆ ಬರುವವರ ಸಂಖ್ಯೆಯೂ ಕಮ್ಮಿಯಾಗುತ್ತಾ ಬಂದಿದ್ದು ಬಸವರಾಜು ಅವರಿಗೆ ಕಸಿವಿಸಿ ಆಗುತ್ತಿತ್ತು. ಲೇಬರ್ ಯೂನಿಯನ್‌ಗಳಿದ್ದ ಬ್ರಾಂಚುಗಳೂ ಕಡಿಮೆಯಾಗಿದ್ದು ದಾಖಲೆಗಳಲ್ಲಿ ಕಾಣುತ್ತಿತ್ತು.

ಒಮ್ಮೆ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಬಸವರಾಜು ಯೋಚಿಸಿದರೂ ಅದೇಕೋ ಒಮ್ಮೆಯೂ ಕೈಗೂಡಲಿಲ್ಲ. ತನಗೂ ವಯಸ್ಸಾದ ಕಾರಣ ಹೊಸ ಚಲನೆ ಗೊತ್ತಾಗುತ್ತಿಲ್ಲ ಎಂದು ತನಗೆ ತಾನೇ ಸಮಾಧಾನ ಹೇಳುತ್ತಿದ್ದರು.

ಈ ಮಧ್ಯೆ ತಮ್ಮ ಮಗನೂ ಯೂನಿಯನ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದ್ದು ಬಸವರಾಜು ಅವರಿಗೆ ತೃಪ್ತಿ ತಂದಿತ್ತು. ಬಲು ಚುರುಕು, ತೀಕ್ಷ್ಣಮತಿ ನಿಮ್ಮ ಮಗ.. ಓದಿದ್ದು ಮೆಡಿಕಲ್ ಆದರೂ ಎಷ್ಟು ಓದ್ಕೊಂಡಿದಾನೆ ಎಂದು ಹಿರಿಯರು ತಾರೀಫು ಮಾಡುವರು. ಮನೆ ಹತ್ತಿರ ಅವನಿಗೊಂದು ಕ್ಲಿನಿಕ್ ಹಾಕಿಕೊಟ್ಟಿದ್ದರು. ಬಡವರ ಡಾಕ್ಟರು ಎಂದೇ ಅವನಿಗೆ ಖ್ಯಾತಿ. ಅವನ ಟೈಮಿಂಗು ಕೂಡಾ ಪಕ್ಕಾ, ಸಂಜೆ ಐದರಿಂದ ಎಂಟು. ಹಗಲು ಯೂನಿಯನ್ ಆಫೀಸಿಗೆ ಬಂದು ಬೇರೆ ಬೇರೆ ಸಂಘಟನೆಗಳೊಂದಿಗೆ ಮಾತುಕತೆ, ಚರ್ಚೆ, ಇತ್ಯಾದಿಯಲ್ಲಿ ಅವನ ಸಮಯ ಹೋಗುವುದು.

ಅಸಲಿಗೆ ಬಸವರಾಜು ಅವರಿಗೆ ಕಚೇರಿಯಲ್ಲಿ ಯಾವ ಕೆಲಸವೂ ಇರಲಿಲ್ಲ. ಪಬ್ಲಿಕ್ ಲೈಬ್ರೆರಿಗೆ ಬಂದ ಹಾಗೆ ಬಂದು ಪೇಪರೋದುವುದು ಬಿಟ್ಟರೆ ಮತ್ತೇನೂ ಕೆಲಸ ಅವರಿಗಿರಲಿಲ್ಲ. ಯಾವ ಪಿಟಿಷನ್ನು, ಪಾಂಪ್ಲೆಟ್ಟೂ ಅವರ ಪರಿಶೀಲನೆಗೆ ಬರುತ್ತಿರಲಿಲ್ಲ. ಮದುವೆ ಕಾಗದವನ್ನು ದೇವರ ಮುಂದೆ ಇಟ್ಟ ಹಾಗೆ ಅಚ್ಚುಕಟ್ಟಾಗಿ ಪ್ರಿಂಟ್ ಆದ ಪಾಂಪ್ಲೆಟ್ಟಿನ ಬಂಡಲ್ ಬಿಚ್ಚಿ ಮೊದಲ ಪ್ರತಿ ಬಸವರಾಜು ಅವರಿಗೆ ನೀಡುತ್ತಿದ್ದರು. ಅವರು ಕನ್ನಡಕ ಸರಿಪಡಿಸಿಕೊಂಡು ಓದಿ ಮೆಚ್ಚುಗೆ ವ್ಯಕ್ತಪಡಿಸುವರು. ತಿದ್ದುವಂಥಾದ್ದೇನೂ ಅವರಿಗೆ ಕಂಡಿರಲಿಲ್ಲ. ಪರವಾಗಿಲ್ಲ; ಹೊಸ ತಲೆಮಾರು ಎಷ್ಟು ಡೀಪಾಗಿ ಸಿದ್ಧಾಂತ ಅರ್ಥ ಮಾಡಿಕೊಂಡಿದ್ದಾರೆ ಎಂದು ತೃಪ್ತಿ ಪಡುವರು.

