ಬಿ.ಸಿ.ರೋಡ್ | ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಯುವಕ ಮೃತ್ಯು

Update: 2024-02-25 04:56 GMT

ಬಂಟ್ವಾಳ, ಫೆ.25: ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.

ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ; ಪ್ರಸಕ್ತ ಪಾಣೆಮಂಗಳೂರು - ಆಲಡ್ಕದಲ್ಲಿ ವಾಸ್ತವ್ಯವಿದ್ದ ಅಶ್ರಫ್ (32) ಮೃತಪಟ್ಟ ಯುವಕ.

ಅವರು ಸ್ನೇಹತನಿಗೆ ಸಹಾಯ ಮಾಡಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತನ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು ತೆರಳಿದ್ದರು. ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತನ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ.

ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News