ಸಿಂಧೂರ ರಾಜ ಉಳ್ಳಾಲ್‌ಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ
ಮಂಗಳೂರು: ಯುವ ಪ್ರತಿಭೆ, ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನಲ್ಲಿ ಅನೇಕ ಆವಿಷ್ಕಾರಗಳನ್ನು ಮಾಡಿ ರುವ ಸಿಂಧೂರ ರಾಜ ಉಳ್ಳಾಲ್‌ಗೆ ಮಕ್ಕಳಿಗಾಗಿ ನೀಡುವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಗುರುವಾರ ನೀಡಿ ಗೌರವಿಸಲಾಯಿತು.
ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಿಂಧೂರ ರಾಜ ಉಳ್ಳಾಲ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಸಂವಾದಿಸುವ ಅವಕಾಶವನ್ನು ಕೂಡ ಪಡೆದುಕೊಂಡರು.
ನ್ಯೂ ಹೋರೈಜನ್ ಪಬ್ಲಿಕ್ ಸ್ಕೂಲ್‌ನ ಮಾಜಿ ವಿದ್ಯಾರ್ಥಿನಿಯಾಗಿರುವ ಈಕೆ ಇದೀಗ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಾರೆ.
ವೈಜ್ಞಾನಿಕ ಸಾಧನೆಗಾಗಿ ಅಮೆರಿಕದಿಂದ ವರ್ಲ್ಡ್ ಸೈನ್ಸ್ ಸ್ಕಾಲರ್ ಪದವಿ ದೊರೆತಿದೆ. ಈ ಮೂಲಕ ಸಿಂಧೂರ ರಾಜ ನಾನಾ ದೇಶಗಳ ನೋಬೆಲ್ ಪ್ರಶಸ್ತಿ ವಿಜೇತರು ಹಾಗೂ ಬ್ರೇಕ್‌ಥ್ರೂ ಪ್ರಶಸ್ತಿ ವಿಜೇತರಿಂದ ತರಬೇತಿ ಪಡೆಯುತ್ತಿದ್ದಾರೆ.
ಮೆದುಳಿನ ವಯಸ್ಸನ್ನು ಊಹಿಸುವ ಬ್ರೈನ್ ಏಜ್ ಪ್ರಿಡಿಕ್ಷನ್ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಂರಚನಾತ್ಮಕ ಮತ್ತು ಸೆರಿಬ್ರೋವಾಸ್ಕ್ಯುಲರ್ ವೈಶಿಷ್ಟ್ಯಗಳನ್ನು ಬಳಸಿಕೊಂಡು ಡೆಮೆಂಶಿಯಾದ ಹಾನಿಯ ಅಪಾಯವನ್ನು ಲೆಕ್ಕ ಹಾಕುತ್ತದೆ. ಫ್ಯೂಚರ್ ಪೋರ್ಟ್ ಅವಾರ್ಡ್ , ಪ್ರಾಗ್, ಚೆಕ್ ರಿಪಬ್ಲಿಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಇಗ್ನೈಟೆಡ್ ಮೈಂಡ್ ಪ್ರಶಸ್ತಿಯನ್ನು ಪಡೆದಿರುವ ಈಕೆ ಎಟಿಎಲ್ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿ ಕೊಂಡಿದ್ದಾರೆ. ಮೋಟ್ವಾನಿ-ಜಡೇಜಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಮೆಕ್ಸಿಕೋದಲ್ಲಿ ನಡೆದ ಫ್ಯಾಬ್24 ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.