ಸಿಸಿ ಕ್ಯಾಮರಾ ಅಳವಡಿಕೆಗೆ ಒತ್ತು ನೀಡಲು ಅನುಪಮ್ ಅಗರ್ವಾಲ್ ಸಲಹೆ

Update: 2024-07-10 09:07 GMT

ಮಂಗಳೂರು, ಜು. 10: ದೇರೆಬೈಲ್‌ನ ಕೋಟೆಕಣಿಯಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಸಿ ಕ್ಯಾಮರಾ ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆಗಳಿಗೆ ಹಾಗೂ ಮನೆಗಳ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದ್ದಾರೆ.

ಕೋಟೆಕಣಿ ಸುಲಿಗೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಬುಧವಾರ ಬೆಳಗ್ಗೆ ಸ್ಥಳ ಮಹಜರು ನಡೆಸಲು ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಲೆತ್ನಿಸಿದ ಸಂದರ್ಭ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಸಂದರ್ಭ ಅವರು ಈ ವಿಷಯ ತಿಳಿಸಿದರು.

ಸಿಸಿ ಕ್ಯಾಮರಾ ಅಳವಡಿಕೆ ಇಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದೆ. ರಾತ್ರಿ ಹೊತ್ತಿನಲ್ಲೂ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಹಾಗೂ ರೆಕಾರ್ಡಿಂಗ್ ವ್ಯವಸ್ಥೆಯನ್ನು ಮನೆ ಮಾಲಕರು ಹಾಗೂ ಅಂಗಡಿ ಮಾಲಕರು ಹೊಂದಿರುವುದನ್ನು ಖಾತರಿಪಡಿಸುವುದು ಉತ್ತಮ ಎಂದರು.

ಪೊಲೀಸರು ಈಗಾಗಲೇ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಇದಲ್ಲದೆ, ಮನೆಯಲ್ಲಿ ಒಂಟಿಯಾಗಿ ಇರುವವರು ಹಾಗೂ ಮನೆಯಿಂದ ಹಲವು ದಿನಗಳವರೆಗೆ ಹೊರ ಹೋಗುವುದಿದ್ದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತದೆ. ಎಂದು ಪೊಲೀಸ್‌ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.

ವಿಕ್ಟರ್ ಮೆಂಡೋನ್ಸಾರ ಮನೆಯಲ್ಲಿ ಕಳ್ಳತನಕ್ಕೆ ತೆರಳಿದ್ದ ಸಂದರ್ಭ ಕಬ್ಬಿಣ ತುಂಡರಿಸುವ ಸಾಧನದಿಂದ ಮನೆಯ ಗ್ರಿಲ್ ತುಂಡು ಮಾಡಿ ಮನೆ ಒಳಗೆ ನುಗ್ಗಿದ್ದರು. ಮನೆಯೊಳಗಿದ್ದವರು ಎಚ್ಚರಗೊಂಡು ಬೊಬ್ಬೆ ಹೊಡೆಯುವುದು ಅಥವಾ ಹಲ್ಲೆಗೆ ಮುಂದಾದರೆ ತಮ್ಮ ರಕ್ಷಣೆಗಾಗಿ ಆರೋಪಿಗಳು ಮನೆಯ ಹೊರಗೆ ಬಿದ್ದಿದ್ದಂತಹ ಕಬ್ಬಣದ ರಾಡ್ ಒಳಗೆ ಒಯ್ದಿದ್ದು, ಕೃತ್ಯದ ಸಮಯ ಮನೆಯ ಮಾಲಕ ಬೊಬ್ಬೆ ಹೊಡೆದ ಕಾರಣ ಆತನ ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ಬಳಿಕ ಚಿನ್ನಾಭರಣ, ನಗದು ಹಾಗೂ ಮನೆಯ ಕಾರು ಒಯ್ಯುವ ವೇಳೆ ಕೃತ್ಯಕ್ಕೆ ಬಳಸಿದ ರಾಡನ್ನು ತಮ್ಮ ಜತೆ ಕೊಂಡು ಹೋಗಿದ್ದರು. ಅದನ್ನು ಮುಲ್ಕಿ ಸಮೀಪದ ಹೆದ್ದಾರಿ ಬಳಿ ಇಳಿಜಾರು ಪ್ರದೇಶದಲ್ಲಿ ಪೊದೆಗೆ ಎಸೆದಿದ್ದು, ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಆರೋಪಿಗಳನ್ನು ಆ ಜಾಗಕ್ಕೆ ಕರೆದೊಯ್ದಿದ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ತಡೆದಿದ್ದಾರೆ ಎಂದು ಘಟನೆಯ ಬಗ್ಗೆ ಪೊಲೀಸ್ ಆಯುಕ್ತರು ವಿವರ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್ ಹಾಗೂ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.

ಎಸ್‌ಐ ಭಾರತಿ ತಂಡಕ್ಕೆ 50000 ರೂ. ನಗದು

ಘಟನೆ ನಡೆದು ಐದು ಗಂಟೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಲಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಎಸ್‌ಐ ಭಾರತಿ ನೇತೃತ್ವದ ತನಿಖಾ ತಂಡಕ್ಕೆ ಹಾಗೂ ಉಳಾಯಿ ಬೆಟ್ಟು ಡಕಾಯಿತಿ ಪ್ರಕರಣ ಬೇಧಿಸಿದ ತಂಡಕ್ಕೆ ತಲಾ 50,000 ರೂಗಳ ಬಹುಮಾನವನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘೋಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News