ಅ. 26, 27 ರಂದು ವಿಪತ್ತು ಔಷಧ - ರಾಷ್ಟ್ರೀಯ ಆರೋಗ್ಯ ಸಮ್ಮೇಳನ
ಮಂಗಳೂರು: ನಗರದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಚಿಕಿತ್ಸಾ ವಿಭಾಗದ ವತಿಯಿಂದ ವಿಪತ್ತು ಔಷಧ ಕುರಿತು ಅಕ್ಟೋಬರ್ 26 ಮತ್ತು 27 ರಂದು ರಾಷ್ಟ್ರೀಯ ಆರೋಗ್ಯ ಸಮ್ಮೇಳನ ‘ಡೈಮೆಡ್ಕಾನ್ 2024’ ನಡೆಯಲಿದೆ ಎಂದು ಕೆಎಂಸಿ ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಡಾ.ವಿವೇಕ್ ಗೋಪಿನಾಥನ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಮ್ಮೇಳನದಲ್ಲಿ ಪ್ರಮುಖ ತುರ್ತು ಚಿಕಿತ್ಸಾ ತಜ್ಞರು, ಆರೋಗ್ಯ ವೃತ್ತಿಪರರು ಮತ್ತು ತುರ್ತು ಪ್ರತಿಸ್ಪಂದಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೆ.ಎಂ.ಸಿ. ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಸಮ್ಮೇಳನ ಸಂಘಟನಾ ಕಾರ್ಯ ದರ್ಶಿ ಡಾ.ನಿಖಿಲ್ ಪೌಲ್ ಅವರು ಮಾತನಾಡಿ, ಈ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಪತ್ತು ಔಷಧ ಕ್ಷೇತ್ರದಲ್ಲಿ ಹೆಸರಾಂತ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ತಜ್ಞರ ಮುಖ್ಯ ಭಾಷಣಗಳು, ವಿವಿಧ ರೀತಿಯ ವಿಪತ್ತುಗಳನ್ನು ನಿರ್ವಹಿಸಲು ಪ್ರಾಯೋಗಿಕ ಕೌಶಲ ಮತ್ತು ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸಿದ ಕಾರ್ಯಾಗಾರಗಳು, ನವೀನ ಸಂಶೋಧನೆ ಮತ್ತು ವಿಪತ್ತು ಔಷಧದಲ್ಲಿ ಉದಯೋನ್ಮುಖ ಪ್ರವೃತ್ತಿಗಳನ್ನು ಎತ್ತಿ ತೋರಿಸುವ ವೈಜ್ಞಾನಿಕ ಪ್ರಸ್ತುತಿಗಳು ಮತ್ತು ವಿಪತ್ತು ಸನ್ನದ್ಧತೆ ಯೋಜನೆ, ಸಾಮೂಹಿಕ ಅಪಘಾತ ನಿರ್ವಹಣೆ ಮತ್ತು ವಿಪತ್ತು ನಂತರದ ಚೇತರಿಕೆ ಸಹಿತ ನಿರ್ಣಾಯಕ ವಿಷಯಗಳ ಕುರಿತು ಗುಂಪು ಚರ್ಚೆಗಳು ಇರುತ್ತವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ಹರ್ಬರ್ಟ್ ಉಪಸ್ಥಿತರಿದ್ದರು.