ನ.26ರಂದು ಕೂಳೂರು ಸೇತುವೆ ಬಳಿ ನಡೆಸಲು ಉದ್ದೇಶಿಸಿರುವ ಸಾಮೂಹಿಕ ಧರಣಿ ನಿಗದಿಯಂತೆ ನಡೆಯಲಿದೆ: ಮುನೀರ್ ಕಾಟಿಪಳ್ಳ

Update: 2024-11-25 16:58 GMT

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನ.26ರಂದು ಕೂಳೂರು ಸೇತುವೆ ಬಳಿ ನಡೆಸಲು ಉದ್ದೇಶಿಸಿರುವ ಸಾಮೂಹಿಕ ಧರಣಿಗೆ ಪೊಲೀಸ್ ಕಮೀಷನರ್ ಅನುಮತಿ ನಿರಾಕರಿಸಿದ್ದಾರೆ. ಆದರೂ, ಧರಣಿ ನಿಗದಿ ಯಂತೆ ನಡೆಯಲಿದೆ. ಪ್ರಜಾಪ್ರಭುತ್ವ ಪ್ರೇಮಿಗಳು ಭಾಗವಹಿಸುಬೇಕೆಂದು ಧರಣಿಯ ನೇತೃತ್ವ ವಹಿಸಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

ನಂತೂರು ಹೆದ್ದಾರಿ ದುರವಸ್ಥೆಯಿಂದ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಿನ ನಿತ್ಯ ಅಪಘಾತಗಳು, ಪ್ರಾಣಹಾನಿ ಸಂಭವಿಸುತ್ತಿದೆ. ಈ ದುರವಸ್ಥೆಯನ್ನು ಖಂಡಿಸಿ, ಹೆದ್ದಾರಿಯ ಸಮಗ್ರ ದುರಸ್ಥಿಗೆ ಆಗ್ರಹಿಸಿ ನ. 26ರಂದು ಕೂಳೂರು ಸೇತುವೆ ಸಮೀಪ ಹೆದ್ದಾರಿಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಷ್ಟು ದೂರದಲ್ಲಿ ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಿದ್ದೇವೆ. ಅದರಂತೆ ವ್ಯಾಪಕ ಪ್ರಚಾರ ನಡೆಸಿದ್ದೆವು. ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದವು‌. ಸುಮಾರು 12ದಿನಗಳ ಮುಂಚಿತವಾಗಿಯೇ ಧರಣಿಗೆ ಹಾಗೂ ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಅರ್ಜಿ ಸಲ್ಲಿಸಿದ್ದೇವೆ.

ಇದೀಗ ಕೊನೆಯ ಕ್ಷಣದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್  ಹೆದ್ದಾರಿ ಸಮಸ್ಯೆಗಳ ವಿರುದ್ಧ ಧರಣಿಗೆ ಅನುಮತಿ ನಿರಾಕರಿಸಿದ್ದಾರೆ. ಹೆದ್ದಾರಿ ಇಲಾಖೆ, ನಗರ ಪಾಲಿಕೆಯ ಅನುಮತಿ ಪಡೆದಿಲ್ಲ ಎಂಬ ಬಾಲಿಶ ನೆಪಗಳನ್ನು ಹೇಳಿದ್ದಾರೆ. ಮುಂದಕ್ಕೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆದ್ದಾರಿ ಸಹಿತ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಭಟನೆ, ಧರಣಿ ನಡೆಸುವುದಾದರೂ ಪೊಲೀಸ್ ಕಮಿಷನರ್ ಸೂಚಿಸುವ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಮಾತ್ರ ಮಾಡಬೇಕು ಎಂದು ಆದೇಶಸಿದ್ದಾರೆ. ಇದು ಖಂಡನೀಯ. ಕೇಂದ್ರ ಸರಕಾರದ ಹೆದ್ದಾರಿ ಇಲಾಖೆ, ಬಿಜೆಪಿ ಸಂಸದರು, ಶಾಸಕರ ವೈಫಲ್ಯಗಳ ವಿರುದ್ಧ ಪ್ರತಿಭಟನೆಗಳು ನಡೆಯುವುದು ಪೊಲೀಸ್ ಕಮೀಷನರ್ ಇಷ್ಟ ಪಡುತ್ತಿಲ್ಲ. ಇದು ಈ ಹಿಂದೆಯೂ ಹಲವು ಬಾರಿ ಸಾಬೀತಾಗಿದೆ. ನಾವು ಪೊಲೀಸ್ ಕಮಿಷನರ್ ಅವರ ಈ ಸರ್ವಾಧಿಕಾರಿ ನಡೆಯನ್ನು, ಬಿಜೆಪಿ ಪಕ್ಷ ಹಾಗೂ ಅದರ ಸಂಸದ, ಶಾಸಕರ ಹಿತಾಸಕ್ತಿಗೆ ಅನುಗುಣವಾದ ಆದೇಶಗಳನ್ನು ಒಪ್ಪುವ ಪ್ರಶ್ನೆ ಇಲ್ಲ. ಒಪ್ಪಿದರೆ ಅದು ಪ್ರಜಾಪ್ರಭುತ್ವದ ಸೋಲು. ಜನಚಳವಳಿಗಳಿಗೆ ಹಿನ್ನಡೆ ಎಂದು ಮುನೀರ್‌ ಕಾಟಿಪಳ್ಳ ಹೇಳಿದ್ದಾರೆ.

