ಹಿಂದೂ -ಮುಸ್ಲಿಮ್ ಏಕತೆಯಲ್ಲಿದೆ ಭಾರತದ ಜೀವ!

ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ. ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ‘ಪ್ರಪಾತ’, ‘ನನ್ನ ನೆಲ ನನ್ನ ಜನ’, ‘ಕಪ್ಪು ನ್ಯಾಯ’, ‘ದಡ’, ‘ನೆಲೆ’, ‘ಗರ’, ‘ಮಹಾನದಿ’, ‘ಮಾಯಾನಗರಿಯಲ್ಲಿ ಮಾಯಾಶಿಲ್ಪಿ’, ‘ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು’, ‘ಸವೆಯದ ಹಾದಿ’, ‘ಎದೆಯಾಳ’, ‘ಬೆಂಕಿ ಮತ್ತು ಬೆಳಕು’ ಇವರ ಪ್ರಮುಖ ಕೃತಿಗಳು. ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. ರೂಪಲೇಖ, ಲಂಕೇಶ್ ಪತ್ರಿಕೆ, ನಮ್ಮನಾಡು, ಅಭಿಮಾನಿ, ಅರಗಿಣಿ, ಈ ಸಂಜೆ, ಜಾಣಗೆರೆ ಪತ್ರಿಕೆಗಳಲ್ಲಿ ಸಹ ಸಂಪಾದಕರು, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Update: 2024-12-27 15:34 GMT

ಒಂದು ದೇಶವನ್ನು ನಾಶಗೊಳಿಸಬೇಕಾದರೆ

ಆ ದೇಶದ ಜನರು ಧರ್ಮದ ಹೆಸರಲ್ಲಿ

ಪರಸ್ಪರ ಹೊಡೆದಾಡುವಂತೆ ಮಾಡಬೇಕು

ಅಂತಹ ದೇಶ ತನ್ನಿಂತಾನೇ ನಾಶ ಹೊಂದುತ್ತದೆ!

- ಲಿಯೋ ಟಾಲ್ಸ್ಟಾಯ್

ಭಾರತ ಶತಶತಮಾನಗಳಿಂದಲೂ ಸಾಮರಸ್ಯ ಭಾವವನ್ನು ತನ್ನಾತ್ಮದೊಡನೆ ಮೇಳೈಸಿಕೊಂಡು ಬಂದಿರುವ ದೇಶ. ಹಿಂದೂ ಧರ್ಮವಲ್ಲದೆ ಬೌದ್ಧ, ಜೈನ, ಸಿಖ್, ಪಾರ್ಸಿ ಇತ್ಯಾದಿ ಧರ್ಮಗಳಿಗೆ ಜನ್ಮ ನೀಡಿದ ದೇಶವೂ ಆಗಿದೆ. ಅಖಂಡ ಭಾರತವನ್ನು ಮೊಗಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ನೂರಾರು ವರ್ಷ ಕಾಲ ಆಳಿ ಹೋಗಿದ್ದಾರೆ. ಬೌದ್ಧರು ಕೂಡಾ ಭಾರತವನ್ನು ಶಾಂತಿ-ಸಹನೆ-ಸಮೃದ್ಧಿಯಿಂದ ಆಳಿದ್ದುಂಟು. ಎಲ್ಲರೂ ದೇಶ ಮತ್ತು ಜನತೆಯ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸಿದರೇ ಹೊರತಾಗಿ ಜಾತಿ-ಮತ-ಪಂಗಡ-ಪ್ರದೇಶಗಳ ಹೆಸರಲ್ಲಿ ಒಡೆದಾಳುವ ದುಷ್ಟ ಹಾದಿಯನ್ನು ಹಿಡಿದಿದ್ದು ಅಪರೂಪವೆಂಬುದನ್ನು ಇತಿಹಾಸ ನಮಗೆ ತಿಳಿಹೇಳುತ್ತದೆ.

ಆದರೆ, ದೇಶಕ್ಕೆ ವಲಸೆ ಬಂದು ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದ ಆರ್ಯರು ಕಟ್ಟಕಡೆಯ ಬೌದ್ಧ ದೊರೆಯನ್ನು ರಾಜಸ್ಥಾನದಲ್ಲೇ ಹತ್ಯೆಗೈದು ಆಡಳಿತವನ್ನು ಕೈವಶ ಮಾಡಿಕೊಂಡಂದಿನಿಂದ ದೇಶವು ಅಧಃಪತನದತ್ತ ಸಾಗಿದ್ದನ್ನು ಕಂಡಿದ್ದೇವೆ. ಅವರಿಂದಲೇ ರಚಿತವಾದ ‘ಮನುಸ್ಮತಿ’ಯನ್ನು ಸಂವಿಧಾನವಾಗಿ ಮಾಡಿಕೊಂಡು ಹಿಂದೂಗಳನ್ನು ಹತೋಟಿಗೆ ತೆಗೆದುಕೊಂಡು ನಡೆಸಿದ ದುರುಳ ಚರಿತ್ರೆ ನಮ್ಮ ಜೊತೆಗಿದೆ. ‘ಬ್ರಾಹ್ಮಣರು ಶ್ರೇಷ್ಠರು’ ಎಂದು ಘೋಷಿಸಿದ್ದಲ್ಲದೆ, ಆಡಳಿತಗಾರರನ್ನು ‘ಕ್ಷತ್ರಿಯರು’, ವ್ಯಾಪಾರಿಗಳು ‘ವೈಶ್ಯರು’, ಶ್ರಮದ ದುಡಿಮೆಗಾರರನ್ನು ‘ಶೂದ್ರರು’ ಎಂಬ ಶ್ರೇಣೀಕೃತ ವರ್ಣಭೇದವನ್ನು ಸೃಷ್ಟಿಸಿ ತಾವು ಶ್ರೇಷ್ಠತೆಯ ವ್ಯಸನದಲ್ಲಿ ಎಲ್ಲ ಸುಖ-ಸಂತೋಷವನ್ನನುಭವಿಸತೊಡಗಿದರು.

