MLA ಟಿಕೆಟ್ ಕೊಡಿಸುವುದಾಗಿ ಪುತ್ತೂರಿನ ಬಿಜೆಪಿ ಮುಖಂಡನಿಂದ ಕೋಟ್ಯಂತರ ರೂ. ವಂಚನೆ ಆರೋಪ: ಸಿಎಂಗೆ ಬರೆದ ಪತ್ರ ವೈರಲ್‌

Update: 2023-09-30 06:00 GMT

ಬೆಂಗಳೂರು, ಸೆ.30: ʼʼಪುತ್ತೂರಿನ ಬಿಜೆಪಿ ಮುಖಂಡರ ಶೇಖರ್.ಎಸ್.ಪಿ. ಮತ್ತು ಕೊಟ್ಟೂರಿನ ರೇವಣಸಿದ್ದಪ್ಪ ಎಂಬುವವರು ಹಿಂದಿನ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ 'ಮೀಸಲು ವಿಧಾನಸಭಾ ಕ್ಷೇತ್ರ (ಎಸ್‌.ಸಿ)ದಲ್ಲಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆʼʼ ಎಂದು ಪಿ.ಡಬ್ಲ್ಯೂಡಿ ಇಲಾಖೆಯ ನಿವೃತ್ತ ಸಹಾಯಕ ಅಭಿಯಂತರ ಶಿವಮೂರ್ತಿ ಎಂಬುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಣ ವಂಚನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ನನ್ನ ಹಣವನ್ನು ವಾಪಸ್ಸು ಕೊಡಿಸಿ ನ್ಯಾಯ ಒದಗಿಸಲು ದೂರುದಾರರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಪತ್ರದಲ್ಲೇನಿದೆ?

