ಜನರ ಹಣದಿಂದ ಬದುಕುವ ನಾವು ದಮನಿತರ ಪರ ಮಾತನಾಡಲೇಬೇಕು - ಕಿಶೋರ್

ಕಿಶೋರ್ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಉತ್ತಮ ಚಿಂತಕರಾಗಿ ಕಾಲವಾದ ಮಾವ ಡಿಆರ್ ನಾಗರಾಜ್ ಅವರನ್ನು ನೆನಪಿಸುತ್ತಾರೆ. ಕಮರ್ಷಿಯಲ್ ಚಿತ್ರಗಳ ಸ್ಟಾರ್ ಹೀರೋವಾಗಬಲ್ಲ ಲಕ್ಷಣಗಳಿದ್ದರೂ ಪಾತ್ರ, ಕತೆ, ಪ್ರಯೋಗ ಶೀಲತೆ ಮುಂತಾದವುಗಳಲ್ಲಿಯೇ ಮುಳುಗಿದ್ದಾರೆ. ತಾನು ನಟಿಸುವ ಚಿತ್ರಗಳು ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕು ಎನ್ನುವ ತುಡಿತವಿರುವ ಮತ್ತು ಆ ಪ್ರಯತ್ನದಲ್ಲಿ ತೊಡಗಿರುವ ಕಿಶೋರ್ ಅವರದ್ದು ಅನುಕರಣೀಯ ವ್ಯಕ್ತಿತ್ವ. ಪಂಚಭಾಷಾ ತಾರೆಯಾಗಿದ್ದರೂ ಯಾವ ಹಮ್ಮುಬಿಮ್ಮುಗಳಿಲ್ಲದ ಈ ನಟ, ಉತ್ತಮ ಕೃಷಿಕನೂ ಹೌದು. ಕಿಶೋರ್ ತಮ್ಮ ಸಿನೆಮಾ ಪಯಣದ ಜೊತೆಯಲ್ಲೇ ಇಂದಿನ ಭಾರತೀಯ ಚಿತ್ರರಂಗ ಸಾಗುತ್ತಿರುವ ರೀತಿಯ ಬಗ್ಗೆ ‘ವಾರ್ತಾಭಾರತಿ’ ಜೊತೆಗೆ ಮಾತನಾಡಿದ್ದಾರೆ.

Update: 2025-01-08 10:39 GMT
Editor : Musaveer | Byline : ಕಿಶೋರ್

ಸಂದರ್ಶನ : ಶಶಿಕರ ಪಾತೂರು

► ನಿಮ್ಮ ಸಿನೆಮಾ ಪ್ರವೇಶ ಆಗಿದ್ದು ಹೇಗೆ?

ಕಾಲೇಜು ನಾಟಕಗಳಲ್ಲಿ ಪಾತ್ರ ಮಾಡ್ತಾ ಇದ್ದೆ. ಥಿಯೇಟರ್ಗೂ ಬಂದಿರಲಿಲ್ಲ. ಬಾಬು ಅಂತ ಕಂಠಿ ಚಿತ್ರಕ್ಕೆ ಅಸೋಸಿಯೆಟ್ ಆಗಿದ್ರು. ಕರೆಕ್ಟ್ ಟೈಮಿಗೆ ಫ್ಯಾಷನಿಂಗ್ ಡಿಸೈನಿಂಗ್ ಎಲ್ಲಾ ಮಾಡ್ತಾ ಇದ್ದೆ. ಚಿನ್ಮಯ್ ಎನ್ನುವ ಮೈಸೂರಿನ ಸ್ನೇಹಿತ, ನನಗೆ ಕಂಠಿ ಚಿತ್ರದಲ್ಲಿ ಪಾತ್ರ ಕ್ಕೆ ಅವಕಾಶ ಇದೆ ಎಂದಿದ್ದರು. ಆಗಷ್ಟೇ ವಿವಾಹಿತನಾಗಿದ್ದೆ. ದುಡ್ಡು ಸಿಗಬಹುದು ಎನ್ನುವ ಗ್ಯಾರಂಟಿ ಸಿಕ್ಕ ಕಾರಣ ಅವಕಾಶ ಕೇಳಲು ಮುಂದಾದೆ. ಅಂದು ಸರಿಯಾಗಿ ಫೋಟೊ ತೆಗೆಯೋಕೂ ಬಾರದಿದ್ದ ಸ್ನೇಹಿತ ಹರೀಶ ನನಗೆ ಅವನದೇ ಬಟ್ಟೆ, ಕನ್ನಡಕ ಹಾಕಿಸಿ ಫೋಟೊಸ್ ತೆಗೆಸಿದ್ದ. ಫೋಟೊಗಳು ಚೆನ್ನಾಗಿ ಬಂದಿದ್ದವು. ಇದೇ ಫೋಟೊಸ್ ಜೊತೆಗೆ ಹೋಗಿ ಪರಿಚಯದವರ ಮೂಲಕ ಶಿಫಾರಸು ಮಾಡಿದಾಗ ಮೂವತ್ತು ವರ್ಷದ ನನಗೆ ನಲವತ್ತು ವರ್ಷ ವಯಸ್ಸಿನ ಬೀರನ ಪಾತ್ರ ಕೊಟ್ಟರು.

► ನಿಮಗೆ ಪರಭಾಷಾ ಸಿನೆಮಾಗಳಲ್ಲಿ ಅವಕಾಶ ಸಿಗಲು ಶುರುವಾಗಿದ್ದು ಹೇಗೆ?

ಅದು ಬೈ ಚಾನ್ಸ್ ಸಿಕ್ಕಿರೋದು. ಡಾ.ರಾಜ್ ಕುಮಾರ್ ಅವರ ವಜ್ರೇಶ್ವರಿ ಸಿನೆಮಾ ಬ್ಯಾನರ್‌ನಲ್ಲಿ ‘ಆಕಾಶ್’ ಸಿನೆಮಾ ಮಾಡಿದ ಬಳಿಕ ಬಂದಂಥ ಅವಕಾಶ ಅದು. ವಜ್ರೇಶ್ವರಿ ಸಿನೆಮಾ ಅಂದರೆ ದೇಶದ ಎಲ್ಲಾ ಭಾಷೆಯ ಚಿತ್ರರಂಗದವರು ಕಾದು ನೋಡುತ್ತಿದ್ದಂಥ ಕಾಲ. ತುಂಬಾ ದೊಡ್ಡ ಆಡಿಯನ್ಸ್, ಫ್ಯಾಮಿಲಿ ಆಡಿಯನ್ಸ್ ಗೆ ಅವರು ಮಾಡ್ತಾ ಇದ್ದಂತಹ ಸಿನೆಮಾಗಳು. ಇಂಥ ಸಿನೆಮಾದಲ್ಲಿ ನನ್ನ ಪಾತ್ರ ನೋಡಿ, ಮೊದಲ ಬಾರಿಗೆ ಹ್ಯಾಪಿ ಚಿತ್ರದಲ್ಲಿ ನನಗೊಂದು ಅವಕಾಶ ಸಿಕ್ಕಿತು. ಹ್ಯಾಪಿಯಲ್ಲಿನ ನಟನೆ ನೋಡಿ ಪೊಲ್ಲಾದವನ್ ನಲ್ಲಿ ಪಾತ್ರ ಕೊಟ್ಟರು. ಹೀಗೆ ವಜ್ರೇಶ್ವರಿ ಕಂಪೆನಿಯಲ್ಲಿ ಮಾಡಿದ ಸಿನೆಮಾದ ಮೂಲಕ ನನಗೆ ಅವಕಾಶ ದೊರಕಿತು.

►ಕನ್ನಡ ಚಿತ್ರಗಳಿಗಿಂತ ತಮಿಳು ಸಿನೆಮಾಗಳು ಮಾರುಕಟ್ಟೆಯಲ್ಲಿ ಚೆನ್ನಾಗಿ ಹೋಗುತ್ತಿರುವುದಕ್ಕೆ ಕಾರಣ ಏನಿರಬಹುದು?

