ಉಪ್ಪಿನಂಗಡಿ: ಹಿರೇಬಂಡಾಡಿಯಿಂದ ನಿರ್ಗಮಿಸಿದ ಕಾಡಾನೆ

Update: 2024-12-26 17:27 GMT

ಉಪ್ಪಿನಂಗಡಿ: ಬುಧವಾರ ದಿನವಿಡೀ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದ ಕಾಡಾನೆಯು ಗುರುವಾರ ನಸುಕಿನ ವೇಳೆ ನದಿ ದಾಟಿ ಗ್ರಾಮ ತೊರೆದಿದೆ.

ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ , ಕರೆಂಕಿ, ಕೊಲ್ಲೆಜಾಲು ಎಂಬಲ್ಲೆಲ್ಲಾ ಅಲೆದಾಡಿ ಕಂಡ ಕಂಡಲೆಲ್ಲಾ ಕೃಷಿ ಬೆಳೆಗಳನ್ನು ನಾಶಮಾಡಿ ಭೀತಿ ಮೂಡಿಸಿದ್ದ ಕಾಡಾನೆಯು ಜನತೆಗೆ ಹಾನಿಯನ್ನುಂಟು ಮಾಡದಂತೆ ಅರಣ್ಯ ಇಲಾಖೆಯು ಎಚ್ಚರಿಕೆ ವಹಿಸಿತ್ತು. ಆನೆಯ ಸಂಚಾರದತ್ತ ನಿಗಾವಿರಿಸಿ ನಾಗರಿಕರನ್ನು ಎಚ್ಚರಿಸುತ್ತಿದ್ದ ಅರಣ್ಯ ಹಾಗೂ ಪೊಲೀಸ್ ಇಲಾಖೆಯು ರಾತ್ರಿ ವೇಳೆ ಅನಗತ್ಯ ಸಂಚಾರವನ್ನು ತಡೆ ಹಿಡಿಯಲು ವಿನಂತಿಸಿತ್ತು.

ಈ ಮಧ್ಯೆ ಹಿರೆಬಂಡಾಡಿ ಗ್ರಾಮ ವಾಸ್ತವ್ಯವನ್ನು ಕೊನೆಗೊಳಿಸಿದ ಕಾಡಾನೆಯು ಗುರುವಾರ ನಸುಕಿನ ವೇಳೆ ಕುಮಾರ ಧಾರಾ ನದಿಯನ್ನು ದಾಟಿ ಕಾಡಿನ ಮಾರ್ಗದಲ್ಲಿ ಸಂಚರಿಸುವ ಮೂಲಕ ಹಿರೇಬಂಡಾಡಿ ಗ್ರಾಮದ ನಿವಾಸಿಗರನ್ನು ಭಯಮುಕ್ತಗೊಳಿಸಿತು.

ಗುರುವಾರದಂದು ಆನೆ ದಾಳಿಗೆ ತುತ್ತಾದ ತನ್ನ ಸ್ವ ಗ್ರಾಮ ಹಿರೆಬಂಡಾಡಿಯ ಕೃಷಿಕರನ್ನು ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿಯಾಗಿ ವಿಚಾರ ವಿಮರ್ಷೆ ನಡೆಸಿದರಲ್ಲದೆ, ಕೃಷಿಕರ ಬೆಳೆಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News