ಪೊಲೀಸ್ ಕಮಿಷನರ್ ಅವರ ಈ ಅನುಮತಿ ನಿರಾಕರಣೆಯ ಹೊರತಾಗಿಯೂ ನಾಳೆ ನಿಗದಿತ ಸ್ಥಳದಲ್ಲಿ, ನಿಗದಿತ ಸಮಯಕ್ಕೆ ಸಾಮೂಹಿಕ ಧರಣಿ ನಡೆಯಲಿದೆ. ಪ್ರಜಾಪ್ರಭುತ್ವ, ಶಾಂತಿಯುತವಾಗಿ ಪ್ರತಿಭಟಿಸುವ ಸಂವಿಧಾನಿಕ ಹಕ್ಕಿನ ಕುರಿತು ನಂಬಿಕೆ ಉಳ್ಳ ಎಲ್ಲರೂ ಬೆಳಿಗ್ಗೆ 10ಗಂಟೆಗೆ ಕೂಳೂರು ಸೇತುವೆ ಹತ್ತಿರದ ಪೊಲೀಸ್ ಔಟ್ ಪೋಸ್ಟ್ ಬಳಿ ಸೇರ ಬೇಕು, ಹೆದ್ದಾರಿ ದುರವಸ್ಥೆಯ ಎದುರಾಗಿ ನಡೆಯುವ ಸಾಮೂಹಿಕ ಧರಣಿಯಲ್ಲಿ ಭಾಗಿಗಳಾಗಬೇಕು, ಆ ಮೂಲಕ ಹೆದ್ದಾರಿ ಗುಂಡಿಗಳಿಗೆ ಬಿದ್ದು ಅಮಾಯಕರು ಪ್ರಾಣ ಕಳೆದು ಕೊಳ್ಳುವುದನ್ನು ತಪ್ಪಿಸುವ ಹೋರಾಟದಲ್ಲಿ ಸಹಭಾಗಿಗಳಾಗಬೇಕೆಂದು ಮನವಿ ಮಾಡಿರುವ ಮುನೀರ್‌, ತಡೆಯಲು ಯತ್ನಿಸಿದಷ್ಟು, ಬಲಪ್ರಯೋಗ ನಡೆಸಿದಷ್ಟು ಹೋರಾಟ ಬಲವಾಗಿ ಎದ್ದು ಬರುತ್ತದೆ. ಟೋಲ್ ಗೇಟ್ ತೆರವು ಹೋರಾಟದಲ್ಲೀ ಇದೇ ರೀತಿ ನಡೆದಿತ್ತು. ಈಗಲೂ ಅದೇ ರೀತಿಯಾಗಿ ಚಳವಳಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News