ಬಜ್ಪೆ: ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಫೌಂಡೇಶನ್ ಉದ್ಘಾಟನೆ
ಬಜ್ಪೆ: ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಫೌಂಡೇಶನ್ ಉದ್ಘಾಟನೆ ಮತ್ತು ಬಜ್ಪೆ ಝಾರ ಸೆಂಟರ್ ನಲ್ಲಿ ರೂಪುಗೊಂಡಿರುವ ಹವಾನಿಯಂತ್ರಿತ ಇಸ್ತಿರಾ ಬ್ಯಾಂಕ್ವೆಟ್ ಹಾಲ್ ಶುಭಾರಂಭದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವು ಕಿನ್ನಿಪದವಿನಲ್ಲಿ ಗುರುವಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಮನ್ಸೂರ್ ಅಹ್ಮದ್ ಸಅದಿ ಅವರು, ಹಾಜಿ ಬಿ.ಎಚ್. ಉಮರಬ್ಬ ಅವರ ಕುಟುಂಬ ತನ್ನ ದುಡಿಮೆಯಲ್ಲಿ ಒಂದು ಪಾಲನ್ನು ಸಮಾಜದ ಒಳಿತಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಈ ಸಮ ಸಮಾಜದಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ. ಎಲ್ಲಾ ಧರ್ಮಗಳು ಸೌಹಾರ್ದ, ಸಹೋದರತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನಷ್ಟೇ ಭೋದಿಸಿದೆ. ಅದನ್ನು ಮರೆಮಾಚಿ ನಾವು ಬದುಕುತ್ತಿದ್ದೇವೆ. ಸರ್ವ ಧರ್ಮಗಳ ನೈಜ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಶ್ರಮಿಸಬೇಕೆಂದರು.
ಲೋಕಾಯುಕ್ತ ಎಸ್ಪಿ ನಟರಾಜ್, ಬಜ್ಪೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್., ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್, ಬಜ್ಪೆ ರೋಟರಿ ಕ್ಲಬ್ ನ ಪ್ರಥಮ ಅಧ್ಯಕ್ಷ ಮಾಧವ ಅಮೀನ್, ಸಂತ ವಿನ್ಸೆಂಟ್ ದೆ ಪೌಲ್ ಸ್ಥಾಪಕ ಕಾರ್ಯದರ್ಶಿ ವಿಲಿಯಂ ಸಿರಿಲ್ ಲಿವಿಸ್ ಮಾತನಾಡಿ ಹಾಜಿ ಬಿ.ಎಚ್. ಉಮ್ಮರಬ್ಬ ಚಾರಿಟೇಬಲ್ ಫೌಂಡೇಶನ್ನ ಕಾರ್ಯಗಳನ್ನು ಶ್ಲಾಘಿಸಿ ಸಂಸ್ಥೆಗೆ ಶುಭಹಾರೈಸಿದರು.
ಇದೇ ವೇಳೆ ನೂರಕ್ಕೂ ಅಧಿಕ ರೋಗಿಗಳಿಗೆ ವೈದ್ಯಕೀಯ ಸಲಕರಣೆಗಳನ್ನು ಹಸ್ತಾಂತರಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಮುಸ್ತಫ ಕಿನ್ನಿಪದವು, ಇಲ್ಯಾಸ್ ಬಜ್ಪೆ, ನಝೀರ್ ಕಿನ್ನಿಪದವು ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬಜ್ಪೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಕಟೀಲು ಲೈಫ್ಲೈನ್ ಹೆಲ್ತ್ ಕೇರ್ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ, ಕಣ್ಣಿನ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವು ನಡೆಯಿತು.
