ನ.24ರಂದು ಮುಖ್ಯಮಂತ್ರಿಯಿಂದ ಎಮ್ಮೆಕೆರೆ ಈಜುಕೊಳ ಉದ್ಘಾಟನೆ: ದಿನೇಶ್ ಗುಂಡೂರಾವ್

Update: 2023-11-01 12:55 GMT

ಮಂಗಳೂರು, ನ.1: ಎಮ್ಮೆಕೆರೆಯಲ್ಲಿ ನಿರ್ಮಾಣವಾಗಿರುವ 24.94 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಈಜುಕೊಳ ವನ್ನು ನ. 24ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದು, ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸ್ಮಾರ್ಟ್ ಸಿಟಿಯಡಿ ನಿರ್ಮಾಣವಾಗಿರುವ ಈಜುಕೊಳ ಉದ್ಘಾಟನೆ ಹಾಗೂ ಕರಾವಳಿ ಉತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ.24ರಿಂದ 26ರವರೆಗೆ ಈಜುಕೊಳದಲ್ಲಿ 19ನೆ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್‌ಶಿಪ್ಸ್ 2023 ನಡೆಯಲಿದೆ. ಹಾಗಾಗಿ ಅ. 24ರಂದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಉಸ್ತುವಾರಿ ಸಚಿವರು ಹೇಳಿದರು.

ನ.4ರಂದು ಸ್ಥಳೀಯರ ಭೇಟಿ

ಈಜುಕೊಳ ನಿರ್ಮಾಣವಾದ ಸ್ಥಳ ಸ್ಥಳೀಯರ ಆಟದ ಮೈದಾನವಾಗಿ ಬಳಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈಜುಕೊಳ ನಿರ್ಮಾಣಕ್ಕೆ ಇಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಊರವರನ್ನು ವಿಶ್ವಾಸಕ್ಕೆ ಪಡೆದು ಕೆಲವೊಂದು ಬೇಡಿಕೆಗಳ ಈಡೇರಿ ಸುವ ಭರವಸೆಯೊಂದಿಗೆ ಈಜುಕೊಳ ನಿರ್ಮಾಣವಾಗಿದೆ. ಹಾಗಾಗಿ ಮುಖ್ಯಮಂತ್ರಿಯವರು ಉದ್ಘಾಟನೆ ಮಾಡುವ ಮೊದಲು ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಬೇಕಾಗಿದೆ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸಭೆಯ ಗಮನ ಸೆಳೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಜನರ ಜತೆ ನಾನೂ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನ. 4ರಂದು ಭೇಟಿ ನೀಡಿ ಮಾತನಾಡೋಣ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯುವುದು ಅತೀ ಮುಖ್ಯ ಎಂದು ಸಚಿವರು ಹೇಳಿದರು.

ಈಜುಕೊಳದ ನೀರಿನ ಗಣಮಟ್ಟ ಸೇರಿದಂತೆ ಮೂರು ವರ್ಷಗಳ ಕಾಲ ಈಜುಕೊಳವನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಈಜುಕೊಳದ ಕುರಿತಂತೆ ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಮೂಡಾದ ಮಾಜಿ ಅಧ್ಯಕ್ಷ ತೇಜೋಮಯ ಮಾಹಿತಿ ನೀಡಿದರು.

ನ. 24ರಂದು ಮುಖ್ಯಮಂತ್ರಿ ಭೇಟಿಯ ಸಂದರ್ಭ ಈಗಾಗಲೇ ನಿರ್ಮಾಣಗೊಂಡಿರುವ ಕದ್ರಿ ಮಾರುಕಟ್ಟೆ ಸೇರಿದಂತೆ ಇತರ ಯೋಜನೆಗಳ ಉದ್ಘಾಟನೆ ಅಥವಾ ಗುದ್ದಲಿ ಪೂಜೆ ಇದ್ದರೆ ಕ್ರೋಢೀಕರಿಸಿಕೊಂಡು ಸಿದ್ಧತೆ ನಡೆಸುವಂತೆಯೂ ಸಚಿವರು ಸಲಹೆ ನೀಡಿದರು.

