ಉಳ್ಳಾಲಕ್ಕೆ ಅಗ್ನಿಶಾಮಕ ದಳ ಮಂಜೂರು: ಯು.ಟಿ. ಖಾದರ್

Update: 2024-11-28 07:26 GMT

ಮಂಗಳೂರು, ನ.28: ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಬೇಡಿಕೆಯನ್ನು ಜನತೆಯ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದ್ದು, ಪ್ರಮುಖ ಬೇಡಿಕೆಯಾಗಿದ್ದ ಅಗ್ನಿಶಾಮಕ ದಳ ಉಳ್ಳಾಲಕ್ಕೆ ಮಂಜೂರಾಗಿದೆ ಎಂದು ವಿಧಾನ ಸಭೆಯ ಸ್ಪೀಕರ್ ಹಾಗೂ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗರುವ ಅಗ್ನಿಶಾಮಕ ವ್ಯವಸ್ಥೆಗೆ ಫಜೀರ್ ನಲ್ಲಿ 2 ಎಕ್ರೆ ಜಮೀನು ಗುರುತಿಸಲಾಗಿದೆ. ಅನದಾನ ಬಿಡುಗಡೆಯಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ.ಮಂಜೂರಾಗಿದೆ. ಈ ಪೈಕಿ ತೊಕ್ಕೊಟ್ಟು-ಮುಡಿಪು ರಸ್ತೆಯ ಅಭಿವೃದ್ಧಿಗೆ ಬುಧವಾರ ಚಾಲನೆ ನೀಡಲಾಗಿದೆ. ಈ ರಸ್ತೆಯಲ್ಲಿ ಕೆಲವು ಕಡೆ 6 ಲೈನ್ ರಸ್ತೆ ಇರುತ್ತದೆ. ಕೆಲವು ಕಡೆ ಅಗಲೀಕರಣಗೊಳ್ಳಲಿದೆ. ಹದಗೆಟ್ಟಿರುವ ಕೆಲವು ರಸ್ತೆಗಳನ್ನು ಸಿಆರ್ಪಿ ಯೋಜನೆಯಡಿ ದುರಸ್ತಿ ಮಾಡಲಾಗುವುದು. 6 ಕೋಟಿ ರೂ ವೆಚ್ಚದ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿ ನೀಡಿದರು.

ವಿದ್ಯುತ್ ಪೂರೈಕೆ ವ್ಯಸ್ಥೆಗೆ ತೊಕ್ಕೊಟ್ಟಿನಲ್ಲಿ ಸಬ್ಸ್ಟೇಷನ್, ಉಳ್ಳಾಲದ ನಗರದಲ್ಲಿ ವಿದ್ಯುತ್ ವಿತರಣೆಗೆ 200 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಪೂರೈಕೆ ವ್ಯವಸ್ಥೆ, ಕೋಟೆಕಾರ್ ನಲ್ಲಿ ಹೊಸ ಸಬ್ ಸ್ಟೇಷನ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಈಗ ಕಾವೂರು-ಕೊಣಾಜೆ- ತೊಕ್ಕೊಟ್ಟು ಫೀಡರ್ ಮೂಲಕ ಉಳ್ಳಾಲಕ್ಕೆ ವಿದ್ಯುತ್ ವಿತರಣೆಯಾಗುತ್ತಿದೆ. ಈ ವಿತರಣಾ ವ್ಯವಸ್ಥೆಯಿಂದ ಸ್ವಲ್ಪ ಸಮಸ್ಯೆ ಇದೆ. ಇದನ್ನು ಬಗೆಹರಿಸಲು ವಿದ್ಯುತ್ ವಿತರಣೆಗೆ ಮಂಗಳೂರಿನಿಂದ ನೇರವಾಗಿ ತೊಕ್ಕೊಟ್ಟಿಗೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಈ ವ್ಯವಸ್ಥೆಯ ಮೂಲಕ ಉಳ್ಳಾಲದಲ್ಲಿ ಮುಂದೆ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳಲಾರದು, ಎಷ್ಟೇ ಕೈಗಾರಿಕೆಗಳು ಬಂದರೂ ಅವುಗಳಿಗೆ ವಿದ್ಯುತ್ ಸಮಸ್ಯೆ ಉಂಟಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಸ್ತೆ, ಶಿಕ್ಷಣ, ಕುಡಿಯುವ ನೀರಿನ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡಲಾಗುವುದು.ರಸ್ತೆಗೆ ದೊರೆಯುವ ಅನುದಾನದಲ್ಲಿ ಶಿಕ್ಷಣದ ವ್ಯವಸ್ಥೆ ಸುಧಾರಣೆಗೆ ಬಳಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. 5 ಕೋಟಿ ರೂ.ಗಳನ್ನು ಪ್ರೌಢ, ಪಿಯುಸಿ, ಪದವಿ ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ರಸ್ತೆ ಅಭಿವೃದ್ಧಿಗೆ ದೊರೆಯವ ಅನುದಾನವನ್ನು ಬಳಸಲಾಗುವುದು ಎಂದರು.

ಪ್ರತಿ ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ರೂ. , ದೊಡ್ಡ ಗ್ರಾಮ ಪಂಚಾಯತ್ಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರಕಿಸಿಕೊಡಲಾಗುವುದು . ಕೊಣಾಜೆಯಲ್ಲಿ ಸಕ್ಯೂಟ್ ಹೌಸ್ ನಿರ್ಮಾಣವಾಗಲಿದೆ. ಉಳ್ಳಾಲದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸಲಾಗುವುದು ಎಂದರು.

 ಅನುದಾನ ಬರುವುದಿಲ್ಲ, ನಾವು ತರಬೇಕು: ಸರಕಾರದಿಂದ ಅನುದಾನ ಶಾಸಕರ ಕಾಲ ಬುಡಕ್ಕೆ ಬರುವುದಿಲ್ಲ. ಶಾಸಕರು ಅನುದಾನ ಪಡೆಯಲು ಶ್ರಮವಹಿಸಬೇಕು, ಅದರ ಹಿಂದೆ ಹೋಗಬೇಕು ಎಂದು ಹೇಳಿದ ಅವರು ಉಳ್ಳಾಲದ ಒಳಚರಂಡಿ ವ್ಯವಸ್ಥೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

 ಜೆಪ್ಪಿನ ಮೊಗರು ಅಂಡರ್ ಪಾಸ್ ಕಾಮಗಾರಿ ಶೀಘ್ರ ಪೂರ್ಣ: ಊರಿನ ಅಭಿವೃದ್ಧಿಗೆ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು, ಊರಿನ ಜನರ ಸಹಕಾರ ಅಗತ್ಯ. ಜೆಪ್ಪಿನಮೊಗರು ರೈಲ್ವೇ ಅಂಡರ್ಪಾಸ್ ರಸ್ತೆ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಡಲ್ಕೊರತ ತಡೆಗಟ್ಟಲು ಶಾಶ್ವತ ವ್ಯವಸ್ಥೆಯಾಗಬೇಕು. ಈಗ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಬೀಚ್ ಅಭಿವೃದ್ಧಿಗೆ ಮುಂದೆ ಕ್ರಮ ಕೈಗೊಳ್ಳಲಾಗುವುದು. ರೆಸಾರ್ಟ್ಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಆದ್ಯತೆ. ರೆಸಾರ್ಟ್ , ಹೋಮ್ ಸ್ಟೇಗಳಿಗೆ ನಿಯಮಗಳನ್ನು ರೂಪಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News