ತಮಿಳು ಸಿನೆಮಾಗಳು ಚೆನ್ನಾಗಿ ಹೋಗ್ತಾ ಇದೆ ಅಂತ ಅರ್ಥ ಅಷ್ಟೇ. ಇದಕ್ಕೆ ಸಾಕಷ್ಟು ಕಾರಣಗಳು ಇರಬಹುದು. ಕನ್ನಡದವರು ಅಷ್ಟು ಚಿತ್ರಗಳನ್ನು ಮಾಡುತ್ತಿಲ್ಲ. ಸಿನೆಮಾಗಳ ಸಂಖ್ಯೆ, ಸಿನೆಮಾಗಳ ವಸ್ತು ಗಳಿಂದ ನಾವು ಹಿಂದೆ ಬೀಳ್ತಾ ಇದ್ದೀವಿ. ಅಥವಾ ವ್ಯಾಪಾರ ಆಗುತ್ತಿಲ್ಲ, ನಿರ್ಮಾಪಕರು ಇಲ್ಲ. ಇದು ಗ್ರೂಪ್ ಆಕ್ಟಿವಿಟಿ ಅಲ್ವಾ? ಕಥೆ ಮಾಡದೇ ಇರಬಹುದು, ಅಥವಾ ಕಥೆ ಬರೆಯುವ ಎಬಿಲಿಟಿ ಇರುವ ರೈಟರ್ ಗಳು ಇರಬಹುದು, ಅದನ್ನು ಸಿನೆಮಾ ಆಗಿ ಮಾಡೋಕೆ, ಬಂಡವಾಳ ಹಾಕೋಕೆ ಅಂತ ಇರುವ ಪ್ರೊಡ್ಯೂಸರ್ಸ್ ಇಲ್ಲದಿರಬಹುದು ಅಥವಾ ಅದನ್ನು ಒಪ್ಪಿಕೊಳ್ಳುವಂಥ ಹೀರೋ ಸಿಗದೇ ಇರಬಹುದು. ಅಂಥದೊಂದು ಪ್ರಯತ್ನ ನಡೆದರೂ ಪ್ರೇಕ್ಷಕರು ಕೈ ಹಿಡಿಯದೇ ಇರಬಹುದು.

► ಉತ್ತಮ ಚಿತ್ರಗಳು ಬಂದರೂ ಪ್ರೇಕ್ಷಕರು ನೋಡದಿರುತ್ತಾರೆ ಅಂತೀರಾ?

ಖಂಡಿತವಾಗಿ. ಕಾಂತಾರದಂಥ ಸಿನೆಮಾಗೆ ಹೊಂಬಾಳೆ ಪ್ರೊಡಕ್ಷನ್ಸ್ ಇಲ್ಲದೇ ಇರುತ್ತಿದ್ದರೆ, ಈಗಿನಷ್ಟು ದೊಡ್ಡ ಮಟ್ಟದಲ್ಲಿ ರೀಚ್ ಆಗ್ತಿತ್ತೋ ಗೊತ್ತಿಲ್ಲ. ಅದಕ್ಕಿಂತ ಮೊದಲು ಹಲವು ಸಿನೆಮಾ ಮಾಡಿದ್ದೀವಿ. ಆದರೆ ಅವೆಲ್ಲ ಆ ಮಟ್ಟಕ್ಕೆ ರೀಚ್ ಆಗಿಲ್ಲ ಅಲ್ವಾ? ಕಾಂತಾರ ಸಿನೆಮಾದಲ್ಲಿ ಏನಿತ್ತು ಅದು ಜನರನ್ನು ತಲುಪಿತು. ಹಾಗೆ ವೇಗವಾಗಿ ತಲುಪೋಕೆ ಏನು ಸಾಧ್ಯವಿತ್ತೋ ಅದನ್ನು ಮಾಡಲು ಪ್ರೊಡಕ್ಷನ್ ಹೌಸ್ ಕೂಡಾ ಜೊತೆಗಿತ್ತು. ಕೆಜಿಎಫ್‌ನಲ್ಲಿ ಕೂಡಾ ಇದೇ ತರಹ ಫಾರ್ಮುಲ ಅನುಸರಿಸಲಾಗಿತ್ತು. ಪಬ್ಲಿಸಿಟಿ. ಮಾರ್ಕೆಟಿಂಗ್, ಸೇಲಿಂಗ್ ಬೇಕು. ಇಲ್ಲಿ ನನಗನಿಸೋದು, ಉತ್ತಮ ಸಿನೆಮಾಗಳ ಬಗ್ಗೆ ತಾವಾಗಿಯೇ ಜಾಗೃತಗೊಂಡಿರುವ ಒಂದು ಪ್ರೇಕ್ಷಕ ವರ್ಗವನ್ನು ಕಟ್ಟುವುದರಲ್ಲಿ ಎಲ್ಲೋ ಹಂತ ಹಂತವಾಗಿ ವಿಫಲರಾಗಿದ್ದೀವಿ ಅಂತ.

► ಚೆನ್ನಾಗಿ ಪ್ರಚಾರ ಕೊಟ್ಟರೂ ಚಿತ್ರಗಳು ಸೋತ ಉದಾಹರಣೆಗಳಿವೆಯಲ್ಲ?

ಹೌದು. ಮೊದಲನೆಯದಾಗಿ ಎಂಥ ಚಿತ್ರಗಳಿಗೆ ಪ್ರಚಾರ ನೀಡಲಾಗ್ತಿದೆ ಎನ್ನುವುದು ಮುಖ್ಯ. ನಿರ್ದೇಶಕ ಯಾವುದನ್ನೇ ಮಾಡಿದ್ರು ಚಿತ್ರಕ್ಕಾಗಿ ಮಾಡಬೇಕು. ಆದರೆ ನಾವು ಪ್ರೇಕ್ಷಕರಿಗೆ ಏನು ಬೇಕು ಅಂತ ಯೋಚನೆ ಮಾಡ್ತಾ ಬಂದಿದ್ದೀವಿ ಅನ್ಸುತ್ತೆ. ಪ್ರೇಕ್ಷಕರಿಗೆ ಕನ್ನಡ ಹಾಡು ಇಷ್ಟ ಆಗುತ್ತೆ, ಲವ್ ಸ್ಟೋರಿ ಇಷ್ಟಾಗುತ್ತೆ, ಮಾಸ್ ಇಷ್ಟಾಗುತ್ತೆ, ಡಬಲ್ ಮೀನಿಂಗ್ ಇಷ್ಟಾಗುತ್ತೆ ಎಂದು ನಾವೇ ನಿರ್ಧರಿಸಬಾರದು. ನಮ್ಮ ಕತೆಯಲ್ಲಿ ಏನಿರಬೇಕು ಎನ್ನುವುದು ನಮಗೆ ಗೊತ್ತಿರಬೇಕು. ನಿಜವಾದ ಕನ್ನಡ ಪ್ರೇಮ ಇದ್ದಲ್ಲಿ ಚಿತ್ರದಲ್ಲಿ ಅದಕ್ಕೆ ತಕ್ಕಂಥ ಸನ್ನಿವೇಶ ಕೂಡಿ ಬಂದಿರುತ್ತದೆ. ಉದಾಹರಣೆಗೆ ಅಣ್ಣಾವ್ರ ಕನ್ನಡ ಹಾಡುಗಳಲ್ಲಿ ಪ್ರಾಮಾಣಿಕತೆ ಇತ್ತು. ಈಗ ಆ ಪ್ರಾಮಾಣಿಕತೆ ಕಾಣ್ಸಲ್ಲ. ಭಾಷೆಯನ್ನು ಮಾರಾಟದ ವಸ್ತುವಾಗಿ ಬಳಸಲಾಗುತ್ತಿದೆ. ನಾವು ಪ್ರಾಮಾಣಿಕವಾಗಿ ಚಿತ್ರ ಮಾಡುತ್ತಾ ಹೋದಂತೆ ನಮ್ಮಲ್ಲೂ ಆರೋಗ್ಯವಂತ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಾ ಹೋಗಬಹುದು.

► ಉತ್ತಮ ಚಿತ್ರಗಳಿಗೆ ಉತ್ತಮ ಪ್ರಚಾರ ಸಿಕ್ಕಿಯೂ ಸೋತರೆ ಪ್ರೇಕ್ಷಕರೇ ಕಾರಣ ತಾನೇ?