ಹೀಗೆ ನಿಧಾನಕ್ಕೆ ಈ ಕಚೇರಿಯಲ್ಲಿ ತಾನು ಅಸಂಗತ ಎಂದು ಅವರಿಗೇ ಅನ್ನಿಸಿತ್ತು. ಇರೋರು ತಿರಸ್ಕರಿಸಿದ್ದಾರೆ ಅಂತಲ್ಲ, ಈ ಸನ್ನಿವೇಶಕ್ಕೆ ತಾನು ಹೊಂದೋದಿಲ್ಲ ಅಂತ. ಒಂದು ದಿನ ಸಂಜೆ ಕಚೇರಿಗೆ ಬಂದವರು, ದಾಸ್ತಾನು ಕೋಣೆಗೆ ಹೋಗಿ ಅಲ್ಲಿ ಬಿದ್ದಿದ್ದ ಹಳೇ ಟೈಪ್ ರೈಟರ್‌ನ ಧೂಳು ಒರೆಸಿ ಅದರ ಕವರ್ ಹಾಕಿ ಕಚೇರಿಯ ಟೇಬಲ್ ಮೇಲೆ ಇಟ್ಟರು. ಆ ವೇಳೆಗೆ ಬಂದಿದ್ದ ಒಂದಿಬ್ಬರು ಹುಡುಗರಲ್ಲಿ , ‘‘ಈ ಟೈಪ್ ರೈಟರ್ ನಾನು ಮನೆಗೆ ಒಯ್ತೀನಿ ಕಣ್ರಪ್ಪಾ..’’ ಎಂದರು.

ಆ ಹುಡುಗರು , ‘‘ಅಯ್ಯೋ ಅಂಕಲ್, ಆಂಟಿಕ್ ಪೀಸ್ ಅದು, ನಿಮಗೆ ಬೇಕು ಅನ್ಸಿದ್ರೆ ವಿ ಆರ್ ಹ್ಯಾಪಿ, ಎನೀ ವೇ, ವಿ ವಿಲ್ ಇನ್ ಫಾರ್ಮ್ ಯುವರ್ ಸನ್’’ ಎಂದರು. ಆಮೇಲೆ ಸಡಗರದಲ್ಲಿ ಅವರೇ ಒಂದು ಆಟೋ ಗೊತ್ತು ಮಾಡಿ ಒಬ್ಬ ಹುಡುಗನೂ ಟೈಪ್ ರೈಟರ್ ಸಮೇತ ಮನೆಗೆ ಬಂದು ಬೈ ಅಂಕಲ್ ಎಂದು ಮರಳಿದನು. ಮನೆಯಲ್ಲಿ ಅದನ್ನು ಎಲ್ಲಿ ಇಡೋದು?

ಮೂರು ವರ್ಷ ಮೊದಲು ಮಗ ಮನೆಯನ್ನು ಆಮೂಲಾಗ್ರ ಕೆಡವಿ ರಿಪೇರಿ ಮಾಡಿದ್ದು ಅವರಿಗೂ ತೃಪ್ತಿ ನೀಡಿತ್ತು. ಸೈಕಲ್ಲೋ ಸ್ಕೂಟರ್ ಇಡುವಷ್ಟು ಜಾಗ ಬಿಟ್ಟು, ಮನೆ ಎದುರು ಹತ್ತಡಿ ಉದ್ದಗಲಕ್ಕೆ ಹೂವಿನ ಗಿಡ ನೆಡುವಷ್ಟು ಖಾಲಿ ಜಾಗ ಬಿಟ್ಟು ಕಟ್ಟಿಸಿದ್ದ ಸಣ್ಣ ಮನೆ. ಸೈಟಿಗೆ ತಕ್ಕಷ್ಟು ಕಟ್ಟಿಸಿದ್ದೇನಲ್ಲ.