ಅದಾದ ಮೇಲೆಯೂ ಶ್ರೇಷ್ಠತೆಯ ವ್ಯಸನಿಗಳು ಶೂದ್ರರಲ್ಲಿ ಬಂಡೆದ್ದವರನ್ನು ‘ಪಂಚಮರು’ ಹೆಸರಲ್ಲಿ ದೂರವಿಟ್ಟರು. ಅವರೇ ‘ಅಸ್ಪಶ್ಯರು’ ಎನಿಸಿಕೊಂಡರು. ಶ್ರೇಷ್ಠರೆಂಬ ವ್ಯಸನಿಗಳ ಕಟ್ಟಪ್ಪಣೆಯನ್ನು ಒಪ್ಪಿಕೊಂಡವರು ಶೂದ್ರ ಗುಲಾಮರಾದರು. ಅವರ ವರ್ಣಭೇದ ನೀತಿಯನ್ನು ಧಿಕ್ಕರಿಸಿ ನಿಂತ ‘ಸ್ವಾಭಿಮಾನಿಗಳು’ ಅಸ್ಪಶ್ಯರೆನಿಸಿಕೊಂಡು ಊರಾಚೆ ಕಾಡುಮೇಡಲ್ಲಿ ಜೀವಿಸಬೇಕಾಯಿತು.

ಅಲ್ಲಿಂದ ನೂರಾರು ವರ್ಷ ಕಾಲ ಮೊಘಲರಿಂದ ಹಿಡಿದು ಬ್ರಿಟಿಷರವರೆಗೆ ಭಾರತವನ್ನು ಅನೇಕರು ಆಳಿದ್ದಾರೆ. ಅವರೆಲ್ಲರ ಆಡಳಿತದಲ್ಲೂ ಈ ಶ್ರೇಷ್ಠ ವ್ಯಸನಿಗಳು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡು ಸುಖೀ ಜೀವನವನ್ನನುಭವಿಸಿರುವುದು ವಿಪರ್ಯಾಸದ ಸಂಗತಿ. ಮೊಘಲರು ಅಥವಾ ಬ್ರಿಟಿಷರ ಜೊತೆಗೆ ಉತ್ತಮ ಸಂಬಂಧವಿರಿಸಿಕೊಂಡು ತಾವು ‘ಶ್ರೇಷ್ಠರು, ಬುದ್ಧಿವಂತರು, ಚಾಣಕ್ಯರು’ ಎಂಬ ಪಟ್ಟವನ್ನು ಪಡೆದುಕೊಂಡು ಆಳುವ ದೊರೆಗಳನ್ನೂ ‘ಆಳಿರುವ’ ವಂಶದವರೆಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ.

ಭಾರತವು ಎರಡು ಹೋಳಾಗಿ ಸ್ವತಂತ್ರಗೊಂಡು ಈಗಾಗಲೇ ೭೫ ವರ್ಷಗಳನ್ನು ಸವೆಸಿದ್ದೇವೆ. ದೇಶವೆಲ್ಲಾ ಸರಿಸುಮಾರು ಒಂದು ಶತಮಾನ ಕಾಲ ಸ್ವಾತಂತ್ರ್ಯ ಚಳವಳಿ ಮಾಡುತ್ತಿದ್ದಾಗ ಇದೇ ಮೂಲಭೂತವಾದಿ ಶ್ರೇಷ್ಠ ವ್ಯಸನಿಗಳು ಬ್ರಿಟಿಷರ ಜೊತೆಗಿದ್ದುಕೊಂಡು ‘ಅಸ್ಪಶ್ಯರು-ಶೂದ್ರ ಇತ್ಯಾದಿಗಳಿಗೆ ಸ್ವಾತಂತ್ರ್ಯ ನೀಡುವುದಾದರೆ ಅಂತಹ ಸ್ವಾತಂತ್ರ್ಯವೇ ನಮಗೆ ಬೇಡ’ವೆಂದು ಒತ್ತಾಯ ಮಾಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ತಮ್ಮದೇ ಆದ ‘ಹಿಂದೂ ಮಹಾಸಭಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಮುಂತಾದವನ್ನು ಕಟ್ಟಿಕೊಂಡು ದೇಶವು ಗುಲಾಮ ಮುಕ್ತವಾಗುವುದರ ವಿರುದ್ಧ ತಂತ್ರ-ಕುತಂತ್ರ ಮಾಡಿಕೊಂಡಿದ್ದರೆಂಬುದನ್ನು ಮರೆಯಲಾಗದು.