ಅಪರೂಪದಲ್ಲಿ ಇಂಥ ಘಟನೆಗಳು ಕೂಡ ನಡೆಯುತ್ತವೆ. ಇಲ್ಲಿ ನಾವು ಉತ್ತಮ ಪ್ರೇಕ್ಷಕರನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದೇವೆ ಎನ್ನುವುದು ನಿಜ. ಹೀಗಾಗಿಯೇ ಒಂದಷ್ಟು ಒಳ್ಳೆಯ ಸಿನೆಮಾಗಳನ್ನು ಪ್ರೇಕ್ಷಕರು ಕೈ ಬಿಟ್ಟಿದ್ದಾರೆ. ‘ಫೊಟೋ’ ಸಿನೆಮಾದ ಟ್ರೇಲರ್ ನೋಡಿಯೇ ನನಗೆ ತುಂಬಾ ಇಷ್ಟ ಆಗಿತ್ತು. ಆದರೆ ಚಿತ್ರದ ಜೊತೆ ಪ್ರಕಾಶ್ ರಾಜ್ ನಿಂತರೂ, ಬಹಳಷ್ಟು ಮಂದಿಗೆ ತಲುಪಿಸೋಕೆ ನಮ್ಮಿಂದ ಸಾಧ್ಯವಾಗಿಲ್ಲ. ಒಂದೇ ಮಾದರಿಯ ಚಿತ್ರಗಳನ್ನೇ ಹೆಚ್ಚು ಕೊಟ್ಟು ನಾವು ಬಹುಸಂಖ್ಯಾತ ಪ್ರೇಕ್ಷಕರಿಗೆ ಸಿನೆಮಾ ಅಂದರೇನೇ ಇಷ್ಟೇ ಎನ್ನುವಂಥ ಮನಸ್ಥಿತಿ ಸೃಷ್ಟಿಸಿದ್ದೇವೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪ್ರಯತ್ನ ಮಾಡುತ್ತಾ ಬಂದಿದ್ದರೆ ಈ ನಿರ್ದೇಶಕ ಬೇರೇನೋ ಹೇಳುತ್ತಾನೆ, ಅದನ್ನು ನೋಡೋಣ ಎನ್ನುವ ತಾಳ್ಮೆ, ಕಾತರ ಪ್ರೇಕ್ಷಕರಲ್ಲೂ ಸೃಷ್ಟಿಯಾಗುತ್ತಿತ್ತು. ಉತ್ತಮ ಪ್ರೇಕ್ಷಕರನ್ನು ಸೃಷ್ಟಿಸುವುದು, ಉತ್ತಮವಾಗಿ ಬದಲಾಯಿಸುವುದು ಕೂಡ ನಮ್ಮ ಜವಾಬ್ದಾರಿ.

 

► ಉತ್ತಮ ಸಿನೆಮಾಸಕ್ತಿಯ ಪ್ರೇಕ್ಷಕರ ಸೃಷ್ಟಿಗೆ ಯಾವ ಪ್ರಯತ್ನ ಮಾಡಬಹುದು?

ಶಾಲಾ, ಕಾಲೇಜುಗಳಲ್ಲಿ ಸಿನೆಮಾಗಳ ಬಗ್ಗೆ, ಅದರಲ್ಲೂ ಕನ್ನಡ ಸಿನೆಮಾಗಳ ಬಗ್ಗೆ ಮಾಹಿತಿ ಸಿಗುವಂತಾಗಬೇಕು. ಸಿನೆಮಾಗಳು ಸಂಸ್ಕೃತಿ, ಭಾಷೆಯ ಮುಂದುವರಿಯುವಿಕೆಗೆ ಎಷ್ಟು ಮಹತ್ವದ ಸಾಧನವಾಗಿದೆ ಎನ್ನುವುದನ್ನು ಅರ್ಥಮಾಡಿಸಬೇಕು. ನಮ್ಮತನಕ್ಕೆ, ಜನರ ಧ್ವನಿಯ ಪ್ರಕಟಣೆಗೆ ಸ್ಥಳೀಯ ಸಿನೆಮಾ, ಸ್ಥಳೀಯ ಭಾಷೆಯ ಸಿನೆಮಾ ಎಷ್ಟು ಮುಖ್ಯ ಎನ್ನುವುದನ್ನು ನಾವು ಕಲಿಸುತ್ತಾ ಹೋಗಬೇಕು.

► ಚಿತ್ರಮಂದಿರಗಳೇ ಮುಚ್ಚಿ ಹೋಗುತ್ತಿರುವ ಸಂದರ್ಭದಲ್ಲಿ ಸಿನೆಮಾ ಸಂಸ್ಕೃತಿ ಬೆಳೆಸಲು ಸಾಧ್ಯವೇ?

ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಸಂಪೂರ್ಣವಾಗಿ ಅಳಿಯದು. ಮೊದಲು ಒಟಿಟಿಯಲ್ಲಿ ಚಿಕ್ಕ ಚಿಕ್ಕ ಸಿನೆಮಾಗಳಿಗೆ ಜಾಗ ಇತ್ತು. ಈಗ ಅಲ್ಲೂ ಜಾಗವಿಲ್ಲ. ಕೊರೋನ ನಂತರ ದೊಡ್ಡ ಸಿನೆಮಾಗಳಿಗೆ ಥಿಯೇಟರ್ ಇಲ್ಲದೆ ಅವರು ಒಟಿಟಿಗೆ ಬಂದ್ರು. ಒಟಿಟಿ ಕೂಡಾ ಈಗ ದೊಡ್ಡ ದೊಡ್ಡ ಸಿನೆಮಾಗಳ ಅಥವಾ ಉಳ್ಳವರ ಸೊತ್ತಾಗಿ ಬಿಟ್ಟಿದೆ. ಈಗ ಚಿಕ್ಕ ಚಿಕ್ಕ ಸಿನೆಮಾ ಮಾಡುವ ನಮಗೆಲ್ಲ ಥಿಯೇಟರ್‌ಗೆ ಬರುವ ಜನರೇ ಗತಿ. ಮಾತ್ರವಲ್ಲ, ಸಿನೆಮಾಗಳು ಒಟಿಟಿಯಲ್ಲಿ, ಟಿವಿಯಲ್ಲಿ ಸಿಗುವುದು ಬೇರೆ. ಥಿಯೇಟರ್ ಎಕ್ಸ್‌ಪೀರಿಯನ್ಸೇ ಬೇರೆ. ಎರಡು, ಮೂರು ಗಂಟೆ ಯಾವುದೇ ಡಿಸ್ಟರ್ಬೆನ್ಸ್ ಇಲ್ಲದೇ ಒಂದು ಜಗತ್ತಿನಲ್ಲಿ ಕಳೆದು ಹೋಗೋ ರೀತಿ ಅಪರೂಪದ್ದು. ಆದರೆ ಮಾಲ್‌ಗಳಲ್ಲಿ ಥಿಯೇಟರ್‌ಗೆ ಬಂದವರನ್ನು ಸುಲಿಗೆ ಮಾಡುವುದೇ ಒಂದು ವ್ಯಾಪಾರ ಆಗಿಬಿಟ್ಟಿದೆ. ಇದರ ಮಧ್ಯೆಯೂ ಇನ್ನೂ ಥಿಯೇಟರ್‌ಗೆ ಹೋಗ್ತಾ ಇದ್ದಾರೆ ಜನ.

►‘‘ಉತ್ತಮ ಸಿನೆಮಾ ಹೆಸರಲ್ಲಿ ಪ್ರಯೋಗ ಮಾಡಿ ಅದೃಷ್ಟ ಪರೀಕ್ಷೆ ಮಾಡುವುದಕ್ಕಿಂತ ಸಿದ್ಧಸೂತ್ರಗಳಲ್ಲೇ ಚಿತ್ರ ಮಾಡುವುದು ಗೆಲುವಿಗೆ ಹತ್ತಿರ’’ ಎನ್ನುವ ಚಿತ್ರತಂಡಕ್ಕೆ ಏನು ಹೇಳುತ್ತೀರಿ?

ಇಲ್ಲಿ ಯಾವುದು ಕೂಡ ಸುಲಭವಲ್ಲ. ರಿಮೇಕ್ ಮಾಡಿದರೂ, ಸಿದ್ಧಸೂತ್ರ ಅಳವಡಿಸಿದರೂ ನಿರಂತರ ಯಶಸ್ಸು ಸಿಗಬಹುದು ಎಂದು ನಿರ್ಧರಿಸುವುದು ಕಷ್ಟ. ಯಾವುದೇ ವಿಭಾಗದಲ್ಲಿ ಪರಿಶ್ರಮ ಹೆಚ್ಚು ಹಾಕಿದಷ್ಟು ನಿಧಾನಕ್ಕಾದರೂ ಗೆಲುವು ಸಿಗುತ್ತಾ ಹೋಗುವುದನ್ನು ಕಾಣಬಹುದು. ಯಶಸ್ಸಿಗಾಗಿ ಸಿನೆಮಾ ಅಲ್ಲ. ಒಳ್ಳೆಯ ಸಿನೆಮಾಕ್ಕಾಗಿ ಯಶಸ್ಸು ಎನ್ನುವುದು ಗುರಿಯಾಗಬೇಕು. ಯಾವ ಸಿನೆಮಾ ಕೂಡ ಇದೇ ತರಹ ಓಡುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಹೊಸತನವನ್ನು ಹುಡುಕುತ್ತಾ ಹೋಗಬೇಕು. ಸಿನೆಮಾ ಜನರ ಜೀವನದ ಪ್ರತಿಫಲನ ಆಗಿರಬೇಕು. ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯಬೇಕು. ಸಮಸ್ಯೆಗಳಿಗೆ ಉತ್ತರ ಹುಡುಕೋ ಪ್ರಯತ್ನ ಆಗಬೇಕು ಅಥವಾ ಅದರ ಬಗ್ಗೆ ಒಂದು ಸಂವಾದ ಆಗಬೇಕು. ಪ್ರೇಕ್ಷಕರ ಜೊತೆ ಸಂವಾದ ಕೂಡಾ ಮುಂದುವರಿಯಬೇಕು. ಒಂದು ಆರೋಗ್ಯವಾದ ಸಮಾಜದ ನಿರ್ಮಾಣಕ್ಕೆ ಅದು ಪೂರಕವಾಗಬೇಕು.

