ಹಬ್ಬವು ನೆಮ್ಮದಿ, ಸೌಹಾರ್ದತೆಯ ಬದುಕು ನೀಡುತ್ತದೆ: ಯು.ಟಿ ಖಾದರ್

Update: 2024-04-11 06:58 GMT

ಉಳ್ಳಾಲ: ಹಬ್ಬವು ಸುಖ ಶಾಂತಿ ನೆಮ್ಮದಿ, ಸೌಹಾರ್ದತೆಯ ಬದುಕು ನೀಡುತ್ತದೆ. ಇತ್ತೀಚೆಗೆ ಕ್ರೈಸ್ತರು ಆಚರಿಸಿದ ಈಸ್ಟರ್, ಯುಗಾದಿ ಹಾಗೂ ಈದ್ ಹಬ್ಬ ಎಲ್ಲವೂ ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ.ಈ ಸಂದೇಶವನ್ನು ಅರ್ಥ ಮಾಡಿಕೊಂಡು ಸೌಹಾರ್ದಯುತ ಬದುಕು ಕಟ್ಟಿಕೊಂಡು ಕರ್ನಾಟಕ ಅಭಿವೃದ್ಧಿ ಜೊತೆಗೆ ಬಲಿಷ್ಠ ಭಾರತ ನಿರ್ಮಾಣ ನಾವು ಮಾಡಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.

ಉಳ್ಳಾಲ ದರ್ಗಾದಲ್ಲಿ ಈದ್ ಹಬ್ಬದ ಪ್ರಯುಕ್ತ ಈದ್ ನಮಾಝ್ ಮತ್ತು ದರ್ಗಾ ಝಿಯಾರತ್ ನ ಬಳಿಕ ಅವರು ಈದ್ ಸಂದೇಶ ಸಾರಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ, ಇಸ್ಲಾಂನ ಕಡ್ಡಾಯ ಕರ್ಮವಾಗಿರುವ ಒಂದು ತಿಂಗಳ ಉಪವಾಸವನ್ನು ಮುಸ್ಲಿಮರು ಸುಡು ಬಿಸಿಲೆಂದು ಲೆಕ್ಕಿಸದೆ ಆಚರಿಸಿದ್ದಾರೆ. ಇದೀಗ ಸಂತೋಷದ ದಿನ ಆಗಿರುವ ಈದ್ ಹಬ್ಬವನ್ನು ನೆರೆಹೊರೆಯವರಿಗೆ ತಲಾ ಮೂರು ಕೆಜಿ ಅಕ್ಕಿ ವಿತರಿಸಿ ಸಡಗರದಿಂದ ಆಚರಿಸಿದ್ದಾರೆ. ಇದುವೇ ಇಸ್ಲಾಂ ನ ಸಂದೇಶ ಎಂದು ಹೇಳಿದರು.

ಕೇಂದ್ರ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಸಅದಿ ಈದ್ ನಮಾಝ್ ಮತ್ತು ಖುತುಬಾದ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ‌, ಉಪಾಧ್ಯಕ್ಷರಾದ ಅಶ್ರಫ್ ಅಹ್ಮದ್ ರೈಟ್‌ ವೇ, ಹಸೈನಾರ್ ಕೋಟೆಪುರ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ, ಆಡಿಟರ್ ಫಾರೂಕ್ ಕಲ್ಲಾಪು, ಜತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ , ಸದಸ್ಯರಾದ ಫಾರೂಕ್ ಕೋಡಿ, ಮನ್ಸೂರ್ ಕೈಕೋ, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸಿಪಿ ಧನ್ಯ, ಇನ್ಸ್ಪೆಕ್ಟರ್ ಬಾಲಕೃಷ್ಣ, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News