ಖಾಲಿ ಜಾಗದ ತೆರಿಗೆ ಇಳಿಸಲು ಸರಕಾರಕ್ಕೆ ಪ್ರಸ್ತಾವನೆ: ಮೇಯರ್ ಸುಧೀರ್ ಶೆಟ್ಟಿ
ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ ವಿಧಿಸಲಾಗುವ ತೆರಿಗೆಯಲ್ಲಿ ಹೆಚ್ಚಳವಾಗಿರುವುದನ್ನು ಕಡಿಮೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮನಪಾ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ ಶೇ.0.20 ಇದ್ದ ತೆರಿಗೆಯನ್ನು ಶೇ.0.50ಕ್ಕೆ ಏರಿಕೆ ಮಾಡಲಾಗಿದೆ. ಆದರೆ ನಾವು ಅದನ್ನು ಶೇ.0.10ಕ್ಕೆ ಇಳಿಸಲು ಶುಕ್ರವಾರ ನಿರ್ಧಾರಕ್ಕೆ ಬರಲಾಗಿದೆ. ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
*ಆಸ್ತಿ ತೆರಿಗೆ ಹೆಚ್ಚಳ: ಸ್ವಯಂಘೋಷಿತ ಆಸ್ತಿ ತೆರಿಗೆ ಬಂದ ಬಳಿಕ ಪ್ರತಿ ವರ್ಷವೂ ಶೇಕಡಾ 5ರಷ್ಟು ತೆರಿಗೆ ಹೆಚ್ಚಳ ಮಾಡುವುದು ಕಾನೂನಿನಲ್ಲಿಯೇ ಇದೆ. ನಮ್ಮ ಅವಧಿಯಲ್ಲೂ ಮೂರು ವರ್ಷದಲ್ಲಿ ಶೇ 15ರಷ್ಟು ಹೆಚ್ಚಳ ಮಾಡಿದ್ದೇವೆ. ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಅಧಿಕಾರ ಇದ್ದಾಗ ಕೂಡ ಹೆಚ್ಚಳ ಮಾಡುವ ಕೆಲಸವಾಗಿದೆ ಮೇಯರ್ ತಿಳಿಸಿದರು.
*ಸರಕಾರದಿಂದ ಅನುದಾನ ಬಂದಿಲ್ಲ: ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಸಚಿವ ಬೈರತಿ ಸುರೇಶ್ ಬಂದು 25 ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ. ಮತ್ತೊಂದು ಸಲ 75 ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ ಎನ್ನುತ್ತಾರೆ, ಇಲ್ಲಿಯವರೆಗೂ ಸರಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. 16 ತಿಂಗಳಲ್ಲಿ ಯಾವುದೇ ವಿಶೇಷ ಅನುದಾನ ಸರಕಾರ ನೀಡಲಿಲ್ಲ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ ಯೋಜನೆಗಳ ಕಾಮಗಾರಿಯನ್ನು ಈ ಸರಕಾರ ನಿಲ್ಲಿಸಿಬಿಟ್ಟಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಆರೋಪಿಸಿದರು.
ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವರುಣ್ ಚೌಟ, ಲೋಹಿತ್, ಗಣೇಶ್ ಕುಮಾರ್ ಉಪಸ್ಥಿತರಿದ್ದರು.