ದೇವರು, ಪೂಜೆ ಪುನಸ್ಕಾರದಲ್ಲಿ ಅಂಥಾ ನಂಬಿಕೆ ಇಲ್ಲದ ಬಸವರಾಜು ಈ ಪುಟ್ಟ ಜಾಗದಲ್ಲಿ ಮಾತ್ರಾ ಹೂವಿನ ಗಿಡಗಳನ್ನು ಜತನದಲ್ಲಿ ಬೆಳೆಸಿದ್ದರು. ಬೆಳೆಸುವುದೆಂದರೆ, ಅವರ ಹೆಂಡತಿ ಎಲ್ಲಿಂದಲೋ ತರುತ್ತಿದ್ದ ಕಡ್ಡಿಗಳನ್ನು ಕುಂಡದಲ್ಲಿ ಹಾಕಿ ಚಿಗುರಿಸೋದು. ನೆಲದಲ್ಲಿ ಹಾಕುವಂಥಾ ಗಿಡಗಳನ್ನು ನೆಲಕ್ಕೆ ಹಾಕೋದು. ಪೂರ್ವಾಭಿಮುಖವಾಗಿ ತುಳಸಿ ಕಟ್ಟೆ. ಅಂಚಲ್ಲಿ ದಾಸವಾಳ, ಕಾಕಡ ಹೀಗೆ.

ಮಗ ಮೇಲೊಂದು ಮಹಡಿಯೂ ಕಟ್ಟಿಸಿ ಕೆಳಗೆ ದೊಡ್ಡ ಡ್ರಾಯಿಂಗ್ ರೂಮ್, ಕಿಚನ್, ಒಂದು ಆಫೀಸ್ ಗೆ ಉಪಯೋಗವಾಗಬಹುದಾದ ರೂಮು ಮತ್ತು ತನಗೆಂದೇ ವಿಶಾಲ ಅಟಾಚ್ಡ್ ಬಾತ್ ರೂಮ್ ಇದ್ದ ರೂಮು ಕಟ್ಟಿಸಿ ಸಂಸಾರಕ್ಕೆ ಮೇಲಿನ ಮಹಡಿ ಕಟ್ಟಿದ್ದ. ಅದು ಎಷ್ಟು ಅಚ್ಚುಕಟ್ಟಾಗಿತ್ತೆಂದರೆ ಬಸವರಾಜು ಅವರು ನಿರಾಳವಾಗಿ ಇದ್ದರು.

ಸೊಸೆ ಕೆಳಗಿನ ಅಡುಗೆ ಮನೆಯಲ್ಲಿ ಎಲ್ಲಾ ಕೆಲಸ ಪೂರೈಸಿ ರಾತ್ರಿ ಮಾತ್ರ ಮಲಗುವ ಟೈಮಿಗೆ ಮೇಲೆ ಹೋಗ್ತಾ ಇದ್ದಳು. ಮಗನೂ ಅಷ್ಟೆ. ಕೆಳಗಿನ ಆಫೀಸಲ್ಲಿ ರಾತ್ರಿ ಏನೇನೋ ಕೆಲಸ ಪೂರೈಸಿ ಮಹಡಿ ಹತ್ತುವನು.

ಎರಡು ವರ್ಷದ ಹಿಂದೆ ಮಗ ಕಾರು ತಂದಾಗ ಬಸವರಾಜು ಎಲ್ಲಾ ಹೆತ್ತವರಂತೆ ಅಭಿಮಾನ ಪಟ್ಟಿದ್ದರು. ಕಾರು ಪಾರ್ಕಿಂಗ್ ಬಗ್ಗೆ ಮೊದಲೇ ಯೋಚಿಸಿ ಮನೆ ಎದುರು ವ್ಯವಸ್ಥೆ ಮಾಡಿದ ಮಗನ ಮುಂದಾಲೋಚನೆ ಬಗ್ಗೆಯೂ ಅಚ್ಚರಿ ಹೊಂದಿದ್ದರು. ಒಂದು ಸ್ಕೂಟರ್ ಹೊಂದಲೂ ಸಾಧ್ಯವಾಗದೇ ಟಿವಿಎಸ್ ನಲ್ಲೇ ಓಡಾಡುತ್ತಿದ್ದ ತಮ್ಮ ಬಾಳುವೆ ನೆನೆದು ಈ ಕಾರು ಯಾವುದರ ಸೂಚಿ ಎಂದು ಬಗೆಹರಿಯದೇ ಸುಮ್ಮನಾಗಿದ್ದರು.

