ದಲಿತರಿಂದಲೇ ದಲಿತರ ದೌರ್ಜನ್ಯ ತಡೆ ಕಾಯ್ದೆಯ ದುರ್ಬಳಕೆ: ಎಸ್ಸಿ-ಎಸ್ಟಿ ಮಾಸಿಕ ಸಭೆಯಲ್ಲಿ ಮುಖಂಡರ ಆಕ್ರೋಶ

Update: 2023-07-23 12:23 GMT

ಮಂಗಳೂರು, ಜು.23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯನ್ನು ಸಮುದಾಯದ ಕೆಲವು ಮಂದಿ ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ದಲಿತ ಮುಖಂಡರು ರವಿವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ಆಗ್ರಹಿಸಿದರು.

ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬೇರೆ ಸಮುದಾಯದವರ ಮನೆ ಬಾಡಿಗೆ ಪಡೆದು ಬಳಿಕ ಮನೆ ಬಿಟ್ಟುಕೊಡುವಾಗ ಹಣಕೊಡಬೇಕು ಇಲ್ಲವಾದರೆ ದಲಿತ ದೌರ್ಜನ್ಯ ತಡೆ ಕೇಸು ಹಾಕುವುದಾಗಿ ಬೆದರಿಸಿದ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಗಿರೀಶ್ ಕುಮಾರ್ ಯು.ಕೆ. ಅವರು ಸಭೆಯ ಗಮನ ಸೆಳೆದರು.

ನಗರಕ್ಕೆ ಹೊರ ಜಿಲ್ಲೆಗಳಿಂದ ಬಂದವರು ಈ ರೀತಿ ಕಾಯ್ದೆಯ ದುರ್ಬಳಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬೇರೆ ಸಮುದಾಯಕ್ಕೆ ಸೇರಿದವರಿಂದ ಮನೆ ಬಾಡಿಗೆಗೆ ಪಡೆಯುವಾಗ ತಾವು ದಲಿತರೆಂದು ಹೇಳುವುದಿಲ್ಲ. ಮನೆ ದೊರೆತ ಬಳಿಕ ಮನೆ ಕೊಟ್ಟವರನ್ನು ಸತಾಯಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳಿಗೆ ಸಂಬಂಧಿಸಿ ದೂರು ಬಂದರೆ ಅದನ್ನು ಸರಿಯಾಗಿ ತನಿಖೆ ನಡೆಸಬೇಕು. ದಲಿತರ ಹಿತರಕ್ಷಣೆಗೆ ಇರುವ ಕಾಯ್ದೆಯ ದುರ್ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ದಲಿತ ಮುಖಂಡ ಶೀನ ಅವರು ದಲಿತರ ರಕ್ಷಣೆಗೆ ಇರುವ ಕಾಯ್ದೆ ಯಾವುದೇ ಕಾರಣಕ್ಕೂ ದುರ್ಬಳಕೆಯಾಗಬಾರದು. ಇತರ ಸಮುದಾಯದವರನ್ನು ಬೆದರಿಸಲು ದಲಿತ ದೌರ್ಜನ್ಯ ತಡೆ ಬಳಕೆಯಾಗಬಾರದು ಎಂದರು.

ವ್ಯಕ್ತಿಯೊಬ್ಬರು ತೊಕ್ಕೊಟ್ಟು ಬಳಿ ಪರಿಶಿಷ್ಟ ವರ್ಗಕ್ಕೆ ಸೇರಿದ 0.50 ಸೆಂಟ್ಸ್ ಜಾಗವನ್ನು ಮಾರಾಟದ ಮಾಡುವುದಾಗಿ ನಂಬಿಸಿ ಒಬ್ಬರಿಂದ 86 ಲಕ್ಷ ರೂ ಹಣ ಪಡೆದು ವಂಚಿಸಿದ ಪ್ರಕರಣವನ್ನು ಗಿರೀಶ್ ಕುಮಾರ್ ಸಭೆಯ ಗಮನಕ್ಕೆ ತಂದರು. ಹಣ ಕೊಟ್ಟವರನ್ನು ಸತಾಯಿಸಲಾಯಿಸಲಾಗುತ್ತದೆ. ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.

ಮಂಗಳೂರು -ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಬೀರಿ ಜಂಕ್ಷನ್ ಮತ್ತು ಕೋಟೆಕಾರ್ ಜಂಕ್ಷನ್ ನಲ್ಲಿ ಅತಿ ವೇಗದ ಓಡಾಟದಿಂದ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಇಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಅಗತ್ಯ. ಮೂರು ತಿಂಗಳ ಹಿಂದೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಡಿಎಸ್‌ಎಸ್ ಮಹಿಳಾ ಘಟಕದ ಕಲಾವತಿ ದೂರಿದರು.

ಎರಡೂ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು. ವಾಹನಗಳ ವೇಗ ನಿಯಂತ್ರಣದ ಬಗ್ಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಡಿಸಿಪಿ ದಿನೇಶ್ ಕುಮಾರ್ ಬಿ.ಪಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News