ಸೈಬರ್ ಖದೀಮರ ನಕಲಿ ಲೋನ್ ಆ್ಯಪ್ ವಂಚನೆ; ಎಚ್ಚರ ತಪ್ಪಿದರೆ ಮಾನ ಹರಾಜು ಗ್ಯಾರಂಟಿ!

Update: 2023-07-21 04:53 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಜು. 20: ಸೈಬರ್ ಅಪರಾಧಿಗಳು ತಮ್ಮ ಮೋಸದ ಜಾಲದಿಂದ ಅಮಾಯಕರನ್ನು ಬಲೆಗೆ ಬೀಳಿಸಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವವರೆಗೆ ಕಿರುಕುಳ ನೀಡಿರುವ ಪ್ರಕರಣಗಳು ನಡೆಯುತ್ತಿರುವಂತೆಯೇ, ನಕಲಿ ಲೋನ್ ಆ್ಯಪ್ ಗಳ ಮೂಲಕ ವಂಚನೆ ಜತೆಗೆ ಮಾನ ಹರಾಜು ಹಾಕುವ ಪ್ರಕ್ರಿಯೆಗಳು ವ್ಯಾಪಕವಾಗುತ್ತಿವೆ.

ಉಡುಪಿಯ ಮೀನುಗಾರ ಯುವಕನೊಬ್ಬ ತಮ್ಮ ಮೊಬೈಲ್ನಲ್ಲಿ ಕೆಲ ದಿನಗಳ ಹಿಂದೆ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿಕೊಂಡು 3,500 ರೂ. ಸಾಲ ಪಡೆದಿದ್ದ. ಅದನ್ನು ಆತ ಮರು ಪಾವತಿ ಮಾಡಿದ್ದರೂ, ಅಂತರ್ರಾಷ್ಟ್ರೀಯ ಕರೆಗಳ ಮೂಲಕ ಆತನಿಗೆ ಬೆದರಿಕೆ ನೀಡಿರುವುದಲ್ಲದೆ, ಆತನ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ನೊಂದ ಯುವಕನ ಸಹಿತ ಆತನ ಸ್ನೇಹಿತರ ಮೊಬೈಲ್ ನಂಬರ್ಗಳಿಗೆ ಕಳುಹಿಸಿ ಕಿರುಕುಳ ನೀಡಲಾಗಿದೆ. ಆತನ ಎಡಿಟ್ ಮಾಡಲಾದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಸಂತ್ರಸ್ತನ ಸ್ನೇಹಿತರಿಗೂ ಕಿರುಕುಳ ನೀಡಿರುವ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಉಡುಪಿ ಪೊಲೀಸರು ಪ್ರಕರಣ ತನಿಖೆ ಕೈಗೆತ್ತಿಕೊಂಡಿದ್ದು, ಖದೀಮರು ಛತ್ತೀಸ್ಗಢದಿಂದ ಈ ಕಾರ್ಯಾಚರಣೆ ಮಾಡಿರು ವುದಾಗಿ ಪತ್ತೆ ಹಚ್ಚಿದ್ದು, ಅಪರಾಧಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಿದ್ದಾರೆ.

ಅನಧಿಕೃತ ಲೋನ್ ಆ್ಯಪ್ಗಳ ಮೂಲಕ ವಂಚನೆಗೈಯುವ ಈ ಸೈಬರ್ ಖದೀಮರ ತಂಡ ಈ ರೀತಿ ಅಶ್ಲೀಲ ಫೋಟೊ, ವೀಡಿಯೊಗಳ ಮೂಲಕ ಕಿರುಕುಳ ನೀಡುವುದು ಮಾತ್ರವಲ್ಲದೆ, ಸಂತ್ರಸ್ತರ ಸ್ನೇಹಿತರು ಹಾಗೂ ಅವರ ಕುಟುಂಬದವರ ಸಂಪರ್ಕ ಸಂಖ್ಯೆಗಳನ್ನು ಪಡೆದು ಅವರಿಗೂ ಕಿರುಕುಳ ನೀಡುವುದು ಹೆಚ್ಚುತ್ತಿದೆ ಎನ್ನುತ್ತಾರೆ ಸೈಬರ್ ತಜ್ಞ ಡಾ.ಅನಂತ್ ಪ್ರಭು.

ಆ್ಯಪ್ ಇನ್ಸ್ಟಾಲ್, ಡೌನ್ಲೋಡ್ ಮಾಡುವಾಗ ಇರಲಿ ಎಚ್ಚರ!