ಶಿಬಿರದಲ್ಲಿ ಸ್ತ್ರೀರೋಗ, ಮಕ್ಕಳ ತಜ್ಞರು, ನರ ರೋಗ ತಜ್ಞರು, ಚರ್ಮ ರೋಗ ತಜ್ಞರು, ಕಣ್ಣಿನ ತಜ್ಞರು, ಜನರಲ್ ವೈದ್ಯರು ಹಾಗೂ ಹೋಮಿಯೋಪತಿ ವಿಭಾಗದ ತಜ್ಞ ವೈದ್ಯರ ತಂಡ ಭಾಗವಹಿಸಿತ್ತು. ಶಿಬಿರದಲ್ಲಿ 1,500ಕ್ಕೂ ಅಧಿಕ ಮಂದಿ ಭಾಗವಹಿಸಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟ ರೋಗಿಗಳಿಗೆ ಒಂದು ವಾರಗಳ ವರೆಗಿನ ಔಷದೋಪಚಾರ ಮತ್ತು ಕನ್ನಡಕಗಳನ್ನು ಇದೇ ಸಂದರ್ಭ ಉಚಿತವಾಗಿ ವಿತರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅಬೂಬಕರ್ ಹಾಜಿ ಕೃಷ್ಣಾಪುರ, ಮದೀನಾ ಇಸ್ಲಾಮಿಕ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಜ್ಪೆ, ಅಲ್ ಮುಝೈನ್ ಸಂಸ್ಥೆಯ ಸಿಇಒ ಝಕರಿಯಾ ಜೋಕಟ್ಟೆ, ಬಜ್ಪೆ ಪಟ್ಟಣ ಪಂಚಾಯತ್ ಸಿಒ ಪಕೀರಪ್ಪ ಮೂಲ್ಯ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಮಿಸ್ಬಾಹ್ ಕನ್ಸಲ್ಟೆಂಟ್ ನ ಇಸ್ಮಾಯೀಲ್ ಇಂಜಿನಿಯರ್, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಾಕೊಬ್ ಪೆರೇರಾ, ದ.ಕ. ಜಿಲ್ಲಾ ಡಿಆರ್ ಸೆಲ್ ಅಧ್ಯಕ್ಷ ಶೇಖರ್ ಪೂಜಾರಿ, ಮುಲ್ಕಿ - ಮೂಡಬಿದಿರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ, ರಾಜ್ಯ ಎಸ್ ಡಿ ಪಿಐ ಕಾರ್ಯಕಾರಿ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಝೀರ್ ಕಿನ್ನಿಪದವು, ಡಿಎಸ್ಎಸ್ ಸಂಚಾಲಕ ದೇವದಾಸ್, ಬಜ್ಪೆ ಹೆಲ್ತ್ ಕೇರ್‌ನ ಫಯಾಝ್, ಡಿಎಸ್ಎಸ್ ಸಿದ್ಧಾರ್ಥನಗರ ಮಾಜಿ ಸಂಚಾಲಕ ಸತೀಶ್ ಸಾಲ್ಯಾನ್, ಮೂಡಬಿದಿರೆ ರೈತ ಮೋರ್ಛಾದ ಅಧ್ಯಕ್ಷ ಆರ್.ಕೆ. ರಾಜೇಶ್ ಅಮೀನ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಾಹುಲ್ ಹಮೀದ್, ಮುಹಮ್ಮದ್ ಶರೀಫ್, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ಖಾದರ್, ಶೇಖರ್ ಗೌಡ, ಸುರೇಂದ್ರ ಪೆರಗಡೆ, ಎಸ್ ಡಿಪಿಐ ಆರೋಗ್ಯ ವಿಭಾಗದ ಮುಖ್ಯಸ್ಥ ಇಲ್ಯಾಸ್, ಎಸ್ ಕೆ ಎಸ್ ಎಸ್ ಎಂ ಮಾಜಿ ಅಧ್ಯಕ್ಷ ಮೋನಾಕ, ಬಜ್ಪೆ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ತೌಸೀಫ್ ಬಜ್ಪೆ, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಕಳವಾರು, ಹಾಜಿ ಬಿ.ಎಚ್. ಉಮರಬ್ಬ ಅವರ ಪುತ್ರ ಮುತ್ತಲಿಬ್ ಮೊದಲಾದವರು ಉಪಸ್ಥಿತರಿದ್ದರು.
ಹಾಜಿ ಬಿ.ಎಚ್. ಉಮರಬ್ಬ ಅವರ ಪುತ್ರ ಹೈದರ್ ಅಲಿ ಅತಿಥಿಗಳನ್ನು ಸ್ವಾಗತಿಸಿದರು. ಆರೋಗ್ಯ ತಪಾಸಣಾ ಶಿಬಿರದ ಮೇಲ್ವಿಚಾರಕ ಹಾಗೂ ಟ್ರಸ್ಟ್ ನ ಸಿರಾಜ್ ಹುಸೈನ್ ಬಜ್ಪೆ ಪ್ರಾಸ್ತಾವಿಕ ಮಾತನಾಡಿದರು.