ಆ.26ರಿಂದ ಸೆ.8: ‘ದೌರ್ಜನ್ಯ ವಿರುದ್ಧ ಸೌಜನ್ಯ’ ಪಾದಯಾತ್ರೆ

Update: 2023-08-18 10:33 GMT

ಮಂಗಳೂರು, ಆ. 18: ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್ ಸ್) ಪಕ್ಷದಿಂದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆಗ್ರಹಿಸಿ ಆ.26ರಿಂದ ಸೆಪ್ಟೆಂಬರ್ 8ರ ವರೆಗೆ ಬೆಳ್ತಂಗಡಿಯಿಂದ ಬೆಂಗಳೂರಿಗೆ ‘ದೌರ್ಜನ್ಯ ವಿರುದ್ಧ ಸೌಜನ್ಯ’ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗಿದೆ.

ಕೆಆರ್ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇ ಗೌಡ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆ.26ರಂದು ಬೆಳ್ತಂಗಡಿಯಿಂದ ಪಾದಯಾತ್ರೆ ಹೊರಟು ರಾತ್ರಿ ಧರ್ಮಸ್ಥಳದಲ್ಲಿ ತಂಗಲಿದೆ. ಅಲ್ಲಿ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಮರುದಿನ ಉಜಿರೆ, ಕಳಸ ಮೂಲಕ ಪಾದಯಾತ್ರೆ ಮುಂದುವರಿಯಲಿದೆ. ಸೆಪ್ಟಂಬರ್ 7ರಂದು ಬೆಂಗಳೂರು ತಲುಪಲಿದ್ದು, 8ರಂದು ವಿಧಾನಸೌಧಕ್ಕೆ ಪಾದಯಾತ್ರೆ ನಡೆಯಲಿದೆ.ಸೌಜನ್ಯ ಸಾವಿನ ನ್ಯಾಯಕ್ಕೆ ಆಗ್ರಹಿಸುವವರು ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು.

ಸುಮಾರು 14 ದಿನಗಳ ಕಾಲ ನಡೆಯುವ ಸುಮಾರು 330 ಕಿ.ಮೀ.ಗಳ ಪಾದಯಾತ್ರೆಯಲ್ಲಿ ಸೌಜನ್ಯ ಸಾವು ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಸಾವು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸಲಿದೆ ಎಂದರು.ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಕ್ಷಣವೇ ಮರು ತನಿಖೆಗೆ ಕ್ರಮ ಕೈಗೊಳ್ಳಬೇಕು. ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಈಗಾಗಲೇ ತನಿಖೆ ನಡೆಸಿರುವ ತನಿಖಾಧಿಕಾರಿಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸೌಜನ್ಯ ಮಹಿಳಾ ಸುರಭಕ್ಷಾ ಆಯೋಗ ರಚಿಸಬೇಕು. ರಾಜ್ಯದಲ್ಲಿ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾಗಿ ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕರಣಗಳನ್ನು ಭೇದಿಸಬೇಕು.ಧರ್ಮಸ್ಥಳ ಸುತ್ತಮುತ್ತ ದಶಕಗಳ ಹಿಂದೆ ನಡೆದ ಆತ್ಮಹತ್ಯೆ, ಅಸಹಜ ಸಾವು ಪ್ರಕರಣಗಳನ್ನು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿನ್ಯಾಯಾಂಗ ತನಿಖೆ ನಡೆಸಬೇಕು. ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳಲ್ಲಿ ಕೇವಲ ಶೇ.1.18ಮಂದಿಗೆ ಶಿಕ್ಷೆಯಾಗಿದೆ. ಇಷ್ಟು ಕಡಿಮೆ ಶಿಕ್ಷೆಯಾಗಲು ಕಾರಣವಾದ ಲೋಪಗಳನ್ನು ಪತ್ತೆಮಾಡಿ ಅವುಗಳನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಇದಕ್ಕೆ ಕಾರಣ ಪತ್ತೆಮಾಡಲು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಕೀಲರು, ಪೊಲೀಸ್ ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ಶಿಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ರಘುಪತಿ ಭಟ್, ಜಿಲ್ಲಾಧ್ಯಕ್ಷ ಪ್ರವೀಣ್ ಜಾರ್ಜ್, ಪದಾಧಿಕಾರಿಗಳಾದ ಸವಿತಾ, ಯಶೋದ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News