► ಕನ್ನಡದಲ್ಲಿ ನಿಮಗೆ ತುಂಬ ತೃಪ್ತಿತಂದು ಕೊಟ್ಟ ಪಾತ್ರ ಯಾವುದು?

ಸುಮಾರಿದೆ. ಒಂದು ಹೇಳಿದರೆ ಇನ್ನೊಂದಕ್ಕೆ ನಾನು ಅಪಚಾರ ಮಾಡಿದಂತೆ ಆಗುತ್ತೆ.

► ನೀವು ಪಾತ್ರಗಳನ್ನು ಒಪ್ಪಿಕೊಳ್ಳುವ ಮೊದಲು ಚಿತ್ರದ ಕತೆಯನ್ನು ಕೇಳುತ್ತೀರಂತೆ ನಿಜವೇ?

ಹೌದು. ಆದರೆ ಮೊದಲೆಲ್ಲ ನನ್ನ ಪಾತ್ರದ ಬಗ್ಗೆಯೂ ಹೇಳುತ್ತಿರಲಿಲ್ಲ. ಪಾತ್ರದ ಬಗ್ಗೆ ಕೇಳಿದೆ ಎನ್ನುವ ಕಾರಣಕ್ಕಾಗಿ ನನ್ನನ್ನು ಚಿತ್ರದಿಂದಲೇ ತೆಗೆದು ಹಾಕ್ಬಿಟ್ಟಿದ್ದರು. ಒಮ್ಮೆ ತಮಿಳಲ್ಲಿ ಮಾಡಿ ಬಂದ ಬಳಿಕ ಕತೆ ಕೇಳುವ ಅರ್ಹತೆ ದೊರಕಿತು ಅನ್ಸುತ್ತೆ. ಸುಮಾರು ಆರೇಳು ವರ್ಷಗಳಿಂದ ಕತೆ ಕೇಳಿಯೇ ನಟಿಸುತ್ತಿದ್ದೇನೆ. ನನ್ನ ಪಾತ್ರ ಎಷ್ಟು ಚೆನ್ನಾಗಿದೆ ಎನ್ನುವುದಕ್ಕಿಂತಲೂ ಎಂಥ ಚಿತ್ರದಲ್ಲಿ ನನ್ನ ಪಾತ್ರವಿದೆ ಎನ್ನುವುದೇ ನನಗೆ ಮುಖ್ಯವಾಗುತ್ತದೆ. ಕೆಟ್ಟದಲ್ಲಿ ಒಳ್ಳೆಯ ಪಾತ್ರ ಮಾಡುವುದಕ್ಕಿಂತಲೂ ಒಂದು ಒಳ್ಳೆಯ ಚಿತ್ರದಲ್ಲಿ ಸಣ್ಣ ಭಾಗವಾಗುವುದು ಮುಖ್ಯ.

► ಕಥೆ ಇಷ್ಟ ಆಗಿಲ್ಲ ಅಂದ್ರೆ ದೊಡ್ಡ ಸ್ಟಾರ್ ಸಿನೆಮಾ ಆದರೂ ಸಿನೆಮಾ ಬಿಡ್ತೀರ ನೀವು?

ಖಂಡಿತವಾಗಿಯೂ ಬಿಡ್ತೀನಿ. ಯಾಕೆಂದರೆ ಸ್ಟಾರ್ ಸಿನೆಮಾಗಳು ಕೂಡ ಸಮಾಜಕ್ಕೆ ಮುಖ್ಯ. ಸಿನೆಮಾನ ಮನರಂಜನೆಗೆಂದೇ ನೋಡುವಂಥ ಬಹುದೊಡ್ಡ ಪ್ರೇಕ್ಷಕ ವರ್ಗಕ್ಕೆ ಅವರು ಚಿತ್ರ ಮಾಡ್ತಾ ಇದ್ದಾರೆ. ಆ ತರಹದ ಪ್ರೇಕ್ಷಕ ವರ್ಗ ನಮಗೆ ಖಂಡಿತ ಬೇಕು. ಅಂಥ ಚಿತ್ರದಲ್ಲೇನಾದರೂ ನನಗೆ ಇಷ್ಟವಿರದಂಥ ಸಬ್ಜೆಕ್ಟ್ ಇದ್ದರೆ ನಿರಾಕರಿಸ್ತೇನೆ. ಆದರೆ ಅಲ್ಲಲ್ಲಿ ಕಮರ್ಷಿಯಲ್ ಸಿನೆಮಾಗಳು ಕೂಡಾ ಮೀನಿಂಗ್ ಫುಲ್ ಆಗಿ ಬರುವುದೂ ಇದೆ. ಒಂದುವೇಳೆ ನನಗೆ ಕತೆ ತೀರ ಇಷ್ಟವಾಗಿಲ್ಲ ಅಂದರೆ ಅದರಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಡ್ತೀನಿ. ಡೇಟ್ ಇಲ್ಲ ಅಂತ ಹೇಳಿ ತಪ್ಪಿಸ್ಕೊಂಡು ಬಿಡ್ತೀನಿ. ಹೀಗಾಗಿ ಚಿಕ್ಕ ಪುಟ್ಟ ಸಿನೆಮಾಗಳು ನನಗೆ ಇಷ್ಟ ಆಗುತ್ತದೆ. ಹೊಸ ಡೈರೆಕ್ಟರುಗಳು ಬಂದಾಗ. ಅವರ ಅನುಭವದ ಜೊತೆಗೆ ನಮ್ಮ ಜೀವನದ ಅನುಭವ, ಒಂದಷ್ಟು ಸಾಹಿತ್ಯದ ಅನುಭವ ಸೇರ್ಕೊಂಡು ಏನೋ ಒಂದು ಹೊಸದಾಗಿ, ಗಂಭೀರವಾದ ಸಿನೆಮಾ ಮಾಡೋಕೆ ಸಾಧ್ಯವಾಗುತ್ತೆ. ಅಂಥ ಪ್ರಯತ್ನ ಮಾಡುತ್ತಲೇ ಇರುತ್ತೇವೆ.

► ಭಾರತದ ರಾಜಕೀಯದ ಬಗ್ಗೆ ಸಿನೆಮಾರಂಗ ಹೇಗೆ ಸ್ಪಂದಿಸಬೇಕು?

ಓಪನ್ ಆಗಿರಬೇಕು ಅಷ್ಟೇ. ಎಲ್ಲವನ್ನೂ ಪ್ರಶ್ನಿಸುವಂಥ ಧೈರ್ಯ ಉಳಿಸಿಕೊಂಡಿರಬೇಕು. ಆ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರಬೇಕು. ಸ್ವಾತಂತ್ರ್ಯಕ್ಕೋಸ್ಕರ ಹೋರಾಡ್ತಾ ಇರಬೇಕು. ಜೊತೆಗೆ ಬುದ್ಧಿವಂತಿಕೆಯಿಂದ ಹೇಳುವಂಥ ಪ್ರಯತ್ನಗಳು ನಾವು ಮಾಡ್ತಾ ಇರಬೇಕು. ತೀರಾ ಮೊಂಡಾಗಿ, ಒರಟಾಗಿ ನಾನು ಹಿಂಗೇ ಹೇಳ್ತೀನಿ ಅಂತ ಹೊರಟರೆ ಸಿನೆಮಾನೇ ನಿಲ್ಲಿಸುವಂಥ ಪರಿಸ್ಥಿತಿ ಬರುತ್ತದೆ. ಪ್ರಸ್ತುತ ಪ್ರೇಕ್ಷಕನಿಗೆ ಹೇಳೋಕೆ ಹೊರಟಿದ್ದನ್ನು ಹೇಳೋಕೆ ಆಗದೇ ಇರುವ ಪರಿಸ್ಥಿತಿ ಇದೆ. ಏಕೆಂದರೆ ಸೆನ್ಸರ್ ಮಂಡಳಿ ‘ಇವರ’ ಹಿಡಿತದಲ್ಲಿದೆ. ಸ್ಟ್ರೈಟ್ ಪೊಲಿಟಿಕಲ್ ಸಿನೆಮಾ ನಿಮಗೆ ಮಾಡೋಕೆನೇ ಆಗೋದಿಲ್ಲ. ಹೀಗಾಗಿ ಬೇರೆ ಸಿನೆಮಾಗಳ ಮೂಲಕ ಅವುಗಳ ಒಳಗೆ ಸಣ್ಣ ಸಣ್ಣದಾಗಿ ನಮ್ಮ ಸಮತಾವಾದ, ಸಾಮರಸ್ಯಗಳನ್ನೆಲ್ಲ ಹರಡ್ತಾ ಹೋಗಬೇಕು.