ಇಂದು ಅದೇ ಸಂಘಪರಿವಾರಿಗಳು ದೇಶದಲ್ಲಿ ಬೃಹತ್ತಾಗಿ ಬೆಳೆದುಕೊಂಡಿದ್ದಾರೆ. ದೇಶದ ಜನರಲ್ಲಿ ಹಿಂದೂ-ಮುಸ್ಲಿಮ್ ಭೇದದ ವಿಷ ಬೀಜವನ್ನು ಬಿತ್ತಿ ಬೆಳೆ ತೆಗೆಯುತ್ತಿದ್ದಾರೆ. ‘ಮುಸ್ಲಿಮರನ್ನು ದ್ವೇಷಿಸಬೇಕು’ ಎಂದು ನೇರವಾಗಿ ಕರೆ ಕೊಡುತ್ತಿದ್ದಾರೆ. ‘ಹಿಂದೂ-ಹಿಂದುಸ್ಥಾನ-ಹಿಂದಿ’ ನಮ್ಮ ಏಕೈಕ ಗುರಿಯಾಗಬೇಕು ಎಂದು ಉಪದೇಶ ಬಿತ್ತುವ ಮೂಲಕ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ‘ಭಾರತೀಯ ಜನತಾ ಪಕ್ಷ’ವೆಂಬ ರಾಜಕೀಯ ಸಂಘಟನೆಯನ್ನು ಬೆಂಬಲಿಸುತ್ತಿದ್ದಾರೆ. ಆ ಪಕ್ಷವೂ ಕೂಡಾ ‘ಹಿಂದೂ ಧರ್ಮ’ದ ಅಮಲೇರಿಸಿಕೊಂಡು ದೇಶವನ್ನು ಧರ್ಮಾಧಾರಿತವಾಗಿ ರೂಪಿಸಲು ಹೊರಟಿದೆ. ಆ ಮೂಲಕ ದೇಶವನ್ನು ಮತ್ತೆ ಹೋಳು ಮಾಡುವ ಅಪಾಯಕಾರಿ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ದೇಶದ ಪ್ರಧಾನಿಯಾದವರೇ ಬಹಿರಂಗವಾಗಿ ‘ಮುಸ್ಲಿಮ್ ದ್ವೇಷ’ ಕಾರಿಕೊಳ್ಳುವ ಹಂತಕ್ಕೆ ಹೋಗಿರುವಾಗ ಪಕ್ಷದ ಇತರ ಮುಖಂಡರು, ಕಾರ್ಯಕರ್ತರು ಮುಂತಾದವರು ಹುಚ್ಚರ ರೀತಿಯಲ್ಲಿ ಮಾತಾಡುವ, ಮುಸ್ಲಿಮ್ ಸಮುದಾಯ ಮತ್ತು ಮಸೀದಿಗಳ ಮೇಲೆ ದಾಳಿ ಮಾಡುವ ವಿಪರೀತಕ್ಕೆ ಹೋಗಿದ್ದಾರೆ.

 

ಇಲ್ಲಿಗೆ ಮೂರು ದಶಕಗಳ ಹಿಂದೆ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಸಂತಾನವೇ ಇಂದು ದೇಶವನ್ನಾಳುತ್ತಿದೆ. ತಮ್ಮದೇ ಆಡಳಿತ ಬರುವಂತೆ ದೇಶದ ಜನರಲ್ಲಿ ಮಂಕುಬೂದಿ ಎರಚಿ, ಕೆಲವಾರು ಆಮಿಷಗಳ ಕನ್ನಡಿಯನ್ನು ಮುಂದಿಟ್ಟು, ಅದೇ ಜಾಗದಲ್ಲಿ ರಾಮಮಂದಿರವನ್ನು ತರಾತುರಿಯಲ್ಲಿ ಕಟ್ಟಿ ಅದರ ಉದ್ಘಾಟನೆಯನ್ನು ಸ್ವತಃ ಪ್ರಧಾನಿಯೇ ಮಾಡಿ ಜೈಸಿಕೊಂಡಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಬಾಬರಿ ಮಸೀದಿ ಧ್ವಂಸದ ಮೂಲಕ ಮುಸ್ಲಿಮ್ ಸಮುದಾಯದಲ್ಲಿ ಅಸಮಾಧಾನ ಸೃಷ್ಟಿಸಿದ್ದವರೇ ಈಗ ಹಿಂದೂಗಳಲ್ಲಿ ಮುಸ್ಲಿಮ್ ದ್ವೇಷದ ವಿಷವನ್ನು ಸುರಿದು ಪರಸ್ಪರ ದ್ವೇಷಾಸೂಯೆಯ ವಾತಾವರಣವನ್ನು ಸೃಷ್ಟಿಸಿಬಿಟ್ಟಿರುವುದು ವಿಪರ್ಯಾಸವಾಗಿದೆ. ಹಿಂದೂ-ಮುಸ್ಲಿಮ್ ದ್ವೇಷದ ದಳ್ಳುರಿಯಲ್ಲಿ ರಾಜಕೀಯ ಲಾಭ ಪಡೆದ ಪಕ್ಷವು ೧೦ ವರ್ಷ ಕಾಲ ದೇಶವನ್ನಾಳುತ್ತಾ ಅಭಿವೃದ್ಧಿಯ ಬದಲಿಗೆ ದ್ವೇಷಾಸೂಯೆಗಳು ಉಲ್ಬಣವಾಗಲು ತಮ್ಮೆಲ್ಲಾ ಶ್ರಮಧಾರೆ ಎರೆದು ಮೆರೆಯುತ್ತಿರುವುದು ದೇಶದ ದೌರ್ಭಾಗ್ಯವಾಗಿದೆ. ೩ನೇ ಬಾರಿಗೂ ಅಂತಹದೇ ಶಕ್ತಿಗಳಿಗೆ ಅಧಿಕಾರ ನೀಡಲು ಜನತೆ ಹಿಂದೆಮುಂದೆ ನೋಡಿ ಬಹುಮತ ನೀಡದೆ ಹೋದಾಗಲೂ ಇತರ ಪಕ್ಷಗಳ ಬೆಂಬಲ ಪಡೆದುಕೊಂಡು ಅವರೇ ದೇಶಾಡಳಿತ ನಡೆಸುತ್ತಿರುವುದು ಚೋದ್ಯವಾಗಿದೆ.

