ಮಂಗಳೂರು| ಪರರ ಕಷ್ಟಗಳಿಗೆ ಸ್ಪಂದಿಸುವುದು ಶ್ರೇಷ್ಠ ಗುಣ: ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ
ಮಂಗಳೂರು: ತಾಯಿಯ ಆಶೀರ್ವಾದ ಅಮೂಲ್ಯವಾದದ್ದು. ನಮ್ಮಂತೆ ಪರರೆಂದು ಭಾವಿಸಿ ಅವರ ಕಷ್ಟ - ಕಾರ್ಪಣ್ಯಗಳಿಗೆ ಸ್ಪಂದಿಸುವುದು ಮನುಷ್ಯನ ಶ್ರೇಷ್ಠ ಗುಣ ಎಂದು ಮಂಗಳೂರಿನ ಬಿಷಪ್ ವಂ.ಡಾ.ಪೀಟರ್ ಪೌಲ್ ಸಲ್ದಾನ ಹೇಳಿದ್ದಾರೆ.
ನಗರದ ಸಿಒಡಿಪಿ ಸಭಾಂಗಣದಲ್ಲಿ ಗುರುವಾರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ಮತ್ತು ಕುಟುಂಬ ಪ್ರಾಯೋಜಿರುವ ‘ಎಜ್ಯುಕೇರ್ ಎಂಡೊಮೆಂಟ್ ಫಂಡ್’ನಿಂದ ಬಡ್ಡಿರಹಿತ ಸಾಲ ಸೌಲಭ್ಯದ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ ಉದ್ಯೋಗ ಪಡೆದ ಬಳಿಕ ತನ್ನ ಋಣವನ್ನು ಸಂದಾಯ ಮಾಡುವುದರಿಂದ ಅಗತ್ಯವಿರುವ ಸಮಾಜದ ವಿದ್ಯಾರ್ಥಿ ಗಳಿಗೆ ನಿರಂತರವಾಗಿ ನೆರವು ಸಿಗುತ್ತದೆ ಎಂದು ಹೇಳಿದರು.
ಮೈಕಲ್ ಡಿಸೋಜ ತಮ್ಮ ತಾಯಿಯಿಂದ ಈ ಗುಣವನ್ನು ಬಳುವಳಿಯಾಗಿ ಪಡೆದುಕೊಂಡಿದ್ದಾರೆ. ಅವರು ಸಮಾಜದ ಅಗತ್ಯಗಳಿಗೆ ಪ್ರತ್ಯೇಕವಾಗಿ ಶಿಕ್ಷಣ, ವಸತಿ ಮತ್ತು ಚಿಕಿತ್ಸೆ - ಸ್ಪಂದಿಸುವ ಗುಣ ಸಮಾಜಕ್ಕೆ ಬಹು ದೊಡ್ಡ ಪ್ರೇರಣೆಯಾಗಿ ದ್ದಾರೆ ಎಂದರು.
ಉದ್ಯಮಿ ಮೈಕಲ್ ಡಿ ಸೋಜ ಮುಖ್ಯ ಅತಿಥಿಯಾಗಿ ಮಾತನಾಡಿ ವಸತಿ, ಚಿಕಿತ್ಸೆ, ಶಿಕ್ಷಣ - ಇವು ಮನುಷ್ಯನ ಪ್ರಾಥಮಿಕ ಅಗತ್ಯಗಳಾದರೂ ಸಮಾಜದಲ್ಲಿ ಸಾಕಷ್ಟು ಮಂದಿ ಇದರಿಂದ ವಂಚಿತರಾಗುತ್ತಿದ್ದಾರೆ. ಸೂಕ್ತ ವಿದ್ಯಾಭ್ಯಾಸ ಮತ್ತು ಉನ್ನಂತ ವ್ಯಾಸಂಗವಿದ್ದರೆ ಮಾತ್ರ ಉತ್ತಮ ಉದ್ಯೋಗ ಅಥವಾ ಉದ್ಯಮದಲ್ಲಿ ಪ್ರಗತಿ ಕಾಣಬಹುದು ಎಂದು ಹೇಳಿದರು.
