ತಾಳ ತಪ್ಪದ ಮಾತುಗಾರ; ಜಬ್ಬಾರ್ ಸ. ಮೊ ಸ್ವಗತ
ಜಬ್ಬಾರ್ ಸಮೋ ಎಂದಾಕ್ಷಣ ತಾಳಮದ್ದಳೆ ಪ್ರಿಯರ ಕಿವಿ ನಿಮಿರುತ್ತದೆ. ಕರಾವಳಿಯ ತಾಳಮದ್ದಳೆಗಳಲ್ಲಿ ಅವರ ತಾಳ ತಪ್ಪದ ಮಾತುಗಳ ಸೊಗಸನ್ನು ಸವಿಯದವರಿಲ್ಲ. ಕುಳಿತಲ್ಲೇ ಮಾತಿನರಮನೆಯನ್ನು ಕಟ್ಟಿ ಒಡ್ಡೋಲಗ ನಡೆಸುವ ಜಬ್ಬಾರ್ ಸಮೋ ಅವರು ತನ್ನ ಯಕ್ಷಗಾನ ಬದುಕಿನ ಹಾದಿಯ ಮೊದಲ ಹೆಜ್ಜೆ ಗುರುತಗಳ ಕೆಲವು ಝಲಕ್‌ಗಳನ್ನು ಹಂಚಿಕೊಂಡಿದ್ದಾರೆ.
ನಾನು ಸಂಪಾಜೆಯಲ್ಲಿಯೇ ಮುಸಲ್ಮಾನರಿಗೆ ಕಡ್ಡಾಯವಾಗಿದ್ದ ‘ಮದ್ರಸ’ ಶಿಕ್ಷಣ ಪಡೆದೆ. ಧಾರ್ಮಿಕ ವಿಷಯಗಳನ್ನು ನಾನಿಲ್ಲಿ ಅಭ್ಯಾಸ ಮಾಡಿದೆ. ಮಧ್ಯಾಹ್ನದ ಆನಂತರ ಮಲಯಾ ಳಂ ಭಾಷೆಯನ್ನೂ ಐಚ್ಛಿಕವಾಗಿ ಕಲಿತೆ. ಆಗ ನನ್ನ ಗುರುಗಳು ಮುಸ್ಲಿಮ್ ಪರಂಪರೆಯ ವಿವಿಧ ಸಾಧಕರ ಕುರಿತಾದ ಕತೆಗಳನ್ನು ಹೇಳುತ್ತಿದ್ದರು. 1969ರಲ್ಲಿ ನಾನು ಕೊಡಗು ಜಿಲ್ಲೆಗೆ ಸೇರಿದ ಸಂಪಾಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರ್ಪಡೆಗೊಂಡೆ. ಈ ಅವಧಿಯಲ್ಲಿ ನನ್ನನ್ನು ಪ್ರಭಾವಿಸಿದ ಇಬ್ಬರು ಪುಣ್ಯಾತ್ಮರ ಹೆಸರುಗಳನ್ನು ಉಲ್ಲೇಖಿಸಲೇಬೇಕು. ಈ ಪೈಕಿ ಒಬ್ಬರು ನಾರಾಯಣ ಆಚಾರ್ಯ ಎಂಬವರು. ಇವರು ನಮ್ಮ ಮನೆಗೆ ಅಡಿಕೆ ಸುಲಿಯಲೆಂದು ಬರುತ್ತಿದ್ದರು. ಇವರ ನೈಪುಣ್ಯವನ್ನು ಮೆಚ್ಚಿಕೊಂಡಿದ್ದ ನನ್ನ ತಂದೆಯವರು ಪ್ರತೀ ವರ್ಷ ಇವರನ್ನೇ ಈ ಕೆಲಸಕ್ಕಾಗಿ ಕರೆಸಿಕೊಳ್ಳುತ್ತಿದ್ದರು. ಇವರಿಗೆ ಅಪಾರವಾದ ಪುರಾಣ ಜ್ಞಾನವಿತ್ತು. ಕನ್ನಡ ಹಾಗೂ ತುಳು ಭಾಷೆಯಲ್ಲಿ ಇವರು ಪುರಾಣ ಲೋಕದ ಕತೆಗಳನ್ನು ಅಡಿಕೆ ಸುಲಿಯುವ ಕಾಯಕದ ನಡುವೆ ನನಗೆ ಹೇಳುತ್ತಿದ್ದರು. ಶಿವ ಪುರಾಣ, ಭಾಗವತ, ರಾಮಾಯಣ ಹಾಗೂ ಮಹಾಭಾರತ ಕತೆಗಳಷ್ಟನ್ನೇ ಅಲ್ಲದೆ, ‘ಅಜ್ಜಿ ಕತೆ’ ಗಳನ್ನೂ ಇವರು ಮನಮುಟ್ಟುವಂತೆ ಹೇಳುತ್ತಿದ್ದರು.
ಇನ್ನೊಬ್ಬರು ಐತ. ನಮ್ಮ ಮನೆಯ ಸಮೀಪದಲ್ಲೇ ‘ಪಯಸ್ವಿನೀ ಹೊಳೆ’ ಹರಿಯುತ್ತಿತ್ತು. ಇದರ ಆಚೆ ದಂಡೆಯಲ್ಲಿ ‘ಊರುಬೈಲು’ ಎಂಬ ಹಳ್ಳಿ ಇದೆ. ಐತ ಈ ಹಳ್ಳಿಯ ‘ಮೆಚ್ಚು’ ಎಂಬಾಕೆಯ ಮಗ. ಮೆಚ್ಚು ಬುಟ್ಟಿ, ಚಾಪೆ ಹೆಣೆಯುವ ಕಸುಬಿನಲ್ಲಿ ನುರಿತಾಕೆ. ಇವುಗಳನ್ನು ಕೊಯನಾಡು, ಸಂಪಾಜೆ ಹಾಗೂ ಕಲ್ಲುಗುಂಡಿಗಳಲ್ಲಿ ಮಾರಾಟ ಮಾಡುತ್ತಿದ್ದಳು. ಕೆಲವೊಮ್ಮೆ ಮನೆಮನೆಗಳಿಗೂ ಒಯ್ಯುವುದಿತ್ತು. ಐತ ಮರದ ಟೊಂಗೆಗಳನ್ನು ಕತ್ತರಿಸುವ ಕೆಲಸದಲ್ಲಿ ನಿಷ್ಣಾತ. ಇದರೊಂದಿಗೆ ಅಡಿಕೆ ಮರಕ್ಕೆ ಮದ್ದು ಸಿಂಪರಣೆ, ತೆಂಗಿನ ಮರ ಹತ್ತಿ ಕಾಯಿಗಳನ್ನು ಕಿತ್ತು, ಕೊಬೆಯನ್ನು (ಮರದ ತುದಿ) ಸ್ವಚ್ಛ ಮಾಡುವ ಕೆಲಸವನ್ನೂ ಮಾಡುತ್ತಿದ್ದ. ಇಂತಹ ಐತನಿಗೆ ತುಸು ಅಕ್ಷರ ಜ್ಞಾನವೂ ಇತ್ತು. ಆದರೆ ಈತನಿಗೆ ವಿವಿಧ ಯಕ್ಷಗಾನ ಪ್ರಸಂಗಗಳ ಪದ್ಯಗಳು ಕಂಠಪಾಠವೇ ಆಗಿದ್ದವು. ಇಷ್ಟಲ್ಲದೆ ಸುಶ್ರಾವ್ಯವಾಗಿ ಹಾಡಬಲ್ಲ ಕಂಠ ಸಿರಿಯೂ ಇತ್ತು. ‘ಪಂಚವಟಿ’ಯ, ‘ನೋಡಿ ನಿರ್ಮಲ ಜಲ ಸಮೀಪದಿ..’ ಪದ್ಯವನ್ನು ಸ್ವತಃ ಹಾಡುತ್ತಾ, ಹಸ್ತಾಭಿನಯದೊಂದಿಗೆ ಕುಣಿಯುತ್ತಾ, ಪದ್ಯದ ಅರ್ಥವನ್ನೂ ಹೇಳುತ್ತಾ, ಈತ ರಂಜಿಸುತ್ತಿದ್ದ. ಏಕಕಾಲದಲ್ಲಿ ತಾನೇ ಎರಡು ಮೂರು ಪಾತ್ರಗಳನ್ನು ವಹಿಸಿಕೊಂಡು ಅವನಿಗೊಲಿದ ಭಾಷೆಯಲ್ಲಿ ಅವನಿಗೇ ಸರಿಕಂಡ ಶಬ್ದಗಳನ್ನು ಪೋಣಿಸಿ ವಾಕ್ಯ ಮಾಡಿ ಅರ್ಥ ಹೇಳುತ್ತಿದ್ದ. ಯಕ್ಷಗಾನದ ಬಗ್ಗೆ ತಿಳುವಳಿಕೆ ಇಲ್ಲದ ನಾನು ಐತನ ಯಕ್ಷಗಾನ ವರಸೆಗಳನ್ನು ಪ್ರೀತಿ ಹಾಗೂ ಬೆರಗಿನೊಂದಿಗೆ ನೋಡುತ್ತಿದ್ದೆ. ನನ್ನಲ್ಲಿ ಪುರಾಣ ಮಾತುಗಾರಿಕೆಯ ಬೀಜಗಳನ್ನು ಬಿತ್ತಿದವರಲ್ಲಿ ಇವರು ಮೊದಲಿಗರಿರಬೇಕು.
