ತ್ಯಾಜ್ಯ ಹಾಕುವವರು ಪತ್ತೆಯಾದಲ್ಲಿ ಸೂಕ್ತ ಕ್ರಮ: ಗ್ರಾ.ಪಂ.ಅಧ್ಯಕ್ಷೆ ಗೀತಾ
ದೇರಳಕಟ್ಟೆ: ತ್ಯಾಜ್ಯ ರಾಶಿ ಹಾಕುತ್ತಿದ್ದ ನಾಟೆಕಲ್ ಪರಿಸರದಲ್ಲಿ ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಮತ್ತು ಕೊಣಾಜೆ ಗ್ರಾಮ ಪಂಚಾಯತ್ ವತಿಯಿಂದ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ವನ್ನು ಶನಿವಾರ ಲೋಕಾರ್ಪಣೆ ಗೊಳಿಸಲಾಯಿತು.
ಸಿ.ಸಿ. ಕ್ಯಾಮೆರಾ ವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಕೊಣಾಜೆ ಗ್ರಾಪಂ.ಅಧ್ಯಕ್ಷೆ ಗೀತಾ ಅವರು, ತ್ಯಾಜ್ಯ ರಾಶಿಯ ದುರ್ವಾಸನೆಯಿಂದ ಈ ರಸ್ತೆಯಲ್ಲಿ ಹೋಗುವುದೇ ಕಷ್ಟಕರವಾಗಿತ್ತು. ಕಸ ಹಾಕದಂತೆ ಸೂಚನೆ ನೀಡಿದರೂ ರಾತ್ರಿ ವೇಳೆ ಕಸ ಹಾಕುತ್ತಿದ್ದಾರೆ. ಎರಡು ಬಾರಿ ಕಸ ವಿಲೇವಾರಿ ಜೊತೆಗೆ ಕಸ ಹಾಕಿದವರಿಗೆ ದಂಡ ವಿಧಿಸಿದ್ದೇವೆ. ಕಸ ಹಾಕುವವರನ್ನು ಪತ್ತೆ ಹಚ್ಚುವ ಉದ್ದೇಶದಿಂದಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪತ್ತೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೊಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ, ಅಚ್ಯುತ ಗಟ್ಟಿ ಮಾತನಾಡಿ, ಕಸ ಹಾಕುವವರನ್ನು ಪತ್ತೆ ಹಚ್ಚುವ ಉದ್ದೇಶ ಇಟ್ಟುಕೊಂಡು ಅಳವಡಿಸಲಾದ ಸಿಸಿ ಕ್ಯಾಮೆರಾದ ನಿರ್ವಹಣೆ ಜವಾಬ್ದಾರಿ ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ವಹಿಸಿಕೊಂಡಿದೆ. ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಅಗತ್ಯ ಇದೆ ಎಂದು ಹೇಳಿದರು.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಎಂ.ಆಶೀಂ ಮಾತನಾಡಿ, ಕಸ ವಿಲೇವಾರಿ ನಮ್ಮ ಜವಾಬ್ದಾರಿ ಆಗಿದ್ದು, ಕೆಲವು ದಿನಗಳ ಹಿಂದೆ ಎರಡು ಲೋಡ್ ಕಸ ವಿಲೇವಾರಿ ಮಾಡಿದ್ದೇವೆ. ಮತ್ತೆ ಅದೇ ಜಾಗದಲ್ಲಿ ಕಸ ಹಾಕುತ್ತಿದ್ದಾರೆ. ತ್ಯಾಜ್ಯ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉದ್ಯಮಿ ರಝಾಕ್ ಶಾಲಿಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಚಂದ್ರ, ಸದಸ್ಯ ರಾದ ಇಕ್ಬಾಲ್, ಹೈದರ್ ಮತ್ತಿತರರು ಉಪಸ್ಥಿತರಿದ್ದರು.