ಮಾದಕ ವಸ್ತು ಸೇವನೆ ಆರೋಪ ; ಮೂವರ ಬಂಧನ
ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸೇವಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಮುಶ್ರಿಫ್ ಸಿ.ಎಮ್ (24), ಬಟ್ರಕೆರೆ ನಿವಾಸಿ ಶೇಖ್ ಹ್ಯಾರಿಸ್ (33), ಸಜಿಪಮುನ್ನೂರು ಗ್ರಾಮದ ಸಫ್ವಾನ್ ಬಿ. ಎ.(21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಕಾಯರಗೋಳಿ ಜಂಕ್ಷನ್‌ನಲ್ಲಿ ಕೊಣಾಜೆ ಪೊಲೀಸರು ಶುಕ್ರವಾರ ಮಧ್ಯಾಹ್ನ ಮುಶ್ರಿಫ್ ಸಿ.ಎಮ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ದೇರಳಕಟ್ಟಯ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿತು ಎನ್ನಲಾಗಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ವನಜಾಕ್ಷಿ ಸಂಜೆ ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ಸಂಜೆ ರೌಂಡ್ಸ್‌ನಲ್ಲಿದ್ದಾಗ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಭಟ್ಕಳ ಬಜಾರ್ ಸಾರ್ವಜನಿಕ ರೋಡ್ ಬಳಿ ಅಮಲುಕೋರನಾಗಿ ತೂರಾಡುತ್ತಿದ್ದ ಯುವಕ ಶೇಕ್ ಹ್ಯಾರಿಸ್ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪಿಎಸ್‌ಐ ಧನರಾಜ ಎಸ್ ಹಾಗೂ ಸಿಬ್ಬಂದಿ ಮಂಗಳೂರು ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್‌ನಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದಲ್ಲಿ ಸಫ್ವಾನ್ ಬಿ. ಎ ಎಂಬಾತನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.