*****
ಆ ದಿನಗಳಲ್ಲಿ ಊರುಬೈಲಿನಲ್ಲಿ ಸಣ್ಣ ತಾಳಮದ್ದಲೆ ಸಂಘವಿತ್ತೆಂದು ಕೇಳಿದ್ದೇನೆ. ಇದರ ಕಲಾವಿದರ ಪೈಕಿ ಆಂಡಿ ಬಾಲಕೃಷ್ಣ ಮಣಿಯಾಣಿ ಎಂಬವರು ತಕ್ಕ ಮಟ್ಟಿನ ಅರ್ಥಧಾರಿಯಾಗಿದ್ದರು. ನಾನು ಬೆಳೆದು ದೊಡ್ಡವನಾದ ಮೇಲೂ ಬಾಲಕೃಷ್ಣರು ಅರ್ಥ ಹೇಳುತ್ತಿದ್ದುದನ್ನು ಕೇಳಿದ್ದೇನೆ. ವ್ಯಾಕರಣ ಶುದ್ಧ್ದಿ, ಸಮರ್ಪಕ ಶಬ್ದ, ಸರಿಯಾದ ವಾಕ್ಯಗಳಿತ್ಯಾದಿಗಳನ್ನು ಲಕ್ಷಿಸದೇ ಅರ್ಥ ಹೇಳುತ್ತಿದ್ದ ದಿನಗಳೂ ಇದ್ದವು ಎಂಬುದನ್ನು ನಾನು ಬೆಳೆದ ಮೇಲೆ ಗ್ರಹಿಸಲು ಸಾಧ್ಯವಾಯಿತು. ಕೊಡಗು ಸಂಪಾಜೆ ಶಾಲೆಯಲ್ಲಿ ನಾನು ಐದನೆಯ ಇಯತ್ತೆಯವರೆಗೆ ಮಾತ್ರ ವ್ಯಾಸಂಗ ಮಾಡಿದೆ. ಆಗ ನನಗೆ ಗುರುಗಳಾಗಿದ್ದ ಶ್ರೀಮತಿ ನೀಲಮ್ಮ ಹಾಗೂ ವಾರಿಜಾ ಎಂಬಿಬ್ಬರು ಸುಶ್ರಾವ್ಯವಾಗಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಶಾಲಾ ವಾರ್ಷಿಕೋತ್ಸವಗಳಂದು ಇವರಿಬ್ಬರ ನಿರ್ದೇಶನದಲ್ಲಿ ಗಂಡು ಮತ್ತು ಹೆಣ್ಣುಮ್ಮಕ್ಕಳು ಕೋಲಾಟ, ಸುಗ್ಗಿ ಕುಣಿತಗಳಿತ್ಯಾದಿ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುತ್ತಿದ್ದರು. ಇಂತಹ ಕಲಾ ಪ್ರದರ್ಶನಗಳು ನನ್ನನ್ನು ಬಹಳ ಆಕರ್ಷಿಸುತ್ತಿದ್ದವು. ಆ ದಿನಗಳಲ್ಲೆ ಶಾಲಾ ಮಾಸಿಕ ಸಭೆಗಳಲ್ಲಿ ನನ್ನ ಸಹಪಾಠಿಗಳು ಕತೆ ಹೇಳುವ, ಪದ್ಯ ಹಾಡುವ, ಒಗಟು ಹೇಳುವ, ಏಕ ಪಾತ್ರಾಭಿನಯ ಮಾಡುವ ಪ್ರತಿಭೆಗಳನ್ನು ಪ್ರಕಟಿಸುತ್ತಿದ್ದರು. ನನ್ನ ಕುತೂಹಲವನ್ನು ಗಮನಿಸಿದ ನೀಲಮ್ಮ ಟೀಚರ್ ಒಂದು ಸಭೆಯಲ್ಲಿ ನನಗೆ ಕತೆ ಹೇಳಲು ಅವಕಾಶ ನೀಡಿದರು. ಆದರೆ ತೀವ್ರ ಸಭಾಕಂಪನದಿಂದಾಗಿ ನನಗೆ ಕತೆಯನ್ನು ಪೂರ್ತಿಮಾಡಲಾಗಲಿಲ್ಲ.ಆದರೆ ಹೇಳದೇ ಉಳಿದ ಕತೆಗಳು ಮಾತ್ರ ನನ್ನೊಳಗೆ ರಾಶಿಯಾಗುತ್ತಾ ಹೋದವು. ಈ ಹಂತದಲ್ಲೆ ನಾನು ಶಾಲಾ ಗ್ರಂಥ ಭಂಡಾರ ಹೊಕ್ಕೆ. ಇಲ್ಲಿ ಚಂದಮಾಮ, ಜಾನಪದ, ಪಂಚತಂತ್ರ ಪುಸ್ತಕಗಳು ತುಂಬಿದ್ದವು. ಇವುಗಳನ್ನು ಲಘು ಧೋರಣೆಯಿಂದ ಓದಲಾರಂಭಿಸಿದ ನನಗೆ ನಿಧಾನಕ್ಕೆ ಇವು ಗಂಭೀರವಾಗಿ ನನ್ನ ಬೆನ್ನು ಹತ್ತಿರುವುದರ ಅರಿವಾಗತೊಡಗಿತು. ದಿನಗಳೆದಂತೇ ಇವುಗಳ ಅಭಿರುಚಿ ನನಗೆ ತಗಲಿಕೊಂಡಿತು. ಈ ಪೈಕಿ ‘ಚಂದಮಾಮ’ ಮಾಸ ಪತ್ರಿಕೆಯಂತೂ ನನ್ನನ್ನು ಸಂಪೂರ್ಣವಾಗಿ ವಶೀಕರಿಸಿಕೊಂಡಿತು!. ಒಮ್ಮೆ ಒಂದನ್ನು ಕೈಗೆತ್ತಿಕೊಂಡರೆ ಕ್ಷಿಪ್ರ ಅವಧಿಯಲ್ಲಿ ಓದಿ ಮುಗಿಸಿಬಿಡುತ್ತಿದ್ದೆ. ಇದರ ಕತೆಗಳನ್ನು ಅಕ್ಕನಿಗೆ ಹೇಳುತ್ತಿದ್ದರೆ ಆಕೆ ಆಸಕ್ತಿಯಿಂದ ಆಲಿಸುತ್ತಿದ್ದಳು. ಅವಳ ಮೆಚ್ಚುಗೆ ನನ್ನನ್ನು ಉಬ್ಬಿಸುತ್ತಿತ್ತು. ಇದರ ಪರಿಣಾಮವಾಗಿ ನಾನು ಹೆಚ್ಚು ಹೆಚ್ಚು ಕತೆ ಪುಸ್ತಕಗಳನ್ನು ಓದಲಾರಂಭಿಸಿದೆ.
ನನ್ನ ತಂದೆಯವರು ನನ್ನ ಕತೆ ಓದುವ ಗೀಳನ್ನು ಆಗಾಗ ಆಕ್ಷೇಪಿಸುತ್ತಿದ್ದರು. ನಾನು ಶಾಲಾ ಪಠ್ಯಗಳ ಓದಿನಿಂದ ಎಲ್ಲಿ ವಿಮುಖನಾಗಿಬಿಡುವೆನೋ ಎಂಬ ಆತಂಕ ಅವರಿಗಿತ್ತು. ಈ ವಿಚಾರವನ್ನು ತಾಯಿಯೊಂದಿಗೂ ಆಡಿಕೊಳ್ಳುತ್ತಿದ್ದರು. ತಾಯಿ ಅಪ್ಪನ ಆಸೆಯನ್ನು ಈಡೇರಿಸಲೋಸುಗ ಶಾಲೆಯ ಪಾಠಗಳತ್ತ ಗಮನಹರಿಸಲು ಹೇಳುತ್ತಿದ್ದರು. ಆದರೆ ನಾನು ತರಗತಿಯಲ್ಲಿ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನೀಯನೇ ಆಗಿರುತ್ತಿದ್ದೆ. ತಂದೆಯವರಿಗೆ ಆಪ್ತರಾಗಿದ್ದ ಊರುಬೈಲಿನ ಶ್ರೀ ಚಿನ್ನಪ್ಪ ಮಾಸ್ತರರು ನನ್ನ ಬಗ್ಗೆ ಅಭಿಮಾನವುಳ್ಳವರಾಗಿದ್ದು ತಂದೆಯವರಲ್ಲಿ ನನ್ನ ಪರವಹಿಸಿ ಮಾತಾಡುತ್ತಿದ್ದರು. ಕತೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುವುದೆಂದು ತಂದೆಯವರಿಗೆ ಮನದಟ್ಟು ಮಾಡುತ್ತಿದ್ದರು. ತಂದೆಯವರಿಗೂ ಇದು ಸರಿಯೆಂದು ತೋರಿದುದರ ಫಲಶ್ರುತಿಯಿಂದ ನನಗೆ ತುಂಬಾ ಅನುಕೂಲವೇ ಆಯಿತು. ಅಂಗಡಿ ಸಾಮಾನಿಗಾಗಿ ಪುತ್ತೂರಿಗೆ ಹೋಗುತ್ತಿದ್ದ ತಂದೆಯವರು ಪ್ರತಿ ತಿಂಗಳು ನನಗೆ ಚಂದಮಾಮ ತಂದು ಕೊಡುತ್ತಿದ್ದರು. ಮುಂದೆ ಇದರದ್ದೇ ವಿನ್ಯಾಸದಲ್ಲಿ ಬಾಲಮಿತ್ರ ಹಾಗೂ ಬೊಂಬೆ ಮನೆಗಳು ಪ್ರಕಟವಾಗ ತೊಡಗಿತು. ಅಪ್ಪ ಇವುಗಳನ್ನೂ ತಂದುಕೊಡುತ್ತಿದ್ದರು. ಹೀಗೆ ಓದುವಾಗ ವಿವಿಧ ಕತೆಗಳಲ್ಲಿ ಬರುವ ಪಾತ್ರಗಳೆಲ್ಲವೂ ನನ್ನೆಣಿಕೆಯಲ್ಲಿ ನಿಜವೇ ಆಗಿತ್ತು. ಇಷ್ಟರ ಮಟ್ಟಿಗೆ ನಾನು ಕತೆಗಳ ಓದಿನಲ್ಲಿ ಆಳವಾಗಿ ಮುಳುಗಲಾರಂಭಿಸಿದೆ. ಇದರೊಂದಿಗೆ ಈ ಪಾತ್ರಗಳೆಲ್ಲ ಜೀವಂತವಾಗಿ ಕಣ್ಣುಗಳೆದುರು ಕಾಣಿಸಿದರೆ ಹೇಗಿದ್ದೀತೊ? ಎಂಬ -ವಿಚಿತ್ರ ಕಲ್ಪನೆಗಳು ಮೂಡಲಾರಂಭಿಸಿದವು. ಈ ನಡುವೆ ಸಂಪಾಜೆ ಶಾಲೆಯ ಆಟದ ಮೈದಾನದಲ್ಲಿ ಕರ್ನಾಟಕ ಯಕ್ಷಗಾನ ಮೇಳದ ಆಟವೊಂದು ಪ್ರದರ್ಶನಗೊಂಡಿತು. ಪ್ರಸಂಗ ‘ಗುರುದಕ್ಷಿಣೆ-ಅಕ್ಷಯಾಂಬರ ವಿಲಾಸ-ಬಭ್ರುವಾಹನ ಕಾಳಗ’. ಶಾಲೆಯ ಪಕ್ಕದಲ್ಲೇ ಇರುವ ಕಳಗಿ ಮನೆಯ ವಿವಿಧ ಫಲವಸ್ತುಗಳನ್ನು ಸಂಗ್ರಹಿಸಿಡುವ ಉದ್ದವಾದ ಮುಳಿ ಹುಲ್ಲು ಛಾವಣಿಯ ಕೊಟ್ಟಿಗೆ ಆಟದ ಕಲಾವಿದರಿಗೆ ಬಿಡಾರವಾಗಿತ್ತು. ಸೊಂಪಾಗಿದ್ದು ಉದ್ದವಾಗಿರುವ ಕೂದಲನ್ನು ಉರುಟಾಗಿ ಸುತ್ತಿ ತಲೆಯ ಹಿಂಬದಿ ಜುಟ್ಟು ಕಟ್ಟಿದ ಹಲವರು, ದಿನವೂ ಬಣ್ಣ ಹಚ್ಚುವುದರಿಂದಾಗಿ ಮೂಡಿದ ಕಣ್ಣುಗಳ ಸುತ್ತಲಿನ ಮಸಿ ಛಾಯೆ ಹೊಂದಿರುವ ಇನ್ನೂ ಕೆಲವರು. ಹೀಗೇ ಆಟದ ವೇಷಧಾರಿಗಳನ್ನು ನಾನು ಹತ್ತಿರದಿಂದ ಕಾಣುವಂತಾಯಿತು.