► ಸಾಮಾನ್ಯವಾಗಿ ಕಲಾವಿದರು ರಾಜಕೀಯದಿಂದ ದೂರ ಇರ್ತಾರೆ. ಆದರೆ ನೀವು ರಾಜಕೀಯದ ಬಗ್ಗೆ ನಿಮ್ಮ ನೇರ ಅಭಿಪ್ರಾಯಗಳನ್ನು ಹೇಳುವಲ್ಲಿ ನಿಸ್ಸೀಮರು. ಇದಕ್ಕೆ ಕಾರಣವೇನು?

ನನಗೆ ಗೊತ್ತಿರುವಂತೆ ಸಾರ್ವಜನಿಕ ಮಾಧ್ಯಮದಲ್ಲಿರುವವರೆಲ್ಲರೂ ಜನಪರವಾಗಿರಬೇಕು. ಯಾಕೆಂದರೆ ಜನರ ಹಣದಿಂದ ನಾವು ಬದುಕುತ್ತಿರುವುದು. ನಮ್ಮ ಕೆಲಸ ಇರುವುದೇ ಜನರಿಗಾಗಿ, ಜನರಿಂದ. ಜನರ ಸಮಸ್ಯೆ ಅಂದಾಗ, ದಮನಿತರ ಪರ ನಾವು ಮಾತನಾಡಲೇಬೇಕಾಗುತ್ತದೆ. ಆದರೆ ಇಲ್ಲಿ ಬಹುಸಂಖ್ಯಾತರ ಪರ ಸರಕಾರ ಇರುವುದರಿಂದ ನಾವು ಬಹುಸಂಖ್ಯಾತರ ವಿರುದ್ಧ ಎನ್ನುವಂತೆ ಬಿಂಬಿಸಲ್ಪಡುತ್ತೇವೆ. ಬಹುಸಂಖ್ಯಾತರ ಪರ ನಿಂತರೆ ಸಹಜವಾಗಿ ನಿಮ್ಮ ಬೆಂಬಲಕ್ಕೆ ಹೆಚ್ಚು ಜನರು ಸಿಗುತ್ತಾರೆ. ನಿಮಗೆ ಹೆಚ್ಚು ಜನರು ಬೇಕೋ ಅಥವಾ ಧರ್ಮದ ಪರ ಚಿಂತನೆ ಬೇಕೋ ಎನ್ನುವ ಹಂತ ತಲುಪಿದಾಗ ಆಯ್ಕೆ ಅವರವರಲ್ಲೇ ಇರುತ್ತದೆ. ನಮಗೆ ನಮ್ಮ ಸಿನೆಮಾಗಳು ಓಡಿದರೆ ಸಾಕು, ನಮ್ಮ ಜೇಬಿಗೆ ದುಡ್ಡು ಬಂದರೆ ಸಾಕು ಅಂತ ಇದ್ದವರು ಬಹುಸಂಖ್ಯಾತರ ಪರವಾಗುತ್ತಾರೆ.

► ‘ಅಲ್ಪ ಸಂಖ್ಯಾತರ ಪರ’ ಎಂದೊಡನೆ ಇಂದು ಬಹು ಸಂಖ್ಯಾತರಲ್ಲಿ ‘ಮುಸಲ್ಮಾನರ ಪರ’ ಎನ್ನುವ ಕಲ್ಪನೆ ಇದೆಯಲ್ಲ ಯಾಕೆ?

ಮುಂಚೆ ‘ಅಲ್ಪ ಸಂಖ್ಯಾತರು’ ಎನ್ನುವುದರ ನಿಜವಾದ ಅರ್ಥ ಎಲ್ಲರಿಗೂ ತಿಳಿದಿತ್ತು. ಆದರೆ ಈ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ಮೂಲ ಮಂತ್ರವೇ ಧರ್ಮದ ಆಧಾರದಲ್ಲಿ ಒಡೆಯುವುದು. ಮಾಡಬೇಕಾದ ಕೆಲಸ ಬಿಟ್ಟು, ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಒಂದು ಪಕ್ಷ, ಒಬ್ಬ ಪ್ರಧಾನಿ. ಅದು ಕೂಡ ಘಂಟಾಘೋಷವಾಗಿ ಆಯಪ್ಪ ಧರ್ಮದ ಆಧಾರದಲ್ಲಿ ಒಡೆಯಬಲ್ಲ ಎಂದಾದರೆ ಯಾವ ಸೀಮೆ ಪ್ರಧಾನಿಯೋ ಗೊತ್ತಾಗುತ್ತಿಲ್ಲ. ನಿಜವಾಗಿ ಆ ಮನುಷ್ಯ ಏಕವಚನ ಬಳಕೆಗೂ ಯೋಗ್ಯನಲ್ಲ. ಇದುವರೆಗೆ ಒಳಗೊಳಗೇ ನಡೆಯುತ್ತಿದ್ದದ್ದು ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ಬಹಿರಂಗವಾದ ಮಾತುಗಳಾಯಿತು. ಇದಾದ ಬಳಿಕ ಅಲ್ಪ ಸಂಖ್ಯಾತರು ಎಂದು ಕೂಡ ಹೇಳಬೇಕಾಗಿಲ್ಲ. ‘ಅವರು’ ಎಂದರೇನೇ ಮುಸಲ್ಮಾನರ ಬಗ್ಗೆ ಎನ್ನುವಂಥ ಬಿರುಕು ಮೂಡಿದೆ.

► ಹಿಂದೂ ಪರವಾಗಿ ಇರುವುದು ಹಿಂದೂಗಳನ್ನು ಒಂದುಗೂಡಿಸುವುದಕ್ಕಾಗಿ. ಅದನ್ನು ತಪ್ಪು ಎನ್ನಲಾಗದು ಅಲ್ಲವೇ?

ಹಿಂದೂ ಪರ ಅಂದರೆ, ಯಾರ ವಿರೋಧ? ಆರ್ಥಿಕವಾಗಿ , ರಾಜಕೀಯವಾಗಿ ಇನ್ನೂ ಪ್ರಾಬಲ್ಯದಲ್ಲಿ ಇಲ್ಲದ ಒಂದು ಅಲ್ಪಸಂಖ್ಯಾತರ ಗುಂಪಿನ ಬಗ್ಗೆ ಇವರಿಗೆ ಇರುವ ಆತಂಕ ಏನು? ಹಿಂದೂಪರ ಎನ್ನುವುದು ಸೋಗು ಮಾತ್ರ. ಹಿಂದೂಗಳಲ್ಲಿನ ಹಿಂದುಳಿದವರು, ಮಹಿಳೆಯರಿಗೆ ಇವರು ಕೊಟ್ಟಿರುವ ಸ್ಥಾನಮಾನ ಏನು? ಇವರು ಬಹು ಸಂಖ್ಯಾತರ ಪರವೇ ಹೌದಾದರೆ, ಬಹುಸಂಖ್ಯಾತರ ಬಡವರಿಗಾಗಿ ಏನು ಮಾಡಿದ್ದಾರೆ? ಹತ್ತು ವರ್ಷ ಆದಮೇಲೆಯೂ ಧರ್ಮದ ಹೆಸರನ್ನೇ ಬಳಸಿ ಓಟು ಕೇಳುತ್ತಿದ್ದಾರೆ ಅಂದ್ರೆ, ಉತ್ತಮ ಕೆಲಸ ಮಾಡುವ ಯೋಗ್ಯತೆ ಇಲ್ಲ ಎಂದೇ ಅರ್ಥ.

