ಆಯುಷ್ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ದೂರು: ತನಿಖೆಗೆ ಸಚಿವ ದಿನೇಶ್ ಗುಂಡೂರಾವ್ ಆದೇಶ
ಮಂಗಳೂರು, ಸೆ.2: ಆಯುಷ್ ಇಲಾಖೆಯ ಕೆಲವು ಅಧಿಕಾರಿಗಳ ಮತ್ತು ಇಲಾಖೆ ಕಾರ್ಯನಿರ್ವಹಣೆಯ ಬಗ್ಗೆ ಆರೋಪ ಹೊರಿಸಿ ಮುಖ್ಯಮಂತ್ರಿಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮುಖ್ಯ ಕಾರ್ಯದರ್ಶಿ ಗಳಿಗೆ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.
ಆಯುಷ್ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಮತ್ತು ಇಲಾಖೆ ಕಾರ್ಯನಿರ್ವಹಣೆಯ ಕುರಿತಂತೆ ವಾಸುದೇವ ಹೊಳ್ಳ, ಜೆ.ಎಸ್.ಡಿ. ಪಾಣಿ, ಕಿರಣ್ ಪೂಜಾರಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರ ಕಚೇರಿ, ಮುಖ್ಯಮಂತ್ರಿಗಳ ಸಚಿವಾಲಯ, ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿ ಸೇರಿದಂತೆ ಸತತವಾಗಿ ಹಲವಾರು ದೂರುಗಳನ್ನು ನೀಡುತ್ತಿದ್ದು, ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅವರು ನೀಡಿರುವ ದೂರುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ದೂರಿನಲ್ಲಿರುವ ಸತ್ಯಾ- ಸತ್ಯತೆಯನ್ನು ತಿಳಿಯಲು, ಆರೋಪಗಳ ಬಗ್ಗೆ ತನಿಖೆ ನಡೆಸಿ, ದೂರುಗಳಲ್ಲಿ ಸತ್ಯಾಂಶ ಕಂಡು ಬಂದಲ್ಲಿ ಇಲಾಖೆಯ ಅಧಿಕಾರಿ-ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಆರೋಗ್ಯ ಸಚಿವರು ಸೂಚಿಸಿದ್ದಾರೆ.
ಇದೇ ವೇಳೆ ಆಯುಷ್ ಇಲಾಖಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ದೂರುದಾರರು ತಮಗೆ ಸರಕಾರಿ ಕೆಲಸ ನಿರ್ವಹಿಸಲು ಅಡಚಣೆ ಮಾಡುವ ಉದ್ದೇಶದಿಂದಲೇ ದೂರು ನೀಡಿರುವುದಾಗಿ ತಿಳಿಸಿರುವುದಾಗಿ ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂ ರಾವ್ ಅವರು ದೂರುದಾರರು ಉದ್ದೇಶಪೂರ್ವಕವಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಗಾಗಿ ಸರಕಾರಿ ನೌಕರರಿಗೆ ಕರ್ತವ್ಯಕ್ಕೆ ಅಡಚಣೆ ಉಂಟು ಮಾಡುವ ಉದ್ದೇಶಕ್ಕಾಗಿಯೇ ದೂರು ನೀಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ, ದೂರುದಾರರು ಈ ಉದ್ದೇಶಕ್ಕಾಗಿ ದೂರು ನೀಡಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.