ಶಾಸಕರ ಹಕ್ಕು ಚ್ಯುತಿ ಆರೋಪ; ಬಿಜೆಪಿ ಜನಪ್ರತಿನಿಧಿಗಳಿಂದ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲಲ್ಲೇ ಪ್ರತಿಭಟನೆ

Update: 2023-08-14 10:36 GMT

ಮಂಗಳೂರು, ಆ. 14: ದ.ಕ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕನ್ನು ಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೆಟ್ಟಿಲಲ್ಲೇ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಶಾಸಕರು, ಮೇಯರ್ ಸಮಾರು ಒಂದೂವರೆ ತಾಸಿನವರೆಗೆ ಪ್ರತಿಭಟನೆ ನಡೆಸಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಇರುವೈಲು ಗ್ರಾ.ಪಂ. ಕಟ್ಟಡ ಉದ್ಘಾಟನೆ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿರುವ ಪಿಡಿಒ ಹಾಗೂ ಇಒರನ್ನು ಸರಕಾರ ಮರು ನೇಮಕಕ್ಕೆ ಈಗಾಗಲೇ ಕ್ರಮ ವಹಿಸಿದೆ. ಆದೇಶ ಪತ್ರ ಸಂಜೆಯೊಳಗೆ ಕೈ ಸೇರುವ ಸಾಧ್ಯತೆ ಇದೆ ಹಾಗೂ ಗ್ರಾ.ಪಂ. ಕಚೇರಿ ಕಾರ್ಯಾರಂಭಕ್ಕೆ ಕ್ರಮ ವಹಿಸುವುದಾಗಿ ಶಾಸಕರ ಬೇಡಿಕೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರ ಆಡಳಿತಕ್ಕೆ ಬಂದಾಗಿನಿಂದ ದ್ವೇಷ ರಾಜಕಾರಣ ಆರಂಭ ಆಗಿದೆ ಎಂದು ಆರೋಪಿಸಿದರು.

ಬಿಜೆಪಿ ಶಾಸಕ ಕೆಲಸ ಕಾರ್ಯದ ಮೇಲೆ ಹಸ್ತಕ್ಷೇಪ ಮಾಡುವ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಪಕ್ಷದ ನಾಯಕರ ಮಾತಿನಂತೆ ಕೆಲಸ ನಿರ್ವಹಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಶಾಸಕರು ಈ ಬಗ್ಗೆ ಗಮನ ಸೆಳೆದಿದ್ದರು, ಎದುರಲ್ಲಿ ಮುಖ್ಯಮಂತ್ರಿ ಶಾಸಕರ ಹಕ್ಕುಚ್ಯುತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದರೂ, ಹಿಂದಿನಿಂದ ಅವರು ಆಟವಾಡಿದ್ದಾರೆ ಎಂದು ಆರೋಪಿಸಿದರು.

ಸದ್ಯ ಜಿಲ್ಲಾಧಿಕಾರಿ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗುತ್ತಿದೆ. ಬೇಡಿಕೆ ಈಡೇರದಿದ್ದರೆ ನಾಳೆಯಿಂದ ಮತ್ತೆ ಉಗ್ರರೀತಿಯ ಪ್ರತಿಭಟನೆ ಮುಂದುವರಿಸುವುದಾಗಿ ನಳಿನ್ ಕುಮಾರ್ ಹೇಳಿದರು.