► ಸಿನೆಮಾಗಳಲ್ಲಿ ರಾಜಕೀಯ ಅಜೆಂಡಾ ಹರಡುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಸಿನೆಮಾದ ಮೂಲಕ ಸಮತಾವಾದದ ಪ್ರಚಾರ ಮಾಡಿದರೂ ಅದು ರಾಜಕೀಯ ಅಜೆಂಡಾವೇ. ಜನಪರ ಮಾಧ್ಯಮವಾಗಿರುವ ಕಾರಣ ಸಿನೆಮಾ ಜನಪರವಾಗಿದ್ದರೆ ಸಾಕು. ‘ಕಾಶ್ಮೀರ್ ಫೈಲ್ಸ್’ ನಂಥ ಸಿನೆಮಾ ಮಾಡಿದಾಗ ಅದನ್ನು ನೋಡಿದ ಜನ ಥಿಯೇಟರ್ ನಲ್ಲಿ ಎದ್ದು ನಿಂತುಕೊಂಡು ಮುಸ್ಲಿಮ್ ಮಹಿಳೆಯರನ್ನು ರೇಪ್ ಮಾಡಿ ಅಂತ ಕಿರುಚಾಡ್ತಾರೆ. ಅಂದರೆ ಯಾವ ತರಹದ ಇಂಪ್ಯಾಕ್ಟ್ ಮಾಡುತ್ತಿದ್ದಾರೆ ಅಂತ ನಿಮಗೆ ಗೊತ್ತಾಗುತ್ತದೆ. ನಿಜಕ್ಕೂ ನಿರ್ದೇಶಕ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ಇದು ನನ್ನ ಉದ್ದೇಶ ಅಲ್ಲ ಎಂದು ಹೇಳಬೇಕು. ನೀವು ಮಾತಾಡಿಲ್ಲ ಅಂದರೆ ನಿಮ್ಮ ಉದ್ದೇಶವೇ ಅದು ಅಂತ ಗೊತ್ತಾಯ್ತು. ಅದೇ ರೀತಿ ಮುಸ್ಲಿಮ್ ಯವಕನೋರ್ವ ದೈವಸ್ಥಾನದ ಕಾಣಿಕೆ ಡಬ್ಬಿಗೆ ಕಾಂಡೋಮ್ ಹಾಕಿ ರಕ್ತಕಾರಿ ಸತ್ತಾಗ ಕಾಂತಾರದ ದೈವ ಹೇಳಿದ್ದು ನಿಜ ಆಯಿತು ಎನ್ನುವ ವ್ಯೆವ್ಸ್ ಹರಡಿತ್ತು. ಯಾವುದೇ ನಂಬಿಕೆಗಳು ಭಯ ಪಡಿಸುವಂತೆ ಇರಬಾರದು. ದೈವವನ್ನು ನಂಬದವರು ಕೂಡ ನಂಬಿ ಒಳ್ಳೆಯವರಾಗಿ ಬದಲಾಗುತ್ತಾರೆ ಎನ್ನುವುದು ಸಂದೇಶವಾಗಬೇಕು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ದೈವ ಎಲ್ಲರನ್ನೂ ಒಂದಾಗಿ ಕೈ ಹಿಡಿದು ಸಾಗುತ್ತದೆ ಎನ್ನುವುದು ಆದರ್ಶವಾಗಬೇಕು. ಆ ಸಂದರ್ಭದಲ್ಲಿ ಮೇಕರ್ಸ್ ಈ ಬಗ್ಗೆ ಮಾತನಾಡಿರದ ಕಾರಣ ನಾನೇ ನನ್ನ ಅನಿಸಿಕೆ ಹಂಚಿಕೊಂಡಿದ್ದೆ. ದೇವರು, ದೆವ್ವ ಎಲ್ಲವೂ ಸಿನೆಮಾ ಪಾಲಿಗೆ ಟೂಲ್ಸ್ ಮಾತ್ರ.

► ನಿಮ್ಮ ಇಂಥ ಅಭಿಪ್ರಾಯಗಳಿಂದಾಗಿ ನಟನೆಯ ಅವಕಾಶ ಕಡಿತವಾದರೆ?

ಅಂಥ ಸಂದರ್ಭ ಬಂದರೆ ಸಿನೆಮಾರಂಗವನ್ನೇ ಬಿಡುತ್ತೇನೆ. ಇದುವರೆಗೆ ಅಂಥ ಘಟನೆ ನಡೆದಿಲ್ಲ. ಆದರೆ ಮಲಯಾಳಂ ಸಿನೆಮಾವೊಂದರಲ್ಲಿ ಒಂದು ಸಂದರ್ಭ ಎದುರಾಗಿತ್ತು. ವಾಸ್ತವದಲ್ಲಿ ಕೇರಳದಲ್ಲಿ ಹೀಗೆ ಇಲ್ಲ. ಆದರೆ ಆ ಚಿತ್ರದ ನಿರ್ಮಾಪಕರು ಮುಂಬೈನವರಾಗಿದ್ದರು. ನಾನು ನನ್ನ ಅಭಿಪ್ರಾಯ ಸ್ವಾತಂತ್ರ್ಯ ಬಿಟ್ಟುಕೊಡಲು ಸಿದ್ಧನಿರಲಿಲ್ಲ. ಚಿತ್ರದ ಕ್ಕೃ ಮ್ಯಾನೇಜರ್ ನನ್ನ ಸ್ನೇಹಿತರಾಗಿದ್ದ ಕಾರಣ ಅದರಿಂದ ನನಗೆ ದೊಡ್ಡ ಸಮಸ್ಯೆಗಳೇನೂ ಎದುರಾಗಲಿಲ್ಲ..

► ನೀವು ತುಂಬ ಸರಳವಾಗಿರುತ್ತೀರಿ. ನಿಮ್ಮ ಸರಳತೆ ನಿಮಗೆ ಮುಳುವಾದ ಸಂದರ್ಭ ಇದೆಯಾ?

ಅಂಥ ಘಟನೆಗಳು ಆಗಿವೆ. ಆದರೆ ಅದರ ಬಗ್ಗೆ ಬೇಜಾರು ಮಾಡಿಕೊಳ್ಳುವುದಿಲ್ಲ. ನಾನಿರುವುದೇ ಹೀಗೆ. ಅದು ಕೆಲವರಿಗೆ ಇಷ್ಟವಾಗುವುದಿಲ್ಲ. ಅಂಥವರ ಮನಸ್ಥಿತಿ ಬಗ್ಗೆ ನೆನೆದು ಸುಮ್ಮನಾಗಿ ಬಿಡ್ತೀನಿ. ಆರಂಭದಲ್ಲಿ ಬೇಜಾರಾಗಿದ್ದು ಇದೆ. ನಾನು ಪಾಸಿಟಿವಿಟಿಗೆ ಪ್ರಯತ್ನಿಸಿದಾಗ ಇದನ್ನೇ ನೆಗೆಟಿವ್ ಮಾಡ್ತಿದ್ದಾರಲ್ಲ ಅಂತ. ಬರಬರುತ್ತಾ ಅದು ಅಭ್ಯಾಸವಾಗಿದೆ.

► ಹೀಗೆ ಅವಮಾನಗೊಂಡ ಯಾವುದಾದರೂ ಘಟನೆಯ ಬಗ್ಗೆ ಹೇಳಬಹುದಾ?

ಆಗುತ್ತಲೇ ಇರುತ್ತದೆ. ಸುಮಾರು ಜನ ಸೆಟ್ಗೆ ಅಸಿಸ್ಟೆಂಟ್ ಗಳನ್ನೆಲ್ಲ ಇಟ್ಕೊಂಡು ಬರ್ತಾರೆ. ನಾನು ಒಬ್ಬನೇ ಬರುತ್ತೇನೆ. ಕೆಲವು ಪ್ರೊಡಕ್ಷನ್‌ಗಳಲ್ಲಿ ನನಗೆ ನೀರು ಕೊಡುವುದಕ್ಕೂ ಸಮಸ್ಯೆ ಆಗುತ್ತದೆ! ಸಾಮಾನ್ಯವಾಗಿ ನಾನು ಸುಮ್ಮನೇ ಇರುತ್ತೇನೆ. ಆದರೆ ನಾನು ಧ್ವನಿ ಎತ್ತದೇ ಹೋಗುವುದರಿಂದ, ಅವರು ಬೇರೆಯವರಿಗೂ ಹೀಗೆ ಮಾಡುವ ಸಾಧ್ಯತೆ ಇರುತ್ತದೆ. ಅಂಥ ಸಂದರ್ಭದಲ್ಲಿ ನಾನು ತಕ್ಷಣವೇ ಧ್ವನಿ ಎತ್ತುತ್ತೇನೆ. ನಾನು ರಿಯಾಕ್ಟ್ ಮಾಡಿದಾಗ ತಕ್ಷಣ ಕರೆಕ್ಟಾಗಿ ಬಿಡುತ್ತಾರೆ. ಕೊನೆಯ ಪಕ್ಷ ಆ ಹೊತ್ತಿಗಾದರೂ ಬದಲಾವಣೆ ಕಾಣುತ್ತದೆ. ಅದನ್ನು ತಲೆಯಲ್ಲಿ ಉಳಿಸಿಕೊಂಡು ಬೇರೆಯವರಿಗೆ ಆ ರೀತಿ ಮಾಡದಿದ್ದರೆ ಸಾಕು ಅಷ್ಟೇ.