ಬಣ್ಣದ ಬೆಳಕು
ಆಟದ ದಿನ ಶಾಲಾ ವಿದ್ಯಾರ್ಥಿಗಳಿಗೆ ಅರ್ಧ ತಿಕೀಟು ಎಂದೂ, ಸಾಧ್ಯವಿರುವವರೆಲ್ಲರೂ ಆಟಕ್ಕೆ ಬರಬೇಕೆಂತಲೂ ಶಾಲಾ ಮುಖ್ಯೋಪಾಧ್ಯಾಯರು ಸೂಚಿಸಿದಾಗ ಮಕ್ಕಳು ಹರ್ಷೋದ್ಗಾರದಿಂದಲೇ ಸ್ವಾಗತಿಸಿದರು. ಆಸಕ್ತಿಯಿರುವ ಮಕ್ಕಳ ಸಾಲಿನಲ್ಲಿ ನಾನೂ ನಿಂತು ಶಾಲೆಯ ಮೊಹರು ಹಾಕಲ್ಪಟ್ಟ ಇಪ್ಪತ್ತೈದು ಪೈಸೆಗಳ ಗುರುತು ಚೀಟಿ ಪಡೆದುಕೊಂಡೆ.ನನ್ನ ಗೆಳೆಯರು ಆಟ ನೋಡಲು ಬರುವುದಾಗಿಯೂ, ಸೋಜಿ ಕುಡಿಯುತ್ತ, ಕಡ್ಲೆ ತಿನ್ನುತ್ತ ಬೆಳಗಿನವರೆಗೂ ಬಯಲಾಟ ನೋಡುವುದಾಗಿಯೂ ಸಂಭ್ರಮದಿಂದ ಹೇಳಿಕೊಂಡಾಗ ನನಗೂ ಆಶೆ ತಡೆಯಲಾಗಲಿಲ್ಲ. ಆದರೆ ಮನೆಯಿಂದ ಒಪ್ಪಿಗೆ ಸಿಗುವ ಯಾವ ಭರವಸೆಯೂ ಇಲ್ಲದುದರಿಂದ ಹತ್ತಿಕ್ಕಿಕೊಂಡೆನಾದರೂ ಈ ಕಾರಣದ ನಿರಾಶೆಯನ್ನು ಅಡಗಿಸಿಕೊಳ್ಳಲು ಸಾಧ್ಯವಾಗದೆ ಬೇಗುದಿಯೊಂದಿಗೇ ಮನೆ ತಲುಪಿದೆ. ನಾನು ಯಾವತ್ತಿನಂತಿಲ್ಲದಿರುವುದನ್ನು ಗಮನಿಸಿದ ಅಕ್ಕ ನನ್ನಲ್ಲಿ ಪದೇಪದೇ ಕಾರಣ ಕೇಳಿದಾಗ ನಾನು ಶಾಲಾ ಮೈದಾನದಲ್ಲಿ ನಡೆಯುವ ಯಕ್ಷಗಾನ ಬಯಲಾಟವನ್ನು ನೋಡಬೇಕೆಂಬ ನನ್ನ ಹಂಬಲವನ್ನು ಆತಂಕದಿಂದಲೇ ಹೇಳಿಕೊಂಡೆ. ಅಕ್ಕ ನನ್ನ ಹಾಗೂ ಅಮ್ಮನ ನಡುವೆ ಸಂಧಾನ ನಡೆಸಿದಳು. ನಾಳೆ ಉಪಾಧ್ಯಾಯರು ಆಟದ ಕತೆಯ ಮೇಲೆ ಪ್ರಶ್ನೆಗಳನ್ನು ಕೇಳುವುದಾಗಿ ಆಪದ್ಧರ್ಮ ಸುಳ್ಳೊಂದನ್ನು ತಮ್ಮನ ಪರವಾಗಿ ಹೇಳಿ ಬಿಟ್ಟಳು! ಅಮ್ಮ ಅಕ್ಕನ ಮಾತುಗಳನ್ನು ಕೊನೆಗೂ ಒಪ್ಪಿಕೊಂಡರು. ಆದರೆ ಅಪ್ಪನಿಗೆ ಈ ವಿಚಾರ ಗೊತ್ತಾಗದಂತೆ ಎಚ್ಚರ ವಹಿಸಬೇಕೆಂದು ಮುನ್ನೆಚ್ಚರಿಕೆಯನ್ನೂ ನೀಡಿದರು. ಜೊತೆಗೆ ಒಂದೂವರೆ ರೂಪಾಯಿಯನ್ನೂ ಕೊಟ್ಟು ಕಳೆದುಕೊಳ್ಳದಂತೆ ಎಚ್ಚರಿಕೆಯನ್ನೂ ನೀಡಿದರು.
ನನ್ನನ್ನು ಮನೆಯಿಂದ ಬಯಲಾಟಕ್ಕೆ ಕಳುಹಿಸಲಾರರೆಂಬ ಗೆಳೆಯರ ನಿರ್ಧಾರವನ್ನು ಸುಳ್ಳುಮಾಡಿ ಅಚ್ಚರಿ ಸೃಷ್ಟಿಸಿದ ಈ ಸಂಭವವಂತೂ ನನ್ನನ್ನು ಮೊತ್ತಮೊದಲ ಬಾರಿಗೆ -ಯಕ್ಷಗಾನ ನೋಡುವಂತೆ ಮಾಡಿದ ಮಹತ್ವದ ಸಂದರ್ಭವೆಂದು ದಾಖಲಾಯಿತು. ಮುಂದೆ ಐದನೆಯ ತರಗತಿ ಮುಗಿಸುವವರೆಗೂ ನಾನು ಸಂಪಾಜೆಯ ಸರಕಾರಿ ಆಸ್ಪತ್ರೆಯ ಎದುರಿನ ಬಯಲು ಹಾಗೂ ಮಳೆಗಾಲದಲ್ಲಿ ಮರದ ದಿಮ್ಮಿಗಳನ್ನು ಪೇರಿಸಿಡಲು ಬಳಸಲಾಗುತ್ತಿದ್ದ ಸಂಕೇಶ ಡಿಪೋ ಬಯಲುಗಳಲ್ಲಿ ಬಹಳಷ್ಟು ಬಯಲಾಟಗಳನ್ನು ನೋಡಿದೆ. ಧರ್ಮಸ್ಥಳ, ಕುಂಡಾವು, ಆದಿ ಸುಬ್ರಹ್ಮಣ್ಯ ಮೇಳಗಳು ಆರು ತಿಂಗಳುಗಳ ತಿರುಗಾಟದ ಅವಧಿಯಲ್ಲಿ ಈ ಮೈದಾನಗಳಲ್ಲಿ ಪ್ರದರ್ಶನ ನೀಡುತ್ತಿದ್ದವು. ನಾನು ಇವುಗಳನ್ನೆಂದಿಗೂ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಅಡಿಕೆ ಸುಲಿಯುವಾಗ ನಾರಾಯಣ, ತೆಂಗಿನಕಾಯಿ ಒಟ್ಟುವಾಗ ಊರುಬೈಲು ಐತರು ಹೇಳುತ್ತಿದ್ದ ಹಾಗೂ ಚಂದಮಾಮದಲ್ಲಿ ಓದುತ್ತಿದ್ದ ರೋಚಕ ಸಚಿತ್ರ ಕತೆಗಳ ಅದ್ಭುತ ರಮ್ಯ ಪಾತ್ರಗಳು ಜೀವದಳೆದರೆ ಹೇಗಿರಬಹುದೆಂಬ ನನ್ನ ಬಾಲಿಶ ಕಲ್ಪನೆಯು ‘ಯಾಕೋ ಯಕ್ಷಗಾನ ರಂಗಸ್ಥಳಗಳಲ್ಲಿ ಸಾಕಾರಗೊಂಡ ಅನುಭವ ನನಗಾಗತೊಡಗಿದಂತೆಲ್ಲ ಯಕ್ಷಗಾನ ಒಂದು ಗುಂಗಿನಂತೆ ಸೆಳೆಯಲಾರಂಭಿಸಿತು. ಆದರೆ ಈ ನಡುವೆ ತನ್ನ ಅರಿವಿಗೆ ಬಾರದಂತೆ ಕಿರಿ ಮಗ ಬಯಲಾಟಗಳನ್ನು ನೋಡುತ್ತಿದ್ದ ಸಂಗತಿ ಅಪ್ಪನಿಗೆ ತಿಳಿದುಬಿಟ್ಟಿತು! ಆನಂತರ ಅಪ್ಪ ಬಯಲಾಟ ಮೇಳಗಳು ಸಂಪಾಜೆ ಪರಿಸರದಲ್ಲಿ ಡೇರೆ ಹಾಕಿದ ಸಂದರ್ಭಗಳಲ್ಲೆಲ್ಲಾ ರಾತ್ರಿ ನಾನು ಮನೆಯಲ್ಲೇ ಇರುವುದನ್ನು ಖುದ್ದು ವೀಕ್ಷಿಸಿ ಖಾತರಿ ಮಾಡಿಕೊಳ್ಳಲಾರಂಭಿಸಿದರು. ಯಕ್ಷಗಾನದ ತೀವ್ರ ಸೆಳೆತಕ್ಕೊಳಗಾದ ನಾನು ಈಗ ಅಪ್ಪನ ಕಣ್ಣಪ್ಪಿಸಿ ಆಟದ ಡೇರೆಗೆ ಹೋಗಬೇಕಾದ ಪರಿಸ್ಥಿತಿ ಬಂತು. ಅಪ್ಪ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಬಂದು ಊಟ ಮಾಡಿ ಮಲಗುವವರೆಗೂ ನಾನು ಮನೆಯಲ್ಲೇ ಉಳಿದು ನಂತರ ಅಮ್ಮ, ಅಕ್ಕ, ಅಣ್ಣಂದಿರಿಗೆ ದುಂಬಾಲು ಬಿದ್ದು ಉಳಿದ ಸಮಯಗಳಲ್ಲಿ ಒಬ್ಬನೇ ಸಂಚರಿಸಲು ಹಿಂಜರಿಯುತ್ತಿದ್ದ ಕಾಡು ದಾರಿಯಲ್ಲಿ ಗೆರಟೆಯೊಳಗೆ ಮಯಣದ ಬತ್ತಿ ಹಚ್ಚಿರಿಸಿ ಇದರ ಬೆಳಕಲ್ಲಿ ಆಟದ ಬಯಲಿಗೆ ಬರುತ್ತಿದ್ದೆ. ಇದರಿಂದಾಗಿ ನಾನು ರಂಗಸ್ಥಳದ ಎದುರಿನ ನೆಲದ ಆಸನದಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಪ್ರಸಂಗದ ಆರಂಭದ ದೃಶ್ಯಗಳನ್ನು ತಪ್ಪಿಸಿಕೊಳ್ಳುವಂತಾಗುತ್ತಿತ್ತು. ಇಷ್ಟೇ ಸಾಲದು ಎಂಬಂತೆ ಅಪ್ಪ ಹಾಸಿಗೆ ಬಿಟ್ಟೇಳುವ ಮೊದಲೇ ಮನೆ ಸೇರಬೇಕಾಗುತ್ತಿತ್ತಾದುದರಿಂದ ಬಹು ವೇಷಗಳು ರಂಗಸ್ಥಳದಲ್ಲಿ ನೆರೆಯುವ ದೃಶ್ಯಗಳನ್ನೂ ಕಳೆದುಕೊಳ್ಳಬೇಕಾಗುತ್ತಿತ್ತು.