‘ದೇಶದಲ್ಲಿ ಏಕ ಚುನಾವಣೆ, ಏಕ ಧರ್ಮ, ಏಕ ಕಾನೂನು, ಏಕ ಭಾಷೆ-ಸಂಸ್ಕೃತಿ’ ಎಂಬ ಘೋಷಣೆ ಮಾಡಿಕೊಂಡು ಅದರ ಸಾಕಾರಕ್ಕೆ ಸತತ ಪ್ರಯತ್ನ ನಡೆಸಿರುವುದನ್ನು ಜನತೆ ದಿಗ್ಮೂಢರಾಗಿ ನೋಡುತ್ತಿದ್ದಾರೆ. ವಿರೋಧ ಪಕ್ಷಗಳವರನ್ನು ಲೆಕ್ಕಕ್ಕೇ ಇಡದೆ ಹೊರಟಿರುವ ದಾರ್ಷ್ಟ್ಯರು ಪ್ರತಿರೋಧ ತೋರಿದವರನ್ನ್ನು ಜೈಲಿಗಟ್ಟುವ ನೀಚತನವನ್ನೂ ಎಗ್ಗಿಲ್ಲದೆ ಮಾಡುತ್ತಿದ್ದಾರೆ. ತಮ್ಮ ಆಲೋಚನೆಗಳ ಕಾರ್ಯಗತಕ್ಕೆ ಅಡ್ಡಿಯಾಗಿರುವ ‘ಸಂವಿಧಾನ’ವನ್ನೇ ಬದಲಾಯಿಸುವ ಮಾತನ್ನೂ ಆಗಾಗ ಗಾಳಿಯಲ್ಲಿ ತೇಲಿ ಬಿಡುತ್ತಲಿದ್ದಾರೆ. ಅದರ ಜೊತೆಗೆ ಮುಸ್ಲಿಮರನ್ನು ಹೆದರಿಸಿ-ಬೆದರಿಸುವ ತಂತ್ರಗಳನ್ನೂ ಹೂಡುತ್ತಲಿದ್ದಾರೆ. ‘ನಿಮ್ಮ ಮತಗಳೇ ಬೇಡ’ವೆನ್ನುತ್ತಿದ್ದಾರೆ. ‘ದೇಶ ಬಿಟ್ಟು ಹೋಗಿ’ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಮಾತೆತ್ತಿದರೆ ನೆರೆಯ ಪಾಕಿಸ್ತಾನದ ವಿರುದ್ಧ ಕೆಂಡ ಕಾರುತ್ತಲಿದ್ದಾರೆ. ಆ ಮೂಲಕ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುತ್ತಿದ್ದಾರೆ. ಸದ್ಯಕ್ಕೆ ಅದು ರಾಜಕೀಯ ಲಾಭವನ್ನು ತಂದುಕೊಡುತ್ತಿರುವುದು ಅವರಿಗೆ ಕುಮ್ಮಕ್ಕು ಸಿಕ್ಕಿದಂತಾಗಿದೆ. ಪಕ್ಷ ರಾಜಕಾರಣದ ಬೆನ್ನಿಗೆ ನಿಂತಿರುವ ಸಂಘ ಪರಿವಾರಿಗಳು ದೇಶದ ಮೂಲೆಮೂಲೆಯಲ್ಲಿ ಮತೀಯ ಗಲಭೆ, ಹಲ್ಲೆ, ಹತ್ಯೆ ಮುಂತಾದವನ್ನು ಮಾಡುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಕೂಡಾ ನಿಂತಿಲ್ಲ. ದಿನೇದಿನೇ ಇಂಥ ಕೋಮುವಾದಿ ಕೃತ್ಯಗಳು ಹೆಚ್ಚಾಗುತ್ತಿವೆಯೇ ಹೊರತು ನಿಯಂತ್ರಣಕ್ಕೆ ಬರುತ್ತಿಲ್ಲ. ಯಾಕೆಂದರೆ, ಈ ಎಲ್ಲ ದುಷ್ಕೃತ್ಯಗಳಿಗೆ ಪರೋಕ್ಷವಾಗಿ ದೇಶದ ಆಡಳಿತವೇ ಬೆಂಬಲವಾಗಿ ನಿಂತಿರುವುದು ಸೂರ್ಯ-ಚಂದ್ರರಷ್ಟೇ ಸತ್ಯವಾಗಿದೆ.

ಇಂತಹ ಘನಘೋರ ದುಷ್ಟ ಬೆಳವಣಿಗೆಗೆ ಕೈಹಾಕಿರುವ ಪ್ರಮುಖ ರಾಜಕೀಯ ಪಕ್ಷ ಮತ್ತು ಸಂಘ ಪರಿವಾರಿಗಳಿಗೆ ಬೆಂಬಲವಾಗಿ ಕೆಲವಾರು ರಾಜಕೀಯ ಪಕ್ಷಗಳೂ ನಿಂತುಬಿಟ್ಟಿವೆ. ಅದರಿಂದ ಅವರ ಅಟ್ಟಹಾಸವಂತೂ ಕೊನೆಯಿಲ್ಲದಂತೆ ನಡೆಯುತ್ತಿದೆ. ಆದರೆ, ಅದನ್ನು ತೀವ್ರವಾಗಿ ವಿರೋಧಿಸುವ ಪಕ್ಷಗಳೂ ಸಾಕಷ್ಟಿರುವುದು ಸಣ್ಣ ಸಮಾಧಾನದ ಸಂಗತಿ. ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಳ್ಳಲು ಶ್ರಮಿಸಿದ ಕಾಂಗ್ರೆಸ್ ಗಟ್ಟಿಯಾಗಿ ವಿರೋಧಿಸುತ್ತಾ ಬಂದಿದೆ. ಅದರ ಜೊತೆಗೆ ಪ್ರಮುಖವಾಗಿ ಎಸ್ಪಿ, ಟಿಎಂಸಿ, ಆರ್ಜೆಡಿ, ಆಪ್, ಎನ್ಸಿಪಿ, ಶಿವಸೇನೆ, ಡಿಎಂಕೆ, ಎನ್ಸಿ-ಪಿಡಿಪಿ, ಸಿಪಿಐ-ಸಿಪಿಎಂ ಮುಂತಾದ ಪ್ರಗತಿಪರ ಚಿಂತನೆಯ ಪಕ್ಷಗಳು ದಿಟ್ಟತನದಿಂದ ಒಗ್ಗೂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