ಪ್ರತಿಭಟನೆಯ ಆರಂಭದಲ್ಲಿ ಮಾತನಾಡಿದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ರಾಜ್ಯದಲ್ಲಿ ಸರಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಪಕ್ಷ ಆಡಳಿತ ನಡೆಸುತ್ತಿದೆಯೋ ತಿಳಿಯುತ್ತಿಲ್ಲ. ಶಾಸಕ ತನ್ನ ಕ್ಷೇತ್ರದ ಪಂಚಾಯತ್ ಕಚೇರಿಗೆ ಹೋಗುವ ವೇಳೆ ಪೊಲೀಸರಿಂದ ತಡೆಯುವ ಪ್ರಯತ್ನ ನಡೆಸಲಾಗುತ್ತದೆ. ಗ್ರಾ.ಪಂ. ಚುನಾವಣೆಯ ವೇಳೆ ಗೂಂಡಾಗಿರಿ ನಡೆಸಲಾಗುತ್ತದೆ. ಅಧಿಕಾರಿಗಳ ವರ್ಗಾವಣೆಗೆ ಪಕ್ಷದ ನಾಯಕರೊಬ್ಬರು ಸಲ್ಲಿಸುವ ಬೇಡಿಕೆಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಕ್ರಮ ವಹಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿದರು.

ಇರುವೈಲು ಗ್ರಾ.ಪಂ. ಕಟ್ಟಡ ಉದ್ಘಾಟನೆಗೆ ಸಂಬಂಧಿಸಿ ಕರೆಯೋಲೆಯ ಶಿಷ್ಟಾಚಾರ ಉಲ್ಲಂಘನೆ ನೆಪದಲ್ಲಿ ಅಮಾಯಕ ಅಧಿಕಾರಿಗಳಿಬ್ಬರನ್ನು ಅಮಾನತುಗೊಳಿಸಲಾಗಿದ್ದು, ಅವರನ್ನು ಮರು ಕರ್ತವ್ಯಕ್ಕೆ ನಿಯೋಜಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಮಾತನಾಡಿದರು.

ಶಾಸಕರಾದ ಭಾಗೀರಥಿ, ಮೇಯರ್ ಜಯಾನಂದ ಅಂಚನ್, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ವೀಣಾ, ಸಂದೀಪ್ ಗರೋಡಿ, ಮೊದಲಾದವರು ಭಾಗವಹಿಸಿದ್ದರು.

ಯಾರ ಒತ್ತಡಕ್ಕೂ ಮಣಿಯುವವ ಅಲ್ಲ: ಮುಲ್ಲೈ ಮುಗಿಲನ್

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಉದ್ದೇಶಿಸಿ, ಶಾಸಕರು ಹಾಗೂ ಸಂಸದರು, ಇರುವೈಲು ಗ್ರಾ.ಪಂ. ಉದ್ಘಾಟನೆ ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ಹಾಗೂ ಇಒಗಳನ್ನು ಯಾವ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಾರ್ಯಕ್ರಮಗಳ ಶಿಷ್ಟಾಚಾರಕ್ಕೆ ಸಂಬಂಧಿಸಿ ಸ್ಪಷ್ಟ ನಿರ್ದೇಶನಗಳಿದ್ದರೂ, ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ ಅಂತಹ ಯಾವುದೇ ನಿರ್ದಿಷ್ಟ ಮಾನದಂಡಗಳು ಇಲ್ಲ. ವಿಶೇಷ ನಿರ್ದೇಶನಕ್ಕಾಗಿ ಸರಕಾರಕ್ಕೆ ಬರೆಯಲಾಗಿದೆ. ಅಮಾನತುಗೊಂಡಿರುವ ಅಧಿಕಾರಿಗಳನ್ನು ಕೂಡಾ ಮರು ನೇಮಕಕ್ಕೆ ಸರಕಾರದಿಂದ ಆದೇಶ ಸಂಜೆಯೊಳಗೆ ಕೈ ಸೇರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿಯಾಗಿ ತಾವು ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಪ್ರಕಾರ ಕಾರ್ಯ ನಿರ್ವಹಿಸಬೇಕು ಎಂದು ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಾನು ಹಿಂದೆಯೂ ಕಾನೂನು ರೀತಿಯಲ್ಲಿಯೇ ಕರ್ತವ್ಯ ನಿರ್ವಹಿಸಿದ್ದೇನೆ. ಯಾರ ಒತ್ತಡಕ್ಕೂ ಮಣಿಯುವವ ಅಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News