ಲೋನ್ ಆ್ಯಪ್ ಗಳು ಯಾವುದೇ ಆರ್ಬಿಐನಿಂದ ಮಾನ್ಯತೆ ಪಡೆದಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಇಂತಹ ಕೆಲವೊಂದು ನಕಲಿ ಲೋನ್ ಆ್ಯಪ್ಗಳು ಗೂಗಲ್ ಜಾಹೀರಾತು ಜತೆ ಕಾಣಿಸಿಕೊಳ್ಳುತ್ತವೆ. ಗೂಗಲ್ನಲ್ಲಿ ಕ್ವಿಕ್, ಈಝಿ ಮನಿ ಎಂದೆಲ್ಲಾ ಹುಡುಕಾಟ ನಡೆಸಿದರೆ, ಇಂತಹ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಗೊತ್ತಿಲ್ಲದೆ ಈ ನಕಲಿ ಆ್ಯಪ್ಗಳು ಇನ್ಸ್ಟಾಲ್ ಆಗಿ ಬಿಡುತ್ತವೆ. ಕೆಲವೊಮ್ಮೆ ಇಂತಹ ನಕಲಿ ಆ್ಯಪ್ಗಳ ಬಗ್ಗೆ ಅರಿವಿಲ್ಲದೆ ಕುತೂಹಲದಿಂದ ಡೌನ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ಬೇರೆ ಯಾವುದೋ ಒಂದು ಆ್ಯಪ್ ಇನ್ಸ್ಟಾಲ್ ಮಾಡುವ ಸಂದರ್ಭ ಇತರ ಹಲವು ಆ್ಯಪ್ಗಳು ಜತೆಯಾಗಿ ಇನ್ಸ್ಟಾಲ್ ಆಗುತ್ತವೆ. ಈ ಸಂದರ್ಭ ಕೆಲವೊಂದು ಅನುಮತಿಗಳನ್ನು ಈ ಆ್ಯಪ್ಗಳು ಕೇಳುತ್ತವೆ. ಲೊಕೇಶನ್, ಎಸ್ಎಂಎಸ್, ಗ್ಯಾಲರಿ, ಕಾಂಟ್ಯಾಕ್ಟ್ ಪರ್ಮಿಶನ್ ಕೇಳಲಾಗುತ್ತದೆ. ಇದರ ಬಟನ್ ಪ್ರೆಸ್ ಮಾಡಿದಾಗ ಮೊಬೈಲ್ನಲ್ಲಿರುವ ಎಲ್ಲಾ ರೀತಿಯ ಮಾಹಿತಿಗಳು ಇಂತಹ ಸೈಬರ್ ಅಪರಾಧಿಗಳ ಪಾಲಾಗುತ್ತವೆ. ಅವರು ಈ ಮಾಹಿತಿಗಳನ್ನು ಬಳಸಿಕೊಂಡು ಕೆಲ ದಿನಗಳ ಇನ್ಸ್ಟಂಟ್ ಲೋನ್ ಕೊಡುವುದಾಗಿ ಹೇಳಿ ವಂಚಿಸುವ, ಹಣ ಪಾವತಿ ಮಾಡಿದ್ದರೂ ಮಾಡಿಲ್ಲ ಎಂದು ಬೆದರಿಕೆ ಒಡ್ಡುವ ತಂತ್ರಗಳನ್ನು ಈ ಸೈಬರ್ ಅಪರಾಧಿಗಳು ಹೆಣೆಯುತ್ತಾರೆ.