ನಾನು ಪ್ರಾಥಮಿಕ ಶಾಲಾ ಹಂತದಲ್ಲಿ ಬಯಲಾಟ ನೋಡುತ್ತಿದ್ದ ದಿನಗಳಲ್ಲಿ ನನ್ನೂರಿನ ಬಹಳ ಮಂದಿ ಮುಸ್ಲಿಮರು ಒಂದು ನಿರ್ದಿಷ್ಟ ಹೊತ್ತಿನವರೆಗೆ ನಿಂತು ನೋಡಿ ಆನಂದಿಸುತ್ತಿದ್ದರು. ಬೆಳಗಿನವರೆಗೆ ನಿದ್ದೆ ಬಿಟ್ಟರೆ ಮರುದಿನದ ದುಡಿಮೆಗೆ ತೊಡಕಾಗುತ್ತದೆಯೆಂಬ ಕಾರಣದಿಂದ ಇವರಲ್ಲಿ ಅನೇಕರು ಪೂರ್ತಿ ಆಟ ನೋಡುತ್ತಿರಲಿಲ್ಲ. ಹೀಗೆ ಆಟ ನೋಡುವವರಿಗೆ ಯಾವುದೇ ಧಾರ್ಮಿಕ ನೆಲೆಯ ನಿರ್ಬಂಧಗಳು ಅಡಚಣೆ ಉಂಟು ಮಾಡುತ್ತಿರಲಿಲ್ಲ. ನನ್ನ ತಂದೆ ನಾನು ವಿದ್ಯಾಭ್ಯಾಸದಲ್ಲಿ -ಎಲ್ಲಿ ಹಿಂದುಳಿದು ಬಿಡುವೆನೋ ಎಂಬ ಆತಂಕದಿಂದ ್ಟೇ ನನ್ನನ್ನು ಬಯಲಾಟ ನೋಡುವ ಹವ್ಯಾಸದಿಂದ ದೂರ ಸರಿಸಲು ಬಯಸುತ್ತಿದ್ದರು. ನನ್ನನ್ನು ಕೊಡಗು ಸಂಪಾಜೆಯ ಶಾಲೆಯಿಂದ ಬಿಡಿಸಿ ಪಕ್ಕದ ಜಿಲ್ಲೆಗೆ ಸೇರಿದ ಕಲ್ಲುಗುಂಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸೇರಿಸುವುದೊಂದೇ ಪರಿಹಾರವೆಂದು ನಿರ್ಧರಿಸಿದ ತಂದೆ ನಾನು ಐದನೆಯ ತರಗತಿಯಿಂದ ಉತ್ತೀರ್ಣನಾದ ತಕ್ಷಣ ತಮ್ಮ ಯೋಚನೆಯನ್ನು ಕಾರ್ಯಗತಗೊಳಿಸಿಬಿಟ್ಟರು. ಹೀಗಾಗಿ ನಾನು ಆರನೆಯ ತರಗತಿಗಾಗುವಾಗ ಶಾಲೆ ಬದಲಿಸಬೇಕಾಯಿತು.
ಆದರೆ ತಂದೆಯವರ ಯೋಚನೆ ತಲೆಕೆಳಗಾಗುವ ಪರಿಸ್ಥಿತಿ ಬಂತು. ಕಲ್ಲುಗುಂಡಿ (ದ. ಕ. ಸಂಪಾಜೆ ಎಂದು ಕರೆಯಲಾಗುತ್ತದೆ) ಪರಿಸರದಲ್ಲಿ ಯಕ್ಷಗಾನ ಕೊಡಗು ಸಂಪಾಜೆಗಿಂತಲೂ ಹೆಚ್ಚು ಪ್ರಚಲಿತವಿತ್ತು. ಆಗ ಮಾದೆಪಾಲು ರಾಮಣ್ಣ ರೈಗಳು ಬಾಚಿಗದ್ದೆ ಎಂಬಲ್ಲಿ ನೆಲೆಸಿದ್ದು ಯಕ್ಷಗಾನದಲ್ಲಿ ಬಲ್ಲಿದರಿದ್ದು ಆಸಕ್ತರಿಗೆ ತರಬೇತಿ ನೀಡುತ್ತಾ, ಬಯಲಾಟ ಮತ್ತು ತಾಳಮದ್ದಲೆಗಳನ್ನು ನಡೆಸುತ್ತಿದ್ದರು. ಪ್ರಸಿದ್ಧ್ದ ವೇಷಧಾರಿ ಶೀನಪ್ಪ ರೈಗಳು ಇವರ ಸುಪುತ್ರ. ಇವರ ಸಹೋದರರ ಪೈಕಿ ಚಂದ್ರಶೇಖರ ರೈ(ಭಾಗವತ -ಧೀರಜ್ ರೈಯವರ ತಂದೆ)ಗಳು ವೇಷಗಾರಿಕೆಯಲ್ಲೂ, ಗಂಗಾಧರ ರೈಗಳು ಮದ್ದಲೆ ವಾದನದಲ್ಲೂ ನುರಿತವರಾಗಿದ್ದರು. ವಾಸು ರೈಗಳು ಪ್ರಸಿದ್ಧ ಸ್ತ್ರೀ ವೇಷಧಾರಿಗಳಾಗಿದ್ದು ‘ಶ್ರೀದೇವಿ’ ಪಾತ್ರದಲ್ಲಿ ಎತ್ತಿದ ಕೈಯೆನಿಸಿಕೊಂಡಿದ್ದರು. ಕಂಪೆನಿ ತೋಟದಲ್ಲಿದ್ದ ಮಹಾಲಿಂಗ ರೈಗಳೆಂಬವರು ಖಳ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಕೊರಗಪ್ಪ, ಕೃಷ್ಣ, ನಾರಾಯಣ ಮಣಿಯಾಣಿಯವರು, ವಿಠಲ ಹಾಗೂ ಜಗನ್ನಾಥ ರೈಗಳೆಂಬವರು ಈ ಬಳಗದಲ್ಲಿ ವೇಷ ಧರಿಸುತ್ತಿದ್ದರು. ಗೋಪಾಲ ಪೆರ್ಮುದೆ ಸಂಪಾಜೆ ಪ್ರೌಢ ಶಾಲೆಯ ನೌಕರಿಯೊಂದಿಗೆ ವೇಷಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದರು. ಇವರು ತಾಳಮದ್ದಲೆಯಲ್ಲಿ ಸಾಕಷ್ಟು ಪರಿಣತಿಯಿದ್ದವರಾಗಿದ್ದರು. ಆಗ ಕಲ್ಲುಗುಂಡಿಯಲ್ಲಿ ನಿಯಮಿತವಾಗಿ ಕೂಟಗಳು ನಡೆಯುತ್ತಿದ್ದವು. ವೈದ್ಯ ವೃತ್ತಿಯಲ್ಲಿದ್ದ ಸುಬ್ರಹ್ಮಣ್ಯ ಭಟ್ಟ ಹಾಗೂ ವೆಂಕಟೇಶ್ವರ ಭಟ್ಟರೆಂಬವರು ಈ ತಾಳಮದ್ದಲೆಗಳನ್ನು ಆಸಕ್ತಿಯಿಂದ ಸಂಘಟಿಸುತ್ತಿದ್ದರು. ನಾನು ಆಗ ವೇಷ ಮತ್ತು ಕುಣಿತಗಳನ್ನುಮಾತ್ರ ಆಸ್ವಾದಿಸುತ್ತಿದ್ದೆನೇ ಹೊರತು ಮಾತುಗಾರಿಕೆ ಹಾಗೂ ಭಾಗವತಿಕೆಗಳತ್ತ ಹೆಚ್ಚು ಒಲವು ತೋರುತ್ತಿರಲಿಲ್ಲ.ನಾನು ಕಲ್ಲುಗುಂಡಿ ಶಾಲೆಗೆ ಆರನೆಯ ಇಯತ್ತೆಗೆ ಸೇರಿದಾಗ ನನಗೆ ಸಿಕ್ಕಿದ ಹೊಸ ಗೆಳೆಯರಲ್ಲಿ ಸುಬ್ರಾಯನೆಂಬವನು ಪ್ರಸಿದ್ಧ ಬಣ್ಣದ ವೇಷಧಾರಿ ಗಾಂಧಿ ಮಾಲಿಂಗರ ಮಗನೆಂದು ತಿಳಿದು ಸಂತೋಷ, ಹೆಮ್ಮೆಗಳೆರಡನ್ನೂ ಅನುಭವಿಸಿದೆ. ಇವರ ಮನೆ ನಮ್ಮ ಶಾಲೆಯ ಹಿಂಭಾಗದ ಎತ್ತರದ ಜಾಗದಲ್ಲಿತ್ತು. ಇವರ ಮಕ್ಕಳ ಪೈಕಿ ರಾಮ ಎಂಬವರು ಕೋಲು ಕಿರೀಟದ ವೇಷದಲ್ಲಿ ಎದ್ದು ಕಾಣಿಸುತ್ತಿದ್ದರು. ಒಂದೆರಡು ವರ್ಷಗಳು ಮೇಳ ತಿರುಗಾಟ ನಡೆಸಿದರೂ ನಂತರ ಮುಂದುವರಿಯಲಿಲ್ಲ. ಕೃಷ್ಣ ಎಂಬವರು ಚೆಂದದ ಪಗಡಿ ಹಾಗೂ ಸ್ತ್ರೀ ಪಾತ್ರಗಳೆರಡನ್ನೂ ನಿರ್ವಹಿಸುತ್ತಿದ್ದರು. ನಮ್ಮ ಶಾಲೆಯ ಅಂಗಳದ ತುದಿಯಲ್ಲಿ ರಾಮಕೃಷ್ಣ ಭಜನಾ ಮಂದಿರವಿತ್ತು. ಇಲ್ಲಿ -ಎಡ್ಡಣೆ ಕೃಷ್ಣಪ್ಪ, ಫಕೀರಪ್ಪ, ಗೋಪಾಲ ಪೆರ್ಮುದೆ, ಕೊರಗಪ್ಪ ಮಣಿಯಾಣಿ, ಮಹಾಲಿಂಗ ವೈ,ಬಾಲೆಂಬಿ ಸಂಜೀವ, ಶಿವಪ್ಪ ಆಚಾರ್ಯರೆಂಬವರು ಸೇರಿಕೊಂಡು ವಾರದ ಕೂಟಗಳನ್ನು ನಡೆಸುತ್ತಿದ್ದರು.
