ತಂತ್ರಜ್ಞಾನ ಬಳಕೆ ಮೂಲಕ ಭಾಷೆಗಳ ಅಭಿವೃದ್ಧಿ ಸಾಧ್ಯ: ಪ್ರಸನ್ನ ಕೈಲಾಜೆ

Update: 2024-09-20 16:19 GMT

ಮಂಗಳೂರು: ಭಾಷೆ ಮತ್ತು ತಂತ್ರಜ್ಞಾನವು ಇಂದಿನ ಹೊಸ ದಿನಗಳಲ್ಲಿ ಜೊತೆಯಾಗಿ ನಡೆಯಬೇಕಿದೆ. ಹಾಗಾಗಿ ತಂತ್ರ ಜ್ಞಾನ ಬಳಕೆಯಿಂದ ಭಾಷೆಗಳ ಅಭಿವೃದ್ದಿ ಸಾಧ್ಯವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕಲ್ಯಾಣ ಮತ್ತು ಹಳೆ ವಿದ್ಯಾರ್ಥಿ ಸಂಪರ್ಕ ನಿರ್ದೇಶಕ ಪ್ರಸನ್ನ ಕೈಲಾಜೆ ಹೇಳಿದರು.

ನಿಟ್ಟೆ ವಿಶ್ವವಿದ್ಯಾನಿಲಯದ ಡಾ.ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರ ಮತ್ತು ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಶುಕ್ರವಾರ ನಡೆದ ಅನ್‌ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯ ಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದ ಮೂಲಕ ಭಾಷೆಯ ಬೆಳವಣಿಗೆಗೆ ಬೇಕಾದ ಹಲವು ಆಯಾಮಗಳ ಚರ್ಚೆಗೆ ಅನ್‌ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಗಾರಗಳು ಸೂಕ್ತ ವೇದಿಕೆಯಾಗಿದೆ. ಭಾಷೆಗಳ ಬೆಳವಣಿಗೆಗೆ ಪೂರಕವಾದ ಇಂತಹ ಸಂಶೋಧನಾ ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾನಿಲಯವು ನಿರಂತರ ಪ್ರೋತ್ಸಾಹಿಸುತ್ತದೆ ಎಂದರು.

ತಂತ್ರಜ್ಞಾನದ ಮೂಲಕ ತುಳು ಹಾಗೂ ಕೊರಗ ಭಾಷಾ ಸಂಗ್ರಹ ಈ ಅನ್‌ಮ್ಯೂಟ್ ಲ್ಯಾಂಗ್ವೇಜ್ ಟೆಕ್ನಾಲಜೀಸ್ ಇನ್ ತುಳು ಕಾರ್ಯಗಾರದ ಮೂಲ ಉದ್ದೇಶವಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಶತಮಾನ ಮಿಕ್ಕಿದ ಇತಿಹಾಸ ಹೊಂದಿರುವ ಯುನೈಟೆಡ್ ಕಿಂಗ್ಡಮ್‌ನ ಸ್ವಾನ್ಸಿ ವಿಶ್ವವಿದ್ಯಾನಿಲಯದ ಸಂಶೋಧಕರಾದ ಡಾ. ಥಾಮಸ್ ರೈಟ್ ಮೇರ್, ಪ್ರೊ. ಜೆನಿಫರ್ ಪಿಯರ್‌ಸನ್, ಡಾ. ಡ್ಯಾನಿ ಕೆ.ರಾಜು ಅವರನ್ನು ಒಳಗೊಂಡ ತಂಡ ತುಳು ಭಾಷೆಯ ಶಬ್ಧಗಳನ್ನು ಮಾತಿನ ಮೂಲಕ ತಂತ್ರಜ್ಞಾನ ಬಳಸಿ ಸಂಗ್ರಹಿಸುವ ಯೋಜನೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮೂಲಕ ಹಮ್ಮಿಕೊಂಡಿದೆ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಇಂಗ್ಲೆಂಡಿನ ಸಾನ್ಸಿ ಯುನಿವರ್ಸಿಟಿಯಂತಹ ಸಂಶೋಧನಾ ಸಂಸ್ಥೆಗಳ ಜೊತೆಗೆ ಸ್ಥಳೀಯ ಭಾಷೆ, ಸಂಸ್ಕೃತಿಗಳ ದಾಖಲೀ ಕರಣ ಹಾಗೂ ಬೆಳವಣಿಗೆಗೆ ಡಾ. ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರವು ಕೈಜೋಡಿಸಿದೆ ಎಂದು ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ತಿಳಿಸಿದ್ದಾರೆ.

ಆಧುನಿಕತೆ ವಿಸ್ತಾರಗೊಳ್ಳುತ್ತಿದ್ದಂತೆ ತುಳು ಭಾಷೆಯ ಶಬ್ಧಪ್ರಯೋಗ ಕಡಿಮೆಯಾಗುತ್ತಿದೆ. ತುಳು ಸಂಸ್ಕೃತಿಯ ಹಲವು ವಿಚಾರಗಳು ಇಂದು ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂಗ್ಲೆಂಡಿನ ಸಾನ್ಸಿ ಯುನಿವರ್ಸಿಟಿ ಸಂಶೋದಕರಿಂದ ತಂತ್ರ ಜ್ಞಾನದ ಮೂಲಕ ತುಳು ಹಾಗೂ ಕೊರಗ ಭಾಷಾ ಸಂಗ್ರಹದ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿ ಸಿರುವುದು ಉತ್ತಮ ಅನುಭವ ನೀಡಿದೆ ಎಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ತೋಕೂರುಗುತ್ತುವಿನ ಹರಿಣಾಕ್ಷಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಸ್ವಾನ್ಸಿ ವಿಶ್ವವಿದ್ಯಾನಿಲಯದ ಸಂಶೋಧಕರಾದ ಡಾ. ಥಾಮಸ್ ರೈಟ್ ಮೇರ್, ಪ್ರೊ. ಜೆನಿಫರ್ ಪಿಯರ್‌ಸನ್, ಡಾ. ಡ್ಯಾನಿ ಕೆ.ರಾಜು ಕಾರ್ಯಗಾರದ ಬಗ್ಗೆ ಮಾಹಿತಿ ವಿನಿಮಯ ನಡೆಸಿದರು. ಸಂಶೋಧನಾರ್ಥಿಗಳು, ಇಂಜಿನಿಯರ್‌ಗಳು, ಪತ್ರಕರ್ತರು, ಅಧ್ಯಾಪಕರು, ತಂತ್ರಜ್ಞರು ಸೇರಿದಂತೆ ವಿವಿಧ ವಯೋಮಾನ, ವೃತ್ತಿ ಹಾಗೂ ಬೇರೆ ಬೇರೆ ಅನುಭವದ ಹಿನ್ನೆಲೆಯುಳ್ಳವರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ವಿಜಯಲಕ್ಷ್ಮಿ ಕಟೀಲು ಪ್ರಾರ್ಥಿಸಿದರು. ಜ್ಯೋತಿ ಮಹಾದೇವ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News