ವಿವಿಧ ಸಂಘಟನೆಯ ಮಂದಿ ಮನೆಗೆ ಬರುವರು. ಸಂಘಟಿತ ಹೋರಾಟ ಯಾಕೆ ಮುಖ್ಯ ಎಂದು ಚರ್ಚಿಸುವ ಹಂತ ದಾಟಿ ಜಂಟಿ ಹೋರಾಟಗಳ ಬಗ್ಗೆ ಯಾವಾಗ , ಎಲ್ಲಿ ಎಂದು ಚರ್ಚಿಸುವುದು ಕಂಡು ತಮ್ಮ ಕಾಲದ ಹೋರಾಟಕ್ಕಿಂತ ಈಗಿನ ತಲೆಮಾರಿನವರ ವಿಶನ್ ದೊಡ್ಡದು ಎಂದು ಅಭಿಮಾನ ಪಡುತ್ತಿದ್ದರು. ಈ ಹೋರಾಟಗಳು ಅಂದರೆ ಧರಣಿ, ಮೆರವಣಿಗೆ, ಶಾಮಿಯಾನ ಸಹಿತ ಸಮಾವೇಶಗಳನ್ನು ಕಂಡಾಗ ಅಲ್ಲಿ ಹಾರಾಡುತ್ತಿದ್ದ ಬಾವುಟಗಳ ವೈವಿಧ್ಯ ನೋಡಿ ಅಚ್ಚರಿ ಪಡುತ್ತಿದ್ದರು. ಇಷ್ಟು ಸಂಘಟನೆಗಳಾಗಲೀ ಈ ಪಾಟಿ ಬಂಟಿಂಗುಗಳಾಗಲೀ ತಾವಿದ್ದ ಕಾಲದಲ್ಲಿ ಇರಲೇ ಇಲ್ಲ ಎಂದು ಕೀಳರಿಮೆ ಪಡುವರು. ಭಾಷಣಗಳ ಹೊಸ ನುಡಿಗಟ್ಟುಗಳ ಬಗ್ಗೆ ಬೆರಗುಪಡುವರು. ಉದಾ: ಒಮ್ಮೆ ಅವರ ಮಗ ಬಂಡವಾಳಶಾಹಿ ದೇಶಗಳ ಜೀವನ ಶೈಲಿ ಹೇಗೆ ಹವಾಮಾನ ಬದಲಾವಣೆಗೆ ಕಾರಣವಾಗಿ ನಮ್ಮ ದೇಶದ ಬಡವರಿಗೆ ಮಾರಕವಾಗಿದೆ ಎಂದು ಭಾಷಣ ಮಾಡಿದ್ದ. ಒಂದು ಕಾರು ಸಾವಿರಾರು ಕೆಜಿ ಇಂಗಾಲದ ಬಿಡುಗಡೆಗೆ ಕಾರಣವಾಗುವುದು ಎಂದೂ ವಿವರಿಸಿದ್ದ.

ಸೈದ್ಧಾಂತಿಕ ಹೋರಾಟಗಾರರು ಈ ಹವಾಮಾನ ಬದಲಾವಣೆಯಂಥಾ ವಿಚಾರಗಳನ್ನು ಪರಿಸರವಾದಿಗಳಿಗೆ ಬಿಟ್ಟುಕೊಡಬಾರದು ಎಂದೂ ಎಚ್ಚರಿಸಿದ್ದ.

ಮನೆಗೆ ವಾಪಸು ಅದೇ ಕಾರಲ್ಲಿ ಬಂದಾಗ ಬಸವರಾಜು ಅವರು ಅದೇನೋ ಮುಜುಗರ ಅನುಭವಿಸಿದರು. ಈಗೆರಡು ವರ್ಷಗಳಿಂದ ಹೋರಾಟದ ನುಡಿಗಟ್ಟು ಬದಲಾಗುತ್ತಿರುವುದರ ಬಗ್ಗೆ ಬಸವರಾಜು ಹೆಮ್ಮೆಪಟ್ಟಿದ್ದರು. ಫ್ಯಾಶಿಸಂನ ವಿರುದ್ಧದ ಹೋರಾಟ ಎಂಬ ನುಡಿಗಟ್ಟು ಮಾಯವಾಗಿ ಎಷ್ಟೋ ದಶಕಗಳಾಗಿತ್ತು. ತಮ್ಮ ಕಾಲದಲ್ಲಿ ಫ್ಯಾಕ್ಟರಿ ಕಾರ್ಮಿಕರು, ಆಟೋದವರು, ಸಣ್ಣ ರೈತರ ಕೇಸುಗಳೆಲ್ಲಾ ಹ್ಯಾಂಡಲ್ ಮಾಡುತ್ತಿದ್ದುದನ್ನು ನೆನೆದು ಈಗ ಅಂಥಾ ಸಮಸ್ಯೆ ಇರಲಾರದು ಎಂದು ನೆಮ್ಮದಿಪಟ್ಟರು.

