ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಸರ್ಕಾರ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆಸಿದೆ: ಯತ್ನಾಳ್ ಆರೋಪ
ವಿಜಯಪುರ: ಕೊರೋನ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬೊಬ್ಬ ರೋಗಿಯಿಂದ 8 ರಿಂದ 10 ಲಕ್ಷ ರೂ.ಗಳವರೆಗೆ ಚಿಕಿತ್ಸಾ ವೆಚ್ಚ ಸಂಗ್ರಹಿಸಲಾಗಿದೆ. ಈ ವೇಳೆ ಆಸ್ಪತ್ರೆಗೆ ದಾಖಲಾಗಿದ್ದಾಗ ನನಗೂ 5.80 ಲಕ್ಷ ರೂ.ಗಳ ಬಿಲ್ ಮಾಡಿದ್ದರು. ಆಗ ನಮ್ಮ ಸರಕಾರ ಇದ್ದರೇನು? ಬೇರೆಯವರದ್ದು ಇದ್ದರೇನು? ಕಳ್ಳರು ಕಳ್ಳರೇ ಅಲ್ಲವೇ? ಎಂದು ಪ್ರಶ್ನಿಸಿದರು.
ನಾನು ಮಾಡಿರುವ ಈ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಕೊಡಲಿ. ಬೇಕಾದರೆ ಪಕ್ಷದಿಂದ ಹೊರಗೆ ಹಾಕಲಿ ನೋಡೋಣ. ಆಗ ಇವರೆಲ್ಲರ ಬಣ್ಣ ಕಳಚುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೊರೋನ ವೇಳೆ 45 ರೂ.ಗಳ ಮಾಸ್ಕ್ ಗೆ 485 ರೂ.ಬಿಲ್ ಹಾಕಿದ್ದಾರೆ. ಬೆಂಗಳೂರಲ್ಲಿ ಹತ್ತು ಸಾವಿರ ಬೆಡ್ ಗಳನ್ನು ಬಾಡಿಗೆ ಪಡೆದಿದ್ದರು. ಅದೇ ಹಣದಲ್ಲಿ ಅದರ ಎರಡು ಪಟ್ಟು ಬೆಡ್‍ಗಳನ್ನು ಖರೀದಿಸಬಹುದಿತ್ತು ಎಂದು ಅವರು ಹೇಳಿದರು.
ಈ ಬೆಡ್‍ಗಳಲ್ಲಿ ಎಷ್ಟು ಸಾವಿರ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆದಿದ್ದಾರೋ? ಕೊರೋನ ವೇಳೆ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ಮಾಡಿದ್ದಾರೆ ಎಂದು ವಿಧಾನಸೌಧದಲ್ಲೆ ಯಡಿಯೂರಪ್ಪ ಕುರಿತು ಹೇಳಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಆರೋಗ್ಯ ವಿಚಾರದಲ್ಲಿ ಸರಕಾರದಿಂದ ನಾನು ಯಾವುದೇ ಹಣ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂ. ಸಂಬಳವಿದೆ, ನಾನು ಸದನ ಸಮಿತಿಗಳ ಸಭೆಗೆ ಹೋಗಿ ಬಂದರೆ 65 ಸಾವಿರ ರೂ.ಸಿಗುತ್ತದೆ. ಆದರೂ, ಆರೋಗ್ಯ ವಿಚಾರದಲ್ಲಿ ಹಣ ಪಡೆದರೆ ನಾವು ಮನುಷ್ಯರೇ? ಎಂದು ಅವರು ಪ್ರಶ್ನಿಸಿದರು.
ತಮ್ಮನ್ನು ರೈತರ ಮಕ್ಕಳು ಎಂದು ಭಾಷಣ ಹೊಡೆಯುವವರು ದುಬೈನಲ್ಲಿ ಆಸ್ತಿ ಮಾಡಿರುವುದೇಕೆ? ಅಮೆರಿಕದಲ್ಲಿ ಮನೆ ಖರೀದಿಸಿರುವುದೇಕೆ? ಯಾರು, ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದೆಲ್ಲ ಹೊರಗೆ ತೆಗೆಯುತ್ತೇನೆ. ಜ.5ರಂದು ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಲಿದೆ. ನಂತರ ಎರಡನೆಯದ್ದು ಅಪ್ಪಾಜಿಯವರದ್ದೇ ಇದೆ ಎಂದು ಯತ್ನಾಳ್ ಹೇಳಿದರು.