ಕಳೆದ 13 ವರ್ಷಗಳಲ್ಲಿ 30 ಕೋಟಿ ರೂ.ಗಳನ್ನು ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಇದೀಗ ಹೊಸ ಯೋಜನೆಯಲ್ಲಿ 15 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಸಿಒಡಿಪಿ ಅಧೀನದಲ್ಲಿ ಬಿಷಪ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡುವ ಶಾಶ್ವತ ಯೋಜನೆಯಾಗಿ ಎಜ್ಯುಕೇರ್‌ಎಂಡೊಮೆಂಟ್ ಫಂಡ್ ಮುಂದುವರಿಯಲಿದೆ ಎಂದರು.
ಜಗತ್ತಿನ ಯಾವ ಮೂಲೆಗೆ ಹೋದರೂ ಹೆತ್ತ ತಾಯಿ - ತಂದೆ, ತಾಯಿ ನುಡಿ ಮತ್ತು ತಾಯಿ ನಾಡನ್ನು ಮಾತ್ರ ಮರೆಯ ಬೇಡಿ. ನೀವು ಉತ್ತಮ ಉದ್ಯೋಗ ಅಥವಾ ಉದ್ಯಮ ಉತ್ತುಂಗಕ್ಕೆ ತಲುಪಿದಾಗ ನಿರೀಕ್ಷೆಯಲ್ಲಿರುವ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡರೆ ಅದೇ ನನಗೆ ನೀಡಬಹುದಾದ ಉತ್ತಮ ಕೃತಜ್ಞತೆ ಎಂದು ಅಭಿಪ್ರಾಯಪಟ್ಟರು.
ಅನಿವಾಸಿ ಉದ್ಯಮಿ ಮತ್ತು ಎಜ್ಯುಕೇರ್ ನಿಧಿಯ ದಾನಿಗಳಾದ ಮೈಕೆಲ್ ಡಿ ಸೋಜ ಮತ್ತು ಫ್ಲಾವಿಯಾ ಡಿ ಸೋಜ ದಂಪತಿಯನ್ನು ಬಿಷಪ್ ವಂ.ಡಾ.ಪೀಟರ್ ಪೌಲ್ ಸಲ್ದಾನ ಸನ್ಮಾನಿಸಿದರು.
ಸಿಒಡಿಪಿಯ ಎಜುಕೇರ್ ಫಂಡ್ ಸಮಿತಿಯ ಸದಸ್ಯರಾದ ಎವೆಲಿನ್ ಬೆನಿಸ್, ರಿಚರ್ಡ್ ಅಲ್ವಾರೆಸ್ ಮತ್ತು ಜಾನ್ ಡಿ ಸೋಜ ಅವರನ್ನು ಮತ್ತು ದತ್ತಿ ನಿಧಿಯ ಪ್ಯಾನಲ್‌ನ ರಾಬರ್ಟ್ ಡಿಸೋಜ, ಓಸ್ವಾಲ್ಡ್ ರೋಡ್ರಿಗಸ್, ಡೋರಾ ರೋಡ್ರಿಗಸ್ ಮತ್ತು ಮಿಸ್ ಎವೆಲಿನ್ ಬೆನಿಸ್ ಸಿಒಡಿಪಿ ಸಿಬ್ಬಂದಿ ರೀನಾ ಡಿಸೋಜ ಅವರನ್ನು ಗೌರವಿಸಲಾಯಿತು.
ಸಿಒಡಿಪಿ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಸ್ವಾಗತಿಸಿದರು. ಫಾ. ಲಾರೆನ್ಸ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಎಜ್ಯುಕೇರ್‌ಎಂಡೊಮೆಂಟ್ ಫಂಡ್ ಮೂಲಕ ಈ ವರ್ಷ ಮೊದಲ ಕಂತಿನಲ್ಲಿ ಸೆ.16 ರಂದು 84 ವಿದ್ಯಾರ್ಥಿಗಳಿಗೆ 74.42 ಲಕ್ಷ ರೂ. ಮತ್ತು 2ನೇ ಕಂತಿನಲ್ಲಿ ಇದೀಗ 103 ವಿದ್ಯಾರ್ಥಿಗಳಿಗೆ 86.60 ಲಕ್ಷ ರೂ. ಸಾಲದ ನೆರವು ನೀಡಲಾಯಿತು.