ಕೋಮುವಾದಿ ಪಕ್ಷದ ವಿರುದ್ಧ ಜನ ಜಾಗೃತಿ ಬಸವರಾಜು ಅವರಿಗೂ ಅಪ್ಯಾಯವಾದ ವಿಷಯ. ಹೆಚ್ಚು ಓಡಾಡಲು ಸಾಧ್ಯವಾಗದಿದ್ದರೂ ಆ ವಿಷ ಹರಡುವ ಬಗ್ಗೆ ಕನಲಿ ಮಾತಾಡುತ್ತಿದ್ದರು. ಒಂದೆರಡು ಪ್ರತಿಭಟನಾ ಸಭೆಗಳಿಗೆ ಅವರ ಮಗನೇ ಅವರನ್ನು ಕರೆದೊಯ್ದಿದ್ದ. ಸಂಘಟಕರು, ‘ಹಿರಿಯರಾದ ಬಸವರಾಜು ಸರ್ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ನಮಗೆ ಆನೆ ಬಲ ತಂದಿದೆ’ ಅಂತ ಮುನ್ನುಡಿ ಮಾತನಾಡಿದ ಮೇಲೆ ಬಸವರಾಜು ಅವರು ಭಾಷಣ ಮಾಡಿದ್ದಿದೆ.

ಆದರೆ ತಾವು ಸಭೆ ಸಂಘಟಿಸುತ್ತಿದ್ದಾಗ ಇದ್ದ ಸಂಖ್ಯೆಯ ಕಾಲು ಭಾಗವೂ ಇಲ್ಲದಿರುವುದು ನೋಡಿ ಕಸಿವಿಸಿಯಾಗಿದ್ದೂ ಇದೆ. ಮಗನಲ್ಲಿ ಒಮ್ಮೆ ಹೇಳಿದಾಗ,

‘‘ನಮ್ಮೋರೇ ತುಂಬಾ ಮಂದಿ ಬಿಜಿ ಇರ್ತಾರೆ. ಈಗ ಫೇಸ್ ಬುಕ್ ಲೈವ್ ಮಾಡ್ತಿದೀವಿ ಅಪ್ಪಾ, ರೆಸ್ಪಾನ್ಸ್ ಇರುತ್ತೆ. ನಿಮ್ಮ ಕಾಲದ ತರ ಅಲ್ಲ’’ ಎಂದು ಹೇಳಿದ್ದ. ಆ ವಿಧಾನದ ಬಗ್ಗೆ ಮತ್ತೆ ಬಸವರಾಜು ಬೆಕ್ಕಸ ಬೆರಗಾಗಿದ್ದರು.

ಬೆಳಗ್ಗೆ ಸೊಸೆ ಅತ್ತ ಹೋದ ಬಳಿಕ ಬಸವರಾಜು ಅವರು ಸ್ನಾನ ಮುಗಿಸಿ ಚಪಾತಿ ಪಲ್ಯ ತಟ್ಟೆಗೆ ಹಾಕಿಕೊಂಡು ಕಾಫಿ ಮಾಡಿಕೊಂಡು ತಿಂಡಿ ತಿನ್ನುತ್ತಿರುವಾಗ, ಮಗ ಗೇಟಿನ ಬಳಿ ಹೋಗಿ, ‘‘ಬನ್ನಿ ಬನ್ನಿ ಇದೇ ಮನೆ..’’ ಎಂದಿದ್ದು ಕೇಳಿ ಗಬಕ್ಕನೆ ತಿಂಡಿ ತಟ್ಟೆ ಅಡುಗೆಮನೆಯಲ್ಲಿಟ್ಟು ಬಾಯಿ ಒರೆಸಿ ಕೂತರು. ತಮ್ಮ ಕೋಣೆಯಲ್ಲಿ ಕದ್ದುಮುಚ್ಚಿ ತಿನ್ನಲು ಅವರಿಗೆ ಮುಜುಗರ.

ಡ್ರಾಯಿಂಗ್ ರೂಮಲ್ಲಿ ಪೇಪರು ಓದುವ ತರ ನಟಿಸುತ್ತಾ ಬಸವರಾಜು ಕೂತಿದ್ದರೆ ಮಗ ಯಾರೊಂದಿಗೋ ಒಳಗೆ ಬಂದ.

‘‘ನಮ್ಮ ತಂದೆ..’’ ಎಂದು ಮಗ ಪರಿಚಯಿಸಿದ.

