ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನ: ಡಿ.27ರಂದು ಬೃಹತ್ ಕಾಲ್ನಡಿಗೆ ಜಾಥಾ
ಮಂಗಳೂರು: ಬಜಪೆ ಲೆಜೆಂಡ್ಸ್ ವತಿಯಿಂದ ನಡೆಯುತ್ತಿರುವ ಡ್ರಗ್ಸ್ ವಿರೋಧಿ ಜಾಗೃತಿ ಅಭಿಯಾನದ ಅಂಗವಾಗಿ ಡಿ.27ರಂದು ಬಜಪೆ ಬಸ್ ನಿಲ್ದಾಣದಿಂದ ತಾರಿಕಂಬ್ಳ ಜೋಹರ ಎಂ. ಮೈದಾನದವರೆಗೆ ನಡೆಯುವ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಶಾಫಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ದಿನ ತಾರಿಕಂಬ್ಳ ಜೋಹರ ಎಂ. ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹಾಗೂ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ರೋಹನ್ ಕಾರ್ಪೊರೇಷನ್ ಎಂ.ಡಿ. ರೋಹನ್ ಮೊಂತೇರೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್.ಸಿ. ಮಂಜುನಾಥ್, ಉದ್ಯಮಿ ಝಕಾರಿಯಾ ಜೋಕಡೆ, ಹೈದರಾಲಿ ಮತ್ತಿತರರು ಉಪಸ್ಥಿತರಿರುವರು ಎಂದರು.
ಬಜಪೆ ಲೆಜೆಂಡ್ಸ್‌ನಿಂದ ಡ್ರಗ್ಸ್ ಮಾದಕ ವ್ಯಸನ ವಿರುದ್ಧ ಯುವ ಪೀಳಿಗೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷದ ಅಭಿಯಾನದಲ್ಲಿ ಬಜಪೆ ಫೆಸ್ಟ್ ಎಂಬ ಹೆಸರಿನಲ್ಲಿ ಮಹಿಳೆಯರ ಸ್ಪರ್ಧಾ ಕೂಟ ನಡೆಸಿ ಅರಿವು ಮೂಡಿಸಲಾಯಿತು. ಮುಂದಿನ ಭಾಗವಾಗಿ ಬಜಪೆ ತಾರಿಕಂಬ್ಳ ಜೋಹರ ಎಮ್. ಮೈದಾನದಲ್ಲಿ ಬಜಪೆ ಫುಡ್ ಫೆಸ್ಟ್ ಹಾಗೂ 40 ವರ್ಷ ಮೇಲ್ಪಟ್ಟ ಪುರುಷರಿಗೆ ಅಂಡರ್ ಆರ್ಮ್ ಹಾಗೂ ೧೭ವರ್ಷ ಕೆಳಗಿನ ವಿದ್ಯಾರ್ಥಿಗಳಿಗೆ ಒವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಬಜಪೆಯಲ್ಲಿ ಶೈಕ್ಷಣಿಕ ಅಕಾಡೆಮಿ ಸ್ಥಾಪಿಸಿ ಐಎಎಸ್, ಐಪಿಎಸ್ ತರಬೇತಿ ನೀಡಲಾಗುವುದು. ಸುಸಜ್ಜಿತ ಕ್ರೀಡಾ ಅಕಾಡೆಮಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಕ್ತರ್ ರಮ್ಲಾನುದ್ದೀನ್, ಉಪಾಧ್ಯಕ್ಷರಾದ ಝುಬೇರ್ ಬಿ.ಯು., ಮೊಹಮ್ಮದ್ ಹಕೀಂ, ಕೋಶಾಧಿಕಾರಿ ಎಂ. ಅಲ್ತಾಫ್, ಕಾರ್ಯಕಾರಿ ಸಮಿತಿ ಸದಸ್ಯ ರಿಯಾಝ್, ಮಹಮ್ಮದ್ ಅಶ್ರಫ್ ಉಪಸ್ಥಿತರಿದ್ದರು.