* * *

ದೇಶದಲ್ಲಿರುವ ಮುಸ್ಲಿಮರು ಯಾರು ಎಂಬುದನ್ನು ಜನತೆ ಚೆನ್ನಾಗಿ ಮನನ ಮಾಡಿಕೊಳ್ಳಬೇಕಾಗಿದೆ. ಇಂದು ದೇಶದಲ್ಲಿ ಸುಮಾರು ೨೦ ಕೋಟಿಗೂ ಅಧಿಕ ಮುಸ್ಲಿಮರಿದ್ದಾರೆ. ವಿಶ್ವದ ಯಾವುದೇ ಮುಸ್ಲಿಮ್ ದೇಶವೊಂದರಲ್ಲಿ ಇಷ್ಟು ಸಂಖ್ಯೆಯ ಮುಸ್ಲಿಮರು ಇರಲಾರರು. ಸುಮಾರು ೧೦ ಕೋಟಿಯಷ್ಟು ಕ್ರೈಸ್ತರಿದ್ದಾರೆ. ಬೌದ್ಧರು, ಜೈನರು, ಸಿಖ್ಖರು, ಪಾರ್ಸಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಾರೂ ಬೇರೆ ದೇಶಗಳಿಂದ ವಲಸೆ ಬಂದವರಲ್ಲ. ಇಲ್ಲಿಯೇ ಹುಟ್ಟಿ ಬೆಳೆದ ಮೂಲ ನಿವಾಸಿಗಳಾಗಿದ್ದಾರೆ. ನಮ್ಮ ಸಂವಿಧಾನ ಅವರವರ ಧರ್ಮ-ದೇವರ ಆರಾಧನೆ-ಆಚರಣೆಗೆ ಮುಕ್ತ ಸ್ವಾತಂತ್ರ್ಯವನ್ನು ಕೊಟ್ಟಿರುವುದರಿಂದ ಎಲ್ಲರೂ ತಮ್ಮತಮ್ಮ ನಂಬಿಕೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ತ್ಯಾಗ-ಬಲಿದಾನವನ್ನೂ ಮಾಡಿರುವುದನ್ನು ಚರಿತ್ರೆ ದಾಖಲಿಸಿದೆ. ದೇಶದ ಅಭಿವೃದ್ಧಿಗೆ ತಮ್ಮ ಪಾಲಿನ ಶ್ರಮಧಾರೆಯನ್ನೂ ನಿರ್ವಂಚನೆಯಿಂದ ಮಾಡಿಕೊಂಡು ಬಂದಿದ್ದಾರೆ.

ಆ ಹಿನ್ನೆಲೆಯಲ್ಲಿ ನಾನು ಬಾಲ್ಯದಲ್ಲಿ ಕಂಡ ನಗ್ನ ಸತ್ಯಗಳನ್ನು ಇಲ್ಲಿ ದಾಖಲಿಸುವುದು ಸೂಕ್ತವೆನಿಸಿದೆ. ಅದರಿಂದ ಅಲ್ಪಸಂಖ್ಯಾತರೆಂಬ ಹೆಸರಲ್ಲಿ ತಲೆತಲಾಂತರದಿಂದ ದೇಶವಾಸಿಗಳಾಗಿರುವ ಮುಸ್ಲಿಮ್ ಮತ್ತಿತರ ಧರ್ಮೀಯರ ಬಗೆಗೆ ವಾಸ್ತವದ ಅರಿವನ್ನು ಇತರರು ಪಡೆಯಬೇಕಾದ ಅಗತ್ಯವಿದೆ.

ಆಗಷ್ಟೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ನಾನು ಪ್ರಪಂಚಕ್ಕೆ ಬಂದು ಕಣ್ಣು ಬಿಡಲು ನೆರವಾಗಿದ್ದವರು ಹಯಾತಮ್ಮನೆಂಬ ಮುಸ್ಲಿಮ್ ಪ್ರಸೂತಿ ತಜ್ಞೆ. ನನ್ನ ನಂತರ ನಮ್ಮ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ೬ ಜನರಿಗೂ ಆಕೆಯೇ ಪ್ರಪಂಚ ತೋರಿಸಿದ್ದರು. ನಮ್ಮ ಮನೆಯಷ್ಟೆ ಅಲ್ಲ, ನಮ್ಮೂರು - ಸುತ್ತಮುತ್ತಲೂರುಗಳ ಮಕ್ಕಳೆಲ್ಲರ ಜನನಕ್ಕೆ ಕೈ ಜೋಡಿಸಿದ್ದ ಪುಣ್ಯಾತ್ಮಳು ಅವರು. ಆಗಿನ್ನೂ ತಾಲೂಕು ಕೇಂದ್ರಕ್ಕೆ ಆಸ್ಪತ್ರೆಗಳೇ ಬಂದಿರಲಿಲ್ಲ. ಬಂದ ಮೇಲೂ ಹೆರಿಗೆ ಮಾಡಿಸುವ ವೈದ್ಯರಿರಲಿಲ್ಲ. ಕ್ರಮೇಣ ವೈದ್ಯರು ಬಂದರೂ ಗ್ರಾಮೀಣ ಭಾಗದ ಜನರು ಧೈರ್ಯ ತಾಳಿ ಅಲ್ಲಿಗೆ ಹೋಗುತ್ತಿರಲಿಲ್ಲ. ಎಲ್ಲರೂ ಹಯಾತಮ್ಮನನ್ನೇ ಆಶ್ರಯಿಸುವ ಅಪರಿಮಿತ ನಂಬಿಕೆ ಅವರಲ್ಲಿತ್ತು. ಆಕೆಯೂ ತುಂಬಾ ಉದಾರಿ. ಯಾವುದೇ ಹೆರಿಗೆಯನ್ನೂ ತೊಂದರೆಯಿಲ್ಲದಂತೆ ಮಾಡಿಸಬಲ್ಲ ನಿಪುಣೆಯಾಗಿದ್ದರು. ಆಕೆಯೇ ಪರೀಕ್ಷೆ ಮಾಡುತ್ತಿದ್ದರು. ಹೆರಿಗೆ ದಿನವನ್ನೂ ಹೇಳುತ್ತಿದ್ದರು. ಆ ದಿನ ತಾನೇ ಹಾಜರಿದ್ದು ಸೂಕ್ತ ಆರೈಕೆ-ಸಿದ್ಧತೆ ಮಾಡಿಕೊಂಡಿರುತ್ತಿದ್ದರು. ಸಾಂಗವಾಗಿ ಹೆರಿಗೆ ಮಾಡಿಸಿ, ಜನ ಸಂತೋಷದಿಂದ ಕೊಟ್ಟಿದ್ದನ್ನು ಪಡೆದು ತೆರಳುತ್ತಿದ್ದ ಅವರನ್ನು ಸುತ್ತಮುತ್ತಲ ಜನ ‘ಪ್ರತ್ಯಕ್ಷ ದೇವತೆ’ ಎಂದೇ ಭಾವಿಸಿದ್ದರು.