‘‘ನಮಸ್ಕಾರ ಸಾರ್.. ನಿಮ್ಮ ಪರಿಚಯ ಇಲ್ಲದೇ ಇರುತ್ಯೇ? ಲೆಜೆಂಡ್ ಸಾರ್ ನೀವು ನಮ್ಮ ಡಿಸ್ಟ್ರಿಕ್ಟಿಗೆ’’ ಎಂದು ಆತ ದೇಶಾವರಿ ನಗೆಯಲ್ಲಿ ಹೇಳಿದ. ಅವನಿಗೆ ನಮಸ್ಕಾರ ಹೇಳಿ ಅವನ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಬಸವರಾಜು ನೆನಪು ಕೆದಕಿದರು.

‘‘ಕಾಫಿ ಕುಡಿತೀರಾ?’’ ಎಂದು ಮಗ ಕೇಳಿದಾಗ ಸುತಾರಾಂ ಬೇಡ ಎಂದ ಅವನು ಮಗನ ಆಫೀಸ್ ರೂಮಲ್ಲಿ ಕೂತು ಪೇಪರ್ ವೈಟ್ ತಿರುಗಿಸುತ್ತಾ ಮಗನಿಗಾಗಿ ಕಾದ.

ಬಸವರಾಜು ಮಗನಲ್ಲಿ ಪಿಸು ಮಾತೆಂಬಂತೆ, ‘‘ಇವನು ಮಂಜೇಗೌಡ ಅಲ್ಲವಾ?’’ ಎಂದು ಕೇಳಿದರು.

‘‘ಹ್ಞೂಂ’’ ಎಂದು ಮಗ ಕೊಂಚ ಮುಜುಗರದಲ್ಲಿ ತಲೆಯಾಡಿಸಿದ.

ಎಷ್ಟೋ ವರ್ಷ ಹಿಂದಿನ ಕೇಸು ಅದು,. ಒಬಿಸಿ ಮೂರು ಕುಟುಂಬಗಳ ಐದೆಕರೆ ಜಮೀನು ಹೈವೇ ಪಕ್ಕ ಇದ್ದದ್ದನ್ನು ಈ ಮಂಜೇ ಗೌಡ ಧಮಕಿ, ಆಮಿಶ ತೋರಿಸಿ ಬರೆಸಿಕೊಂಡಿದ್ದಾನೆ ಎಂದು ಆ ಕುಟುಂಬದವರು ಯಾರೋ ಆಫೀಸಿಗೆ ಬಂದು ಬಸವರಾಜು ಅವರಲ್ಲಿ ಗೋಳೋ ಅಂದಿದ್ದಕ್ಕೆ ಬಸವರಾಜು ದೊಡ್ಡ ಮಟ್ಟದ ಹೋರಾಟವನ್ನೇ ಹಮ್ಮಿಕೊಂಡಿದ್ದರು. ಅದರ ಬಗ್ಗೆ ರೆವಿನ್ಯೂ, ಪೊಲೀಸು ತನಿಖೆಯಾಗಿ .. ವರ್ಷಾನುಗಟ್ಟಲೆ ಎಳೆದು ಮತ್ತೇನಾಯಿತು ಎಂಬುದು ಬಸವರಾಜು ಅವರಿಗೇ ಮರೆತು ಹೋಗಿತ್ತು.

ಮಂಜೇಗೌಡ ಏನಕ್ಕೋ ಹೊರಗೆ ಹೋಗಿ ಡ್ರೈವರ್‌ನನ್ನು ಕರೆದ. ಅವನು ಅದೇನೋ ಫೈಲ್ ತಂದು ಕೊಟ್ಟ. ಮಂಜೇ ಗೌಡ ಬಸವರಾಜು ಅವರಲ್ಲಿ,