► ನಿಮ್ಮ ನಿರ್ದೇಶನದ ಕನಸು ಎಲ್ಲಿಯವರೆಗೆ ಬಂತು?

ನಡೆಯುತ್ತಾ ಇದೆ. ಒಂದು ಕನ್ನಡ ಹಾಗೂ ಮತ್ತೊಂದು ತಮಿಳು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಾ ಇದ್ದೀನಿ. ಕನ್ನಡ ಚಿತ್ರದ ಹೆಸರು ಆ. ಇದರಲ್ಲಿ ಬೇರೆ ಬೇರೆ ಭಾಷೆಯ ಪಾತ್ರಗಳಿರುತ್ತವೆ. ಮೆಜಾರಿಟಿ ಇಂಗ್ಲಿಷ್‌ನಲ್ಲಿರುತ್ತದೆ. ಆದರೆ ಘಟನೆ ನಡೆಯುವ ಕತೆ ಕರ್ನಾಟಕದಲ್ಲಿರುವುದರಿಂದ ಕನ್ನಡ ಸಿನೆಮಾವಾಗಿರುತ್ತದೆ. ಹಾಡುಗಳು ಕನ್ನಡದಲ್ಲಿರುತ್ತವೆ. ತಮಿಳು ಚಿತ್ರದ ಹೆಸರು ಡ್ರೈವ್.

 

► ಮುಂದೆ ನಿಮ್ಮನ್ನು ಜನ ಹೇಗೆ ನೆನೆಪಿಸಿಕೊಳ್ಳಬೇಕು ಎಂದು ಬಯಸುತ್ತೀರಿ?

ನನ್ನನ್ನು ಯಾರಾದರೂ ನೆನಪಿಸಿಕೊಳ್ಳಬೇಕು ಅಂತ ನನಗೆ ಯಾವತ್ತಿಗೂ ಅನಿಸಿಲ್ಲ. ವಾಸ್ತವದಲ್ಲಿ ನೋಡಿದರೆ ನೆನಪಿಸಿಕೊಳ್ಳಲೇಬಾರದು. ನಾವೆಲ್ಲ ಇವತ್ತಿಗಷ್ಟೇ ಪ್ರಸ್ತುತ. ಐವತ್ತು ವರ್ಷ ಆದರೂ ಪ್ರಸ್ತುತ ಅನಿಸ್ಕೊಳ್ಳೋಕೆ ನಾವು ಕುವೆಂಪು ಅಲ್ವಲ್ಲ! ಜನ ನಮ್ಮನ್ನು ಬಿಟ್ಟು ಹೊಸ ಹೊಸ, ಇನ್ನೂ ಪ್ರಬುದ್ಧವಾದ ಆಲೋಚನೆಗಳೊಂದಿಗೆ ಮುಂದುವರಿಯಬೇಕು.

► ಕನ್ನಡ ಚಿತ್ರರಂಗಕ್ಕೆ ಹೇಮಾ ಕಮಿಟಿಯಂಥ ಸಮಿತಿ ಅಗತ್ಯ ಇದೆಯೇ?

ಜಸ್ಟಿಸ್ ಹೇಮಾ ಕಮಿಟಿ ಮಾದರಿ ಅಲ್ಲವಾದರೂ ಮಹಿಳೆಯರ ಸುರಕ್ಷೆಗಾಗಿ ಒಂದು ಸಮಿತಿಯ ಅಗತ್ಯ ಖಂಡಿತವಾಗಿ ಇದೆ. ಮಹಿಳೆಯರ ಮೇಲೆ ಪುರುಷ ವರ್ಗದ ಬಲ ಪ್ರಯೋಗ ಆರಂಭ ಕಾಲದಿಂದಲೇ ಎಲ್ಲೆಡೆಯೂ ಇದೆ.

ಮನೆಯಲ್ಲಿ ಮಾತ್ರವಲ್ಲ, ಶಕ್ತಿ ಯೋಜನೆ ಬಳಿಕ ಬಸ್ಸಲ್ಲಿಯೂ ಅವಮಾನಗೊಳಿಸುವಂಥ ಘಟನೆಗಳು ನಡೆಯುತ್ತಿವೆ. ಹೆಚ್ಚಿನ ಮಹಿಳೆಯರು ದೈಹಿಕವಾಗಿ ಪುರುಷರಷ್ಟು ಶಕ್ತಿವಂತರಲ್ಲ. ಹೀಗಾಗಿ ಸ್ಪರ್ಧೆಗೆ ಬಿದ್ದರೆ ಬಸ್ಸಲ್ಲಿ ಎಲ್ಲ ಸೀಟುಗಳು ಪುರುಷರ ಪಾಲಾದೀತು. ಈ ಕಾರಣದಿಂದಲೇ ಮಹಿಳೆಯರಿಗೆ ಅವಕಾಶ ಒದಗಿಸಲೆಂದು ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಾತಿ ಸೀಟುಗಳನ್ನು ನೀಡಲಾಗಿರುತ್ತದೆ. ಶಕ್ತಿ ಯೋಜನೆ ಬಳಿಕ ಮೀಸಲಾತಿ ಸೀಟು ದಾಟಿ ಕುಳಿತುಕೊಳ್ಳುವ ಮಹಿಳೆಯರನ್ನು ದಬಾಯಿಸವ ಪುರುಷ ವರ್ಗ ಹೆಚ್ಚಾಗಿದೆ. ಇಂದು ಗಂಡಸರ ಸೀಟು. ಇಲ್ಯಾಕೆ ಬರ್ತೀರ ಎಂದು ಗದರುವ ಪುರುಷರ ಬಗ್ಗೆ ನೀವು ಹೇಳಿದ್ದೀರಿ. ಮೀಸಲಾತಿ ಯಾಕೆ ಇದೆ ಎಂದು ಅರ್ಥಮಾಡಿಕೊಂಡಿಲ್ಲದ ಪುರುಷ ಸಮಾಜದ ವರ್ತನೆ ಇದು. ಶಕ್ತಿ ಯೋಜನೆ ಬಂದಾಗಿನಿಂದ ಮನೆ ಮಹಿಳೆಯರ ಮೇಲೆಯೇ ಪುರುಷರು ಎಷ್ಟು ಅಸಮಾಧಾನ, ಅಸೂಯೆಗಳನ್ನು ಹೊಂದಿದ್ದಾರೆ ಎನ್ನುವುದು ಬಯಲಾಗಿದೆ. ಕೇರಳದ ಸಿನಿರಂಗದಲ್ಲಿ ಸಾಹಿತ್ಯ ಮತ್ತು ಸಿನೆಮಾ ನಂಟು ಇರುವುದರಿಂದ ಹೇಮಾ ಕಮಿಟಿಯ ತನಕ ಮುಂದುವರಿದಿದೆ. ಆದರೆ ಅಲ್ಲಿ ಕೂಡ ಪುರುಷಾಧಿಪತ್ಯದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅತ್ಯಾಚಾರ ಯತ್ನದಲ್ಲಿ ಬಾಧಿತೆಯಾದ ಸಂತ್ರಸ್ತೆಯಿಂದ ಆರೋಪಿತನಾದ ಸ್ಟಾರ್ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಇಂಥ ಘಟನೆಗಳನ್ನು ಎದುರಿಸಲು ಸಂಘಟಿತರಾಗಬೇಕಾದ ನಮ್ಮ ಕಲಾವಿದೆಯರು ಪ್ರತ್ಯೇಕ ಟಾಯ್ಲೆಟ್ ಕೊಟ್ಟರೆ ಸಾಕು ಎನ್ನುವಷ್ಟಕ್ಕೆ ಸುಮ್ಮನಾಗಿದ್ದಾರೆ.

► ನಟಿಯರ ಮೇಲೆ ಪುರುಷ ವರ್ಗದ ದಬ್ಬಾಳಿಕೆಯನ್ನು ನೀವು ಕಣ್ಣಾರೆ ಕಂಡಿದ್ದೀರ?

