ಅ.12ರಂದು ಕರಾವಳಿ ಉತ್ಸವ ಮೈದಾನದಲ್ಲಿ ‘ಪಿಲಿನಲಿಕೆ ಸ್ಪರ್ಧೆ’

Update: 2024-10-10 16:30 GMT

ಮಂಗಳೂರು, ಅ.10: ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿ ವಾಹಿನಿ ಆಶ್ರಯದಲ್ಲಿ 9ನೇ ವರ್ಷದ ‘ಪಿಲಿನಲಿಕೆ ಸ್ಪರ್ಧೆ’ ಅ.12ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಆಯ್ದ 11 ಪ್ರಸಿದ್ಧ ಹುಲಿವೇಷ ತಂಡಗಳು ಭಾಗವಹಿಸಲಿವೆ ಎಂದರು.

2024ರ ‘ಪಿಲಿನಲಿಕೆ-9’ ಸ್ಪರ್ಧೆಯಲ್ಲಿ ಒಟ್ಟು 18 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 5 ಲಕ್ಷ ರೂ., ಪ್ರಶಸ್ತಿ ಹಾಗೂ ಬಹರೈನ್‌ನ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ ಎಂದರು.

ದ್ವಿತೀಯ ಬಹುಮಾನ 3 ಲಕ್ಷ ರೂ. ತೃತೀಯ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವಧನ ನೀಡಲಾಗುವುದು. ಕಪ್ಪು ಹುಲಿ, ಮರಿ ಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50 ಸಾವಿರ ಬಹುಮಾನ ಹಾಗೂ ಫಲಕ ನೀಡಲಾಗುವುದು ಎಂದು ಹೇಳಿದರು.

*25 ಸಾವಿರದಿಂದ 1 ಲಕ್ಷ ರೂ. ವಿದ್ಯಾನಿಧಿ: ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತಿ ತಂಡದಲ್ಲೂ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಆತ ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತಹವರಿಗೆ 25 ಸಾವಿರದಿಂದ 1 ಲಕ್ಷ ರೂ.ವರೆಗಿನ ವಿದ್ಯಾರ್ಥಿ ವೇತನ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ. ಇದರಿಂದ ಆತನ ಕಲೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಮಾತ್ರವಲ್ಲದೆ ಆತನೂ ಮುಂದೆ ಉನ್ನತ ಹುದ್ದೆ ಪಡೆದಾಗ ಹುಲಿ ವೇಷ ತಂಡದ ಜತೆ ಒಳ್ಳೆಯ ಸಂಬಂಧವಿರಿಸಲು ಸಾಧ್ಯವಾಗುತ್ತದೆ ಎನ್ನುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಮಿಥುನ್ ರೈ ಹೆಳಿದರು.

*ಕ್ರಿಕೆಟ್ ದಿಗ್ಗಜರು, ನಟರು ಭಾಗಿ : ಪಿಲಿ ನಲಿಕೆ ಸ್ಪರ್ಧೆಗೆ ಬಾಲಿವುಡ್ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ, ಬಾಲಿವುಡ್ ನಟ ಅಹನ್ ಶೆಟ್ಟಿ, ಸ್ಯಾಂಡಲ್‌ವುಡ್ ನಟರಾದ ಡಾಲಿ ಧನಂಜಯ್, ರಾಜ್

ಶೆಟ್ಟಿ, ನವೀನ್ ಶಂಕರ್, ಭಾರತ ಕ್ರಿಕೆಟ್ ತಂಡದ ಆಟಗಾರ ಶಿವನ್ ದುಬೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

*11 ತಂಡಗಳು: ಅಶೋಕ್ ರಾಜ್ ಕಾಡಬೆಟ್ಟು ಬಳಗ, ಶ್ರೀ ಮಾರುತಿ ವ್ಯಾಯಾಮ ಶಾಲೆ ದೇರೆಬೈಲ್, ಮುಳಿಹಿತ್ತು ಗೇಮ್ಸ್ ಟೀಮ್, ಜೂನಿಯರ್ ಬಾಯ್ಸ್ ಚಿಲಿಂಬಿ, ಎಸ್‌ಕೆಬಿ ಟೈಗರ್ಸ್ ಕುಂಪಲ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್, ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಟೀಮ್ ಗೋಲ್ಡನ್ ಲೀಫ್ ಕಾವೂರು, ಗೋರಕ್ಷನಾಥ ಟೈಗರ್ಸ್ ಜಪ್ಪು, ಪುರಲ್ಲಪ್ಪೆನ ಮೋಕೆದ ಬೊಳ್ಳಿಲು ಪೊಳಲಿ, ಸೋಮೇಶ್ವರ ಫ್ರೆಂಡ್ಸ್ ಸರ್ಕಲ್ ಸೇರಿದಂತೆ 11 ತಂಡಗಳು ಭಾಗವಹಿಸಲಿವೆ

*ಸನ್ಮಾನ: ಪ್ರಶಸ್ತಿ ಪುರಸ್ಕೃತ ರಿಷಬ್ ಶೆಟ್ಟಿ ಸನ್ಮಾನ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಕಾಂತಾರಾ ಸಿನಿಮಾ ಖ್ಯಾತಿಯ, ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ರಿಷಬ್ ಶೆಟ್ಟಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್ ಚೌಟ, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಿ. ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಮಿಥುನ್ ರೈ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಮ್ಮ ಟಿವಿಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ, ಪಿಲಿ ನಲಿಕೆ ಪ್ರತಿಷ್ಠಾನದ ನವೀನ್ ಶೆಟ್ಟಿ ಎಡ್ಮಮಾರು, ವಿಕಾಶ್ ಶೆಟ್ಟಿ, ಅವಿನಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News