‘‘ಸಾರ್ ಅವತ್ತು ನೀವು ಭಾಷಣ ಮಾಡಿದ್ರಲ್ಲಾ ಸಾರ್, ಅದು ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದು ಸಾರ್, ಆಸೆಗೊಂದು ಮಿತಿ ಇರಬೇಕು, ಬಡಬಗ್ಗರ ಆಸ್ತಿ ಹೊಡ್ಕೊಬಾರ್ದು.. ಅಂತ ಹೇಳಿದ್ರಿ., ಈಗ ನೋಡಿ ಸಾರ್ ಆ ರೋಡ್ ಫೇಸಿಂಗ್ ಜಾಗದಲ್ಲಿ ಎದುರು ಶಾಪ್ ಹಿಂದೆ ಮನೆ ಕಟ್ಸಿ ಅವ್ರಿಗೇ ಒಂದೊಂದು ಕೊಟ್ಟಿದೀನಿ. ಮನೆ ಹಿಂದೆ ಹತ್ತಡಿ ಜಾಗನೂ ಇದೆ. ಈಗ ಬಂದ್ನಲ್ಲಾ ಅವನು ಅದೇ ಫ್ಯಾಮಿಲಿ ಹುಡುಗ, ಡ್ರೈವರಾಗಿದ್ದಾನೆ ನನ್ನ ಹತ್ರ. ಆ ಜಮೀನಲ್ಲಿ ಅವರೇನು ಮಾಡೋಕಾಗ್ತಿತ್ತು ಸಾರ್.. ರಾಗಿ ಬೆಳೆಯೋದು, ಕುರಿ ಮೇಯ್ಸೋದು , ಜೋಪಡಿಲಿ ಬದುಕೋದು.. ಅಷ್ಟೇ. ಈಗ ನೋಡಿ ನಾನು ಡೆವಲಪ್ ಮಾಡಿ ಅವರೂ ಚೆನ್ನಾಗಿದ್ದಾರೆ’’ ಅಂದ.

ಆಮೇಲೆ ಮಗನ ಜೊತೆ ಅದೇನೋ ಮಾತಾಡಲು ಮತ್ತೆ ಆಫೀಸು ಕೋಣೆಯೊಳಗೆ ಹೋದ.

ಗಂಟೆ ಕಳೆದ ಮೇಲೆ ಮಂಜೇ ಗೌಡ ಮಗನ ಕೈಕುಲುಕಿ ಹೊರಟು ಹೋದ.

ಏನು ವ್ಯವಹಾರ ಇವನ ಜೊತೆ ಎಂಬಂತೆ ಬಸವರಾಜು ಸನ್ನೆಯಲ್ಲಿ ಕೇಳಿದರು.

ಮಗ, ‘‘ಏನಿಲ್ಲಪ್ಪಾ ಅವರು ಇನ್ನೆರಡು ಎಕರೆ ಡೆವಲಪ್ ಮಾಡಬೇಕು ಅಂತಿದಾರೆ, ನಾನೂ ಪಾರ್ಟ್ನರ್.. ಆದಾಯಕ್ಕೇನಾದರೂ ಹೊಸ ಸಾಹಸ ಮಾಡಬೇಕಲ್ಲಾ..’’ ಎಂದ.

‘‘ಎಷ್ಟು ಹೂಡಿಕೆ?’’ ಎಂಬಂತೆ ಬಸವರಾಜು ಮತ್ತೆ ಕೇಳಿದರು.

‘‘ಆಗುತ್ತೆ, ಒಂದೂವರೆ..ಈ ಮನೆ, ಸೈಟು ಅಡವಿಟ್ಟು ಇನ್ವೆಸ್ಟ್ ಮಾಡೋದು.. ಒಂದೇ ವರ್ಷದಲ್ಲಿ ಬರುತ್ತೆ’’ ಎಂದ. ಮತ್ತೆ ಬಸವರಾಜು ಅವರ ಮುಖದಲ್ಲಿ ಪ್ರಶ್ನೆ ಕುಣಿಯುವುದು ಕಂಡು,

‘‘ಏನಿಲ್ಲಪ್ಪಾ, ನನಗೆ ಸಂಬಂಧ ಪಟ್ಟೋರ ಪರಿಚಯ ಇದ್ಯಲ್ಲಾ, ಸರಕಾರದಲ್ಲಿ.. ಈಸಿ ಆಗುತ್ತೆ ಅಂತ ಅವನ ಲೆಕ್ಕಾಚಾರ, ಇಲ್ಲದಿದ್ರೆ ನಮಗೆಲ್ಲಾ ಇವರ ಪರಿಚಯ ಎಲ್ಲಿರುತ್ತೆ?’’ ಅಂದ.

ಬಸವರಾಜು ಏನೂ ಮಾತಾಡಲಿಲ್ಲ.