ಕರಾವಳಿ ಉತ್ಸವ: ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಕೊರೋನ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಕರಾವಳಿ ಉತ್ಸವವನ್ನು ಈ ಬಾರಿ ಪುನರಾ ರಂಭಿಸಲು ನಿರ್ಧರಿಸಲಾಗಿದ್ದು, ಉತ್ಸವಕ್ಕೆ ತಗಲುವ ಅಂದಾಜು ವೆಚ್ಚ ಸೇರಿದಂತೆ ಪ್ರಸ್ತಾವನೆಯನ್ನು ಶೀಘ್ರವೇ ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.

ಡಿ. 22ರಿಂದ ಡಿ. 31ರವರೆಗೆ 10 ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ನಡೆಸಲು ಈಗಾಗಲೇ ನಡೆದಿರುವ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಕರಾವಳಿ ಉತ್ಸವದಲ್ಲಿ ಬೀಚ್, ಗಾಳಿಪಟ ಉತ್ಸವ ಮೊದಲಾದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಅಗತ್ಯ ತಯಾರಿ, ಟೆಂಡರ್‌ಗೆ ಕಾಲಾವಕಾಶದ ಅಗತ್ಯವಿದೆ ಎಂದು ಕರಾವಳಿ ಉತ್ಸವ ಸಮಿತಿಯ ಸದಸ್ಯರಾದ ಮಂಜುನಾಥ್ ಅವರು ಹೇಳಿದಾಗ, ಉತ್ಸವಕ್ಕೆ ಅಗತ್ಯ ಅನುದಾನದ ಕುರಿತಂತೆ ಸರಾಕರಕ್ಕೆ ಪ್ರಸ್ತಾವನೆ ಕಳುಹಿಸಿದ ಬಳಿಕ ಅಲ್ಲಿಂದ ಹಸಿರು ನಿಶಾನೆ ದೊರೆತಾಕ್ಷಣ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿ ತಜ್ಞರೊಂದಿಗೆ ಸಮಾಲೋಚಿಸಿ ಕ್ರಮ ವಹಿಸಿ ಎಂದು ಸಚಿವರು ಸಲಹೆ ನೀಡಿದರು.

ಸ್ಥಳೀಯರ ಜತೆ ಹೊರ ಊರು, ರಾಜ್ಯ, ದೇಶದ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳು ವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಿಸಿದರು.

ಸಭೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ. ಆನಂದ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮನಪಾ ಆಯುಕ್ತ ಆನಂದ್ ಮೊದಲಾದವರು ಉಪಸ್ಥಿತರಿದ್ದರು.

ನಾನೂ ಈಜು ಪಟು: ದಿನೇಶ್ ಗುಂಡೂರಾವ್

ಬೆಂಗಳೂರಿನ ಜಯನಗರದಲ್ಲಿ ಈಜುಕೊಳವನ್ನು ತಮ್ಮ ತಂದೆ ಗುಂಡೂರಾವ್ ಈಜುಕೊಳದ ನೀರಿನಲ್ಲಿ ಡೈವ್ ಹೊಡೆ ಯುವ ಮೂಲಕ ಉದ್ಘಾಟಿಸಿ ಗಮನ ಸೆಳೆದಿದ್ದರು ಎಂದು ಸುದ್ದಿಗಾರರು ದಿನೇಶ್ ಗುಂಡೂರಾವ್ ಅವರನ್ನು ನೆನಪಿಸಿದಾಗ, ನಾನೂ ಈಜುಪಟು, ಸಂದರ್ಭ ಸಿಕ್ಕರೆ ಈಜಲು ಸಿದ್ಧ ಎಂದರು. ಈ ಸಂದರ್ಭ ಅವರ ಪಕ್ಕದಲ್ಲೇ ಇದ್ದ ಮೇಯರ್ ಸುಧೀರ್ ಶೆಟ್ಟಿಯವರು, ನೀವು ಈಜಿದರೆ ಜತೆಗೆ ನಾನೂ ಈಜುವೆ ಎಂದು ಪ್ರೋತ್ಸಾಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News