ಕೆಲವೊಂದು ಆ್ಯಪ್ಗಳು Non banking financial company (NBFC) ನಡಿ ಮಾನ್ಯತೆ ಪಡೆದಿದ್ದು, ಅವುಗಳ ಮೂಲಕ ಲೋನ್ ಪಡೆದಾಗ ಆ್ಯಪ್ ಮೂಲಕವೇ ಹಣ ಮರು ಪಾವತಿಸಬೇಕಾಗುತ್ತದೆ. ಆದರೆ ನಕಲಿ ಆ್ಯಪ್ಗಳಲ್ಲಿ ಹಣ ಪಡೆದಾಗ, ಅದನ್ನು ಪಾವತಿಗೆ ಅವರು ಗೂಗಲ್ ಪೇ, ಫೋನ್ ಪೇ ಮಾಡುವಂತೆ ಹೇಳುತ್ತಾರೆ. ಮರುಪಾವತಿ ಮಾಡಿದರೂ ಪದೇಪದೇ ಕಿರುಕುಳ ಮುಂದುವರಿಸುವ ಪ್ರಮೇಯಗಳು ನಡೆಯುತ್ತಿವೆ. ಕೆಲವೊಮ್ಮೆ ಸಾಲ ಪಡೆದವರು ಬೇಸತ್ತು ಈ ಆ್ಯಪ್ ಅನ್ಇನ್ಸ್ಟಾಲ್ ಮಾಡುತ್ತಾರೆ. ಆ ಸಂದರ್ಭ ಈ ಖದೀಮರು, ಆ್ಯಪ್ ಮೂಲಕ ಸಾಲ ಪಡೆದವರ ಮೊಬೈಲ್ನಿಂದ ಪಡೆದುಕೊಂಡಿರುವ ಮೊಬೈಲ್ ಸಂಖ್ಯೆ, ಫೋಟೊಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಫೋಟೊ ದುರ್ಬಳಕೆ ಮಾಡಿಕೊಂಡು ಮೊಬೈಲ್ನಲ್ಲಿ ಪಡೆದ ಸಂಪರ್ಕ ಸಂಖ್ಯೆಗಳಿಗೆ ಕಳುಹಿಸುತ್ತಾರೆ. ಇದಲ್ಲದೆ, ಆ ನಂಬರಿಗೆ ನಕಲಿ ಲೀಗಲ್ ನೋಟಿಸ್ ಕೂಡಾ ಕಳುಹಿಸಿ, ‘ನಿಮ್ಮ ಸ್ನೇಹಿತ ನಮ್ಮಿಂದ ಲೋನ್ ಪಡೆದು ನಿಮ್ಮ ಹೆಸರನ್ನು ‘ಜಾಮೀನುದಾರ’ರಾಗಿ ನೀಡಿದ್ದಾರೆ, ನೀವು ಪಾವತಿಸಿ’ ಎಂದು ಬೆದರಿಕೆ ತಂತ್ರವನ್ನು ಈ ಸೈಬರ್ ಖದೀಮರು ಮಾಡುತ್ತಿದ್ದಾರೆ.

ಡೀಪ್ ಫೇಕ್ ತಂತ್ರಜ್ಞಾನ ಬಳಕೆ

'ಇದೀಗ ಹೊಸತಾದ ‘ಡೀಪ್ ಫೇಕ್’ ಎಂಬ ತಂತ್ರಜ್ಞಾನ ಬಂದಿದೆ. ಫೋಟೊ ಇದ್ದಾಗ ಅದರಿಂದ ವೀಡಿಯೊ ಸೃಷ್ಟಿ ಮಾಡಲು ಸಾಧ್ಯ. ಈ ತಂತ್ರಜ್ಞಾನವನ್ನು ಬಳಸಿ ಈ ಸೈಬರ್ ಖದೀಮರು ನಕಲಿ ಆ್ಯಪ್ ಮೂಲಕ ಲೋನ್ ಪಡೆದವರು ಮತ್ತು ಅವರ ಸ್ನೇಹಿತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆಯೊಡ್ಡುವ ಕಾರ್ಯವೂ ನಡೆಯುತ್ತಿದೆ. ಇದರಿಂದಾಗಿ ಕೆಲವರು ಮಾನ ಮರ್ಯಾದೆ ಅಂಜಿ ಆತ್ಮಹತ್ಯೆಗೆ ಮುಂದಾಗುವ, ಊರು ಬಿಟ್ಟು ಹೋಗುವ, ಮಾನಸಿಕ ಖಿನ್ನತೆಗೆ ಒಳಗಾಗುವ ಪ್ರಕರಣಗಳು ನಡೆಯುತ್ತಿವೆ. ಭಾರತ ಸರಕಾರ ಹಲವು ಚೀನಾದ ಆ್ಯಪ್ಗಳನ್ನು ಸ್ಥಗಿತಗೊಳಿಸಿದೆ. ಆದರೆ ಈ ಸೈಬರ್ ಅಪರಾಧಿಗಳು ಭಾರತದ ಕಂಪೆನಿಯ ಹೆಸರಿನಲೇ ನೋಂದಾಯಿಸಿಕೊಂಡು ಇಂತಹ ನಕಲಿ ಆ್ಯಪ್ ಗಳನ್ನು ಸೃಷ್ಟಿಸುತ್ತಿದ್ದು, ಇವುಗಳು ಪ್ಲೇ ಸ್ಟೋರ್ ನಲ್ಲಿ ಬರುತ್ತಿವೆ. ಈ ಬಗ್ಗೆ ಜನರು ಗಮನಹರಿಸುವುದು ಅತೀ ಮುಖ್ಯ'

- ಡಾ.ಅನಂತ ಪ್ರಭು, ಸೈಬರ್ ತಜ್ಞ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News