ಕಲ್ಲುಗುಂಡಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಕೆ.ಜತ್ತಪ್ಪ ಗೌಡರು ಹವ್ಯಾಸಿ ಭಾಗವತರಾಗಿದ್ದರು. ಇಳಿ ಸ್ವರವಾದರೂ ಸಾಂಪ್ರದಾಯಿಕ ಶೈಲಿಯಲ್ಲಿ ಇವರು ಹಾಡುತ್ತಿದ್ದರು. ವಿರಾಮದ ವೇಳೆಯಲ್ಲಿ ಇವರು ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಗುನುಗುತ್ತಿದ್ದರು. ನಾಲ್ಕನೆಯ ತರಗತಿಯವರೆಗೆ ಪಾಠ ಹೇಳುತ್ತಿದ್ದ ಶ್ರೀ ಮಹಾಲಿಂಗ ಭಟ್ಟರು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಹತ್ತಿರದ ಸಂಬಂಧಿ. ಶಾಲೆ ಮುಗಿದ ನಂತರ ಮತ್ತು ರಜೆಯ ದಿನಗಳಲ್ಲಿ ಇವರು ಪೌರೋಹಿತ್ಯ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದರು. ಇವರು ವಾಲಿ, ಕಂಸ ಹಾಗೂ ಇತರ ನಾಟಕೀಯ ವೇಷಗಳನ್ನು ಬಹು ಸೊಗಸಾಗಿ ನಿರ್ವಹಿಸುತ್ತಿದ್ದರು. ವರ್ಷದ ಬಹುತೇಕ ದಿನಗಳಲ್ಲಿ ಕಲ್ಲುಗುಂಡಿ ಶಾಲೆಯ ಆಟದ ಅಂಗಳವು ರಾತ್ರಿ ಯಕ್ಷಗಾನ ಬಯಲಾಟದ ಮೈದಾನವಾಗಿ ಪರಿವರ್ತನೆಗೊಳ್ಳುತ್ತಿತ್ತು. ತೆಂಕುತಿಟ್ಟಿನ ಧರ್ಮಸ್ಥಳ, ಕರ್ನಾಟಕ, ಸುರತ್ಕಲ್ ಮೇಳಗಳದ್ದಲ್ಲದೆ ಅಮೃತೇಶ್ವರಿ, ಇಡಗುಂಜಿ, ಬಚ್ಚಗಾರು ಮುಂತಾದ ಬಡಗಿನ ಮೇಳಗಳ ಬಯಲಾಟಗಳು ನಡೆಯುತ್ತಿದ್ದವು.
ಸಂಪಾಜೆಯ ನನ್ನ ಮನೆಯಿಂದ ಎರಡು ಕಿ.ಮೀ. ದೂರವಿದ್ದ ಕಲ್ಲುಗುಂಡಿ ಶಾಲೆಗೆ ನಾನು ಪ್ರತಿ ದಿನ ಕಾಲ್ನಡಿಗೆಯಲ್ಲೇ ಬಂದು ಹೋಗುತ್ತಿದ್ದೆ.ಬಯಲಾಟಗಳು ಇರುವ ದಿನಗಳಲ್ಲಿ ಶಾಲೆಯ ಮಕ್ಕಳಿಗೆ ನೆಲದ ಆಸನಕ್ಕೆ ಐವತ್ತು ಪೈಸೆಯ ಚೀಟಿ ಕೊಡಲಾಗುತ್ತಿತ್ತು. ನಾನು ಸಂಜೆ ಶಾಲೆ ಬಿಟ್ಟು ಮನೆಯಲ್ಲಿ ಹಾಜರಾತಿ ಕೊಟ್ಟು ‘ಆಟಕ್ಕೆ ಬರುತ್ತಿದ್ದೆ. ಬೆಳಗಾಗುವುದರೊಳಗೆ ನಿರ್ಜನ ದಾರಿಯಲ್ಲಿ ಒಬ್ಬನೇ ನಡೆದು ಮನೆ ಸೇರಿಕೊಳ್ಳುತ್ತಿದ್ದೆ. ಮಗ ಹೊಸ ಶಾಲೆ ಸೇರಿದಾಗಲಾದರೂ ಆಟ ನೋಡುವ ಅಭ್ಯಾಸ ಬಿಟ್ಟುಬಿಡಬಹುದೆಂಬ ನಿರೀಕ್ಷೆಯಲ್ಲಿದ್ದ ಅಪ್ಪ ನಾನು ಬದಲಾಗದಿರುವುದನ್ನು ಗಮನಿಸಿ ಮುಂದೆ ಆಕ್ಷೇಪಿಸುವುದನ್ನೇ ನಿಲ್ಲಿಸಿಬಿಟ್ಟರು.
ನಾನು ಏಳನೆಯ ತರಗತಿಯಲ್ಲಿದ್ದಾಗ ಶಾಲಾ ವಾರ್ಷಿಕೋತ್ಸವದ ದಿನಕ್ಕೆ ಮಕ್ಕಳ ಯಕ್ಷಗಾನ ಏರ್ಪಾಟಾಯಿತು. ನನ್ನ ಗೆಳೆಯ ಸುಬ್ರಾಯ ನಾನೂ ಒಂದು ವೇಷ ಮಾಡಬೇಕೆಂದು ಒತ್ತಾಯಿಸಿದಾಗ ಹೆದರಿಕೆಯಿಂದ ನಿರಾಕರಿಸಿಬಿಟ್ಟೆ. ಮರು ದಿನ ಮುಖ್ಯೋಪಾಧ್ಯಾಯರು ಶಾಲಾ ಮಕ್ಕಳ ಸಭೆ ಕರೆದು ವಾರ್ಷಿಕೋತ್ಸವದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುವುದೆಂದೂ, ಈ ಪೈಕಿ ಯಕ್ಷಗಾನ ಕೂಡ ಇದ್ದು ಆಸಕ್ತರು ಹೆಸರು ನೋಂದಾಯಿಸಬೇಕೆಂದೂ ಶಿಕ್ಷಕರಾದ ಮಹಾಲಿಂಗ ಭಟ್ಟರು ಮಾಹಿತಿ ನೀಡಿದರು. ಮರುದಿನ ಉತ್ಸಾಹಿ ಹುಡುಗರು ಹೆಸರು ನೀಡುವಾಗ ನನಗೆ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಇದಾದ ಎರಡು ದಿನಗಳಲ್ಲಿ ಸಂಜೆ ಬಣ್ಣದ ಮಾಲಿಂಗರ ಮಗ, ಸಹಪಾಠಿ ಸುಬ್ರಾಯನ ಅಣ್ಣ ಕೃಷ್ಣ ಪಾಟಾಳಿಯವರು ಶಾಲೆಗೆ ಆಗಮಿಸಿ ಮಹಾಲಿಂಗ ಮಾಸ್ತರರೊಂದಿಗೆ ಚರ್ಚಿಸಿ ‘ಪ್ರಹ್ಲಾದ ಚರಿತ್ರೆ’ ಪ್ರಸಂಗವನ್ನು ಆಯ್ಕೆ ಮಾಡಿದರು. ಆಗಲೂ ನಾನು ಹೆಸರು ಕೊಡಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನದ ಉಪಾಹಾರಕ್ಕಾಗಿ ಉಪ್ಪಿಟ್ಟು ಸಿದ್ಧಪಡಿಸುವ ಕೋಣೆಯಲ್ಲಿ ಮುಹೂರ್ತ ಮಾಡಿ ಅಭ್ಯಾಸಕ್ಕೆ ತೊಡಗಲಾಯಿತು. ನಾನು ಅತ್ಯಾಸಕ್ತಿಯಿಂದ ಕೃಷ್ಣಣ್ಣ ಆರಂಭಿಕ ಹೆಜ್ಜೆಗಳನ್ನು ಕಲಿಸುವುದನ್ನು ನೋಡುತ್ತಿದ್ದೆ. ಪ್ರಸಂಗದಲ್ಲಿ ಸುಬ್ರಾಯನಿಗೆ ದೇವೇಂದ್ರನ ಪಾತ್ರವಿತ್ತು. ಇವನಿಗೆ ಯಕ್ಷಗಾನ ಕಲೆಯೆಂಬುದು ರಕ್ತಗತವಾಗಿತ್ತಾದುದರಿಂದ ಸೊಗಸಾದ ಪ್ರವೇಶ ಹಾಗೂ ಧೀಂಗಿಣಗಳನ್ನು ಕಾಣಿಸುತ್ತಿದ್ದ.
