ರಾಷ್ಟ್ರ ಲಾಂಛನದ ಧ್ವಜಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ಆರೋಪ: ಶ್ರೀನಿವಾಸ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ದೂರು

Update: 2024-01-24 16:09 GMT

ಮಂಗಳೂರು: ರಾಷ್ಟ್ರ ಧ್ವಜ ಹಾರಿಸಲು ಸೀಮಿತವಾಗಿರುವ ರಾಷ್ಟ್ರ ಲಾಂಛನವಿರುವ ಧ್ವಜಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ಕಿಡಿಗೇಡಿಗಳ ವಿರುದ್ಧ ಮತ್ತು ಇದಕ್ಕೆ ಅನುಮತಿ ನೀಡಿದ ಆರೋಪಕ್ಕೆ ಸಂಬಂಧಿಸಿ ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜಿನ ಆಡಳಿತ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ದ.ಕ. ಜಿಲ್ಲಾ ಸಮಿತಿಯು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬುಧವಾರ ದೂರು ನೀಡಿದೆ.

ಜ.22ರಂದು ಆಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಸಂದರ್ಭವನ್ನು ಉಪಯೋಗಿಸಿಕೊಂಡು ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ್ ಕಾಲೇಜಿನಲ್ಲಿ ದೇಶ ವಿರೋಧಿ ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿರುವ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮೀಸಲಿಟ್ಟ ರಾಷ್ಟ್ರ ಲಾಂಛನವಿರುವ ಧ್ವಜಸ್ತಂಭದಲ್ಲಿ ಒಂದು ಮತಕ್ಕೆ ಸೀಮಿತವಾಗಿರುವ ಕೇಸರಿ ಬಾವುಟವನ್ನು ಹಾರಿಸಿರುತ್ತಾರೆ. ರಾಷ್ಟ್ರ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಆದರೆ ಅದೇ ರಾಷ್ಟ್ರ ಲಾಂಛನವಿರುವ ಧ್ವಜಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ. ಈ ದೇಶ ವಿರೋಧಿ ಕೃತ್ಯವು ಮಂಗಳೂರನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅನುಮಾನ ದಿಂದ ನೋಡುವ ಸನ್ನವೇಶ ಉಂಟು ಮಾಡಿದ್ದು, ದೇಶದ ಜನ ತಲೆತಗ್ಗಿಸುವಂತೆ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ರಾಷ್ಟ್ರ ಧ್ವಜ ಹಾರಿಸಲು ಸೀಮಿತವಾಗಿರುವ ರಾಷ್ಟ್ರ ಲಾಂಛನವಿರುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ದೇಶ ವಿರೋಧಿ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಹಾಗೂ ಈ ಕೃತ್ಯಕ್ಕೆ ಅನುಮತಿ ನೀಡಿರುವ ಶ್ರೀನಿವಾಸ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಕೋಶಾಧಿಕಾರಿ ಮನೋಜ್ ವಾಮಂಜೂರು ಹಾಗೂ ಜೊತೆ ಕಾರ್ಯದರ್ಶಿ ನಿತಿನ್ ಕುತ್ತಾರ್ ಅವರು ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News