ಮಾರನೇ ದಿನ, ಮಗ, ಅದೇನೋ ಮೆರವಣಿಗೆ ಸಂಜೆಗಿದೆ, ಬರೋಕಾಗುತ್ತಾ ಅಪ್ಪಾ, ಯಥಾಪ್ರಕಾರ ಉದ್ಘಾಟನೆ ಮಾಡಿ ಮಾತಾಡಿ ಎಂದ. ಮತ್ತೆ , ‘‘ಮಗ ಸ್ಕೂಲ್ ಬಿಟ್ಟು ಬಂದಿದ್ದೇ ಇಬ್ರನ್ನೂ ಕರ್ಕೊಂಬರ್ತೀನಿ’’ ಎಂದ. ಸಂಜೆ ಮೊಮ್ಮಗ ಸ್ಕೂಲಿಂದ ಬಂದಾಗ ಯುನಿಫಾರ್ಮ್ ತೆಗೆಸಿ ಒಳ್ಳೆ ಅಂಗಿ ಚೆಡ್ಡಿ ಹಾಕಿಸಿ ಅವನ ಕೈಗೊಂದು ಕೆಂಪು ಬಾವುಟ ಕೊಟ್ಟು ‘‘ಬರ್ತೀಯೇನೋ ತಾತನ ಜೊತೆ?’’ ಎಂದು ಕೇಳಿದ. ಅವನು ಉತ್ಸಾಹ ತೋರಿಸಲಿಲ್ಲ.

‘‘ಐಸ್ ಕ್ರೀಮ್ ಕೊಡಿಸ್ತೀಯಾ ತಾತಾ ?’’ ಎಂದು ಬಸವರಾಜು ಅವರಲ್ಲಿ ಮೊಮ್ಮಗ ಕೇಳಿದ.

ಮಗ ಇನ್ನೂ ಸಡಗರದಲ್ಲೇ ಇದ್ದು ಅವನನ್ನು ಹೆಗಲಿಗೇರಿಸಿ, ‘‘ಫ್ಲಾಗ್ ಹಂಗೇ ಹಿಡ್ಕೋ ಎನ್ನುತ್ತಾ ಮೊಬೈಲಲ್ಲಿ ಒಂದು ಸೆಲ್ಫಿತೆಗೆದು, ‘‘ವಿಕ್ಟರಿ ಸಿಂಬಲ್ ತೋರ್ಸೋ..!!’’ ಎಂದು ಹೇಳಿದ. ಮೊಮ್ಮಗ ಒಂದು ಕೈಯಲ್ಲಿ ಫ್ಲಾಗ್ ಇನ್ನೊಂದು ಕೈಯಲ್ಲಿ ವಿಕ್ಟರಿ ಸಿಂಬಲ್ ತೋರಿ ಬೀಗಿದ ಸೆಲ್ಫಿಯೂ ತೆಗೆದಾಯಿತು.

ಬಸವರಾಜು ಅವರು, ‘‘ಬೇಡ ಕಣಪ್ಪಾ, ಇವನ್ಯಾಕೆ ಅಲ್ಲಿಗೆ, ಧೂಳು ಬೇರೆ, ಇಲ್ಲೇ ಏನಾದರೂ ಟೈಮ್ ಪಾಸ್ ಮಾಡಿ ಏನಾದರೂ ಕೊಡಿಸ್ತೀನಿ’’ ಅಂದರು. ಮಗ ಕೊಂಚ ಯೋಚಿಸಿ ಸರಿ ಅಂದು ಹೊರಟ.

ಬಸವರಾಜು ಅವರು ಮೊಮ್ಮಗನ ಕೈಲಿದ್ದ ಫ್ಲಾಗ್ ತಮ್ಮ ಎದೆ ಜೋಬಲ್ಲಿಟ್ಟು ತಮ್ಮ ಕೋಣೆಗೆ ಹೋಗಿ ಅದೇನೋ ಹಿಡಿದುಕೊಂಡು ಅವನನ್ನು ನಿಧಾನ ಕೈ ಹಿಡಿದು ಟೆರೇಸಿಗೆ ಒಯ್ದರು..

ಮೊಮ್ಮಗ ಅವರೆಡೆ ನೋಡುತ್ತಿದ್ದಂತೆ ಬಸವರಾಜು ಗಾಳಿಪಟ ತೆಗೆದು ಮೊಮ್ಮಗನ ಕೈಗೆ ಕೊಟ್ಟರು . ಅವನ ಮುಖ ಅರಳಿತು. ನಿಧಾನಕ್ಕೆ ಆ ದಾರವನ್ನು ತಾತ ಮೊಮ್ಮಗ ಹಿಡಿದು ಇಷ್ಟಿಷ್ಟೇ ಬಿಡುತ್ತಿದ್ದಂತೆ ಗಾಳಿಪಟ ವಾಲಾಡುತ್ತಾ ಏರುತ್ತಾ ಹೋಯಿತು.

Writer - ವಾರ್ತಾಭಾರತಿ

contributor

Editor - Musaveer

contributor

Byline - ಕೆ.ಪಿ ಸುರೇಶ್ ಕಂಜರ್ಪಣೆ

contributor

Similar News

ಒಳಗಣ್ಣು