ಮೊದಲ ಬಣ್ಣ
ಹೀಗೆ ಅಭ್ಯಾಸ ಪ್ರಗತಿಯಲ್ಲಿರುತ್ತಾ ಪ್ರಸಂಗದಲ್ಲಿ ದನುಜ ಗುರುವಿನ ಪಾತ್ರ ಮಾಡುತ್ತಿದ್ದ ಹುಡುಗ ತಾನು ವೇಷ ಮಾಡಲಾರನೆಂದು ನಿರಾಕರಿಸಿಬಿಟ್ಟ. ವೇಷ ಮಾಡುವ ಇಚ್ಛೆಯಿದ್ದರೂ ಮಾಡಲೋ ಬಿಡಲೋ ಎಂಬ ಹೊಯ್ದಾಟದಲ್ಲಿದ್ದ ನನ್ನ ಮನಸ್ಸನ್ನು ತಿಳಿದಿದ್ದ ಸುಬ್ರಾಯ ತೆರವಾದ ಜಾಗಕ್ಕೆ ನೇರವಾಗಿ ನನ್ನ ಹೆಸರನ್ನು ಶಿಫಾರಸು ಮಾಡಿಬಿಟ್ಟ. ಹೀಗಾಗಿ ಶಂಡ ಅಮರ್ಕರೆಂಬ ದೈತ್ಯ ಗುರುಗಳ ಪಾತ್ರ (ಇಬ್ಬರ ಬದಲಿಗೆ ಒಬ್ಬನೇ) ನನಗೆ ಪ್ರಾಸ್ತಾಪಿಸಿಯೇ ಬಿಟ್ಟರು. ವಾರ್ಷಿಕೋತ್ಸವದಂದು ನಾವು ಹುರುಪಿನಿಂದಲೇ ಪಾತ್ರಗಳನ್ನು ನಿರ್ವಹಿಸಿದೆವು. ಮಕ್ಕಳ ಬಯಲಾಟಕ್ಕೆ ಒಳ್ಳೆಯ ಪ್ರಶಂಸೆಗಳೂ ಬಂದವು. ಹೀಗೆ ಬಾಲ್ಯದಲ್ಲಿ ಓದಿದ ಸಚಿತ್ರ ಕತೆಗಳು ಸಜೀವವಾಗಿ ಕಾಣಿಸಿದರೆ ಹೇಗಿದ್ದೀತೆಂಬ ಬೆರಗು ಹೊಂದಿದ್ದ ಹುಡುಗನೊಬ್ಬ ಸ್ವತಃ ಒಂದು ಪಾತ್ರವಾಗಿ ಜೀವದಳೆದು ರಂಗಸ್ಥಳದಲ್ಲಿ ಕಾಣಿಸಿಕೊಂಡ ವಿಶಿಷ್ಟ ಘಟನೆಯೊಂದು ಸಂಭವಿಸಿಯೇ ಬಿಟ್ಟಿತು.
ಈ ದಿನಗಳಲ್ಲೇ ಪ್ರಸಿದ್ಧ ಹಾಸ್ಯಗಾರರಾಗಿ ಮೆರೆದ ನಯನಕುಮಾರರು ತಾವು ನಟನಾಗಿದ್ದ ಗುಬ್ಬಿ ವೀರಣ್ಣ ನಾಟಕ ಕಂಪೆನಿಯನ್ನು ಬಿಟ್ಟು ಸಂಪಾಜೆಯಿಂದಾಚೆ ಮಡಿಕೇರಿ ರಸ್ತೆಯಲ್ಲಿ ಸಿಗುವ ಕೊಯನಾಡು ಎಂಬಲ್ಲಿರುವ ತಮ್ಮ ಅಣ್ಣ ನಡೆಸುತ್ತಿದ್ದ ಉಪಾಹಾರ ಮಂದಿರಕ್ಕೆ ಸೇರಿಕೊಂಡರು. ಮುಂದೆ ದ.ಕ. ಸಂಪಾಜೆಯನ್ನು ಕೇಂದ್ರವಾಗಿರಿಸಿಕೊಂಡು ಶ್ರೀ ಚೌಡೇಶ್ವರೀ ಮೇಳ ಮಡಿಕೇರಿಯಲ್ಲಿ ನೆಲೆಸಿದ್ದ ಯಕ್ಷಗಾನ ಪ್ರೇಮಿಗಳೊಬ್ಬರ ಸಂಚಾಲಕತ್ವದಲ್ಲಿ ತಿರುಗಾಟಕ್ಕೆ ಹೊರಟಿತು. ಆಗ ಪ್ರತ್ಯೇಕ ರಂಗಸ್ಥಳ ಇರಲಿಲ್ಲ. ನೆಲದಲ್ಲೇ ಆಟ ಪ್ರದರ್ಶಿಸಲಾಗುತ್ತಿತ್ತು.ಐದರಿಂದ ಆರು ಪೆಟ್ರೋಮ್ಯಾಕ್ಸ್ (ಗ್ಯಾಸ್ ಲೈಟ್ ಎಂದೇ ಕರೆಯಲಾಗುತ್ತಿತ್ತು)ಗಳನ್ನು ಉರಿಸಲಾಗುತ್ತಿತ್ತು. ಇಡೀ ರಂಗಸ್ಥಳಕ್ಕೆ ಒಂದೇ ಮೈಕ್ ಇರುತ್ತಿತ್ತು. ಇದನ್ನು ರಂಗಸ್ಥಳದ ಮಧ್ಯದಲ್ಲಿ ನೇತುಹಾಕಲಾಗುತ್ತಿತ್ತು. ಈ ಮೇಳದಲ್ಲಿ ಪದ್ಯಾಣ ಗಣಪತಿ ಭಟ್ಟ, ದಾಸರಬೈಲು ಚನಿಯ ನಾಯ್ಕರು ಭಾಗವತರಾಗಿದ್ದರು. ಕಾಸರಗೋಡು ವೆಂಕಟರಮಣ, ಅಡೂರು ಮೋಹನ ಸರಳಾಯ, ಗಣೇಶ ಹಾಗೂ ಸುಂದರಣ್ಣ ಮೊದಲಾದವರು ಹಿಮ್ಮೇಳದಲ್ಲಿದ್ದರು. ಶೀನಪ್ಪ ರೈ, ಮಾಲಿಂಗ ರೈ, ಜಗಮ್ಮೋಹನ ರೈ, ಯುವರಾಜ ಜೈನ್, ತೊಡಿಕಾನ ಬಾಬು ಗೌಡ, ವಿಶ್ವನಾಥ ಗೌಡ, ದೇವಪ್ಪ ಫಾರೆಸ್ಟರ್, ಗೋಪಾಲ ಪೆರ್ಮುದೆ, ಕೊರಗಪ್ಪ ಮಣಿಯಾಣಿ ಮೊದಲಾದ ವೇಷಧಾರಿಗಳಿದ್ದರು. ನಯನಕುಮಾರರು ಇದೇ ಮೇಳಕ್ಕೆ ಹಾಸ್ಯ ಕಲಾವಿದರಾಗಿ ಸೇರ್ಪಡೆಗೊಂಡು ಮುಂದೆ ಮೇಳದ ವ್ಯವಸ್ಥಾಪಕರಾಗಿಯೂ ಮುಂದುವರಿದರು. ಮುಂದೆ ಈ ಮೇಳ ನಿಂತು ಹೋಯಿತು.
ಸದರಿ ಮೇಳದ ಯಾವುದೇ ಆಟವನ್ನು ನಾನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೀಗಿರುವ -ತೀವ್ರ ಸಾಂಸ್ಕೃತಿಕ ಆಸಕ್ತಿಯೊಂದಿಗೆ ನಾನು ಏಳನೆಯ ತರಗತಿಯನ್ನು ಮುಗಿಸಿದೆ. ಅಪ್ಪನನ್ನು ನಿರಾಶೆಗೊಳಿಸಕೂಡದೆಂಬ ದೃಢ ನಿಶ್ಚಯದೊಂದಿಗೆ ಪರಿಶ್ರಮವಹಿಸಿ ವ್ಯಾಸಂಗ ಮಾಡಿದ ನಾನು ಉನ್ನತ ಶ್ರೇಣಿಯನ್ನೇ ಪಡೆದುಕೊಂಡೆ. ನಂತರ ನನ್ನ ಮನೆಯಿಂದ ಕೂಗಳತೆಯಷ್ಟು ದೂರದ ಪ್ರೌಢ ಶಾಲೆಗೆ ಎಂಟನೆಯ ತರಗತಿಗೆ ಸೇರಿಕೊಂಡೆ. ಇಲ್ಲಿನ ಮುಖ್ಯೋಪಾಧ್ಯಾಯ ಶ್ರೀ ದಾಮೋದರ ಗೌಡರು ಸುಶ್ರಾವ್ಯ ಕಂಠದ ಭಾಗವತರೇ ಆಗಿದ್ದರು. ಪ್ರತಿ ದಿನ ಸಂಜೆ ಇವರು, ಕಾರಕೂನರಾಗಿದ್ದ ಗೋಪಾಲ ಹಾಗೂ ಕೆ. ಆರ್. ವಿಠಲ ಮಾಸ್ತರರು ಒಟ್ಟು ಸೇರಿ ಅರ್ಧ ಗಂಟೆ ಕೇಳಿ ಬಡಿಯುತ್ತಿದ್ದರು. ಇದನ್ನಂತೂ ನಾನು ಸದಾ ಆಲಿಸುತ್ತಿದ್ದೆ. ನಾರಾಯಣ ನಾವಡರೆಂಬವರು ನನಗೆ ಕನ್ನಡ ಹಾಗೂ ಹಿಂದಿ ಭಾಷೆಗಳನ್ನು ಕಲಿಸುತ್ತಿದ್ದು ಒಳ್ಳೆಯ ಅರ್ಥಧಾರಿಗಳೂ ಆಗಿದ್ದರು. ಆ ದಿನಗಳಲ್ಲಿ ನಾನು ಕತೆ, ಒಗಟು, ಗಾದೆಗಳನ್ನು ಹೇಳುವುದು ಮತ್ತು ಪ್ರಬಂಧ ರಚನೆ ಮಾಡುವುದರಲ್ಲಿ ಸದಾ ಮುಂದಿರುತ್ತಿದ್ದೆ. ಆಟ ನೋಡುವ ಪ್ರವೃತ್ತಿ ಈಗಲೂ ಮುಂದುವರಿಯಿತು.