'ರೇವಣಸಿದ್ದಪ್ಪ ಎಂಬುವವನು ನನ್ನ ನಿವೃತ್ತಿ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದು, ಆ ಬಳಿಕ ಒಂದೆರಡು ಕಾರ್ಯಕ್ರಮದಲ್ಲಿ ಭೇಟಿಯಾದಾಗ, 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿಸುವುದಾಗಿ 2022ರ ಅಕ್ಟೋಬರ್ 23 ರಂದು ಬೆಂಗಳೂರಿನ ಒಂದು ಹೋಟೆಲ್‌ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ. ಎಂಬವರನ್ನು ಪರಿಚಯಿಸಿದ್ದಾನೆ. ಶೇಖರ್.ಎಸ್.ಪಿ. ನನ್ನ ಪರಿಚಯ ಆದ ಮೇಲೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಬೆಂಗಳೂರಿನ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಕಟೀಲು ಅವರು ನನ್ನ ಆತ್ಮೀಯ ಸ್ನೇಹಿತರೆಂದು ಹೇಳಿ ಪರಿಚಯಿಸಿದ್ದ, ಆ ಬಳಿಕ ನಳಿನ್ ಕುಮಾರ್ ಕಟೀಲು ನನ್ನ ಬಳಿ ಮಾತನಾಡಿ ಟಿಕೆಟ್‌ ವಿಚಾರದ ಎಲ್ಲಾ ವ್ಯವಹಾರವನ್ನು ಶೇಖರ್ ಅವರ ಬಳಿ ಮಾತನಾಡಿ ಎಂದು ತಿಳಿಸಿದ್ದಾರೆʼ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ʼʼನಂತರ ಶೇಖರ್.ಎನ್.ಪಿ. ರವರು ನನ್ನ ಬಳಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣವನ್ನು ಕೇಳುತ್ತಾರೆ, ಟಿಕೆಟ್‌ ಸಿಗದೆ ಇದ್ದ ಪಕ್ಷದಲ್ಲಿ ನಿಮ್ಮ ಹಣವನ್ನು ವಾಪಸ್ಸು ನೀಡುತ್ತೇನೆಂದು ತಿಳಿಸುತ್ತಾರೆ. ಇದರಂತೆ 2022 ಆಕ್ಟೋಬರ್ 9 ರಿಂದ ಶುರುವಾದ ಹಣದ ವ್ಯವಹಾರ ಎಪ್ರಿಲ್ 2023 ಕ್ಕೆ ರೂ.2 ಕೋಟಿ 55 ಲಕ್ಷದ ವರೆಗೂ ಹಣ ಪಡೆದುಕೊಂಡಿರುತ್ತಾರೆʼʼ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ʼʼ2002 ಅಕ್ಟೋಬರ್ 15 ರಂದು ಚಿತ್ರದುರ್ಗದಲ್ಲಿ ರಸ್ತೆಯ ಬಳಿ ಶೇಖರ್ ಒಬ್ಬ ವ್ಯಕ್ತಿಯನ್ನು ಕಳುಹಿಸಿ 50 ಲಕ್ಷ ರೂ. ಗಳ ನಗದು ಹಣವನ್ನು ಪಡೆದಿದ್ದಾನೆ. ತದನಂತರ ಆನ್‌ಲೈನ್ ಪೇಮೆಂಟ್ ಸೇರಿ ಇದೇ ತರ ರೂ.1 ಕೋಟಿ 65 ಲಕ್ಷ ರೂ. ಶೇಖರ್ ಎನ್.ಪಿ. ಅವರಿಗೆ ಸೇರಿರುತ್ತದೆʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ʼʼಇದರ ಜೊತೆಗೆ ಕೊಟ್ಟೂರು ತಾಲೂಕಿನ, ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡನಾಗಿದ್ದ ರೇವಣಸಿದ್ದಪ್ಪ ಬೆಂಗಳೂರಿನ ಒಂದು ಹೋಟೆಲ್‌ಗೆ ಕರೆದುಕೊಂಡು, ಹೋಗಿ, ಬಿ.ಜೆ.ಪಿ ಹಿರಿಯ ನಾಯಕರಿಗೆ ಮತ್ತು ಇತ್ತರರಿಗೆ ಕೊಡಬೇಕೆಂದು ಹೇಳಿ 50 ಲಕ್ಷ ರೂ. ಗಳ ನಗದನ್ನು ಕುಡ್ಲಿಗಿ ತಾಲೂಕಿನ ಚಿಕ್ಕಹೋಗಿಗಹಳ್ಳಿ ಗ್ರಾಮದ ಆರೆಸ್ಸೆಸ್ ಮುಖಂಡ ನಾಗಣ್ಣ ಎಂಬವರ ‌ಸಮ್ಮುಖದಲ್ಲಿ ಪಡೆದಿದ್ದಾನೆʼʼ ಎಂದು ಶಿವಮೂರ್ತಿ ಪತ್ರದಲ್ಲಿ ಆರೋಪಿಸಿದ್ದಾರೆ.

ʼʼಈ ಹಣವನ್ನು ನನ್ನ ಸ್ವಂತ ನಿವೇಶನವನ್ನು ಮಾರಿ ನನ್ನ ಜಮೀನಿನ ಬೆಳೆಗಳನ್ನು ಮಾರಾಟ ಮಾಡಿ, ಸ್ನೇಹಿತರಿಂದ ಸಾಲ ಪಡೆದು ಹಾಗೂ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ಸೇರಿಸಿ ಇವರಿಗೆ ಕೊಟ್ಟಿರುತ್ತೇನೆ. ಇದಾದ ಮೇಲೆ ನಂತರದ ದಿನಗಳಲ್ಲಿ 2023ರ ಎಪ್ರಿಲ್ ತಿಂಗಳಿನಲ್ಲಿ ಹಗರಿಬೊಮ್ಮನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ (ಎಸ್.ಸಿ) ಬಿಜೆಪಿ ಟಿಕೆಟ್ ಘೋಷಣೆಯಾದಾಗ, ಅದರಲ್ಲಿ ನನ್ನ ಬದಲಿಗೆ ಬಿ.ರಾಮು ಎಂಬುವವರಿಗೆ ಟಿಕೆಟ್ ಸಿಗುತ್ತದೆ.‌ ಇದರಿಂದ ನನಗೆ ವಂಚನೆ ಆಗಿರುವುದು ಅರಿವಾಗಿದೆʼʼ ಎಂದು ತಿಳಿಸಿದ್ದಾರೆ.