ಊರೂರುಗಳಿಗೂ ಹೋಗುತ್ತಿದ್ದ ಮೊಟ್ಟೆ ಸಾಬರು ಹೆಗಲಿಗೊಂದು ಬುಟ್ಟಿಯನ್ನು ನೇತಾಕಿಕೊಂಡು ‘ಮೊಟ್ಟೆ...ಕೋಳಿಮೊಟ್ಟೆ’ ಎಂದು ಕೂಗುತ್ತಿದ್ದರು. ಮನೆಮನೆಯಲ್ಲೂ ಕೋಳಿಗಳನ್ನು ಸಾಕುತ್ತಿದ್ದ ರೈತ ಮಹಿಳೆಯರು ಎಲ್ಲ ಮೊಟ್ಟೆಗಳನ್ನೂ ಕಾವಿಗಿಡುತ್ತಿರಲಿಲ್ಲ. ಮನೆಗೆ ಬೇಕಾದ ಸಾಮಾನು ಸರಂಜಾಮು ಕೊಳ್ಳಲು ಬೇಕಾದ ಹಣಕ್ಕೆ ಕೆಲವು ಮೊಟ್ಟೆಗಳನ್ನು ಮಾರುತ್ತಿದ್ದರು. ಹಾಗೆ ಕೊಂಡ ಮೊಟ್ಟೆಗಳನ್ನು ಪಟ್ಟಣದ ಜನರಿಗೆ ಮಾರುತ್ತಿದ್ದವರು ಬಹುತೇಕ ಮುಸ್ಲಿಮರೇ ಆಗಿದ್ದರು.

ಪ್ರತೀ ಊರಲ್ಲೂ ಹೊಂಗೆ ಬೀಜ, ಹಿಪ್ಪೆ ಬೀಜ, ಬೇವಿನ ಬೀಜಗಳನ್ನು ಸುಗ್ಗಿ ಕಾಲಕ್ಕೆ ರೈತರು ಸಂಗ್ರಹಿಸುತ್ತಿದ್ದರು. ಅವುಗಳನ್ನು ಮುಸ್ಲಿಮ್ ವ್ಯಾಪಾರಿಗಳೇ ಕೊಂಡು ಹಣ ಕೊಟ್ಟು ನೆರವಾಗುತ್ತಿದ್ದರು. ರೈತರ ಮನೆ ಬಾಗಿಲಿಗೇ ಹೋಗಿ ಬೀಜ ಕೊಳ್ಳುವ ಮುಸ್ಲಿಮ್ ವ್ಯಾಪಾರಿಗಳಿಗೂ ರೈತರಿಗೂ ಅವಿನಾಭಾವ ಬಾಂಧವ್ಯ ಬೆಳೆದಿತ್ತೆಂಬುದನ್ನು ನೆನೆದಾಗ ರೋಮಾಂಚನವಾಗುತ್ತದೆ.

ಆಗ ಗ್ರಾಮಗಳಲ್ಲಿ ಅಲ್ಲೊಂದು ಇಲ್ಲೊಂದು ಮಾವಿನ ಮರಗಳಿರುತ್ತಿದ್ದವು. ಅವು ಹೂ ಬಿಡುವ ಕಾಲಕ್ಕೇ ಮುಸ್ಲಿಮ್ ಹಣ್ಣಿನ ವ್ಯಾಪಾರಿಗಳು ತೆರಳಿ ವ್ಯಾಪಾರ ಮಾಡಿ ರೈತರಿಗೆ ಮುಂಗಡ ಹಣ ಕೊಟ್ಟು ನೆರವಾಗುತ್ತಿದ್ದುದನ್ನು ಕಂಡು ‘ರೈತಮಿತ್ರ’ ಅನ್ನುತ್ತಿದ್ದರು. ಮಾವಿನ ಕಾಯಿಗಳು ಬಲಿತಾಗ ಬಂದು ಅಷ್ಟನ್ನೂ ಕಿತ್ತುಕೊಂಡು ಬಾಕಿ ಹಣವನ್ನು ನೀಡಿ ರೈತರಿಗೆ ನೆರವಾಗುತ್ತಿದ್ದುದು ಇಂದಿಗೂ ನಡೆದೇ ಇದೆ.

ಸುಗ್ಗಿ ಕಾಲಕ್ಕೆ ಬಾಬಯ್ಯನ ಜಲ್ದಿ ನಡೆಸುತ್ತಿದ್ದರು. ಬೆಳಗ್ಗೆಯೇ ಊರೂರುಗಳಿಗೆ ತೆರಳಿ ಪ್ರತೀ ಮನೆಗೂ ಕಡ್ಲೆಪುರಿ-ಕಾರಾಬೂಂದಿ-ಕಲ್ಯಾಣಸೇವೆ ಇತ್ಯಾದಿಗಳನ್ನು ಕೊಟ್ಟು ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಬರುವಂತೆ ಕರೆಯುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಹುಲಿ ವೇಷದವರ ಕುಣಿತ ನೋಡಲು ಸುತ್ತಲೂರುಗಳ ರೈತರು ಮುಗಿಬೀಳುತ್ತಿದ್ದರು. ಹತ್ತಾರು ಅಂಗಡಿ-ಮುಂಗಟ್ಟುಗಳು ಸೇರುತ್ತಿದ್ದವು. ರೈತ ಮಕ್ಕಳು ಪಕೋಡ-ವಡೆ-ಬೋಂಡ ಇತ್ಯಾದಿ ಮೆಲ್ಲುತ್ತಾ ಕುಣಿತ ನೋಡುತ್ತಾ ಆನಂದಿಸುತ್ತಿದ್ದುದು ವಿಶೇಷವಾಗಿತ್ತು.