ಆದರೆ ಅಚ್ಚರಿಯ ಸಂಗತಿಯೆಂದರೆ ನಾನು ಪ್ರಥಮ ದರ್ಜೆಯಲ್ಲಿ ಎಸೆಸೆಲ್ಸಿ ಮುಗಿಸಿ ಮುಂದೆ ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನಲ್ಲಿ ದ್ವಿತೀಯ ದರ್ಜೆಯಲ್ಲಿ -ಪಿ. ಯು.ಸಿ. ಮುಗಿಸುವ ಅವಧಿಯವರೆಗೆ ಒಂದು ವೇಷವನ್ನೂ ಧರಿಸಲಿಲ್ಲ. ಇಲ್ಲಿಗೇ ಓದು ನಿಲ್ಲಿಸಿದ ನಾನು ಮುಂದೆ 1986 ರ ನವೆಂಬರ್ 28 ರಂದು ರೇಷ್ಮೆ ಇಲಾಖೆಗೆ ಸೇರಿಕೊಂಡೆ. ಈ ನಡುವೆ ನಾನು ನನ್ನ ಅಣ್ಣನ ಅಂಗಡಿಯ ವ್ಯವಹಾರ ನೋಡಿಕೊಳ್ಳಲು ಸಹಾಯ ಮಾಡುತ್ತಿದ್ದೆ. ಈ ಅವಧಿಯಲ್ಲೇ ನಾನು ಮೊತ್ತಮೊದಲಿಗೆ ಹಿರಿಯ ಕಲಾವಿದರ ರಂಗ ವೇದಿಕೆಯಲ್ಲಿ ವೇಷ ಮಾಡಿದೆ.
ಕೊಡಗು ಸಂಪಾಜೆಯಿಂದ ಮಡಿಕೇರಿ ಮಾರ್ಗದಲ್ಲಿ ಎರಡು ಕಿ.ಮೀ. ಮುಂದುವರಿದರೆ ಕೊಯನಾಡು ಎಂಬ ಊರು ಸಿಗುವುದು. ಇಲ್ಲಿ ಶಿವಪ್ಪ ಆಚಾರ್ಯ ಎಂಬವರು ಕಮ್ಮಾರ ವೃತ್ತಿ ನಿರತರಾಗಿದ್ದರು. ಇವರು ಯಕ್ಷಗಾನದ ಪೂರ್ಣಾಂಗಗಳಲ್ಲಿ ಪರಿಪೂರ್ಣ ಸಿದ್ಧಿ ಇದ್ದವರಲ್ಲವಾದರೂ ಬಯಲಾಟಗಳಲ್ಲಿ ವೇಷ ಧರಿಸಿ ಮೆರೆಯುತ್ತಿದ್ದರು. ಇದರೊಂದಿಗೆ ಇವರು ಕಲ್ಲುಗುಂಡಿ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಸ್ಥಳೀಯ ಕಲಾವಿದರ ತಾಳಮದ್ದಲೆಯಲ್ಲಿ ಅರ್ಥ ಮಾತಾಡುತ್ತಿದ್ದರು. ತಕ್ಕ ಮಟ್ಟಿನ ಪುರಾಣ ಜ್ಞಾನ ಮತ್ತು ನಿಶ್ಚಿತವಾದ ಕೆಲವು ಪ್ರಸಂಗಗಳಲ್ಲಿ ಗಟ್ಟಿ ಹಿಡಿತ ಕೂಡ ಇತ್ತು. ಇವರ ಬಣ್ಣಗಾರಿಕೆ ಬಹಳ ಚೆಂದ. ಖಳ ಪಾತ್ರಗಳ ಬಗ್ಗೆಯೇ ಅಧಿಕ ಆಸಕ್ತಿಯಿದ್ದ ಇವರು ಕಂಸ, ಕೌಂಡ್ಲಿಕ, ಕಂಹಾಸುರ, ಶತ್ರುಪ್ರಸೂದನ, ಇತ್ಯಾದಿ ವೇಷಗಳನ್ನು ಸೊಗಸಿನಿಂದ ನಿರೂಪಿಸುತ್ತಿದ್ದರು. ಹಗಲಿಡೀ ಕೃಷಿಕರಿಗೆ ಅಗತ್ಯವಿರುವ ಕಬ್ಬಿಣ ಪರಿಕರಗಳನ್ನು ನಿರ್ಮಿಸುತ್ತಿದ್ದ ಈ ಕಡು ಪರಿಶ್ರಮಿ ಸಂಜೆಯಾಗುತ್ತಿದ್ದಂತೆಯೇ ಒಂದಲ್ಲದಿದ್ದರೆ ಇನ್ನೊಂದು ಬಯಲಾಟದಲ್ಲಿ ವೇಷ ಮಾಡಲು ಹೊರಟು ಬಿಡುತ್ತಿದ್ದರು. ರಾತ್ರಿ ಪೂರ್ತಿ ನಿದ್ದೆಗೆಟ್ಟು ಹಗಲು ತನ್ನ ವೃತ್ತಿಯಲ್ಲಿ ತೊಡಗಿಕೊಂಡು ಬಿಡುತ್ತಿದ್ದರು.
ಕೊಯನಾಡಿನಲ್ಲಿ ಯಕ್ಷಗಾನದ ದಟ್ಟ ವಾತಾವರಣ ಸೃಷ್ಟಿಯಾಗುವಲ್ಲಿ ಇವರ ಪಾತ್ರ ಹಿರಿದಾದುದಾಗಿತ್ತು. ಇಲ್ಲಿ ರೂಪುಗೊಂಡಿದ್ದ ಜೈ ಹಿಂದ್ ಯುವಕ ಮಂಡಲವು ತುಂಬಾ ಕ್ರಿಯಾಶೀಲ ಸಂಸ್ಥೆಯಾಗಿದ್ದು, ಯುವಜನೋತ್ಸವಗಳಲ್ಲಿ ಏರ್ಪಡಿಸಲಾಗುವ -ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದೇ ತೀರುತ್ತಿತ್ತು. ಹೀಗಿರುತ್ತಾ ಕೊಯನಾಡಿನ ತುದಿಯಲ್ಲಿದ್ದ ಹಮೀದ್ ಎಂಬ ಉತ್ಸಾಹಿ ಯುವಕ ಶಿವಪ್ಪ ಆಚಾರ್ಯರ ಮೇಲ್ವಿಚಾರಣೆಯಲ್ಲಿ ಒಂದು ಯಕ್ಷಗಾನ ತಂಡ ಕಟ್ಟುವುದೆಂದೂ, ಯುವಜನ ಮೇಳದಲ್ಲಿ ಆಯೋಜಿಸಲಾಗುವ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದೂ ತೀರ್ಮಾನಿಸಿ ಕಾರ್ಯೋನ್ಮುಖರಾದರು. ಕೊಯನಾಡಿನ ಗಣಪತಿ ಗುಡಿಯ ಪಕ್ಕದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಶಿವಪ್ಪರಿಂದ ತರಬೇತು ಪಡೆದ ಹಾಗೂ ಹೊರಗಿನಿಂದ ಆಹ್ವಾನಿತ ಕಲಾವಿದರಿಂದ ಬಯಲಾಟ ನಡೆಯಲಾರಂಭಿಸಿತು. ಬೆಳಗಿನವರೆಗೂ ಪ್ರೇಕ್ಷಕರು ಕಿಕ್ಕಿರಿದು ನೆರೆಯುತ್ತಿದ್ದರು. ನಾನೂ ಬಯಲಾಟ ನೋಡಲು ಹೋಗುತ್ತಿದ್ದೆ. ಅವಕಾಶ ಸಿಕ್ಕಿದರೆ ಒಮ್ಮೆ ರಂಗಸ್ಥಳ ಹತ್ತಿಯೇ ಬಿಡಬಹುದಿತ್ತು ಎಂಬ ಸಣ್ಣ ಆಶೆ ಆಟ ನೋಡುವಾಗ ನನ್ನಲ್ಲಿ ಅಂಕುರಿಸುತ್ತಿತ್ತು. ಈ ಹಮೀದ್ ಎಂಬ ಯುವಕ ರಾವಣ, ಸಂಶಪ್ತಕ, ಶುಂಭ, ಶತ್ರಪ್ರಸೂದನ, ಶೂರಪದ್ಮ ಮುಂತಾದ ಬಣ್ಣದ ವೇಷಗಳನ್ನು ಮಾಡುವುದರಲ್ಲಿ ಸೈ ಎನಿಸಿದ್ದಷ್ಟೇ ಅಲ್ಲದೆ ರಕ್ತಜಂಘ, ಲವಣಾಸುರ, ಕಾಲಜಂಘ, ಕರಾಳನೇತ್ರೆ, ವೃತಜ್ವಾಲೆ, ಭೀಮ, ಬಲರಾಮ, ಖರ, ದೂಷಣ ಮೊದಲಾದ ವೇಷಗಳನ್ನು ಮಾಡುವುದರಲ್ಲಿ ಪ್ರವೀಣರಿದ್ದರು.