ಬಿ.ಸಿ.ಪಾಟೀಲ್ ವಿರುದ್ಧ ವಾಗ್ದಾಳಿ: ಯತ್ನಾಳ್ ಹಾಗೂ ಬಿ.ಕೆ.ಹರಿಪ್ರಸಾದ್ ಸೇರಿ ಒಂದು ಹೊಸ ಪಕ್ಷ ಕಟ್ಟಲಿ ಎಂದ ಮಾಜಿ ಸಚಿವ ಬಿ.ಸಿ.ಪಾಟೀಲ್ ನೀಡಿರುವ ಹೇಳಿಕೆಗೆ ವಾಗ್ದಾಳಿ ನಡೆಸಿರುವ ಯತ್ನಾಳ್, ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿ ಎಷ್ಟು ಪ್ರಾಮಾಣಿಕರಾಗಿದ್ದರು ಎಂದು ಅವರ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಗೊತ್ತಾಗುತ್ತದೆ ಎಂದರು.
ಇವರಂತಹ ಕೃಷಿ ಮಂತ್ರಿ ರಾಜ್ಯದ ಇತಿಹಾಸದಲ್ಲಿ ಎಂದೂ ಇರಲಿಲ್ಲ. ಕೃಷಿ ಇಲಾಖೆಯಲ್ಲಿ ನಕಲಿ ಔಷಧಿಗಳನ್ನು ಇಡಲಾಗಿತ್ತು. ಆ ಔಷಧಿಗಳಿಂದ ಕೀಟಗಳು ಸಾಯುವ ಬದಲು ಇನ್ನೂ ದಪ್ಪವಾಗುತ್ತಿದ್ದವು. ಇವರೇನು ನನಗೆ ನೈತಿಕತೆ ಪಾಠ ಹೇಳೋದು ಎಂದು ಯತ್ನಾಳ್ ಕಿಡಿಗಾರಿದರು.
ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಸಿ.ಪಾಟೀಲ್ ಅಕ್ಕಪಕ್ಕದ ಕ್ಷೇತ್ರದವರು. ಬಿಜೆಪಿಯಲ್ಲಿ ಪ್ರಾಮಾಣಿಕರಾಗಿದ್ದ ಬಣಕಾರ್ ಕುಟುಂಬದವರನ್ನು ಹಿರೆಕೇರೂರು ಕ್ಷೇತ್ರದಲ್ಲಿ ಬಲಿ ಕೊಟಿದ್ದು ಯಡಿಯೂರಪ್ಪ ಎಂದು ಅವರು ಆರೋಪಿಸಿದರು. ಇದೇ ವೇಳೆ, ಯತ್ನಾಳ್ ಅವರನ್ನು ಯಾರು ಪರಿಗಣಿಸುವುದಿಲ್ಲ ಎಂದಿರುವ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ತಿರುಗೇಟು ನೀಡಿದ ಅವರು, ‘ಅವರೆಲ್ಲ ರಾಜ್ಯದ ಉಪಾಧ್ಯಕ್ಷ ಹೇಗೆ ಆದರು? ಎಂದು ಪ್ರಶ್ನಿಸಿದರು.
ವೀರಶೈವ-ಲಿಂಗಾಯತ ಮಹಾಸಭಾ ಕೆಲ ಕುಟುಂಬಗಳ ಆಸ್ತಿ: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ವೀರಶೈವ-ಲಿಂಗಾಯತ ಮಹಾಸಭಾ ಕೆಲ ಕುಟುಂಬಗಳ ಆಸ್ತಿಯಾಗಿದೆ ಎಂದು ದೂರಿದರು.
ಮಹಾಸಭಾ ‘ಬಿ.ಎಸ್.ವೈ’ ಆಗಿ ಕೆಲಸ ಮಾಡುತ್ತಿದೆ. ಇದರಲ್ಲಿ ಬಿ ಎಂದರೆ ಭೀಮಣ್ಣ ಖಂಡ್ರೆ, ಎಸ್ ಅಂದರೆ ಶಾಮನೂರು ಶಿವಶಂಕರಪ್ಪ, ವೈ ಅಂದರೆ ಯಡಿಯೂರಪ್ಪ ಕುಟುಂಬದ ಪರವಾಗಿ ಕೆಲಸ ಮಾಡುತ್ತಿದೆ. ಇವರೆಲ್ಲರೂ ಬೀಗರು ಎಂದು ಯತ್ನಾಳ್ ಹೇಳಿದರು.