ಎ.9ರಂದು ಹೈಡ್ರೋಜನ್ ನಾವೀನ್ಯತೆ ದಿನಾಚರಣೆ
ಮಂಗಳೂರು: ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಎ. 9ರಂದು ಹೈಡ್ರೋಜನ್ ನಾವೀನತ್ಯತೆ ದಿನವನ್ನು ಆಚರಿಸಲಾಗುತ್ತದೆ ಎಂದು ಸಂಸ್ಥೆಯ ಸಿಒಒ ಡಾ. ಮಾಣಿಪ್ಪಾಡಿ ಕೃಷ್ಣ ಕುಮಾರ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ವಿಕೇಂದ್ರೀಕೃತ ಹೈಡ್ರೋಜನ್ ಉತ್ಪಾದನಾ ಸಂಸ್ಥೆಯಾಗಿದ್ದು, ಭಾರತದಲ್ಲಿ 100 ಕೆಡಬ್ಲ್ಯು ಇಲೆಕ್ಟ್ರೋಲೈಜಸರ್ ಉತ್ಪಾದನೆಯ ಮೊದಲ ಸಂಸ್ಥೆಯಾಗಿದೆ ಎಂದರು.
ಹಸಿರು ಇಂಧನಕ್ಕೆ ಪೂರಕವಾಗಿ ಸ್ವಾವಲಂಬಿ ಹೈಡ್ರೋಜನ್ ಉತ್ಪಾದನೆಯೊಂದಿಗೆ ಕೈಗಾರಿಕೆಗಳನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಪರಿಹಾರ ಮಾರ್ಗವನ್ನು ನಮ್ಮ ಸಂಸ್ಥೆ ಹೊಂದಿದೆ. ರಸಗೊಬ್ಬರ, ಉಕ್ಕು, ರಾಸಾಯನಿಕಗಳು ಹಾಗೂ ಸಂಸ್ಕರಣಾ ವಲಯಗಳಿಗೆ ಹೈಡ್ರೋಜನ್ ಭವಿಷ್ಯದ ಶಕ್ತಿ ಮಾತ್ರವಲ್ಲ, ನಿರ್ಣಾಯಕ ಪರಿಹಾರ ಮಾರ್ಗವೂ ಆಗಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖ ತಜ್ಞರು, ನೀತಿ ನಿರೂಪಕರು ಹೈಡ್ರೋಜನ್ ಭವಿಷ್ಯದ ಬಗ್ಗೆ ಚರ್ಚಿಸಲಿದ್ದಾರೆ. ಬೆಳಗ್ಗೆ 9 ಕ್ಕೆ ಉದ್ಘಾಟನೆ ನೆರವೇರಲಿದ್ದು, 9.40ಕ್ಕೆ ಹೈಡ್ರೋಜನ್ ಉತ್ಪನ್ನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿ, ಡಿಎಸ್‌ಟಿ ಸಂಸ್ಥೆಯ ನಿರ್ದೇಶಕ ಡಾ. ರಂಜಿತ್ ಕೃಷ್ಣ ಪೈ, ಹಿರಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ದೀಪಕ್ ಯಾದವ್ ಸೇರಿದಂತೆ ಹಲವು ಗಣ್ಯರು ಭಾಗಹಿಸಲಿದ್ದಾರೆ ಎಂದು ಅವರು ಹೇಳಿದರು.
ಮಂಗಳೂರು ಮೂಲದ ಡಾ. ಕೃಷ್ಣ ಕುಮಾರ್‌ರವರು ಐಐಟಿ ಚೆನ್ನೈಯಲ್ಲಿ ಉನ್ನತ ಶಿಕ್ಷಣ ಪಡೆದು ಸಿಂಗಾಪುರದ ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿಇಟೆಡ್‌ನ ಪ್ರಮುಖರಾಗಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಹೈಡ್ರೋಜನ್ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ ಎಂದು ಸಹ್ಯಾದ್ರಿ ಕಾಲೇಜಿನ ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ. ಮಂಜಪ್ಪ ಹೇಳಿದರು.
ಗೋಷ್ಟಿಯಲ್ಲಿ ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿ.ನ ನಿರ್ದೇಶಕಿ ರಮ್ಯಶ್ರೀ, ಚಂದ್ರಶೇಖರ್ ಐತಾಳ್, ಅಜಿತ್, ಅಮರ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.