ಹಣ ಪಡೆದವರಿಗೆ ಕರೆ ಮಾಡಿದಾಗ ನನ್ನ ಕರೆ ಸ್ವೀಕರಿಸಿಲ್ಲ. ಬೇರೆಯವರ ಫೋನ್ ನಿಂದ್ ಕರೆ ಮಾಡಿ ಹಣ ಕೊಡುವಂತೆ ಒತ್ತಾಯಿಸಿದರೆ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ನನ್ನ ಹಣವನ್ನು ನನಗೆ ಕೊಡಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಶಿವಮೂರ್ತಿ ಒತ್ತಾಯಿಸಿದ್ದಾರೆ. ಹರಿದಾಡುತ್ತಿರುವ ಪತ್ರದಲ್ಲಿ ಶಿವಮೂರ್ತಿ ಅವರ ಸಹಿ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಅವರು ನೀಡಿಲ್ಲ.

ಶೇಖರ್.ಎನ್.ಪಿ. ಪ್ರತಿಕ್ರಿಯೆ ಏನು?  

ಇನ್ನು ಶಿವಮೂರ್ತಿ ಅವರಿಂದ ಹಣ ಪಡೆದಿದ್ದಾರೆ ಎನ್ನಲಾದ ದಕ್ಷಿಣ ಕನ್ನಡ ಜಿಲ್ಲೆಯ ನೇರಳಕಟ್ಟೆಯ ಶೇಖರ್ ಅಲಿಯಾಸ್‌ ರಾಜಶೇಖರ್ ಅವರನ್ನು ಸಂಪರ್ಕಿಸಿದಾಗ, ʼʼ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ವಂಚನೆಗೊಳಗಾಗಿರುವ ಶಿವಮೂರ್ತಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬ್ಯಾಂಕ್‌ ಖಾತೆಗೆ ಹಣ ಬಂದಿರುವುದು ನಿಜ. ಆದರೆ, ನಾನು ಯಾರ ಬಳಿಯೂ ಹಣ ಪಡೆದಿಲ್ಲ. ( ಕೇಳಿರುವುದಿಲ್ಲ ) ಈ ವಿಚಾರ ನನ್ನ‌ ಗಮನಕ್ಕೆ ಬಂದು ನನ್ನ ಖಾತೆಗೆ ಹಣ ಹಾಕಿರುವವರ ಬಗ್ಗೆ ವಿಚಾರಿಸಿದಾಗ, ಶಿವಮೂರ್ತಿ ಅವರಿಂದ ಹಣ ಪಡೆದು ಅವರು ನನ್ನ ಖಾತೆಗೆ ವರ್ಗಾಯಿಸಿರುವ ವಿಷಯ ಗೊತ್ತಾಗಿದೆ. ಈ ಬಗ್ಗೆ ಶಿವಮೂರ್ತಿ ಅವರನ್ನು ಸಂಪರ್ಕಿಸಿ ಕಾನೂನು ಹೋರಾಟ ಮಾಡುವಂತೆ ಸಲಹೆ ಕೊಟ್ಟಿದ್ದೇನೆʼʼ ಎಂದು ತಿಳಿಸಿದರು.

ಪುತ್ತಿಲ ಪರಿವಾರದ ಸ್ಪಷ್ಟನೆ

ಶೇಖರ್ ಅವರು ಪುತ್ತಿಲ ಪರಿವಾರದ ಕಾರ್ಯಕರ್ತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪುತ್ತಿಲ ಪರಿವಾರ, ʼʼ2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು. ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ. ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲʼʼ ಎಂದು ಸ್ಪಷ್ಟನೆ ನೀಡಿದೆ.



 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪತ್ರ


 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪತ್ರ

 


 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News