ಹೌದು. ಇಂಥ ದಬ್ಬಾಳಿಕೆಯನ್ನು ಕನ್ನಡ, ತಮಿಳು, ಮಲಯಾಳಂ.. ಎಲ್ಲಕಡೆ ನೋಡಿದ್ದೀನಿ. ಈ ಬಗ್ಗೆ ಕೇಳಿರುವುದಂತೂ ನೋಡಿದ್ದಕ್ಕಿಂತಲೂ ಶಾಕಿಂಗ್ ಆಗಿದೆ. ನಟಿಯೊಬ್ಬಳು ತಡವಾಗಿ ಹೇಳಿದರೆ, ಆಗ ಎಲ್ಲ ಮುಗಿಸಿಕೊಂಡು ಈಗ ಹೇಳ್ತಿದ್ದಾರೆ ಅಂತ ಜನರೇ ವ್ಯಂಗ್ಯವಾಡುತ್ತಾರೆ. ಆದರೆ ಸ್ಟಾರ್ಸ್ ಉಪಟಳ ಯಾವ ಮಟ್ಟಕ್ಕೆ ಇರುತ್ತದೆ ಎನ್ನುವುದಕ್ಕೆ ನನ್ನದೇ ಒಂದು ಉದಾಹರಣೆ ಹೇಳುತ್ತೇನೆ. ಒಬ್ಬರು ತಮಿಳು ಕಲಾವಿದರು ನನ್ನ ಕಪಾಳಕ್ಕೆ ಹೊಡೆಯುವ ದೃಶ್ಯದಲ್ಲಿ ನಿಜಕ್ಕೂ ಹೊಡೆದೇ ಬಿಟ್ಟಿದ್ದರು.

ಆ ರೀತಿ ಮಾಡುವಂತಿರಲಿಲಲ್ಲ. ಅದೇ ರೀತಿ ನಟಿಯರೊಂದಿಗೆ ತಬ್ಬಿಕೊಳ್ಳುವುದು, ಟಚ್ ಮಾಡುವುದು ಇವುಗಳನ್ನು ಕೂಡ ಮೊದಲೇ ಮಾತನಾಡಿ ಒಪ್ಪಿಗೆ ಪಡೆದು ಮಾಡಬೇಕಾಗಿರುತ್ತದೆ. ಇಂಥ ಸಂದರ್ಭದಲ್ಲಿ ಸೂಚನೆಯೇ ಕೊಡದೇ ಅನಗತ್ಯವಾಗಿ ಹೊಡೆದರೆ ಏನು ಹೇಳೋಣ? ಆ ಕ್ಷಣ ನಾನು ವಿರೋಧಿಸಿದರೆ ಸಿನೆಮಾ ನಿಂತು ಹೋಗುವಂಥ ಸಂದರ್ಭ ಎದುರಾಗಬಹುದು. ಹೀಗಾಗಿ ಆ ಕ್ಷಣಕ್ಕೆ ನಾನು ಕೂಡ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ನಾವು ಆಗಲೇ ವಿರೋಧಿಸಿದರೆ ಸ್ಟಾರ್ ಬಗೆಗಿನ ಆಪಾದನೆ ಸಾಬೀತಾಗಬೇಕಾಗಿಲ್ಲ. ಶೂಟಿಂಗ್ ನಿಂತು ಇಡೀ ಚಿತ್ರತಂಡದ ವಿರೋಧ ನಾವು ಕಟ್ಟಿಕೊಳ್ಳಬೇಕಾಗುತ್ತದೆ. ನಮ್ಮ ಕನ್ನಡದಲ್ಲೇ ಹೆಲಿಕಾಪ್ಟರ್‌ನಿಂದ ನೀರಿಗೆ ಹಾರಿದ ಆ ಯುವಕರು ಯಾಕೆ ಎಗರಿದ್ದಾರೆ ಯೋಚಿಸಿದ್ದೀರ? ಆ ಹುಡುಗರು ತಮಗೆ ಈಜು ಬರಲ್ಲ ಅಂತ ಮೊದಲೇ ಹೇಳಿದ್ದರು. ಬಿದ್ದ ಮೇಲೆ ಅವರನ್ನು ಕಾಪಾಡುವ ವ್ಯವಸ್ಥೆಯೂ ಆಗಿರಲಿಲ್ಲ. ಅವರು ಬಾಡಿ ಬೆಳೆಸಿದ್ದೇ ತಪ್ಪಾಗಿ ಹೋಗಿತ್ತು. ಎಲ್ಲವೂ ಗೊತ್ತಿದ್ದೂ ಆ ಹುಡುಗರು ಯಾಕೆ ತಮ್ಮಿಂದ ಸಾಧ್ಯವೇ ಇಲ್ಲ ಅಂತ ಹೇಳಿಲ್ಲ ಗೊತ್ತೇ? ತಮಗೆ ಕೊಬ್ಬು ಜಾಸ್ತಿ; ಚಾನ್ಸ್ ಸಿಕ್ಕಾಗ ಆಗಲ್ಲ ಅಂತಾರೆ ಎನ್ನುವ ಮಾತು ಹರಡುತ್ತದೆ ಎನ್ನುವ ಭಯ! ಇಲ್ಲಿ ಕೆಲಸ ಮಾಡಿದವರು ಎಲ್ಲರೂ ಹೊರಗಡೆ ಅದನ್ನೇ ಹೇಳುತ್ತಾ ಓಡಾಡುತ್ತಾರೆ. ಆದರೆ ನನಗೆ ಈಜು ಬರಲ್ಲ, ನನ್ನಿಂದಾಗಲ್ಲ ಎಂದು ಹೇಳಿದರೆ ಅದನ್ನು ಒಪ್ಪುವ ಮನಸ್ಥಿತಿ ಉಳಿದವರಿಗೆ ಇದ್ದರೆ ಖಂಡಿತವಾಗಿ ಅವರು ನಿರಾಕರಿಸುತ್ತಿದ್ದರು.

► ಆದರ್ಶ ಸಮೂಹವನ್ನು ಬೆಳೆಸೋದು ಹೇಗೆ?

ನಮ್ಮನ್ನು ರೂಪಿಸಿರುವುದು ಸಾಹಿತ್ಯ, ವಿಚಾರಧಾರೆಗಳು, ಚಿಂತಕರ ವಿಚಾರಗಳು. ಅದೇ ವೇಳೆ ಓಪನ್ ಆಗಿ ಯೋಚನೆ ಮಾಡುವುದಕ್ಕೆ ಒಂದು ಪುಟ್ಟ ಅವಕಾಶವೂ ಇತ್ತು. ಈಗ ಜಗತ್ತು ಅಂತರ್ಜಾಲದ ಮೂಲಕ ಸಿಕ್ಕಾಪಟ್ಟೆ ಓಪನ್ ಆಗ್ಬಿಟ್ಟಿದ್ದೆ. ನಾವು ಇನ್ನೂ ಸೀಮಿತವಾಗಿದ್ದರೆ ಹೇಗೆ? ಎಲ್ಲಾ ಬೌಂಡರಿಗಳು ಅಳಿಸಿ ಹೋಗುತ್ತಿರುವ ಕಾಲದಲ್ಲಿ ಧರ್ಮ, ಜಾತಿ ಮೊದಲಾದವುಗಳನ್ನು ಇಟ್ಟುಕೊಂಡು ನಾವು ಹೊಸ ಸೀಮೆಗಳನ್ನು ಬರೆಯುತ್ತಿದ್ದೇವೆ! ಇದು ತುಂಬಾನೇ ಅಪಾಯಕಾರಿ. ವಿದ್ಯಾವಂತರು ಕೂಡ ಇಂಥವುಗಳಿಗೆ ಬಲಿಯಾಗುತ್ತಿರುವುದು ಆಘಾತಕಾರಿ. ಆದರೂ ಹೊಸ ಪೀಳಿಗೆ ಬಗ್ಗೆ ನನಗಿನ್ನೂ ಆಶಾವಾದ ಇದೆ. ಅವರು ಇದೆಲ್ಲವನ್ನೂ ಮೀರುತ್ತಾರೆ. ದೇಶ, ಭಾಷೆ, ಜಾತಿ ಎಲ್ಲಾ ಗಡಿಗಳನ್ನು ಮೀರುತ್ತಾರೆ ಎನ್ನುವ ಆಸೆ, ಆಶಯ ನನ್ನದು.

Writer - ವಾರ್ತಾಭಾರತಿ

contributor

Editor - Musaveer

contributor

Byline - ಕಿಶೋರ್

contributor

Similar News

ಒಳಗಣ್ಣು
ವೃತ್ತಾಂತ