ಒಮ್ಮೆ ಸುಳ್ಯದ ಪ್ರಕಾಶ ಚಿತ್ರಮಂದಿರದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ‘ಅಕ್ಷಯಾಂಬರ ವಿಲಾಸ’ (ದೌಪದಿ ವಸ್ತಾಪಹಾರ) ಎಂಬ ಪ್ರಸಂಗದ ಟಿಕೆಟಿನ ಬಯಲಾಟ. ಕೋಳ್ಯೂರು ರಾಮಚಂದ್ರ ರಾವ್ ಅವರು ದ್ರೌಪದಿ, ಅರುವ ಕೊರಗಪ್ಪ ಶೆಟ್ಟರ ದುಶ್ಯಾಸನ, ಸೂರಿಕುಮೇರು ಗೋವಿಂದ ಭಟ್ಟರ ಕೌರವ, ಮಿಜಾರು ಅಣ್ಣಪ್ಪರ ಪ್ರಾತಿಕಾಮಿ, ಸಿದ್ಧ್ದಕಟ್ಟೆ ವಿಶ್ವನಾಥ ಶೆಟ್ಟಿಯವರ ಶಕುನಿ ಪಾತ್ರಗಳ ಜೊತೆಗೆ ಹಮೀದರ ಭೀಮ. ಕೌರವಾದ್ಯರನ್ನು ಘಾತಿಸುವ ಪ್ರತಿಜ್ಞೆ ಮಾಡುವ ಸಂದರ್ಭದಲ್ಲಿ ಭೀಮ ತೋರಿದ ರೌದ್ರ ಭಾವವನ್ನು, ಕೌರವ ಪಾತ್ರಧಾರಿ ಗೋವಿಂದ ಭಟ್ಟರು ಮೆಚ್ಚಿ ರಂಗ ಸ್ಥಳದಲ್ಲೇ ‘ಭಳಿರೇ!. ನನ್ನ ವಿರೋಧಿಯಾದರೇನಂತೆ? ಗಂಡಸು ಎಂದರೆ ನಮ್ಮ ಭೀಮನಂತೆ ಇರಬೇಕು!’ ಎಂದು ಮೆಚ್ಚಿಕೊಂಡಿದ್ದರು.
ಇಂತಹ ಹಮೀದರಿಗೆ ಕೊಯನಾಡಿನಲ್ಲಿ ಬಾಡಿಗೆ ನೀಡಿ ವ್ಯಾಪಾರ ಮಾಡುವ ದಿನಸಿ ಅಂಗಡಿಯಿತ್ತು. ಇಳಿಹೊತ್ತು ಅಂಗಡಿ ಮುಚ್ಚಿದ ನಂತರ ಇದೇ ತಾಳಮದ್ದಳೆ ತಾಲೀಮಿನ ಕೋಣೆಯಾಗಿ ಬಿಡುತ್ತಿತ್ತು. ಬಯಲಾಟ ಪ್ರಸಂಗಗಳ ಅಭ್ಯಾಸ ಕೊಯನಾಡಿನ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿತ್ತು. ಹೀಗೆ ಕೊಯನಾಡಿನ ಹುಡುಗರು ಯಕ್ಷಗಾನ ಕಲಿಯುತ್ತಾ ಮುಂದೆ ಯುವಜನ ಮೇಳದಲ್ಲಿ ಪ್ರಥಮ ಬಹುಮಾನ ಪಡೆದು ಬಹು ದಿನಗಳ ಕನಸೊಂದನ್ನು ಈಡೇರಿಸಿಕೊಂಡುಬಿಟ್ಟರು. ಈ ನಡುವೆ ಶಾಲಾ ವಾರ್ಷಿಕೋತ್ಸವಕ್ಕೆ ಹುಡುಗರು ಶಿವಪ್ಪಣ್ಣನ ನೇತೃತ್ವದಲ್ಲಿ ರತಿ ಕಲ್ಯಾಣ ಪ್ರಸಂಗ ಆಡಲು ಅಭ್ಯಾಸ ಪ್ರಾರಂಭಿಸುವಾಗ ನಾನೂ ನೋಡಲು ಹೋಗುತ್ತಿದ್ದೆ. ಆಗ ಶಿವಪ್ಪಣ್ಣ ನಾನು ಒಪ್ಪುವುದಾದರೆ ಈ ಪ್ರಸಂಗದಲ್ಲಿ ಅರ್ಜುನನ ವೇಷ ಮಾಡಬಹುದು ಎಂದು ಆಹ್ವಾನ ನೀಡಿದರು. ಗೆಳೆಯ ಹುಡುಗರ ಒತ್ತಾಯವೂ ಹೆಚ್ಚಿತು.ಅರೆಮನಸ್ಸಿನಿಂದ ಒಪ್ಪಿಗೆ ಕೊಟ್ಟು ಕೆಲವು ದಿನಗಳ ಅಭ್ಯಾಸ ತರಗತಿಗಳಿಗೂ ಹಾಜರಾದೆ. ಆದರೆ ಪ್ರದರ್ಶನಕ್ಕೆ ವಾರ ಉಳಿದಿರುವಾಗ ಭಯ ಹೆಚ್ಚಾಗಿ ನಾನು ವೇಷವನ್ನು ನಿರಾಕರಿಸಿಬಿಟ್ಟೆ. ಹೀಗಾಗಿ ಈ ವೇಷವನ್ನು ಇನ್ನೊಬ್ಬರು ಮಾಡುವಂತಾಯಿತು.
ಜಾಬಾಲಿಯಾಗಿ
1984ರಲ್ಲಿ ಶಿವರಾತ್ರಿ ಉತ್ಸವಕ್ಕೆ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದ ಬಯಲಾಟವೆಂದು ತೀರ್ಮಾನವಾಯಿತು. ಗಣಪತಿ ಕ್ಷೇತ್ರವಾದುದರಿಂದ ಶಿವ ಸಂಬಂಧದ ಪ್ರಸಂಗಗಳನ್ನು ಆಡುತ್ತಿರಲಿಲ್ಲವೆಂದು ಪ್ರತೀತಿಯಿದ್ದುದರಿಂದ ಬೇರೆ ಪ್ರಸಂಗಗಳನ್ನೇ ಆರಿಸುತ್ತಿದ್ದರೆಂದು ನನ್ನ ನೆನಪು. ಈ ಬಾರಿ ನಾನು ಜಾಬಾಲಿ ಮಹರ್ಷಿಯ ವೇಷ ಮಾಡಬೇಕೆಂದೂ, ಚೆಂದದ ಸ್ತ್ರೀ ವೇಷ ಮಾಡುತ್ತಿದ್ದು, ಕಟೀಲು ಮೇಳದಲ್ಲಿ ಒಂದು ವರ್ಷದ ತಿರುಗಾಟ ಮಾಡಿದ್ದ ಅನುಭವಿ ಜನಾರ್ದನ ಆಚಾರ್ಯರು ನಂದಿನಿಯೆಂದೂ ತೀರ್ಮಾನವಾಯಿತು.ಸತತ ಅಭ್ಯಾಸದ ನಂತರ ಆಟ ನಡೆಯಿತು.ನನ್ನ ಜಾಬಾಲಿ ತೆರೆಯೆತ್ತಲ್ಪಟ್ಟು ಪ್ರಕಟಗೊಂಡ ತಕ್ಷಣ ಒಬ್ಬರು ವಯೋವೃದ್ಧೆ ಸ್ತ್ರೀ ರಂಗಸ್ಥಳಕ್ಕೆ ಬಂದು ವೇಷದ ಕಾಲುಮುಟ್ಟಿ ನಮಸ್ಕರಿಸಿ ಎಂಟಾಣೆ ಪಾವಲಿಯೊಂದನ್ನು ಹಣೆಗೆ ಅಂಟಿಸಿ ಮರಳಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತುಕೊಂಡರು!
ಈ ಅನಿರೀಕ್ಷಿತ ಘಟನೆಯಿಂದ ನಾನು ಗಲಿಬಿಲಿಗೆ ಒಳಗಾದೆ. ಆದರೆ ನೆರೆದವರೆಲ್ಲರೂ ಕರತಾಡನದಿಂದ ಇದನ್ನು ಅಂಗೀಕರಿಸಿಬಿಟ್ಟರು. ಅನುಭವಿ ಜನಾರ್ದನಣ್ಣನ ನಂದಿನಿ ನನ್ನ ಜಾಬಾಲಿಯನ್ನು ಆಧರಿಸಿ ಮುಂದೊಕ್ಕೊಯ್ದುದರಿಂದ ನನ್ನ ವೇಷ ಪ್ರೇಕ್ಷಕರಿಗೆ ಮುದ ನೀಡಿತು. ನನ್ನ ಹೈಸ್ಕೂಲ್ ಅಧ್ಯಾಪಕ ಶ್ರೀ ಕೆ. ಆರ್. ವಿಠಲರಂತೂ ಚೌಕಿಗೇ ಬಂದು ಹಾರ್ದಿಕವಾಗಿ ಅಭಿನಂದಿಸಿದರು. ಇಂತಹ ಸುಗಮ ಆರಂಭ ಕಂಡ ನನ್ನ ಬಯಲಾಟದ ವೇಷ ಮುಂದೆ ನನಗೆ ಬಹಳಷ್ಟು ವೇದಿಕೆಗಳನ್ನು ಒದಗಿಸಿಕೊಟ್ಟಿತು. ಕೊಡಗಿನ ಮಡಿಕೇರಿ, ಗೋಣಿಕೊಪ್ಪಲು, ವಿರಾಜಪೇಟೆ, ಮದೆನಾಡುಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಾನು ಅನೇಕ ವೇಷಗಳನ್ನು ಧರಿಸಿದೆ. ದ್ರೋಣ, ದಕ್ಷ, ಸುಪಾರ್ಶ, ಸುಗ್ರೀವ, ಕಾಲನೇಮಿ, ಧರ್ಮರಾಯ, ಶಲ್ಯ, ಸಂಜಯ, ಅಕ್ರೂರ, ಈಶ್ವರ, ಬ್ರಹ್ಮ, ಭೀಷ್ಮ ಮೊದಲಾದ ಪಾತ್ರಗಳನ್ನು ನಿರ್ವಹಿಸಿದೆ. ಸುಳ್ಯದಲ್ಲಿದ್ದುಕೊಂಡು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೋಡ್ಕ ಗಣಪತಿ ಭಟ್ಟ ಹಾಗೂ ಶೇಖರ ಮಣಿಯಾಣಿಯರು ಸಂಘಟಿಸುತ್ತಿದ್ದ ಆಟಗಳಲ್ಲಿ ನನಗೆ ತುಂಬಾ ಅವಕಾಶಗಳು ದೊರೆತವು. ಇಲ್ಲಿಂದ ನನ್ನ ಯಕ್ಷ ದಾರಿಯ ಪಯಣ ನಿಜವಾದ ಅರ್ಥದಲ್ಲಿ ತೆರೆದುಕೊಂಡಿತು.