ಪಟ್ಟಣದಲ್ಲಿ ಸಂತೆಯ ದಿನ ಪ್ರಮುಖ ವೃತ್ತದಲ್ಲಿ ಲಾಳ ಹೊಡೆಯುವ ಪ್ರವೀಣ ಸಾಬರು ಹಾಜರಿರುತ್ತಿದ್ದರು. ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ರೈತರು ತಮ್ಮ ಹೋರಿ-ಎತ್ತುಗಳಿಗೆ ಲಾಳ ಹಾಕಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ರಾಸುಗಳನ್ನು ಮೆಲ್ಲಗೆ ಕೆಳಗೆ ಕೆಡವಿಕೊಂಡು ಲಾಳ ಹೊಡೆಯುವಾಗ ಅವು ಮಿಸುಕಾಡದಂತೆ ಹೊಟ್ಟೆ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ಎಚ್ಚರ ವಹಿಸುತ್ತಿದ್ದ ಪರಿ ಮರೆಯಲಾಗದ್ದು.

ಮನೆಮನೆಗಳಲ್ಲಿದ್ದ ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳಿಗೆ ಕಲಾಯಿ ಮಾಡಿಕೊಡುವ ಕೆಲಸದಲ್ಲಿ ನೆರವಾಗುತ್ತಿದ್ದವರು ಬಹುತೇಕ ಮುಸ್ಲಿಮರೇ ಆಗಿರುತ್ತಿದ್ದರು. ಊರೂರು ಸುತ್ತುತ್ತಾ ಕರೆದವರ ಮನೆಗೆ ಹೋಗಿ ಅದನ್ನು ಮಾಡಿಕೊಟ್ಟು, ಹಣ ಅಥವಾ ದವಸ ಧಾನ್ಯ ಪಡೆಯುತ್ತಿದ್ದವರ ಕಲೆಗಾರಿಕೆ ಮತ್ತು ರೈತ ಪ್ರೀತಿ ಅಗಾಧವಾದುದೇ ಸೈ.

ಅಂಥವರು ಈ ಹೊತ್ತಿಗೂ ತಮ್ಮ ಮೂಲ ಕಸುಬುಗಳನ್ನು ಬಿಡದೆ ಗ್ರಾಮೀಣರಿಗೆ ನೆರವಾಗುತ್ತಲೇ ಇರುವುದು ಅಭೂತಪೂರ್ವವಾದ ಸೇವಾ ಕೈಂಕರ್ಯವಾಗಿದೆ. ಬೆಳೆದಿರುವ ಪಟ್ಟಣ-ನಗರಗಳಲ್ಲಿ ಟೈರ್ಗಳಿಗೆ ಪಂಕ್ಚರ್ ಹಾಕುವುದರಿಂದ ಹಿಡಿದು ಸಣ್ಣಪುಟ್ಟ ವ್ಯಾಪಾರ-ವ್ಯವಹಾರಗಳನ್ನೂ ಮಾಡುತ್ತಾ ಜನಮಿತ್ರರಾಗಿ ರೂಪುಗೊಂಡಿರುವುದು ಅದ್ಭುತ. ಹಳೇ ಪೇಪರ್-ಹಳೇ ಕಬ್ಬಿಣ-ಹಳೇ ಪಾತ್ರೆ ಇತ್ಯಾದಿಗಳನ್ನು ಕೊಳ್ಳುವ, ಹೊಸ ಪಾತ್ರೆ ಮುಂತಾದವನ್ನು ಮನೆ ಬಳಿಗೇ ಹೋಗಿ ಮಾರುವ ಶ್ರಮಜೀವಿಗಳಿದ್ದರೆ ಮುಸ್ಲಿಮರೇ ಆಗಿದ್ದಾರೆ. ಹಳೇ ಪ್ಲಾಸ್ಟಿಕ್ ಐಟಂಗಳನ್ನು ಕೊಂಡು ಹೊಸ ಪ್ಲಾಸ್ಟಿಕ್ ಬಿಂದಿಗೆ, ಮೊಗ್ಗು, ಪಾತ್ರೆ ಮುಂತಾದವನ್ನು ಮಹಿಳೆಯರಿಗೆ ಮಾರುತ್ತಾ ಅವರ ನಂಬಿಕೆ-ವಿಶ್ವಾಸಕ್ಕೆ ಪಾತ್ರರಾಗುವ ಪರಿ ವಿಶಿಷ್ಟವಾದುದು.

ಇಂತಹ ಅತ್ಯಂತ ಶ್ರಮಜೀವಿ ವರ್ಗವು ದೇಶ ಮತ್ತು ಜನರಿಗೆ ಪರಮಾಪ್ತ ಬಂಧುಗಳಾಗಿ ದ್ದಾರೆಯೇ ಹೊರತು ದ್ರೋಹಿಗಳಾಗಿರುವುದು ತೀರಾ ಅಪರೂಪವೆನ್ನ ಬಹುದು. ಅಂತಹ ಬೆವರ ಬಸಿಯುವ ಜನ ಸಮೂಹವನ್ನು ಹೀಗಳೆಯುವುದು, ಅವರ ಜೀವನ ಮಾರ್ಗಕ್ಕೆ ಕಲ್ಲು ಹಾಕುವುದು, ಅವರಿಗೆ ಬೆದರಿಕೆಯೊಡ್ಡುವುದು ದೇಶದ್ರೋಹಿಗಳ ಕೃತ್ಯವಲ್ಲದೆ ಬೇರೇನಲ್ಲ. ಧರ್ಮದ ಅಮಲೇರಿಸಿಕೊಂಡು ರಾಜಕೀಯ ಪುಢಾರಿಗಳ, ಧರ್ಮಾಂಧ ಸಂಘ ಪರಿವಾರಿಗಳ ಮಾತು ಕೇಳಿಕೊಂಡು ದೇಶದ ನಿಜವಾದ ಶ್ರಮಜೀವಿಗಳ ಬದುಕಿಗೆ ತೊಡಕಾಗುತ್ತಿರುವ ಉಢಾಳರು ವಾಸ್ತವವನ್ನು ಅರ್ಥೈಸಿಕೊಂಡು ಬುದ್ಧಿ ಕಲಿಯದೇ ಹೋದಲ್ಲಿ ದೇಶಕ್ಕೆ ದೊಡ್ಡ ಪೆಟ್ಟು ಬೀಳುತ್ತದಷ್ಟೆ.

