ಬ್ಯಾಂಕ್ ಅಧಿಕಾರಿಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕಾಫಿ ಬೆಳಗಾರರಿಂದ ಪ್ರತಿಭಟನೆ

Update: 2024-10-10 16:20 GMT

ಮಂಗಳೂರು: ಕೆನರಾ ಬ್ಯಾಂಕಿನ ರೈತ ವಿರೋಧಿ ನೀತಿಯನ್ನು ಖಂಡಿಸಿ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಾಫಿ ಬೆಳೆಗಾರರು ಗುರುವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ 300 ಮಂದಿ ಬೆಳೆಗಾರರು ಕಾಫಿ ಬೆಳೆಗಾರರು ಭಾಗವಹಿಸಿದ್ದರು.

ಹಕ್ಕೋತ್ತಾಯ

*ಕೆನರಾ ಬ್ಯಾಂಕ್ ಸರ್ಫೆಸಿ ಅಡಿಯಲ್ಲಿ ನೊಟೀಸ್ ಜಾರಿ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು

* ರೈತ, ಬೆಳೆಗಾರರ ವಿರೋಧಿ ಮನಸ್ಥಿತಿಯ ಬ್ಯಾಂಕ್ ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಿ ಆ ಜಾಗಕ್ಕೆ ಮಾನವೀಯತೆಯಿಂದ ವರ್ತಿಸುವ ಅಧಿಕಾರಿಗಳನ್ನು ನೇಮಕ ಮಾಡಬೇಕು.

*ಬೇರೆ ಬ್ಯಾಂಕ್‌ಗಳು ಸುಸ್ಥಿದಾರರಿಗೆ ನೀಡುತ್ತಿರುವ ಮಾದರಿಯ ಒಟಿಎಸ್ ಸವಲತ್ತುಗಳನ್ನು ಕೆನರಾ ಬ್ಯಾಂಕ್ ಕೂಡ ನೀಡಬೇಕು, *ಒಟಿಎಸ್ ಒಪ್ಪಂದದ ಮೊತ್ತವನ್ನು ಪಾವತಿಸಲು ಒಂದು ವರ್ಷದ ಕಾಲಾವಧಿ ಹಾಗೂ ಕನಿಷ್ಠ 4 ಕಂತುಗಳ ಅವಕಾಶ ನೀಡಬೇಕು

ಈ ಸಂದರ್ಭ ಮಾತನಾಡಿದ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ. ಬೆಳೆಗಾರರ ಸಮಸ್ಯೆಗಳನ್ನು ಕುರಿತು ತಿಳಿದಿರುವ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡುವ ನಿರ್ಧಾರದೊಂದಿಗೆ ಬೆಳೆಗಾರನ ಸಹಾಯಕ್ಕೆ ನಿಂತಿವೆ. ಆದರೆ ಕೆನರಾ ಬ್ಯಾಂಕ್ ಮಾತ್ರ ಅತ್ಯಂತ ಅಮಾನವೀಯವಾಗಿ ಬೆಳೆಗಾರರ ವಿರುದ್ಧ ವಸೂಲಾತಿ, ಹರಾಜು ಕ್ರಮ ಜರುಗಿಸುತ್ತಿದೆ ಎಂದು ಆರೋಪಿಸಿದರು.

ಬೆಳೆಗಾರರ ತೋೀಟಗಳನ್ನು ಕೆಲವೇ ತಿಂಗಳುಗಳ ನೋಟಿಸ್ ನೀಡಿ ಆನ್‌ಲೈನ್‌ನಲ್ಲಿ ಹರಾಜು ಮಾಡುತ್ತಿದೆ. ಈ ಕುರಿತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ (ಡಿಎಲ್‌ಬಿಸಿ) ಸಭೆಯಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದ್ದರೂ ಕೂಡ ಕೆನರಾ ಬ್ಯಾಂಕ್ ಅಧಿಕಾರಿ ವರ್ಗದವರು ಅತ್ಯಂತ ಉದ್ಧಟನದಿಂದ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕಿಂಗ್ ನಿಯಮಗಳ ಪ್ರಕಾರ ಯಾವುದೇ ರೀತಿಯ ಕೃಷಿ ಸಾಲಗಳಿಗೆ ಸರ್ಫೆಸಿ ಅನ್ವಯವಾಗುವುದಿಲ್ಲ. ಹೀಗಿದ್ದರೂ ಕೆನರಾ ಬ್ಯಾಂಕ್ ಒಂದು ನಿರ್ದಿಷ್ಟ ಕೇಸಿನ ಉದಾಹರಣೆ ಆಧರಿಸಿ ಎಲ್ಲಾ ಸುಸ್ತಿ ಬೆಳೆಗಾರರಿಗೆ ಸರ್ಫೆಸಿ ಕಾಯ್ದೆಯಡಿಯಲ್ಲಿ ನೋಟೀಸ್ ನೀಡಿ ತೋಟಗಳನ್ನು ಹರಾಜು ಮಾಡುತ್ತಿದೆ ಎಂದು ಆರೋಪಿಸಿದರು.

ನೋಟಿಸ್ ಪಡೆದ ಬೆಳಗಾರರಿಗೆ ತಮ್ಮ ಬ್ಯಾಂಕ್ ಸಾಲಗಾರರ ಸಾಲದ ಅಂಕಿ ಅಂಶಗಳ ವಿವರಣೆ ನೀಡಲು ನಿರಾಕರಿಸು ತ್ತಿದೆ. ಇದು ಸಾಲಗಾರರ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕೃಷಿ ಸುಸ್ತಿ ಸಾಲಕ್ಕೆ ದಂಡಬಡ್ಡಿ ವಿಧಿಸಬಾರದೆಂದು ರಿಸರ್ವ್ ಬ್ಯಾಂಕ್ ಪದೇಪದೆ ಕಟ್ಟುನಿಟ್ಟಾಗಿ ಸೂಚಿಸಿದ್ದರೂ ಕೂಡ ಬ್ಯಾಂಕ್‌ಗಳು ದಂಡಬಡ್ಡಿಯನ್ನು ತಮ್ಮ ಆದಾಯದ ಪ್ರಮುಖ ಮೂಲವನ್ನಾಗಿ ಮಾಡಿಕೊಂಡಿವೆ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳಕ್ಕೆ ಆಗಮಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ ಬಳಿಕ ಬೆಳೆಗಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಮೂಡಿಗೆರೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ಮನೋಹರ್, ಜೆಡಿಎಸ್ ಮುಖಂಡ ಚಂದ್ರೇಗೌಡ, ಮೂಡಿಗೆರೆ ಬಿಜೆಪಿ ಧುರೀಣ ದೀಪಕ್ ದೊಡ್ಡಯ್ಯ, ಕೆಜಿಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಹಾಸನ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಲೋಹಿತ್, ಬೇಳೂರು ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್, ಕೆಜಿಎಫ್ ಮಾಜಿ ರಾಜ್ಯ ಉಪಾಧ್ಯಕ್ಷ ರತೀಶ್, ರೈತ ಮುಖಂಡ ಜಯಕರ್, ಬಿ.ಸಿ ದಯಕರ್, ಟಿಡಿ ಮಲ್ಲೇಶ್ ಮತ್ತಿತತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News