ದ್ವೇಷ ಭಾಷಣಕಾರ ಅರುಣ್ ಉಳ್ಳಾಲ್ ಬಂಧನಕ್ಕೆ ಆಗ್ರಹ

Update: 2024-10-08 08:41 GMT

ಮಂಗಳೂರು, ಅ.8: ಸಮುದಾಯಗಳ ನಡುವೆ ದ್ವೇಷ, ವೈಷಮ್ಯ ಹುಟ್ಟುಹಾಕುವ ರೀತಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ಅರುಣ್ ಉಳ್ಳಾಲ್ ಅವರನ್ನು ಬಂಧಿಸಿ, ವಿರುದ್ಧ ಕಠಿನ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ವಕೀಲ ಫಾ. ವಿನೋದ್ ಮಸ್ಕರೇನಸ್ ಬೆಳ್ತಂಗಡಿ ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲದಲ್ಲಿ ಸಾರ್ವಜನಿಕವಾಗಿ ಜರುಗಿದ ನವ ದಂಪತಿಗಳ ಸಮಾವೇಶದಲ್ಲಿ ಅರುಣ್ ಉಳ್ಳಾಲ್ ಅವರು ಭಾಷಣ ಮಾಡಿ ಸಮಾಜದ ಸೌಹಾರ್ದತೆ, ಸ್ವಾಸ್ಥ್ಯವನ್ನು ಕೆಡಿಸುವ ಸಮಾಜ ಘಾತುಕ ಪ್ರಯತ್ನ ಮಾಡಿದ್ದಾರೆ. ಸಂವಿಧಾನದ ಮೂಲ ಉದ್ದೇಶಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಪರಿಕಲ್ಪನೆಗಳಿಗೆ ಅಪಾಯ ಉಂಟುಮಾಡುವ ನಿಟ್ಟಿನಲ್ಲಿ ಅವರು ಭಾಷಣ ಮಾಡಿದ್ದಾರೆ. ಭಾರತೀಯ ಬಹುತ್ವದ ಪರಿಕಲ್ಪನೆಗೆ ಅಪಾಯ ತರುವಂತದ್ದಾಗಿದೆ. ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ವಹಿಸಿದಲ್ಲಿ ಜನರ ನಡುವೆ ಉದ್ಭವಿಸಬಹುದಾದ ಅಪನಂಬಿಕೆ, ದ್ವೇಷ, ವೈಷಮ್ಯ ತಡೆಗಟ್ಟಿ ಶಾಂತಿ, ಸೌಹಾರ್ದ ಸಹಬಾಳ್ವೆ ಬಲಪಡಿಸಿದಂತಾಗುತ್ತದೆ ಎಂದರು.

ಪ್ರಕರಣಕ್ಕೆ ಸಂಬಂಸಿದಂತೆ ಕಾನೂನಾತ್ಮಕವಾಗಿ ಏನು ಮಾಡಲು ಅವಕಾಶವಿದೆ ಎಂದು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಕೀಲರಾದ ಭಗಿನಿ ರೆನ್ಸಿ ಡಿ’ಸಿಲ್ವಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News