ಈ ಹೊತ್ತಿಗೂ ದೇಶದ ಬಹು ದೊಡ್ಡ ಜನ ಸಮೂಹವಾಗಿರುವ ದಲಿತರು ಮತ್ತು ಮುಸ್ಲಿಮರನ್ನು ಊರ ಹೊರಗೆ ಅಥವಾ ಪ್ರತ್ಯೇಕ ಕೇರಿ-ಹಟ್ಟಿ-ಮೊಹಲ್ಲಾಗಳಲ್ಲಿರಿಸಿರುವ ವ್ಯಂಗ್ಯ ಎಲ್ಲೆಡೆ ಕಾಣಬರುತ್ತದೆ. ಇವರೆಲ್ಲಾ ದೇಶದ ಮೂಲ ವಾಸಿಗಳು, ಶ್ರಮಜೀವಿಗಳು ಹಾಗೂ ದೇಶವನ್ನು ಕಟ್ಟಿದವರು. ಇಂಥವರನ್ನು ಹೆದರಿಸಿ-ಬೆದರಿಸುವ, ಕೀಳಾಗಿ ಕಾಣುವ, ಕೆಟ್ಟದಾಗಿ ಹಂಗಿಸುವ ನೀಚತನವನ್ನು ಬಿಡದಿದ್ದರೆ ಧರ್ಮಾಂಧರ ವಿರುದ್ಧ ಜನತೆ ತಿರುಗಿ ಬೀಳುವುದು ಕಷ್ಟವೇನಲ್ಲ. ನೂರಾರು ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಲೇ ಬಂದಿರುವ, ದೇಶದ ಅಭಿವೃದ್ಧಿಗೆ ಕೈಜೋಡಿಸುವ ಈ ಜನ ಸಮೂಹವಿನ್ನೂ ಬಡತನದ ಬೇಗೆಯಲ್ಲೇ ಬೇಯುತ್ತಿರುವುದಕ್ಕೆ ಕಾರಣವೇನು? ಅವರೂ ನಮ್ಮಂತೆಯೇ ಮನುಷ್ಯರೆಂದು ಪರಿಭಾವಿಸುವ ಮನಸ್ಸು ಬಂದಿಲ್ಲವೆಂದರೆ ಧರ್ಮಾಂಧರ ಅಟ್ಟಹಾಸ ಮುಂದುವರಿದಿದೆ ಎಂದೇ ಅರ್ಥ.

ಮೊಗಲರು ಭಾರತವನ್ನು ನೂರಾರು ವರ್ಷ ಆಳಿದ್ದಾರೆ. ಬ್ರಿಟಿಷರು ಸುಮಾರು ೨೦೦ ವರ್ಷ ಆಳಿ ಹೋಗಿದ್ದಾರೆ. ಆದರೂ ಇದೇ ನೆಲದ ಮುಸ್ಲಿಮರು-ಕ್ರೈಸ್ತರು ಹೆಚ್ಚಾಗಿ ಬಡತನದಲ್ಲೇ ನರಳುತ್ತಿರುವುದರ ಗುಟ್ಟೇನು? ಬಡವರ ಶ್ರಮದ ಫಲವನ್ನುಣ್ಣುವ ಜನ ಸುಖೀ ಜೀವನದಲ್ಲಿ ತೇಲಾಡುತ್ತಿರುವುದರ ಔಚಿತ್ಯವೇನು? ಬಡವರ ಹೊಟ್ಟೆಯ ಸಿಟ್ಟು ಅವರ ತೋಳಿಗೆ ಬಂದಲ್ಲಿ ಏನಾದೀತು? ‘ಹಿಂದೂಗಳೆಲ್ಲಾ ಒಂದು’ ಎಂದು ಹೇಳುತ್ತಲೇ ಹಿಂದೂಗಳಾದ ದಲಿತರನ್ನು ಪ್ರತ್ಯೇಕವಾಗಿರಿಸಿ ಶೋಷಿಸುವ, ಮುಸ್ಲಿಮರ ಶ್ರಮಶಕ್ತಿಯನ್ನೆಲ್ಲಾ ಬಳಸಿಕೊಂಡು ಸುಖ ಅನುಭವಿಸುವ ಪ್ರಭೃತಿಗಳು ‘ಇವರು ನಮ್ಮವರಲ್ಲ, ಪಾಕಿಸ್ತಾನಕ್ಕೆ ಹೋಗಿ’ ಎಂದು ಬೆದರಿಕೆಯೊಡ್ಡುವುದು ಧರ್ಮಪಿಪಾಸುಗಳ ಅತಿರೇಕವಾಗುತ್ತದಷ್ಟೆ. ಇದನ್ನೆಲ್ಲಾ ದೇಶ ಸಹಿಸುವುದಿಲ್ಲ. ದೇಶಕ್ಕೆ ಎಲ್ಲರೂ ಬೇಕು. ಎಲ್ಲರ ಒಗ್ಗಟ್ಟಿನಿಂದ ದೇಶದ ಜೀವನಾಡಿ ಚೆನ್ನಾಗಿರುತ್ತದೆ. ಎಲ್ಲರೊಂದಿಗಿನ ಸಾಮರಸ್ಯ ಭಾವವು ದೇಶದ ಏಕತೆಗೆ ಶಕ್ತಿ ತುಂಬುತ್ತದೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ಜಾಣಗೆರೆ ವೆಂಕಟರಾಮಯ್ಯ

ಸಾಹಿತಿ, ಪತ್ರಕರ್ತ

Similar News